ನ್ಯಾಯಸಮ್ಮತ ಆಡಳಿತಕ್ಕೆ ಒತ್ತು ಕೊಟ್ಟವರು
Team Udayavani, Jun 25, 2017, 10:15 PM IST
ಪರಸ್ಪರ ವಿರುದ್ಧವಿರುವ ಗುರಿಗಳನ್ನು ಹೊಂದಿರುವ ಠೇವಣಿದಾರರು, ಷೇರುದಾರರು, ಸಾಲ ಪಡೆದ ಗ್ರಾಹಕರು ಇವರೆಲ್ಲರ ಗುರಿಗಳ ನಡುವೆ ಸಮತೋಲನದ ಸಾಧನೆ ಅತಿಮುಖ್ಯ ಎಂದು ಕೆ.ಕೆ. ಪೈ ಹೇಳುತ್ತಿದ್ದರು. ಅವರ ಪ್ರಕಾರ ಈ ಸಮತೋಲನ ಪ್ರಕ್ರಿಯೆಗೆ ಡಾ| ಪೈಗಳ ಕಾಲದಿಂದಲೂ ಒತ್ತು ಇತ್ತು.
ಕೆ.ಕೆ. ಪೈಯವರು ಈಗ ಬದುಕಿರುತ್ತಿದ್ದರೆ ಇಂದು ಅವರಿಗೆ 96 ವರ್ಷ ತುಂಬುತ್ತಿತ್ತು. ಬಹಳ ಕುಶಾಗ್ರಮತಿಯೂ ಅಪ್ರತಿಮ ಪ್ರತಿಭಾವಂತರೂ ಆಗಿದ್ದ ಕೆ.ಕೆ. ಪೈ ದೊಡ್ಡ ಚಿಂತಕರೂ ಆಗಿದ್ದರು. ತಮ್ಮ ಭಾಷಣಗಳಲ್ಲಿ, ಸಂಭಾಷಣೆಗಳಲ್ಲಿ, ಪ್ರಯಾಣಿಸುವ ವೇಳೆ ಮತ್ತು ಭೇಟಿಯ ಇನ್ನಿತರ ಸಂದರ್ಭಗಳಲ್ಲಿ ಕೆ.ಕೆ. ಪೈ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳನ್ನು ಮತ್ತು ಅವರ ಚಿಂತನೆಗಳನ್ನು ಒಟ್ಟು ಸೇರಿಸಿದರೆ ಅವುಗಳು ಒಟ್ಟಾಗಿ ನಮಗೆ ಬೃಹತ್ ಜ್ಞಾನ ನಿಧಿಯನ್ನು ಒದಗಿಸಬಹುದು. ಮಾತ್ರವಲ್ಲ ಅವರ ಚಿಂತನೆಗಳನ್ನು ಒಂದು ಪುಸ್ತಕ ರೂಪದಲ್ಲಿ ಕೂಡ ಪ್ರಕಟಿಸಬಹುದು.
ಕೆ.ಕೆ. ಪೈಯವರ ಜನ್ಮದಿನವಾದ ಇಂದು ಅವರ ಯಾವುದಾದರೂ ಚಿಂತನೆಯ ಕುರಿತು ಬರೆದು ಅದರ ಮೇಲೆ ಬೆಳಕು ಚೆಲ್ಲಲು ಯತ್ನಿಸಿದರೆ ಅದು ಅವರಿಗೆ ನೀಡುವ ಜನ್ಮದಿನದ ಗೌರವವಾಗುತ್ತದೆ.
ಅಗಾಧ ವಿಶ್ಲೇಷಣಾ ಸಾಮರ್ಥ್ಯ
2000-2001ರಲ್ಲಿ ಆರ್‌ಬಿಐ ಬ್ಯಾಂಕುಗಳಲ್ಲಿ ನೈಗಮಿಕ ಅಥವಾ ಸಾಂಸ್ಥಿಕ ಪ್ರಶಾಸನಕ್ಕೆ ಒತ್ತು ನೀಡಲಾರಂಭಿಸಿತು.
ಅದೇ ಸಮಯದಲ್ಲಿ ನಾನು Importance of Corporate Governance in Bank ಎಂಬ ಲೇಖನವನ್ನು ಬರೆದು ಫೈನಾನ್ಸಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟಿಸಿದೆ. ಲೇಖನದ ಪ್ರತಿಯೊಂದನ್ನು ಕೆ.ಕೆ. ಪೈಯವರಿಗೆ ಕಳುಹಿಸಿದೆ. ಅದೇ ಸಮಯದಲ್ಲಿ “”ಬ್ಯಾಂಕುಗಳಲ್ಲಿ ಉತ್ತಮ ಸಾಂಸ್ಥಿಕ ಶಾಸನದ ಮಹತ್ವ” ಎಂಬ ನನ್ನ ಕನ್ನಡ ಲೇಖನ ಉದಯವಾಣಿಯಲ್ಲಿ ಪ್ರಕಟವಾಯಿತು. ನನ್ನ ಇಂಗ್ಲಿಷ್ ಲೇಖನವನ್ನು ಓದಿ ಕೆ.ಕೆ. ಪೈ ಬರೆದ ಉತ್ತರದಿಂದ ಅವರಿಗೆ ಸಾಂಸ್ಥಿಕ ಪ್ರಶಾಸನದ ಪರಿಕಲ್ಪನೆಯ ಕುರಿತಾಗಿ ಇದ್ದ ಆಳವಾದ ಜ್ಞಾನ ಮತ್ತು ಅವರ ಅಗಾಧ ವಿಶ್ಲೇಷಣಾ ಸಾಮರ್ಥ್ಯದ ಅರಿವಾಗುತ್ತದೆ. ಅವರ ಉತ್ತರ ಲೇಖನದಂತೆಯೇ ಇತ್ತು. ಈ ರೀತಿ ನನ್ನ ಲೇಖನಗಳ ಕುರಿತು 1971ರಿಂದ ಈಚೆಗೆ ಕೆ.ಕೆ. ಪೈ ಅವರು ಬರೆದ ಹಲವು ಪತ್ರಗಳು ನನ್ನ ಸಂಗ್ರಹದಲ್ಲಿ ಇವೆ. ಕೆ.ಕೆ. ಪೈಯವರು ತಮ್ಮ ಪತ್ರದಲ್ಲಿ ಸಾಂಸ್ಥಿಕ ಪ್ರಶಾಸನದ ಪರಿಕಲ್ಪನೆಯ ಕುರಿತಾಗಿ ವಿಸ್ತೃತವಾದ ಅರಿವು ಮತ್ತು ವಿಶ್ಲೇಷಣೆಯನ್ನು ನನಗೆ ಒದಗಿಸಿಕೊಟ್ಟಿದ್ದರು.
ಅವರ ಪ್ರಕಾರ ಪರಿಣಾಮಕಾರಿ ನಿರ್ವಹಣೆಯೇ ಉತ್ತಮ ಸಾಂಸ್ಥಿಕ ಅಥವಾ ನೈಗಮಿಕ ಪ್ರಶಾಸನವೆನಿಸುತ್ತದೆ. ಪರಿಣಾಮಕಾರಿ ನಿರ್ವಹಣೆ ಅಥವಾ ಸಾಂಸ್ಥಿಕ ಪ್ರಶಾಸನ ಆಡಳಿತ ಮತ್ತು ನಿರ್ವಹಣೆಯ ಎಲ್ಲ ಅಂಶಗಳನ್ನು ಮತ್ತು ಎಲ್ಲ ಆಯಾಮಗಳನ್ನು ಒಳಗೊಂಡಿರಬೇಕು. ಅದರಲ್ಲಿ ಯೋಜನೆಯ ತಯಾರಿ, ಸಾಂಸ್ಥಿಕ ಧ್ಯೇಯೋದ್ದೇಶಗಳ ರೂಪಣೆ, ಅನುಷ್ಠಾನ ಪ್ರಕ್ರಿಯೆ, ಸಾಧನೆಗಳ ಪರಾಮರ್ಶೆ, ಯಶಸ್ಸು ಮತ್ತು ವೈಫಲ್ಯಗಳಿಂದ ಮುಂದಿನ ಸುಧಾರಣೆಗೆ ಬೇಕಾದ ಪಾಠವನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ ಇವೆಲ್ಲ ಸೇರಿರಬೇಕು ಎಂಬುದು ಕೆ.ಕೆ. ಪೈಯವರ ಅಭಿಪ್ರಾಯವಾಗಿತ್ತು.
ಪ್ರಶಾಸನದ ತಿರುಳು
ಕೆ.ಕೆ. ಪೈಯವರ ಪ್ರಕಾರ ಪರಿಣಾಮಕಾರಿ ಸಾಂಸ್ಥಿಕ ಪ್ರಶಾಸನವು ಸಂಸ್ಥೆಯ ಧ್ಯೇಯೋದ್ದೇಶಗಳ ಸಾಧನೆಗೆ ಅಳವಡಿಸಿಕೊಳ್ಳುವ ಮಹತ್ವದ ಉಪಕರಣ ಅಥವಾ ಚೌಕಟ್ಟು. ಒಂದಕ್ಕೊಂದು ವಿರುದ್ಧವಾಗಿರುವ ಗುರಿಗಳನ್ನು ಹೊಂದಿರುವ ಷೇರುದಾರರು, ಠೇವಣಿದಾರರು, ಸಾಲ ಪಡೆದ ಗ್ರಾಹಕರು ಮತ್ತು ಸಮಾಜ- ಇವರೆಲ್ಲರ ಗುರಿಗಳ ನಡುವೆ ಒಂದು ರೀತಿಯ ಸಮತೋಲ ಸಾಧಿಸುವುದು ಅತಿಮುಖ್ಯ. ಇಂತಹ ಸಮತೋಲನವನ್ನು ಸಾಧಿಸುವ ಮೂಲಕ ಮಾತ್ರ ಸಾಂಸ್ಥಿಕ ಯಶಸ್ಸು ಸಾಧ್ಯ ಎಂದು ಕೆ.ಕೆ. ಪೈ ಹೇಳುತ್ತಿದ್ದರು. ಈ ಸಮತೋಲನವನ್ನು ಸಾಧಿಸುವ ಪ್ರಕ್ರಿಯೆಯೇ ಪರಿಣಾಮಕಾರಿ ಸಾಂಸ್ಥಿಕ ಪ್ರಶಾಸನದ ತಿರುಳು ಎಂಬುದು ಅವರ ನಿಲುವಾಗಿತ್ತು.
ಕೆ.ಎಂ. ಉಡುಪ, ನಾನು ಮತ್ತು ಡಿ.ಟಿ. ಪೈ ಒಂದು ದಿನ ಕೆ.ಕೆ. ಪೈಯವರೊಂದಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಕೆ.ಕೆ. ಪೈಯವರು ಹಲವು ವಿಷಯಗಳ ಕುರಿತು ಮಾತಾಡಿ, ಆ ತರುವಾಯ ಬ್ಯಾಂಕುಗಳಲ್ಲಿ ಸಾಂಸ್ಥಿಕ ಪ್ರಶಾಸನದ ಕುರಿತು ಮಾತಾಡಲು ಆರಂಭಿಸಿದರು. ಮಾತಾಡುತ್ತಾ ಅವರು ಇಂಗ್ಲಿಷ್‌ನಲ್ಲಿ ಹೀಗೆ ಹೇಳಿದರು”There is nothing new in the so called concept of corporate governance now being widely talked about at various levels including at RBI. We in Syndicate Bank were adhering to all the principles covered under the concept even in the seventies although we did not call it, corporate governance at that time’. ಅವರು ಮುಂದುವರಿದು ಮಾತಾಡುತ್ತಾ, ಪ್ರತಿ ಕಾರ್ಪೊರೇಟ್ ಸಂಸ್ಥೆ ಉತ್ತಮ ಹಾಗೂ ಜವಾಬ್ದಾರಿಯುತ ಸಾಂಸ್ಥಿಕ ನಾಗರಿಕತ್ವವನ್ನು ಮೈಗೂಡಿಸಿಕೊಳ್ಳಬೇಕು, ಬ್ಯಾಂಕಿನ ಜವಾಬ್ದಾರಿಯುತ ಸಾಂಸ್ಥಿಕ ನಾಗರಿಕತ್ವಕ್ಕೆ ಸಿಂಡಿಕೇಟ್ ಬ್ಯಾಂಕಿನಲ್ಲಿ ಯಾವಾಗಲೂ ಒತ್ತು ಇತ್ತು ಎಂದು ನಮಗೆ ಹೇಳಿದರು.
1925ರ ಅಕ್ಟೋಬರ್‌ನಲ್ಲಿ ವ್ಯವಹಾರ ಪ್ರಾರಂಭಿಸಿದಲ್ಲಿಂದಲೇ ಸಿಂಡಿಕೇಟ್ ಬ್ಯಾಂಕ್ ಉತ್ತಮ ಹಾಗೂ ಜವಾಬ್ದಾರಿಯುತ ನಾಗರಿಕತ್ವವನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡಲಾರಂಭಿಸಿತು. ಡಾ| ಪೈಯವರು ಯಾವಾಗಲೂ ನಾಡಿನ ಕಾಯಿದೆ ಕಾನೂನುಗಳಿಗನುಸಾರವಾಗಿ ಮತ್ತು ಆರ್.ಬಿ.ಐ.ಯ ಮಾರ್ಗದರ್ಶಿ ನಿಯಮಗಳಿಗನುಗುಣವಾಗಿ ಬ್ಯಾಂಕ್ ಕಾರ್ಯಾಚರಣೆ ನಡೆಸುವಂತೆ ನೋಡಿಕೊಳ್ಳುತ್ತಿದ್ದರು. ಅದೇ ಸಂಪ್ರದಾಯವನ್ನು ನಾವೆಲ್ಲ ಮುಂದುವರಿಸಿದೆವು ಎಂದು ಕೆ.ಕೆ. ಪೈ ವಿವರಿಸಿದರು.
ಸಾಂಸ್ಥಿಕ ನಡತೆ
ಆಡಳಿತದಲ್ಲಿ ಪಾರದರ್ಶಕತೆ, ನ್ಯಾಯಸಮ್ಮತವಾದ ಜವಾಬ್ದಾರಿಯುತ ಕಾರ್ಯಾಚರಣೆ, ಪ್ರಾಮಾಣಿಕತೆ, ಉತ್ತರದಾಯಿತ್ವ -ಇವುಗಳಿಗೆಲ್ಲ ಕೆ.ಕೆ. ಪೈ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿದ್ದಾಗ ಮಹತ್ವ ನೀಡುತ್ತಿದ್ದರು. ಆಗ ಬ್ಯಾಂಕಿಗೆ ಇದ್ದ ಏಕಮಾತ್ರ ಷೇರುದಾರ ಅಂದರೆ ಸರಕಾರ ಸೇರಿದಂತೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಹೊಂದಿದ್ದ ಠೇವಣಿದಾರರು, ಸಾಲ ಪಡೆದ ಗ್ರಾಹಕರು ಮತ್ತು ಸಮಾಜ ಇವರೆಲ್ಲರೊಂದಿಗೆ ಸಂಬಂಧ ಹಾಗೂ ಬಾಂಧವ್ಯ ಬೆಳೆಸುವ ಪ್ರಯತ್ನಕ್ಕೆ ಸಿಂಡಿಕೇಟ್ ಬ್ಯಾಂಕ್ ಡಾ| ಪೈಗಳ ಕಾಲದಿಂದಲೂ ಒತ್ತು ನೀಡುತ್ತಿತ್ತು ಎಂದು ಕೆ.ಕೆ. ಪೈ ಹೇಳುತ್ತಿದ್ದರು. ಈ ಪ್ರಯತ್ನವನ್ನು ಕೆ. ಕೆ. ಪೈ ಕೂಡ ಮುಂದುವರಿಸಿದರು. ಅವರ ಪ್ರಕಾರ ಬ್ಯಾಂಕಿನ ಆಡಳಿತ ವರ್ಗ ಮತ್ತು ನಿರ್ದೇಶಕ ಮಂಡಲಿ ಬ್ಯಾಂಕಿನ ಉತ್ತಮ ಸಾಂಸ್ಥಿಕ ಅಥವಾ ನೈಗಮಿಕ ನಡತೆಗೆ ಯಾವಾಗಲೂ ಮಹತ್ವ ನೀಡುತ್ತಿದ್ದವು.
ನೀತಿ, ಧೋರಣೆಗಳನ್ನು ರೂಪಿಸಿ ಅಳವಡಿಸಿಕೊಳ್ಳುವಾಗ ಅವು ದೇಶದ ಕಾಯಿದೆ – ಕಾನೂನುಗಳಿಗನುಗುಣವಾಗಿ ಮತ್ತು ಆರ್.ಬಿ.ಐ.ಯ ಮಾರ್ಗದರ್ಶಿ ತತ್ವಗಳಿಗನುಸಾರವಾಗಿ ಇರುವಂತೆ ಬ್ಯಾಂಕ್ ಯಾವಾಗಲೂ ನೋಡಿಕೊಳ್ಳುತ್ತಿತ್ತು. ಸರಕಾರ ಮಾತ್ರ ಬ್ಯಾಂಕಿನ ಷೇರುಗಳನ್ನು ಹೊಂದಿದ್ದ ಆ ಕಾಲದಲ್ಲೂ ಸರಕಾರ ಬಯಸುತ್ತಿದ್ದ ಷೇರುದಾರ ಮೌಲ್ಯ ಸೃಷ್ಟಿಗೆ ಬ್ಯಾಂಕ್ ಒತ್ತು ನೀಡುತ್ತಿತ್ತು. ಸರಕಾರ, ಠೇವಣಿದಾರರು, ಸಾಲ ಪಡೆದ ಗ್ರಾಹಕರು, ನೌಕರರು, ಪಿಗ್ಮಿ ಏಜೆಂಟ್‌ಗಳು -ಇವರೆಲ್ಲರಿಗೆ ಸಂಬಂಧಿಸಿದಂತೆ ಬ್ಯಾಂಕ್ ತನ್ನ ಜವಾಬ್ದಾರಿ ನಿರ್ವಹಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿತ್ತು ಎಂದು ಕೆ.ಕೆ. ಪೈ ನಮಗೆ ಪ್ರಯಾಣದ ವೇಳೆ ವಿವರಿಸಿದರು. ಕೆ.ಕೆ. ಪೈ ಹೇಳಿದ ಪ್ರಕಾರ ಎಲ್ಲ ಮಹತ್ವದ ನಿರ್ಧಾರಗಳನ್ನು ನಿರ್ದೇಶಕ ಮಂಡಲಿಯ ಸಭೆಗಳಲ್ಲಿ ವಿಸ್ತೃತ ಹಾಗೂ ಮುಕ್ತ ಚರ್ಚೆಯ ಅನಂತರವೇ ತೆಗೆದುಕೊಳ್ಳಲಾಗುತ್ತಿತ್ತು.
ಸಮತೋಲನ ಪ್ರಕ್ರಿಯೆ
ಪರಸ್ಪರ ವಿರುದ್ಧವಿರುವ ಗುರಿಗಳನ್ನು ಹೊಂದಿರುವ ಠೇವಣಿದಾರರು, ಷೇರುದಾರರು, ಸಾಲ ಪಡೆದ ಗ್ರಾಹಕರು ಇವರೆಲ್ಲರ ಗುರಿಗಳ ನಡುವೆ ಸಮತೋಲನದ ಸಾಧನೆ ಅತಿಮುಖ್ಯ ಎಂದು ಕೆ.ಕೆ. ಪೈ ಹೇಳುತ್ತಿದ್ದರು. ಅವರ ಪ್ರಕಾರ ಈ ಸಮತೋಲನ ಪ್ರಕ್ರಿಯೆಗೆ ಡಾ| ಪೈಗಳ ಕಾಲದಿಂದಲೂ ಒತ್ತು ಇತ್ತು. ಷೇರುದಾರರು ಅತಿ ಹೆಚ್ಚಿನ ದರದ ಡಿವಿಡೆಂಡ್ ಬಯಸುತ್ತಾರೆ, ಠೇವಣಿದಾರರಿಗೆ ಅತಿ ಹೆಚ್ಚಿನ ದರದ ಬಡ್ಡಿ ಬೇಕು, ಸಾಲ ಪಡೆದ ಗ್ರಾಹಕರಿಗೆ ಸಾಲದ ಮೇಲಿನ ಬಡ್ಡಿ ಅತಿ ಕಡಿಮೆಯಿರಬೇಕು. ಆದರೆ ಆಡಳಿತ ಮಂಡಲಿಗೆ ಹೆಚ್ಚು ಲಾಭ ಗಳಿಸಿ, ಹೆಚ್ಚು ರಿಸರ್ವ್ಸ್
ಸೃಷ್ಟಿಸುವ ಗುರಿಯಿರುತ್ತದೆ. ಉತ್ತಮ ಹಾಗೂ ಪರಿಣಾಮಕಾರಿ ಆಡಳಿತದಲ್ಲಿ ಇಂತಹ ಸಮತೋಲನ ಪ್ರಕ್ರಿಯೆಗೆ ಮಹತ್ವ ನೀಡುವ ಅಗತ್ಯವಿದೆ ಎಂದು ಕೆ.ಕೆ. ಪೈ ನಮಗೆ ವಿವರಿಸಿದರು.
ಪಾರದರ್ಶಕತೆಗೆ ಒತ್ತು
ಆಡಳಿತದಲ್ಲಿ ಪಾರದರ್ಶಕತೆಗೆ ಸಿಂಡಿಕೇಟ್ ಬ್ಯಾಂಕ್ ಯಾವಾಗಲೂ ಒತ್ತು ನೀಡುತ್ತಿತ್ತು ಎಂದು ಕೆ.ಕೆ. ಪೈ ಹೇಳುತ್ತಿದ್ದರು. ಅವರ ಪ್ರಕಾರ ಬ್ಯಾಂಕಿನ ವಾರ್ಷಿಕ ವರದಿಗಳಲ್ಲಿ ಸಂಬಂಧಪಟ್ಟ ಎಲ್ಲರಿಗೂ ಬೇಕಾದ ಎಲ್ಲ ವಿವರಗಳನ್ನು ಮತ್ತು ಮಾಹಿತಿಯನ್ನು ಒದಗಿಸಲಾಗುತ್ತಿತ್ತು. 1970ರ ದಶಕದಲ್ಲಿ ನಾನು ಕೆ.ಕೆ. ಪೈ ಅಧ್ಯಕ್ಷರಾಗಿ ವಾರ್ಷಿಕ ವರದಿಯ ಕರಡು ಪ್ರತಿಯನ್ನು ಸ್ವತಃ ತಿದ್ದಿ ಸರಿಪಡಿಸುವುದನ್ನು ನೋಡಿದ್ದೇನೆ. ಎಷ್ಟೋ ಪುಟಗಳನ್ನು ಹೊಡೆದು ಹಾಕಿ, ಬೇರೆ ಹಾಳೆಗಳಲ್ಲಿ ತಮ್ಮ ಶೈಲಿಯಲ್ಲಿಯೇ ಅವರ ಕೈಯಲ್ಲಿ ಬರೆದದ್ದೂ ಉಂಟು. ಅಂಕೆಸಂಖ್ಯೆಗಳು ಮತ್ತು ಮಾಹಿತಿ ನಂಬಲರ್ಹವಾಗಿದ್ದು, ಎಲ್ಲರಿಗೂ ಸ್ವೀಕಾರಾರ್ಹವಾಗಬೇಕು; ಅದಕ್ಕಾಗಿ ಎಲ್ಲ ಅಂಕೆಸಂಖ್ಯೆಗಳನ್ನು ಅವರು ಸ್ವತಃ ಪರಿಶೀಲಿಸಿ ಸರಿಯಾಗಿದೆ ಎಂದು ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ವಾರ್ಷಿಕ ವರದಿಯ ಕರಡು ಪ್ರತಿಯ ಗುಣಮಟ್ಟ ಕೂಡ ಉತ್ತಮವಿರುವಂತೆ ಕೆ.ಕೆ. ಪೈ ನೋಡಿಕೊಳ್ಳುತ್ತಿದ್ದರು.
ಉತ್ತಮ ಪ್ರಶಾಸನದಿಂದ ಉನ್ನತ ಸಾಧನೆ
ಕೆ.ಕೆ. ಪೈ 1970ರಲ್ಲಿ ಬ್ಯಾಂಕಿನ ದ್ವಿತೀಯ ಕಸ್ಟೋಡಿಯನ್ ಆದರು ಮತ್ತು 1972ರಲ್ಲಿ ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಪ್ರಥಮ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾದರು. ಎಂಟು ವರ್ಷಗಳಿಗಿಂತಲೂ ಹೆಚ್ಚು ಕಾಲ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಕೆ.ಕೆ. ಪೈ ಉತ್ತರದ ರಾಜ್ಯಗಳು ಮತ್ತು ಅಂಡಮಾನ್ ನಿಕೋಬಾರ್ ಹಾಗೂ ಲಕ್ಷದ್ವೀಪ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶಾಖಾ ವಿಸ್ತರಣೆ ಮಾಡಿ ಬ್ಯಾಂಕಿಗೆ ಅಖೀಲಭಾರತ ವ್ಯಾಪ್ತಿ ಹಾಗೂ ಖ್ಯಾತಿಯನ್ನು ಒದಗಿಸಿದವರು. ಅವರ ಕಾಲದಲ್ಲಿ ಬ್ಯಾಂಕು ಸಾಧನೆಯ ಶಿಖರವನ್ನೇರಿತು ಮತ್ತು ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿತು. ಲಂಡನ್ ಶಾಖೆಯ ಆರಂಭ, ಗ್ರಾಮೀಣ ಬ್ಯಾಂಕುಗಳ ಸ್ಥಾಪನೆ, ಗೋಲ್ಡನ್ ಜ್ಯುಬಿಲಿ ಹಾಲ್‌ನ ನಿರ್ಮಾಣ ಇವೆಲ್ಲವೂ ಕೆ.ಕೆ. ಪೈಗಳಿಂದ ಸಾಧ್ಯವಾಯಿತು. 1970ರ ದಶಕದಲ್ಲೇ ಬ್ಯಾಂಕಿನಲ್ಲಿ ಉತ್ತಮ ಹಾಗೂ ಪರಿಣಾಮಕಾರಿ ನೈಗಮಿಕ ಪ್ರಶಾಸನ ವ್ಯವಸ್ಥೆಯನ್ನು ಕೆ.ಕೆ. ಪೈ ಅಳವಡಿಸಿಕೊಂಡರು ಮತ್ತು ಬ್ಯಾಂಕ್ ಒಂದು ಉತ್ತಮ ಹಾಗೂ ಜವಾಬ್ದಾರಿಯುತ ಸಾಂಸ್ಥಿಕ ನಾಗರಿಕನ ರೂಪದಲ್ಲಿ ಪ್ರಾಮಾಣಿಕ ಕಾರ್ಯಾಚರಣೆ ನಡೆಸಿ ಸಾಮಾಜಿಕ ಧ್ಯೇಯೋದ್ದೇಶಗಳ ಸಾಧನೆಗೆ ಮತ್ತು
ಸಮಾಜದ ಆಶೋತ್ತರಗಳ ಈಡೇರಿಕೆಗೆ ಶ್ರಮಿಸುವಂತೆ ಮಾಡಿದರು. ಈ ಪ್ರಯತ್ನದಲ್ಲಿ ಇಡೀ ನಿರ್ದೇಶಕ ಮಂಡಲಿಯ ಸಹಭಾಗಿತ್ವವನ್ನು ಕೆ.ಕೆ. ಪೈ ಗಳಿಸಿಕೊಂಡಿದ್ದರು. ಕೆ.ಕೆ. ಪೈಯವರ ಅಧಿಕಾರಾವಧಿ (1970ರ ಮಾರ್ಚ್‌ನಿಂದ 1978ರ ಎಪ್ರಿಲ್ 22)ಯಲ್ಲಿ ಬ್ಯಾಂಕ್ ಪ್ರತಿವರ್ಷ ಶೇ. 20ಕ್ಕಿಂತ ಹೆಚ್ಚಿನ ದರದಲ್ಲಿ ಠೇವಣಿ ಹೆಚ್ಚಳ ಮತ್ತು ಸುಮಾರು ಅಷ್ಟೇ ದರದಲ್ಲಿ ಗ್ರಾಹಕರಿಗೆ ನೀಡಿದ ಒಟ್ಟು ಸಾಲಗಳ ಹೆಚ್ಚಳ ಸಾಧಿಸಿಕೊಂಡಿತು. ಬ್ಯಾಂಕು ಲಾಭ ಗಳಿಕೆಯಲ್ಲಿಯೂ ಉತ್ತಮ ಸಾಧನೆ ತೋರಿಸಿತು. ಲಾಭ ಗಳಿಕೆಯಲ್ಲಿ ಬ್ಯಾಂಕು ವಾರ್ಷಿಕ ಸುಮಾರು ಶೇ. 25ರಷ್ಟರ ಹೆಚ್ಚಳ ಸಾಧಿಸಿಕೊಂಡಿತು. ಉತ್ತಮ ಪ್ರಶಾಸನದಿಂದ ಇಂತಹ ಉನ್ನತ ಸಾಧನೆ ಸಾಧ್ಯವಾಗಿತ್ತು.
– ಡಾ| ಕೆ. ಕೆ. ಅಮ್ಮಣ್ಣಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.