ಕಾನೂನಿನ ವ್ಯಾಪ್ತಿಗೆ ಬರಲಿ ಚುನಾವಣ ಭರವಸೆ
Team Udayavani, Apr 21, 2019, 6:00 AM IST
ಚುನಾವಣ ಆಶ್ವಾಸನೆ, ಪ್ರಣಾಳಿಕೆಯನ್ನು ಕಾನೂನಿನಡಿ ತಂದು ಅವುಗಳನ್ನು ನೀಡುವವರು ಜನರಿಗೆ ಉತ್ತರದಾಯಿ ಆಗುವಂತಾಗಬೇಕು. ಯೋಜನೆ ಪ್ರಕಟಿಸುವವರು ಅಂತಹ ಯೋಜನೆಗಳಿಗೆ ಯಾವ ಮೂಲದಿಂದ ಸಂಪನ್ಮೂಲ ಕ್ರೋಡೀಕರಿಸಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಬೇಕು.
ಸಣ್ಣ ಮಕ್ಕಳು ಊಟ ಮಾಡಲು ಹಠ ಮಾಡುವಾಗ ಅವುಗಳ ತಾಯಂದಿರು ಚಂದ್ರ, ನಕ್ಷತ್ರಗಳನ್ನು ತೋರಿಸಿ ಊಟ ಮಾಡಿದರೆ ಅವುಗಳನ್ನು ತಂದು ಕೊಡುವ ಆಮಿಷ ಒಡ್ಡುವುದು ಮಕ್ಕಳ ಒಳಿತಿಗಾಗಿ. ಇದು ಕಾರ್ಯಸಾಧ್ಯವಲ್ಲದ ಆಮಿಷವೆಂದು ಗೊತ್ತಿದ್ದರೂ ತಾಯಿಯಾದವಳ ಸ್ವಾರ್ಥವಿಲ್ಲದ ಮಾತೃ ಸಹಜ ಗುಣ. ಆದರೆ ಚುನಾವಣ ಕಾಲದಲ್ಲಿ ಆಡಳಿತದಲ್ಲಿರುವ ಸರಕಾರವು ಮಂಡಿಸುವ ಆಯವ್ಯಯ ಪತ್ರದಲ್ಲಿ, ಪಕ್ಷಗಳು ಚುನಾವಣ ಪ್ರಣಾಳಿಕೆಯ ಹೆಸರಿನಲ್ಲಿ ಘೋಷಿಸುವ ಯೋಜನೆಗಳು ಕೇವಲ ಮತಗಳಿಕೆಯ ಉದ್ದೇಶದ ಪೊಳ್ಳು ಆಶ್ವಾಸನೆಗಳೆ ಹೊರತು ಅವು ಜಾರಿಯಾಗುವ ಖಾತರಿಯಾಗಲಿ, ಜನರ ಉದ್ಧಾರದ ಪ್ರಾಮಾಣಿಕ ಉದ್ದೇಶವಾಗಲಿ ಇಲ್ಲವೆಂಬುದು ಸತ್ಯ. ಏಕೆಂದರೆ ಇವುಗಳನ್ನು ಜಾರಿಗೊಳಿಸಬೇಕೆಂದು ಯಾವುದೇ ಸ್ಪಷ್ಟ ಕಾನೂನು ಇಲ್ಲ.
ರೈತರಿಗೆ ಸಾಲಮನ್ನಾ, ಉಚಿತ ಅಕ್ಕಿ, ಸಬ್ಸಿಡಿ ದರದಲ್ಲಿ ಊಟ, ಉಚಿತ ಲ್ಯಾಪ್‌ಟಾಪ್ ಮುಂತಾದ ಯೋಜನೆಗಳೆಲ್ಲವೂ ಜನರು ತೆರಿಗೆ ರೂಪದಲ್ಲಿ ಪಾವತಿಸುವ ಹಣದ ದುರುಪಯೋಗ ಎಂದರೆ ತಪ್ಪಾಗಲಾರದು. ಸರಕಾರಕ್ಕೆ ಪಾವತಿಸುವ ತೆರಿಗೆ ಆಡಳಿತಾತ್ಮಕ ವೆಚ್ಚ ಮತ್ತು ಅಭಿವೃದ್ಧಿ ಕಾರ್ಯಗಳ ವಿನಿಯೋಗಕ್ಕೆ ಹೊರತು ಮತದಾರರನ್ನು ಸೆಳೆಯುವ ಅನುತ್ಪಾದಕ ಯೋಜನೆಗಳಿಗೆ ಅಲ್ಲ. ಈಗಿನ ಚುನಾವಣ ಆಶ್ವಾಸನೆಗಳು ಹೇಗಿರುತ್ತವೆಂದರೆ, ಕುರಿಗಳ ಉಣ್ಣೆಯನ್ನು ಕಿತ್ತು ಅವುಗಳಿಗೇ ಕಂಬಳಿ ಮಾಡಿ ಉಚಿತವಾಗಿ ನೀಡುವಂತಿದೆ. ಕಂಬಳಿ ಸಿಗುವ ಆಶೆಗೆ ಬಲಿಯಾಗುವ ಕುರಿಗಳಿಗೆ ಅದು ತಾವು ನೀಡುವ ತೆರಿಗೆ ಹಣವೆ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲವೆನ್ನುವುದು ಮೂರ್ಖತನವಲ್ಲದೆ ಇನ್ನೇನು?
ಇಷ್ಟು ಮಾತ್ರವಲ್ಲ, ಈ ಉಚಿತ, ಸಬ್ಸಿಡಿಗಳ ಹಿಂದೆ ಆಡಳಿತಗಾರರಿಗೆ ಅಡ್ಡದಾರಿಯ ಸಂಪಾದನೆಯ ಉದ್ದೇಶವೂ ಇದೆ. ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಬಡ ವರ್ಗದ ಹೆಣ್ಣು ಮಕ್ಕಳಿಗೆ “ತಾಳಿ ಭಾಗ್ಯ’ ಎಂಬ ಯೋಜನೆಯೊಂದಿತ್ತು. ಈ ಯೋಜನೆಯಡಿ ಕನಿಷ್ಠ ಹತ್ತು ಜೋಡಿಗಳು ನೋಂದಾಯಿಸಿದರೆ ಸರಕಾರದ ವೆಚ್ಚದಲ್ಲಿ ತಾಳಿ, ಬಟ್ಟೆ ಮತ್ತು ಒಂದು ಜೋಡಿಗೆ ನಿರ್ದಿಷ್ಟ ಸಂಖ್ಯೆಯ ಅತಿಥಿಗಳ ಊಟದ ವೆಚ್ಚ ಭರಿಸಿ ಮದುವೆಯ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಯೋಜನೆಯ ಅಡ್ಡ ಉಪಯೋಗ ಹೇಗಿತ್ತೆಂದರೆ, ಹತ್ತು ಜೋಡಿಗಳು ನೋಂದಣಿಯಾಗುವಷ್ಟು ಕಾಯುವ ತಾಳ್ಮೆ ಆಡಳಿತಗಾರರಿಗೆ ಇರುತ್ತಿರಲಿಲ್ಲ, ಜತೆಗೆ ಒಂದಿಷ್ಟು ಸಂಪಾದನೆಯೂ ಆಗಬೇಕು. ಇದಕ್ಕಾಗಿ ಅವರು ಕಂಡುಕೊಂಡ ಮಾರ್ಗವೆಂದರೆ ಎರಡು-ಮೂರು ಜೋಡಿ ನೋಂದಣಿಯಾದರೆ ಸಾಕು, ಉಳಿದ ಜೋಡಿಗಳ ಹೆಸರು ಸೃಷ್ಟಿಸಿ ಮದುವೆ ವ್ಯವಸ್ಥೆ ಮಾಡಿಯೇಬಿಡುತ್ತಿದ್ದರು. ನಿಜವಾಗಿ ಆದದ್ದು ಮೂರು ಮದುವೆಯಾದರೆ, ಉಳಿದ ಏಳು ಮದುವೆ ಕಾಗದದಲ್ಲಿ. ಆ ಹೆಚ್ಚುವರಿ ಕಾಲ್ಪನಿಕ ಮದುವೆಗಳ ವೆಚ್ಚ ಸ್ವಾಹಾ. ಈಗ ಆಧಾರ್ ಮೂಲಕ ಇಂತಹ ಯೋಜನೆಗಳಿಗೆ ಕಡಿವಾಣ ಬಿದ್ದಿದೆ.
ಇದು ಹಳೆಯ ಕಥೆಯಾದರೆ ಇತ್ತೀಚಿನ ಯೋಜನೆಗಳಲ್ಲಿ ಅನ್ನಭಾಗ್ಯದ ಅಕ್ಕಿ ನ್ಯಾಯಬೆಲೆ ಅಂಗಡಿಯಿಂದ ಹೆಚ್ಚು ಬೆಲೆಗೆ ಮಾರುಕಟ್ಟೆಗೋ ಅಥವಾ ಪುನಃ ಉಗ್ರಾಣಕ್ಕೋ ವಾಪಸ್ ಬರುತ್ತದೆ. ಹಾಗೂ ಅದರ ಮೊತ್ತ ಸೂಕ್ತವಾಗಿ ಹಂಚಿಕೊಳ್ಳಲ್ಪಡುತ್ತದೆ. ಈ ವಿಷಯದಲ್ಲಿ ಸಮಗ್ರ ವರದಿಯೊಂದನ್ನು ಸಿದ್ಧಪಡಿಸಲು ಹೊರಟಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ ಸುದ್ದಿ ಹಳೆಯದು. ಆದರೆ ಅಂತಹ ಪ್ರಯತ್ನ ಅರ್ಧದಲ್ಲೇ ನಿಂತದ್ದು ದಾಲ್ ಮೇ ಕುಛ… ಕಾಲಾ ಹೈ ಅಂತ ಅನ್ನಿಸುವುದಿಲ್ಲವೇ? ಕಡಿಮೆ ಬೆಲೆಗೆ ಊಟ- ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್‌ಗಳಿಗೆ ನೀಡಲಾಗುವ ಸಬ್ಸಿಡಿ ಕೂಡಾ ಇಂತಹುದೇ ವರ್ತುಲ-ಆಟಗಳÇÉೊಂದು. ನಿಜವಾಗಿ ದಿನಕ್ಕೆ ಐವತ್ತೋ-ನೂರೋ ಮಂದಿ ಉಂಡರೆ ಲೆಕ್ಕ ತೋರಿಸುವುದು ಮಾತ್ರ ಗರಿಷ್ಠ ಮಿತಿಯಾದ ಐನೂರು ಊಟ, ಅದಕ್ಕೆ ಮೀಸಲಿಟ್ಟ ಸಬ್ಸಿಡಿ ಬಿಲ್ಲು ರೆಡಿ. ಒಟ್ಟಾರೆ ಖಜಾನೆ ಲೂಟಿಗೆ ನೂರೆಂಟು ದಾರಿ. ಇಂತಹ ಆಪಾದನೆ ಬಂದಾಗಲೆಲ್ಲ ಅಲ್ಲಗಳೆದು ತಿಪ್ಪೆ ಸಾರಿಸಲಾಗುತ್ತದೆಯೇ ಹೊರತು ಅವುಗಳ ಬಗ್ಗೆ ಪಾರದರ್ಶಕ ಲೆಕ್ಕ ಪಡೆಯುವ ತೆರಿಗೆದಾರರ ಹಕ್ಕಿನ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ, ತೆರಿಗೆದಾರರು ಕೂಡಾ.
ಇವಿಷ್ಟು ಒಂದು ರೀತಿಯ ಆಮಿಷಗಳಾದರೆ ಸಾಲ ಮನ್ನಾ, ಬ್ಯಾಂಕ್ ಖಾತೆಗೆ ಹಣ ಜಮಾ ಇವುಗಳು ಇನ್ನೊಂದು ರೀತಿಯ ಮಾಯಾ ಮೋಡಿ. ಇವುಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಭಾರತದ ಜನಸಂಖ್ಯೆಯ ಶೇ. 20 ಅಂದರೆ ಸುಮಾರು 25 ಕೋಟಿ ಜನರ ಖಾತೆಗೆ ಪ್ರತಿ ತಿಂಗಳು ರೂ.6,000ದಂತೆ ವರ್ಷಕ್ಕೆ ರೂ. 72,000 ಜಮಾ ಮಾಡುವ ಆಶ್ವಾಸನೆ. ಈ ಆಶ್ವಾಸನೆ ಓದಿದಾಗ 80ರ ದಶಕದಲ್ಲಿ ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿ¨ªಾಗ ನಮ್ಮೂರಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಾ ಹೇಳಿದ್ದು ನೆನಪಿಗೆ ಬಂತು. ಅವರು ತಮ್ಮ ಭಾಷಣ ಆರಂಭಿಸುವ ಮೊದಲು ಸಾರ್ವಜನಿಕರು ಅವರಿಗೆ ಒಂದು ಮನವಿ ಸಲ್ಲಿಸಿ ಯಾವುದೋ ಒಂದಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೋರಿಕೊಂಡಿದ್ದರು. ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ ಹೇಳಿದ್ದೇನೆಂದರೆ ಈ ವಿನಾಯಿತಿ ನೀಡಲು ಸರಕಾರಕ್ಕೆ ಎಷ್ಟು ಮೊತ್ತ ಬೇಕಾಗುವುದೋ ಗೊತ್ತಿಲ್ಲ, ಆದರೂ ಮಂಜೂರು ಮಾಡುತ್ತಿದ್ದೇನೆ ಆಗ ಬಂತು ನೋಡಿ ಚಪ್ಪಾಳೆ ಸುರಿಮಳೆ. ತೆರಿಗೆದಾರನ ಬೆವರಿನ ಫಲದಲ್ಲಿ ಈ ರಾಜಕಾರಣಿಗಳು ಕೊಡುಗೈ ದಾನಿಗಳಾಗುವ ಪರಿ ಹೇಗಿದೆ ನೋಡಿ. ಈಗಲೂ ವರ್ಷಕ್ಕೆ ರೂ.72,000 ದಾನ ಮಾಡಲು ಒಟ್ಟು ಸಂಪನ್ಮೂಲಕ್ಕಿಂತಲೂ ಹೆಚ್ಚು ಹಣ ಬೇಕಾಗುವುದು ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಇಂತಹ ಅರ್ಥಹೀನ ಭರವಸೆಗಳನ್ನು ನೀಡುವ ಈ ನಾಯಕರಿಗೆ ಸಾಮಾಜಿಕ ಬದ್ಧತೆ ಎಳ್ಳಷ್ಟೂ ಇಲ್ಲ ಎಂಬುದು ನಿರ್ವಿವಾದ.
ಇನ್ನು ರೈತರ ಸಾಲ ಮನ್ನಾ ವಿಷಯಕ್ಕೆ ಬರುವುದಾದರೆ, ರೈತರ ಬವಣೆಗೆ ಸಾಲ ಮನ್ನಾ ಒಂದೇ ಪರಿಹಾರ ವೆಂದೇಕೆ ಭಾವಿಸಬೇಕು? ಹಾಗೇನಾದರೂ ರೈತರ ನೆರವಿಗೆ ಬರಬೇಕೆಂದಿದ್ದರೆ ಉತ್ತಮ ಬೆಳೆ ಬೆಳೆಯಲು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೂಕ್ತ ವಾತಾವರಣ ಕಲ್ಪಿಸಬಹುದು. ಅಕಾಲಿಕ ಮಳೆಯಿಂದಾಗಿ ಬೆಳೆ ಹಾಳಾಗುವ ಸಂಭವವಿದ್ದಲ್ಲಿ ಅದರ ರಕ್ಷಣೆಗೆ ವ್ಯವಸ್ಥೆ ಹೀಗೂ ಮಾಡಬಹುದಲ್ಲ? ಕ್ರಿಕೆಟ್ ನಡೆಯುವ ಕ್ರೀಡಾಂಗಣ ಒದ್ದೆಯಾಗದಂತೆ ದುಬಾರಿ ವೆಚ್ಚದಲ್ಲಿ ಹೊದಿಕೆ ಹಾಸುವಷ್ಟು ತಂತ್ರಜ್ಞಾನ ಮುಂದುವರಿದಿದ್ದು, ರೈತರ ಬೆಳೆ ಅಕಾಲಿಕ ಮಳೆಗೆ ಹಾಳಾಗದಂತೆ ಸಂರಕ್ಷಿಸಲು ಅಗತ್ಯ ವ್ಯವಸ್ಥೆ ಮಾಡುವುದು ಕಷ್ಟವೇ? ಮಾತ್ರವಲ್ಲದೆ ಬೆಳೆಗೆ ಸೂಕ್ತ ಬೆಂಬಲ ಬೆಲೆ ಮುಂತಾದ ಪೂರಕ ಕ್ರಮ ಕೈಗೊಳ್ಳುವ ಮೂಲಕ ರೈತರ ಶ್ರಮಕ್ಕೆ ಬೆಲೆ ಸಿಗುವಂತಿರಬೇಕು. ಇಷ್ಟಾಗಿಯೂ ಬೆಳೆಗೆ ಸೂಕ್ತ ಪ್ರತಿಫಲ ಸಿಗದಿದ್ದರೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳೆ ವಿಮೆ ಮಾಡುವ ಮೂಲಕ ನಷ್ಟ ಭರ್ತಿ ಮಾಡುವುದು ಸಮರ್ಥನೀಯ ಕ್ರಮವೇ ಹೊರತು ಸಾರ್ವಜನಿಕರ ತೆರಿಗೆ ಹಣವನ್ನು ಸಾಲಮನ್ನಾ ಮಾಡಲು ಉಪಯೋಗಿಸುವುದು ಸರಿಯಲ್ಲ. ಹಾಗೆ ನಷ್ಟ ಹೊಂದಿದಲ್ಲೆಲ್ಲಾ ಸಾಲ ಮನ್ನಾ ಒಂದೇ ಪರಿಹಾರವೆಂದು ಭಾವಿಸುವುದಾದಲ್ಲಿ ಸಾಲ ಮಾಡಿ ಬಾಡಿಗೆ ರಿಕ್ಷಾ, ಟ್ಯಾಕ್ಸಿ, ಲಾರಿ ನಡೆಸುವವರಿಗೆ ಸೂಕ್ತ ಬಾಡಿಗೆ ಸಿಗದಿದ್ದರೆ ಅವರ ಸಾಲ ಮನ್ನಾ ಮಾಡುವುದು, ವಿದ್ಯಾರ್ಜನೆಗೆ ಸಾಲ ಮಾಡಿ ಸರಿಯಾದ ಉದ್ಯೋಗ ಸಿಗದೆ ಸಾಲ ಪಾವತಿ ಮಾಡಲಾಗದಿದ್ದರೆ ಅವರೂ ತಮ್ಮ ಸಾಲ ಮನ್ನಾ ಮಾಡಲು ಬೇಡಿಕೆ ಮಂಡಿಸಿದರೆ ಏನಾದೀತು? ಈಗಾಗಲೇ ಕರಾವಳಿಯಲ್ಲಿ ಮೀನುಗಾರಿಕೆ ನಷ್ಟದಲ್ಲಿದೆ, ಸಾಲ ಮನ್ನಾ ಮಾಡಬೇಕೆನ್ನುವ ಕೂಗು ಹೊರಟಿರುವುದನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದಾಗಿದೆ.
ಇಷ್ಟಾದರೂ ಈ ಸಾಲಮನ್ನಾ ಕೇವಲ ಘೋಷಣೆ ಮತ್ತು ಅಂಕಿಅಂಶಗಳಿಗೆ ಸೀಮಿತವಾದರೂ ಆಶ್ಚರ್ಯವಿಲ್ಲ. ಏಕೆಂದರೆ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸರಕಾರ ರಚಿಸಿದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುವ ಆಶ್ವಾಸನೆ ನೀಡಿದ್ದ ಈಗಿನ ಸರಕಾರ, ನಂತರ ತನಗೆ ಪೂರ್ಣ ಬಹುಮತ ನೀಡಿದ್ದರೆ ತನ್ನ ಆಶ್ವಾಸನೆ ಪೂರೈಸುತ್ತಿ¨ªೆ ಎಂಬದಾಗಿ ಮಾತಿನ ಧಾಟಿ ಬದಲಾಯಿಸಿದ್ದು ಯಾವ ರೀತಿಯ ಬುದ್ಧಿವಂತಿಕೆ?
ಆದ್ದರಿಂದ ಚುನಾವಣ ಆಶ್ವಾಸನೆ, ಪ್ರಣಾಳಿಕೆಗಳನ್ನು ಕಾನೂನಿನ ವ್ಯಾಪ್ತಿಗೆ ತಂದು ಅವುಗಳನ್ನು ನೀಡುವವರು ಜನರಿಗೆ ಉತ್ತರದಾಯಿಯಾಗುವಂತಾಗಬೇಕು. ಯಾವುದೇ ಯೋಜನೆ ಪ್ರಕಟಿಸುವವರು ಅದು ಖಜಾನೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಅಂತಹ ಯೋಜನೆಗಳಿಗೆ ಯಾವ ಮೂಲದಿಂದ ಸಂಪನ್ಮೂಲ ಕ್ರೋಢೀಕರಿಸಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಸ್ಪಷ್ಟ ಪಡಿಸಬೇಕು.
ಒಂದು ವೇಳೆ ಆಶ್ವಾಸನೆ ಪೂರೈಸಲು ತಪ್ಪಿದರೆ ಅದನ್ನು ಅಪರಾಧವೆಂದು ಪರಿಗಣಿಸಬೇಕು. ಕಾರ್ಯಸಾಧ್ಯವಲ್ಲದ ಯೋಜನೆಗಳನ್ನು, ಆಶ್ವಾಸನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲ್ಪಡುವ ಕಾನೂನು ಬೇಕು. ಹೀಗಾದರೆ ಮಾತ್ರ ಇಂತಹ ಜನಮರುಳು ಯೋಜನೆಗಳಿಗೆ ಲಗಾಮು ಹಾಕಲು ಸಾಧ್ಯ.
ಮೋಹನದಾಸ ಕಿಣಿ ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.