ಬೆಳಕು ಚೆಲ್ಲಲಿರುವ ಉಡುಪಿಯ “ಧರ್ಮಸಂಸದ್’
Team Udayavani, Nov 24, 2017, 6:15 AM IST
ಆಕ್ರಮಣಶೀಲತೆಯ ಲವಲೇಶವೂ ಇಲ್ಲದೆ ಇಸ್ಕಾನ್, ಸ್ವಾಮಿನಾರಾಯಣ ಮಂದಿರಗಳು, ನೂರಾರು ಸಂತರ ಸಂದೇಶಗಳು, ವಿಶ್ವವ್ಯಾಪಿ ಯಾಗಿ ಎಲ್ಲ ಮಂದಿಯನ್ನೂ ಆಧ್ಯಾತ್ಮ ನೆಲೆಯಲ್ಲಿ ಬರಸೆಳೆಯುತ್ತಲೇ ಇವೆ. ತೆರೆದ ಮನದಲ್ಲಿ, ಹೊಸತನದ ಬೆಳಕನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರುವುದೇ ಈ ಹಿಂದೂ ಧರ್ಮದ ಅಮರತ್ವದ, ಚಿರನೂತನತೆಯ ಆಂತರಿಕ ಸತ್ಯ, ತತ್ವ .
ಹಿಂದೂ ಸಮಾಜ, ಧರ್ಮ, ಸಂಸ್ಕೃತಿ, ಸಭ್ಯತೆ – ಇವೆಲ್ಲದರ ಹಿಂದಿನ, ಇಂದಿನ ಹಾಗೂ ಮುಂದಿನ ಗತಿಶೀಲತೆಯಲ್ಲಿ ಉಡುಪಿಯ “ಧರ್ಮಸಂಸತ್’ ತನ್ನದೇ ಐತಿಹಾಸಿಕತೆಯನ್ನು ಮೆರೆಯಲಿದೆ. ವಿಶ್ವದ “ಆದಿಶಕ್ತಿ’ಯನ್ನು ಆಳವಾಗಿ ಸಂಶೋಧಿಸಿ, ಮನದಲ್ಲಿ ಮಥಿಸಿ, ನುತಿಸಿ, ಮುಂದೆ ಬರವಣಿಗೆಯಲ್ಲೂ ಇಳಿಸಿ, ಇಂದಿಗೂ ಉಳಿಸಿ ಹೋದ ಅಪಾರ ಶಾಸ್ತ್ರಗ್ರಂಥಗಳು ಹಿಂದೂ ಧರ್ಮದ ಭದ್ರ ಬುನಾದಿ; ಪ್ರಪ್ರಥಮ ಆಧಾರಸ್ಥಂಭ ಕೂಡ. ಹರಿಯುವ ನದಿ, ಪವಿತ್ರ ಸರೋವರ, ತಲೆಎತ್ತಿ ನಿಂತ ಗಿರಿಶಿಖರ, ಹಸಿರುಕೊಂಬೆಯ ವೃಕ್ಷ, ಚಿಗುರೊಡೆವ ತುಳಸಿ- ಬಿಲ್ವಪತ್ರೆ, ಗರಿಕೆ, ಹಾಲುಣಿಸುವ ಗೋವು, ಚಲಿಸುವ ಮೃಗ, ಪಕ್ಷಿಗಳನ್ನೂ ದೇವದೇವತೆಗಳ ಜತೆ ಸಮೀಕರಣ, ಗಾಳಿ, ಮಳೆ, ಎಲ್ಲದರಲ್ಲಿಯೂ ದೈವತ್ವದ ಬೆಳಕು, ಸೃಷ್ಟಿ, ಪಾಲನೆ, ವಿನಾಶ ಗಳಲ್ಲಿಯೂ ದೈವೀಪ್ರಭೆ ತುಂಬಿ ನಿಂತ ವಿಶಾಲ ಚಿಂತನೆಯ ಸನಾತನ ಧರ್ಮದ ನಾಡು ಇದು. ಆದರೆ ಇದೇ ರೀತಿ ತನ್ನದೇ ಧಾರ್ಮಿಕ ಮಹತ್ತನ್ನು ತುಂಬಿ ನಿಂತ ಗ್ರೀಕ್, ಪರ್ಷಿಯನ್, ಮಾಯನ್ ಮುಂತಾದ ನೂರಾರು ಹಿರಿಕಿರಿಯ ಸಮಕಾಲೀನ ಸಂಸ್ಕೃತಿಗಳು ಸೆಮೆಟಿಕ್ ಏಕದೇವಾನುಸಂಧಾನದ ಖಡ್ಗದ, ಕೋವಿಯ ಬಲದಲ್ಲಿ ನೆಲಕಚ್ಚಿದವು! ಇದೆಲ್ಲ ಕೇವಲ ಕಟ್ಟುಕತೆ ಯಲ್ಲ; ವಿಶ್ವಚರಿತ್ರೆ ತೆರೆದಿಟ್ಟ ವಾಸ್ತವಿಕತೆ! ಈ ಎಲ್ಲ ಎಡರು ತೊಡರುಗಳ “ಕಾಲ’ದ ತೆರೆಹೆಡೆಗಳಲ್ಲಿ ಒಂದಿನಿತು ಕಳೆ ಗುಂದಿಯೂ ಎದೆಗುಂದದೆ, ಮರಳಿ ಸನಾತನ ಭಾರತ ತನ್ನತನ ವನ್ನು ಉಳಿಸಿ ಕೊಂಡಿದೆ. ಅದನ್ನು ಬರಲಿರುವ ಸೂರ್ಯೋ ದಯಗಳಲ್ಲಿಯೂ ಮಸುಕಾಗದಂತೆ ಉಳಿಸುವ ಸಾರ್ಥಕ್ಯ ಈ ಬಾರಿಯ ಉಡುಪಿಯ “ಧರ್ಮಸಂಸದ್’ನಲ್ಲಿ ಮಿಂಚಲಿದೆ.
ಆಕ್ರಮಣ, ಮತಾಂತರ, ಹಿಂಸೆ, ಅವಮಾನ ಇವೆಲ್ಲ ಅವ್ಯಾಹತ ವಾಗಿ ನಡೆದರೂ, ವಿಶ್ವದ ಜನಸಂಖ್ಯೆಯಲ್ಲಿ ಇಂದಿಗೂ ಕ್ರೈಸ್ತ, ಇಸ್ಲಾಂ ಮತೀಯರ ಬಳಿಕ ಹಿಂದೂಗಳು ತೃತೀಯ ಸ್ಥಾನದಲ್ಲಿ ಇದ್ದಾರೆ. ಇದು ಜಗದಗಲದ ಚರಿತ್ರಕಾರರಿಗೆ, ಸಂಶೋಧಕರಿಗೆ ಒಂದು ಅಧ್ಯಯಶೀಲ ವಿಸ್ಮಯ! ಆಕ್ರಮಣಶೀಲತೆಯ ಲವಲೇಶವೂ ಇಲ್ಲದೆ, ಇಂದಿಗೂ ಇಸ್ಕಾನ್, ಸ್ವಾಮಿನಾರಾಯಣ ಮಂದಿರಗಳು, ನೂರಾರು ಸಂತರ ಸಂದೇಶಗಳು, ಸುಂದರವಾಗಿ ವಿಶ್ವವ್ಯಾಪಿ ಯಾಗಿ, ಎಲ್ಲ ಭೂಖಂಡಗಳ ಮಂದಿಯನ್ನೂ ಆಧ್ಯಾತ್ಮನೆಲೆಯಲ್ಲಿ, ಸೆಲೆಯಲ್ಲಿ ಬರಸೆಳೆಯುತ್ತಲೇ ಇವೆ. ಸದಾ ವಿಜ್ಞಾನದೊಂದಿಗೆ ಸಂವಾದಿಯಾಗಿ, ತೆರೆದ ಮನದಲ್ಲಿ, ಹೊಸತನದ ಬೆಳಕನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರುವುದೇ ಈ ಹಿಂದೂ ಧರ್ಮದ ಅಮರತ್ವದ, ಚಿರನೂತನತೆಯ ಆಂತರಿಕ ಸತ್ಯ, ತತ್ವ . ಇದೆಂದೂ ಮಸುಕಾಗದ ತೆರದಲ್ಲಿ, ಆಧುನಿಕತೆಯ ವಿಷ ಪ್ರಾಶನವಾಗದಂತೆ, ಸನಾತನ ಚಿಂತನೆಗೆ ವಿಜ್ಞಾನದ ಮೆರುಗು, ಆಧುನಿಕ ಪ್ರಾವೀಣ್ಯತೆಯ ಸಾಹಚರ್ಯೆ, ಯೋಗ, ಪ್ರಾಣಾಯಾಮ, ಆಯುರ್ವೇದದಂತಹ ಪ್ರಾಚೀನತೆಯ ಸಹಯೋಗ – ಇದೆಲ್ಲ
ದರ ಸಾಂಗತ್ಯವೇ ಸದಾ ಚಲನಶೀಲ ಹಿಂದುತ್ವ ಸಲಿಲದ ಮೂಲಶಕ್ತಿ. ಇದರ ಓಘವನ್ನು ಸಂವರ್ಧಿಸುವಲ್ಲಿ ಉಡುಪಿಯ
ಈ ಬಾರಿಯ ಸಂತ ಮಹಂತರ ಮನದಾಳದ ಅನುಭವ, ಅನುಭಾವ ಸ್ಫೂರ್ತಿಯ ಸೆಲೆಯಾಗಬಲ್ಲುದು.
ಕ್ಷಾತ್ರತೇಜ, ಕುರುಧರೆಯಲ್ಲಿ ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಎರೆದ ಗೀತಾಮೃತದ ಭಾವಧಾರೆ. ಅದರ ಉದ್ದಕ್ಕೂ ಮಿಂಚಿದ ಅಮೃತಬಿಂದುಗಳು ಸಾರ್ವಕಾಲಿಕ, ಸಾರ್ವತ್ರಿಕ ಸತ್ಯ. ಇದರ ಹೊಳಹು ಧರ್ಮಸಂಸ್ಥಾಪನೆಗೆ, ಪುನರುಜ್ಜೀವನಕ್ಕೆ ಸುಯೋಗ್ಯ ಪಥದರ್ಶಿ. ದ್ವಾರಕೆಯಿಂದ ಬಂದ ಶ್ರೀಕೃಷ್ಣನ ರಜತಪುರ ಉಡುಪಿಯಲ್ಲಿ ಈ ಕ್ಷಾತ್ರಸಂದೇಶದ ಧರ್ಮದುಂದುಭಿ ಧರ್ಮಸಂಸತ್ತಿನ ಸಭಾಂಗಣದಲ್ಲಿ ಅನುರಣಿಸಲಿದೆ. ಅಲ್ಲಿ ಮೂಡುವ ಒಕ್ಕೊರಲ ಸಂತವಾಣಿ, ಅನ್ಯರಿಗೆ ತೊಡಕಿರದ ತೆರದಲ್ಲಿ ನಮ್ಮತನವನ್ನು ಉಳಿಸುವಲ್ಲಿ ವೀರವಾಣಿ, ಸಿಂಹ ಗರ್ಜನೆ ಎನಿಸಲಿದೆ. ಮತಾಂತರ, ಲವ್ ಜಿಹಾದ್ ಇವೆಲ್ಲ ವರ್ತಮಾನದ ಕಟ್ಟುಕತೆಗಳೇನೂ ಅಲ್ಲ. ದಕ್ಷಿಣದ ಕೇರಳದಿಂದ ಹಿಡಿದು ಉತ್ತರದ ಕಾಶ್ಮೀರೀ ಪಂಡಿತರ, ಅಂತೆಯೇ ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶದಲ್ಲಿಯೂ ಹಿಂದುತ್ವವನ್ನು ಅದುಮಿಡುವ ವರ್ತ ಮಾನಗಳು ತೇಲಿ ಬರುತ್ತಲೇ ಇವೆ. ಭವಿಷ್ಯದ ಭದ್ರಬುನಾದಿ ಇರುವುದೇ ವರ್ತಮಾನದ ಶಕ್ತಿ ಸಂವರ್ಧನೆಯಲ್ಲಿ. ನಾವು “”ಇಂದು ಏನು? ಹೇಗೆ ?” ಎನ್ನುವುದು ಕಳೆದ ನಿನ್ನೆಗಳ ಭೂತಕಾಲದ ಸೋಲು ಗೆಲುವಿನಲ್ಲಿ. ಒಂದು ಸಾವಿರ ವರ್ಷಗಳ ಖಡ್ಗ, ಕೋವಿಗಳ ಆರ್ಭಟದ ಮಧ್ಯೆಯೂ ನಾವು ಇಂದೂ ಹಿಂದೂಗಳಾಗಿ ಉಳಿಯಲು ಕಾರಣವೇನು? ನಮ್ಮ ಪೂರ್ವಜರ ಹೋರಾಟದ ಫಲಶ್ರುತಿ, ಋಷಿಮುನಿಗಳ ಆರ್ಜಿತ ಪುಣ್ಯಬಲ, ಇನ್ನೂ ಆಳವಾಗಿ ಮಾತೆಯರ ಎದೆಹಾಲಿನೊಂದಿಗೆ ಮಕ್ಕಳಿಗೆ ಉಣಬಡಿಸಿದ ಸಾಂಸ್ಕೃತಿಕ ಸಿಹಿತನ.
ಇಲ್ಲೊಂದು ಐತಿಹಾಸಿಕ ಪ್ರಮಾದದ ಕರಿಛಾಯೆಯೂ, ಹಿರಿಯರ ಹೋರಾಟದ, ಧರ್ಮಸಂಗ್ರಾಮದ ಬಿಳಿಪರದೆಯಲ್ಲಿ ಗೋಚರಿಸುತ್ತಿದೆ. ಬಲಾತ್ಕಾರವಾಗಿ ಮತಾಂತರಗೊಂಡ ಹಿಂದೂ ಬಂಧುಗಳನ್ನು ಮರಳಿ ಮಾತೃಧರ್ಮದ ತೆಕ್ಕೆಯಲ್ಲಿ ಹೊಂದುವಲ್ಲಿ, ಹಿಂದೂಗಳ ಹಿಂದಿನ ಮತಗ್ರಂಥಗಳು ಅನುಮತಿ ನೀಡಿಲ್ಲ ಎಂಬ ನೆಪವೊಡ್ಡಿ ಆ ಪ್ರಕ್ರಿಯೆಯೇ ಇಲ್ಲವಾಯ್ತು; ಮರಳಿ ಬರಲು ಬಯಸಿದ ಬಂಧುಗಳು ಇಂದಿಗೂ ತಮ್ಮ ಅನ್ಯಮತೀಯ ಹೆಸರಿನೊಂದಿಗೆ ಭಟ್, ವಾಣಿ, ಗುರು, ಪ್ರಭು – ಎಂಬ ನಾಮಧೇಯದಲ್ಲೇ ತೃಪ್ತರಾಗಿ ಉಳಿಯಬೇಕಾಯಿತು. ಮಾತ್ರವಲ್ಲ, ಸೂರ್ಯನಿಗಿಂತಲೂ ಹೆಚ್ಚು ಕಾಲು ಸುಡುವ ಪ್ರಖರತೆ ಅದರ ಕಿರಣಗಳನ್ನು ಹೀರಿಕೊಂಡ ಮರಳಿನಲ್ಲಿ ಎಂಬಂತಾ ಯಿತು. ಈ ಹಿನ್ನೆಲೆಯಲ್ಲಿ ಉಡುಪಿಯ ಈ ಧರ್ಮಸಂಸತ್ ಧರ್ಮರಕ್ಷಣೆಯ ಕ್ಷಾತ್ರತೇಜಕ್ಕೆ ಅಪಾರ ಮೆರುಗು ತುಂಬಲಿದೆ. ಧರ್ಮವನ್ನು ರಕ್ಷಿಸಿದರೆ, ಅದೇ ಧರ್ಮ ನಮ್ಮ ಪಾಲಿಗೆ ಸುರಕ್ಷೆ! ಉಗ್ರಗಾಮಿತ್ವ, ಲವ್‌ಜಿಹಾದ್, ಅರಾಷ್ಟ್ರೀಕರಣ ಮುಂತಾದ ಪಿಡುಗಿಗೆ ಸೆಟೆದು ನಿಲ್ಲುವ ಅಭೂತಪೂರ್ವ ಶಕ್ತಿ ಸಂವರ್ಧನೆಗೆ ಪೂರಕ, ಪ್ರೇರಕ ಈ ಸಂತ ಸಮ್ಮೇಳನ ಎನಿಸಲಿದೆ.
ಗೋವು ಯಾವುದೇ ಧರ್ಮದ, ಮತೀಯ ಸಂಕುಚಿತ ಭಾವನೆಗೆ ಸೀಮಿತವಲ್ಲ. ಏಕೆಂದರೆ ಹಸು ನೀಡುವ ಹಾಲು ಎಲ್ಲ ಮತೀಯರಿಗೂ, ವಯೋಮಿತಿಯವರಿಗೂ “ಅಸು’ವಿನಲ್ಲಿ ಸದಾ “ಕಸು’ ತುಂಬಲು ಇರುವ ಆರೋಗ್ಯಭಾಗ್ಯದ ಪೇಯ. ಹಾಗಿರು ವಲ್ಲಿ ಗೋವಧೆಯ ರಕ್ತಪಿಪಾಸುತನ, ಕೊಂದು ತಿಂದೇ ತೀರುವ ಹಠಮಾರಿತನವಾದರೂ ಏಕೆ? ಹಿಂದೆ ಋಷಿವನ, ಗುರುಕುಲಗಳಲ್ಲಿ ಅಪಾರ ಸಂಖ್ಯೆಯ ಧೇನು ಸಾಕಣೆ ಈ ನೆಲದ ಸಹಸ್ರಾರು ವರುಷಗಳ ಹರುಷದ ಪರಂಪರೆ. ಈ ಪಶುಸಂಗೋಪನೆಯ ಕಾಯಕಕ್ಕೇ ಕುಠಾರಪ್ರಾಯವಾಗಿ, ಗೋವಧೆಗೈಯುತ್ತಾ ಗೋವಂಶ ನಿರ್ವಂಶಕ್ಕಾಗಿ ಹವಣಿಸುವಿಕೆಗೆ ಈ ಧರ್ಮಸಂಸತ್ ನಿಷ್ಠುರವಾಗಿ ಕೆಂಪು ನಿಶಾನೆ ತೋರಲಿದೆ.
ಒಂದು ಕಾಲದ ಭವ್ಯ ಶ್ರೀರಾಮಮಂದಿರ, ಇಂದು ಹರಕುಮುರುಕು ಚಪ್ಪರದ ಕೆಳಗೆ ರಾಮಲಲ್ಲಾನ ಆರಾಧನೆ. ಈ ಎಲ್ಲ ಕಾಲಘಟ್ಟದ ಏರುಪೇರುಗಳ ಮಧ್ಯೆ ಮರ್ಯಾದಾ ಪುರುಷೋತ್ತಮನ ಅಪೂರ್ವ ಮಂದಿರ ತಲೆ ಎತ್ತುವ ಪುಣ್ಯ ಗಳಿಗೆ ಸಮೀಪಿಸುತ್ತಿದೆ. ಈ ಚಾರಿತ್ರಿಕ ಸಂಭ್ರಮಕ್ಕೂ ಶ್ರೀಕೃಷ್ಣನ ಆರಾಧನಾ ಪುಣ್ಯನೆಲ ಸಾಕ್ಷಿ ಆಗಲಿದೆ. ಪೂಜ್ಯ ಪೇಜಾವರ ಮಠಾಧೀಶರ ಪಂಚಮ ಪರ್ಯಾಯದ ಈ ಐತಿಹಾಸಿಕ ಸಮ್ಮೇಳನದ ಫಲಶ್ರುತಿ ಯಾಗಿ, ಹರಿವಾಯು ಮಧ್ವ ಗುರುಗಳ ಸಿರಿಹರಕೆಯೊಂದಿಗೆ ಈ ಹಿಂದೂ ಸಂಕಲ್ಪ ಸರಯೂ ತೀರದಲ್ಲಿ ಮೈತಾಳಲಿದೆ.
ಒಟ್ಟಿನಲ್ಲಿ ಹಿಂದೂ ಭಾವೈಕ್ಯತೆ, ಜಾತಿಸಾಮರಸ್ಯ, ಹೊಸತನಕ್ಕೆ ಅಡಿಯಿಡುವ ಚೈತನ್ಯ, ರಾಷ್ಟ್ರೀಯ ಚಿಂತನೆಯ ಸುಂದರ ಪರಿಧಿ, ಈ ನೆಲದ ಪರಿಸರದ ಸಂರಕ್ಷಣೆ, ಹಿಂದೂ ಚಿಂತನ ವೈಶಾಲ್ಯತೆಯ ಪರಿಕಲ್ಪನೆ, ಸಹಿಷ್ಣುತೆಯ ಪರಿಧಿ ವಿಸ್ತರಣೆ, ಧರ್ಮಜಾಗೃತಿ, ಕ್ಷಾತ್ರತೇಜ ಸಂವರ್ಧನೆ, ಮುಂಬರುವ ಪೀಳಿಗೆಯ ಸರ್ವ ತೋಮುಖ ಬದುಕಿನ ಸುಂದರ ಚೌಕಟ್ಟು ನಿರ್ಮಾಣ – ಈ ನೆಲೆಯಲ್ಲಿ ಈ ಬಾರಿಯ ಸಂತ ಸಮ್ಮೇಳನ, “ಧರ್ಮಸಂಸತ್’ ಕಲಾಪ ಮಹತ್ವಪೂರ್ಣ ಎನಿಸಲಿದೆ.
ಡಾ| ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.