ಆನೆಗೆ ಬುದ್ಧಿ ಕಲಿಸಿದ ಇರುವೆ
Team Udayavani, Jul 4, 2021, 9:52 PM IST
ಗುಂಪನೂರು ಕಾಡಿನಲ್ಲಿ ಇರುವೆಯೊಂದು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿತ್ತು. ಬಹಳ ಶ್ರಮಜೀವಿಯಾಗಿದ್ದ ಇರುವೆಗೆ ಎಲ್ಲರಿಂದಲೂ ಮೆಚ್ಚುಗೆ, ಗೌರವ ದೊರೆಯುತ್ತಿತ್ತು. ಇದು ಕೆಲವರಲ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು. ಅದರಲ್ಲಿ ಶಂಭು ಎಂಬ ಆನೆಯೂ ಒಂದಾಗಿತ್ತು. ಆದು ಯಾವಾಗಲೂ ತನ್ನ ಗೆಳೆಯನಾದ ಹಂಸ ವೀರುವಿನ ಬಳಿ ಪುಟ್ಟ ಇರುವೆ ಏನು ಮಾಡಿದೆ ಎಂದು ಎಲ್ಲರೂ ಅದನ್ನು ಹೊಗಳುತ್ತಾರೆ. ಅದು ದೊಡ್ಡ ಸಾಧನೆಯೇನೂ ಮಾಡಿಲ್ಲ ಎಂದು ತನ್ನ ಅಸಮಾಧಾನ ತೋಡುತ್ತಿತ್ತು.
ಹೀಗಿರುವಾಗ ಒಂದು ಬಾರಿ ಕಾಡಿನಲ್ಲಿ ಜೋರು ಗಾಳಿ ಮಳೆಯಾಯಿತು. ಎಲ್ಲರೂ ಅವರವರ ಮನೆಯೊಳಗೆ ಸೇರಿಕೊಂಡು ಬೆಚ್ಚಗೆ ಕುಳಿತರೆ ಇರುವೆ ಮಾತ್ರ ಒಂದು ತರೆಗೆಲೆಯನ್ನು ಕೊಡೆಯಾಗಿ ಹಿಡಿದುಕೊಂಡು ಕಷ್ಟದಲ್ಲಿರುವ ಸಣ್ಣಪುಟ್ಟ ಪ್ರಾಣಿಗಳ ಕುಶಲ ಕ್ಷೇಮ ವಿಚಾರಿಸುತ್ತಿತ್ತು. ಅಗತ್ಯವಿದ್ದವರಿಗೆ ಆಹಾರವನ್ನೂ ನೀಡುತ್ತಿತ್ತು. ಇದು ಶಂಭುವಿಗೂ ತಿಳಿಯಿತು. ಹೇಗಾದರೂ ಮಾಡಿ ಈ ಇರುವೆಯ ಸಮಾಜ ಸೇವಾ ಕಾರ್ಯವನ್ನು ನಿಲ್ಲಿಸಬೇಕು ಎಂದುಕೊಂಡು ತನ್ನ ಗೆಳೆಯನ ಜತೆ ಸೇರಿ ಸಂಚು ರೂಪಿಸಿತು.
ಇರುವೆಯ ಮನೆಗೆ ಬಂದ ವೀರು, ನಿಮ್ಮ ಮನೆಯವರು ಅಲ್ಲಿ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ನೀವಿಲ್ಲಿ ಬೆಚ್ಚಗೆ ಇದ್ದೀರಲ್ವ. ನಾನು ಎಷ್ಟೇ ಪ್ರಯತ್ನ ಪಟ್ಟರೂ ಅವರನ್ನು ರಕ್ಷಿಸಲಾಗಲಿಲ್ಲ ಎಂದು ದುಃಖದ ನಟನೆ ಮಾಡಿ ಹೇಳಿತು.
ಇರುವೆಯ ಪತ್ನಿಗೆ ಏನು ಮಾಡಬೇಕೆಂದು ತಿಳಿಯದೆ ತನ್ನೆಲ್ಲ ಬಂಧುಬಳಗವನ್ನು ಕರೆಸಿತು. ಅವರೆಲ್ಲ ಸೇರಿ ನದಿಯ ದಡಕ್ಕೆ ಹೋದರು. ಬಿರುಸಾಗಿ ಹರಿಯುತ್ತಿದ್ದ ನದಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಬಳ್ಳಿಯ ಮೇಲೆ ಇರುವೆ ಕುಳಿತು ರಕ್ಷಣೆಗಾಗಿ ಪ್ರಾರ್ಥಿಸುತ್ತಿತ್ತು. ನದಿಯ ದಡದ ಮೇಲಿದ್ದ ಇರುವೆಗಳೆಲ್ಲ ಅದನ್ನು ರಕ್ಷಿಸುವ ಪಣ ತೊಟ್ಟವು. ಆಗ ಇರುವೆಯ ಮಗನಾದ ಜಾಂಬನು ಒಂದು ದೊಡ್ಡ ಬಳ್ಳಿಯನ್ನು ಹೊತ್ತು ತಂದ. ಹೇಗಾದರೂ ಮಾಡಿ ಅದನ್ನು ತಂದೆಯ ಬಳಿಗೆ ತಲುಪಿಸಬೇಕು ಎಂದುಕೊಂಡು ಒಂದು ಅಗಲವಾದ ಎಲೆಯನ್ನು ಹೊತ್ತು ತಂದಿತು. ಬಳ್ಳಿಯ ಒಂದು ತುದಿಯನ್ನು ಇರುವೆಯ ಬಂಧುಬಳಗವೆಲ್ಲ ಹಿಡಿದುಕೊಂಡಿತ್ತು. ಇನ್ನೊಂದು ತುದಿಯನ್ನು ಇರುವೆಯ ಮಗ ಹಿಡಿದುಕೊಂಡು ಅಗಲವಾದ ಎಲೆಯ ಮೇಲೆ ಕುಳಿತು ತಂದೆಯೆಡೆಗೆ ಪ್ರಯಾಣ ಬೆಳೆಸಿತು. ತಂದೆಯ ಬಳಿ ಹೋಗಿ ಬಳ್ಳಿಯನ್ನು ಕೊಟ್ಟಾಗ ಇರುವೆ ತೇಲಿ ಬಂದಿದ್ದ ಎಲೆ ನೀರಿನಲ್ಲಿ ಕೊಚ್ಚಿ ಹೋಯಿತು. ಮಗ ಮತ್ತು ತಂದೆ ಬಳ್ಳಿಯ ಆಶ್ರಯದಲ್ಲಿ ದಡ ಸೇರಿದರು. ಎಲ್ಲರಿಗೂ ಹೋದ ಜೀವ ಬಂದಂತಾಯಿತು.
ದಡಕ್ಕೆ ಬಂದ ದೊಡ್ಡ ಇರುವೆಯನ್ನು ನೀವು ನೀರಲ್ಲಿ ಕೊಚ್ಚಿ ಹೋಗಲು ಕಾರಣವೇನು ಎಂದು ಎಲ್ಲ ಇರುವೆಗಳು ಪ್ರಶ್ನಿಸಿದವು. ಆಗ ಇರುವೆ, ನಾನು ಪಕ್ಕದೂರಿನಲ್ಲಿ ನಮ್ಮ ಬಂಧುಗಳಿಗೆ ಆಹಾರ ತಲುಪಿಸಿ ಮರಳಿ ಬರುತ್ತಿದ್ದಾಗ ಶಂಭು ಸಿಕ್ಕಿದ. ಜೋರು ಮಳೆಯಾಗುತ್ತಿದ್ದ ಕಾರಣ ಬೇಗನೆ ನದಿ ದಾಟಿ ಮನೆ ಸೇರೋಣ ಎಂದು ಹೇಳಿ ಅವನ ಬೆನ್ನ ಮೇಲೆ ನನ್ನ ಹತ್ತಿಸಿಕೊಂಡು ನದಿ ದಾಟುತ್ತಿದ್ದಾಗ ಅವನು ಮೈಕೊಡವಿ ನನ್ನ ನದಿ ಪಾಲಾಗುವಂತೆ ಮಾಡಿದ. ಬಳಿಕ ಅವನು ಓಡಿ ಹೋಗಿ ತಪ್ಪಿಸಿಕೊಂಡ ಎಂದು ಹೇಳಿತು. ಆಗ ಎಲ್ಲ ಇರುವೆಗಳಿಗೂ ಶಂಭುವಿನ ಮೇಲೆ ಸಿಟ್ಟು ಬಂದಿತು.
ಶಂಭುವಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದುಕೊಂಡು ಅವರೆಲ್ಲ ಕಾಡಿನ ರಾಜನ ಬಳಿಗೆ ಹೋದರು. ಎಲ್ಲರ ವಾದವಿವಾದವನ್ನು ಆಲಿಸಿದ ಕಾಡಿನ ರಾಜ, ಶಂಭುವನ್ನು ಬಂಧಿಸಲು ಆಜ್ಞೆ ಕೊಟ್ಟಿತು. ರಾಜನ ಮುಂದೆ ಬಂದ ಶಂಭು, ನಾನೇನು ಮಾಡಿಲ್ಲ. ಇರುವೆ ನನ್ನ ಮೇಲೆ ಗಟ್ಟಿಯಾಗಿ ಕುಳಿತಿರದ ಕಾರಣ ಅದು ನದಿ ಪಾಲಾಯಿತು ಎಂದಿತು. ಅದಕ್ಕೆ ಇರುವೆ ನದಿ ಮಧ್ಯೆ ಆನೆ ಉದ್ದೇಶಪೂರ್ವಕವಾಗಿಯೇ ಮೈಕೊಡವಿಕೊಂಡಿತು. ಇದರಿಂದ ನಾನು ನೀರಿಗೆ ಬಿದ್ದೆ ಎಂದು ಹೇಳಿತು. ಇದಕ್ಕೆ ನೀರಿನಲ್ಲಿದ್ದ ದೊಡ್ಡ ಮೀನು ಕೂಡ ಸಾಕ್ಷಿ ಹೇಳಿತು. ಕೊನೆಗೆ ಆನೆಯೇ ತಪ್ಪಿತಸ್ಥ ಎಂದು ಘೋಷಣೆಯಾಯಿತು. ಅದಕ್ಕೆ ಏನು ಶಿಕ್ಷೆ ಕೊಡಬೇಕು ಎಂದು ರಾಜ ಸಿಂಹವು ಇರುವೆಯ ಬಳಿ ಕೇಳಿತು. ಅದಕ್ಕೆ ಇರುವೆ, ನಾನು ಅದರ ಸೊಂಡಿಲಿನ ಒಳಗೆ ಹೋಗಿ ಕಚ್ಚುತ್ತೇನೆ. ಅದುವೇ ಅದಕ್ಕೆ ಶಿಕ್ಷೆ ಎಂದಿತು. ಇರುವೆ ಕಚ್ಚಿದರೆ ಏನಾಗುತ್ತದೆ ಎಂದು ಕೊಂಡು ಶಂಭು ಮೆಲ್ಲನೆ ನಕ್ಕಿತು. ಸರಿ ಎಂದು ಶಂಭು ಕೂಡ ಒಪ್ಪಿಕೊಂಡಿತು.
ಆನೆಯ ಸೊಂಡಿಲಿನ ಒಳಗೆ ಹೋದ ಇರುವೆಯು ಜೋರಾಗಿ ಕಚ್ಚಿತು. ನೋವು ತಾಳಲಾರದೆ ಶಂಭು ವನವೆಲ್ಲ ಓಡಾಡಿತು. ಕೊನೆಗೆ ಇರುವೆ ಹೊರಬಂದು, ನಾನು ಪುಟ್ಟದಾಗಿದ್ದರೂ ನನಗೆ ಅನ್ಯಾಯ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡಲು ಗೊತ್ತಿದೆ. ನಿನ್ನನ್ನು ಕ್ಷಮಿಸುತ್ತಿದ್ದೆ. ಆದರೆ ನೀನು ಯಾವಾಗಲೂ ಹೇಳುತ್ತಿಯಲ್ಲ, ಪುಟ್ಟ ಇರುವೆ ಏನು ಮಾಡಬಲ್ಲದು ಎಂದು. ನಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದು ಈಗ ನಿನಗೆ ಅರಿವಾಗಿರಬೇಕಲ್ಲವೇ?. ಎಲ್ಲರೂ ಒಗ್ಗಟ್ಟಾದರೆ ದೊಡ್ಡ ಆನೆಯೂ ಏನೂ ಮಾಡಲಾಗದು ಎಂದಿತು. ಶಂಭುವಿಗೆ ತನ್ನ ತಪ್ಪಿನ ಅರಿವಾಯಿತು.ಇರುವೆಯ ಮುಂದೆ ಮಂಡಿಯೂರಿ ಕ್ಷಮೆಯನ್ನು ಕೇಳಿತು.