ಅವಮಾನಗಳಿಗೆ ತಲೆಕೆಡಿಸಿಕೊಳ್ಳದಿರಿ
Team Udayavani, Sep 23, 2021, 6:10 AM IST
ಅಮೆರಿಕದಲ್ಲಿ ಅಬ್ರಹಾಂ ಲಿಂಕನ್ ಅಧ್ಯಕ್ಷರಾದ ಅನಂತರ ಮೊದಲ ಬಾರಿಗೆ ಸೆನೆಟ್ ಅನ್ನು ಉದ್ದೇಶಿಸಿ ಭಾಷಣ ಮಾಡಲು ಎದ್ದು ನಿಂತಾಗ ಅಲ್ಲಿ ನೆರೆದಿದ್ದ ರಾಜಕಾರಣಿಯೊಬ್ಬರು ಲಿಂಕನ್ ಅವರನ್ನು ಅವಮಾನ ಮಾಡಲೆಂದೇ “ಅಧ್ಯಕ್ಷರೇ, ನಿಮಗೆ ಗೊತ್ತೇ? ನಿಮ್ಮ ತಂದೆ ನನಗೆ ಹಾಗೂ ನನ್ನ ಕುಟುಂಬದವರಿಗೆ ಚಪ್ಪಲಿ ಹೊಲಿದು ಕೊಡುತ್ತಿದ್ದರು’ ಎಂದು ಅವರನ್ನು ಅವಮಾನಿಸಿದರಂತೆ. ಲಿಂಕನ್ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಆ ಮಾತುಗಳನ್ನು ಕೇಳಿ ಕುಗ್ಗಿ ಹೋಗು ತ್ತಿದ್ದರು.
ಆದರೆ ಜೀವನದಲ್ಲಿ ಅನೇಕ ಬಾರಿ ಸೋಲನ್ನೇ ಕಂಡರೂ ಧೃತಿಗೆಡದೆ ಸತತ ಪರಿಶ್ರಮದಿಂದ ಅತ್ಯಂತ ಪ್ರತಿ ಷ್ಠೆಯ ಸ್ಥಾನವಾಗಿದ್ದ ಅಮೆರಿಕದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರು ಅಬ್ರಹಾಂ ಲಿಂಕನ್! ಅವರು ಇಂತಹ ಮಾತುಗಳಿಗೆ ಬೆದರಿಯಾರೇ? ಲಿಂಕನ್ ಆ ಮಾತುಗಳಿಂದ ವಿಚಲಿತರಾಗದೆ ನಿಮ್ಮ ಮಾತು ಕೇಳಿ ಸಂತೋಷವಾಯಿತು. ನನ್ನ ತಂದೆ ನಿಮಗಾಗಿ ಹಾಗೂ ನಿಮ್ಮ ಕುಟುಂಬದವರಿಗಾಗಿ ಚಪ್ಪಲಿ ಹೊಲಿದು ಕೊಟ್ಟದ್ದನ್ನು ನೀವು ಇನ್ನೂ ನೆನಪಿಟ್ಟು ಕೊಂಡಿದ್ದೀರಿ ಎಂದರೆ ನನ್ನ ತಂದೆ ಎಷ್ಟೊಂದು ಅದ್ಭುತವಾಗಿ ಚಪ್ಪಲಿ ಹೊಲಿಯುತ್ತಿದ್ದರೆಂದು ತಿಳಿಯುತ್ತದೆ. ನನಗೂ ಕೂಡ ಆ ಕಲೆ ಗೊತ್ತು. ನನ್ನ ತಂದೆ ಮಾಡಿಕೊಟ್ಟ ಚಪ್ಪಲಿಯಿಂದ ನಿಮಗೆ ಏನಾದರೂ ತೊಂದರೆ ಆಗಿದ್ದರೆ ಅಥವಾ ಅದರಲ್ಲಿ ದೋಷವೇನಾದರು ಇದ್ದರೆ ಹೇಳಿ. ನಾನು ರಿಪೇರಿ ಮಾಡಿ ಕೊಡುತ್ತೇನೆ ಎಂದರಂತೆ. ಇದಲ್ಲವೇ ಆತ್ಮವಿಶ್ವಾಸವೆಂದರೆ! ಅವರನ್ನು ಅವ ಮಾನಿಸಲು ಪ್ರಯತ್ನಿಸಿದ ವ್ಯಕ್ತಿ ಸ್ವತಃ ಅವಮಾನಿತನಾಗಿ ತಲೆತಗ್ಗಿಸಿ ಕುಳಿತನಂತೆ.
ಮಹಾಭಾರತದ ಕರ್ಣನನ್ನೇ ನೋಡಿ. ಕುಂತಿಯ ಪುತ್ರನಾಗಿ ಜನಿಸಿದರೂ ಕರ್ಣ ಕುಂಡಲ, ದಿವ್ಯ ಕವಚ ಹೊಂದಿದ್ದರೂ ಸೂರ್ಯಪುತ್ರನೆಂಬ ಹೆಮ್ಮೆಯಿಂದ ಬದುಕಬೇಕಾದವನು ತನ್ನದಲ್ಲದ ತಪ್ಪಿಗೆ ಸೂತಪುತ್ರನಾಗಿ ಎಲ್ಲೆಡೆ ಅವಮಾನವನ್ನು ಸಹಿಸಿಕೊಂಡು ಬಾಳಬೇಕಾಯಿತು. ಬಿಲ್ವಿದ್ಯೆ ಕಲಿಯಲು ಹೋದರೂ ಅಲ್ಲೂ ಅವನಿಗೆ ಆಗಿದ್ದು ಅವಮಾನವೇ! ಆದರೆ ಎಲ್ಲ ಅವಮಾನಗಳನ್ನು ಸಹಿಸಿ ತಾನೊಬ್ಬ ಅದ್ಭುತ ಧನುರ್ಧಾರಿ ಎಂಬುದನ್ನು ಕೊನೆಗೂ ಕರ್ಣ ಸಾಧಿಸಿಯೆ ತೋರಿಸಿದ. ಅವಮಾನಗಳಿಗೆ ಕುಗ್ಗಿ ಅವನು ಗುರಿ ಯಿಂದ ಹಿಮ್ಮುಖನಾಗಿದ್ದರೆ ತನ್ನ ಸಾಕುತಂದೆಯಂತೆ ಒಬ್ಬ ಸಾಮಾನ್ಯ ಸಾರಥಿಯಾಗಿ ಬದುಕಬೇಕಾಗುತ್ತಿತ್ತು!
ಪ್ರಪಂಚದಲ್ಲಿ ಬಡತನದಲ್ಲಿ ಹುಟ್ಟಿ ಬೆಳೆದ ಅಥವಾ ಸಾಮಾಜಿಕ ಸ್ತರದಲ್ಲಿ ಕೆಳಮಟ್ಟದಲ್ಲಿರುವ ಒಬ್ಬ ವ್ಯಕ್ತಿ ತನ್ನ ಪ್ರತಿಭೆ ಹಾಗೂ ಪರಿಶ್ರಮದಿಂದ ಮೇಲೆ ಬರಬೇಕೆಂದು ಪ್ರಯತ್ನಿಸುತ್ತಿದ್ದರೆ ಅವನ ಕೈಹಿಡಿದು ನಡೆಸುವವರಿಗಿಂತ ಅವನ ದಾರಿಗೆ ಅಡ್ಡಗಾಲು ಹಾಕುವವರ ಸಂಖ್ಯೆಯೇ ಹೆಚ್ಚು. ಒಂದು ವೇಳೆ ಎಲ್ಲ ಅಡೆತಡೆಗಳನ್ನು ಮೀರಿ ಆತ ಮೇಲೆ ಬಂದರೆ ಅದನ್ನು ಕಂಡು ಸಂತೋಷ ಪಡುವವರಿಗಿಂತ ಹೊಟ್ಟೆಕಿಚ್ಚು ಪಡುವ ಜನರೇ ಹೆಚ್ಚು. ಆತನ ಹಿನ್ನೆಲೆಯನ್ನು ಕೆದಕಿ ಆಡಿಕೊಂಡು ನಗುವವರು ಹಲವರಾದರೆ, ನಿಂದನೆಗಳಿಂದ ಮನೋಸ್ಥೈರ್ಯವನ್ನು ಕುಂಠಿತಗೊಳಿಸುವ ವಿಕಟ ಸಂತೋಷಿಗಳು ಒಂದಷ್ಟು ಜನ! “ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ ನಿಂದೆಗಳು ಬಂದೊಡೆ ಮನದಲ್ಲಿ ಕೋಪವ ತಾಳದೆ ಸಮಾ ಧಾನಿಯಾಗಿರಬೇಕು’ ಎಂಬ ಅಕ್ಕ ಮಹಾದೇವಿಯ ವಚನದಂತೆ ಸ್ತುತಿ ನಿಂದನೆಗಳನ್ನು ಸಮಚಿತ್ತರಾಗಿ ಸ್ವೀಕರಿ ಸಬೇಕು. ನಮ್ಮ ಜೀವನದಲ್ಲಿಯೂ ಇಂಥ ಕೊಂಕುಗಳನ್ನು ಆಡುವ, ನಾವಿಡುವ ಪ್ರತೀ ಹೆಜ್ಜೆಗೂ ನಮ್ಮನ್ನು ಹಂಗಿಸಿ ಆತ್ಮ ವಿಶ್ವಾಸವನ್ನು ಕುಗ್ಗಿಸುವ ಜನರನ್ನು ನೋಡಬಹುದು. ಆದರೆ ಇಂಥವರ ಮಾತುಗಳಿಗೆ ಪ್ರತಿಸ್ಪಂದಿಸದೆ ನಮ್ಮಷ್ಟಕ್ಕೆ ನಾವು ಗುರಿಯತ್ತ ಸಾಗುತ್ತಲೇ ಇರಬೇಕು. ಜನರು ನಮ್ಮತ್ತ ಎಸೆಯುವ ಕಲ್ಲುಗಳಿಂದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ಸಿನ ಉತ್ತುಂಗವನ್ನು ಏರಬೇಕು.
–ಸವಿತಾ ಮಾಧವ ಶಾಸ್ತ್ರಿ, ಗುಂಡ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.