ಭೀತಿ ಹುಟ್ಟಿಸಿದ ನಿಫಾ ವೈರಸ್
Team Udayavani, May 27, 2018, 12:30 AM IST
ಎರಡು ವಾರಗಳಿಂದ ಕರ್ನಾಟಕದಲ್ಲಿ ರಾಜಕೀಯದ ಕಾವು ಜನರಿಗೆ ಮನರಂಜನೆ ಕೊಡುತ್ತಿದ್ದರೂ ಪಕ್ಕದ ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್ ಕಾಯಿಲೆ ಸರಕಾರಕ್ಕೆ ದೊಡ್ಡ ತಲೆನೋವು ತಂದಿದೆ. ಜನ ಸಾಮಾನ್ಯರಿಗೆ ಭೀತಿ ಹುಟ್ಟಿಸಿ ಇನ್ನೇನು ಉಳಿಗಾಲವಿಲ್ಲ ಅನ್ನುವ ವಾತಾವರಣ ಸೃಷ್ಟಿಸಿದೆ. ಸಾವೇ ಗತಿ ಅನ್ನುವ ಸುದ್ದಿಯಿಂದ ಹಲವು ರೀತಿಯ ಹೊಸ ಚಿಕಿತ್ಸಾ ವಿಧಾನಗಳನ್ನು ಜಾಹೀರಾತಿನ ಮೂಲಕ ವ್ಯಾಪಾರ ಪ್ರಾರಂಭ ಮಾಡುವ ನಕಲಿ ವೈದ್ಯಕೀಯ ಮತ್ತು ವೈದ್ಯರನ್ನು ಈ ವೈರಸ್ ಸೃಷ್ಟಿಸಿದರೂ ವಿಶೇಷವೇನಿಲ್ಲ. ನಮ್ಮ ರಾಜ್ಯದಲ್ಲಿ ಇನ್ನೂ ಪ್ರಕರಣ ಗಂಭೀರ ವಾಗದಿದ್ದರೂ ಊಹಾಪೋಹಗಳಿಗೆ ಸಿಲುಕಿ ಆತಂಕ ಪಡದ ರೀತಿ ಮಾಹಿತಿ ಕೊಡುವ ಪ್ರಯತ್ನವಿದು.
ನಿಫಾ ಹೊಸ ಕಾಯಿಲೆ ಅಲ್ಲ. 1998ರಲ್ಲಿ ಮಲೇಶ್ಯಾದ ಕಾಂಪುಂಗ್ ಸುಂಗಾಯ್ ನಿಫಾ ಎನ್ನುವ ಊರಿನಲ್ಲಿ ಕಂಡು ಬಂತು. ಹಾಗಾಗಿ ಆ ಪ್ರದೇಶದ ಹೆಸರನ್ನೇ ಕಾಯಿಲೆಗೂ, ವೈರಸ್‌ಗೂ ಇಟ್ಟಿದ್ದಾರೆ. ಆ ಊರಿನಲ್ಲಿ ಹಂದಿಗಳಿಂದ ಹರಡಿದ ಕಾರಣ ಹತ್ತು ಲಕ್ಷ ಹಂದಿಗಳನ್ನು ಸಾಯಿಸಿದ್ದರು. ಈಗ ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ಹಣ್ಣುಗಳನ್ನು ತಿನ್ನುವ ಫ್ರುಟ್ ಬ್ಯಾಟ್ ಅಥವಾ ಬಾವಲಿಗಳಿಂದ ಹರಡಿದೆ ಅನ್ನುವುದು ಧೃಡ ಪಟ್ಟಿದೆ. ಹಂದಿ, ಬಾವಲಿ ಬಿಟ್ಟು ಬೇರೆ ಪ್ರಾಣಿಗಳಿಂದ ಈ ವೈರಸ್ ಮನುಷ್ಯನಿಗೆ ಹರಡುವುದಿಲ್ಲ. ಭಾರತದಲ್ಲಿ ಈ ಹಿಂದೆ ನಿಫಾ ವೈರಸ್ ಜ್ವರ 2011 ಮತ್ತು 2007ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡಿದ್ದು, ಪಕ್ಕದ ಬಾಂಗ್ಲಾ ದೇಶದಿಂದ ವಲಸೆ ಬಂದವರಿಂದಲೂ ಹರಡಿರಬಹುದು ಎನ್ನಲಾಗಿತ್ತು. ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಮಲೇಷ್ಯಾ, ಸಿಂಗಾಪುರ, ಕಾಂಬೋ ಡಿಯಾ, ಥಾಯ್ಲೆಂಡ್, ಫಿಲಿಪೈನ್ಸ್, ಬಾಂಗ್ಲಾದೇಶಗಳಲ್ಲಿ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಂಡರೂ ಈವರೆಗೆ ನಿಫಾದಿಂದ ಸತ್ತವರ ಸಂಖ್ಯೆ ಇಡೀ ಪ್ರಪಂಚದಲ್ಲಿ 400 ದಾಟಿಲ್ಲ. ನಮ್ಮ ರಾಜ್ಯದಲ್ಲೇ ಒಂದು ವರ್ಷಕ್ಕೆ ಕಡಿಮೆ ಅಂದರೂ 10,000 ಮಂದಿ ಅಪಘಾತಗಳಿಂದ ಸಾಯುತ್ತಿದ್ದಾರೆ. ಇದರ ಎದುರು ನಿಫಾದಿಂದ ಆಗಿರುವ ಸಾವಿನ ಪ್ರಮಾಣ ಏನೇನೂ ಅಲ್ಲ. ಪ್ರಕೃತಿ ನಿಯಮಗಳನ್ನು ಅಹಂಕಾರದಿಂದ ಉಲ್ಲಂ ಸಿದ ತಪ್ಪಿಗೆ ನಾವು ಇನ್ನೂ ಇಂತಹ ಹಲವು ನಿಫಾ ವೈರಸ್‌ಗಳನ್ನು ಎದುರಿಸಲೇಬೇಕು.
ನಿಫಾ ಹರಡುವ ಕ್ರಮ
ಬಾವಲಿ ತಿಂದು ಬಿಟ್ಟ ಹಣ್ಣು ಸೇವಿಸಿದಾಗ, ಕುಡಿಯುವ ನೀರು-ಆಹಾರಕ್ಕೆ ಬಾವಲಿಯ ಮಲ ಮೂತ್ರ ಸೇರಿದಾಗ ವೈರಸ್ ನಮ್ಮ ದೇಹಪ್ರವೇಶಿಸುತ್ತದೆ. ಕೋಝಿಕ್ಕೋಡ್‌ನಲ್ಲಿ ಒಂದೇ ಕುಟುಂಬದ ಮೂರು ಮಂದಿ ಸತ್ತಾಗ ಪರಿಶೀಲನಾ ತಂಡಕ್ಕೆ ಸಿಕ್ಕ ಮಾಹಿತಿ ಪ್ರಕಾರ ಆ ಕುಟುಂಬದವರು ಉಪಯೋಗಿಸುವ ಕುಡಿಯುವ ನೀರಿನ ಬಾವಿಯಲ್ಲಿ ಬಾವಲಿಗಳಿದ್ದವು ಎಂದು. ಬಾವಲಿಯ ದೇಹದಲ್ಲಿ ಸದಾಕಾಲ ಇದ್ದರೂ ಅದು ವೈರಸ್‌ನಿಂದ ಸಾಯಲೇಬೇಕೆಂದಿಲ್ಲ. ಗಾಳಿಯಿಂದ ಈ ರೋಗದ ವೈರಾಣುಗಳು ಹರಡು ವುದಿಲ್ಲ ಎನ್ನುವುದು ತುಸು ನೆಮ್ಮದಿ ಕೊಡುವ ವಿಚಾರ. ಕಾಯಿಲೆ ಬಂದ ರೋಗಿಯ ಸಮೀಪದ ಸಾಂಗತ್ಯದಿಂದ ಅಥವಾ ಎಂಜಲು, ಮಲ, ಕಫದಿಂದ ಸೋಂಕು ಹರಡುವ ಸಾಧ್ಯತೆಯಿದೆ.
ಲಕ್ಷಣಗಳು
ಪ್ರಾರಂಭದಲ್ಲಿ ಮಾಮೂಲಿ ಫೂ ಜ್ವರ ಹಾಗೂ ನೆಗಡಿ, ಶೀತ, ಕೆಮ್ಮು ತಲೆನೋವು, ಮೈಕೈ ನೋವು, ಗಂಟಲು ನೋವು, ವಾಂತಿ, ಸುಸ್ತು ಇದ್ದು ಬಳಿಕ ಶ್ವಾಸಕೋಶದ ತೊಂದರೆ, ನ್ಯೂಮೋನಿಯಾ ಕಾಣಿಸಿಕೊಳ್ಳುತ್ತದೆ. ಮೆದುಳಿನ ಸೋಂಕಿನಿಂದ ಪ್ರಜ್ಞೆ ಕಮ್ಮಿ ಆಗುವುದು, ಫಿಟ್ಸ್ ಬರುವುದು, ಕೋಮಾವಸ್ಥೆ ತಲುಪುವುದು ಅನಂತರದ ಹಂತ. ಸೋಂಕು ತಗಲಿದ ಶೇ.75 ಮಂದಿ ಸತ್ತಿರುವುದು ಅಧ್ಯಯನದಿಂದ ದೃಢಪಟ್ಟಿದೆ. ವೈರಸ್ ದೇಹ ಪ್ರವೇಶಿಸಿದ ಎರಡರಿಂದ ಆರು ವಾರ ರೋಗದ ಯಾವುದೇ ಲಕ್ಷಣ ಕಾಣಿಸದೆ ಇರುವ ಸಾಧ್ಯತೆಯೂ ಇರುತ್ತದೆ.
ಪರೀಕ್ಷೆಗಳು
ಕಾಯಿಲೆ ಕುರಿತು ವಿವಿಧ ಮಾಧ್ಯಮಗಳಲ್ಲಿ ಬಂದಿರುವ ಅತಿ ರಂಜಿತವಾದ ಸುದ್ದಿಗಳಿಂದ ಜನರಲ್ಲಿ ಈಗಾಗಲೇ ಭೀತಿ ಹುಟ್ಟಿದೆ. ಸದ್ಯ ಮಣಿಪಾಲದಲ್ಲಿ ಮತ್ತು ಪುಣೆಯ ವೈರಾಣು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಈ ವೈರಸ್ ಪತ್ತೆ ಹಚ್ಚುವ ಸೌಲಭ್ಯ ಇದೆ. ಒಂದು ಪರೀಕ್ಷೆಗೆ 5ರಿಂದ 6 ಸಾವಿರದ ತನಕ ಖರ್ಚಾಗುತ್ತಿದೆ. ಬಡವರಿಗೆ ಕೈಗೆಟಕುವ ಬಾಬತ್ತು ಅಲ್ಲ. ಹೀಗಾಗಿ ಕೇರಳದಲ್ಲಿ ರೋಗದ ಹಾವಳಿಯಿರುವ ನಾಲ್ಕು ಜಿಲ್ಲೆಗಳ ಶಂಕಿತ ರೋಗಿಗಳು ಮತ್ತು ಕೇರಳದವರ ಸಂಪರ್ಕದಲ್ಲಿದ್ದವರಲ್ಲಿ ಲಕ್ಷಣಗಳು ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಂಡರೆ ಸಾಕು. ELISA, PCR, CULTURE ಎಂಬ ಮೂರು ರೀತಿ ಪರೀಕ್ಷೆಗಳಿಂದ ರೋಗಾಣು ಪತ್ತೆ ಹಚ್ಚುತ್ತಾರೆ. ರಕ್ತದ ಮಾದರಿ/ ಗಂಟಲಿನ ದ್ರವದ ಮಾದರಿ ಪರೀಕ್ಷೆಗೆ ನೀಡಬೇಕು.
ಚಿಕಿತ್ಸೆ
ಹೆಚ್ಚಿನ ವೈರಾಣು ಕಾಯಿಲೆಗಳಂತೆ ನಿಫಾ ರೋಗಕ್ಕೂ ನಿರ್ದಿಷ್ಟ ಔಷಧಿ ಇಲ್ಲ. ರಿಬಾವರಿನ್ ಔಷಧಿಯನ್ನು ಮಾತ್ರೆಯ ರೂಪದಲ್ಲಿ ಉಪಯೋಗಿ ಸಲಾಗುತ್ತದೆ. ಎಲ್ಲ ರೀತಿಯ ಜ್ವರಕ್ಕೆ ಕೊಡುವ ಮಾಮೂಲು ಚಿಕಿತ್ಸೆಯ ಜತೆಗೆ ಫಿಟ್ಸ್, ಉಸಿರಾಟದ ತೊಂದರೆ, ಮೆದುಳು ಜ್ವರಕ್ಕೆ ನೀಡುವ ಚಿಕಿತ್ಸೆಯನ್ನು ನೀಡುತ್ತಾರೆ. ಇದಕ್ಕೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಬೇಕಾಗುತ್ತದೆ.
ತಡೆಗಟ್ಟುವುದು ಹೇಗೆ?
ಬಾವಲಿಗಳು ತಿಂದು ಬಿಟ್ಟ ಹಣ್ಣುಗಳು, ಬಾವಲಿಯ ಮಲ ಅಥವಾ ಮೂತ್ರ ಬೆರೆತ ನೀರಿನಿಂದ ಮನುಷ್ಯನಿಗೆ ಈ ಕಾಯಿಲೆ ಹರಡುತ್ತದೆ. ಹೀಗಾಗಿ ತೆರೆದ ಬಾವಿಯ ನೀರನ್ನು ಕುದಿಸಿ ಉಪಯೋಗಿಸಬೇಕು. ಬಾವಲಿ ಗಳಿರುವ ಪ್ರದೇಶಗಳಲ್ಲಿ ಬಾವಲಿ ಕಚ್ಚಿದ ಅಥವಾ ನೆಲದಲ್ಲಿ ಬಿದ್ದು ಸಿಕ್ಕಿದ ಹಣ್ಣುಗಳನ್ನು ತಿನ್ನಲೇಬಾರದು. ಈ ಋತುವಿನಲ್ಲಿ ಧಾರಾಳವಾಗಿ ಸಿಗುವ ಮಾವು, ಹಲಸು, ನೇರಳೆ, ಸೀಬೆ, ಬಾಳೆ ಗೇರು ಮುಂತಾದ ಹಣ್ಣುಗಳಿಂದ ರೋಗ ಹರಡುವ ಸಾಧ್ಯತೆಯಿದೆ. ಹೀಗಾಗಿ ಗಿಡಗಳಿಂದ ಕೊಯ್ದರೂ ಚೆನ್ನಾಗಿ ತೊಳೆದು ತಿನ್ನುವುದು ಸುರಕ್ಷೆಯ ದೃಷ್ಟಿಯಿಂದ ಉತ್ತಮ.
ತಾಳೆ ಅಥವಾ ತೆಂಗಿನ ಮರಗಳಿಂದ ತೆಗೆಯುವ ಶೇಂದಿ ಬಾವಲಿಗಳಿಗೆ ಬಹಳ ಇಷ್ಟ. ಶೆಂದಿ ಅಥವಾ ನೀರಾ ಇಳಿಸಲು ಮರಕ್ಕೆ ಕಟ್ಟಿದ ಮಡಿಕೆಗೆ ಬಾವಲಿ ಬಾಯಿ ಹಾಕಿರುವ ಸಾಧ್ಯತೆಯಿರುವುದರಿಂದ ಇದನ್ನು ಕುಡಿಯುವುದು ಅಪಾಯಕಾರಿ. ನೀರಾ ಅಥವಾ ಶೇಂದಿ ಇಳಿಸಿ ಜೀವನ ಸಾಗಿಸುವವರಿಗೆ ಸದ್ಯ ತುಸು ಕಷ್ಟವಾಗಬಹುದು. ಅವರಿಗೆ ಸರಕಾರ ನೆರವು ನೀಡಬೇಕು. ರೋಗದ ತೀವ್ರತೆ ಕಡಿಮೆಯಾಗುವ ತನಕ ಕೇರಳದಿಂದ ಬರುವವರ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ ಮುಂಜಾಗರೂಕತೆಯ ಕ್ರಮ. ಕೋಝಿಕ್ಕೋಡ್, ಮಲಪುರಂ, ಕಣ್ಣೂರು ಮತ್ತು ವಯನಾಡು ಜಿಲ್ಲೆಗಳಿಗೆ ಹೋಗದಿರುವುದು ಉತ್ತಮ. ಈ ಜಿಲ್ಲೆಗಳಿಗೆ ಪ್ರವಾಸ ಮಾಡುವುದು ಬೇಡವೆಂದು ಕೇರಳ ಸರಕಾರವೇ ಹೇಳಿದೆ. ಹಂದಿಮಾಂಸ ತಿನ್ನದಿರುವುದು ಉತ್ತಮ.
ಹರಡದಂತೆ ಕ್ರಮ
ಸೋಂಕು ತಗಲಿದವರ ತೀರಾ ಸಾಂಗತ್ಯದಲ್ಲಿ ಇರುವುದನ್ನು ತಪ್ಪಿಸಬೇಕು. ಮುಖಗವಸು, ಕೈಗವಸು, ಗೌನ್ ಹಾಕಿಕೊಳ್ಳದೆ ಇರುವವರನ್ನು ಅಥವಾ ಸಂಶಯ ಇರುವವರ ಚಿಕಿತ್ಸೆ ಸಲ್ಲದು. ಆರೈಕೆ ಮಾಡಿದ ನಂತರ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು.
ರೋಗಿಯ ಎಂಜಲು, ಕಫ, ಮಲ, ಮೂತ್ರ, ರಕ್ತ, ಯಾವುದೇ ಕಾರಣಕ್ಕೂ ಆರೈಕೆ ಮಾಡುವವರ ದೇಹಕ್ಕೆ ತಾಗದೆ ಇರುವ ರೀತಿ ವಿಲೇವಾರಿ ಮಾಡಬೇಕು.
ಪ್ರಪಂಚದಲ್ಲಿ 1200 ಪ್ರಭೇದಗಳ ಬಾವಲಿಗಳಿವೆ. ಬರಿಯ ಸೊಳ್ಳೆಗಳನ್ನು ತಿಂದು ಬದುಕುವ ಹೀಗೆ ತರಾವರಿ ಬಾವಲಿಗಳನ್ನು ಪ್ರಕೃತಿ ಪ್ರಪಂಚಕ್ಕೆ ಕೊಟ್ಟಿದೆ. ಜೀವ ಜಗತ್ತಿನ “ಇಂಟರ್ ಲಿಂಕ್’ ಅಂದರೆ ಜೀವಜಗತ್ತಿನ ಹೊಂದಾಣಿಕೆಯ ವಿಸ್ಮಯ ನಮಗಿನ್ನೂ ಗೊತ್ತಿಲ್ಲ. ಬಾವಲಿಗಳು ಎಷ್ಟೋ ಜಾತಿಯ ಗಿಡ ಮರಗಳ ಉಳಿವಿಗೆ ಅಭಿವೃದ್ಧಿಗೆ ಕಾರಣ ಎನ್ನುವುದು ನಮಗೆಷ್ಟು ಗೊತ್ತು? ಪರಾಗಸ್ಪರ್ಶ ಮತ್ತು ಬೀಜ ಪ್ರಸರಣ ಮಾಡುವ ಬಾವಲಿಗಳು ನಮಗೇನು ಮಾಡಲ್ಲ. ಅವುಗಳು ವಾಸಿಸುವ ಪ್ರದೇಶದ ಅತಿಕ್ರಮಣ ನಾವು ಮಾಡುತ್ತಿರುವುದರಿಂದ ನಾವೇ ಅವುಗಳಿಗೆ ತೊಂದರೆ ಕೊಡುತ್ತಿದ್ದೇವೆ. ಹಾಗಾಗಿ ಪ್ರಕೃತಿ ಯಾವ ರೀತಿ ಶಿಕ್ಷೆ ಕೊಡಬೇಕೋ ಕಾಲವೇ ನಿರ್ಧಾರ ಮಾಡುತ್ತಿದೆ. ನನ್ನ ಮನೆ ಕೈ ತೋಟದಲ್ಲಿ ಇರುವ ಸಿಂಗಾಪುರ ಚೆರ್ರಿ (ಗಸಗಸೆ ಹಣ್ಣು) ಮರಕ್ಕೆ ಪ್ರತಿ ರಾತ್ರಿ ಫೂಟ್ ಬ್ಯಾಟ್ ಬಾವಲಿ ಬಂದು ಹೊಟ್ಟೆ ತುಂಬಾ ತಿನ್ನುವುದನ್ನು ವಿಡಿಯೋ ಮಾಡಿರುವ ನನಗೆ ನಿಫಾ ವೈರಸ್ ಜ್ಞಾನವೇ ಇರಲಿಲ್ಲ. ಇನ್ನೂ ವಿಸ್ಮಯವೆಂದರೆ ಅಹಮದಾಬಾದ್‌ನಿಂದ ಕಿಲೋಮೀಟರ್ ದೂರದ ರಾಜ್‌ಪುರ್ ಎನ್ನುವ ಊರಿಲ್ಲಿ ಇಪ್ಪತ್ತು ವರ್ಷಗಳಿಂದ ಎಪ್ಪತ್ತನಾಲ್ಕು ವಯಸ್ಸಿನ ಶಾಂತಾಬೇನ್ ಪ್ರಜಾಪತಿ ಅನ್ನುವ ಮಹಿಳೆ ಬಾವಲಿಗಳ ಜತೆ ವಾಸಮಾಡುತ್ತಿದ್ದಾರೆ. ನಮ್ಮ ಊರಿನಲ್ಲಿ ಈಗಾಗಲೇ ಬಾವಲಿಗಳನ್ನು ನಾಶ ಮಾಡುವ ಕಾರ್ಯಕ್ಕೆ ಜನ ಮುಂದಾಗುವ ಮೊದಲು ಇದನ್ನು ನೋಡಬೇಕು. ಆಸಕ್ತಿ ಇರುವವರು ಗೂಗಲ್‌ನಲ್ಲಿ “Shantaben prajapati” ಎಂದು ಟೈಪ್ ಮಾಡಿ ವಿಡೀಯೋ ನೋಡಿ. ಬಾವಲಿಗಳ ಬಗ್ಗೆ ಅನಾವಶ್ಯ ಭಯ ಭೀತಿ ಹೋಗುವುದರ ಜೊತೆ ಪ್ರಾಣಿ ಪ್ರಪಂಚದ ಒಂದು ಕೌತುಕ ಕಾಣುವ ಯೋಗ ಬರುತ್ತದೆ. ಎಚ್‌ಐವಿ, ಎಚ್1ಎನ್1, ಡೆಂಗ್ಯೂ, ಚಿಕುನ್‌ಗುನ್ಯಾ ಜ್ವರಗಳಂತೆ ಈಗ ಸುದ್ದಿ ಮಾಡುತ್ತಿರುವ ನಿಫಾ ವೈರಸ್ ಸೋಂಕಿಗೂ ಕಾಲವೇ ಉತ್ತರ ಕೊಡಬೇಕು. ನೋಡಿ ಹೆದರುವುದು, ಜ್ವರಬಂದವರನ್ನು ಬಿಟ್ಟು ಓಡಿಹೋಗುವ ಹಾಗೆ ಸುಳ್ಳು ಸುದ್ದಿ ಹಬ್ಬಿಸುವುದು, ದಿನಕ್ಕೊಂದು ಹೊಸ ಔಷಧಿ ಸಕ್ಸಸ್ ಅಂತ ಮರುಳಾಗುವ ಮೊದಲು ಕೂಲಂಕಷ ವಿಚಾರ ತಿಳಿದುಕೊಳ್ಳುವುದು ಅಗತ್ಯ.
ಡಾ| ರತ್ನಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.