Ayodhya ಅನಾಹುತಕಾರಿ ಭೂಕಂಪ ಸಂಭವಿಸಿದರೂ ರಾಮ ಮಂದಿರ ಒಂದಿಷ್ಟೂ ಅಲುಗಾಡದು
ಕಿಂಚಿತ್ತೂ ಕಬ್ಬಿಣ ಬಳಸದೆ ಕಟ್ಟಿದ ಮಂದಿರ ಇದು | ಎರಡು ಕಲ್ಲುಗಳ ಜೋಡಣೆಗೆ ಕೊಂಡಿಯಾಗಿ ತಾಮ್ರ ಬಳಕೆ
Team Udayavani, Jan 13, 2024, 6:30 AM IST
ವಿಶೇಷ ಸಂದರ್ಶನ : ನೃಪೇಂದ್ರ ಮಿಶ್ರಾ ಅಧ್ಯಕ್ಷರು, ರಾಮಮಂದಿರ ನಿರ್ಮಾಣ ಸಮಿತಿ
ಕೋಟ್ಯಂತರ ಭಾರತೀಯರ ಕನಸಿನ ಶ್ರೀರಾಮಮಂದಿರ ಕೊನೆಗೂ ಮೂರ್ತ ರೂಪ ಪಡೆದಿದೆ. ಸುಪ್ರೀಂ ಕೋರ್ಟ್ ಒಮ್ಮತದ ತೀರ್ಪು ಪ್ರಕಟಿಸಿದ ಬಳಿಕ ಮಂದಿರ ನಿರ್ಮಾಣದ ಕಾಮಗಾರಿಯ ಅನುಷ್ಠಾನ, ಅದರ ಮೇಲ್ವಿಚಾರಣೆಗೆ ರಚಿಸಲಾದ ಟ್ರಸ್ಟ್‌ನ ಅಧ್ಯಕ್ಷತೆಯ ನೊಗ ಹೊತ್ತಿದ್ದು ನಿವೃತ್ತ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ. ಉತ್ತರ ಪ್ರದೇಶ ಕೇಡರ್‌ನ ಅಧಿಕಾರಿ ಮಿಶ್ರಾ ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಸಮರ್ಥ ಹಾಗೂ ಪ್ರಭಾವಿ ಅಧಿಕಾರಿ ಎನಿಸಿಕೊಂಡಿರುವ ಇವರು ರಾಮಮಂದಿರ ನಿರ್ಮಾಣವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ದೇಗುಲದ ಅಡಿಪಾಯದಲ್ಲಿ ಎದುರಾದ ಸಮಸ್ಯೆ, ವಿನ್ಯಾಸದಲ್ಲಾದ ಮಾರ್ಪಾಡು, ಕಲ್ಲುಗಳ ಆಯ್ಕೆ, ರಾಮನ ಮೂರ್ತಿಯ ಚಿತ್ರದ ಆಯ್ಕೆಯಾಗಿದ್ದು ಹೇಗೆ ಎಂಬುದರ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಅದರ ಅಕ್ಷರ ರೂಪ ಇಲ್ಲಿದೆ.
ನಿಮಗೂ ರಾಮ ಮಂದಿರಕ್ಕೂ ಇರುವ ನಂಟೇನು?
ನಾನು ಉತ್ತರ ಪ್ರದೇಶ ಸರಕಾರದಲ್ಲಿ ಸುದೀರ್ಘ ಕಾಲ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. 1990 ರಿಂದಲೂ ನನಗೆ ರಾಮ ಮಂದಿರದ ನಂಟಿದೆ. ಅಲ್ಲಿನ ಆಗು ಹೋಗುಗಳು, ಬೆಳವಣಿಗೆಗಳನ್ನೂ ಹತ್ತಿರದಿಂದ ಕಂಡಿದ್ದೇನೆ. ನಿವೃತ್ತಿ ಬಳಿಕ 2014ರಲ್ಲಿ ಪ್ರಧಾನಿ ಮೋದಿ ಕಾರ್ಯಾಲಯ ಸೇರಿ ಕೊಂಡೆ. ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ದೇನೆ. ಉತ್ತರ ಪ್ರದೇಶ ದಲ್ಲಿ ಕೆಲಸ ಮಾಡಿದ ಅನುಭವ ಹಾಗೂ ರಾಮ ಮಂದಿರದ ನಂಟು ನನ್ನನ್ನು ಮಂದಿರ ನಿರ್ಮಾಣ ಹೊಣೆ ಹೊರಲು ಪ್ರೇರೇ ಪಿಸಿತು. ಅದನ್ನು ನಾನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ.
ನಿಮಗೆ ರಾಮ ಮಂದಿರ ನಿರ್ಮಾಣ ಹೊಣೆ ಬಂದಿದ್ದು ಹೇಗೆ?
2019, ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಒಮ್ಮತದ ತೀರ್ಪು ನೀಡಿತು. ಅಲ್ಲದೇ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಟ್ರಸ್ಟ್ ರಚಿಸುವಂತೆ ಆದೇಶಿಸಿತ್ತು. ತೀರ್ಪು ಬಂದ ಒಂದೆರಡು ದಿನಗಳ ಬಳಿಕ ನಾನು ಎಂದಿನಂತೆ ಕಚೇರಿಯಲ್ಲಿ ಕಾರ್ಯನಿರತನಾಗಿದ್ದೆ. ಗೃಹ ಸಚಿವ ಅಮಿತ್ ಶಾ ಅವರು ಕರೆ ಮಾಡಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಕುರಿತು ಒಂದೆರಡು ನಿಮಿಷ ಚರ್ಚಿಸಿದರು. ಮಾರನೇ ದಿನವೇ ಪ್ರಧಾನಿ ಮೋದಿ ಸಂಪುಟದ ಸದಸ್ಯರು ನನ್ನ ಮನೆಗೆ ಆಗಮಿಸಿ ಟ್ರಸ್ಟ್‌ನ ಸ್ಥೂಲ ಚಿತ್ರಣದ ಜತೆಗೆ ಸುದೀರ್ಘವಾಗಿ ವಿಶ್ಲೇಷಿಸಿದರು. ಮಂದಿರ ನಿರ್ಮಾಣದ ಹೊಣೆ ಹೊರುವಂತೆ ಸೂಚಿಸಿದರು. ಅದಕ್ಕೆ ನಾನು ಒಪ್ಪಿಕೊಂಡೆ. ಟ್ರಸ್ಟ್ ರಚನೆವರೆಗೆ ಮಾತ್ರ ಸರಕಾರದ ಭಾಗಿದಾರಿಕೆ ಇತ್ತು. ಬಳಿಕ ಸ್ವತಂತ್ರವಾಗಿ ಕಾರ್ಯನಿರ್ವಹಿಸ ಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸೂಚಿಸಿತ್ತು. ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು ಕೋವಿಡ್ ಕಾಲ ಘಟ್ಟದಲ್ಲಿ. ದಿಲ್ಲಿಯಿಂದ ಅಯೋಧ್ಯೆಗೆ ಬರುವುದು ಕಷ್ಟದ ಕೆಲಸವಾಗಿತ್ತು. ವಿಮಾನ ಯಾನ ಕೂಡ ಇರಲಿಲ್ಲ. ಪ್ರತೀದಿನ ಕಾರಿನಲ್ಲಿ 8 ಗಂಟೆ ಪ್ರಯಾಣ ಮಾಡಬೇಕಿದ್ದಿದ್ದರಿಂದ ಕೊಂಚ ಭಯವೂ ಆಗುತ್ತಿತ್ತು. ಕಾಲಕ್ರಮೇಣ ಎಲ್ಲವೂ ಸರಾಗವಾಗಿ ನಡೆಯಿತು.
ಮಂದಿರ ನಿರ್ಮಾಣ ಕನಸು ಸಾಕಾರಗೊಳ್ಳುವ ಭರವಸೆ ಇತ್ತೇ?
ನನ್ನ ಹಾಗೂ ಹಿಂದಿನ ಮತ್ತು ಮುಂದಿನ ತಲೆಮಾರಿನವರಿಗೆ ರಾಮ ಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳುವ ಯಾವುದೇ ಕುರುಹು ಇರಲಿಲ್ಲ. ನ್ಯಾಯದಾನದಲ್ಲಿ ಒಮ್ಮತದ ತೀರ್ಪು ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದ ಸಣ್ಣ ಕೆಲಸವನ್ನೂ ತ್ವರಿತವಾಗಿ ನಿರ್ವಹಿಸತೊಡಗಿದರು. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ತ್ವರಿತವಾಗಿ ಟ್ರಸ್ಟ್ ಸಹ ರಚನೆ ಮಾಡಿದರು. ಕಾಲ ಕಾಲಕ್ಕೆ ಮೇಲುಸ್ತುವಾರಿ ನೋಡಿಕೊಂಡರು. ಇದೆಲ್ಲದರ ಒಟ್ಟು ಫಲ ಈಗ ಮಂದಿರ ಮೈದಳೆದಿದೆ.
ಅಡಿಪಾಯದ ಗೊಂದಲ ಎದುರಾಗಿತ್ತಲ್ಲ?
ಹೌದು, ರಾಮಮಂದಿರ ನಿರ್ಮಾಣದ ಎರಡೂವರೆ ಎಕ್ರೆ ಜಾಗದ ತಳ ಭಾಗದಲ್ಲಿ ಸಾವಿರಾರು ವರ್ಷಗಳ ಹಿಂದೆ ಸರಯೂ ನದಿ ಹರಿಯುತ್ತಿತ್ತಂತೆ. ಹೀಗಾಗಿ ಇಲ್ಲಿನ ಮಣ್ಣು ಅಡಿಪಾಯಕ್ಕೆ ಯೋಗ್ಯವಾಗಿರಲಿಲ್ಲ. ಆಗ ಟ್ರಸ್ಟ್‌ನ ಸದಸ್ಯರೆಲ್ಲ ಸೇರಿ ವೈಜ್ಞಾನಿಕವಾಗಿ ಅಧ್ಯಯನ ನಡೆಸುವಂತೆ ಸೂಚಿಸಿದರು. ಐಐಟಿ ತಜ್ಞರು ಎರಡು ಆಯ್ಕೆಗಳನ್ನು ನೀಡಿದರು. ಒಂದು ಪೈಲ್ ಫೌಂಡೇಶನ್ (ಭೂಮಿ ಆಳದಲ್ಲಿ ಕಾಲಮ್ ಮಾದರಿ ನಿರ್ಮಾಣ), ಇನ್ನೊಂದು ಇಡೀ ಪ್ರದೇಶದ ಮಣ್ಣನ್ನು 15 ಮೀಟರ್ ಆಳ ಅಗೆದು ಅದನ್ನು ಹೊರಗೆ ತೆಗೆದು ಅಲ್ಲಿ ಗಟ್ಟಿಯಾದ ಮಣ್ಣನ್ನು ಹಾಕುವುದು. ಪೈಲ್ ಫೌಂಡೇಶನ್ ತಾಂತ್ರಿಕವಾಗಿ ಒಪ್ಪಿಗೆಯಾಗಲಿಲ್ಲ. ಎರಡನೇ ಮಾದರಿಯಲ್ಲಿ ದೊಡ್ಡ ಪ್ರಮಾಣದ ಮಣ್ಣನ್ನು ಅಗೆದು ಹೊರ ತೆಗೆದು ಪುನಃ ಗಟ್ಟಿ ಮಣ್ಣು ಹಾಕುವುದು ಸುಲಭದ ಕೆಲಸವಾಗಿರಲಿಲ್ಲ. ಅಲ್ಲದೇ ಅಷ್ಟರಲ್ಲಿ ಮಳೆಗಾಲವೂ ಆರಂಭವಾಗುತ್ತದೆ ಎಂಬ ಭೀತಿಯೂ ಎದುರಾಯಿತು. ಆದರೆ ತಜ್ಞರು ಸೂಚಿಸಿದಂತೆ ಮಣ್ಣು ಅಗೆಯಲು ನಿರ್ಧರಿಸಲಾಯಿತು. ಅಲ್ಲಿದ್ದ ಮಣ್ಣನ್ನು ತೆಗೆದು ತಾಂತ್ರಿಕವಾಗಿ 14 ದಿನಗಳಲ್ಲಿ ಕಲ್ಲಿನ ರೂಪ ಪಡೆಯುವ ಮಣ್ಣನ್ನು ಬಳಸಲಾಯಿತು. 37 ಪದರಿನಲ್ಲಿ ಕಲ್ಲಿನ ರೂಪ ಪಡೆಯುವ ಮಣ್ಣನ್ನು ಹಾಕಲಾಗಿದೆ. ಪ್ರತೀ ಪದರಿನ ಮಣ್ಣನ್ನು ಹಾಕಿದಾಗ 14 ದಿನಗಳ ಕಾಲ ಗಟ್ಟಿಗೊಳಿಸಲಾಗಿದೆ. ಹೀಗಾಗಿ ತಳಪಾಯ ಸ್ವಲ್ಪ ಸಮಯ ಹಿಡಿಯಿತು.
ಮಂದಿರ ವಿನ್ಯಾಸದಲ್ಲಿ ಆದ ಮಾರ್ಪಾಡು ಏನು?
1990ರಲ್ಲಿ ವಿಎಚ್‌ಪಿ ನಾಯಕರಾಗಿದ್ದ ಅಶೋಕ ಸಿಂಘಲ್ ಅವರು ಪ್ರಸಿದ್ಧ ದೇಗುಲ ನಿರ್ಮಾಣದ ಶಿಲ್ಪಿ ಅಶಿಶ್ ಸೋಮ್‌ಪುರ ಅವರಿಗೆ ವಿನ್ಯಾಸ ರೂಪಿಸಲು ಕೇಳಿದ್ದರು. ಅದರಂತೆ ಅವರು ಒಂದೇ ಮಹಡಿ ಹಾಗೂ ಗರ್ಭಗುಡಿಯ ವಿನ್ಯಾಸ ನಿರ್ಮಿಸಿ ಕೊಟ್ಟಿದ್ದರು. ಆಗಿನ ಕಾಲಕ್ಕೆ ಅದೇ ದೊಡ್ಡದಾಗಿತ್ತು. ವಿಶೇಷವೆಂದರೆ ಈ ಕುರಿತು ಮಾಡಿಕೊಂಡ ಕರಾರು ಪತ್ರದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು. ಅದನ್ನು ಸೋಮ್‌ಪುರ ಅವರು ನಿರ್ಮಿಸಬೇಕು. ಅದಕ್ಕೆ ಅವರಿಗೆ ಅಗತ್ಯ ಸಂಭಾವನೆ ನೀಡಬೇಕು’ ಎಂಬ ಎರಡೇ ಸಾಲಿನ ಒಕ್ಕಣಿ ಬರೆಯಲಾಗಿತ್ತು. ಇದು ಕೇವಲ ವಿಶ್ವಾಸದ ಮೇಲೆ ಆದಂತಹ ಒಡಂಬಡಿಕೆಗೆ ಸಾಕ್ಷಿ. ಅದೇ ವಿನ್ಯಾಸದಲ್ಲೇ ಈಗ ಬದಲಾವಣೆ ಮಾಡಿಕೊಳ್ಳಲಾಗಿದೆ. ಭವ್ಯ ಮಂದಿರ ನಿರ್ಮಾಣದ ಸಂಕಲ್ಪಕ್ಕೆ ಮೂರ್ತರೂಪ ನೀಡಲಾಗಿದೆ.
ಮಂದಿರದ ನಿರ್ಮಾಣಕ್ಕೆ ಕಬ್ಬಿಣ ಬಳಸಿಲ್ಲವೇ?
ಇಡೀ ಮಂದಿರದಲ್ಲಿ ಎಲ್ಲೂ ಕಬ್ಬಿಣ ಬಳಸಿಲ್ಲ. ಏಕೆಂದರೆ ಅದರ ಆಯಸ್ಸು ಕೇವಲ 90ರಿಂದ 100 ವರ್ಷ. ಎರಡು ಕಲ್ಲುಗಳ ಜೋಡಣೆಗೆ ಕೊಂಡಿಯಾಗಿ ತಾಮ್ರವನ್ನು ಬಳಕೆ ಮಾಡಲಾಗಿದೆ. ಮೈಸೂರಿನ ರಾಕ್ ಮೆಕ್ಯಾನಿಕಲ್ ಇನ್‌ಸ್ಟಿಟ್ಯೂಟ್, ಕೇಂದ್ರ ಪುರಾತತ್ವ ಇಲಾಖೆ ಸಲಹೆ ಮೇರೆಗೆ ರಾಜಸ್ಥಾನದ ಬನ್ಸಿಪಹಾಡಪುರ ಎಂಬಲ್ಲಿನ ಕಲ್ಲು ಬಳಸಲಾಗಿದೆ. ಇಡೀ ದೇಗುಲಕ್ಕೆ ಒಟ್ಟು 13 ಲಕ್ಷ ಕ್ಯೂಬಿಕ್ ಅಡಿ ಕಲ್ಲು ಬಳಸಲಾಗಿದೆ. ರೂರ್ಕಿಯ ಕೇಂದ್ರ ಕಟ್ಟಡ ಸಂಶೋಧನ ಸಂಸ್ಥೆ 500 ವರ್ಷಗಳ ಹಿಂದೆ ಸರಯೂ ನದಿಯಲ್ಲಿ ಉಂಟಾಗಿದ್ದ ಪ್ರವಾಹದ ಪ್ರಮಾಣ, ನೇಪಾಲದಿಂದ ಅಯೋಧ್ಯೆವರೆಗೆ 50 ವರ್ಷಗಳಿಂದ ಇಲ್ಲಿಯವರೆಗೆ ಸಂಭವಿಸಿದ ಭೂಕಂಪದ ತೀವ್ರತೆ ಅಧ್ಯಯನ ನಡೆಸಿದೆ. ಅವರು ಕಂಡುಕೊಂಡ ತೀವ್ರತೆಗಿಂತ 50 ಪಟ್ಟು ಹೆಚ್ಚು ಪ್ರಮಾಣದ ಭೂಕಂಪ ಸಂಭವಿಸಿದರೂ ಯಾವುದೇ ಧಕ್ಕೆಯಾಗದಂತೆ ನಿರ್ಮಿಸಲಾಗಿದೆ. ಪ್ರತೀ ಕಲ್ಲಿನ ನಡುವೆ 0.1 ಮಿ.ಮೀ.ನಷ್ಟು ಸಹ ಕಿಂಡಿ ಇಲ್ಲ.
ಮಂದಿರ ಪ್ರವೇಶ ಹಾಗೂ ಒಳಾಂಗಣದ ವಿಶೇಷತೆ ಏನು?
ಪೂರ್ವ ಭಾಗದಲ್ಲಿ ಪ್ರವೇಶ ದ್ವಾರವಿದೆ. ಅಲ್ಲಿಂದ ಒಳಪ್ರವೇಶಿಸುತ್ತಿದ್ದಂತೆ ಮೆಟ್ಟಿಲು ಇಳಿದು ನಾಲ್ಕಾರು ಹೆಜ್ಜೆ ನಡೆಯಬೇಕು. ಪುನಃ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಸಿಂಹ, ಗಜ, ಹನುಮಾನ್ ಎಂಬ ಮೂರು ದ್ವಾರಗಳಿವೆ. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಐದು ಮಂಟಪಗಳನ್ನು ದಾಟಿ ಗರ್ಭಗುಡಿ ದರ್ಶನವಾಗುತ್ತದೆ. ದರ್ಶನದ ಬಳಿಕ ದಕ್ಷಿಣ ಭಾಗದಿಂದ ಹೊರಬರಬೇಕು. ಮಂದಿರದ ಸುತ್ತ ಸುತ್ತಲು ಅವಕಾಶವಿದೆ. ಆವರಣದ ಗೋಡೆ ಸುಮಾರು 40 ಅಡಿ ಎತ್ತರವಿದೆ. ಹೊರ ಭಾಗದಲ್ಲಿ ಮುಚ್ಚಿದ್ದು, ಒಳ ಭಾಗದಲ್ಲಿ ಹಜಾರ್ ಮಾದರಿಯಲ್ಲಿ ಮಂಟಪವಿದೆ. ಅಲ್ಲಿ ವಿವಿಧ ದೇಗುಲಗಳನ್ನು ನಿರ್ಮಿಸಲಾಗಿದೆ.
ಶ್ರೀರಾಮನ ಚಿತ್ರ ಆಯ್ಕೆ ಮಾಡಿಕೊಂಡಿದ್ದು ಹೇಗೆ?
ಮೂರ್ತಿ ಕೆತ್ತನೆಗೂ ಮುನ್ನ ರಾಮನ ಪರಿಕಲ್ಪನೆ ಹೇಗಿರಬೇಕೆಂಬ ಬಗ್ಗೆ ಚಿಂತನೆ ನಡೆಯಿತು. ಆಗ ದೇಶದ ವಿವಿಧ ಭಾಗಗಳ ಚಿತ್ರಕಲಾಕಾರರಿಗೆ ರಾಮನ ಮೂರ್ತಿಯ ಚಿತ್ರ ಬಿಡಿಸಲು ಹೇಳಲಾಯಿತು. ಅದೆಲ್ಲವನ್ನೂ ಗಮನಿಸಿದ ಟ್ರಸ್ಟ್‌ನ ಸದಸ್ಯರು ಕೊನೆಗೆ ಮೂವರನ್ನು ಆಯ್ಕೆ ಮಾಡಿ ಮತ್ತೂಮ್ಮೆ ಚಿತ್ರ ಬಿಡಿಸಲು ಹೇಳಿದರು. ಅದರಲ್ಲಿ ಬನಾರಸ್ ಹಿಂದೂ ವಿವಿ ಪ್ರೊಫೆಸರ್‌ವೊಬ್ಬರು ಬಿಡಿಸಿದ ರಾಮಲಲ್ಲಾ ಚಿತ್ರವನ್ನು ಆಯ್ಕೆ ಮಾಡಿ ಮೂರ್ತಿ ಕೆತ್ತನೆ ಮಾಡಲು ನೀಡಲಾಯಿತು.
ಪೂರ್ಣ ಪ್ರಮಾಣದ ಕಾಮಗಾರಿ ಮುಗಿಯುವುದು ಯಾವಾಗ?
ಈಗ ಫೇಸ್ 1 ಮಾತ್ರ ಪೂರ್ಣಗೊಂಡಿದೆ. ತಳ ಮಹಡಿ, ಗರ್ಭ ಗುಡಿ, 5 ಮಂಟಪ, ಗೋಪುರ ಪೂರ್ಣವಾಗಿದೆ. ಗರ್ಭ ಗುಡಿ ಎದುರಿನ 80 ಅಡಿ, ದರ್ಶನ ಪಡೆದ ಬಳಿಕ ದಕ್ಷಿಣ ಭಾಗದಿಂದ ಹೊರಹೋಗುವ 40 ಅಡಿ ವ್ಯಾಪ್ತಿಯ ಕಾಮಗಾರಿ ಪೂರ್ಣವಾಗಿದೆ. 2 ಮತ್ತು 3ನೇ ಮಹಡಿ ಹಾಗೂ ಸುತ್ತಲಿನ ಆವರಣ ಗೋಡೆ 2024, ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ.
ರಾಮನ ಮೇಲೆ ಸೂರ್ಯ ಕಿರಣ ಬೀಳುವ ಬಗೆ ಹೇಗೆ?
ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಗೆ ಸಲಹೆ ನೀಡಿದ್ದರು. ಅಲ್ಲದೇ ರಾಮನವಮಿ ದಿನ ರಾಮನ ಹಣೆಯ ಮೇಲೆ ಸೂರ್ಯನ ಕಿರಣ ಬಿದ್ದರೆ ಇನ್ನೂ ಚೆನ್ನಾಗಿರುತ್ತದೆ ಎಂದಿದ್ದರು. ಗರ್ಭಗುಡಿಗೆ ಸೂರ್ಯನ ಕಿರಣ ಪೂರ್ವ ದಿಕ್ಕಿನಿಂದ ಬರುತ್ತಿರಲಿಲ್ಲ. ಈಶಾನ್ಯ ಭಾಗದಿಂದ ಬಂದರೂ ನೇರವಾಗಿ ರಾಮನ ಹಣೆಯ ಮೇಲೆ ಬೀಳುತ್ತಿರಲಿಲ್ಲ. ಹೀಗಾಗಿ ಬೆಂಗಳೂರಿನ ಸಿಬಿಆರ್‌ಐ ಹಾಗೂ ಸುನ್ಯಾಮಿಕಲ್ ಇನ್‌ಸ್ಟಿಟ್ಯೂಟ್‌ಗೆ ಕಂಪ್ಯೂಟರ್ ಆಧಾರಿತವಾಗಿ ತಂತ್ರಜ್ಞಾನ ರೂಪಿಸಲು ಸೂಚಿಸಲಾಗಿತ್ತು. ಅವರು ಕಿಂಡಿಯ ಮೂಲಕ ಬರುವ ಸೂರ್ಯನ ಕಿರಣವನ್ನು ತಂತ್ರಜ್ಞಾನದ ಮೂಲಕ ರಾಮನ ಹಣೆಗೆ ಬೀಳುವಂತೆ ಸಾಫ್ಟ್ವೇರ್ ರೂಪಿಸಿದ್ದಾರೆ. ಅಲ್ಲದೇ ಮುಂದಿನ 20 ವರ್ಷಗಳ ಕಾಲ ಸೂರ್ಯನ ದಿಕ್ಕು ಬದಲಿಸುವ ಕುರಿತು ಅಧ್ಯಯನ ನಡೆಸಿ ರಾಮನ ಹಣೆಗೇ ಸೂರ್ಯನ ಕಿರಣ ಬೀಳುವಂತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಸಾರ್ವಜನಿಕರಿಗೆ ರಾಮನ ದರ್ಶನ ಯಾವಾಗ?
ಜ.22ರಂದು ಪ್ರಾಣ ಪ್ರತಿಷ್ಠಾಪನೆ ಮಾರನೇ ದಿನದಿಂದಲೇ ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತ ಅವಕಾಶ ಇದೆ. ಉತ್ಸವ ಮೂರ್ತಿ ಹಾಗೂ ಎದ್ದು ನಿಂತಿರುವ ಮಾದರಿಯಲ್ಲಿರುವ ರಾಮನ ಮೂರ್ತಿ ದರ್ಶನ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.