ಭಾರತ ಸೇನೆಯ ವಿಜಯಗಾಥೆ ಸರಣಿ: ಅನ್ನಕೊಡಿ, ಬಂದೂಕು ಹಿಡಿಯಲೂ ತಾಕತ್ತಿಲ್ಲ!
Team Udayavani, Dec 16, 2021, 7:50 AM IST
ವೀರಪ್ಪ ಘುಮ್ಕರ್,
ನಿವೃತ್ತ ಹವಾಲ್ದಾರ್, 26 ಮದ್ರಾಸ್ ಯುನಿಟ್
ನಾನು ಆಗ ತಾನೇ ಸೈನ್ಯಕ್ಕೆ ಸೇರಿದ್ದೆ. ಬಾಂಗ್ಲಾ ವಿಮೋಚನೆಗಾಗಿ ಇಂಡೋ- ಪಾಕ್ ಯುದ್ಧ ಎಂದು ಘೋಷಣೆ ಆಗುವ ಹೊತ್ತಿಗೆ ನಾನು ಅದೇ ಬಾಂಗ್ಲಾ ಬುಡದ ಕೊಲ್ಕತಾದ ಬ್ಯಾರಕ್‌ಪುರದಲ್ಲಿದ್ದೆ. ಡಿಸೆಂಬರ್ 7ಕ್ಕೆ ಢಾಕಾದತ್ತ ಹೊರಡಲು ಆದೇಶ ಬಂತು. ಆ ಹೊತ್ತಿಗಾಗಲೇ ಜೆಸ್ಸೋರ್ ಪ್ರದೇಶದಲ್ಲಿ ಘನಘೋರ ಫೈರಿಂಗ್ ಶುರುವಾಗಿತ್ತು.
ಪಾಕ್‌ನ ಟ್ಯಾಂಕರ್‌ಗಳ ಸದ್ದಡಗಿಸಲು ನಮಗೆ ಹೆಚ್ಚು ಕಾಲ ತಗಲಲಿಲ್ಲ.
ಜೆಸ್ಸೋರ್ ನಲ್ಲಿ ನಮ್ಮ ಜೈಕಾರ ಮೊಳಗಿದ ಮೇಲೆ, ಡಿ.10ರಂದು ಪಾಕ್‌ನ ಕಪಿಮುಷ್ಟಿಯಲ್ಲಿದ್ದ ಖುಲ್ನಾ ಕಡೆಗೆ ಮುನ್ನುಗ್ಗಿದ್ದೆವು. ನಮ್ಮ ತಂಡ ಟ್ಯಾಂಕರ್ ಸಮೇತ ಪದ್ಮಾವತಿ ನದಿಗೆ ಕಟ್ಟಿದ್ದ ಸೇತುವೆ ಮೇಲೆ ಸಾಗುತ್ತಿತ್ತು. ಅಷ್ಟರಲ್ಲೇ ನಡೆಯಿತು, ಪಾಕ್ ಸೈನಿಕರಿಂದ ಏರ್ ಅಟ್ಯಾಕ್. ನಮ್ಮ 26 ಬೆಟಾಲಿಯನ್, 19 ಮರಾಠಾ ತುಕಡಿಯ ಅರ್ಧದಷ್ಟು ಯೋಧರು ನೀರಿನಲ್ಲಿ ಮುಳುಗಿ ಮಡಿದರೆ, ಮತ್ತೆ ಕೆಲವರು ನೇರ ಬಾಂಬ್ ಬೆಂಕಿಗೆ ಆಹುತಿಯಾದರು. ತುಂಡಾದ ಸೇತುವೆ ಮೇಲೆ ನಾವೊಂದಿಷ್ಟು ಮಂದಿ ಮಾತ್ರವೇ ಉಳಿದುಕೊಂಡಿದ್ದೆವು.
ಅಚ್ಚರಿಯೆಂದರೆ ಹಾಗೆ ಮುರಿದ ಸೇತುವೆಯನ್ನು ಕೊಲ್ಕತಾ, ಬಾಂಬೆ, ಮದ್ರಾಸ್‌ನ ಎಂಜಿನಿಯರ್‌ಗಳು ಕೇವಲ ಮೂರೇ ಗಂಟೆಗಳಲ್ಲಿ ಮರು ಕಟ್ಟಿದರು. ನಾವು ಟ್ಯಾಂಕರ್ ಸಮೇತ ದಾಟಿದೆವು. ಶಿರೋಮಣಿ ಎಂಬ ಹಳ್ಳಿಯನ್ನು 13ನೇ ತಾರೀಖಿನೊಳಗೆ ವಶಕ್ಕೆ ತೆಗೆದುಕೊಳ್ಳುವ ಯೋಜನೆ ನಮ್ಮದಾಗಿತ್ತು. ಹಾದಿಯ ಮರೆಯಲ್ಲಿದ್ದ ಪಾಕ್‌ನ ಒಂದು ತುಕಡಿಯನ್ನು ಕವರಿಂಗ್ ಫೈರ್‌ನ ನೆರವಿನಿಂದ ಸಂಹರಿಸಿದ್ದೆವು.
ಶಿರೋಮಣಿ ಹಳ್ಳಿಗೆ ಕಾಲಿಟ್ಟಾಗ ಕಂಡಿದ್ದು ಅಕ್ಷರಶಃ ನರಕ. ಪಾಕ್ ಸೈನಿಕರು ವಿಕೃತ ಮೆರೆದಿದ್ದರು. ಅದನ್ನು ಕಂಡು ನಮ್ಮ ರೋಷಾವೇಶ ಇಮ್ಮಡಿಸಿತು. ಬಾಂಗ್ಲಾ ಹೆಂಗಳೆಯರ ಮೇಲೆ ಪಾಕ್ ಸೈನಿಕರ ಅತ್ಯಾಚಾರ, ಅನಾಚಾರ ಎಲ್ಲೆ ಮೀರಿತ್ತು. ಪುರುಷರು ತಮ್ಮ ಮನೆಗಳನ್ನೂ ಬಿಟ್ಟು ಓಡಿಹೋಗಿದ್ದರು. ಅಲ್ಲೊಂದು ಇಡೀ ಕುಟುಂಬವನ್ನೇ ಕಟ್ಟಿಹಾಕಿ ಚಿತ್ರಹಿಂಸೆ ನೀಡಲಾಗಿತ್ತು. ಆ ಸಂತ್ರಸ್ತರನ್ನು ರಕ್ಷಿಸಿದೆವು.
ಇದನ್ನೂ ಓದಿ:ಎನ್‌ಕೌಂಟರ್: ಎ+ ಕೆಟಗರಿಯ ಹಿಜ್ಬುಲ್ ಉಗ್ರನ ಹತ್ಯೆ
ಸಾಲಾಗಿ ನಿಂತಿದ್ದ ಪಾಕ್‌ನ ಟ್ಯಾಂಕರ್‌ಗಳನ್ನು ವಶಪಡಿ ಸಿಕೊಳ್ಳುವಾಗ ವಿಚಿತ್ರ ಸನ್ನಿವೇಶ ಕಣ್ಣಿಗೆ ಬಿತ್ತು. ಟ್ಯಾಂಕರ್‌ಗಳ ಹಿಂದೆ ಅಡಗಿದ್ದ ಪಾಕ್ ಸೈನಿಕರು ಆಹಾರವಿಲ್ಲದೆ ಬಳಲುತ್ತಿದ್ದರು. “ನಮಗೆ ಆಹಾರ ಕೊಡಿ. ನಮ್ಮ ತೋಳುಗಳಲ್ಲಿ ಮದ್ದುಗುಂಡು ಗಳನ್ನು ಚಲಾಯಿಸುವ ಶಕ್ತಿ ಇಲ್ಲ’ ಎಂದು ಅಂಗಲಾಚುತ್ತಿದ್ದರು. ಬೆಳಗ್ಗೆ 5ರ ಹೊತ್ತಿಗಾಗಲೇ ಮದ್ದುಗುಂಡುಗಳ ಸಂಗ್ರಹಾಲಯ, ಪೆಟ್ರೋಲ್ ಟ್ಯಾಂಕರ್‌ಗಳೆಲ್ಲವನ್ನೂ ವಶಕ್ಕೆ ಪಡೆದೆವು.
ಅಲ್ಲಿದ್ದ ಪಾಕ್ ಸೈನಿಕರನ್ನು ಯುದ್ಧಕೈದಿಗಳನ್ನಾಗಿ ಸಾಗಿಸುವಾಗ, ಊರಿನವರೆಲ್ಲ ಅವರ ಮೇಲೆ ಚಪ್ಪಲಿಗಳನ್ನು ಎಸೆದು ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡರು. ಇನ್ನೇನು ಶಿರೋಮಣಿ ಹಳ್ಳಿ ಸಂಪೂರ್ಣವಾಗಿ ನಮ್ಮ ಕೈವಶವಾಗುವ ಹೊತ್ತಿಗೆ ನನ್ನ ಎದೆಗೆ ಗುಂಡು ತಗಲಿದ್ದೂ ನನಗೆ ತಿಳಿದಿರಲಿಲ್ಲ. ಅನತಿ ದೂರ ಹೋದ ಮೇಲೆ ನನ್ನ ಸಮವಸ್ತ್ರ ಸಂಪೂರ್ಣ ರಕ್ತಮಯವಾಗಿದ್ದನ್ನು ಕಂಡು, ಎದೆಯ ಮೇಲೆ ಬೆರಳುಗಳನ್ನು ಆಡಿಸಿದೆ. ಎದೆಗೆ ಗುಂಡು ಬಡಿದ ಸಂಗತಿ ಗೊತ್ತಾಗಿದ್ದೇ ಆಗ. ಅಲ್ಲೇ ಬಿದ್ದ ನಾನು ಕಣ್ಣು ಬಿಡುವ ಹೊತ್ತಿಗೆ ಕೊಲ್ಕತಾದ ಮಿಲಿಟರಿ ಆಸ್ಪತ್ರೆಯಲ್ಲಿ ಮಲಗಿದ್ದೆ.
ಮರುದಿನ ನನ್ನೆದುರು ಪ್ರಧಾನಿ ಇಂದಿರಾಗಾಂಧಿ ನಿಂತಿದ್ದರು. ನನ್ನ ಆರೋಗ್ಯ ವಿಚಾರಿಸುತ್ತಾ, “ಶಹಬ್ಟಾಸ್ ನೀನು ವೈರಿಗಳ ಮುಂದೆ ಎದೆಗೊಟ್ಟು ಹೋರಾಡಿದ್ದೀಯ. ನಿಮ್ಮಂಥ ಜವಾನರೇ ನಮ್ಮ ದೇಶಕ್ಕೆ ಬೇಕು. ನೀನು ದೇಶದ ರಕ್ಷಣೆ ಮಾಡು, ನಾನು ನಿಮ್ಮ ತಂದೆ- ತಾಯಿಯ ರಕ್ಷಣೆ ಮಾಡುವೆ’ ಎಂದಿದ್ದರು. ಆ ಮಾತು ಈಗಲೂ ನನ್ನ ಹೃದಯದ ಕಿವಿಯಲ್ಲಿ ಬೆಚ್ಚಗೆ ಕುಳಿತಿದೆ.
ನಿರೂಪಣೆ: ವಾಣಿ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.