ಉನ್ನತಾಧಿಕಾರದಿಂದ ಆರೋಗ್ಯಾಧಿಕಾರದತ್ತ
Team Udayavani, Nov 5, 2022, 6:15 AM IST
ಸಾರಿಗೆ ಇಲಾಖೆ ಎಂದಾಕ್ಷಣ ಅದರ ಆಕರ್ಷಣೆ ವಾಹನ ಹೊಂದಿರುವವರಿಗೆಲ್ಲರಿಗೂ ಗೊತ್ತು. ಸಾರಿಗೆ ಇಲಾಖೆಯಲ್ಲಿ ಆರ್‌ಟಿಒ ಬಹಳ ದೊಡ್ಡ ಹುದ್ದೆ, ಕೇವಲ ಗೌರವದಲ್ಲಿ ಮಾತ್ರವಲ್ಲ… ಈ ಹುದ್ದೆ ಸಿಗುವುದಕ್ಕೇ ಏಕೆ? ವರ್ಗಾವಣೆಯ ಕಿಮ್ಮತ್ತು ಕೆಲವು ಜಿಲ್ಲಾ ಮಟ್ಟದ ಹುದ್ದೆಯ ನೇಮಕಾತಿಗೇ ಇರ ಲಾರದು. ಇನ್ನು ವಿಭಾಗೀಯ ಮಟ್ಟದ ಜಂಟಿ/ಉಪ ಆಯುಕ್ತರೆಂದರೆ ಕೇಳುವುದೇ ಬೇಡ. ಈ ಹುದ್ದೆಯಲ್ಲಿದ್ದ ಪ್ರತಿಭಾವಂತರೊಬ್ಬರು (ಮುಂದೆ ಆಯುಕ್ತರಾಗುತ್ತಿದ್ದರೋ ಏನೋ?) ಹುದ್ದೆಯನ್ನು ಸ್ವಯಂ ತ್ಯಜಿಸಿ ಕೇವಲ ಆಹಾರ ಚಿಕಿತ್ಸೆಯಿಂದಲೇ ಆರೋಗ್ಯಭಾಗ್ಯ ಸಾಧ್ಯ ಎಂಬುದನ್ನು ತಾನು ತಿಳಿದು, ಸಾವಿರಾರು ಜನರ ಆರೋಗ್ಯ ಕಾಪಾಡುವ ಕಾಯಕದಲ್ಲಿ ತೊಡಗಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ದಳಸನೂರು ಗ್ರಾಮದಲ್ಲಿ ಜನಿಸಿದ ರಾಜಶೇಖರ್, ಅಧಿಕಾರಿಯಾಗಿ ವಿವಿಧೆಡೆ ಸುತ್ತಾಡಿ ಈಗ ಮತ್ತೆ ಕೋಲಾರ ಜಿಲ್ಲೆಗೇ ಹಿಂದಿರುಗಿ “ಜೀವ ಸಂಜೀವಿನ’ ಎಂಬ ಪ್ರಕೃತಿ-ಆಹಾರ ಚಿಕಿತ್ಸಾ ಕೇಂದ್ರವನ್ನು ನಡೆಸುತ್ತಿದ್ದಾರೆ.
ಇವರಿಗೆ ಬಾಲ್ಯದಲ್ಲಿಯೇ ಅನಾರೋಗ್ಯ ಮನೆ ಮಾಡಿತ್ತು. ವಿಪರೀತ ನೆಗಡಿ, ದಿನಕ್ಕೆ 400-500 ಸೀನುಗಳು, ಎಂಜಿನಿಯರಿಂಗ್ ಶಿಕ್ಷಣ ಓದುವಾಗ ರಾತ್ರಿಯಿಡೀ ಬಾಯಿಯಲ್ಲಿ ಉಸಿರಾಟ, ಆರ್‌ಟಿಒ ಆಗಿ ಸೇರುವಾಗ ಹಾರ್ಟ್ ಬ್ಲಾಕ್‌ನಿಂದ (ಶೇ.90 ಬ್ಲಾಕೇಜ್) ವಿಪರೀತ ಎದೆನೋವು ಹೀಗೆ ಬಗೆಬಗೆಯಲ್ಲಿ ತೊಳಲಾಡಿ ಬದುಕುವ ಆಸಕ್ತಿಯನ್ನೇ ಕಳೆದುಕೊಂಡವರು. 1987ರಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಮೈಸೂರು ವಿ.ವಿ.ಗೆ ಪ್ರಥಮ ರ್‍ಯಾಂಕ್ ಗಳಿಸಿದ ಹಿರಿಮೆಯೂ ಅನಾರೋಗ್ಯದ ಜತೆ ಕೈಗೂಡಿತು. ತೂಕ ಕಡಿಮೆಯಾಗಿ (40 ಕೆ.ಜಿ.) ವೈದ್ಯರೊಬ್ಬರ ಬಳಿ ಹೋದಾಗ ಸ್ಟಿರಾಯ್ಡ ಔಷಧ ಕೊಟ್ಟ ಪರಿಣಾಮ ಹಸಿವೆ ಹೆಚ್ಚಾಗಿ ತಿಂದು ಎರಡು ತಿಂಗಳಲ್ಲಿ 30 ಕೆ.ಜಿ. ತೂಕ ಏರಿಸಿಕೊಂಡರೂ ಬಂದದ್ದು ರಕ್ತದೊತ್ತಡ (ಬಿಪಿ). ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆಯೊಂದರಲ್ಲಿ ಸ್ನೇಹಿತರೊಬ್ಬರ ಬಳಿ ಇದ್ದ “ಸತ್ವಭರಿತ ಆಹಾರಗಳು’ ಪುಸ್ತಕ ರಾಜಶೇಖರರ ಜೀವನಪಥವನ್ನೇ ಬದಲಿಸಿತು.
ಹಸಿ ತರಕಾರಿಗಳನ್ನು ತಿನ್ನಲು ಆರಂಭಿಸಿ ಮೂರೇ ದಿನಗಳಲ್ಲಿ ಕೆಮ್ಮು, ಸೀನುಗಳೆಲ್ಲ ನಿಂತು ಹೋಯಿತು. ತಮಿಳುನಾಡಿನ “ಗುಡ್‌ಲೈಫ್’ ಆಶ್ರಮಕ್ಕೂ ಹೋಗಿ ತರಬೇತಿ ಪಡೆದರು. ಇಷ್ಟೆಲ್ಲ ನಡೆಸಿದರೂ ಕೆಲಸ ಬಿಟ್ಟಿರಲಿಲ್ಲ. ಇವರ ಆಹಾರ ಕ್ರಮವನ್ನು ಕಂಡು ಕೆಲವರು ಕುಚೋದ್ಯ ಮಾಡಿದ್ದೂ ಇದೆ. ಕುಚೋದ್ಯ ಮಾಡಿದವರ ಬಂಧುವೊಬ್ಬರಿಗೆ ಗ್ಯಾಂಗ್ರಿನ್ ಆಗಿ ಅವರನ್ನು ಉಪಚರಿಸಿದ್ದೇ ರಾಜಶೇಖರರ ಪ್ರಥಮ ಚಿಕಿತ್ಸೆ. ಒಬ್ಬೊಬ್ಬರೇ ಚಿಕಿತ್ಸೆ ಸಲಹೆಗಾಗಿ ಕಚೇರಿಗೆ ಬರುವುದು ಆರಂಭವಾಯಿತು. ಯಾವುದೇ ವಿದ್ಯಾರ್ಹತೆ ಇಲ್ಲದೆ ಉಪದೇಶ ಕೊಟ್ಟರೆ ಕೇಳುವವರಾರು? ಇದಕ್ಕಾಗಿ ಪಥ್ಯಾಹಾರ, ನೇಚರ್ ಕ್ಯೂರ್ ಕುರಿತು ಸ್ನಾತಕೋತ್ತರ, ಪೌಷ್ಟಿಕಾಂಶ ಕುರಿತು ಎಂಎಸ್ಸಿ ಪದವಿ ಗಳಿಸಿದರು. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ “ಹೃದಯಾಘಾತದಲ್ಲಿ ಆಹಾರ- ಜೀವನಶೈಲಿಯ ಕಾರಣಗಳೇನು?’ ಎಂಬ ಕುರಿತು ಒಂದು ವರ್ಷ ಸಂಶೋಧನೆಯನ್ನೂ ನಡೆಸಿದರು.
2010ರಲ್ಲಿ “ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಪುಸ್ತಕವನ್ನೂ ಬರೆದರು. ಅದೇ ವೇಳೆ ಸ್ವಯಂ ನಿವೃತ್ತಿಯನ್ನೂ ಪಡೆದುಕೊಂಡರು. “ಇಷ್ಟು ದೊಡ್ಡ ಹುದ್ದೆ ಬಿಡುವುದು ಸರಿಯಲ್ಲ’ ಎಂದು ಒಳ್ಳೆಯ ದೃಷ್ಟಿಯಿಂದ ಸಲಹೆ ನೀಡಿದವರೂ ಇದ್ದರು, ನಗುವವರೂ, ಹೀಯಾಳಿಸುವವರೂ ಇದ್ದರು. 2010ರಲ್ಲಿ ಸಣ್ಣ ಪ್ರಮಾಣದಲ್ಲಿ ಕ್ಲಿನಿಕ್ ತೆರೆದಾಗ ಬರುತ್ತಿದ್ದ ವಿರಳ ರೋಗಿಗಳಿಗೆ ಆದ ಅನುಭವ ಬಾಯಿಂದ ಬಾಯಿಗೆ ಪ್ರಚಾರವಾಗಿ ವಿಸ್ತರಣೆಯಾಯಿತು.
ಪ್ರಾಥಮಿಕ ಹಂತದ ಅನಾರೋಗ್ಯ ಸಮಸ್ಯೆಗಳಾದ ಬಿಪಿ, ಶುಗರ್ ಮುಂದೆ ಘನಘೋರ ಕಾಯಿಲೆಗೆ ಕಾರಣವಾಗುತ್ತದೆ. ಇದನ್ನು ಮೊದಲೇ ಚಿವುಟಿ ಹಾಕಲು ಮೊದಲೇ ಜೀವನಶೈಲಿಯ ಬದಲಾವಣೆ ಅಗತ್ಯ ಎನ್ನುವ ರಾಜಶೇಖರ್, ಗಾಳಿ, ಬಿಸಿಲು, ನಿದ್ರೆ, ನಡಿಗೆ ಇವೆಲ್ಲವೂ ಜೀವನದ ಭಾಗ ಎನ್ನುತ್ತಾರೆ. ಅನಾರೋಗ್ಯಪೀಡಿತರಿಗಾಗಿ ಏಳು ದಿನಗಳ ಕೋರ್ಸ್ ನಡೆಸುತ್ತಿದ್ದಾರೆ. ಕೋಲಾರದಿಂದ 15 ಕಿ.ಮೀ. ದೂರದ ಚಾಮರಹಳ್ಳಿಯ 30 ಎಕ್ರೆ ಜಾಗದಲ್ಲಿ ತಾಜಾ ಹಣ್ಣು, ತರಕಾರಿಗಳನ್ನು ಬೆಳೆಸಿ ಅದನ್ನೇ ರೋಗಿಗಳಿಗೆ ಕೊಡುತ್ತಾರೆ.
ಏನು ಬೇಕು? ಏನು ಮಾಡುತ್ತಿದ್ದೇವೆ?
ಕಾಲ್ನಡಿಗೆ ಬೇಕೇ ಬೇಕು. ಹಿಂದೆ 8-10 ಕಿ.ಮೀ. ಸಹಜವಾಗಿ ನಡೆಯುತ್ತಿದ್ದ ನಮಗೆ ಕಾಲ್ನಡಿಗೆ ಬಗ್ಗೆ ಈಗ ತಿಳಿಹೇಳಬೇಕಾಗಿದೆ.
ಬಿತ್ತನೆ ಸಮಯದಿಂದ ಹಿಡಿದು ಸಂಸ್ಕರಣೆಯಲ್ಲಿ (ಪಾಲಿಶ್), ಬೇಯಿಸುವ ಮೂಲಕ ಆಹಾರದ ಸತ್ವಗಳನ್ನು ಕಡಿಮೆ ಮಾಡುತ್ತಿದ್ದೇವೆ.
ಮನುಷ್ಯನಿಗೆ ಅಕಾಲದ ಮುಪ್ಪು ಆವರಿಸಿದೆ. 30 ವರ್ಷಕ್ಕೇ ಮಧುಮೇಹ ಆವರಿಸಿಕೊಳ್ಳುತ್ತಿದೆ. ಭಾರತದಲ್ಲಿ 40 ಕೋಟಿ ಜನರಿಗೆ ರಕ್ತದೊತ್ತಡವಿದೆ. ಇದು ಹೃದಯ, ಕಿಡ್ನಿ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅತೀ ಉಪ್ಪಿನ ಬಳಕೆ. ಒಬ್ಬ ವ್ಯಕ್ತಿಗೆ ದಿನಕ್ಕೆ 5 ಗ್ರಾಂ ಉಪ್ಪು ಸಾಕು. ಈಗಿನ ಬಳಕೆ 15 ಗ್ರಾಂ. ಎಣ್ಣೆ ಪ್ರಮಾಣ 15 ಎಂಎಲ್ ಸಾಕು. ಈಗಿನ ಬಳಕೆ 50 ಎಂಎಲ್ (ಅದರಲ್ಲೂ ಕುದಿಸಿದ್ದು). ಮನೆಯಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಒಟ್ಟು ಲೆಕ್ಕ ಹಾಕಿ ಉಪ್ಪು, ಎಣ್ಣೆಯನ್ನು ತಂದರೆ ಸುಲಭವಾಗುತ್ತದೆ.
ಲಕ್ಷಾಂತರ ಜೀವಕೋಶಗಳು ದೇಹದಲ್ಲಿವೆ. ಇವುಗಳಿಗೆ ಜೀವ ಇರುವ ಸತ್ವ ಆಹಾರವನ್ನು ಕೊಡಬೇಕು. ಇದು ಇರುವುದು ಹಣ್ಣು, ತರಕಾರಿಗಳಲ್ಲಿ. ತರಕಾರಿಗಳನ್ನು ಬೇಯಿಸಿದಾಗ ವಿಟಮಿನ್ ಸಿ ನಷ್ಟವಾಗುತ್ತದೆ. ಪಾಲಿಶ್ ಮಾಡಿದ್ದರಿಂದ ಅಕ್ಕಿಯ ಸತ್ವ ಅಂಶ ನಾಶವಾಗುತ್ತದೆ. ಆದ್ದರಿಂದ ಕನಿಷ್ಠ ಶೇ.33 ಭಾಗವನ್ನಾದರೂ ಹಸಿ ತರಕಾರಿ (ಸಲಾಡ್), ಹಣ್ಣು ಸೇವಿಸಬೇಕು (ಮಧುಮೇಹವಿದ್ದರೆ ನಿಯಂತ್ರಣಕ್ಕೆ ಬಂದ ಬಳಿಕ). ಮಾಂಸಾಹಾರಿಗಳು ಮಾಂಸಾಹಾರವನ್ನು ವಾರಕ್ಕೊಮ್ಮೆ ಬಳಸಿದರೆ ಸಾಕು.
ಮಧ್ಯರಾತ್ರಿ 12 ಗಂಟೆ ನಿದ್ರೆಯ ಕೇಂದ್ರಸ್ಥಾನವಾಗಿರಬೇಕು. ಅಂದರೆ ಅದರ ಮುಂಚೆ ನಾಲ್ಕು, ಅನಂತರ ನಾಲ್ಕು ಗಂಟೆಯ ನಿದ್ರೆ ಅಗತ್ಯ.
ಹುಟ್ಟು -ಸಾವು, ಅಂದು -ಇಂದು
ಹುಟ್ಟೂ ಮನೆಯಲ್ಲಿ ಸಾವೂ ಮನೆಯಲ್ಲಿ ನಾಲ್ಕು ದಶಕಗಳ ಹಿಂದಿನ ಚಿತ್ರ
ಹುಟ್ಟೂ ಆಸ್ಪತ್ರೆಯಲ್ಲಿ ಸಾವೂ ಆಸ್ಪತ್ರೆಯಲ್ಲಿ ಬದಲಾಗಿದೆ ಜೀವನ ಚಕ್ರ
ಹುಟ್ಟಿಗೂ ಹಣವಿಲ್ಲ, ಸಾವಿಗೂ ಹಣವಿಲ್ಲ ನಾಲ್ಕು ದಶಕಗಳ ಹಿಂದಿನ ಚಿತ್ರ
ಹುಟ್ಟಿಗೂ ಹಣ ಬೇಕು ಸಾವಿಗೂ ಹಣ ಬೇಕು ಬದಲಾಗಿದೆ ಜೀವನ ಚಕ್ರ
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.