Dialysis ಯಂತ್ರಗಳಿಗೆ ಬೇಕು ಚಿಕಿತ್ಸೆ: ರೋಗಿಗಳಿಗಂತೂ ದೇವರೇ ಗತಿ!
ರಾಜ್ಯದ ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಸ್ಥಿತಿಗತಿ ಹೀಗಿದೆ
Team Udayavani, Dec 2, 2023, 6:40 AM IST
ರಾಜ್ಯದ ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಸ್ಥಿತಿಗತಿ ದೇವರಿಗೇ ಪ್ರಿಯ! ತಾಂತ್ರಿಕ ಸಮಸ್ಯೆಯಿಂದ ಅದೆಷ್ಟೋ ಡಯಾಲಿಸಿಸ್ ಯಂತ್ರಗಳು ಮೂಲೆ ಸೇರಿವೆ. ಇರುವ ಯಂತ್ರಗಳ ಸಮರ್ಪಕ ನಿರ್ವಹಣೆ ಇಲ್ಲದೆ ರೋಗಿಗಳು ಖಾಸಗಿಗಳತ್ತ ಮುಖ ಮಾಡುತ್ತಿರುವ ನಡುವೆಯೇ ಈಗ ಸಿಬಂದಿ ಮುಷ್ಕರಕ್ಕೆ ಮುಂದಾಗಿದ್ದಾರೆ. ರೋಗಿಗಳಿಗಂತೂ ದೇವರೇ ಗತಿ!
ಕೋಲಾರ: ಐದು ಯಂತ್ರಗಳು ಸುಸ್ಥಿತಿ
ಕೋಲಾರ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ 8 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಪೈಕಿ 5 ಯಂತ್ರಗಳಲ್ಲಿ ಅಗತ್ಯವಿರುವವರಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಆದರೆ ಉಳಿದ ಮೂರು ಯಂತ್ರಗಳು ಸಂಪೂರ್ಣ ಕೆಟ್ಟು ಹೋಗಿರುವುದರಿಂದ ಅವುಗಳ ಸೇವೆಯನ್ನು ರೋಗಿಗಳು ಪಡೆದುಕೊಳ್ಳಲು ಸಾಧ್ಯವಾಗು ತ್ತಿಲ್ಲ. ಈಗಾಗಲೇ ಕೆಟ್ಟು ಹೋಗಿ ರುವ ಮೂರು ಯಂತ್ರಗಳು ಹಳೆಯ ಮಾಡೆಲ್ ಆಗಿರುವುದರಿಂದ ದುರಸ್ತಿ ಮಾಡಿಸಿದರೂ ಪ್ರಯೋಜನವಾಗದು ಎಂಬ ಕಾರಣಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಅವುಗಳನ್ನು ಮೂಲೆಗೆ ತಳ್ಳಿದೆ. ಈ ಯಂತ್ರಗಳು ಹಳೆಯ ಮಾಡೆಲ್ ಆಗಿರುವುದರಿಂದ ಡಯಾಲಿಸಿಸ್ ಗುಣಮಟ್ಟದ ಕೊರತೆ ಇದೆ ಎಂಬ ಆರೋಪ ರೋಗಿಗಳಿಂದ ಕೇಳಿ ಬರುತ್ತಿದೆ. ವಾಸ್ತವವಾಗಿ ಇಲ್ಲಿನ ಬೇಡಿಕೆ ಈಡೇರಿಸಲು 25 ಯಂತ್ರಗಳಾದರೂ ಬೇಕು.
ರಾಯಚೂರು: ಡಯಾಲಿಸಿಸ್ ಕೇಂದ್ರಕ್ಕಿಲ್ಲ ಪುರುಸೊತ್ತು
ಒಪೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಚ್ಚಲಾಗಿದ್ದು, ಕೆಲವೊಂದು ವಿಭಾಗಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ವಿಶೇಷ ಅನುದಾನ ನೀಡಿ ಸ್ವಾಯತ್ತ ಸಂಸ್ಥೆಯನ್ನಾಗಿಸಬೇಕು ಎಂಬ ಬೇಡಿಕೆ ಇದ್ದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಅದೇ ಆಸ್ಪತ್ರೆಯಲ್ಲಿ ಸುಮಾರು 10 ಡಯಾಲಿಸಿಸ್ ಯಂತ್ರಗಳಿದ್ದು, ನಿತ್ಯ 20 ಜನರಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಸರದಿಯಲ್ಲಿ ನಿಂತು ಡಯಾಲಿಸಿಸ್ ಮಾಡಿಸಬೇಕಾದ ಸ್ಥಿತಿಯಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ತಮ್ಮ ರೋಗಿಗಳಿಗೆ ಡಯಾಲಿಸಿಸ್‌ಗೆ ಇಲ್ಲಿಗೆ ಶಿಫಾರಸು ಮಾಡುತ್ತಿದ್ದಾರೆ ಎನ್ನುವ ಆರೋಪಗಳಿವೆ, ಸಾಮಾನ್ಯವಾಗಿಯೇ ಇಲ್ಲಿ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ಸರಕಾರದಿಂದ ಡಯಾಲಿಸಿಸ್‌ಗೆ ಬೇಕಾದ ಔಷಧ ಪೂರೈಕೆ ಕೆಲವೊಮ್ಮೆ ವಿಳಂಬವಾಗುತ್ತಿದ್ದು, ಖಾಸಗಿಯಿಂದ ಖರೀದಿಸಿ ನೀಡಲಾಗುತ್ತಿದೆ.
ದಾವಣಗೆರೆ: ದುರಸ್ತಿಯಾಗದ 14 ಯಂತ್ರಗಳು
ಮೆಡಿಕಲ್ ಹಬ್ ಖ್ಯಾತಿಯ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು 20 ಡಯಾಲಿಸಿಸ್ ಯಂತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು 6 ಮಾತ್ರ. ಇನ್ನುಳಿದ 14 ಯಂತ್ರಗಳು ಕಾರ್ಯನಿರ್ವಹಿಸದ ಕಾರಣಕ್ಕೆ ಡಯಾಲಿಸಿಸ್‌ಗೆ ಒಳಗಾಗಲೇಬೇಕಾದವರು ಅತೀವ ಸಮಸ್ಯೆ ಅನುಭವಿಸುತ್ತಿದ್ದಾರೆ. ಅನಿವಾರ್ಯವಾಗಿ ಖಾಸಗಿ ಡಯಾಲಿಸಿಸ್ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ. ಸರಿಸುಮಾರು 950 ಹಾಸಿಗೆ ಸಾಮರ್ಥ್ಯದ ಚಿಗಟೇರಿ
ಜಿಲ್ಲಾಸ್ಪತ್ರೆ ದಾವಣಗೆರೆ ಮಾತ್ರವಲ್ಲ ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಹಾವೇರಿ ಜಿಲ್ಲೆಯ ಅನೇಕ ಭಾಗಗಳ ಜನರ ಪಾಲಿಗೆ ಪ್ರಮುಖ ಆರೋಗ್ಯ ಕೇಂದ್ರ. ದಿನಕ್ಕೆ ಸಾವಿರಾರು ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರೆ, ನೂರಾರು ಸಂಖ್ಯೆಯಲ್ಲಿ ಒಳರೋಗಿಗಳು ದಾಖಲಾಗುತ್ತಾರೆ.ಅಂತಹ ಪ್ರಮುಖ ಆಸ್ಪತ್ರೆಯಲ್ಲಿರುವ 5 ಡಯಾಲಿಸಿಸ್ ಯಂತ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಮೂರು ಮಾತ್ರ.
ಧಾರವಾಡ: ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಜಾಗದ ಕೊರತೆ
ಡಯಾಲಿಸಿಸ್‌ಗೆ ಸಾಲುಗಟ್ಟಿ ನಿಲ್ಲುವ ರೋಗಿಗಳು, ಯಂತ್ರವಿಡಲು ಜಿಲ್ಲಾಸ್ಪತ್ರೆಯಲ್ಲಿ ಜಾಗವಿಲ್ಲ, ಕಿಮ್ಸ್‌ನಲ್ಲಿ ಜಾಗವಿದೆ ಆದರೆ ಯಂತ್ರವಿಲ್ಲ. ಒಟ್ಟಿನಲ್ಲಿ ಡಯಾಲಿಸಿಸ್‌ಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಇದನ್ನು ನಿರ್ವಹಿಸುವ ಯಂತ್ರಗಳ ಕೊರತೆ ಎದುರಾಗುತ್ತಿದೆ. 49 ಡಯಾಲಿಸಿಸ್ ಯಂತ್ರಗಳಿದ್ದು, ಇನ್ನಷ್ಟು ಯಂತ್ರಗಳನ್ನು ಸರಕಾರ ಶೀಘ್ರವೇ ಜಿಲ್ಲೆಗೆ ನೀಡಬೇಕಾಗಿದೆ. ಅಷ್ಟೇ ಅಲ್ಲ, ಇದರ ನಿರ್ವಹಣೆಗೆ ಅಗತ್ಯವಾದ ಪ್ರತ್ಯೇಕ ವೈದ್ಯಕೀಯ ಸಿಬಂದಿಯನ್ನು ಕೂಡ ಒದಗಿಸಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 5 ಕೇಂದ್ರಗಳು ಹಾಗೂ 49 ಯಂತ್ರಗಳು ಡಯಾಲಿಸಿಸ್ ಚಿಕಿತ್ಸೆ ನೀಡುತ್ತಿದ್ದು, ಇದು ಸಾಕಾಗುತ್ತಿಲ್ಲ. ಜಿಲ್ಲೆಯಲ್ಲಿ ಪ್ರತೀ ತಿಂಗಳು 197ಕ್ಕೂ ಅಧಿಕ ರೋಗಿಗಳು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ಕಿಮ್ಸ್‌ನದ್ದೇ ಸಿಂಹಪಾಲು. ಇಲ್ಲಿ 135 ರೋಗಿಗಳು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ.
ಬೆಳಗಾವಿ: ಮಹಾರಾಷ್ಟ್ರದ ಆಸ್ಪತ್ರೆಗಳತ್ತ ರೋಗಿಗಳ ಅಲೆದಾಟ
ಜಿಲ್ಲೆಯಲ್ಲಿ ಅನೇಕ ಜನ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೂ, ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆಯಿಂದ ಖಾಸಗಿ ಆಸ್ಪತ್ರೆಗಳು, ಮಹಾರಾಷ್ಟ್ರ ಹಾಗೂ ನೆರೆಯ ಜಿಲ್ಲೆಗಳ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗಡಿ ಜಿಲ್ಲೆ ಬೆಳಗಾವಿಯ ಎರಡನೇ ರಾಜಧಾನಿಯ ಪಟ್ಟ ಕಟ್ಟಿಕೊಂಡಿದ್ದರೂ ಇಲ್ಲಿ ಅಗತ್ಯ ವ್ಯವಸ್ಥೆಗಳಿಲ್ಲ ಎಂಬ ದೂರಿದೆ. ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 12 ಡಯಾಲಿಸಿಸ್ ಯಂತ್ರಗಳಿದ್ದು, ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ 27 ಡಯಾಲಿಸಿಸ್ ಯಂತ್ರಗಳಿದ್ದು, ಇದರಲ್ಲಿ ಏಳು ಯಂತ್ರಗಳು ದುರಸ್ತಿಯಲ್ಲಿವೆ.
ತುಮಕೂರು: ಹತ್ತು ಕೇಂದ್ರಗಳು ಸ್ಥಗಿತ
ಜಿಲ್ಲೆಯಲ್ಲಿರುವ 10 ತಾಲೂಕಿನಲ್ಲಿ 39 ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 10 ಕೇಂದ್ರಗಳಲ್ಲಿ ಡಯಾಲಿಸಿಸ್ ಯಂತ್ರಗಳು ಸ್ಥಗಿತಗೊಂಡಿದೆ. ಅದರಲ್ಲಿ ತುಮಕೂರು ಜಿÇÉಾ ಕೇಂದ್ರದಲ್ಲೇ 5 ಸ್ಥಗಿತಗೊಂಡಿದೆ. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ 7 ಡಯಾಲಿಸಿಸ್ ಯಂತ್ರಗಳಿದ್ದು, ಅದರಲ್ಲಿ ಕೇವಲ 2 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಎಲ್ಲ ತಾಲೂಕುಗಳ ಕಥೆ ಇಷ್ಟೇ. ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಡಯಾಲಿಸಿಸ್ ಮಾಡಿಸಲು ಆಗದೇ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದೆ. ಇದರಿಂದ ಬಡವರು ಸಂಕಷ್ಟ ಎದುರಿಸುತ್ತಿದ್ದಾರೆ.
ಹಾಸನ: ಸುಗಮ ನಿರ್ವಹಣೆ
ಹಾಸನ ವೈದ್ಯಕೀಯ ಸಂಸ್ಥೆ ಆಸ್ಪತ್ರೆಯಲ್ಲಿರುವ 28 ಯಂತ್ರಗಳ ಪೈಕಿ ಈಗ 17 ಯಂತ್ರಗಳು ಕಾರ್ಯ ನಿರ್ವಹಿಸುತ್ತಿದೆ. 3 ಯಂತ್ರಗಳು ಹಳೆಯ ದಾಗಿದ್ದು, ವಾರ್ಷಿಕ ನಿರ್ವಹಣೆ ಗಾಗಿ ಸ್ಥಗಿತಗೊಳಿಸಲಾಗಿದೆ. 2 ಹಳೆಯ ಯಂತ್ರಗಳ ಬದಲಾವಣೆ ಅನಿವಾರ್ಯವಾಗಿದೆ. ಬಿಇಎಲ್ ಕೊಡುಗೆ ನೀಡಿರುವ ತಲಾ 10 ಲಕ್ಷ ರೂ. ಮೌಲ್ಯದ 8 ಡಯಾಲಿಸಿಸ್ ಯಂತ್ರಗಳು ಸೇವೆಗೆ ಸಜ್ಜಾಗಿದ್ದು, ಕೆಲವೇ ದಿನಗಳಲ್ಲಿ ಸೇವೆಗೆ ಲಭ್ಯವಾಗಲಿವೆ ಎಂದು ಹಿಮ್ಸ್ ನಿರ್ದೇಶಕ ಡಾ| ಬಿ.ಸಿ.ರವಿಕುಮಾರ್ ಹೇಳಿದ್ದಾರೆ.
ಮಂಡ್ಯ: ಹೆಚ್ಚುವರಿ ಯಂತ್ರ ಬೇಕು
ಮಂಡ್ಯ ಜಿಲ್ಲೆಯ ಮಿಮ್ಸ್ ಸೇರಿದಂತೆ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳ ಆವಶ್ಯಕತೆ ಇದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಪಾಳಿಗಳಲ್ಲಿ ಡಯಾಲಿಸಿಸ್ ಮಾಡಲು ಹೆಚ್ಚುವರಿ ಯಂತ್ರಗಳ ಅಗತ್ಯವಿದೆ. ಜಿಲ್ಲೆಯಲ್ಲಿ ಮಿಮ್ಸ್ ಸಹಿತ ಎಲ್ಲ ತಾಲೂಕುಗಳಲ್ಲಿ 37 ಯಂತ್ರಗಳಿದ್ದು ಈ ಪೈಕಿ ನಾಲ್ಕು ಯಂತ್ರಗಳು ಕಾರ್ಯ ಸ್ಥಗಿತಗೊಳಿಸಿವೆ. ರೋಗಿಗಳ ಬೇಡಿಕೆ ಇರುವುದರಿಂದ ಹೆಚ್ಚಿನ ಯಂತ್ರಗಳ ಅಗತ್ಯ ಇದೆ.
ಮೈಸೂರು: ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಕೊರತೆ
ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ಅವರ ತಿ. ನರಸಿಪುರ ಕ್ಷೇತ್ರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ ಒಂದು ಡಯಾಲಿಸಿಸ್ ಯಂತ್ರವಿದೆ. ತಾಲೂಕಿನಲ್ಲಿ 20ಕ್ಕೂ ಹೆಚ್ಚು ರೋಗಿಗಳಿಗೆ ಡಯಾಲಿಸಿಸ್ ಸೇವೆಯ ಅಗತ್ಯವಿದೆ. ಆದರೆ ಸದ್ಯಕ್ಕೆ ಈ ಆಸ್ಪತ್ರೆಯಲ್ಲಿ ನಿತ್ಯ ಇಬ್ಬರು ಮಾತ್ರ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಉಳಿದವರು ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸದ್ಯಕ್ಕೆ ಮೈಸೂರು ಜಿಲ್ಲೆಯ ಆರು ತಾಲೂಕು ಮತ್ತು ನಗರದ ಜಿಲ್ಲಾಸ್ಪತ್ರೆ ಸೇರಿ 16 ಯಂತ್ರಗಳು ಮಾತ್ರ ಇದ್ದು, ಇಷ್ಟೂ ಯಂತ್ರಗಳಿಗೆ ಬೇಡಿಕೆ ಹೆಚ್ಚಿದೆ. ಪರಿಣಾಮ ಯಂತ್ರಗಳ ಕೊರತೆಯಿಂದ ಎಲ್ಲ ರೋಗಿಗಳಿಗೂ ಸೇವೆ ಅಲಭ್ಯವಾಗಿದೆ. ರೋಗಿಗಳ ಬೇಡಿಕೆಗೆ ಅನುಗುಣವಾಗಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು ಡಯಾಲಿಸಿಸ್ ಯಂತ್ರಕ್ಕೆ ಬೇಡಿಕೆ ಇಟ್ಟಿದ್ದರೂ, ಈವರೆಗೂ ಸ್ಪಂದನೆ ದೊರೆತಿಲ್ಲ.
ಚಿಕ್ಕಬಳ್ಳಾಪುರ: ಸಿಬಂದಿ ಕೊರತೆ
ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ಖಾಯಂ ಸಿಬಂದಿ ಇಲ್ಲದೇ ಸಂಪೂರ್ಣ ಹೊರ ಗುತ್ತಿಗೆ ನೌಕರರ ಮೇಲೆ ಅವಲಂಬಿತ ವಾಗಿದ್ದು ಆಗಾಗ ಕೇಂದ್ರಗಳ ಸಿಬಂದಿ ಮುಷ್ಕರ, ಪ್ರತಿಭಟನೆ ತೆರಳುವುದರಿಂದ ಡಯಾಲಿಸಿಸ್ ಅವಲಂಬಿತರ ಪಾಡು ಹೇಳ ತೀರದಾಗಿದೆ. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 12 ಡಯಾಲಿಸಿಸ್ ಯಂತ್ರಗಳಿದ್ದರೂ ಕೇವಲ 9 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 3 ಯಂತ್ರಗಳ ಅಳವಡಿಕೆ ಆಗದೇ ಧೂಳು ತಿನ್ನುತ್ತಿವೆ. ಆದರೆ ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ ಡಯಾಲಿಸಿಸ್ ಯಂತ್ರಗಳು ಅಳವಡಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಯಂತ್ರ ಸ್ತಬ್ಧ
ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು 57 ಡಯಾಲಿಸಿಸ್ ಯಂತ್ರಗಳಲ್ಲಿ 15 ಯಂತ್ರಗಳು ಕೆಟ್ಟು ಹೋಗಿದ್ದು, ರೋಗಿಗಳಿಗೆ ಬಹು ಸಮಸ್ಯೆಯಾಗಿ ಪರಿಣಮಿಸಿದೆ. ಹೊರಗುತ್ತಿಗೆ ಸಂಸ್ಥೆಯ ಟೆಂಡರ್ ಅವಧಿ ಮುಗಿದ ಕಾರಣ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ದುರಸ್ತಿ ಸವಾಲಾಗಿದೆ. ವೆನಾÉಕ್ ಆಸ್ಪತ್ರೆಯಲ್ಲಿ ಸರಕಾರ ನೀಡಿರುವ 13 ಮತ್ತು ದಾನಿಗಳು ಕೊಟ್ಟಿರುವ 10 ಸೇರಿ 23 ಡಯಾಲಿಸಿಸ್ ಯಂತ್ರಗಳಿವೆ. ಇದರಲ್ಲಿ ಈಗ 13 ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಹತ್ತು ಯಂತ್ರಗಳು ದುರಸ್ತಿಯಲ್ಲಿವೆ. ಪುತ್ತೂರಿನಲ್ಲಿರುವ 12 ಯಂತ್ರಗಳಲ್ಲಿ 2 ಯಂತ್ರ ಕೆಟ್ಟು ಹೋಗಿದೆ. ಬೆಳ್ತಂಗಡಿಯಲ್ಲಿರುವ 8 ಯಂತ್ರಗಳ ಪೈಕಿ 7 ಯಂತ್ರ ಕಾರ್ಯನಿರ್ವ ಹಿಸುತ್ತಿದೆ. ಸುಳ್ಯ ಮತ್ತು ಬಂಟ್ವಾಳ ತಾಲೂಕಿನ ತಲಾ 7 ಯಂತ್ರಗಳಲ್ಲಿ ಒಂದು ಯಂತ್ರ ಹಾಳಾಗಿದೆ. ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಡಯಾಲಿಸಿಸ್ ಯಂತ್ರ ಅಳವಡಿಸಲು ಹೊಸ ಏಜೆನ್ಸಿ ಮುಂದೆ ಬಂದಿದ್ದು, ಘಟಕಕ್ಕೆ 13 ಹೊಸ ಸಿಂಗಲ್ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನು ನೀಡುವುದಾಗಿ ಹೇಳಿದ್ದರು. ಆದರೆ ಈ ಪ್ರಕ್ರಿಯೆಗೆ ಇನ್ನೂ ಕೆಲವು ತಿಂಗಳು ಬೇಕಾದ ಕಾರಣ ಅಲ್ಲಿವರೆಗೆ ರೋಗಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ.
ಚಿಕ್ಕಮಗಳೂರು: ಸುಸ್ಥಿತಿಯಲ್ಲಿ ಯಂತ್ರಗಳು
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ 28 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಒಂದು ಯಂತ್ರ ದುರಸ್ತಿಯಲ್ಲಿದೆ. ಉಳಿದಂತೆ ಎಲ್ಲ ಯಂತ್ರಗಳು ಸುಸ್ಥಿತಿಯಲ್ಲಿದ್ದು, ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ. ದುರಸ್ತಿಯಲ್ಲಿರುವ ಒಂದು ಯಂತ್ರ ಶೀಘ್ರದಲ್ಲೇ ರೋಗಿಗಳ ಸೇವೆಗೆ ಸಿದ್ಧಗೊಳ್ಳಲಿದೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರಕಾರಿ ಆಸ್ಪತ್ರೆಯಲ್ಲಿ 14 ಡಯಾಲಿಸಿಸ್ ಯಂತ್ರಗಳಿವೆ. ಎಲ್ಲ ಯಂತ್ರಗಳು ಸುಸ್ಥಿತಿಯಲ್ಲಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ನೂರಾರು ರೋಗಿಗಳಿಗೆ ಪ್ರತಿನಿತ್ಯ ಡಯಾಲಿಸಿಸ್ ಸೇವೆ ನೀಡುತ್ತಿವೆ. ಒಂದು ಯಂತ್ರ ಮಾತ್ರ ದುರಸ್ತಿಯಲ್ಲಿದ್ದು, ಒಂದೆರೆಡು ದಿನಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡು ರೋಗಿಗಳ ಸೇವೆಗೆ ಸಿದ್ಧಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅಶ್ವತ್ಥಬಾಬು ತಿಳಿಸಿದ್ದಾರೆ.
ಕಾರವಾರ: 43 ಯಂತ್ರಗಳು
ಜಿಲ್ಲೆಯಲ್ಲಿ ಕಾರವಾರ ಮೆಡಿಕಲ್ ಕಾಲೇಜು ಸೇರಿ ಹನ್ನೊಂದು ತಾಲೂಕಿನಲ್ಲೂ ಡಯಾಲಿಸಿಸ್ ಕೇಂದ್ರಗಳಿವೆ. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ವ್ಯವಸ್ಥೆ ಲಭ್ಯವಿದೆ. ತಾಲೂಕು ಕೇಂದ್ರಗಳಲ್ಲಿ 3 ಡಯಾಲಿಸಿಸ್ ಯಂತ್ರ, ಅದನ್ನು ನಿರ್ವಹಿಸಲು ಇಬ್ಬರು ಸಿಬಂದಿ ಇದ್ದಾರೆ. 43 ಯಂತ್ರ ನಿರ್ವಹಿಸಲು 8 ಜನ ತಾಂತ್ರಿಕ ಸಿಬಂದಿಯಿದ್ದು, ಕೆಲವು ಸಲ ಯಂತ್ರ ಕೈಕೊಟ್ಟಾಗ ನಿರ್ವಹಣೆ ಕಷ್ಟವಾಗುತ್ತಿದೆ. 29 ಜನ ವೈದ್ಯ ಹಾಗೂ ನರ್ಸ್ ಸಿಬಂದಿ ಡಯಾಲಿಸಿಸ್ ಕ್ರಿಯೆಗೆ ಮೀಸಲಿದೆ. ಇದು ಸಹ ಕೆಲವೊಮ್ಮೆ ರೋಗಿಗಳ ಡಯಾಲಿಸಿಸ್ ನಿರ್ವಹಣೆಗೆ ಕಷ್ಟವಾಗುತ್ತದೆ. 23 ವೈದ್ಯರ ಮತ್ತು ನರ್ಸ್ ಸಂಖ್ಯೆ 43 ಜನ ಇರಬೇಕು ಎಂಬ ಬೇಡಿಕೆ ಬರತೊಡಗಿದೆ.
ಉಡುಪಿ: 6 ಯಂತ್ರದ ಪೈಕಿ 4 ಸಕ್ರಿಯ
ವರ್ಷದಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿದ್ದ ಡಯಾಲಿಸಿಸ್ ಯಂತ್ರಗಳಿಗೆ ಈಗ ಮುಕ್ತಿ ಸಿಕ್ಕಿದೆ. ಈಗ 6 ಯಂತ್ರಗಳಿದ್ದು, 4 ಸಕ್ರಿಯವಾಗಿದ್ದರೆ 2 ಯಂತ್ರಗಳು ಇನ್ನೂ ಕೂಡ ದುರಸ್ತಿಯಾಗಿಲ್ಲ. ಈ ಹಿಂದೆ 11 ಯಂತ್ರಗಳಿದ್ದವು. ಆದರೆ ನಿರ್ವಹಣೆ ಇರಲಿಲ್ಲ. ಪ್ರಸ್ತುತ ರಾಜ್ಯಮಟ್ಟದಲ್ಲಿ ಟೆಂಡರ್ ಆಗಿದ್ದು, ಹೆಚ್ಚುವರಿ ಯಂತ್ರಗಳ ನಿರೀಕ್ಷೆಯಲ್ಲಿದ್ದೇವೆ. ಪ್ರಸ್ತುತ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಸ್ಪತ್ರೆಯೇ ಇದರ ನಿರ್ವಹಣೆ ನೋಡಿಕೊಳ್ಳುತ್ತಿದೆ. 3 ಪಾಳಿಯಲ್ಲಿ ದಿನಕ್ಕೆ ಸರಾಸರಿ 43 ಮಂದಿ ಡಯಾಲಿಸಿಸ್ ಸೇವೆ ಪಡೆಯುತ್ತಿದ್ದಾರೆ. ಇದನ್ನು ನಾಲ್ಕು ಪಾಳಿಗೆ ಹೆಚ್ಚಿಸುವ ಕೆಲಸವೂ ನಡೆಯುತ್ತಿದೆ ಎಂದು ಜಿಲ್ಲಾ ಸರ್ಜನ್ ಡಾ| ವೀಣಾ ತಿಳಿಸಿದ್ದಾರೆ. ಆದರೆ ಡಯಾಲಿಸಿಸ್ ಸೇವೆ ನಿಯಮಿತವಾಗಿ ಸಿಗುತ್ತಿಲ್ಲ. ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ರೋಗಿಗಳದ್ದಾಗಿದೆ.
ಕಲ್ಯಾಣದ ಡಯಾಲಿಸಿಸ್ ಘಟಕ ನಡೆಸಲು ನಿರಾಸಕ್ತಿ!
ಕಲ್ಯಾಣ ಕರ್ನಾಟಕ 7 ಜಿಲ್ಲೆಗಳ ಡಯಾಲಿಸಿಸ್ ಘಟಕ ನಡೆಸಲು ಸರಕಾರ ಟೆಂಡರ್ ಕರೆದರೂ ಬಿಡ್‌ದಾರರು ಆಸಕ್ತಿ ತೋರದೆ ಇರುವುದರಿಂದ ಆತಂಕಕ್ಕೆ ಕಾರಣವಾಗಿದ್ದು, ಸದ್ಯ 2 ತಿಂಗಳ ಮಟ್ಟಿಗೆ ಆರೋಗ್ಯ, ಕುಟುಂಬ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಗಲಿಗೆ ನಿರ್ವಹಣೆ ಹೊಣೆ ಹೊರಿಸಲಾಗಿದೆ. ಇಡೀ ಕಲ್ಯಾಣ ಕರ್ನಾಟಕದಲ್ಲಿ 123 ಡಯಾಲಿಸಿಸ್ ಯಂತ್ರಗಳಿವೆ. ಇವುಗಳಲ್ಲಿ 26 ಯಂತ್ರಗಳು ಕೆಲಸ ಮಾಡುತ್ತಿಲ್ಲ. ಉಳಿದ 97 ಕೆಲಸ ಮಾಡುತ್ತಿದ್ದು, ಪ್ರತೀ ಯಂತ್ರ ದಿನಕ್ಕೆ ಮೂರ್‍ನಾಲ್ಕು ಜನರ ರಕ್ತ ಶುದ್ಧಿ ಮಾಡುತ್ತದೆ. ಕಲ್ಯಾಣದಲ್ಲಿ ಪ್ರತೀ ದಿನವೂ 300ಕ್ಕೂ ಹೆಚ್ಚು ಜನರ ರಕ್ತ ಶುದ್ಧೀಕರಣ ನಡೆಯುತ್ತದೆ. 26 ಯಂತ್ರಗಳು ಕೆಲಸ ಮಾಡದೇ ಇರುವುದರಿಂದ 100 ಜನರು ವಂಚಿರಾಗುತ್ತಿದ್ದಾರೆ. ಇದೇ ವೇಳೆ ಖಾಸಗಿ ವಲಯದಲ್ಲೂ ಡಯಾಲಿಸಿಸ್‌ಗೆ ಹೆಚ್ಚಿನ ಬೇಡಿಕೆ ಇದೆ.
ಡಯಾಲಿಸಿಸ್ ಘಟಕಗಳನ್ನು ಸರಕಾರ ಪಿಪಿಪಿ ಮಾಡೆಲ್ ಆಧಾರದಲ್ಲಿ ಖಾಸಗಿ ಸಂಸ್ಥೆಗಳಿಗೆ ನಿರ್ವಹಣೆಗೆ ನೀಡಿತ್ತು. ಹಿಂದಿನ ಸಂಸ್ಥೆಯ ಅವಧಿ ಮುಗಿದಿರುವುದು ಮತ್ತು ಹೊಸದಾಗಿ ಟೆಂಡರ್ ಪಡೆಯಲು ಸಂಸ್ಥೆಗಳು ಬರದೇ ಇರುವುದರ ಕುರಿತು ಶೀಘ್ರವೇ ಗಮನಿಸಿ ಜನರಿಗೆ ಉತ್ತಮ ಸೇವೆ ಒದಗಿಸಲು ಪ್ರಯತ್ನಿಸಲಾಗುವುದು.
ಡಾ| ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.