ಸಂಘರ್ಷಗಳ ತವರು ಫ್ರಾನ್ಸ್‌: ಸದ್ಯದ ಪರಿಸ್ಥಿತಿಗೆ ಕಾರಣವಾದರೂ ಏನು?


Team Udayavani, Jul 11, 2023, 8:05 AM IST

ಸಂಘರ್ಷಗಳ ತವರು ಫ್ರಾನ್ಸ್‌: ಸದ್ಯದ ಪರಿಸ್ಥಿತಿಗೆ ಕಾರಣವಾದರೂ ಏನು?

ಕೆನ್ನಾಲಿಗೆ ಚಾಚಿರುವ ಬೆಂಕಿ, ಹೊತ್ತಿ ಉರಿಯುತ್ತಿರುವ ಕಟ್ಟಡಗಳು, ವಾಹನಗಳು, ರಸ್ತೆ ನಡುವಲ್ಲೇ ಗುಂಡಿನದಾಳಿ, ಸ್ಫೋಟ! ಮತ್ತೊಂದೆಡೆ ಸರಕಾರ‌, ಪೊಲೀಸರ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿರುವ ಲಕ್ಷಾಂತರ ಮಂದಿ. ಇದು ಅಕ್ಷರಶಃ ರಣಾಂಗಣವಾಗಿದ್ದ ಫ್ರಾನ್ಸ್‌ನ ಸ್ಥಿತಿ. ಕಳೆದ ತಿಂಗಳಾಂತ್ಯದಲ್ಲಾದ ಯುವಕನೊಬ್ಬನ ಹತ್ಯೆಯ ವಿಷಯವಾಗಿ ಪ್ಯಾರಿಸ್‌ನಲ್ಲಿ ಶುರುವಾದ ಕಿಚ್ಚು, ಇಡೀ ಫ್ರಾನ್ಸ್‌ ಅನ್ನು ವ್ಯಾಪಿಸಿತ್ತು. ಪ್ರತಿಭಟನೆ ನೆಪದಲ್ಲಿ ಪುಂಡರು ಹಿಂಸೆಯ ಹಾದಿ ಹಿಡಿದಿದ್ದರು. ಅಲ್ಲದೆ 3 ಸಾವಿರಕ್ಕೂ ಅಧಿಕ ಪುಂಡರನ್ನು ಬಂಧಿಸಿದರೂ, ಶಾಂತಿ ಸ್ಥಾಪನೆ ಸವಾಲಾಗಿತ್ತು. ಶಾಂತವಾಗಿದ್ದ ಫ್ರಾನ್ಸ್‌ ಹೀಗೆ ಇದ್ದಕ್ಕಿದ್ದಂತೆ ಉದ್ವಿಗ್ನಗೊಂಡಿದ್ದು ಹೌದಾದರೂ, ಇಂಥ ಸಂಘರ್ಷಗಳು ಹೊಸದಲ್ಲ..! ಈ ದೇಶವೇಕೆ ಪದೇ ಪದೆ ಸಂಘರ್ಷಗಳಿಗೆ ತುತ್ತಾಗುತ್ತಿದೆ? ಸದ್ಯದ ಪರಿಸ್ಥಿತಿಗೆ ಕಾರಣವಾದರೂ ಏನು? ಅದರ ವಿವರ ಇಲ್ಲಿದೆ..

ಫ್ರಾನ್ಸ್‌ನಲ್ಲಿ ಆಗಿದ್ದೇನು?
ಪ್ಯಾರಿಸ್‌ನ ಬೋಯಿಸ್‌ ನಗರದಲ್ಲಿ ಜೂ.28ರಂದು ಸಿನೆಮೀಯ ರೀತಿಯಲ್ಲಿ ಮರ್ಸಿಡೀಸ್‌ ಕಾರ್‌ ಒಂದನ್ನು ಪೊಲೀಸರು ಅಡ್ಡಗಟ್ಟಿದ್ದರು. ನೇರ ಕಾರಿನ ಮುಂಭಾಗದಲ್ಲಿ ನಿಂತು ಚಾಲಕನತ್ತ ಗನ್‌ ಪಾಯಿಂಟ್‌ ಇಟ್ಟು, ಕಾರು ನಿಲ್ಲಿಸುವಂತೆ ಆದೇಶಿಸಿದ್ದರು. ಪೊಲೀಸರ ಆದೇಶದ ಹೊರತಾಗಿಯೂ ಚಾಲಕ ಕಾರು ಚಲಾಯಿಸಲು ಮುಂದಾಗಿದ್ದೇ ತಡ ಪೊಲೀಸರು ಗುಂಡು ಹಾರಿಸಿದ್ದರು. ಆಗ ಚಾಲಕ ಸಾವನ್ನಪ್ಪಿದ್ದ. ಹೀಗೆ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಯೇ 17 ವರ್ಷದ ಯುವಕ ನೆಹಲ…! ಅಲ್ಜೀರಿಯಾ ಮೂಲದವನಾದ  ನೆಹಲ್‌ ಪ್ಯಾರಿಸ್‌ನ ನಾಂಟರ್ರೆ ನಿವಾಸಿಯಾಗಿದ್ದು, ತನ್ನ ತಾಯಿಯೊಂದಿಗೆ ಬಹುಕಾಲದ ಹಿಂದೆಯೇ ಫ್ರಾನ್ಸ್‌ಗೆ ವಲಸೆ ಬಂದು ನೆಲೆಗೊಂಡಿದ್ದ. ತಂದೆಯನ್ನು ಕಳೆದುಕೊಂಡಿರುವ ನೆಹಲ…, ತಾಯಿಗೆ ಒಬ್ಬನೇ ಮಗನಾಗಿದ್ದು, ದುಡಿಮೆಗಾಗಿ ಡೆಲಿವರಿ ಏಜೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಜತೆಗೆ ಬದುಕು ರೂಪಿಸಿಕೊಳ್ಳುವುದಕ್ಕಾಗಿ ಎಲೆಕ್ಟ್ರಿಶಿಯನ್‌ ಕೋರ್ಸ್‌ಗಾಗಿ ಕಾಲೇಜು ಸೇರಿ ವ್ಯಾಸಂಗ ಮಾಡುತ್ತಿದ್ದ. ನೆಹಲ್‌ ಸಾವಿನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಾದ ಬಳಿಕ ದೇಶಾದ್ಯಂತ ಭಾರೀ ಗಲಭೆ ಉಂಟಾಗಿ, ಪುಂಡರು ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ನಾಶ ಮಾಡಿದ್ದರು. ಶಾಂತಿ ಸ್ಥಾಪನೆಗೆ ಫ್ರಾನ್ಸ್‌ ದೊಡ್ಡ ಸಾಹಸವನ್ನೇ ಮಾಡಿತು.

ಹೊತ್ತಿ ಉರಿದ ಫ್ರಾನ್ಸ್‌
ನೆಹಲ್‌ ಸಾವಿನ ವೀಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದ್ದೇ ತಡ, ದೇಶದ ಬೇರೆ ಬೇರೆ ಭಾಗಗಳಿಂದ ಲಕ್ಷಾಂತರ ಯುವಕರು ಪ್ಯಾರಿಸ್‌ನ ಉಪನಗರಗಳತ್ತ ಧಾವಿಸಿ, ಮನಬಂದಂತೆ ವರ್ತಿಸಿದರು. ಕ್ರಮೇಣ ಫ್ರಾನ್ಸ್‌ನ ಇತರೆ ಭಾಗಗಳಲ್ಲೂ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡು, ಪ್ರತಿಭಟನೆಗಳು ಸಂಘರ್ಷಕ್ಕೆ ತಿರುಗಿದವು. ಪರಿಣಾಮ ಸಾಮಾಜಿಕ ಶಾಂತಿ ಹಾಳಾಗಿದ್ದಲ್ಲದೇ, 1.1 ಶತಕೋಟಿ ಡಾಲರ್‌ಗೂ ಅಧಿಕ ನಷ್ಟವನ್ನು ಫ್ರಾನ್ಸ್‌ ಭರಿಸುವಂತಾಯ್ತು.

220 ನಗರಗಳ ಮೇಲೆ ಪುಂಡರಿಂದ ದಾಳಿ

2 ಸಾವಿರಕ್ಕೂ ಅಧಿಕ ಕಾರುಗಳಿಗೆ ಬೆಂಕಿ

600ಕ್ಕೂ ಅಧಿಕ ಕಟ್ಟಡಗಳಿಗೆ ಬೆಂಕಿ

ಸ್ಥಳೀಯ ಸರಕಾರಿ ಅಧಿಕಾರಿಗಳ ನಿವಾಸ ಧ್ವಂಸ

ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಬೆಂಕಿ, ಕಲ್ಲು ತೂರಾಟ

ಗ್ರಂಥಾಲಯ, ಬಸ್‌ ನಿಲ್ದಾಣ, ಸರಕಾರಿ ಕಚೇರಿಗಳ ಧ್ವಂಸ

ಮೇಯರ್‌ಗಳ ನಿವಾಸಗಳ ಮೇಲೂ ದಾಳಿ, ಬೆಂಕಿ

200 ಉದ್ದಿಮೆಗಳ ಲೂಟಿ, 250 ತಂಬಾಕು ಮಳಿಗೆಗಳು ಧ್ವಂಸ

ಪೊಲೀಸರ ನೀತಿಯೇ ಕಾರಣ?
ನೆಹಲ್‌ ಹತ್ಯೆ ಭುಗಿಲೇಳುವುದಕ್ಕೆ ಪ್ರಮುಖ ಕಾರಣವೇ ಫ್ರಾನ್ಸ್‌ನಲ್ಲಿರುವ ವರ್ಣಬೇಧ ನೀತಿಯೆಂಬ ವಾದಗಳು ಬಹಳ ಪ್ರಬಲವಾಗಿ ಕೇಳಿಬಂದಿವೆ. ಮಾನವ ಹಕ್ಕು ಸಂಘಟನೆಗಳು, ಕಾನೂನು ಜಾರಿ ಸಂಸ್ಥೆಗಳು ಈ ವಾದಕ್ಕೆ ಧ್ವನಿಗೂಡಿಸಿವೆ. ಟ್ರಾಫಿಕ್‌ ನಿಯಮಗಳಿಗೆ ಸಂಬಂಧಿಸಿದಂತೆ ನಡೆಯುವ ಭದ್ರತಾ ಪರೀಕ್ಷೆಗಳಲ್ಲಿ ಕಪ್ಪು ಜನಾಂಗದವರನ್ನು ಹಾಗೂ ಅರಬ್‌ ರಾಷ್ಟ್ರಗಳಿಂದ ವಲಸೆ ಬಂದವರನ್ನು ಗುರಿಯಾಗಿಸಲಾಗುತ್ತಿದೆ ಎಂಬುದೇ ಸದ್ಯದ ಸಂಘರ್ಷಕ್ಕೆ ಕಾರಣ ಎಂಬ ಆರೋಪವಿದೆ. ಅಲ್ಲದೇ ಪೊಲೀಸರು ಬೇರೆಯವರಿಗಿಂತ ಹೆಚ್ಚು ಅರಬ್‌ ವಲಸಿಗರನ್ನು ಹಾಗೂ ಕಪ್ಪು ಜನಾಂಗದವರನ್ನೇ ಟ್ರಾಫಿಕ್‌ ನಿಯಮಗಳ ಉಲ್ಲಂಘನೆಯಲ್ಲಿ ದಂಡಿ ಸುತ್ತಿದ್ದಾರೆ, 2017ರಿಂದ ಈಚೆಗೆ ಈ ದಂಡನೆಯಲ್ಲಿ ಅತೀ ಹೆಚ್ಚು ಮೃತಪಟ್ಟಿದ್ದೂ ಕೂಡ ಈ ಜನಾಂಗವೇ ಎಂದು ದತ್ತಾಂಶಗಳು ಬಹಿರಂಗ ಪಡಿಸಿವೆ. ಕಳೆದ ವರ್ಷ ಇಂಥದ್ದೇ ಘಟನೆಗಳಲ್ಲಿ 13 ಮಂದಿ ಮೃತರಾಗಿದ್ದು, ನೆಹಲ್‌ ಹತ್ಯೆಯು 2023ರಲ್ಲಿ ಮೂರನೇ ಘಟನೆಯಾಗಿದೆ. ಫ್ರಾನ್ಸ್‌ ಪೊಲೀಸರು ಹೊಂದಿರುವ ವರ್ಣಬೇಧ ಧೋರಣೆಯು ಪದೇ ಪದೆ ಸಂಘರ್ಷಕ್ಕೆ ಇಂಬು ನೀಡುತ್ತಿದೆ ಎಂಬುದು ಪ್ರತಿಭಟನಾಕಾರರ ವಾದ. 2005ರಲ್ಲಿ ಅಲ್ಪಸಂಖ್ಯಾಕ ಸಮುದಾಯದ ಇಬ್ಬರ ಮೇಲೆ ಫ್ರಾನ್ಸ್‌ ಪೊಲೀಸರು ನಡೆಸಿದ ದೌರ್ಜನ್ಯ, ಪೊಲೀಸರಿಂದ ಪಾರಾಗಲು ಹೋಗಿ ವಿದ್ಯುತ್‌ ಘಟಕ ಪ್ರವೇಶಿಸಿ, ಅವರಿಬ್ಬರು ಮೃತರಾದ ಬಳಿಕ ನಡೆದ ಸಂಘರ್ಷವೂ ಕೂಡ ಈ ವಾದಗಳಿಗೆ ಪುಷ್ಟಿ ನೀಡಿದೆ.

ಗಲಭೆಗಳ ಸುದೀರ್ಘ‌ ಇತಿಹಾಸ
ಫ್ರಾನ್ಸ್‌ನಲ್ಲಿ ಗಲಭೆಗಳಾಗುವುದು, ಜಗತ್ತಿನೆದುರು ತೆರೆದುಕೊಳ್ಳುವುದು ಹೊಸದೇನಲ್ಲ. ಇತರೆ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ, ಫ್ರಾನ್ಸ್‌ ಪದೇ ಪದೆ ಗಲಭೆಗಳಿಗೆ ತುತ್ತಾಗುತ್ತಲೇ ಇರುವ ರಾಷ್ಟ್ರವೆಂದು ಹಲವು ಬಾರಿ ಪರಿಗಣಿಸಲ್ಪಟ್ಟಿದೆ. ಆದರೆ ವರ್ಷದಿಂದ ವರ್ಷಕ್ಕೆ ಗಲಭೆಗಳ ತೀವ್ರತೆ ಹೆಚ್ಚುತ್ತಿರುವುದು ಆತಂಕಕಾರಿ. ಅಂಥ ಕೆಲವು ತೀವ್ರತರದ ಗಲಭೆಗಳಿವು.

1968ರ ಗಲಭೆಗಳು: ವಿಯೆಟ್ನಾಂ ಯುದ್ಧದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಶುರುವಾದ ಕ್ರಾಂತಿಯು ಗಲಭೆಯಾಗಿ ತಿರುಗಿತು. ಈ ಸಂದರ್ಭದಲ್ಲಿ ನಡೆದ ಮುಷ್ಕರಗಳು, ಪ್ರತಿಭಟನೆಗಳ ಫ‌ಲವಾಗಿ ಆಗಿನ ಪ್ರಧಾನಮಂತ್ರಿ ಜಾರ್ಜಸ್‌ ಪೌಂಡಿಡಾ ಸ್ವತಃ ರಾಜೀನಾಮೆ ನೀಡಬೇಕಾಗಿ ಬಂತು.

2005ರ ಸಂಘರ್ಷ: ಆಫ್ರಿಕಾ ಮೂಲದ ಯುವಕರು ಪೊಲೀಸರಿಂದ ತಪ್ಪಿಸಿಕೊಳ್ಳಲು ಪವರ್‌ ಸ್ಟೇಷನ್‌ಗೆ ತೆರಳಿ ಸಾವಿಗೀಡಾದ ಘಟನೆ ಫ್ರಾನ್ಸ್‌ನ 274 ನಗರಗಳನ್ನು ಅಕ್ಷರಶಃ ಹೊತ್ತಿ ಉರಿಸಿತ್ತು. ಪರಿಸ್ಥಿತಿಯನ್ನು ತಣಿಸಲು ಆಗಿನ ಆಂತರಿಕ ಸಚಿವ ನಿಕೋಲಸ್‌ ಸರ್ಕೋಜಿಯಾ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು.

2019ರ ಗಲಭೆಗಳು: ರಾಷ್ಟ್ರದಲ್ಲಿನ ವಿಪರೀತ ಇಂಧನ ತೆರಿಗೆ ಹೆಚ್ಚಳದ ಕುರಿತು ದೇಶಾದ್ಯಂತ ಜನರು ಪ್ರತಿಭಟನೆಗಳನ್ನು ನಡೆಸಿದ್ದರು. ಪ್ರತಿಭಟನೆಗಳನ್ನು ಹತ್ತಿಕ್ಕಲು ಸರಕಾರ‌ ನಡೆಸಿದ ಪ್ರಯತ್ನಗಳು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿ, ಸಂಘರ್ಷದ ಕಿಡಿ ಹೊತ್ತಿಸಿತು.

2023ರ ಪಿಂಚಣಿ ಗಲಭೆ : ವರ್ಷಾರಂಭದಲ್ಲಿ ಸರಕಾರ‌ವು ಪಿಂಚಣಿ ನಿಯಮಗಳಿಗೆ ತಿದ್ದುಪಡಿ ತಂದು, ನೌಕರರ ನಿವೃತ್ತಿಯ ವಯಸ್ಸನ್ನು 62 ರಿಂದ 64ಕ್ಕೆ ಹೆಚ್ಚಿಸಲು ಪ್ರಸ್ತಾವಿಸಿತ್ತು. ಇದನ್ನು ವಿರೋಧಿಸಿ ಗಲಭೆ ಶುರುವಾಗಿತ್ತು ಜತೆಗೆ ಸುದೀರ್ಘ‌ 14 ದಿನಗಳ ವರೆಗೆ 6 ಲಕ್ಷಕ್ಕೂ ಅಧಿಕ ಮಂದಿ ಪ್ರತಿಭಟಿಸಿದ್ದರು.

ಸಂಘರ್ಷ ಸಮಯ ಸರಣಿ

ಜೂ.28 : ಗುಂಡಿಕ್ಕಿ ನೆಹಲ್‌ ಹತ್ಯೆ

ಜೂ.29 : ಘಟನೆ ಖಂಡಿಸಿ ಪ್ರತಿಭಟನೆ, ಪೊಲೀಸರ ಮೇಲೆ ಹಲ್ಲೆ

ಜೂ.30 : ಲಿಯಾನ್‌, ಮಾರ್ಸಿಲ್ಲೆ, ಟೌಲೆಸ್‌ ಸೇರಿದಂತೆ ಇತರೆ ನಗರಗಳಿಗೆ ವ್ಯಾಪಿಸಿದ ಗಲಭೆ

ಜು.1: ಸಂಘರ್ಷ ತೀವ್ರಗೊಂಡು, ಕಾರು-ಮನೆಗಳಿಗೆ ಬೆಂಕಿ, ಪೊಲೀಸರ ನಿಯೋಜನೆ

ಜು.2 : ಸಂಘರ್ಷ ತಹಬಂದಿಗೆ, ಪೊಲೀಸರ ಮೇಲೆ ಕ್ರಮ. ಸಮಸ್ಯೆ ಬಗೆಹರಿಸಲು ಸರಕಾರ‌ ವಾಗ್ಧಾನ

ಅಕ್ರಮ ವಲಸೆಯೇ ಕಾರಣ?
ಹಿಂದಿನಿಂದಲೂ ದೇಶದಲ್ಲಿ ಹಿಂಸಾಚಾರ ತಲೆದೋರುತ್ತಿದ್ದು, ಅದನ್ನು ನಿಭಾಯಿಸುವ ಸರಕಾರ‌ದ ಸತತ ಪ್ರಯತ್ನಗಳ ಹೊರತಾಗಿಯೂ ಸಮಸ್ಯೆ ಉಲ್ಬಣಿಸುತ್ತಲೇ ಇರುವುದು ವಿಷಾದನೀಯ. ಆದರೆ ಈ ಹಿಂಸಾಚಾರಗಳಿಗೆ ಅಕ್ರಮ ವಲಸೆ ಕಾರಣ ಎಂಬುದು ಹಲವಾರ ಅಭಿಪ್ರಾಯ. ಅಂದರೆ ಫ್ರಾನ್ಸ್‌ನ ಮೂಲ ನಿವಾಸಿಗಳ ಜತೆಗೆ, ವಲಸೆ ಬಂದವರು ಹೊಂದಿಕೊಳ್ಳುತ್ತಿಲ್ಲ ಎಂಬ ಮಾತುಗಳಿವೆ.

ಅಮೆರಿಕದಲ್ಲಿ ಸದ್ಯ ಜನಾಂಗೀಯ ತಾರತಮ್ಯ ಸಮಸ್ಯೆಗೆ ಕಾರಣವಾಗಿದ್ದರೆ, ಫ್ರಾನ್ಸ್‌ನಲ್ಲಿ ವಲಸೆಯೇ ಪ್ರಮುಖ ಸಮಸ್ಯೆ. ಅಲ್ಲದೆ ಫ್ರಾನ್ಸ್‌ ಆರಂಭದಿಂದಲೂ ವಲಸೆ ಹಕ್ಕಿಗಳಿಗೆ ಮುಕ್ತವಾಗಿ ತೆರೆದುಕೊಂಡ ದೇಶ. ಎರಡನೇ ಜಾಗತಿಕ ಮಹಾ ಸಮರದ ವೇಳೆ ಫ್ರಾನ್ಸ್‌ ಇನ್ನಷ್ಟು ತೆರೆದುಕೊಂಡಿತು. ಆಗ ನೆರೆ ಹೊರೆಯ ಐರೋಪ್ಯ ದೇಶಗಳ ಮಂದಿ ಫ್ರಾನ್ಸ್‌ಗೆ ಬಂದು ಸೇರಿಕೊಂಡರು. ಆದರೆ ಅನಂತರದ ದಿನಗಳಲ್ಲಿ ಬಂದವರು ಆಫ್ರಿಕಾ ಮೂಲದವರು. ಅಂದರೆ ಈಗ ಆಫ್ರಿಕಾ ಮೂಲದ ಶೇ.10ರಷ್ಟು ಮಂದಿ ಫ್ರಾನ್ಸ್‌ನಲ್ಲಿ ಇದ್ದಾರೆ. ಇವರು ಫ್ರಾನ್ಸ್‌ ಅನ್ನು ಅಪ್ಪಿಕೊಳ್ಳುತ್ತಿಲ್ಲ, ಒಪ್ಪಿಕೊಳ್ಳುತ್ತಿಲ್ಲ.

ಮೊದಲೇ ಹೇಳಿದ ಹಾಗೆ ಇದು ಮೂಲ ನಿವಾಸಿಗಳಲ್ಲಿ ಸಿಟ್ಟಿಗೂ ಕಾರಣವಾಗಿದೆ. ಇದರಿಂದಾಗಿಯೇ ಪೊಲೀಸರು ಬಹಳಷ್ಟು ಬಾರಿ ವಲಸಿಗರ ವಿರುದ್ಧ ಸಿಟ್ಟಿಗೆದ್ದು, ದೌರ್ಜನ್ಯ ಎಸಗುತ್ತಾರೆ ಎಂಬ ಆರೋಪಗಳೂ ಇವೆ. ಅಲ್ಲದೆ ಫ್ರಾನ್ಸ್‌ನಲ್ಲಿ ಇದ್ದುಕೊಂಡು ಫ್ರಾನ್ಸ್‌ ಅನ್ನು ಒಪ್ಪಿಕೊಳ್ಳಬೇಕು ಎಂಬ ಆಗ್ರಹವೂ ಇದೆ.

ಇನ್ನು ಅಕ್ರಮ ವಲಸಿಗರಿಗೆ ಫ್ರಾನ್ಸ್‌ನ ಎಡಪಂಥೀಯರು ಸಹಾಯ ನೀಡುತ್ತಿದ್ದಾರೆ. ಇವರ ಆರ್ಭಟಕ್ಕೆ ಅವರದ್ದೇ ಸಹಕಾರವಿದೆ ಎಂಬ ಆರೋಪಗಳಿವೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಸಂಘರ್ಷಗಳಿಗೆ ಇವರೇ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಫ್ರಾನ್ಸ್‌ ಉದಾಹರಣೆಯನ್ನೇ ಮುಂದಿಟ್ಟುಕೊಂಡು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿಯೂ ಕಠಿನ ವಲಸೆ ನೀತಿ ಜಾರಿಗೆ ತರಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್‌ ಗಲಭೆ ಬಳಿಕ ಬಹಳಷ್ಟು ದೇಶಗಳು ವಲಸಿಗರನ್ನು ತಮ್ಮ ದೇಶದೊಳಗೆ ಸೇರಿಸುತ್ತಿಲ್ಲ. ಹೀಗಾಗಿಯೇ, ಸಿರಿಯಾ, ಲಿಬಿಯಾದಂಥ ದೇಶಗಳಿಂದ ಹೊರಟ ಅದೆಷ್ಟೋ ದೋಣಿಗಳು ಸಮುದ್ರದ ಮಧ್ಯದಲ್ಲೇ ಮುಳುಗಿ ಹೋಗುತ್ತಿವೆ. ಇದು ಒಂದು ಸಮಸ್ಯೆಗೆ ಕಾರಣವಾಗಿದೆ.

-ಅಶ್ವಿ‌ನಿ ಸಿ. ಆರಾಧ್ಯ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.