ಅರಬ್ ದೇಶದಲ್ಲಿ ಯಕ್ಷ ತರಂಗ
Team Udayavani, Jun 16, 2021, 12:32 PM IST
ಕರ್ನಾಟಕ ಕರಾವಳಿಯ ತುಳುನಾಡಿನ ವಿಶಿಷ್ಟ, ಕನ್ನಡ ತುಳು ಸಾಂಸ್ಕೃತಿಕ ಲೋಕದಲ್ಲಿ ಸ್ವತಂತ್ರ ಶಾಸ್ತ್ರೀಯ, ಕರ್ನಾಟಕದ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಗಂಡುಕಲೆ ಎಂದೇ ವಿಶ್ವಖ್ಯಾತಿ ಪಡೆದಿರುವ ಯಕ್ಷಗಾನ ಅರಬ್ ಸಂಯುಕ್ತ ಸಂಸ್ಥಾನದಲ್ಲಿ 1980ರ ದಶಕದಿಂದ ತೆಂಕುತಿಟ್ಟು, ಬಡಗುತಿಟ್ಟು ಪ್ರಕಾರಗಳ ಮೂಲಕ ಹೆಜ್ಜೆಗುರುತುಗಳನ್ನು ದಾಖಲಿಸಿಕೊಂಡಿದೆ.
ಅರಬ್ ದೇಶದ ಕಾನೂನು ಕಟ್ಟಲೆಯಲ್ಲಿ ಕರಾವಳಿ ಕರ್ನಾಟಕದ ನಾಗಮಂಡಲ, ಭೂತಕೋಲ, ಕಂಬಳ ಇತ್ಯಾದಿ ನಡೆಸಲು ಅವಕಾಶ ಇಲ್ಲದಿದ್ದರೂ, ಅನುಮತಿ ಪಡೆದು ಯಕ್ಷಗಾನ ಮಾತ್ರ ಸಹಸ್ರರಾರು ಸಂಖ್ಯೆಯಲ್ಲಿ ಕನ್ನಡಿಗರು ತುಳುವರು ಸಮಾವೇಶಗಳ ಮೂಲಕ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರಥಮ ಯಕ್ಷಗಾನ ಪ್ರದರ್ಶನ
ಅಬುಧಾಬಿ ಕರ್ನಾಟಕ ಸಂಘದ ಮಹಾಪೋಷಕ ರಾಗಿರುವ ಡಾ| ಬಿ.ಆರ್. ಶೆಟ್ಟಿ ಅವರು ಹಾಗೂ ಅಧ್ಯಕ್ಷರಾಗಿರುವ ಸರ್ವೋತ್ತಮ್ ಶೆಟ್ಟಿ ಅವರ ನೇತೃತ್ವದಲ್ಲಿ 1988 ಜೂನ್ ತಿಂಗಳಿನಲ್ಲಿ ತುಳುನಾಡಿನ ಕಡಲತಡಿಯ ಭಾರ್ಗವ ಡಾ| ಶಿವರಾಮ ಕಾರಂತರ 19 ಯಕ್ಷಗಾನ ಕಲಾವಿದರ ತಂಡವನ್ನು ಅಬುಧಾಬಿಗೆ ಬರಮಾಡಿಕೊಂಡು “ವೀರ ಅಭಿಮನ್ಯು ಕಾಳಗ’ ಬಡಗುತಿಟ್ಟು ಯಕ್ಷಗಾನ ಪ್ರಸಂಗ ಪ್ರಥಮ ಬಾರಿಗೆ ಪ್ರದರ್ಶನವಾಗಿ ದಾಖಲೆಯಾಗಿದೆ. ಯು.ಎ.ಇ. ತುಳುಕೂಟ ದುಬೈ 1990ರ ದಶಕದಲ್ಲಿ ಊರಿನಿಂದ ಪ್ರಭಾಕರ ಜೋಶಿ ಅವರ ತಂಡವನ್ನು ಬರಮಾಡಿ ಕೊಂಡು ತೆಂಕುತಿಟ್ಟು ಯಕ್ಷಗಾನ ಪ್ರಸಂಗವನ್ನು ದುಬೈಯಲ್ಲಿ ಪ್ರದರ್ಶಿಸಲಾಯಿತು.
ಯಕ್ಷಮಿತ್ರರು ದುಬೈ
ಉದ್ಯೋಗ ನಿಮಿತ್ತ ಗಲ್ಫ್ ನಾಡಿಗೆ ಬಂದಿರುವ ತುಳುವರಲ್ಲಿ ಊರಿನಲ್ಲಿ ಕೆಲವು ಮೇಳಗಳಲ್ಲಿ ವಿವಿಧ ಪಾತ್ರದಾರಿಗಳಾಗಿದ್ದ ಕಲಾವಿದರು ದುಬೈಯಲ್ಲಿ ಒಟ್ಟು ಸೇರಿ, ಇನ್ನಿತರ ಯಕ್ಷಗಾನ ಆಸಕ್ತರರೊಂದಿಗೆ ಯಕ್ಷ ಮಿತ್ರರು ದುಬೈ ಸಂಘಟನೆಯನ್ನು ಕಟ್ಟಿ ಕೊಂಡರು. ಯಕ್ಷಗಾನ ಪ್ರಸಂಗ ಪ್ರದರ್ಶನದ ಬಗ್ಗೆ ಕಾರ್ಯ ಯೋಜನೆ ರೂಪಿಸಿಕೊಂಡು, ಯಕ್ಷಗಾನ ಪ್ರದರ್ಶನಕ್ಕೆ ವೇದಿಕೆಯನ್ನು ತಯಾರಿಸಿಕೊಂಡರು.
ಯಕ್ಷಗಾನ ಮೇಳಕ್ಕೆ ಬೇಕಾಗುವ ಅಪಾರ ಪ್ರಮಾಣದ ವಸ್ತ್ರಾಭರಣಗಳು, ಕಿರೀಟ, ಚೆಂಡೆ, ತಾಳಮದ್ದಲೆಗಳು, ಆಭರಣಗಳು ವಿವಿಧ ವಿನ್ಯಾಸದ ಉಡುಪುಗಳನ್ನು ಪಾತ್ರಕ್ಕೆ ತಕ್ಕಂತೆ ಊರಿನಿಂದ ತರಿಸಲಾಯಿತು. ಇನ್ನಷ್ಟು ಹೆಚ್ಚಿನ ಕಿರೀಟ, ಕೈ, ತೋಳು ಪಟ್ಟಿಗಳನ್ನು ಕಿಶೋರ್ ಗಟ್ಟಿ ಅವರು ದುಬೈಯಲ್ಲೇ ಸಿದ್ಧಪಡಿಸಿದರು. ವಸ್ತ್ರಗಳನ್ನು ಪದ್ಮರಾಜ್ ಎಕ್ಕಾರು ಸಿದ್ಧಪಡಿಸಿದರು. ಒಂದು ದೇವಿ ಮಹಾತೆ¾ ಪ್ರಸಂಗಕ್ಕೆ ಬೇಕಾಗಿರುವ ಪರಿಕರಗಳನ್ನು ಸಂಗ್ರಹಿಸಿದರೆ, ಅದನ್ನು ಇನ್ನಿತರ ಯಾವುದೇ ಪ್ರಸಂಗಕ್ಕೆ ಉಪಯೋಗಿಸಬ ಹುದಾಗಿದೆ. ಯಕ್ಷಮಿತ್ರರು ಪೂರ್ಣ ಪ್ರಮಾಣದ ಪರಿಕರಗಳನ್ನು ಒಟ್ಟು ಮಾಡಿರುವುದರಿಂದ ಯು.ಎ.ಇ.ಯ ವಿವಿಧೆಡೆ ಯಕ್ಷಗಾನ ಪ್ರದರ್ಶನಕ್ಕೆ ಅನುಕೂಲವಾಯಿತು.
ಯಕ್ಷಗಾನ ರಂಗ
ಯಕ್ಷಮಿತ್ರರು ತಮ್ಮ ಯಕ್ಷಗಾನ ಪ್ರದರ್ಶನಕ್ಕಾಗಿ ವಿಶಾಲವಾಗಿರುವ ಶಾಸ್ತ್ರೀಯವಾಗಿ ಕಂಬಗಳು ಕಮಾನುಗಳಿರುವ ವಿದ್ಯುತ್ ದೀಪಾಲಂಕಾರ ದೊಂದಿಗೆ ನೈಜ್ಯ ಬೆಳಕು, ಧ್ವನಿವರ್ಧಕ ಅಳವಡಿಕೆ ಯಾಗಿರುವ ಆಕರ್ಷಕ ರಂಗ ಮಂಟಪವನ್ನು ತಯಾರಿಸಿಕೊಂಡು ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಬಡಗುತಿಟ್ಟು ಮೇಳ
2013ರಲ್ಲಿ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ, ಕೊಂಡದಕುಳಿ, ಕುಂಭಾಶಿ ಅತಿಥಿ ಕಲಾತಂಡ, ಯಕ್ಷಕಲಾ ವೃಂದ ದುಬೈ ಇವರ ಆಶ್ರಯದಲ್ಲಿ ದುಬೈಯಲ್ಲಿ ಪ್ರಥಮ ಬಾರಿಗೆ, ಗಾನಕೋಗಿಲೆ ಕೇಶವ ಹೆಗ್ಗಡೆ ಕೊಳಗಿ ಅವರ ಭಾಗವತಿಕೆಯಲ್ಲಿ ಬಡಗುತಿಟ್ಟಿನ ಪ್ರಾಕಾರದ ಮಧುರಾ ಮಹಿಂದ್ರ ಪ್ರಸಂಗ, ಅಬುಧಾಬಿಯಲ್ಲಿ ಕಾರ್ತ್ಯವೀರ್ಯಾರ್ಜುನ ಹವ್ಯಕ ಸಂಘ ದುಬೈ ಆಶ್ರಯದಲ್ಲಿ ಭಸ್ಮಾಸುರ ಪ್ರಸಂಗ ದಾಖಲಾಗಿದೆ.
ವಿಶ್ವ ತುಳು ಸಮ್ಮೇಳನ ದುಬೈಯ ವೇದಿಕೆಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಯಕ್ಷಗಾನ ಮತ್ತು ತಾಳಮದ್ದಲೆ ನಡೆದು ವಿಶ್ವದಾದ್ಯಂತ ಆಗಮಿಸಿದ್ದ ತುಳುವರ ಮೆಚ್ಚುಗೆಗೆ ಪಾತ್ರವಾಯಿತು.
ಯಕ್ಷ ತರಬೇತಿಯ ಕಲಾ ವಿದ್ಯಾಲಯ
ದಿನೇಶ್ ಶೆಟ್ಟಿ ಕೊಟ್ಟಿಂಜ ಅವರ ನೇತೃತ್ವದಲ್ಲಿ ದುಬೈ ಯಕ್ಷಗಾನ ಅಭ್ಯಾಸ ತರಗತಿ ಶೇಖರ್ ಡಿ. ಶೆಟ್ಟಿಗಾರ್ ಅವರು ಗುರುಗಳಾಗಿ ಪುಟ್ಟ ಪುಟ್ಟ ಮಕ್ಕಳ ಜತೆಗೆ ವಿವಿಧ ವಯೋಮಿತಿಯವರಿಗೆ ಯಕ್ಷಗಾನ ನಾಟ್ಯ, ಪೂರ್ವರಂಗ-ಉತ್ತರರಂಗ, ರಂಗ ಕ್ರಮಗಳ ಪ್ರಾತ್ಯಕ್ಷಿಕೆ, ರಂಗ ಪಠ್ಯ ತರಬೇತಿ, ಚಂಡೆ ಮದ್ದಳೆ ತರಬೇತಿ ಪ್ರಸಾದನ ವೇಷ ಭೂಷಣ ತರಬೇತಿ ನಡೆಯುತಿದೆ.
ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿರುವ ಅಭಿಮಾನಿಗಳಿಗೆ ಸ್ಥಳವಕಾಶ ಕಲ್ಪಿಸುವ ಸಲುವಾಗಿ 1,200ಕ್ಕಿಂತಲೂ ಹೆಚ್ಚು ಆಸನ ವ್ಯವಸ್ಥೆ ಇರುವ ಹವಾನಿಯಂತ್ರಿತ ದುಬೈ ಇಂಡಿಯನ್ ಹೈಸ್ಕೂಲ್- ಶೇಖ್ ರಾಶೀದ್ ಬೃಹತ್ ಸಭಾಂಗಣದಲ್ಲಿ ಯಕ್ಷಗಾನ ಪ್ರದರ್ಶವನ್ನು ನಡೆಸಿಕೊಂಡು ಬರುತಿದ್ದು, ಯು.ಎ.ಇ.ಯ ವಿವಿಧ ಭಾಗ ಗಳಿಂದ ಕಲಾಭಿಮಾನಿಗಳು ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಗಲ್ಫ್ ನಾಡಿನಲ್ಲಿ ಯಕ್ಷಗಾನ ಕಲೆಯನ್ನು ತಮ್ಮ ಪೂರ್ಣ ಸಹಕಾರ, ಬೆಂಬಲ, ಪ್ರೋತ್ಸಾಹದೊಂದಿಗೆ ಯಶಸ್ವಿನ ಹೆಜ್ಜೆಗೆ ಕೈಜೋಡಿಸಿದ್ದಾರೆ.
ಬಿ.ಕೆ. ಗಣೇಶ್ ರೈ,
ದುಬೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.