ಈ ದ್ರೌಪದಿ ಪಟ್ಟ ಕಷ್ಟ ಎಷ್ಟು ಗೊತ್ತೆ?
Team Udayavani, Jul 2, 2022, 6:15 AM IST
ಹುಟ್ಟುಹಬ್ಬದಂದು ದ್ರೌಪದಿ ಮುರ್ಮು ಅವರಿಗೆ ಸಿಕ್ಕಿದಂತಹ ಉಡುಗೊರೆ ಸಾಮಾನ್ಯವಾಗಿ ಯಾರಿಗೂ ದೊರಕಲಾರದು. 1958ರ ಜೂನ್ 20ರಂದು ಜನಿಸಿದ ಇವರು 64ನೆಯ ವರ್ಷಕ್ಕೆ ಕಾಲಿಡುವಾಗ ಬಿಜೆಪಿ ಅಧ್ಯಕ್ಷರು ಜೂ. 21ರಂದು ರಾಷ್ಟ್ರಪತಿ ಅಭ್ಯರ್ಥಿ ಎಂಬ ಉಡುಗೊರೆಯ ಸುದ್ದಿಯನ್ನಿತ್ತರು. ಜೂ. 22ರಂದು ಒಡಿಶಾದ ರೈರಂಗಪುರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ಮುರ್ಮು ಕಂಡು ಬಂದರು.
ಹಲವು ಪ್ರಥಮಗಳ ಸರದಾರಿಕೆಗಳ ಸಾಲಿಗೆ ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಮುಂದಾಗುತ್ತಿದ್ದಾರೆ. ದೇಶದ ಅತೀ ಹಿರಿದಾದ ಸಾಂವಿಧಾನಿಕ ಪೀಠಕ್ಕೆ ಆರೋಹಣ ಮಾಡುವ ದ್ರೌಪದಿ ಮುರ್ಮು ಮೊದಲ ಬಾರಿ ಈ ಸ್ಥಾನಕ್ಕೇರುವ ಶೇ. 8ರಷ್ಟು ಇರುವ ಬುಡಕಟ್ಟು ಜನಾಂಗದವರು. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹುಟ್ಟಿ ಪ್ರಧಾನಮಂತ್ರಿ ಹುದ್ದೆಗೆ ಏರಿದ ಮೊದಲ ವ್ಯಕ್ತಿ ನರೇಂದ್ರ ಮೋದಿಯವರಾದರೆ, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹುಟ್ಟಿ ರಾಷ್ಟ್ರಪತಿ ಯಾಗುತ್ತಿರುವ ಮೊದಲ ವ್ಯಕ್ತಿ ಮುರ್ಮು. ಗುಡ್ಡಗಾಡು ಜನಾಂಗದ ಮೊದಲ ರಾಷ್ಟ್ರಪತಿ, ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ವೇಳೆ.
ಪ್ರತಿಭಾ ಪಾಟೀಲ್ ಬಳಿಕ ರಾಷ್ಟ್ರಪತಿ ಹುದ್ದೆಗೆ ಏರುತ್ತಿರುವ ಎರಡನೆಯ ಮಹಿಳೆ. ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ (ಬಿಹಾರ) ಬಳಿಕ ಈ ಹುದ್ದೆಗೇರುತ್ತಿರುವ ಪೂರ್ವ ಭಾರತದ ಎರಡನೆಯ ವ್ಯಕ್ತಿ.
ಮೃದುಭಾಷಿಣಿ ದ್ರೌಪದಿ ಮುರ್ಮು ಗೊಂಡರು, ಭಿಲ್ಲರ ಬಳಿಕ ಮೂರನೆಯ ಅತೀ ದೊಡ್ಡ ಗುಡ್ಡಗಾಡು ಸಮುದಾಯವಾದ ಸಂತಾಲ ಸಮುದಾಯಕ್ಕೆ ಸೇರಿದವರು. ಚಾವು ನೃತ್ಯಕ್ಕೆ ಹೆಸರಾದ ಒಡಿಶಾದ ಮಯೂರಗಂಜ್ ಜಿಲ್ಲೆಯ ಉಪರ್‌ಬೇಡ ಗ್ರಾಮದವರು ಇವರು. ತಂದೆ ಬಿರಾಂಚಿ ನಾರಾಯಣ ತುಡು ಕೃಷಿಕರು. ಕೃಷ್ಣ ಭಕ್ತರಾದ್ದರಿಂದ ಗುಡ್ಡಗಾಡು ಸಮುದಾಯದಲ್ಲಿ ಅಪರೂಪವಾದ ಹೆಸರನ್ನು ಮುದ್ದಿನ ಮಗಳಿಗೆ ತಂದೆ ಇಟ್ಟಿದ್ದಿರಬಹುದು.
1979ರಲ್ಲಿ ಬಿಎ ಪದವೀಧರೆಯಾದ ಇವರು ಒಡಿಶಾ ಸರಕಾರದ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಉದ್ಯೋಗಪರ್ವ ಆರಂಭಿಸಿದರು. ಬ್ಯಾಂಕ್ ಅಧಿಕಾರಿ ಶ್ಯಾಮ್‌ಚರಣ್ ಮುರ್ಮು ಜತೆ ವಿವಾಹವಾಯಿತು. ಬಳಿಕ ರೈರಂಗ್‌ಪುರದ ಅರವಿಂದೋ ಇಂಟೆಗ್ರೇಶನ್ ಎಜುಕೇಶನ್ ಸೆಂಟರ್‌ನಲ್ಲಿ ಗೌರವ ಶಿಕ್ಷಕಿಯಾಗಿದ್ದರು. 1997ರಲ್ಲಿ ಇವರು ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿದರು. ಆಡಳಿತಾತ್ಮಕವಾಗಿ ಅತೀ ಕೆಳಸ್ತರದ ಪುರಸಭೆಗೆ (ರೈರಂಗಪುರ) ಆಯ್ಕೆಯಾಗಿ ಬಳಿಕ ಉಪಾಧ್ಯಕ್ಷರಾದರು. 2000ದಲ್ಲಿ ಶಾಸಕಿಯಾಗಿ ಬಿಜು ಜನತಾದಳ- ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಸಚಿವರಾದರು, ಎರಡು ಬಾರಿ ಶಾಸಕರಾದರು. 2015ರಲ್ಲಿ ಝಾರ್ಖಂಡ್ ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರಾಗಿ 2021ರ ಜುಲೈ 12ರ ವರೆಗೆ ಕರ್ತವ್ಯ ನಿರ್ವಹಿಸಿದ್ದರು. ಒಡಿಶಾದಿಂದ ರಾಜ್ಯಪಾಲರ ಹುದ್ದೆಗೇರಿದ ಮೊದಲ ಸ್ತ್ರೀ.
ಮುರ್ಮು ಅವರ ಯಶಸ್ವೀ ಕಥಾನಕ ಕೇಳುವಾಗ ಏನೂ ಕಷ್ಟ ಎದುರಾಗಲಿಲ್ಲವೇ ಎಂಬ ಪ್ರಶ್ನೆ ಬರಬಹುದು. ಕಷ್ಟ ಮಾತ್ರ ಸಾಮಾನ್ಯದ್ದಂತೂ ಅಲ್ಲವೇ ಅಲ್ಲ. ಹುಟ್ಟಿದ ನಾಲ್ಕು ಮಕ್ಕಳಲ್ಲಿ ಮೂವರು ಅಸುನೀಗಿದರು. ಮೊದಲ ಮಗಳು ತೀರಿಕೊಂಡಾಗ ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಖನ್ನತೆಗೆ ಜಾರಿದ್ದರು, ಆರು ತಿಂಗಳು ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. 2009ರಲ್ಲಿ ಮಗನೊಬ್ಬ ಅಕಸ್ಮಾತ್ ಮರಣವನ್ನಪ್ಪಿದ. ಇನ್ನೊಬ್ಬ ಮಗ ಮೂರು ವರ್ಷ ಬಿಟ್ಟು ರಸ್ತೆ ಅಪಘಾತದಲ್ಲಿ ಮೃತಪಟ್ಟ. 2014ರಲ್ಲಿ ಪತಿಯೂ ಹೃದಯಾಘಾತದಿಂದ ನಿಧನ ಹೊಂದಿದರು. ಪರಿಸ್ಥಿತಿ ಎಲ್ಲಿಯವರೆಗೆ ಬಂತೆಂದರೆ ಸನ್ಯಾಸವನ್ನು ತೆಗೆದುಕೊಳ್ಳುವ ಸ್ಥಿತಿಗೂ ಬಂದರು. ಕ್ರಮೇಣ ಇವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಂಪರ್ಕವಾಯಿತು. “ಜಗತ್ತು ದೊಡ್ಡ ವೇದಿಕೆ. ಜೀವಾತ್ಮಗಳು ಕೆಲವೇ ಕೆಲವು ಸಮಯಗಳ ಮಟ್ಟಿಗೆ ಬಂದು ಹೋಗುತ್ತವೆ’ ಎಂಬ ಬ್ರಹ್ಮಕುಮಾರಿಯರ ಸಂದೇಶ ಮರ್ಮಾಘಾತವನ್ನು ನಿಯಂತ್ರಣಕ್ಕೆ ತಂದಿತು. ಮಗಳು ಬ್ಯಾಂಕ್ ಉದ್ಯೋಗಿ, ಕ್ರೀಡಾಪಟುವನ್ನು ಮದುವೆಯಾಗಿ ಪುತ್ರಿಯೊಂದಿಗೆ ಸಂಸಾರ ನಿರ್ವಹಿಸುತ್ತಿದ್ದಾರೆ. ಈಗಲೂ ರಾಜಯೋಗ, ಧ್ಯಾನವನ್ನು ಮುರ್ಮು ಮಾಡುತ್ತಾರೆ.
***
ಪಾಂಡವರ ವನವಾಸದ ಅವಧಿಯಲ್ಲಿ ಧರ್ಮರಾಯನು ಬ್ರಹದಶ್ವ, ಲೋಮಶ ಮೊದಲಾದ ಋಷಿಗಳ ಬಳಿ ತನ್ನ ಸಂಕಷ್ಟಗಳನ್ನೆಲ್ಲ ಹೇಳಿಕೊಳ್ಳುತ್ತಾನೆ. ತಾನೇನು ತಪ್ಪು ಮಾಡಿದೆ? ನನಗೇಕೆ ಇಂತಹ ಕಷ್ಟ, ಶಿಕ್ಷೆ ಎಂದು ಪ್ರಶ್ನಿಸುತ್ತಾನೆ. ಆಗಲೇ ನಿನಗಿಂತ ದೊಡ್ಡ ವ್ಯಕ್ತಿಗಳಿಗೆ ಎಂತಹ ಘನಘೋರ ಕಷ್ಟ ಬಂತು ಎನ್ನುವುದನ್ನು ಪೂರ್ವಸೂರಿಗಳ ಉದಾಹರಣೆಗಳೊಂದಿಗೆ ಋಷಿಮುನಿಗಳು ವಿವರಿಸುವಾಗ ನಳ ದಮಯಂತಿ, ಸತ್ಯವಾನ್ ಸಾವಿತ್ರಿ, ಚ್ಯವನ ಸುಕನ್ಯ, ಮಾಂಧಾತಾ, ಶ್ರೀರಾಮ, ಅಷ್ಟಾವಕ್ರ, ಅಗಸ್ತ್ಯ ಲೋಪಾಮುದ್ರೆ, ಋಷ್ಯಶೃಂಗ ಮೊದಲಾದವರ ಕತೆ ಮಹಾಭಾರತದ ವನಪರ್ವದಲ್ಲಿ ಬರುತ್ತದೆ. “ಇವರೆಲ್ಲ ಎಷ್ಟು ದೊಡ್ಡವರು? ನೀನು ಅಷ್ಟು ದೊಡ್ಡವನೆ? ನಿನಗೆ ಬಂದ ಕಷ್ಟ ಅವರಿಗೆ ಬಂದಷ್ಟು ದೊಡ್ಡದೆ?’ ಎಂದು ಪ್ರತೀ ಕತೆಯ ಕೊನೆಯಲ್ಲಿ ಪ್ರಶ್ನಿಸುತ್ತಾರೆ.
ಪಾಂಡವರು, ದ್ರೌಪದಿಯನ್ನು ಸಂತೈಸಲು ಶ್ರೀಕೃಷ್ಣ ಪತ್ನಿ ಸತ್ಯಭಾಮೆಯೊಡನೆ ಆಗಮಿಸುತ್ತಾನೆ. ಸತ್ಯಭಾಮೆ-ದ್ರೌಪದಿಯ ನಡುವಿನ ಸುದೀರ್ಘ ಸಂವಾದ ಸಂಸಾರಸ್ಥರಿಗೆ, ವಿಶೇಷವಾಗಿ ಸ್ತ್ರೀಯರಿಗೆ ಅತ್ಯಗತ್ಯ ಮೌಲ್ಯವುಳ್ಳದ್ದಾಗಿದೆ.
ಈ ದ್ರೌಪದಿಗೆ ಎಷ್ಟು ಕಷ್ಟ ಬಂತು? ಧ್ಯಾನ, ಯೋಗದಿಂದ ಇವನ್ನೆಲ್ಲ ಗೆದ್ದು ನಿಂತರು. ಹೀಗೆ ನಿಂತದ್ದರಿಂದಲೇ ಈ ಮಟ್ಟಕ್ಕೇರುತ್ತಿದ್ದಾರೆ. ಆ ದ್ರೌಪದಿ ವನವಾಸ, ಅಜ್ಞಾತವಾಸವಲ್ಲದೆ ಮಹಾಭಾರತ ಯುದ್ಧದಲ್ಲಿ ಗೆಲುವಾದ ಬಳಿಕವೂ ಐದು ಹಸುಳೆಗಳನ್ನು ಕಳೆದುಕೊಳ್ಳಬೇಕಾಯಿತು. ಕಷ್ಟ ಎದುರಾದವರು ಆ ದ್ರೌಪದಿಯನ್ನೂ, ಈ ದ್ರೌಪದಿಯನ್ನೂ ನೆನೆದು ಬದುಕಿನಲ್ಲಿ ಪುನಶ್ಚೇತನಗೊಳ್ಳಬೇಕು. ಯೋಗ, ಧ್ಯಾನಕ್ಕೆ ಆತ್ಮವಿಶ್ವಾಸ ಕುದುರಿಸುವ ಶಕ್ತಿ ಇದೆ ಎಂಬುದಕ್ಕೆ ಉದಾಹರಣೆಗಳಿವು.
***
ಅವಧಿ ವನವಾಸದ್ದಾದರೂ ಅದು ನಗರವಾಸವನ್ನು ಮೀರಿಸುತ್ತಿತ್ತು. 10,000 ಜನರು ಊಟ ಮಾಡಿದ ಬಳಿಕ ಗಂಟೆ ಬಾರಿಸಲಾಗುತ್ತಿತ್ತಂತೆ. ಎಷ್ಟು ಪಂಕ್ತಿ ಎದ್ದಿರಬಹುದು? ಇಷ್ಟು ಜನರಿಗೆ ಊಟ ಒದಗಿಸಿದ್ದು ದ್ರೌಪದಿ, ಇದು ಕೃಷ್ಣ ನೀಡಿದ ಅಕ್ಷಯಪಾತ್ರೆಯ ಪ್ರಭಾವದಿಂದ. ಆಗ ಮಹಾಭಾರತವಾದರೆ ಈಗ ಭಾರತ. ದ್ರೌಪದಿ ಮುರ್ಮು ಅವಧಿಯಲ್ಲಿ ಭಾರತ ಅಕ್ಷಯ ಪಾತ್ರೆಯಾಗಲಿ.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.