ನಿರಂತರ ಕಲಿಕೆಗೆ ಹೊಸ ಕಾರ್ಯಕ್ರಮಗಳ ಶೋಧನೆ..
Team Udayavani, May 21, 2021, 6:10 AM IST
ಶೈಕ್ಷಣಿಕ ವ್ಯವಸ್ಥೆಯ ಮೇಲೆ ಕೋವಿಡ್ ಕೊಟ್ಟ ಪೆಟ್ಟು ಅಂತಿಂಥದ್ದಲ್ಲ. ಕಳೆದ ವರ್ಷದ ಶಿಕ್ಷಣ ಆನ್‌ಲೈನ್‌ನಲ್ಲೇ ಲೀನವಾಗಿಬಿಟ್ಟಿತ್ತು. ಈ ವರ್ಷ ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ. ಈ ಹಂತದಲ್ಲಿ ಏನು ಮಾಡಬೇಕು? ಸರಕಾರಕ್ಕೆ ಗೊಂದಲವಿದೆ; ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸ್ಪಷ್ಟತೆ ಇಲ್ಲ. ಹಾಗಿದ್ದರೆ ಏನು ಮಾಡಬೇಕು? ಈ ಬಗ್ಗೆ ಉದಯವಾಣಿ ರಾಜ್ಯದ ಉದ್ದಗಲದ ನೂರಕ್ಕೂ ಹೆಚ್ಚು ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿದೆ. ಅವುಗಳಲ್ಲಿ ಕೆಲವರ ಅಭಿಪ್ರಾಯ ಇಲ್ಲಿದೆ.
ಬ್ರಿಡ್ಜ್ ಕೋರ್ಸ್ ಮಾಡುವುದು ಒಳಿತು :
ಸಣ್ಣ ಮಕ್ಕಳನ್ನು ಆನ್‌ಲೈನ್‌ನಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಮಕ್ಕಳನ್ನು ಪರೀಕ್ಷೆ ಆಗಿಲ್ಲ ಎನ್ನುವ ಪರೀಕ್ಷಾ ಭೂತದಿಂದ ಹೊರತರಬೇಕು. ಬದಲಾಗಿ ಮಕ್ಕಳಿಗೆ ಅನುಕೂಲ ಆಗುವಂತೆ ಪಠ್ಯಕ್ರಮ ಪರಿಷ್ಕರಿಸಿ, ಬ್ರಿಡ್ಜ್ ಕೋರ್ಸ್ ರೂಪಿಸಬೇಕು. ಮುಂದಿನ ತರಗತಿಗೆ ಸಮಸ್ಯೆ ಆಗದಂತೆ ಪರೀಕ್ಷೆಯಿಂದ ಹೊರಗಿಟ್ಟು, ಮಕ್ಕಳ ಹಂತಕ್ಕೆ ಬೇಕಾಗುವ ಅತೀ ಸರಳ ಪಠ್ಯ ತರಬೇಕು. 3-4 ತಿಂಗಳ ಬ್ರಿಡ್ಜ್ ಕೋರ್ಸ್ ಮಾಡಿ, ಕಲಿಕೆಯ ಅಂತರ ಸರಿಪಡಿಸಬೇಕು. ಪಾಲಕರ ಪಾಲ್ಗೊಳ್ಳುವಿಕೆ ಅತೀ ಅವಶ್ಯ. ಪದವಿ, ಸ್ನಾತಕೋತ್ತರ ಪದವಿ ಅಥವಾ ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉದ್ಯೋಗಾಧಾರಿತ ಕ್ರಮ ತರಬೇಕು. ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್- ಗೈಡ್ಸ್ ಸ್ವಯಂ ಸೇವಕರನ್ನು ಶಿಕ್ಷಣದ ಸಪೋರ್ಟಿಂಗ್ ವ್ಯವಸ್ಥೆಯಾಗಿ ಈಗ ಬಳಸಬೇಕು. –ನಾಗರಾಜ ರೆಡ್ಡಿ, ಕಾರ್ಯದರ್ಶಿ, ಸಿಇಎಸ್‌ಎಸ್
ಪಠ್ಯಕ್ರಮ ಬದಲಾಗಲಿ :
ಆನ್‌ಲೈನ್ ಶಿಕ್ಷಣದಿಂದ ಪರಿಣಾಮಕಾರಿ ಬೋಧನೆ ಸಾಧ್ಯತೆಗಳು ಎಷ್ಟೇ ಇದ್ದರೂ ಗುಣಮಟ್ಟದ ಶಿಕ್ಷಣ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಭೌತಿಕ ತರಗತಿ ಯಾವಾಗ ತೆರೆಯಬಹುದು ಎಂಬುದನ್ನು ಅಂದಾಜಿಸಿ, ಅದರಂತೆ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಪಠ್ಯಕ್ರಮದಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು. ಸಮಯಾವಕಾಶದ ಆಧಾರದಲ್ಲಿ ಸೂಕ್ತ ಯೋಜನೆ ಸಿದ್ಧಪಡಿಸಿ, ಅನುಷ್ಠಾನಕ್ಕೆ ತರಬೇಕು. ಡಾ|ಎನ್.ಆರ್.ಶೆಟ್ಟಿ, ವಿಶ್ರಾಂತ ಕುಲಪತಿ
ಪರಿಸ್ಥಿತಿ ನೋಡಿಕೊಂಡು ಶಾಲೆ ತೆರೆಯಬಹುದು ;
ಮಕ್ಕಳ ಎರಡು ವರ್ಷಗಳ ಶೈಕ್ಷಣಿಕ ಅಂತರ ಕಡಿಮೆ ಮಾಡಬಹುದಾದ ಪಠ್ಯವನ್ನು ಸಿದ್ಧಪಡಿಸಬೇಕು. ಒಂದನೇ ತರಗತಿ ಮಗು ನೇರವಾಗಿ ಮೂರು ಅಥವಾ ನಾಲ್ಕನೇ ತರಗತಿಗೆ ಪ್ರವೇಶಿಸಿದಾಗ ಎರಡು ಮತ್ತು ಮೂರನೇ ತರ ಗತಿಯ ಪಠ್ಯವೂ ಸಹಿತವಾಗಿ 4ನೇ ತರಗತಿ ಪಠ್ಯ ಸರಳ ರೀತಿಯಲ್ಲಿ ಓದಿ ಅರ್ಥೈಸಿಕೊಳ್ಳುವಂತೆ ಮಾಡಬೇಕು. ಸರಳೀಕೃತ ಪಠ್ಯ ತರಬೇಕು. ಹಾಗೆಯೇ ಹಳ್ಳಿ ಪ್ರದೇಶಗಳಲ್ಲಿ ಶಾಲೆಗಳನ್ನು ಬಂದ್ ಮಾಡುವುದನ್ನು ಕಡಿಮೆ ಮಾಡಬೇಕು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಶಾಲೆ ತೆರೆಯಲು ಅವಕಾಶ ನೀಡಬೇಕಾಗುತ್ತದೆ. ಟಿ.ಎಂ.ಕುಮಾರ್, ನಿವೃತ್ತ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ.
ಪಾಲಕರು ಗಮನಕೊಟ್ಟರೆ ಸಾಧ್ಯ :
ಇಂದಿನ ಪರಿಸ್ಥಿತಿಯಲ್ಲಿ ಆನ್‌ಲೈನ್ ತರಗತಿ ಅನಿವಾರ್ಯ ವಾಗಿರುವುದರಿಂದ ಶಿಕ್ಷಕರು ಆನ್‌ಲೈನ್ ತರಗತಿ ಬಳಿಕ ಮಕ್ಕಳ ಪ್ರಗತಿ ಪರಿಶೀಲಿಸಬೇಕು. ಪಾಲಕರು ಸಹ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿ ಅವರ ಶೈಕ್ಷಣಿಕ ಪ್ರಗತಿ ಮೇಲೆ ನಿಗಾ ಇಡಬೇಕು. ಗೃಹ ಪಾಠ, ಕಲಿಕೆ ಬಗ್ಗೆ ಆಗಾಗ ಪರಿಶೀಲಿಸುತ್ತ ವೈಯಕ್ತಿಕ ಕಾಳಜಿ ವಹಿಸಿದರೆ ಆನ್‌ಲೈನ್ ಶಿಕ್ಷಣ ಪರಿಣಾಮಕಾರಿಯಾಗಿಸಬಹುದು. ನಿಜಲಿಂಗಪ್ಪ ಬಸೇಗಣ್ಣಿ, ಶಿಕ್ಷಣ ತಜ್ಞರು, ಹಾವೇರಿ
3 ತಿಂಗಳ ಬಳಿಕ ತೀರ್ಮಾನ ಸೂಕ್ತ :
ಕೋವಿಡ್ ತೀವ್ರತೆ ಇನ್ನೂ ಕಡಿಮೆ ಯಾಗದೆ ಇರುವುದರಿಂದ ಮುಂದಿನ ಶೈಕ್ಷಣಿಕ ವರ್ಷವನ್ನು ಆರಂಭಿಸುವ ಬಗ್ಗೆ ಈಗಲೇ ತೀರ್ಮಾನಿಸುವುದು ಕಷ್ಟ. ಹೀಗಾಗಿ ಮುಂದಿನ 3 ತಿಂಗಳುಗಳವರೆಗೆ ಕಾದು, ಆ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಉತ್ತಮ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸೂಕ್ತ ರೀತಿಯಲ್ಲಿ ದೊರಕಿದರೆ ಕಾಲೇಜು ಶಿಕ್ಷಣವನ್ನು ಮುಂದೆ ಆರಂಭಿಸಬಹುದು. ಜತೆಗೆ ಆನ್‌ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡ ಬಹುದು. ಆದರೆ ಪ್ರಾಥಮಿಕ ಶಿಕ್ಷಣದ ಬಗ್ಗೆ ಈಗ ಹೇಳುವ ಹಾಗಿಲ್ಲ. ಪ್ರೊ|ಎ.ಎಂ. ನರಹರಿ, ಶಿಕ್ಷಣ ತಜ್ಞ, ಮಂಗಳೂರು
ಪೂರ್ವ ಪ್ರಾಥಮಿಕ ಮಕ್ಕಳ ಶಿಕ್ಷಣ ನಿಲ್ಲಿಸಿ :
ಕೋವಿಡ್ ಸಂಕ್ರಮಣ ಕಾಲದಲ್ಲಿ ಆಧುನಿಕ ತಂತ್ರಜ್ಞಾನ ಮತ್ತಷ್ಟು ಪರಿಣಾಮಕಾರಿಗಾಗಿ ಬಳಸಿ ಕೊಂಡು ಶಿಕ್ಷಣ ವ್ಯವಸ್ಥೆ ರೂಪಿಸಬೇಕಾದ ಅಗತ್ಯವಿದೆ. ಆರೋಗ್ಯಕರ ವಾತಾವರಣಕ್ಕಾಗಿ ವೆಂಟಿ ಲೇಟರ್ ಯುನಿಟ್ ತರಗತಿಗಳು, ಸಾಮಾಜಿಕ ಅಂತರ ಕಾಪಾಡುವುದು, ಅದಕ್ಕಾಗಿ ಸರಕಾರ ಮಕ್ಕಳ ತರಗತಿ ದಾಖಲಾತಿ ಪ್ರಮಾಣ ನಿರ್ಧರಿಸಬೇಕು. ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದೊಂದಿಗೆ ಗ್ರಾಮೀಣ ಭಾಗದ ಪ್ರತೀ ಮಕ್ಕಳನ್ನು ತಂತ್ರಜ್ಞಾನದ ಜತೆಗೆ ಜೋಡಿಸಿಕೊಳ್ಳಬೇಕಿದೆ. ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಪೂರ್ವ ಪ್ರಾಥಮಿಕ ಮಕ್ಕಳ ಶಿಕ್ಷಣವನ್ನು ತಾತ್ಕಾಲಿಕ ತಡೆ ಹಿಡಿಯಬೇಕು. ಅಬ್ದುಲ್ ಖದೀರ್, ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಬೀದರ
ಆನ್‌ಲೈನ್ ಸರಳೀಕರಣಗೊಳ್ಳಬೇಕು :
ಕೇವಲ ಆನ್‌ಲೈನ್ ತರಗತಿಯಿಂದ ಏನೂ ಪ್ರಯೋಜನವಿಲ್ಲ. ತರಗತಿಗೂ ಮೊದಲೇ ವಿದ್ಯಾರ್ಥಿ ಗಳಿಗೆ ಸ್ಟಡೀ ಮೆಟೀರಿಯಲ್ ನೀಡಬೇಕು. ಅದನ್ನು ವಿದ್ಯಾರ್ಥಿಗಳು ಸ್ವ-ಅಧ್ಯಯನ ಮಾಡಬೇಕು. ಅನಂತರ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಬೇಕು. ಆಗ ಪಠ್ಯಕ್ರಮದ ಗೊಂದಲಗಳನ್ನು ಆನ್‌ಲೈನ್ ಮೂಲಕ ಪರಿಹರಿಸಬೇಕು. ಆನ್‌ಲೈನ್ ಭೌತಿಕ ತರಗತಿಗೆ ಪರ್ಯಾಯ ಅಲ್ಲದೇ ಇದ್ದರೂ ಇಂದಿನ ಆವಶ್ಯಕ. ಇದರಲ್ಲಿ ಇನ್ನಷ್ಟು ಸೌಲಭ್ಯ ವಿದ್ಯಾರ್ಥಿಗಳಿಗೆ ಒದಗಿಸಬೇಕು. ಎಷ್ಟು ಬೇಗ ನಾವು ಆನ್‌ಲೈನ್ ತರಗತಿ ಸರಳೀಕರಣ ಮಾಡುತ್ತೇವೆ ಎನ್ನುವುದರ ಮೇಲೆ ಇಂದಿನ ಶೈಕ್ಷಣಿಕ ಪರಿಸ್ಥಿತಿಯ ಸುಧಾರಣೆ ಸಾಧ್ಯವಿದೆ. ಪ್ರೊ| ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂಗಳೂರು ವಿಶ್ವವಿದ್ಯಾನಿಲಯ
ಕಾಲೇಜು ಪರೀಕ್ಷೆ ಆನ್‌ಲೈನ್ ಆದರೆ ಸೂಕ್ತ :
ಕೋವಿಡ್ ಮೂರನೇ ಅಲೆಯ ಆತಂಕವನ್ನು ತಜ್ಞರು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂದೇನು? ಎಂದು ಈಗ ನಿರ್ಧರಿಸುವುದು ಬಹಳ ಕಷ್ಟ. ಅದರಲ್ಲಿಯೂ ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಈಗಲೇ ನಿರ್ಧರಿಸುವುದು ಕಷ್ಟಸಾಧ್ಯ. ಆದರೆ ಕಾಲೇಜು ಶಿಕ್ಷಣವು ಆನ್‌ಲೈನ್ ಮೂಲಕವೇ ಮುಂದುವರಿದು, ಪರೀಕ್ಷೆಯನ್ನು ಕೂಡ ಆನ್‌ಲೈನ್ ಮೂಲಕವೇ ನಡೆಸಬೇಕು. ಪ್ರೊ|ಪಿ.ಎಸ್.ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿ.ವಿ.
ಲಸಿಕೆ ನೀಡಿ ಶಾಲೆ ಆರಂಭಿಸಿ :
ಆನ್‌ಲೈನ್ ಶಿಕ್ಷಣ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ. ಗ್ರಾಮೀಣ ಭಾಗದ ಮಕ್ಕಳಿಗೆ ಇದು ಉಪಯೋಗವೂ ಆಗುತ್ತಿಲ್ಲ. ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಿ ಅನಂತರ ಶಾಲೆಗಳನ್ನು ಆರಂಭಿಸಬೇಕು. –ಕೆ.ಎಸ್.ವಿಜಯಾನಂದ, ಜನತಾ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ
ಅಮೆರಿಕ ಮಾದರಿ ಶಾಲೆ ಮಾಡಿ :
ಭೌತಿಕ ತರಗತಿ ಹೊರತುಪಡಿಸಿ ಪರ್ಯಾಯ ಮಾರ್ಗ ವಿಲ್ಲ. ಅಮೆರಿಕ ಸೇರಿದಂತೆ ಬೇರೆ ದೇಶಗಳಲ್ಲಿ ಕೋವಿಡ್ ನಡುವೆಯೂ ಶಿಕ್ಷಣ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಉದ್ದೇಶ ದಿಂದ ಕಠಿನ ಮಾರ್ಗಸೂಚಿ, ನಿಯಮಗಳನ್ನು ಪಾಲಿಸಿಕೊಂಡು ತರಗತಿ ನಡೆಸಲಾಗುತ್ತಿದೆ. ನಮ್ಮ ದೇಶದಲ್ಲೂ ಕೋವಿಡ್ ಎರಡನೇ ಅಲೆ ಸ್ವಲ್ಪಮಟ್ಟಿಗೆ ಇಳಿಕೆಯಾದ ಬಳಿಕ ಕಠಿನ ನಿಯಮ ರೂಪಿಸಿ ತರಗತಿ ಆರಂಭಿಸುವುದು ಒಳ್ಳೆ ಯದು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಕಠಿನ ನಿಯಮ ಗಳನ್ನು ರೂಪಿಸಿ ಬಾಲಕಿಯರಿಗೆ ಒಂದು ದಿನ, ಬಾಲಕರಿಗೆ ಒಂದು ದಿನ. ಕಡಿಮೆ ಸಂಖ್ಯೆಯ ವಿದ್ಯಾ ರ್ಥಿಗಳೊಂದಿಗೆ ಪಾಠ ನಡೆಸುವ ಬಗ್ಗೆ ಸರಕಾರ ತೀರ್ಮಾನಿಸಬೇಕು. ಬೇರೆ ಯಾವುದೇ ವ್ಯವಸ್ಥೆ ಭೌತಿಕ ತರಗತಿಯಷ್ಟು ಪರಿಣಾಮ ಬೀರುವುದಿಲ್ಲ, ಆದ್ದರಿಂದ ತರಗತಿ ಆರಂಭಿಸುವುದು ಸೂಕ್ತ ಎನಿಸುತ್ತದೆ. ಷಡಕ್ಷರಿ, ಶಿಕ್ಷಣ ತಜ್ಞ, ಚಿಕ್ಕಮಗಳೂರು
ಸಲಹೆಯ ಪ್ರಮುಖಾಂಶಗಳು :
- ಪ್ರತಿಯೊಬ್ಬ ಶಿಕ್ಷಕರೂ ನಿರ್ದಿಷ್ಟ ಸಂಖ್ಯೆಯ ಮಕ್ಕಳನ್ನು ದತ್ತು ತೆಗೆದುಕೊಂಡು ಪಾಠ ಮಾಡುವುದು ಒಳಿತು.
- ಸಮೂಹ ಮಾಧ್ಯಮದ ಮೂಲಕ ಶಿಕ್ಷಣ ನೀಡಬೇಕು.
- ಮೂರು ಅಥವಾ ನಾಲ್ಕು ತಿಂಗಳ ಬ್ರಿಡ್ಜ್ ಕೋರ್ಸ್ ಮಾಡಬೇಕು.
- ಬರೀ ಅಂಕ, ಪುಸ್ತಕ, ಪ್ರಶ್ನೋತ್ತರವಷ್ಟೇ ಶಿಕ್ಷಣ ಅಲ್ಲ. ಕೌಶಲಗಳನ್ನು ವೃದ್ಧಿಸಲು ಇದು ಉತ್ತಮ ಅವಕಾಶವಾಗಿದೆ.
- ಪದವಿ ವಿದ್ಯಾರ್ಥಿಗಳಿಗೆ ಅಂಚೆ ತೆರಪಿ ಮಾದರಿ ಶಿಕ್ಷಣದ ವ್ಯವಸ್ಥೆ ಮಾಡಬಹುದು. ಅವರಿಗೆ ಇಂತಿಷ್ಟು ನೋಟ್ಸ್ ಎಂದು ಕೊಟ್ಟು ಅಧ್ಯಯನ ಮಾಡಿಕೊಳ್ಳಲು ಸೂಚನೆ ನೀಡಿ ಕಾಲ ಕಾಲಕ್ಕೆ ಅವರಿಗೆ ಸಲಹೆ ನೀಡಬಹುದು.
- ಮೌಲ್ಯಾಂಕನದ ವೇಳೆ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.