Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
ಬೆಳೆ ಕನ್ನಡ-6: ಕನ್ನಡ ಹೋರಾಟವು ಇತರ ಭಾಷಿಕ ಹೋರಾಟಗಾರರಿಗೆ ಮಾದರಿ, ಪ್ರತಿಯೊಬ್ಬರೂ ದನಿ ಎತ್ತಿದರೆ ಅನ್ಯಭಾಷಿಕರೂ ಕನ್ನಡ ಕಲಿಯುತ್ತಾರೆ
Team Udayavani, Nov 7, 2024, 7:25 AM IST
ಕಳೆದ 50 ವರ್ಷಗಳಲ್ಲಿ ಕನ್ನಡ ಭಾಷೆ ಎದುರಿಸಿರುವ ಸಮಸ್ಯೆ- ಸವಾಲುಗಳು ಒಂದೆರಡಲ್ಲ. ಮುಖ್ಯವಾಗಿ ಅನ್ಯಭಾಷಾ ಹೇರಿಕೆಯಂಥ ಸಮಸ್ಯೆಗಳು ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ನಿತ್ಯ ಸಂಕಟಗಳಾಗಿ ಪರಿಣಮಿಸಿವೆ. ವಿಶೇಷವೆಂದರೆ ಇಂಥ ಹೇರಿಕೆಯ ವಿರುದ್ಧ ಕನ್ನಡ ಪರ ಹೋರಾಟಗಾರರು ನಿರಂತರವಾಗಿ ಹೋರಾಡುತ್ತಿದ್ದಾರೆ. ಹಿಂದಿನ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳುತ್ತಲೇ, ಮುಂದಿನ ಹೋರಾಟದ ದಾರಿ ಹೇಗಿರಬೇಕು ಎಂಬುದರ ವಿವರಣೆ ಇಲ್ಲಿದೆ…
ಕನ್ನಡ ಪರ ಹೋರಾಟವು ದಶಕಗಳಿಂದ ಕೇವಲ ಕನ್ನಡಿಗರ ಹಕ್ಕಿಗಾಗಿ ಅಲ್ಲದೇ ಬಹುಭಾಷಿಕ ಭಾರತ ಒಕ್ಕೂಟದಲ್ಲಿ ಭಾಷಾ ಹೋರಾಟದ ಮೂಲಕ ಜನರ ಬದುಕಿಗಾಗಿ ಎಲ್ಲರನ್ನು ಒಳಗೊಂಡಂತೆ ಮಾದರಿಯಾಗುವಂತಹ ಹೋರಾಟವನ್ನು ನಡೆಸಿ, ಇಡೀ ಭಾರತ ಒಕ್ಕೂಟಕ್ಕೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
ಕನ್ನಡ ನಾಡು ಭಾರತ ಒಕ್ಕೂಟ ಸೇರಿದ ಅನಂತರದ ದಿನದಲ್ಲಿ, ಏಕೀಕರಣ ಹೋರಾಟ ಪ್ರಬಲವಾಗಿ ನಡೆದಿತ್ತು. ಬಹುಪಾಲು ಕನ್ನಡಿಗರು ಒಂದೇ ರಾಜ್ಯದ ಆಡಳಿತಕ್ಕೆ ಒಳಪಡಲು ಈ ಹೋರಾಟದಿಂದ ಸಾಧ್ಯವಾಯಿತು. 1960ರ ದಶಕದಲ್ಲಿ ಕೇಂದ್ರ ಸರಕಾರ ಹಿಂದಿಯನ್ನು ಕನ್ನಡಿಗರ ಮೇಲೆ ಹೇರಲು ಹೊರಟಾಗ ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರು ತೀವ್ರವಾಗಿ ಪ್ರತಿಭಟನೆ ನಡೆಸಿದರು. ಅಂದಿನ ಈ ಚಳವಳಿ ಇಂದಿಗೂ ಭಾರತ ಒಕ್ಕೂಟದಲ್ಲಿ ನಡೆಯುತ್ತಿರುವ ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ಮಾದರಿಯಾಗಿದೆ. 1980ರ ದಶಕದಲ್ಲಿ ಕನ್ನಡದ ಮೇಲೆ ಸಂಸ್ಕೃತದ ಹೇರಿಕೆಯನ್ನು ವಿರೋಧಿಸಿ ನಡೆದ ಗೋಕಾಕ್ ಚಳವಳಿ, ಕನ್ನಡಿಗರ ದೊಡ್ಡ ಹೋರಾಟಗಳಲ್ಲಿ ಒಂದು. ಈ ಚಳವಳಿಯ ಕೇಂದ್ರಬಿಂದು ಡಾ| ರಾಜ್ ಕುಮಾರ್ ಇಂದಿಗೂ ಕನ್ನಡ ಚಳವಳಿಯ ಬಹುದೊಡ್ಡ ಪ್ರೇರಣೆ.
ಸವಾಲುಗಳು ಹೆಚ್ಚುತ್ತಲೇ ಇವೆ…
ಭಾರತ ಒಕ್ಕೂಟದಲ್ಲಿ ಹಿಂದಿಯೇತರ ಜನರಿಗೆ ರೈಲ್ವೇ, ಬ್ಯಾಂಕ್‌ಗಳ ಉದ್ಯೋಗ ತಾರತಮ್ಯಗಳು ಎದುರಾದಾಗ. ಮೊದಲಿಗೆ ಪ್ರತಿಭಟಿಸಿದ್ದೇ ಕನ್ನಡ ಪರ ಹೋರಾಟಗಾರರು, ಇಂದು ಈ ತಾರತಮ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಕೇವಲ ಕನ್ನಡಿಗರಲ್ಲದೇ, ಹಿಂದಿಯೇತರ ಭಾಷಿಕರಿಗೆ ತಮ್ಮ ಭಾಷೆಯ ಮೂಲಕ ರೈಲ್ವೇ, ಬ್ಯಾಂಕ್‌ನ ಉದ್ಯೋಗ ಪಡೆದುಕೊಳ್ಳಲು ಅವಕಾಶ ಸಿಗಲು ಕನ್ನಡ ಪರ ಹೋರಾಟ ಕಾರಣವಾಗಿದೆ. ಈ ಮೂಲಕ ಕನ್ನಡ ಪರ ಹೋರಾಟ ಇಡೀ ಭಾರತ ಒಕ್ಕೂಟದ ಜನರ ಭಾಷಾ ಹಕ್ಕಿನ ಪರವಾಗಿ ನಿಂತಿದೆ. ನಾವೀಗ ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಇದ್ದೇವೆ. ಭಾಷಾ ಹಕ್ಕುಗಳ ಹೋರಾಟದ ತೀವ್ರತೆ ಒಂದು ಕಡೆ ಹೆಚ್ಚಿದಂತೆ ಕನ್ನಡಕ್ಕೆ ಎದುರಾಗುತ್ತಿರುವ ಸವಾಲುಗಳೂ ಹೆಚ್ಚಾಗುತ್ತಲೇ ಇವೆ. ತಂತ್ರಜ್ಞಾನ ಭಾಷೆಯು ಕನ್ನಡದಂಥಾ ಭಾಷೆಗಳ ಬಳಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿದಂತೆಯೇ, ಹಿಂದಿ ಭಾಷೆಗೆ ದೇಶಾದ್ಯಂತ ಹೆಚ್ಚಿನ ಮಹತ್ವ ಕೊಡಿಸಲು ಸಹ ಸಹಕಾರಿಯಾಗಿದೆ.
ಅಭಿಯಾನದ ಮೂಲಕ ಹೋರಾಟ
ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಇಂದಿಗೂ ಭಾರತ ಸರಕಾರದ ಆಡಳಿತ ಭಾಷೆ ಸ್ಥಾನವನ್ನು ಹಿಂದಿ/ಇಂಗ್ಲಿಷ್ ಭಾಷೆಗಳಿಗೆ ಮಾತ್ರ ನೀಡ ಲಾಗಿದೆ. ಈ ಭಾಷೆ ತಿಳಿಯದ ನಾಗರಿಕರು ಸರಕಾರದ ನಾಗರಿಕ ಸೇವೆ ಗಳನ್ನು ಪಡೆಯಲು ಕಷ್ಟ ಪಡಬೇಕಾದ ಅನಿರ್ವಾರ್ಯತೆ ನಿರ್ಮಾಣವಾಗಿದೆ. ಇದರ ಜತೆಗೆ ಕಾಯ್ದೆ, ಕಾನೂನುಗಳನ್ನು ಹಿಂದಿ/ ಇಂಗ್ಲಿಷ್‌ನಲ್ಲಿ ಮಾತ್ರ ಪ್ರಕಟಿಸುವುದರಿಂದ ಹಿಂದಿಯೇತರ ಜನರು ಕಾಯ್ದೆ ರೂಪಿಸುವ ಪ್ರಕ್ರಿಯೆ ಯಿಂದಲೇ ದೂರ ಉಳಿಯುವಂತೆ ಮಾಡಿದೆ.
ಇದನ್ನು ಸರಿಪಡಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿದ ಹೋರಾಟವೇ Make My Language Official ಅಭಿಯಾನ, ಇದು ಕೇವಲ ಕನ್ನಡವಲ್ಲದೇ ಹಿಂದಿಯೇತರ ಭಾರತೀಯ ಭಾಷೆಗಳಿಗೆ ಆಡಳಿತ ಭಾಷೆಯ ಸ್ಥಾನ ನೀಡಬೇಕೆಂದು ಒತ್ತಾಯ ಮಾಡುತ್ತಿರುವ ಹೋರಾಟ, ಈ ಮೂಲಕ ಸಾಮಾನ್ಯ ಜನರಿಗೆ ತಮ್ಮ ಭಾಷೆಯಲ್ಲೇ ಭಾರತ ಸರಕಾರದ ಸೇವೆಗಳು, ಸವಲತ್ತುಗಳು ಸಿಗಲು ಅವಕಾಶ ಕಲ್ಪಿಸಿದಂತಾಗುತ್ತದೆ ಎನ್ನುವುದು ಈ ಹೋರಾಟದ ಮೂಲ ಉದ್ದೇಶ. ಈ ಹೋರಾಟದ ಮೂಲಕ ಕನ್ನಡ ಹೋರಾಟ ಕನ್ನಡವಲ್ಲದೆ ಹಿಂದಿಯೇತರ ಭಾರತೀಯ ಭಾಷೆಗಳ ನಾಗರಿಕರ ಭಾಷಾ ಹಕ್ಕುಗಳನ್ನು ಎತ್ತಿಹಿಡಿಯಲು ಮುಂದಾಗಿದೆ.
ನಿರಂತರ ಹೋರಾಟದಿಂದ ಯಶಸ್ಸು
ಇಂದು ಕನ್ನಡ ನಾಡಿನಲ್ಲಿ ಭಾರತದ ಕಂಪೆನಿಗಳನ್ನೊಳಗೊಂಡಂತೆ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ವಸ್ತು ಮತ್ತು ಸೇವೆಯನ್ನು ಕನ್ನಡ ನಾಡಿನಲ್ಲಿ ಮಾರಾಟ ಮಾಡುತ್ತಿವೆ. ಇಂದಿನ ಭಾರತ ಒಕ್ಕೂಟದ ಗ್ರಾಹಕ ಹಕ್ಕುಗಳ ಕಾಯ್ದೆಯಲ್ಲಿ ಹಿಂದಿ/ಇಂಗ್ಲಿಷ್ ಗೊತ್ತಿರುವ ಗ್ರಾಹಕರ ಭಾಷಾ ಹಕ್ಕುಗಳನ್ನು ರಕ್ಷಿಸಲು ಅಂಶಗಳನ್ನು ಸೇರಿಸಲಾಗಿದೆಯೇ ಹೊರತು, ಹಿಂದಿಯೇತರ ನಾಗರಿಕರ ಗ್ರಾಹಕ ಹಕ್ಕುಗಳನ್ನು ರಕ್ಷಿಸಲು ಗಟ್ಟಿಯಾದ ಅಂಶಗಳನ್ನು ಸೇರಿಸಲಾಗಿಲ್ಲ.
ಭಾರತೀಯ ಗ್ರಾಹಕರ ಭಾಷಾ ಹಕ್ಕಿನ ರಕ್ಷಣೆ ಬಗ್ಗೆ ಮೊದಲಿಗೆ ದನಿಯೆತ್ತಿರುವುದೂ ಕನ್ನಡ ಹೋರಾಟವೇ ಎನ್ನುವುದು ಸಹ ಹೆಮ್ಮೆಯ ವಿಚಾರವೇ ಆಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲ ತಾಣದಲ್ಲಿ “Serve In My Language’ ಅಭಿಯಾನದ ಮೂಲಕ ಭಾಷಾ ಕೇಂದ್ರಿತ ಗ್ರಾಹಕ ಹಕ್ಕುಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಒಂದೆಡೆ ಗ್ರಾಹಕ ಹಕ್ಕುಗಳಲ್ಲಿ ಭಾಷೆಯ ಆಯಾಮಕ್ಕೆ ಪ್ರಾಮುಖ್ಯ ಸಿಗಬೇಕು ಎನ್ನುವಂತೆ ಅಭಿಯಾನ ನಡೆದರೆ ಇನ್ನೊಂದೆಡೆ ಕಂಪೆನಿಗಳು ಕನ್ನಡದಲ್ಲಿ ಸೇವೆ ನೀಡಬೇಕೆಂದು ಒತ್ತಡ ಹಾಕುತ್ತಿರುವುದು ಕನ್ನಡದ ಬಳಕೆಯನ್ನು ಹೆಚ್ಚಾಗುವಂತೆ ಮಾಡುತ್ತಿದೆ. ಇಂದು ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಯಲ್ಲಿ ಗ್ರಾಹಕ ಸೇವೆ ಒದಗಿಸಲು ಕನ್ನಡ ಪರ ಹೋರಾಟ, ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಇದಕ್ಕೆ ಪೂರಕವಾಗಿ ಕರವೇ ನಡೆಸಿದ “ನಾಮಫಲಕದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕೆನ್ನುವ’ ಹೋರಾಟ ಕನ್ನಡ ನಾಡಿನಲ್ಲಿ ಕನ್ನಡ ಗ್ರಾಹಕನಿಗೆ ರಾಜನ ಸ್ಥಾನ ಒದಗಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಆಗಬೇಕಾದ್ದೇನು?
1. ಕನ್ನಡ ಮುಂದಿನ ಪೀಳಿಗೆಗೆ ಗಟ್ಟಿಯಾಗಿ ಸಾಗಬೇಕೆಂದರೆ ಕನ್ನಡ ಮಾಧ್ಯಮ ಶಿಕ್ಷಣವನ್ನು ಗಟ್ಟಿಗೊಳಿಸಬೇಕು. ಇದು ಸರಕಾರದ ಜವಾಬ್ದಾರಿ. ಸರಕಾರವನ್ನು ಎಚ್ಚರಿಸುವ ಜವಾಬ್ದಾರಿ ಕನ್ನಡ ಪರ ಹೋರಾಟದ್ದು.
2. ತಂತ್ರಜ್ಞಾನ/ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಗುಮ್ಮ ಎಂದುಕೊಳ್ಳದೆ, ತಂತ್ರಜ್ಞಾನದ ಮೂಲಕ ಹೇಗೆ ಕನ್ನಡದ ಬಳಕೆಯನ್ನು ಹೆಚ್ಚು ಮಾಡಲು ಸಾಧ್ಯ ಎನ್ನುವ ಕಡೆಗೆ ಗಮನ ಕೊಡಬೇಕು.
3. ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಯಾವ ಭಾಷೆಗಿಂತಲೂ ಹಿಂದೆಯಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಎರಡನೇ ದರ್ಜೆ ಸ್ಥಾನವನ್ನು ಎಂದಿಗೂ ಒಪ್ಪಬಾರದು. ಯಾವುದೇ ರೀತಿಯ ಭಾಷಾ ಹೇರಿಕೆಯನ್ನು ಒಪ್ಪಿಕೊಳ್ಳಬಾರದು.
4. ಬ್ಯಾಂಕ್, ಸರಕಾರಿ ಕಚೇರಿ, ಮಾಲ್‌ಗಳು ಹೀಗೆ ಎಲ್ಲೇ ಹೋದರೂ ಕನ್ನಡದಲ್ಲೇ ಮಾತಾಡಬೇಕು. ಕನ್ನಡದಲ್ಲೇ ಸೇವೆ ನೀಡಬೇಕೆಂದು ಸರಕಾರ ಮತ್ತು ಕಂಪೆನಿಗಳಿಗೆ ಪ್ರತಿಯೊಬ್ಬ ಕನ್ನಡಿಗರೂ ಒತ್ತಾಯಿಸಬೇಕು.
5. ಕೆಲವೇ ದಿನಗಳ ಮಟ್ಟಿಗೆ ಪ್ರವಾಸ ಬರುವ ಅನ್ಯಭಾಷಿಕರನ್ನು ಹೊರತುಪಡಿಸಿ, ಉಳಿದ ಎಲ್ಲ ಅನ್ಯಭಾಷಿಕರ ಜತೆ ಕನ್ನಡದಲ್ಲೇ ಮಾತನಾಡಲು ಪ್ರಾರಂಭಿಸಬೇಕು. ಹೀಗೆ ಮಾಡುವುದರಿಂದ ಕನ್ನಡ ನಾಡಿನಲ್ಲಿ ದೀರ್ಘ ಕಾಲ ನೆಲೆಸಿರುವ ಅನ್ಯಭಾಷಿಕರು ಕನ್ನಡ ಕಲಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
– ಅರುಣ್ ಜಾವಗಲ್, ಕನ್ನಡ ಪರ ಹೋರಾಟಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.