ಕೌಟುಂಬಿಕ ಆರೋಗ್ಯ, ಸಾಮರಸ್ಯ ಮತ್ತು ಮದ್ಯನಿಷೇಧ
Team Udayavani, Aug 6, 2017, 2:05 AM IST
ಬಿಹಾರದಲ್ಲಿ ಮದ್ಯ ಮಾರಾಟದ ಮೇಲೆ ಅಲ್ಲಿಯ ಸರಕಾರ ನಿಷೇಧ ಹೇರಿರುವ ಬೆನ್ನಲ್ಲಿಯೇ ಈಗ ಆಂಧ್ರಪ್ರದೇಶ ಸರಕಾರ ಕೂಡ ಅಂಥದೇ ತೀರ್ಮಾನವನ್ನು ತೆಗೆದುಕೊಂಡು ಇಡೀ ದೇಶದ ಗಮನ ಸೆಳೆದಿದೆ. ಮದ್ಯ ನಿಷೇಧ ಎನ್ನುವುದು ಕೇವಲ ಅದಷ್ಟೇ ಅಲ್ಲದೆ ಜನರ ಆರೋಗ್ಯ, ಆರ್ಥಿಕತೆ, ಕೌಟುಂಬಿಕ ಸಾಮರಸ್ಯಗಳಿಗೂ ಸಂಬಂಧಿಸಿದೆ ಎನ್ನುವುದನ್ನು 2015-16ರಲ್ಲಿ ಮಾಡಲಾದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯು ಬಹಿರಂಗಗೊಳಿಸಿದೆ.
ಮುಂಬೈನ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ವಿಭಾಗವು ಈ ಸಮೀಕ್ಷೆಯನ್ನು ನಡೆಸಿತ್ತು. ಸುಮಾರು 6,01,509ರಷ್ಟು ದೇಶದ ಬೇರೆ ಬೇರೆ ರಾಜ್ಯಗಳ ಕುಟುಂಬಗಳನ್ನು ಅಧ್ಯಯನ ಮತ್ತು ಸಮೀಕ್ಷೆಗಾಗಿ ಆಯ್ಕೆಮಾಡಲಾಗಿತ್ತು. ಮುಖ್ಯವಾಗಿ 6,99,686 ಮಹಿಳೆಯರನ್ನು ಮತ್ತು 1,03,525 ಪುರುಷರ ಮೂಲಕ ಮಾಹಿತಿ ಕಲೆಹಾಕಲಾಗಿತ್ತು. ಕೌಟುಂಬಿಕ ಆರೋಗ್ಯದ ಮೇಲೆ ತಂಬಾಕು ಮತ್ತು ಮದ್ಯಸೇವನೆಯ ಪರಿಣಾಮಗಳೇನು? ಎನ್ನುವ ಬಗ್ಗೆ ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸಲಾಗಿತ್ತು. ಈ ಸಮೀಕ್ಷೆಯ ಪ್ರಕಾರ ಈಚೆಗಷ್ಟೇ ಹೊಸ ರಾಜ್ಯವಾಗಿ ಪ್ರತ್ಯೇಕವಾಗಿರುವ ತೆಲಂಗಾಣ ರಾಜ್ಯ ಮದ್ಯಸೇವನೆಯ ವಿಷಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿ ಅನುಕ್ರಮವಾಗಿ ಛತ್ತೀಸಗಡ್ ಮತ್ತು ತಮಿಳುನಾಡುಗಳಿವೆ. ಇಡೀ ದೇಶದಲ್ಲಿ ತೀರಾ ಕಡಿಮೆ ಪ್ರಮಾಣದ ಮದ್ಯ ಸೇವನೆ ದಿಲ್ಲಿಯಲ್ಲಿದ್ದು ಅದು 24.7 ಪ್ರತಿಶತದಷ್ಟಿದೆ. ಮೇಲೆ ಹೇಳಿದಂತೆ ಕೌಟುಂಬಿಕ ಸರಸ ಮತ್ತು ವಿರಸಕ್ಕೂ ಮದ್ಯಸೇವನೆ ಕಾರಣವಾಗಬಲ್ಲದು. ಯಾಕೆಂದರೆ ಕೌಟುಂಬಿಕ ದೌರ್ಜನ್ಯದ ವಿಷಯದಲ್ಲಿಯೂ ತೆಲಂಗಾಣವೇ ಮುಂಚೂಣಿಯಲ್ಲಿದೆ. ಕೌಟುಂಬಿಕ ದೌರ್ಜನ್ಯದ ಪ್ರಮಾಣ ಅಲ್ಲಿ 43 ಪ್ರತಿಶತದಷ್ಟಿದ್ದು ಇದು ಕೂಡ ಇಡೀ ದೇಶದಲ್ಲಿಯೇ ಹೆಚ್ಚು ಎನ್ನುವಂತಿದೆ. ಕೌಟುಂಬಿಕ ಹಿಂಸೆಯ ಪ್ರಮಾಣದಲ್ಲಿ ಕೇರಳ ರಾಜ್ಯ ಅತ್ಯಂತ ಕಡೆಯ ಸ್ಥಾನದಲ್ಲಿದೆ.
ಮದ್ಯ ಸೇವನೆ ಎನ್ನುವುದು ಉಚಿತವಾಗಿ ಸಾಧ್ಯವಿಲ್ಲ. ಪುರುಷರು ತಮ್ಮ ದುಡಿಮೆಯ ಬಹುಭಾಗವನ್ನು ಇದಕ್ಕೆ ವ್ಯಯಿಸುವುದರಿಂದ ಅದರಲ್ಲೂ ಕೃಷಿಕಾರ್ಮಿಕರಾಗಿ ಕೆಲಸ ಮಾಡುವವರು ಮತ್ತು ಇತರೆ ದೈಹಿಕ ಶ್ರಮ ಮಾಡುವವರು ತಮಗೆ ಬಂದ ಆದಾಯದಲ್ಲಿ ಅರ್ಧದಷ್ಟನ್ನು ಮದ್ಯ ಮತ್ತು ತಂಬಾಕು ಸೇವನೆಗೆ ಖರ್ಚು ಮಾಡುವದರಿಂದ ಕುಟುಂಬದ ಖರ್ಚು ವೆಚ್ಚದ ನಿರ್ವಹಣೆಯಲ್ಲಿ ಅಡಚಣೆಗಳು ಆರಂಭವಾಗುತ್ತವೆ. ಇದು ನೇರವಾಗಿ ಕುಟುಂಬದ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕಕ್ಕೆ ಸಂಬಂಧಿಸಿ ಈ ಸಮೀಕ್ಷೆಯಲ್ಲಿ ಒಂದು ಕಪ್ಪು ಚುಕ್ಕೆ ಎನ್ನುವಂತಹ ಮಾಹಿತಿಯಿದೆ.
ಗರ್ಭಿಣಿಯರ ಮೇಲೆ ನಡೆಯಲಾದ ದೌರ್ಜನ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅದರ ಅನಂತರದ ಸ್ಥಾನದಲ್ಲಿ ತಮಿಳುನಾಡು ಮತ್ತು ತೆಲಂಗಾಣಗಳಿವೆ. ಕರ್ನಾಟಕದಲ್ಲಿ ಗರ್ಭಿಣಿಯರ ಮೇಲಿನ ಹಿಂಸಾ ಪ್ರಮಾಣ 6.5 ಪ್ರತಿಶತದಷ್ಟಿದ್ದರೆ, ತಮಿಳುನಾಡಿನಲ್ಲಿ ಅದು 6.2 ಪ್ರತಿಶತದಷ್ಟಿದೆ. “ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ’ ಎನ್ನುವ ಮಾತು ಮದ್ಯನಿಷೇಧ ಹೇಗೆ ನೇರವಾಗಿ ಕೌಟುಂಬಿಕ ಆರೋಗ್ಯದೊಂದಿಗೆ ಸಂಬಂಧ ಹೊಂದಿದೆ ಎನ್ನುವುದನ್ನು ಮನದಟ್ಟಾಗಿಸುತ್ತದೆ. ನಮ್ಮ ಜನಪದರು ಕೂಡ “ಕೊಡು ತಾಯಿ ವರವ ಕುಡಕನಲ್ಲದ ಗಂಡನ’ ಎಂದು ಕೋರಿಕೊಂಡಿರುವ ಉದಾಹರಣೆಯಿದೆ. ಉತ್ತರಪ್ರದೇಶದಲ್ಲಿ ಒಬ್ಬ ವರ ಮಹಾಶಯ ಮದುವೆಯ ಹಿಂದಿನ ದಿನ ತನ್ನ ಗೆಳೆಯರ ಜತೆಗೆ ಕುಳಿತು ರಾತ್ರಿಯಿಡೀ ಗುಂಡು ಹಾಕಿದ. ಬೆಳಿಗ್ಗೆ ಮದುವೆಯ ಸಂಭ್ರಮದ ವೇಳೆಯಲ್ಲಿ ಹುಡುಗಿ ಅವನ ಕುತ್ತಿಗೆಗೆ ಹಾರ ಹಾಕುವಾಗ ಆತ ಅಮಲಿನಲ್ಲಿಯೇ ಇದ್ದ. ಅದನ್ನು ಗಮನಿಸಿದ ಆ ವಧು ಇಂಥ ಕುಡುಕನನ್ನು ತಾನು
ಮದುವೆಯಾಗುವುದಿಲ್ಲ ಎಂದು ಆ ವರನ ಜೊತೆಗೆ ಮದುವೆಯನ್ನೂ ಧಿಕ್ಕರಿಸಿದಳು.
ಮದ್ಯನಿಷೇಧ ಎನ್ನುವುದು ಕುಡಿಯುವವನ ಮೇಲಿನ ನಿರ್ಬಂಧವಲ್ಲ. ಮದ್ಯ ನಿಷೇಧದ ಬೆನ್ನಲ್ಲಿಯೇ ಕಳ್ಳಭಟ್ಟಿ ವ್ಯವಹಾರಗಳು ಕೂಡ ಚುರುಕುಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಜತೆಗೆ ಗಡಿ ಭಾಗದಲ್ಲಿ ಆ ವ್ಯವಹಾರಗಳು ಇನ್ನಷ್ಟು ಜೋರಾಗುತ್ತವೆ. ಮನೆಯ ಯಜಮಾನನೆನಿಸಿಕೊಂಡವನು ಕುಡಿಯುವುದನ್ನು ಬಿಟ್ಟರೆ ಮೊದಲು ಖುಷಿಯಾಗುವ ವ್ಯಕ್ತಿ ಅವನ ಪತ್ನಿ, ಅನಂತರ ಮಕ್ಕಳು. ಮದ್ಯ ನಿಷೇಧ ಎನ್ನುವುದು ಕುಡುಕನನ್ನು ಅದರಿಂದ ವಿಮುಕ್ತಗೊಳಿಸುತ್ತದೆ ಎಂದು ಹೇಳಲಾಗುವುದಿಲ್ಲ. ಈಗಾಗಲೇ ನಿಷೇಧಿತ ಪ್ರದೇಶಗಳಲ್ಲಿ ವ್ಯಸನಿಗಳು ಆ ಚಟವನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿಲ್ಲ. ಅವರೆಲ್ಲ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿರುವುದಿದೆ. ಮದ್ಯ ಸೇವಿಸುವವರಲ್ಲಿ ನಶೆಯಾಗಬೇಕು ಎಂದು ಸೇವಿಸುವವರ ಪ್ರಮಾಣವೇ ಹೆಚ್ಚಾಗಿದೆ. ಕುಡಿದೂ ಕುಡಿಯದಂತಹ ಸ್ಥಿತಿಯಲ್ಲಿರುವವರು ಯಾವ ಕಾಲಕ್ಕೂ ಅಪಾಯಕಾರಿಯಲ್ಲ. ಅವರು ಸಮಸ್ಯೆಯ ಭಾಗವಾಗಿ ಗುರುತಿಸಿಕೊಂಡವರಲ್ಲ, ಬದಲಾಗಿ ಸಮಾಜ ಸ್ವೀಕೃತರು. ಸೋಶಿಯಲ್ ಡ್ರಿಂಕÕ… ಎನ್ನುವುದು ಇಂಥವರಿಂದ, ಇಂಥವರಿಗಾಗಿಯೇ. ವಿಪರೀತ ಸೇವಿಸಿ ತೂರಾಡುತ್ತ, ಬೀಳುತ್ತ ಏಳುತ್ತ, ಚೀರಾಡುತ್ತ ಮನೆಗೆ ತೆರಳಿ ಹೆಂಡತಿ ಮಕ್ಕಳ ಮೇಲೆ ಹÇÉೆ ಮಾಡುವವರು ಹೆಚ್ಚು ಅಪಾಯಕಾರಿ. ಮದ್ಯ ನಿಷೇಧ ಎನ್ನುವುದು ಈ ಬಗೆಯ ಕುಡುಕರನ್ನು ತಕ್ಕ ಮಟ್ಟಿಗಾದರೂ ನಿಯಂತ್ರಿಸುತ್ತದೆ ಎನ್ನುವ ಸಮಾಧಾನದ ನಡುವೆ ಈ ನಿಷೇಧವನ್ನು ಸ್ವಾಗತಿಸಬೇಕು.
ರಷ್ಯಾ ದೇಶದ ಖ್ಯಾತ ಸಾಹಿತಿ ಟಾಲಸ್ಟಾಯ್ ಮದ್ಯದ ಬಗ್ಗೆ ಸಾಕಷ್ಟು ಕತೆಗಳನ್ನು ಬರೆದಿರುವವರು. ಅವುಗಳಲ್ಲಿ “ಇಂಪ್ ಆಂಡ್ ದ ಕ್ರಸ್ಟ’ ಎನ್ನುವ ಕತೆಯೂ ಒಂದು. ಮದ್ಯ ಎಂಥ ಸಂಭಾವಿತನನ್ನೂ ಕ್ರೂರಿಯಾಗಿಸಬಲ್ಲದು ಎನ್ನುವುದನ್ನು ಈ ಕತೆ ಪ್ರತಿಪಾದಿಸುತ್ತದೆ. ಆ ಕತೆಯಲ್ಲಿ ಒಬ್ಬ ಸಂಭಾವಿತ ರೈತನಿರುತ್ತಾನೆ. ಅವನಿಗೆ ಸಿಟ್ಟೆಂಬುದೇ ಇರುವದಿಲ್ಲ. ಅವನಿಗೆ ಹೇಗಾದರೂ ಮಾಡಿ ಸಿಟ್ಟು ಬರಿಸಬೇಕು ಎಂದು ಒಂದು ದೊಡ್ಡ ಸೈತಾನ್ ಸಂಚು ರೂಪಿಸುತ್ತದೆ. ಅದು ತನ್ನ ಬಳಿ ಇರುವ ಆಳು ಸೈತಾನ್‌ನ್ನು ಕರೆದು ಹೇಗಾದರೂ ಮಾಡು, ಆ ರೈತ ಸಿಟ್ಟಿಗೇಳುವಂತೆ ಮಾಡು ಎಂದು ಆದೇಶಿಸಿ ಕಳುಹಿಸುತ್ತಾನೆ. ಆ ಆಳು ಸೈತಾನ್ ಸೀದಾ ರೈತನ ಗ¨ªೆಗೆ ಬರುತ್ತದೆ. ರೈತ ನೇಗಿಲು ಹೊಡೆಯುವ ಸಂದರ್ಭದಲ್ಲಿ ಅವನ ಊಟವನ್ನು ಕದಿಯುತ್ತದೆ. ರೈತ ಕೆಲಸ ಮುಗಿಸಿ ಬಂದು ಹಸಿವಿನಿಂದ ಬುತ್ತಿಯನ್ನು ಹುಡುಕುತ್ತಾನೆ. ಕಾಣುವುದಿಲ್ಲವಾದರೂ ರೈತ ಎಳ್ಳಷ್ಟೂ ಬೇಸರಿಸಿಕೊಳ್ಳುವದಿಲ್ಲ. ತನಗಿಂತಲೂ ಹಸಿದವರಾರೋ ಊಂಡಿರಬೇಕು ಎಂದುಕೊಳ್ಳುತ್ತಾನೆ. ಆಗ ಆ ಸೈತಾನ್ ತನ್ನ ಯಜಮಾನ ಸೈತಾನ್ ಬಳಿ ತೆರಳಿ ತಾನು ಸೋತ ಬಗ್ಗೆ ಹೇಳುತ್ತದೆ. ಆ ದೊಡ್ಡ ಸೈತಾನ್ ಇನ್ನೊಂದು ಉಪಾಯ ಹೇಳಿ ಅದನ್ನು ಕಳುಹಿಸಿಕೊಡುತ್ತದೆ. ಆಗ ಆ ಸೈತಾನ್ ಒಬ್ಬ ಕೂಲಿ ಅಳಿನ ವೇಷದಲ್ಲಿ ಅಲ್ಲಿಗೆ ಬರುತ್ತಾನೆ ರೈತನ ಹೊಲದಲ್ಲಿ ಕೆಲಸಕ್ಕೆ ಸೇರುತ್ತಾನೆ. ರೈತನಿಗೆ ಈ ಬಾರಿ ಮಳೆ ಚೆನ್ನಾಗಿದೆ, ಗೋಧಿ ಬೆಳೆಯಿರಿ ಎನ್ನುತ್ತಾನೆ. ಆ ರೈತ ಗೋಧಿ ಬಿತ್ತುತ್ತಾನೆ. ನಂಬಲಾಗದ ಇಳುವರಿ ಬರುತ್ತದೆ. ಬಂದ ಬೆಳೆ ಏನು ಮಾಡುವದೆಂದು ತೋಚದೇ ಕಂಗಾಲಾಗುತ್ತಾನೆ. ಆಗ ಆ ಸೈತಾನ್ ಅದರಿಂದ ಮದ್ಯವನ್ನು ತಯಾರಿಸಬಹುದು ಎಂದು ಸಲಹೆ ನೀಡುತ್ತದೆ. ರೈತ ಮದ್ಯ ತಯಾರಿಸಿ ಎಲ್ಲ ನೆರೆಹೊರೆಯ ಗೆಳೆಯರನ್ನು ಆಹ್ವಾನಿಸಿ ಔತಣಕೂಟ ಇಟ್ಟುಕೊಳ್ಳುತ್ತಾನೆ. ಅಲ್ಲಿ ಬಂದವರೆಲ್ಲ ಮದ್ಯ ಸೇವಿಸಿ ಖುಷಿಯಿಂದ ಓಲಾಡುತ್ತಾರೆ. ಅದೇ ವೇಳೆಯಲ್ಲಿ ರೈತನ ಹೆಂಡತಿ ಮದ್ಯದ ಗ್ಲಾಸೊಂದನ್ನು ತರುವಾಗ ಕೈಜಾರಿ ಕೆಳಗೆ ಬಿದ್ದುಹೋಯಿತು. ರೈತ ಸಿಟ್ಟಿನಿಂದ ಆಕೆಯ ಕೆನ್ನೆಗೆ ಜೋರಾಗಿ ಹೊಡೆದ. ಸೈತಾನ್‌ಗೆ ಖುಷಿಯಾಯಿತು. ಎಲ್ಲರೂ ಮದ್ಯ ಸೇವಿಸಿ ನಾಯಿ ನರಿಗಳಂತೆ ಕಚ್ಚಾಡತೊಡಗಿದರು. ಆಗ ಆ ಆಳು ಸೈತಾನ್ ತನ್ನ ಯಜಮಾನ ಸೈತಾನ್‌ನ ಬಳಿಗೆ ತೆರಳಿ ರೈತ ಸಿಟ್ಟಿಗೆದ್ದದ್ದು, ಹೆಂಡತಿಗೆ ಹೊಡೆದದ್ದು, ಅವರೆಲ್ಲ ನಾಯಿ, ತೋಳ, ನರಿಗಳಂತೆ ಕಚ್ಚಾಡುವ ಬಗ್ಗೆ ಹೇಳುತ್ತ, ಮದ್ಯದಲ್ಲಿ ನೀವೇನಾದರೂ ಆ ಪ್ರಾಣಿಗಳ ರಕ್ತ ಬೆರೆಸಿದ್ದಿರೋ ಹೇಗೆ? ಎಂದು ಆಳು ಸೈತಾನ್ ಕೇಳುತ್ತದೆ. ಆಗ ಯಜಮಾನ ಸೈತಾನ್, “ಇಲ್ಲ ನಾನೇನೂ ಸೇರಿಸಿಲ್ಲ. ಆ ರಕ್ತ ಮನುಷ್ಯನಲ್ಲಿ ಮೊದಲೇ ಇದೆ. ಅದು ಅವನು ಮದ್ಯ ಸೇವಿಸಿದಾಗ ಜಾಗೃತವಾಗುತ್ತದೆ’ ಎನ್ನುತ್ತದೆ.
ಗಾಂಧೀಜಿಯವರು ಕೂಡ ಮದ್ಯ ಮನುಷ್ಯನಲ್ಲಿಯ ಪಾಶವೀ ಗುಣಗಳನ್ನು ಜಾಗೃತಗೊಳಿಸುತ್ತದೆ ಎನ್ನುತ್ತಿದ್ದರು. ಹಾಗಾಗಿಯೇ ಆವರು ತಮ್ಮ ಬದುಕಿನುದ್ದಕ್ಕೂ ಮದ್ಯ ನಿಷೇಧಕ್ಕಾಗಿ ಚಳುವಳಿಯನ್ನು ಸಂಘಟಿಸಿದ್ದರು. ವೈಪರೀತ್ಯವೆಂದರೆ ಜೀವನಪರ್ಯಂತ ಮದ್ಯವಿರೋಧಿ ಆಂದೋಲನ ಮಾಡಿದ್ದ ಗಾಂಧೀಜಿಯವರ ಮೊದಲ ಮಗ ಹರಿಲಾಲ್ ದೊಡ್ಡ ಕುಡುಕನಾದದ್ದು. ಮದ್ಯ ನಿಷೇಧ ಎನ್ನುವುದು ಕುಡುಕರ ಮನಃಪರಿವರ್ತನೆಗೆ ನೆರವಾದರೆ ನಿಷೇಧದ ಕ್ರಮ ಸ್ತುತ್ಯಾರ್ಹವೆನಿಸುತ್ತದೆ.
– ಡಾ| ಎಸ್. ಬಿ. ಜೋಗುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.