ಪರಿಯಾಗಿ ಬಂದವರು…
Team Udayavani, May 22, 2021, 1:17 PM IST
ಸುಂದರವಾದ ನಗುನಗುತ್ತಿರುವ ಮುಖ. ಮೈ ತುಂಬುವ ಬಿಳಿಯುಡುಗೆ. ಬೆನ್ನಿಗೆ ಅಂಟಿಕೊಂಡಂತೆ ಎರಡು ರೆಕ್ಕೆಗಳು. ಇದು ಬಾಲ್ಯದಿಂದಲೂ ನನ್ನಲ್ಲಿ ಉಂಟಾದ ಪರಿಯ ಕಲ್ಪನೆ. ಅಮ್ಮ ನನಗೆ “ಪರಿ’ಗಳ ಪವಾಡಗಳ ಬಗ್ಗೆ ಅಗಾಗ್ಗೆ ಹೇಳುತ್ತಿದ್ದುದೇ ಇದಕ್ಕೆ ಕಾರಣ.
ಪ್ರಾಪಂಚಿಕ ತಿಳುವಳಿಕೆ ಕಡಿಮೆ ಇದ್ದಾಗಿನ ವಯಸ್ಸು. “ಪರಿ’ ಯಾವಾಗಲಾದರೂ, ಹೇಗೆ ಬೇಕಾದರೂ ಬಂದು ಪವಾಡವೆಸಗುವಳೆಂದು ಸಂಪೂರ್ಣ ನಂಬಿದ್ದ ನಾನು, ಕುಳಿತಾಗ, ನನ್ನ ಪಕ್ಕ ಸ್ಥಳ ಬಿಟ್ಟು ಮುದುರಿ ಕುಳಿತರೆ, ಮಲಗಿದಾಗ ಹಾಸಿಗೆಯ ಒಂದು ಬದಿಯನ್ನು ಪರಿಗಾಗಿ ಮೀಸಲಿಡುತ್ತಿದ್ದಾರೆ. ಅಮ್ಮನ ಪ್ರಭಾವಕ್ಕೆ ಬಾಲ್ಯದಿಂದಲೂ ಒಳಗಾಗಿದ್ದ ನನ್ನಲ್ಲಿ ಅಮ್ಮನ ಕಲ್ಪನೆ ನಂಬಿಕೆಗಳೇ ಬೆಳೆದು ಉಳಿದಿದ್ದವು ಎಂದರೆ ತಪ್ಪಾಗಲಾರದು. ಅಮ್ಮನಂತೆ ನನಗೂ ಪವಾಡಗಳಲ್ಲಿ ನಂಬಿಕೆ.
ಆದರೆ ನನ್ನ ಅಜ್ಜಿ ಹಾಗಲ್ಲ. ಆಕೆ ಇದಕ್ಕೆ ತದ್ವಿರುದ್ಧ. ಜೀವನ ಎಂದರೆ ಮಂತ್ರಕ್ಕುದುರುವ ಮಾವಿನ ಕಾಯಲ್ಲ. ಬಂದ ಕಷ್ಟ ಸುಖಗಳನ್ನು ಬಂದಂತೆ ಸ್ವೀಕರಿಸಿ ಎದುರಿಸಬೇಕು. ಅಂದಂದಿನ ಜೀವನವನ್ನು ಎದುರಿಸಿ ಮರುದಿನದ ಜೀವನಕ್ಕೆ ಸಿದ್ಧವಾಗಬೇಕು. ಅದು ಬಿಟ್ಟು ನಿನ್ನೆಯ ಅಥವಾ ನಾಳೆಯ ಚಿಂತೆಯಲ್ಲಿ ಮುಳುಗಿ ನಾವು ಬಯಸಿದ್ದನ್ನು ಕೊಡಬೇಕಾದರೆ ಯಾವುದೋ ಅವ್ಯಕ್ತ ಶಕ್ತಿಯೊಂದು ಬರಬೇಕು, ಎಂದು ಕೈಕಟ್ಟಿ ಕೂರುವುದು ಸರಿಯಲ್ಲ. ಜೀವನದ ವಾಸ್ತವತೆಯನ್ನು ಅರಿತು ಬದುಕಬೇಕು. ಇವು ಆಕೆಯ ತತ್ವಗಳು. ಅಂತೆಯೇ ಬದುಕಿದವಳು.
ಆಗ ನಾನಿನ್ನೂ ಹದಿಹರೆಯದ ಚಿಕ್ಕ ಹುಡುಗಿ. ಅರೆಬರೆ ತಿಳುವಳಿಕೆ. ನಮ್ಮ ನೆರೆಮನೆಯಲ್ಲಿದ್ದ ಗರ್ಭಿಣಿಗೆ ಒಂದು ರಾತ್ರಿ ಇದ್ದಕಿದ್ದಂತೆ ನೋವು ಕಾಣಿಸಿಕೊಂಡಿತು. ದಿನ ತುಂಬದ ಆಕೆಗೆ ಗರ್ಭಪಾತವಾದೀತೆಂದು ಎಲ್ಲರೂ ಹೆದರಿದರು. ನನ್ನ ಅಮ್ಮ ನೆರೆಮನೆಗೆ ಹೋಗಿ ಆಕೆಗೆ ಸಾಂತ್ವಾನ ಹೇಳಿ ಆಕೆಯೊಡನೆ ತಾನೂ ಅತ್ತು ಕಣ್ಣೀರು ಸುರಿಸಿ, ದೇವರ ಮೆಲೆ ಭರವಸೆ ಇಡು ಅವನು ಹೇಗೋ ನೆರವು ನೀಡುತ್ತಾನೆ, ಎಂದಷ್ಟೇ ಹೇಳುವುದನ್ನು ಬಿಟ್ಟು ಬೇರೇನೂ ಮಾಡಲಾಗಲಿಲ್ಲ. ಇಲ್ಲಿ ಇವರು ಇಷ್ಟು ಮಾತನಾಡಿ ಕಾಲಾಹರಣ ಮಾಡುತ್ತಿರುವಾಗ ನನ್ನ ಅಜ್ಜಿ ಕೊರೆಯುವ ಚಳಿಯಲ್ಲಿಯೂ ಮೂರು ಕಿಲೋ ಮೀಟರ್‌ಗಳ ದೂರ ನಡೆದು ಹೋಗಿ ಡಾಕ್ಟರನ್ನು ಕರೆದುತಂದಳು. ಸಮಯಕ್ಕೆ ಸರಿಯಾಗಿ ಔಷಧೋಪಚಾರ ನಡೆದು ಆಕೆಯ ನೋವು ಕಡಿಮೆಯಾಯಿತು.
ಅಮ್ಮ ಅಂದಳು, ನಾನು ಹೇಳಲಿಲ್ಲವೇ, ದೇವರಲ್ಲಿ ಭರವಸೆಯಿಡು ಎಂದು! ಅವನಲ್ಲಿ ಭರವಸೆ ಇಟ್ಟರೆ ಯಾವ ರೀತಿಯಾದರೂ ಬಂದು ಸಹಾಯ ಸಿಗುತ್ತದೆ.ಇನ್ನೊಮ್ಮೆ ನನ್ನ ಗೆಳತಿಯೊಬ್ಬಳು ಪ್ರಯಾಣ ಮಾಡಬೇಕಾಗಿದ್ದ ರೈಲು ಅಪಘಾತಕ್ಕೀಡಾಯಿತು. ನನ್ನ ಗೆಳತಿಗೆ ಸಂತೋಷವೋ ಸಂತೋಷ. ರೈಲು ಅಪಘಾತಕ್ಕೊಳಗಾಗಿದ್ದಕ್ಕಲ್ಲ, ತಾನು ಆ ರೈಲಿನಲ್ಲಿ ಪ್ರಯಾಣ ಮಾಡಲಿಲ್ಲವಲ್ಲ ಎಂದು. ಸದ್ಯ ಪರಿಯ ದೆಸೆಯಿಂದ ನಾನು ಸಾಯುವುದು ತಪ್ಪಿತು. ನಿನ್ನೆ ನನ್ನ ಕನಸಿನಲ್ಲಿ ಪರಿ ಬಂದು ನಾನು ಪ್ರಯಾಣ ಮಾಡಬಾರದು ಎಂದು ಹೇಳಿದಳು. ಅದಕ್ಕೇ ನಾವು ಇಂದು ಉಳಿದುಕೊಂಡೆವು.. ಎಂದೆಲ್ಲ ಹೇಳಿದಾಗ ನನಗೂ ನಿಜವಿರಬಹುದೆನ್ನಿಸಿತು. ಅದನ್ನೇ ಅಮ್ಮ, ಅಜ್ಜಿ ಎಲ್ಲರಿಗೂ ಹೇಳಿದೆ.
ಅಮ್ಮ ನನ್ನ ಮಾತಿಗೆ ಸಂಪೂರ್ಣ ತಲೆದೂಗಿದರೆ ಅಜ್ಜಿ, ಅಯ್ಯೋ ಬಿಡೆ. ನಿನ್ನ ಆ ಪರಿ ಗೆಳತಿಯನ್ನು ಮಾತ್ರ ಉಳಿಸಿದಳು, ಬೇರೆಯವರನ್ನೇಕೆ ಸಾಯಲು ಬಿಟ್ಟಳು, ಅವರನ್ನೇಕೆ ಉಳಿಸಲಿಲ್ಲ, ನೋಡು ಇದೆಲ್ಲ ಕಾಕತಾಳೀಯ ಅಷ್ಟೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ಅಜ್ಜಿಯ ಮಾತು ನನ್ನಲ್ಲಿ ವಿಚಾರವೆಬ್ಬಿಸಿತು. ಹೌದು ಪರಿ ಒಬ್ಬಳ ಜೀವನವನ್ನು ಕಾಪಾಡಬಹುದಾದರೆ ಉಳಿದವರನ್ನು ಏಕೆ ಉಳಿಸಲಿಲ್ಲ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು.
ಈ ಮಾತು ಕಳೆದು ಈಗಾಗಲೇ ಹದಿನೈದು ವರ್ಷಗಳೇ ಉರುಳಿ ಹೋಗಿವೆ. ನನ್ನ ಅಜ್ಜಿ ಈಗಿಲ್ಲ. ನನಗೆ ಒಬ್ಬಳೇ ಮಗಳು. ಅವಳೇ ನನ್ನ ಜೀವನದ ಸರ್ವಸ್ವ. ನಾನು ಹೊರಗಡೆ ಹೋಗುವಾಗಲೆಲ್ಲ ಅವಳನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತೇನೆ.
ಕಾರಿನಲ್ಲಿ ಪೆಟ್ರೋಲ್ ಮುಗಿಯುತ್ತ ಬಂದಿತು. ಮಗಳನ್ನು ಶಾಲೆಗೆ ಕಳುಹಿಸಿ, ಪಂಪ್‌ನಿಂದ ಕಾರಿಗೆ ಪೆಟ್ರೋಲ್ ತುಂಬಿಸಿದೆ. ಇಲ್ಲಿನ ವ್ಯವಸ್ಥೆ ತಿಳಿದಿದೆಯಲ್ಲ. ಎಲ್ಲ ಸ್ವಯಂ ಸೇವೆ! ಅಂದಹಾಗೆ ಹೇಳುವುದು ಮರೆತಿದ್ದೆ. ನಾವಿರುವುದು ಇಂಗ್ಲೆಂಡ್‌ನಲ್ಲಿ. ಕಾರಿಗೆ ಪೆಟ್ರೋಲ್ ತುಂಬಿಸಿ ಕೌಂಟರಿನಲ್ಲಿದ್ದ ವ್ಯಕ್ತಿಗೆ ಹಣ ಕೊಡಲೆಂದು ಪರ್ಸ್ ತೆಗೆಯಲು ಬ್ಯಾಗಿನೊಳಕ್ಕೆ ಕೈಹಾಕಿದೆ. ಕೈ ಬ್ಯಾಗಿನೊಳಗಿನ ತಳವನ್ನು ಕೆದರಿತು. ಪರ್ಸ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನಿಟ್ಟಿದ್ದ ವ್ಯಾಲೆಟ್ ಸಿಗಲಿಲ್ಲ. ಗಾಬರಿಯಿಂದ ಪರ್ಸ್‌ನ ಬಾಯಗಲಿಸಿ ಹುಡುಕಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ. ಹಣ ಕೊಡದೆ ಹೋಗುವಂತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಮಾನ. ಸುಮ್ಮನೆ ಬ್ಯಾಗಿನೊಳಗೆ ಕೈಯಿಟ್ಟು ಕ್ಷಣ ಹೊತ್ತು ನಿಂತೆ.
ಕೌಂಟರಿನಲ್ಲಿದ್ದ ವ್ಯಕ್ತಿ ಅಸಹನೆಯಿಂದ ನನ್ನತ್ತ ನೋಡುತ್ತಿದ್ದ. ಏನೂ ತೋರದೆ ನಿರಾಶೆ, ನಾಚಿಕೆಗಳಿಂದ ತಲೆಯಾಡಿಸುತ್ತ ಬರಿಗೈ ಹೊರ ತೆಗೆದೆ. ಅಷ್ಟರಲ್ಲಿ ಕೈ ಒಂದು ಮುಂದೆ ಚಾಚಿ ಬಂದು ಐವತ್ತು ಪೌಂಡುಗಳ ನೋಟನ್ನು ಕೊಡುತ್ತ ತೆಗೆದುಕೊಳ್ಳಿ ಎಂದಿತು. ಹಿಂದಕ್ಕೆ ತಿರುಗಿ ನೋಡಿದರೆ ಒಬ್ಬ ಆಂಗ್ಲ ಸಭ್ಯ ವ್ಯಕ್ತಿ ನನ್ನ ಹಿಂದೆ ನಿಂತಿದ್ದ.
ನಾನು ನಿಮ್ಮನ್ನು ಅಷ್ಟು ಹೊತ್ತಿನಿಂದ ಗಮನಿಸುತ್ತಿದ್ದೆನೆ. ನೀವು ಹಣಕ್ಕಾಗಿ ಹುಡುಕುತ್ತಿದ್ದ ರೀತಿ ನೋಡಿ ನಿಮ್ಮ ಬಳಿ ಹಣ ಇರಲಾರದೆಂಬ ಸಂಶಯ ಬಂದಿತು. ತೆಗೆದುಕೊಳ್ಳಿ ಪೆಟ್ರೋಲ್ ಬಿಲ್ ಕೊಡಿ , ಎಂದ. ಥ್ಯಾಂಕ್ಯೂ ಎಂದು ಹೇಳಿ, ಮರು ಮಾತಾಡದೆ ಆತನಿಂದ ಆ ಹಣವನ್ನು ತೆಗೆದುಕೊಂಡು ಬಿಲ್ ಪಾವತಿ ಮಾಡಿ ಹೊರಗೆ ಬಂದು ಆ ವ್ಯಕ್ತಿಗಾಗಿ ಕಾಯುತ್ತ ನಿಂತೆ. ಆತನ ಬ್ಯಾಂಕಿನ ಖಾತೆಯ ವಿವರಣೆ ತೆಗೆದುಕೊಂಡು ಮತ್ತೂಮ್ಮೆ ವಂದನೆ ಸಲ್ಲಿಸುವ ಉದ್ದೇಶದಿಂದ.
ಎಷ್ಟು ಸಮಯ ವಾದರೂ ಹೊರಗೆ ಬಾರದ್ದನ್ನು ನೋಡಿ ಇನ್ನೂ ಒಳಗೆ ಏನು ಮಾಡುತ್ತಿರಬಹುದು ನೋಡೋಣ , ಎಂದುಕೊಂಡು ಒಳಗೆ ಹೋಗಿ ನೋಡಿದರೆ ಅಲ್ಲಿ ಯಾರೂ ಇರಲಿಲ್ಲ. ಕೌಂಟರ್ ಖಾಲಿ ಇತ್ತು. ಕೌಂಟರಿನಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ತಿಳಿಯಿತು. ಆತ ನನಗೆ ಹಣ ಕೊಟ್ಟ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಹೊರಟು ಹೋಗಿದ್ದ. ಅಂದಿನಿಂದ ಇಂದಿನವರೆಗೂ ಅದೇ ಪೆಟ್ರೋಲ್ ಸ್ಟೇಷನ್‌ಗೆ ಹೋಗುತ್ತಲೇ ಇದ್ದೇನೆ. ಆ ವ್ಯಕ್ತಿ ಮತ್ತೆ ಸಿಗುವನೇ, ಆತನ ಹಣವನ್ನು ಹಿಂದಿರುಗಿಸಿ ವಂದನೆಗಳನ್ನು ಹೇಳಲು ಅವಕಾಶ ಸಿಕ್ಕೀತೇ ಎಂದು.
ಡಾ| ಸತ್ಯವತಿ ಮೂರ್ತಿ, ಮ್ಯಾಂಚೆಸ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.