ಕತಾರ್ ಫುಟ್ ಬಾಲ್ ವಿಶ್ವಕಪ್‌ಗೆ ಸಾವಿನ ಸೂತಕ ಛಾಯೆ
ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಶಾಪ
Team Udayavani, Nov 17, 2022, 7:40 AM IST
ನ.20ರಿಂದ ಫಿಫಾ ಫುಟ್ ಬಾಲ್ ವಿಶ್ವಕಪ್ ಕತಾರ್‌ನಲ್ಲಿ ಆರಂಭವಾಗಲಿದೆ. ಈ ಪುಟ್ಟ ಅರಬ್ ದೇಶಕ್ಕೆ 2010ರಲ್ಲಿ ಆತಿಥ್ಯದ ಹೊಣೆ ನೀಡಲಾಯಿತು. ಅಂದಿನಿಂದ ಇಂದಿನವರೆಗೆ ಈ ಕೂಟ ನಿರಂತರವಾಗಿ ವಿವಾದಗಳ ಸರಮಾಲೆಯಲ್ಲಿ ಸಿಲುಕಿದೆ. ಇದರ ನಡುವೆ ಇನ್ನೊಂದು ವಿಚಾರ ಈ ಕೂಟವನ್ನು ಬಹಳ ಪ್ರಮಾಣದಲ್ಲಿ ಕಾಡುತ್ತಿದೆ. ಮೈದಾನಗಳ ನಿರ್ಮಾಣಕ್ಕೆಂದು ವಲಸೆ ಕಾರ್ಮಿಕರಾಗಿ ಹೋದ ನೂರಾರು ಭಾರತೀಯರು ಸಾವನ್ನಪ್ಪಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡಿಲ್ಲ, ಅವರ ಗೋಳನ್ನು ಕೇಳುವವರೂ ಇಲ್ಲವಾಗಿದೆ. ಈ ಸಮಸ್ಯೆಯ ಕುರಿತ ಸಂಕ್ಷಿಪ್ತ ಮಾಹಿತಿಗಳು ಇಲ್ಲಿವೆ.
ಭಾರತೀಯ ವಲಸೆ ಕಾರ್ಮಿಕರ ದಾರುಣ ಸಾವು
ದಿ ಗಾರ್ಡಿಯನ್ ಪತ್ರಿಕೆ ನೀಡಿರುವ ಮಾಹಿತಿ ಪ್ರಕಾರ ಕಳೆದ 10 ವರ್ಷಗಳಲ್ಲಿ ಕತಾರ್‌ಗೆ ವಲಸೆ ಹೋದ ಭಾರತೀಯ ನೌಕರರ ಪೈಕಿ; 2,711 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಬಹುತೇಕರು ಅಲ್ಲಿನ ಒತ್ತಡ, ಸವಾಲುಗಳಿಂದ ಮೃತಪಟ್ಟಿದ್ದಾರೆ. ಇನ್ನು ಈ ವರ್ಷ ಫೆ.11ರಂದು ಭಾರತ ಸರ್ಕಾರ ನೀಡಿದ ಮಾಹಿತಿ ಬಹಳ ಗಂಭೀರವಾಗಿದೆ. ಕಳೆದ ಐದೇ ವರ್ಷಗಳಲ್ಲಿ ಕತಾರ್‌ನಲ್ಲಿ 1,665 ಮಂದಿ ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ. ಇದರಲ್ಲಿ ಸಹಜ ಸಾವುಗಳೂ ಇವೆ, ಅಷ್ಟೇ ಅಸಹಜ ಸಾವುಗಳೂ ಇವೆ. ಈಗೇನೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಗೆದ್ದ ನಂತರ ಫಿಫಾ ಒಂದು ಹೇಳಿಕೆ ನೀಡಿ, ಕತಾರ್‌ನಲ್ಲಿ ಮಾನವ ಮತ್ತು ಕಾರ್ಮಿಕ ಹಕ್ಕುಗಳ ಸ್ಥಿತಿ ಸುಧಾರಿಸುತ್ತಿದೆ ಎಂದಿದೆ. ಆದರೆ ಮೃತಪಟ್ಟಿರುವ ಭಾರತೀಯ ಗೋಳುಗಳಿಗೆ ಉತ್ತರ ಸಿಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ.
ಕತಾರ್‌ನಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಹೇಗಿದೆ?
ಇಂಗ್ಲೆಂಡ್‌ನ ದಿ ಗಾರ್ಡಿಯನ್ ಪತ್ರಿಕೆ 2021ರಲ್ಲಿ ಪ್ರಕಟಿಸಿದ ವರದಿ ಪ್ರಕಾರ; ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಿಂದ ಕತಾರ್‌ಗೆ ಹೋದ ವಲಸಿಗರ ಪೈಕಿ ಕಳೆದ 10 ವರ್ಷಗಳಲ್ಲಿ 6,500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನ ರಾಯಭಾರ ಕಚೇರಿ ನೀಡಿದ ಮಾಹಿತಿ ಪ್ರಕಾರ 824 ಮಂದಿ ಆ ದೇಶದ ನಾಗರಿಕರು ಸಾವನ್ನಪ್ಪಿದ್ದಾರೆ. ಈ ಸಾವುಗಳೆಲ್ಲ ನೇರವಾಗಿ ಫಿಫಾ ವಿಶ್ವಕಪ್ ಸಿದ್ಧತೆಯ ಕಾರಣಕ್ಕೆ ಆಗಿದ್ದು ಎನ್ನುವಂತಿಲ್ಲ. ಕಾರಣ ಮೃತಪಟ್ಟವರನ್ನು ಅವರ ಉದ್ಯೋಗಗಳ ಮೂಲಕ ವರ್ಗೀಕರಿಸಿಲ್ಲ. ಈ ಬಗ್ಗೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ಮೈಗ್ರೆಂಟ್‌ರೈಟ್ಸ್.ಆರ್ಗ್‌ಗಳು ದನಿಯೆತ್ತಿ ಕತಾರ್‌ಗೆ ಛೀಮಾರಿ ಹಾಕಿವೆ. ಕೆಟ್ಟ ವಾತಾವರಣದಿಂದ ಕಟ್ಟಡ ನಿರ್ಮಾಣಗಳ ವೇಳೆ ಮೃತಪಟ್ಟ ಕಾರ್ಮಿಕರ ಮಾಹಿತಿ ಯಾಕೆ ಇಟ್ಟಿಲ್ಲ ಎಂದು ಪ್ರಶ್ನಿಸಿವೆ.
ಸತ್ತವರ ಪೈಕಿ ಕನಿಷ್ಠ 37 ಮಂದಿ ಫಿಫಾ ವಿಶ್ವಕಪ್ ಮೈದಾನಗಳ ನಿರ್ಮಾಣದ ಕಾರಣಕ್ಕೇ ಮೃತಪಟ್ಟಿದ್ದಾರೆ. ಈ ಪೈಕಿ 34 ಮಂದಿ ಕೆಲಸವನ್ನು ಹೊರತುಪಡಿಸಿದ ಇತರೆ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಅರ್ಥಾತ್ ವಿಪರೀತ ಒತ್ತಡ, ಕಿರಿಕಿರಿ, ಶೋಷಣೆಗಳು ಇಲ್ಲಿ ಕೆಲಸ ಮಾಡಿವೆ.
ಸತ್ತದ್ದಕ್ಕೆ ಸರಿಯಾದ ಕಾರಣಗಳೇ ಇಲ್ಲ!
ಸತ್ತಿದ್ದು ಯಾರು, ಏನು ಕೆಲಸ ಮಾಡುತ್ತಿದ್ದರು, ಅದಕ್ಕೆ ನಿಖರ ಕಾರಣಗಳೇನು? ಇವನ್ನು ಸರಿಯಾಗಿ ವಿಂಗಡಿಸಿಲ್ಲ. ಈಗ ಹುಟ್ಟಿಕೊಂಡಿರುವುದು ಇದೇ ಪ್ರಶ್ನೆ. ಸಾವಿಗೆ ಸರಿಯಾದ ಕಾರಣವನ್ನೇ ನಮೂದಿಸಿಲ್ಲ ಎಂದರೆ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವೂ ಸಿಗುವುದಿಲ್ಲ! ಸತ್ತವರ ಕಥೆ ಮುಗಿದರೂ, ಅವರನ್ನೇ ನಂಬಿಕೊಂಡವರು ಏನು ಮಾಡಬೇಕು? ಪರಿಹಾರ ಪಡೆದುಕೊಳ್ಳುವ ಮಾರ್ಗವಾದರೂ ಏನು? ಇದೇಕೆ ಹೀಗಾಗಿದೆ ಎನ್ನುವುದಕ್ಕೆ ಉತ್ತರಗಳೇ ಇಲ್ಲವಾಗಿದೆ.
ಈ ಸಾವುಗಳಿಗೆ ಕಾರಣವೇನು?
ಕತಾರ್ ಬಹಳ ಶ್ರೀಮಂತ ರಾಷ್ಟ್ರವಾಗಿದ್ದರೂ, ಅತ್ಯಂತ ಪುಟ್ಟ ರಾಷ್ಟ್ರವೂ ಹೌದು. 32 ದೇಶಗಳು ಸ್ಪರ್ಧಿಸುವ ಬೃಹತ್ ಫುಟ್‌ಬಾಲ್ ವಿಶ್ವಕಪ್ ಅನ್ನು ಸಂಘಟಿಸುವುದು ಸುಲಭದ ವಿಚಾರವಲ್ಲ. ಆ ದೇಶಕ್ಕೆ ಇದು ಅಸಾಧ್ಯವೆನ್ನಬಹುದಾದ ಕೆಲಸ. ಆದ್ದರಿಂದ ಅದು ಕನಿಷ್ಠ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಮಾಡಬೇಕಾದ ಒತ್ತಡ ಎದುರಿಸಿದೆ. ಅದೇ ಕಾರಣಕ್ಕೆ ಅಲ್ಲಿ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಸಾವುಗಳ ಸಂಖ್ಯೆ ಹೆಚ್ಚಲು ಇದು ಮುಖ್ಯ ಕಾರಣ. ಒಂದು ಫುಟ್‌ಬಾಲ್ ಕೂಟ ಸಂಘಟಿಸುವುದೆಂದರೆ ಸಾಮಾನ್ಯದ ವಿಚಾರವಲ್ಲ. ಜಗತ್ತಿನಾದ್ಯಂತ ಕನಿಷ್ಠ 5 ಲಕ್ಷಕ್ಕೂ ಅಧಿಕ ಪ್ರವಾಸಿಗಳು ಒಮ್ಮೆಲೇ ಆ ದೇಶಗಳಿಗೆ ಭೇಟಿ ನೀಡುತ್ತಾರೆ. ಕತಾರ್‌ನಂತಹ ಸಣ್ಣ ರಾಷ್ಟ್ರಗಳಿಗೆ ಅಷ್ಟು ದೊಡ್ಡ ಸಂಖ್ಯೆಯನ್ನು ಒಂದೇ ಬಾರಿಗೆ ನಿಭಾಯಿಸಲು ಸಾಧ್ಯವಿಲ್ಲ. ಬರುವವರು ಉಳಿದುಕೊಳ್ಳಲು ವಸತಿ ಹೇಗೆ? ವಿವಿಧ ರೀತಿಯ ಆಹಾರಗಳನ್ನು ಒದಗಿಸುವುದು ಹೇಗೆ?
ಈ ಒತ್ತಡದಲ್ಲಿ ಕತಾರ್ ಅತಿವೇಗವಾಗಿ ವ್ಯವಸ್ಥೆಗಳನ್ನು ಮಾಡುತ್ತಿದೆ. ಅದಕ್ಕೆ ಪ್ರತೀ ವಿಚಾರಗಳೂ ಪ್ರತಿಷ್ಠೆಯ ಸಂಗತಿಯಾಗಿದೆ. ಹೀಗಾಗಿ ಸಹಜವಾಗಿಯೇ ಕೆಲಸಗಾರರ ಮೇಲೆ ಒತ್ತಡ ಹಾಕಲಾಗುತ್ತಿದೆ. ಕತಾರ್‌ನಲ್ಲಿ ಬಹಳ ಉಷ್ಣಾಂಶವಿರುತ್ತದೆ. ಹೊರದೇಶಗಳಿಂದ ಬರುವವರು ಅದನ್ನು ತಾಳಿಕೊಳ್ಳುವುದು ಕಷ್ಟ. ಇದೂ ಸಾವುಗಳಿಗೆ ಕಾರಣವಾಗುತ್ತಿದೆ.
ಕಾರ್ಮಿಕರ ಸ್ಥಿತಿ ಅಯ್ಯೋ ಅನ್ನುವಂತಿದೆ
ತೆಲಂಗಾಣದ ನಿಜಾಮಬಾದ್‌ನಿಂದ ಕತಾರ್‌ಗೆ ತೆರಳಿದ್ದ ರಮೇಶ್ ಕಲ್ಲಡಿ 2016, ಆ.10ರಂದು ಮೃತಪಟ್ಟಿದ್ದರು. ಅವರ ಸಾವಿಗೆ ಕಾರಣ ಹೃದಯಸ್ತಂಭನ ಎಂದು ಮರಣೋತ್ತರ ಪರೀಕ್ಷೆಯಲ್ಲಿ ನಮೂದಿಸಲಾಗಿದೆ! ಅವರು 7 ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದರು. ಅವರ ಜೊತೆಗೇ ಕೆಲಸ ಮಾಡುತ್ತಿದ್ದ ಪುತ್ರ ಶ್ರವಣ್ ಇದನ್ನು ಬಲವಾಗಿ ಪ್ರಶ್ನಿಸಿದ್ದಾರೆ. ಹೃದಯ ಸ್ತಂಭನವಾಗಲು ನಿಜವಾದ ಕಾರಣ ಕತಾರ್‌ನಲ್ಲಿನ ತೀವ್ರ ಬಿಸಿ. ಕತಾರ್‌ಗೆ ತೆರಳುವವರೆಗೆ ಚೆನ್ನಾಗಿಯೇ ಇದ್ದ ಅಪ್ಪ, ಅಲ್ಲಿನ ಬಿಸಿ ತಾಳಿಕೊಳ್ಳಲಾಗದೇ ಮರಣ ಹೊಂದಿದರು ಎಂದು ಅವರು ವಾದಿಸಿದ್ದಾರೆ. ಅತಿಯಾದ ಧಗೆಯಲ್ಲಿ ಕೆಲಸ ಮಾಡಿದರೆ ಹೃದಯಸ್ತಂಭನಕ್ಕೆ ಕಾರಣವಾಗಬಲ್ಲುದು ಎಂದು ವೈದ್ಯರು ದೃಢಪಡಿಸಿದ್ದಾರೆ. ಕತಾರ್‌ನಲ್ಲಿನ ಸ್ಥಿತಿಯನ್ನು ಶ್ರವಣ್ ವಿವರಿಸಿದ್ದು ಹೀಗಿದೆ…
“ನಾವು ಒಂದು ಕೊಠಡಿಯಲ್ಲಿ ನಾಲ್ಕೈದು ಮಂದಿ ವಾಸಿಸುತ್ತಿದ್ದೆವು. ಸ್ನಾನದ ಶೌಚಾಲಯಗಳೂ ಎಲ್ಲರಿಗೂ ಸೇರಿದ್ದು. ಸ್ನಾನ ಮಾಡಲು ಗಂಟೆಗಟ್ಟಲು ಕಾಯಬೇಕು. ದಿನಕ್ಕೆರಡು ಬಾರಿ ಊಟ ಕೊಡುತ್ತಿದ್ದರು. ನಮಗೆ ಆರೋಗ್ಯ ಕಾರ್ಡ್‌ಗಳೂ ಇರಲಿಲ್ಲ. ಏನಾದರೂ ಅನಾರೋಗ್ಯ ಆದರೆ ಅಲ್ಲೇ ಇರುವ ಸಣ್ಣ ಕ್ಲಿನಿಕ್‌ಗೆ ಹೋಗಬೇಕು. ಅವರೇನು ತಜ್ಞರೂ ಅಲ್ಲ. ನನ್ನ ತಂದೆ ಆ ವಿಪರೀತ ಸೆಕೆಯ ಊರಲ್ಲಿ, ಹಳೆಯ ಕಾರನ್ನು ಓಡಿಸಬೇಕಾಗಿತ್ತು. ಅದರಲ್ಲಿ ಏಸಿ ಇರಲಿಲ್ಲ. ದೀರ್ಘಕಾಲ ಸಣ್ಣ ವಿರಾಮವೂ ಇಲ್ಲದೇ ಕಾರು ಚಲಾಯಿಸಬೇಕಿತ್ತು. ಜೊತೆಗೆ ಸಮಯಮಿತಿಯ ಬಗ್ಗೆ ತಲೆಕೆಡಿಸಿಕೊಳ್ಳದೇ ಕೆಲಸ ಮಾಡಬೇಕಿತ್ತು. ಒಂದು ದಿನ ಅವರು ತಮ್ಮ ಕೆಲಸ ಮುಗಿಸಿಕೊಂಡು ನಾವಿರುವ ಜಾಗಕ್ಕೆ ಬಂದರು, ಹಾಗೆಯೇ ಕುಸಿದು ಸತ್ತುಹೋದರು. ಅವರ ಸಾವಿಗೆ ನಿಜವಾದ ಕಾರಣ ವಿಶ್ರಾಂತಿಯಿಲ್ಲದೇ ಅವರನ್ನು ಅತಿಯಾಗಿ ದುಡಿಸಿಕೊಂಡಿದ್ದು’
2016-2022ರ ನಡುವೆ ಕಾರ್ಮಿಕರ ಶೋಷಣೆ ಪ್ರಕರಣಗಳು
ದೇಶ ಒಟ್ಟು ಮೃತಪಟ್ಟವರ ಸಂಖ್ಯೆ (738)
ಬಹ್ರೇನ್ 38
ಕುವೈಟ್ 32
ಓಮನ್ 21
ಕತಾರ್ 325
ಸೌದಿ ಅರೇಬಿಯ 101
ಯುಎಇ 221
ಇದ್ದಿದ್ದರಲ್ಲಿ ಕತಾರ್ ಪರವಾಗಿಲ್ಲ!
ಕತಾರ್‌ನಲ್ಲಿ ಪರಿಸ್ಥಿತಿ ಇಷ್ಟು ದಾರುಣವಾಗಿದೆ ಎಂದು ನಾವು ಚಿಂತಿಸುತ್ತಿದ್ದರೆ, ಈ ವಲಸೆ ಕಾರ್ಮಿಕರ ಪರ ಹೋರಾಡುತ್ತಿರುವ ರೆಜಿಮೊನ್ ಕುಟ್ಟಪ್ಪನ್ ಇನ್ನೊಂದು ಸತ್ಯವನ್ನು ತೆರೆದಿಟ್ಟಿದ್ದಾರೆ. ಅವರ ಪ್ರಕಾರ ಕೊಲ್ಲಿ ರಾಷ್ಟ್ರಗಳ ಪೈಕಿ ಕತಾರ್ ಸ್ವಲ್ಪ ಪರವಾಗಿಲ್ಲವಂತೆ. ಈ ದೇಶ “ಕಫಲ ವ್ಯವಸ್ಥೆ’ಯನ್ನು ಸ್ವಲ್ಪ ಸುಧಾರಿಸಿದೆ. ಕಫಲ ಕೊಲ್ಲಿ ರಾಷ್ಟ್ರಗಳಲ್ಲಿ ಬಳಸುವ ಉದ್ಯೋಗ ವ್ಯವಸ್ಥೆ. ಇದು ಪ್ರಾಯೋಜಕತ್ವವನ್ನು ಆಧರಿಸಿದ ಉದ್ಯೋಗ ವ್ಯವಸ್ಥೆ. ಇದರಲ್ಲಿ ಉದ್ಯೋಗಿಗಳನ್ನು ಉದ್ಯೋಗದಾತರಿಗೆ ಸಂಪೂರ್ಣ ಅಡಿಯಾಳಾಗಿ ಮಾಡಲಾಗುತ್ತದೆ. ಇದೊಂದು ಜೀತ ವ್ಯವಸ್ಥೆಯಿದ್ದಂತೆ. ಕಾರ್ಮಿಕನ ಪ್ರತೀ ಚಲನೆ, ಮಾತು, ಅನ್ಯಸಂಘ ಎಲ್ಲವನ್ನೂ ಕಸಿದುಕೊಳ್ಳಲಾಗಿರುತ್ತದೆ. ಈ ಪದ್ಧತಿಯನ್ನು 6 ಕೊಲ್ಲಿ ರಾಷ್ಟ್ರಗಳು ಜೊತೆಗೆ ಜೋರ್ಡಾನ್, ಲೆಬನಾನ್‌ಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಫಿಫಾ ವಿಶ್ವಕಪ್ ಆತಿಥ್ಯದ ಹೊಣೆ ನೀಡಿದ ನಂತರ, ಕತಾರ್‌ನಲ್ಲಿ ಕಫಲ ವ್ಯವಸ್ಥೆಯನ್ನು ಬಹಳ ಸುಧಾರಿಸಲಾಗಿದೆ. ಕತಾರ್‌ನಲ್ಲಿ ಸಾವುಗಳು, ಶೋಷಣೆಗಳು ಸಂಭವಿಸುತ್ತಿದ್ದರೂ ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲೇ ಕಡಿಮೆ ಎಂದು ಕುಟ್ಟಪ್ಪನ್ ಹೇಳುತ್ತಾರೆ!
-ಕೆ.ಪೃಥ್ವಿಜಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.