ನಮ್ಮ ಬ್ಯಾಂಕನ್ನು ವಿಲೀನ ಮಾಡಬೇಡಿ…


Team Udayavani, Nov 16, 2019, 6:00 AM IST

tt-30

ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ವ್ಯವಹಾರಗಳನ್ನು ಮಾಡುವ ವಿತ್ತೀಯ ಸಂಸ್ಥೆಗಳೆಂದು ಭಾವಿಸದೆ ತಮ್ಮ ಸಂಸ್ಕೃತಿಯ , ಬದುಕಿನ ಒಂದು ಭಾಗವೆಂಬಂತೆ ಪರಿಭಾವಿಸಿದ್ದಾರೆ. ಈ ಬ್ಯಾಂಕ್‌ಗಳ ಮೂಲಕ ಬದುಕು, ಉದ್ಯಮ ಕಟ್ಟಿ ಕೊಂಡವರು ಅನೇಕ ಮಂದಿ. ಈಗ ನಮ್ಮ ಬ್ಯಾಂಕ್‌ಗಳು ಇತರ ಬ್ಯಾಂಕ್‌ಗಳ ಜೊತೆಗೆ ವಿಲೀನಗೊಂಡು ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಜನರಿಗೆ ಕರುಳಬಳ್ಳಿಯನ್ನು ಕಿತ್ತುಕೊಂಡಂಥ ನೋವು ಕೊಡುತ್ತಿದೆ. ಕೆಲವರು ಬ್ಯಾಂಕ್‌ ವಿಲೀನದ ಕುರಿತಾದ ಅಭಿಪ್ರಾಯವನ್ನು ಪತ್ರಿಕೆಯ ಜೊತೆಗೆ ಹಂಚಿಕೊಂಡಿದ್ದಾರೆ. ಅದನ್ನಿಲ್ಲಿ ಕೊಡಲಾಗಿದೆ.


ವಿಲೀನ ಸಲ್ಲ: ಪ್ರತ್ಯೇಕ ಮನವಿಗೂ ಸಿದ್ಧ

ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಅಧಿಕಾರಸ್ಥರು ನೀಡುವ ಹೇಳಿಕೆ ಹೀಗಿದೆ: “ಕೆಲವು ಬ್ಯಾಂಕ್‌ಗಳಲ್ಲಿ ಠೇವಣಿ ಸಾಕಷ್ಟು ಇರುವುದಿಲ್ಲ, ಕೆಲವರಿಗೆ ನಿರೀಕ್ಷಿಸಿದಷ್ಟು ಸಾಲ ಕೊಡಲೂ ಸಾಧ್ಯವಿಲ್ಲ. ಇಂತಹ ಕೆಲವು ಬ್ಯಾಂಕ್‌ಗಳನ್ನು ವಿಲೀನಗೊಳಿಸಿದರೆ ಅಪೇಕ್ಷೆಗೆ ತಕ್ಕಂತೆ ಸಾಲ ವಿತರಿಸಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವ ಜ ನಿ ಕರಿಗೆ ಅನುಕೂಲವಾಗುತ್ತದೆ ವಿನಾ ತೊಂದರೆ ಯಾಗುವುದಿಲ್ಲ.’ ಆದರೆ ನಮ್ಮ ಅಭಿಪ್ರಾಯ ಪ್ರಕಾರ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಠೇವಣಿ ಸಾಕಷ್ಟು ಇದೆ. ಸಾಲ ಕೊಡುವ ಶಕ್ತಿಯೂ ಇದೆ. ಹೀಗಾಗಿ ಸಿಂಡಿಕೇಟ್‌ ಬ್ಯಾಂಕ್‌ನ್ನು ವಿಲೀನಗೊಳಿಸುವ ಅಗತ್ಯವಿಲ್ಲ.

ನಮಗೆ ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪಕರಾದ ಡಾ|ಟಿಎಂಎ ಪೈ, ಮುಖ್ಯಸ್ಥರಾಗಿದ್ದ ಟಿ.ಎ. ಪೈ, ಕೆ.ಕೆ.ಪೈ ಮೊದಲಾದವರೊಡನೆ ಹಿಂದಿನಿಂದಲೂ ಸಂಪರ್ಕವಿತ್ತು. ಅವರು ಬ್ಯಾಂಕ್‌ನ್ನು ಭದ್ರವಾಗಿ ನಿಲ್ಲಿಸಲು ಪಟ್ಟ ಶ್ರಮವನ್ನೂ ತಿಳಿದುಬಲ್ಲೆ. ನಮ್ಮ ಮಠದ ಠೇವಣಿ ಬ್ಯಾಂಕ್‌ನಲ್ಲಿತ್ತು. ಈಗಲೂ ಇದೆ. ಆದರೆ ಸಾಲದ ವ್ಯವಹಾರವನ್ನು ಮಾಡಿರಲಿಲ್ಲ. ನಾವು ಸನ್ಯಾಸಾಶ್ರಮ ಸ್ವೀಕರಿಸುವ ಮುನ್ನವೇ ಬ್ಯಾಂಕ್‌ ಸ್ಥಾಪನೆಯಾದ ಕಾರಣ ಆ ಕಾಲದ ಘಟನೆಗಳು ಗೊತ್ತಿಲ್ಲ.

ನಾವು ಇತ್ತೀಚಿಗೆ ಕಾರ್ಪೊರೇಶನ್‌ ಬ್ಯಾಂಕ್‌ ಪರವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಜತೆ ಮಾತನಾಡಿದ್ದೆ. ಬೇರೆ ಕೆಲವು ವಿಷಯಗಳನ್ನು ಮಾತನಾಡಲು ಇದ್ದಿತ್ತು. ಅದೇ ವೇಳೆ ಕಾರ್ಪೊರೇಶನ್‌ ಬ್ಯಾಂಕ್‌ ಪರವಾಗಿಯೂ ಮಾತನಾಡಿದೆ. ಆಗ ಸಿಂಡಿಕೇಟ್‌ ಬ್ಯಾಂಕ್‌ನ ಪ್ರತಿನಿಧಿಗಳು ಇದ್ದಿರಲಿಲ್ಲ. ನಿರ್ಮಲಾ ಸೀತಾರಾಮನ್‌ ಅವರು ಏಕಾಗಿ ಬ್ಯಾಂಕ್‌ಗಳನ್ನು ವಿಲೀನಗೊಳಿಸುತ್ತಿದ್ದೇವೆ ಎಂದು ವಿವರಿಸಿದರು. ಅಲ್ಲಿದ್ದ ಕಾರ್ಪೊರೇಶನ್‌ ಬ್ಯಾಂಕ್‌ ಪ್ರತಿನಿಧಿಗಳು ವಿಲೀನಗೊಳಿಸಲು ಸಕಾರಣಗಳಿಲ್ಲ ಎಂದು ತಿಳಿಸಲಿಲ್ಲ. ನಾವಾದರೋ ಬ್ಯಾಂಕಿಂಗ್‌, ಆರ್ಥಿಕ ಕ್ಷೇತ್ರದ ಬಗ್ಗೆ ಏನೂ ಗೊತ್ತಿಲ್ಲದವರು. ಅನಂತರ ನಾವು ಬೇರೆ ವಿಷಯ ಮಾತನಾಡಿ ಬಂದೆವು.

ಇನ್ನು ಮುಂದೆಯಾದರೂ ಸಿಂಡಿಕೇಟ್‌ ಬ್ಯಾಂಕ್‌ನವರು ವಿಲೀನಗೊಳಿಸುವುದು ಸರಿಯಲ್ಲ ಎಂಬ ವಾದವನ್ನು ಸಮರ್ಥವಾಗಿ ಇಂಗ್ಲಿಷ್‌ನಲ್ಲಿ ಬರೆದು ತಂದಲ್ಲಿ ನಾವು ಸಹಿ ಮಾಡಿ ಅದನ್ನು ನಿರ್ಮಲಾ ಸೀತಾರಾಮನ್‌ ಅವರಿಗೆ ಮತ್ತೂಮ್ಮೆ ಭೇಟಿಯಾಗಿ ಕೊಡುತ್ತೇವೆ. ಇದರೊಂದಿಗೆ ವಿಜಯ ಬ್ಯಾಂಕ್‌ ಪರವಾಗಿಯೂ ಮಾತನಾಡುತ್ತೇವೆ. ಒಟ್ಟಾರೆ ನಮ್ಮ ಕರಾವಳಿಯ ಬ್ಯಾಂಕುಗಳ ಮೂಲ ಸಂಸ್ಕೃತಿ ಉಳಿಯಬೇಕೆಂಬುದು ನಮ್ಮ ಆಶಯ.
ಶ್ರೀವಿಶ್ವೇಶತೀರ್ಥ ಶ್ರೀಪಾದರು, ಪೇಜಾವರ ಮಠ, ಉಡುಪಿ.


ಸಿಂಡಿಕೇಟ್‌ ಬ್ಯಾಂಕ್‌ ಹೆಸರು ಅಳಿಯುತ್ತಿರುವ ನೋವು

ನಮ್ಮ ಸಂಸ್ಕೃತಿ, ಸಂಸ್ಕಾರದ ಪರಂಪರೆ ಜಿಲ್ಲೆಯ ಜನರಲ್ಲಿ ಆರ್ಥಿಕ ಶಿಸ್ತು, ಆರ್ಥಿಕ ಸಂಸ್ಕಾರವನ್ನೂ ರೂಢಿಸಿಕೊಂಡು ಬರುವಂತೆ ಮಾಡಿದೆ. ಸಣ್ಣ ಕೋ-ಆಪರೇಟಿವ್‌ ಸೊಸೈಟಿಯಿಂದ ಹಿಡಿದು ದೊಡ್ಡ ಬ್ಯಾಂಕಿನವರೆಗೆ ಆರ್ಥಿಕ ಸೌಲಭ್ಯ ಪಡೆದು, ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡುವಂತಹ ಪ್ರಾಮಾಣಿಕ ಸ್ವಭಾವ ಉಭಯ ಜಿಲ್ಲೆಗಳ ಜನರಲ್ಲಿ ಹಿಂದಿನಿಂದಲೇ ಬೆಳೆದು ಬಂದ ಸಂಸ್ಕಾರವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಳಮಟ್ಟದ ಜನರಿಗೂ ಆರ್ಥಿಕ ಸೇವೆ ದೊರೆಯಬೇಕೆಂಬ ನಿಟ್ಟಿನಲ್ಲಿ ಉಭಯ ಜಿಲ್ಲೆಗಳಲ್ಲಿ ಐದು ಬ್ಯಾಂಕ್‌ಗಳು ಸ್ಥಾಪನೆಯಾದವು.

ಪ್ರಥಮವಾಗಿ ಸ್ಥಾಪನೆಯಾಗಿದ್ದೇ ಸಿಂಡಿಕೇಟ್‌ ಬ್ಯಾಂಕ್‌. ಆನಂತರ ಕೆನರಾ ಬ್ಯಾಂಕ್‌, ವಿಜಯ ಬ್ಯಾಂಕ್‌, ಕಾರ್ಪೋರೇಶನ್‌ ಬ್ಯಾಂಕ್‌, ಕರ್ಣಾಟಕ ಬ್ಯಾಂಕ್‌ಗಳು ಉಭಯ ಜಿಲ್ಲೆಗಳ ಜನರ ಆರ್ಥಿಕ ನಾಡಿಮಿಡಿತಕ್ಕೆ ಕಾರಣವಾದವು. ಈ ಐದು ಬ್ಯಾಂಕ್‌ಗಳಿಗೆ ಕೂಡಾ ಅದರದ್ದೇ ಆದ ಹಿನ್ನೆಲೆಯಿದೆ. ಮಣಿಪಾಲ ಪೈಗಳ ಕುಟುಂಬ ಮುಖ್ಯ ವಾಗಿ ಡಾ| ಟಿ.ಎಂ.ಎ. ಪೈ, ಅನಂತ ಪೈ ಸಹಿತ ಪೈ ಬಂಧುಗಳು ಮತ್ತು ಅವರ ಇಡೀ ಕುಟುಂಬ ಈ ಬ್ಯಾಂಕ್‌ಗಳನ್ನು ಆರಂಭಿಸುವಾಗ ಎಂತಹ ತ್ಯಾಗ ಮಾಡಿದ್ದಾರೆ, ಪ್ರಯತ್ನ ಮಾಡಿದ್ದಾರೆ ಎನ್ನುವುದು ನಿರ್ವಿವಾದ.

ಸಿಂಡಿಕೇಟ್‌ ಬ್ಯಾಂಕ್‌ ಚಿಕ್ಕ ಅಂಗಡಿಯವನಿಂದ ಚಿಲ್ಲರೆ ಮೊತ್ತದ ಪಿಗ್ಮಿ ಸಂಗ್ರಹ ಮಾಡಿ ಅದರಿಂದಲೇ ದೊಡ್ಡ ಮೊತ್ತದ ಹಣವನ್ನು ಆತನಿಗೆ ಒದಗಿಸಿ ಆರ್ಥಿಕ ಸೇವೆ ಮಾಡಿರುವುದು ಮನನೀಯ. ಸಣ್ಣಪುಟ್ಟ ಉದ್ಯಮಿಗಳಿಗೆ ಬ್ಯಾಂಕ್‌ ಸಾಲ ಸಿಗದ ಆಗಿನ ದಿನಗಳಲ್ಲಿ ಪಿಗ್ಮಿ ಸಂಗ್ರಹಣೆ ಮಾಡಿ ಪ್ರಾಮಾಣಿಕತೆಯ ಆಧಾರದ ಮೇಲೆ ಅತ್ಯಂತ ಸುಲಭವಾಗಿ ದುಪ್ಪಟ್ಟು ಸಾಲ ನೀಡುತ್ತಿದ್ದ ಬ್ಯಾಂಕಿದು.

ಅಷ್ಟೇ ಅಲ್ಲದೆ, ಈ ಜಿಲ್ಲೆಗಳಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಸೃಷ್ಟಿಸಿದ್ದು ಬ್ಯಾಂಕ್‌ಗಳು, ಮಣಿಪಾಲ ಗ್ರೂಪ್‌ ಆರಂಭಿಸಿದ ಶಾಲೆ, ಕಾಲೇಜುಗಳು ಹಾಗೂ ಎಲ್‌ಐಸಿ. ಆರ್ಥಿಕವಾಗಿ ಹಿಂದುಳಿದ ಅದೆಷ್ಟೋ ಜನರಿಗೆ ಉದ್ಯೋಗ ನೀಡಿ ಆರ್ಥಿಕ ಶಕ್ತಿ ಒದಗಿಸಿದ ಹಿನ್ನೆಲೆ ಸಿಂಡಿಕೇಟ್‌ ಬ್ಯಾಂಕ್‌ಗಿದೆ.

ನಾನು ಬಾಲ್ಯದಲ್ಲಿ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಬೆಳೆದವನು; ಪಿಯುಸಿವರೆಗೆ ಉಡುಪಿಯಲ್ಲೇ ವಿದ್ಯಾಭ್ಯಾಸ ಪೂರೈಸಿದ್ದೆ. ಆಗಿನ ದಿನಗಳಲ್ಲಿ ಕೃಷಿ ಸಾಲ ಸಿಗುವುದು ವಿರಳಾತಿವಿರಳ. ಅಂತದ್ದರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಕೃಷಿಕರನ್ನು ಪ್ರೋತ್ಸಾಹಿಸುವುದಾಗಿ ಕೃಷಿ ಸಾಲ ನೀಡುತ್ತಿತ್ತು. ಇದರ ಫಲಾನುಭವಿಗಳಲ್ಲಿ ನಾನೂ ಒಬ್ಬನಾಗಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ. ಸಣ್ಣ ಉದ್ಯಮಿಗಳು, ವ್ಯಾಪಾರಿಗಳು, ಕೃಷಿಕರಿಗೆ, ಸಣ್ಣ ಹಿಡುವಳಿದಾರರಿಗೆ ಉತ್ತಮ ಆರ್ಥಿಕ ಸಹಕಾರವನ್ನು ಈ ಬ್ಯಾಂಕ್‌ ಕೊಟ್ಟಿದೆ. ಮಾತ್ರವಲ್ಲದೆ ಜನರಲ್ಲಿ ಉಳಿತಾಯ ಗುಣವನ್ನು ರೂಢಿಸಿಕೊಳ್ಳಲು ಕಲಿಸಿದ್ದು ಇದೇ ಬ್ಯಾಂಕ್‌.

ಸಿಂಡಿಕೇಟ್‌ ಬ್ಯಾಂಕ್‌ ಜನಮಾನಸದಲ್ಲಿ ಉತ್ತಮ ಹೆಸರು ಪಡೆದುಕೊಂಡಿರುವ ಬ್ಯಾಂಕ್‌ ಆಗಿದೆ. ಅಲ್ಲಿನ ನೌಕರರ ದಕ್ಷತೆ, ಪ್ರಾಮಾಣಿಕತೆ, ಗ್ರಾಹಕರೊಂದಿಗೆ ಅವರು ವರ್ತಿಸುವ ರೀತಿ, ಬ್ಯಾಂಕ್‌ ಪಾಲಿಸಿ ಎಲ್ಲವೂ ಗ್ರಾಹಕ ಸ್ನೇಹಿಯಾಗಿದೆ. ಅಂತಹ ಉತ್ತಮ ದರ್ಜೆಯ ಬ್ಯಾಂಕನ್ನು ಯಾವುದೋ ಕಾರಣಕ್ಕಾಗಿ ಇನ್ನೊಂದು ಬ್ಯಾಂಕಿನೊಂದಿಗೆ ವಿಲೀನಗೊಳಿಸುತ್ತಿರುವುದು ಸರಿಯಲ್ಲ.

ಸಿಂಡಿಕೇಟ್‌ ಬ್ಯಾಂಕ್‌ ಹೆಸರು ಅಳಿದು ಹೋಗಬಾರದು ಎಂಬುದೇ ನಮ್ಮೆಲ್ಲರ ಕಳಕಳಿಯಾಗಿತ್ತು. ವಿಲೀನ ಆಗುತ್ತಿರುವುದರ ಬಗ್ಗೆ ದುಃಖ ಇದೆ. ಬ್ಯಾಂಕಿನ ಸ್ಥಾಪಕರ ಕುಟುಂಬದೊಂದಿಗೆ ಗ್ರಾಹಕರಿಗೆ ಕೂಡಾ ಇದು ಬೇಸರದ ವಿಷಯವಾಗಿದೆ.
ಪ್ರೊ| ಎಂ.ಬಿ. ಪುರಾಣಿಕ್‌, ಅಧ್ಯಕ್ಷರು, ಶಾರದಾ ವಿದ್ಯಾಸಂಸ್ಥೆಗಳು ಮಂಗಳೂರು


ತವರು ನೆಲದ ಸಂಬಂಧ ಕಡಿತವಾಗಲಿದೆ

ಕರಾವಳಿಯ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸಿದ ಸಿಂಡಿಕೇಟ್‌ ಬ್ಯಾಂಕ್‌ನ್ನು ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಳಿಸಿದರೆ ಸ್ವಂತ ಹೆಸರು ಹಾಗೂ ತನ್ನ ತವರು (ಮಣಿಪಾಲ) ನೆಲದ ಸಂಬಂಧವನ್ನು ಕಡಿದುಕೊಳ್ಳಬೇಕಾಗುತ್ತದೆ.

ದಶಕಗಳ ಹಿಂದೆ ಅವಿಭಜಿತ ದ.ಕ. ಜಿಲ್ಲೆ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯಾಗಿತ್ತು. ಸಿಂಡಿಕೇಟ್‌ ಬ್ಯಾಂಕ್‌ ಸಂಸ್ಥಾಪಕರು ಜನರಲ್ಲಿ ಉಳಿತಾಯ ಮನೋಭಾವ ಬೆಳೆಸಲು ಏಜೆಂಟರನ್ನು ಮನೆ ಬಾಗಿಲಿಗೆ ಕಳುಹಿಸಿ ಪಿಗ್ಮಿ ಯೋಜನೆಯಡಿ ದಿನಕ್ಕೆ ಎರಡಾಣೆ ಸಂಗ್ರಹಿಸುತ್ತಿದ್ದರು. ಇದು ಇಡೀ ದೇಶದಲ್ಲಿ ಹೊಸ ಕ್ರಾಂತಿ ಮೂಡಿಸಿತ್ತು.

ಸಿಂಡಿಕೇಟ್‌ ಬ್ಯಾಂಕ್‌ ಅವಿಭಜಿತ ದ.ಕ. ಜಿಲ್ಲೆಗಳ ಉದ್ಯಮಿಗಳಿಗೆ ಸ್ವಉದ್ಯಮ ಪ್ರಾರಂಭಿಸಲು ಆರ್ಥಿಕ ಸಹಾಯವನ್ನು ಮಾಡಿದೆ. ಜಿಲ್ಲೆಯ ಜನರು ಈ ಬ್ಯಾಂಕಿನೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಒಂದು ವೇಳೆ ಬ್ಯಾಂಕ್‌ ವಿಲೀನವಾದರೆ ಗ್ರಾಹಕರು ಬ್ಯಾಂಕಿಂಗ್‌ ಕ್ಷೇತ್ರದ ಮೇಲೆ ಭರವಸೆ ಕಳೆದುಕೊಳ್ಳುವ ಸಾಧ್ಯತೆ ಇದೆ. 52 ವರ್ಷದಿಂದ ನನ್ನ ಕೈಗಾರಿಕಾ ಉದ್ಯಮಕ್ಕೆ ಸಿಂಡಿಕೇಟ್‌ ಬ್ಯಾಂಕ್‌ ಆರ್ಥಿಕ ಸಹಾಯವನ್ನು ಮಾಡಿದೆ.

ಮಣಿಪಾಲದಂತಹ ಚಿಕ್ಕ ಊರಿನಲ್ಲಿ ಪ್ರಧಾನ ಕಚೇರಿ ಹೊಂದಿದ ಏಕೈಕ ರಾಷ್ಟ್ರೀಕೃತ ಬ್ಯಾಂಕ್‌ ಅದು ಸಿಂಡಿಕೇಟ್‌ ಬ್ಯಾಂಕ್‌. ಲಾಭದಲ್ಲಿ ನಡೆಯುತ್ತಿರುವ ಕರಾವಳಿ ಜನರ ಬ್ಯಾಂಕ್‌ ಸಿಂಡಿಕೇಟ್‌ ಕೆನರಾ ಬ್ಯಾಂಕಿನೊಂದಿಗೆ ವಿಲೀನ ಮಾಡುವುದು ಸರಿಯಲ್ಲ. ಸಿಂಡಿಕೇಟ್‌ ಬ್ಯಾಂಕ್‌ ಗುರುತು, ಸ್ಮರಣೆ ಉಳಿಯಬೇಕಾದರೆ ಬ್ಯಾಂಕ್‌ಗಳ ವಿಲೀನ ತಡೆಯಬೇಕು. ವಿಲೀನವಾದರೆ ಸಿಂಡಿಕೇಟ್‌ -ಕೆನರಾ ಬ್ಯಾಂಕ್‌ ಹೆಸರಿನಲ್ಲಿ ಕಾರ್ಯಚರಿಸುವಂತಾಗಬೇಕು.
ಎಂ. ಸೋಮಶೇಖರ್‌ ಭಟ್‌, ಕೈಗಾರಿಕಾ ಉದ್ಯಮಿ, ಉಡುಪಿ


ಬಹು ಹಿಂದೆಯೇ ಹುನ್ನಾರ

ಸಿಂಡಿಕೇಟ್‌ ಬ್ಯಾಂಕ್‌ನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನ ಮಾಡುವಲ್ಲಿ ಸಿಂಡಿಕೇಟ್‌ ಬ್ಯಾಂಕ್‌ನ ಹಿಂದಿನ ಪ್ರಮುಖರ ಕೈವಾಡವಿದೆ. ಕೆನರಾ ಬ್ಯಾಂಕ್‌ನ್ನು ಸಿಂಡಿಕೇಟ್‌ ಬ್ಯಾಂಕ್‌ನೊಂದಿಗೆ ವಿಲೀನ ಮಾಡಬಹುದಾಗಿತ್ತು.

ಸಿಂಡಿಕೇಟ್‌ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಮಣಿಪಾಲದಿಂದ ವರ್ಗಾಯಿಸುವಾಗಲೇ ಈ ಹುನ್ನಾರ ನಡೆದಿತ್ತು. ಬ್ಯಾಂಕ್‌ನ ಸಂಸ್ಥಾಪಕರ ಕುಟುಂಬವನ್ನು ಬ್ಯಾಂಕ್‌ನಿಂದ ಸಂಪೂರ್ಣ ಬೇರ್ಪಡಿಸುವ ಉದ್ದೇಶದಿಂದ ಆಗಲೇ ಈ ಪ್ರಸ್ತಾವವನ್ನು ಆಗಿನ ಬ್ಯಾಂಕ್‌ ಅಧ್ಯಕ್ಷರು ಮಾಡಿದ್ದರು ಎಂದು ನನಗೆ ತಿಳಿದುಬಂದಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳ ಆರ್ಥಿಕ ಬಲ ಹೆಚ್ಚಿಸುವ ಉದ್ದೇಶದಿಂದ ಸಿಂಡಿಕೇಟ್‌ ಬ್ಯಾಂಕ್‌ನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಇದು ರಾಷ್ಟ್ರಮಟ್ಟದ ನಿರ್ಧಾರವಾಗಿದೆ. ವೈಯಕ್ತಿಕವಾಗಿ ನನಗೆ ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುತ್ತದೆ ಎಂಬ ವಿಶ್ವಾಸವಿಲ್ಲ. ಅದರ ಬದಲಾಗಿ ಪ್ರಾದೇಶಿಕವಾಗಿ ಬ್ಯಾಂಕ್‌ ಕಾರ್ಯ ನಿರ್ವಹಿಸುವಂತೆ ಮಾಡಬಹುದಾಗಿತ್ತು. ಅಂದರೆ ದಕ್ಷಿಣ, ಉತ್ತರ, ಪಶ್ಚಿಮ, ಪೂರ್ವ ಭಾರತವೆಂದು ವರ್ಗೀಕರಿಸಿ ಬ್ಯಾಂಕುಗಳನ್ನು ವಿಲೀನಗೊಳಿಸಬಹು ದಾಗಿತ್ತು. ಇದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳು ಇನ್ನಷ್ಟು ಸದೃಢವಾಗುತ್ತಿತ್ತು.

ಶ್ರೀಮಂತರಿಗೆ, ಎಂಎನ್‌ಸಿ ಕಂಪೆನಿಗಳಿಗೆ ಭಾರೀ ಮೊತ್ತದ ಸಾಲ ನೀಡುವ ಉದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕ್‌ ವಿಲೀನಗೊಳಿಸಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ಇದೀಗ ದೊಡ್ಡ ಮಟ್ಟದಲ್ಲಿ ನೀಡಿದ ಸಾಲಗಳನ್ನು ಪುನರ್‌ ನವೀಕರಣ ಮಾಡಲಾಗುತ್ತಿದೆ. ಹೊಸ ಸಾಲದಿಂದ ಹಳೆ ಸಾಲ ತೀರಿಸಲಾಗುತ್ತಿದೆ. ಇದರಿಂದಾಗಿ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದು ಇದುವರೆಗಿನ ಅನುಭವ.

ಗೃಹ, ವಾಹನ, ಕೈಗಾರಿಕೆ, ಉದ್ಯಮಕ್ಕೆ ತೆಗೆದುಕೊಂಡ ಸಣ್ಣ ಮೊತ್ತದ ಸಾಲಗಳು ನಿಗದಿತ ಸಮಯದ ಮಿತಿಯೊಳಗೆ ಮರುಪಾವತಿಯಾಗುತ್ತದೆ. ಆದರೆ ಶ್ರೀಮಂತರ ಭಾರೀ ಮೊತ್ತದ ಸಾಲಗಳು ಮರುಪಾವತಿಯಾಗುತ್ತಿಲ್ಲ. ಒಂದು ವೇಳೆ ಆಗುತ್ತಿದ್ದರೆ ಸರಕಾರ ಅದರ ಅಂಕಿ ಅಂಶಗಳನ್ನು ನೀಡಬೇಕು. ಹೊಸ ಸಾಲ ಕೊಟ್ಟು ಹಳೆ ಸಾಲ ತೀರಿಸಿಕೊಂಡಂತೆ ಮಾಡಿ ಅಂಕಿ ಅಂಶ ನೀಡುತ್ತಾರೆ. ಇದಲ್ಲ.

ಗುಜ್ಜಾಡಿ ಪ್ರಭಾಕರ್‌ ನಾಯಕ್‌, ಲೆಕ್ಕಪರಿಶೋಧಕರ ಸಂಸ್ಥೆ, ಚೇಂಬರ್‌ ಆಫ್ ಕಾಮರ್ಸ್‌ ಮಾಜಿ ಅಧ್ಯಕ್ಷರು, ಉಡುಪ

ಟಾಪ್ ನ್ಯೂಸ್

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.