4200 ಶಾಖೆಗಳ ಡಿಜಿಟಲೀಕರಣ ಮೊದಲ ಆದ್ಯತೆ
Team Udayavani, Aug 27, 2017, 2:05 AM IST
ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಜ್‌ಕಿರಣ್ ರೈ ಜಿ. ದಕ್ಷಿಣಕನ್ನಡ ಜಿಲ್ಲೆಯವರು. ಮುಂಬಯಿಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದೇಶಾದ್ಯಂತ 4,200ಕ್ಕೂ ಹೆಚ್ಚು ಶಾಖೆಗಳು ಹಾಗೂ ಸುಮಾರು 36 ಸಾವಿರ ಉದ್ಯೋಗಿಗಳನ್ನು ಹೊಂದಿರುವ ಯೂನಿಯನ್ ಬ್ಯಾಂಕ್‌ನ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಮೊದಲ ಬಾರಿಗೆ ಅವರು ಹುಟ್ಟೂರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
– ಎಂಡಿ ಆಗಿ ಅಧಿಕಾರ ವಹಿಸಿಕೊಂಡ ಅನಂತರ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ್ದು; ಏನು ಅನ್ನಿಸುತ್ತಿದೆ?
ತುಂಬಾ ಸಂತೋಷವಾಗುತ್ತದೆ. ಇದೊಂದು ಸಿಹಿ ಅನುಭವ. ನನ್ನ ಹುಟ್ಟೂರು ಪುತ್ತೂರು ಆಗಿದ್ದರೂ ಮಂಗಳೂರಿನ ಜತೆ ಉತ್ತಮ ಸಂಬಂಧವಿದೆ.
– ಸಾಮಾನ್ಯ ಬ್ಯಾಂಕ್ ಉದ್ಯೋಗಿ ಆಗಿ ಸೇರಿದ ನಿಮಗೆ ಇಷ್ಟೊಂದು ದೊಡ್ಡ ಹುದ್ದೆಗೆ ಹೋಗುವ ಬಗ್ಗೆ ಕನಸು ಇತ್ತೇ?
ಖಂಡಿತ ಇತ್ತು. ಈ ದಿಶೆಯಲ್ಲಿ ಪ್ರಯತ್ನವನ್ನು ಮಾಡಿದ್ದೆ. ಈಗ ಅದರಲ್ಲಿ ಯಶಸ್ವಿಯೂ ಆಗಿದ್ದೇನೆ.
– ಬ್ಯಾಂಕಿಂಗ್‌ನಲ್ಲಿ ಈ ಹಿಂದೆ ಯಾವೆಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದೀರಿ?
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೃಷಿ ಅಧಿಕಾರಿಯಾಗಿ ಸೇರ್ಪಡೆಗೊಂಡು ಒಟ್ಟು 30 ವರ್ಷಗಳ ಕಾಲ ಒಂದೇ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದೇನೆ. ಅದರಲ್ಲೂ ಮೆನೇಜರ್ ಹುದ್ದೆಯಲ್ಲಿಯೇ 17 ವರ್ಷ ಕರ್ತವ್ಯದಲ್ಲಿದ್ದೆ. ಬೇರೆ ಬೇರೆ ಶಾಖೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದು, ಕಾರ್ಕಳದಲ್ಲಿ 1993ರಲ್ಲಿ ಶಾಖೆ ನಾನೇ ಆರಂಭಿಸಿದ್ದೆ. ಮಂಗಳೂರಿನ ಫಳ್ನೀರ್ ಶಾಖೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದೇನೆ. ಶಾಖೆಗಳಲ್ಲಿ ಎಜಿಎಂ ತನಕ ಹಾಗೂ ಬಳಿಕ ರೀಜನಲ್ ಮೇನೇಜರ್ ಆಗಿ, ವಲಯ ಮ್ಯಾನೇಜರ್ ಆಗಿ, ಜನರಲ್ ಮೆನೇಜರ್ ಆಗಿ ಹಾಗೂ ಎಚ್‌ಆರ್‌ಡಿ ವಿಭಾಗದ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸಿಸಿದ್ದೇನೆ.
– ನಿಮ್ಮ ಬಾಲ್ಯ ಮತ್ತು ಕಾಲೇಜು ಜೀವನ ಹೇಗಿತ್ತು?
ಮೂಲತಃ ನಮ್ಮದು ಕೃಷಿಕ ಕುಟುಂಬ. ಬಾಲ್ಯದ ದಿನಗಳು ಉತ್ತಮ
ವಾಗಿದ್ದವು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು, ಶಿಸ್ತಿನ ವಿದ್ಯಾರ್ಥಿಯಾಗಿದ್ದೆ. ಬೆಂಗಳೂರಿನ ಹೆಬ್ಟಾಳದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಬಿ.ಎಸ್‌ಸಿ. ಓದುತ್ತಿದ್ದಾಗ ಜೀವನದ ಉತ್ತಮ ಅನುಭವಗಳು ಲಭಿಸಿದ್ದವು.
– ವಿದ್ಯಾರ್ಥಿ ದಿಸೆಯಲ್ಲಿ ಓದಿ ಏನಾಗಬೇಕೆಂಬ ಕನಸು ಇತ್ತು ?
ನನಗೆ ಡಾಕ್ಟರ್ ಆಗಬೇಕೆಂಬ ಕನಸು ಇತ್ತು. ಆದರೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಲಭಿಸದ ಕಾರಣ ಕೃಷಿ ವಿವಿಗೆ ಸೇರ್ಪಡೆ ಗೊಂಡಿದ್ದೆ. ಅಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣನಾಗಿದ್ದೆ. ಚಿನ್ನದ ಪದಕ ಸಿಗುವುದು ಸ್ವಲ್ಪದರಲ್ಲಿಯೇ ತಪ್ಪಿ ಹೋಗಿತ್ತು. ಮುಂದೆ ಸ್ನಾತಕೋತ್ತರ ಪದವಿ ಸೇರಿ ವಿಜ್ಞಾನಿಯಾಗ ಬೇಕೆಂಬ ಆಶೆ ಇತ್ತು. ಆದರೆ ಅಷ್ಟರಲ್ಲಿ 1986ರಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗ ಲಭಿಸಿತು.
– ಆಗಿನ ನಿಮ್ಮ ಆಸೆಗೂ ಈಗಿನ ನಿಮಗೆ ಸಿಕ್ಕಿರುವ ಅಧಿಕಾರದ ಸ್ಥಾನಕ್ಕೂ ಹೋಲಿಸಿದಾಗ ಹೇಗನಿಸುತ್ತದೆ?
ನಮ್ಮದು ಕೃಷಿಕ ಕುಟುಂಬ. ನನ್ನ ತಂದೆ ಅನುದಾನಿತ ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಕೃಷಿಯ ಜತೆಗೆ ಶಿಕ್ಷಕ ವೃತ್ತಿಯನ್ನು ನಡೆಸುತ್ತಿದ್ದರು. ಶ್ರಮಪಟ್ಟು ಓದಿದ ನನಗೆ ಈಗ ಇಂತಹ ಉನ್ನತ ಹುದ್ದೆ ಲಭಿಸಿರುವ ಬಗ್ಗೆ ನಿಜಕ್ಕೂ ತುಂಬಾ ಖುಷಿಯಿದೆ.
– ನಿಮ್ಮ ಫ್ಯಾಮಿಲಿ ಬಗ್ಗೆ?
ಪತ್ನಿ ಸತ್ಯವತಿ ರೈ ಗೃಹಿಣಿ. ಮಗ ಮಣಿಪಾಲದಲ್ಲಿ ಎಂಬಿಬಿಎಸ್ ಓದುತ್ತಿದ್ದು, ನನ್ನ ಕನಸನ್ನು ಈಡೇರಿಸುತ್ತಿದ್ದಾನೆ.
– ಜೀವನದ ಹೆಚ್ಚಿನ ವರ್ಷ ಮುಂಬಯಿನಲ್ಲೇ ಕಳೆದವರು; ಆದರೆ, ಹುಟ್ಟೂರಿನ ಬಗ್ಗೆ ಯಾವ ರೀತಿಯ ಅಭಿಮಾನ ವಿದೆ?
ಪಿಯುಸಿ ತನಕ ಮಂಗಳೂರಿನಲ್ಲಿ ಓದಿದ್ದೆ. ಇಲ್ಲಿನ ಸಂಸ್ಕೃತಿಯ ಮೇಲೆ ನನಗೆ ತುಂಬಾ ಅಭಿಮಾನವಿದೆ. ಯಕ್ಷಗಾನದ ಬಗ್ಗೆ ಹೆಚ್ಚಿನ ಒಲವು ಕೂಡ ಇದೆ. ಈಗ ಮುಂಬಯಿನಲ್ಲಿದ್ದರೂ ಮಂಗಳೂರಿನ ಜನರು ಸಿಕ್ಕಿದಾಗಲೆಲ್ಲ ಅವರ ಜತೆ ಮಾತನಾಡುತ್ತೇನೆ.
– ಮೂಲತಃ ದಕ್ಷಿಣಕನ್ನಡದವರಾಗಿ, ದೇಶದ ಬ್ಯಾಂಕಿಂಗ್ ವಲಯಕ್ಕೆ ದಕ್ಷಿಣ ಕನ್ನಡದವರು ನೀಡಿರುವ ಕೊಡುಗೆ ಬಗ್ಗೆ ಏನು ಹೇಳಬಯಸುವಿರಿ?
ದಕ್ಷಿಣಕನ್ನಡ ಜಿಲ್ಲೆ ಬ್ಯಾಂಕುಗಳ ತವರೂರು. 4 ರಾಷ್ಟ್ರೀಕೃತ ಬ್ಯಾಂಕುಗಳನ್ನು ಮತ್ತು ಒಂದು ದೊಡ್ಡ ಮಟ್ಟದ ಖಾಸಗಿ ಬ್ಯಾಂಕ್ ಅನ್ನು ದೇಶಕ್ಕೆ ಒದಗಿಸಿದ ಜಿಲ್ಲೆಯಿದು. ಅನೇಕ ಮಂದಿ ಬ್ಯಾಂಕರುಗಳನ್ನು ಈ ಜಿಲ್ಲೆ ಒದಗಿಸಿದೆ. ಯೂನಿಯನ್ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ವಿ. ಲೀಲಾಧರ್ ಮಂಗಳೂರಿನವರು. ಇನ್ನೋರ್ವ ಆಡಳಿತ ನಿರ್ದೇಶಕರಾಗಿದ್ದ ಎಂ.ವಿ. ನಾಯರ್ ಕಾಸರಗೋಡಿನವರು. ಐಸಿಐಸಿಐ ಬ್ಯಾಂಕಿನ ಅಧ್ಯಕ್ಷರಾಗಿದ್ದ ಎಂ.ವಿ. ಕಾಮತ್ ಕೂಡ ದಕ್ಷಿಣ ಕನ್ನಡದವರು.
– ಕರ್ನಾಟಕದವರಾಗಿ, ಯೂನಿಯನ್ ಬ್ಯಾಂಕ್‌ನ ಸೇವಾ ನೆಟ್‌ವರ್ಕ್ ರಾಜ್ಯದಲ್ಲಿ ಮತ್ತಷ್ಟು ವಿಸ್ತರಿಸುವ ಯೋಜನೆ ಇದೆಯೇ?
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಯೂನಿಯನ್ ಬ್ಯಾಂಕಿನ ಶಾಖೆಗಳಿದ್ದು, ರಾಜ್ಯದಲ್ಲಿ ಒಟ್ಟು 164 ಶಾಖೆಗಳಿವೆ. ಮಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಇದ್ದು, 11 ಜಿಲ್ಲೆಗಳ ವ್ಯಾಪ್ತಿಯ ಮಂಗಳೂರು ವಿಭಾಗದಲ್ಲಿ ಒಟ್ಟು 37 ಶಾಖೆಗಳಿವೆ. ಮಂಗಳೂರು ನಗರದಲ್ಲಿ 5 ಹಾಗೂ ನಗರದ ಹೊರ ವಲಯದಲ್ಲಿ ಒಟ್ಟು 7 ಶಾಖೆಗಳಿವೆ.
– ಇನ್ನು ಬ್ಯಾಂಕಿಂಗ್ ಕ್ಷೇತ್ರದ ತವರೂರು ಎಂದು ಕರೆಸಿಕೊಂಡಿರುವ ಕರಾವಳಿ ಭಾಗದಲ್ಲಿ ಯೂನಿಯನ್ ಬ್ಯಾಂಕ್‌ನ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡುವ ಗುರಿ ಉಂಟೇ?
ಬ್ಯಾಂಕಿನ ವ್ಯವಹಾರ ಉತ್ತಮವಾಗಿದ್ದು, ಸದ್ಯಕ್ಕೆ ಇನ್ನಷ್ಟು ಶಾಖೆಗಳನ್ನು ವಿಸ್ತರಿಸುವ ಉದ್ದೇಶವಿಲ್ಲ; ಬದಲಾಗಿ ಇರುವ ಶಾಖೆಗಳಲ್ಲಿ ಸೇವಾ ಮಟ್ಟವನ್ನು ಸುಧಾರಿಸಿ ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯ ಒದಗಿಸಲಾಗುವುದು. ಈ ದಿಶೆಯಲ್ಲಿ ಇದೀಗ ಗ್ರಾಹಕರ ಭೇಟಿ ಮತ್ತು ಮಾತುಕತೆ ನಡೆಸಲಾಗುತ್ತದೆ.
– ದೇಶದಲ್ಲಿ 4,200ಕ್ಕೂ ಅಧಿಕ ಶಾಖೆ ಹೊಂದಿರುವ ಯೂನಿಯನ್ ಬ್ಯಾಂಕ್ ಎಂಡಿ ಆಗಿ ಅತ್ಯಂತ ಬಿಝೀ ವ್ಯಕ್ತಿ ನೀವು; ಹೇಗಿರುತ್ತದೆ ನಿಮ್ಮ ದಿನಚರಿ?
ಹೌದು, ನಮ್ಮದು ಬಿಝೀ ಜೀವನ. ಬೆಳಗ್ಗೆ ಎದ್ದು ಪ್ರಾಣಾಯಾಮ. ಕಚೇರಿಗೆ ತೆರಳಿದ ಬಳಿಕ ಕೆಲಸದಲ್ಲಿ ತಲ್ಲೀನರಾಗುತ್ತೇವೆ. ಈಗ ಬ್ಯಾಂಕಿನ ಪುನರ್‌ವ್ಯವಸ್ಥೆ (ರಿಸ್ಟ್ರಕ್ಚರಿಂಗ್) ಪ್ರಕ್ರಿಯೆ ನಡೆಯುತ್ತಿದ್ದು, ದಿನದ 10 ಗಂಟೆ ಕಾಲ ಕಚೇರಿಯ ಕೆಲಸ ಇರುತ್ತದೆ. ಕೆಲಸದ ಅವಧಿಯಲ್ಲಿ ಒಂದು ಗಂಟೆಯನ್ನು ಸಾಲ ವಸೂಲಾತಿ ಸಂಬಂಧಿತ ವಿಷಯಕ್ಕೆ ಮೀಸಲಿಟ್ಟಿದ್ದೇನೆ. ಮಾನವ ಸಂಪನ್ಮೂಲ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
– ಮಂಗಳೂರಿಗೆ ಬಂದರೆ, ನಿಮ್ಮ ಇಷ್ಟದ ತಿಂಡಿ ಯಾವುದು? ಇಷ್ಟ ಪಡುವ ಜಾಗ ಯಾವುದು?
ನನಗೆ ನಾನ್‌ವೆಜ್, ಅದರಲ್ಲೂ ಮೀನು ಹೆಚ್ಚು ಇಷ್ಟ. ಗೋಳಿ ಬಜೆ, ಅಂಬಡೆ, ತಾಜ್‌ಮಹಲ್ ಹಲ್ವಾ ತುಂಬಾ ಇಷ್ಟ. ಮಂಗಳೂರಿಗೆ ಬಂದಾಗಲೆಲ್ಲ ಶರವು ಮಹಾಗಣಪತಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತೇನೆ.
– ಬೇರೆ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಯೂನಿಯನ್ ಬ್ಯಾಂಕ್‌ನತ್ತ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲು ಏನಾದರೂ ಹೊಸ ಯೋಜನೆ ಅಥವಾ ಅತ್ಯಾಧುನಿಕ ಬದಲಾವಣೆಗಳಿವೆಯೇ?
ಎಲ್ಲ ಬ್ಯಾಂಕುಗಳು ಡಿಜಿಟಲೀಕರಣದತ್ತ ಒಲವು ತೋರಿಸುತ್ತಿದ್ದು, ಯೂನಿಯನ್ ಬ್ಯಾಂಕು ಈ ದಿಶೆಯಲ್ಲಿ ಮುಂಚೂಣಿಯಲ್ಲಿದೆ. ವ್ಯಾಪಾರಸ್ಥರಿಗೆ 5 ಕೋಟಿ ರೂ. ತನಕ ಸಾಲ ಒದಗಿಸುವ “ಯೂನಿಯನ್ ಟ್ರೇಡ್ ಪ್ಲಸ್’ ಯೋಜನೆ ಯೂನಿಯನ್ ಬ್ಯಾಂಕಿನ ಆಕರ್ಷಕ ಯೋಜನೆಯಾಗಿದೆ. ಗೃಹ ಮತ್ತು ವಾಹನ ಸಾಲವನ್ನೂ ನೀಡಲಾಗುತ್ತದೆ. ಆಕರ್ಷಕ ಬಡ್ಡಿ ದರ. ಸಾಲ ಪಡೆಯುವ ವಿಧಾನ ತುಂಬಾ ಸರಳ. ಪರಿಶೀಲನಾ ಶುಲ್ಕವನ್ನು (ಪ್ರೊಸೆಸಿಂಗ್ ಫೀಸ್) ಸಂಪೂರ್ಣವಾಗಿ ಕೈಬಿಡಲಾಗಿದೆ.
– ನಿಮ್ಮ ಮೂರು ವರ್ಷಗಳ ಅಧಿಕಾರವಧಿಯಲ್ಲಿ ಏನೆಲ್ಲ ಬದಲಾವಣೆ ತರಲು ಬಯಸುವಿರಿ?
ಯೂನಿಯನ್ ಬ್ಯಾಂಕು ದೇಶದ ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 5ನೇ ಸ್ಥಾನದಲ್ಲಿದೆ. ಅದರ ಬೆಳವಣಿಗೆಯನ್ನು ಇನ್ನಷ್ಟು ಉತ್ತಮಪಡಿಸಿ ಸಂಪೂರ್ಣ ಡಿಜಿಟಲೀಕರಣ ಬ್ಯಾಂಕ್ ಆಗಿ ಪರಿವರ್ತಿಸುವುದು, ಬ್ಯಾಂಕಿನ ಬಂಡವಾಳವನ್ನು ಬಲಪಡಿಸಲು ಕ್ರಮ, ಸಾಲ ವಸೂಲಾತಿಗೆ ಆದ್ಯತೆ ನೀಡಿ ಅನುತ್ಪಾದಕ ಆಸ್ತಿ ಪ್ರಮಾಣವನ್ನು ಈಗಿರುವ ಶೇ.12ರಿಂದ ಇನ್ನಷ್ಟು ಕಡಿಮೆ ಮಾಡುವುದು, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚು ಗಮನಹರಿಸಿ ಹೊಸ ಜನಾಂಗದ ಬ್ಯಾಂಕರ್‌ಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಕ್ರಮ ಆರಂಭಿಸಲಾಗುವುದು.
– ಬ್ಯಾಂಕಿಂಗ್ ಕ್ಷೇತ್ರದತ್ತ ದಕ್ಷಿಣಕನ್ನಡ ಜಿಲ್ಲೆಯವರ ಆಸಕ್ತಿ ಕಡಿಮೆಯಾಗುತ್ತಿದೆಯೇ?
ದಕ್ಷಿಣಕನ್ನಡ, ಉಡುಪಿ ಜಿಲ್ಲೆ ಜನರು ಈಗೀಗ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರುವುದೇ ಕಡಿಮೆಯಾಗಿದೆ. ಪೂರ್ವ ಭಾರತದ ರಾಜ್ಯಗಳ ಜನರೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಧಿಕ ಇದ್ದಾರೆ. ಐ.ಟಿ. ರಂಗ ಬಂದ ಬಳಿಕ ದಕ್ಷಿಣಕನ್ನಡದ ಯುವಕರು ಅದರ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಒಂದೇ ಕ್ಷೇತ್ರದಲ್ಲಿ ಹೆಚ್ಚು ಕಾಲ ಕೆಲಸ ಮಾಡಲು ಈಗಿನ ಯುವ ಜನರು ಒಲವು ತೋರದಿರುವುದು ಹಾಗೂ ಪದೇ ಪದೇ ಉದ್ಯೋಗ ಬದಲಾಯಿಸಿ ಶೀಘ್ರದಲ್ಲಿ ಉತ್ತಮ ಸಂಪಾದನೆ ಮಾಡ ಬೇಕೆಂಬ ಜಾಯಮಾನ ಹೊಂದಿರುವುದು ಇದಕ್ಕೆ ಕಾರಣ ಎನ್ನಬಹುದು.
– ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಯುವ ಜನರಿಗೆ ನೀಡುವ ಸಂದೇಶ ಏನು?
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಸಮಾಜ ಸೇವೆಗೆ ಹಾಗೂ ಜನ ಸಂಪರ್ಕ ಬೆಳೆಸಿಕೊಳ್ಳಲು ಬ್ಯಾಂಕ್ ಉದ್ಯೋಗ ಒಂದು ಉತ್ತಮ ಅವಕಾಶ. ಈಗಿನ ಪರಿಸ್ಥಿತಿಯಲ್ಲಿ ಬ್ಯಾಂಕ್ ಸಿಬಂದಿಗೆ ಬಡ್ತಿ ಸೌಲಭ್ಯ ಬೇಗನೆ ಸಿಗುತ್ತದೆ. ಆದರೆ ನಿಷ್ಠೆ, ತಾಳ್ಮೆ ಇರಬೇಕು. ನಾನು ಸೆಂಟ್ರಲ್ ಬ್ಯಾಂಕ್‌ನಲ್ಲಿ ಜೂನಿಯರ್ ಕೃಷಿ ಅಧಿಕಾರಿಯಾಗಿದ್ದಾಗ ಹಳ್ಳಿಗಳಲ್ಲಿ ಕೆಲಸ ಮಾಡಿದ ಅನುಭವ ಅದ್ಭುತವಾಗಿದೆ. ಅದು ನನಗೆ ಬಹಳಷ್ಟು ತೃಪ್ತಿ ತಂದಿದೆ. ಅದನ್ನು ಮರೆಯುವಂತಿಲ್ಲ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಯುವ ಜನರು ಬ್ಯಾಂಕುಗಳಲ್ಲಿ ಸೇವೆ ಸಲ್ಲಿಸಲು ಹೆಚ್ಚು ಸಂಖ್ಯೆಯಲ್ಲಿ ಮುಂದೆ ಬರ ಬೇಕು.
ಸಂದರ್ಶನ: ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.