ತೆರೆದಷ್ಟೂ ಬಾಗಿಲು; ಹರಿದಷ್ಟೂ ಬೆಳಕು… ನನಗೆ ಖುಷಿ ಕೊಟ್ಟ ಪುಸ್ತಕ
Team Udayavani, Jan 1, 2023, 6:00 AM IST
ಓದುವ ಗೀಳನ್ನು ಹಚ್ಚಿಸಿಕೊಂಡವರಿಗೆ ಯಾವತ್ತೂ ಪುಸ್ತಕಗಳು ಜೀವಸಖರಂತೆ. ತಂತ್ರಜ್ಞಾನ ಯುಗದಲ್ಲಿ ಜ್ಞಾನಾರ್ಜನೆಗೆ ಹತ್ತು ಹಲವು ಮಾರ್ಗಗಳಿವೆಯಾದರೂ ಇವ್ಯಾವೂ ಪುಸ್ತಕದ ಓದು ನೀಡುವ ಅನುಭೂತಿ, ಅನುಭಾವವನ್ನು ನೀಡಲಾರವು. ಪ್ರತೀ ವರ್ಷ ಜಗತ್ತಿನಾದ್ಯಂತ ಸಹಸ್ರಾರು ಪುಸ್ತಕಗಳು ಮುದ್ರಣಗೊಳ್ಳುತ್ತವೆ. ಓದುಗರು ತಮ್ಮ ಅಭಿರುಚಿಗೆ ತಕ್ಕ ಪುಸ್ತಕಗಳನ್ನು ಓದುತ್ತಾರೆ. ಓದನ್ನು ಹವ್ಯಾಸವನ್ನಾಗಿಸಿಕೊಂಡವರು ಹೊಸ ಹೊಸ ಪುಸ್ತಕಗಳ ತಲಾಶೆಯಲ್ಲಿದ್ದರೆ ಮತ್ತೂಂದಿಷ್ಟು ಮಂದಿ ತಮ್ಮ ಕೈಗೆ ಸಿಕ್ಕ ಪುಸ್ತಕಗಳನ್ನು ಓದಿ ಈ ಹವ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಹೀಗೆ ಕಳೆದ ವರ್ಷ ತಾವು ಓದಿದ ಪುಸ್ತಕಗಳಲ್ಲಿ ಹೆಚ್ಚು ಖುಷಿ ಕೊಟ್ಟ ಪುಸ್ತಕಗಳ ಬಗೆಗೆ ಬರೆದು ಕಳುಹಿಸುವಂತೆ “ಉದಯವಾಣಿ’ ನೀಡಿದ ಆಹ್ವಾನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು ಆಯ್ದವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಓದುವ ಪರಂಪರೆಯನ್ನು ಮುಂದುವರಿಸುವ ಪ್ರಯತ್ನವಿದು.
ಬದುಕಿನ ಆ ಬದಿ
ಒಬ್ಬ ಯುವ ಬೌದ್ಧ ಭಿಕ್ಕು ತನ್ನ ಮನೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಒಂದು ವಿಶಾಲವಾದ ನದಿಯ ದಡಕ್ಕೆ ಬಂದ. ಎದುರಿನ ಬೃಹತ್ ನದಿಯನ್ನು ಹೇಗೆ ದಾಟುವುದು ಎಂದು ಯೋಚಿಸುತ್ತಾ ನಿಂತ. ಸಮಯ ಸರಿದದ್ದೇ ಅರಿವಿಗೆ ಬರಲಿಲ್ಲ.
ಇನ್ನೇನೂ ತೋಚದೇ ಪಯಣವನ್ನು ಅಲ್ಲಿಯೇ ಮಕ್ತಾಯಗೊಳಿಸಲು ಯೋಚಿಸುತ್ತಿದ್ದಾಗ ದೂರದಲ್ಲಿ ಒಬ್ಬ ಗುರು ಆಗಮಿಸುತ್ತಿರುವುದು ಕಂಡುಬಂದಿತು. ಆಗ ಭಿಕ್ಕು, “ಮಾನ್ಯರೇ, ನಾನು ಈ ದಡದಿಂದ ಅಲ್ಲಿಗೆ ಹೋಗುವುದು ಹೇಗೆ’ ಎಂದು ಕೇಳಿದ. ಅದಕ್ಕೆ ಗುರು ಒಂದು ಕ್ಷಣ ಆಲೋಚಿಸಿ, “ನೀನು ನದಿಯ ಮತ್ತೂಂದು ಬದಿಯಲ್ಲಿದ್ದೀ’ ಎಂದರು. ಭಿಕ್ಕು ತಣ್ಣಗೆ ನಿಂತ.
ಹತ್ತಲ್ಲ, ಇಪ್ಪತ್ತು ವರ್ಷ !
ಒಮ್ಮೆ ವಿದ್ಯಾರ್ಥಿಯೊಬ್ಬ ತನ್ನ ಗುರುವಿನಲ್ಲಿ ಸಮರ ಕಲೆ ಕಳೆಯಲು ಹೋದ. ವಿನ ಮ್ರ ವಾಗಿ ಗುರುವಲ್ಲಿ, “ಗುರುಗಳೇ, ನನಗೆ ಸಮರ ಕಲೆ ಕಲಿಯಲು ಬಹಳ ಆಸೆ. ಈ ವಿದ್ಯೆಯನ್ನು ಕರಗತ ಮಾಡಿಕೊಳ್ಳಲು ಎಷ್ಟು ದಿನ ಬೇಕು” ಎಂದು ಕೇಳಿದ.
ಅದಕ್ಕೆ ಗುರುಗಳು ಮುಗುಳ್ನಗುತ್ತಾ, “ಹತ್ತು ವರ್ಷ’ ಎಂದರು. ಇದನ್ನು ಕಂಡು ಸಿಟ್ಟಿಗೆದ್ದ ವಿದ್ಯಾರ್ಥಿ, “ಹೆಚ್ಚು ಶ್ರಮ ಹಾಕಬಲ್ಲೆ, ಸಮಯವನ್ನೂ ವಿನಿಯೋಗಿಸಬಲ್ಲೆ. ಬೇಗ ಕಲಿಯಬೇಕೆಂಬ ಇರಾದೆ ನನ್ನದು. ಒಂದು ಕ್ಷಣವನ್ನೂ ವ್ಯರ್ಥ ಮಾಡಲಾರೆ’ ಎಂದ. ಆಗಲೂ ಗುರು ಸರಳವಾಗಿ, “20 ವರ್ಷ’ ಎಂದ.
ನನ್ನೊಳಗಿನ ಅರಿವು
ಮಹನೀಯರೊಬ್ಬರು ತಮ್ಮ ಆತ್ಮ ಕಥನದಲ್ಲಿ ಹೀಗೆ ಬರೆದಿದ್ದರಂತೆ. “ನಾನು ಚಿಕ್ಕವನಿ¨ªಾಗ ದೇವರ ಬಳಿ ಇಡೀ ಜಗತ್ತನ್ನು ಬದಲಾಯಿಸಲು ಶಕ್ತಿ ಕೊಡು ಎಂದು ಬೇಡಿಕೊಳ್ಳುತ್ತಿದ್ದೆ. ಆಗ ನನಗೆ ಇಡೀ ಜಗತ್ತು ತಪ್ಪಾಗಿದೆ ಎಂದು ಭಾಸವಾಗಿತ್ತು.
ಸ್ವಲ್ಪ ವರ್ಷಗಳ ಬಳಿಕ ನಾನು ದೇವರ ಬಳಿ “ನನ್ನ ಜೀವನದ ಅರ್ಧ ಭಾಗ ಕಳೆದಿದೆ. ಯಾರೊಬ್ಬರನ್ನೂ ಬದಲಾಯಿಸಲು ಸಾಧ್ಯ ವಾಗಲಿಲ್ಲ. ಹಾಗಾಗಿ ಜಗತ್ತನ್ನು ಬದಲಾಯಿಸುವುದಕ್ಕಿಂತ ನನ್ನ ಕುಟುಂಬವನ್ನು ಬದಲಾಯಿಸಲು ಅವಕಾಶ ಕೊಡು’ ಎಂದು ಕೇಳಿಕೊಂಡೆ. ನನಗೆ ವಯಸ್ಸಾದಾಗ ನನ್ನನ್ನು ನಾನು ಬದಲಾಯಿಸಿಕೊಂಡರೆ ಸಾಕು ಎಂಬ ಅರಿವು ಮೂಡಿತು. ದೇವರ ಬಳಿ “ನನ್ನನ್ನು ಬದಲಾಯಿಸಿಕೊಳ್ಳಲು ಅವ ಕಾಶ ನೀಡು’ ಎಂದು ಕೋರಿದೆ. ಅದಕ್ಕೆ ದೇವರು, “ಈಗ ಸಮಯ ಉಳಿದಿಲ್ಲ. ಆರಂಭದಲ್ಲಿಯೇ ಇದನ್ನು ಕೇಳಬೇಕಿತ್ತು’ ಎಂದು ಹೇಳಿದ.
ಯಾವುದೂ ಶಾಶ್ವತವಲ್ಲ
ಒಮ್ಮೆ ವಿದ್ಯಾರ್ಥಿಯೊಬ್ಬ ಗುರುವಿನಲ್ಲಿ ಹೋಗಿ, “ನಾನು ಧ್ಯಾನ ಮಾಡುವಾಗ ನನ್ನ ಮನಸ್ಥಿತಿ ವಿಚಿತ್ರವಾಗಿರುವಂತೆ ಭಾಸ ವಾಗುತ್ತದೆ. ಕೆಲವೊಮ್ಮೆ ನಾನು ತುಂಬಾ ವಿಚಲಿತನಾಗುತ್ತೇನೆ. ಕುಳಿತಾಗ ಕಾಲು ನೋವಾಗುತ್ತದೆ. ಧ್ಯಾನ ಸ್ಥಿತಿಯಲ್ಲಿರುವಾಗಲೇ ನಿದ್ರೆಗೆ ಜಾರುತ್ತೇನೆ’ ಎಂದ. ಗುರು ತಾಳ್ಮೆಯಿಂದ “ಸರಿ, ಇದು ಶಾಶ್ವತವಲ್ಲ’ ಎಂದರು.
ಒಂದು ವಾರದ ಬಳಿಕ ಅದೇ ವಿದ್ಯಾರ್ಥಿ ಮತ್ತೆ ತನ್ನ ಗುರುವಿನ ಬಳಿ ಬಂದ. “ನನ್ನ ಧ್ಯಾನ ಸ್ಥಿತಿಯಲ್ಲಿ ತುಂಬಾ ಬದಲಾವಣೆಗಳಾಗಿವೆ. ಈಗ ಮನಸ್ಸು ಶಾಂತಿಯಿಂದ ಇದೆ. ಇದೊಂದು ಅದ್ಭುತದಂತೆ ಅನಿಸುತ್ತಿದೆ’ ಎಂದ. ಆಗಲೂ ಗುರು, “ಸರಿ, ಇದೂ ಶಾಶ್ವತವಲ್ಲ’ ಎಂದರು.
ಪುಸ್ತಕ: ಹುಣಸೆಮಕ್ಕಿಹುಳ, ಲೇಖಕರು: ವಿನುತಾ ವಿಶ್ವನಾಥ
ಇದು ಒಂದು ಪುಟ್ಟ ಊರಿನ ಸಾಮಾನ್ಯ ಹೆಣ್ಣಿನ ಕಥೆ. ಬರಹಗಾರ್ತಿ, ರಂಗಭೂಮಿ ಕಲಾವಿದೆ ವಿನುತಾ ವಿಶ್ವನಾಥ ಅವರ ಸಾರ್ಥಕ ಬದುಕಿನ ಆತ್ಮಕಥೆ. ಸಾಮಾನ್ಯವಾಗಿ ಹೆಣ್ಣೆಂದರೆ ರೂಪ, ಚೆಲುವು, ಅಂದ, ಬಾಹ್ಯ ಸೌಂದರ್ಯವೆ ಮುಖ್ಯ ಎನ್ನುವ ಈ ಪ್ರಪಂಚದಲ್ಲಿ ಅಂತರಂಗ ಸೌಂದರ್ಯ ದಿಂದ ಪ್ರಜ್ವಲಿಸಿದ ತಾರೆ ಇವರು. ತನ್ನ ದಲ್ಲದ ತಪ್ಪಿಗೆ ಮುಖದ ಮೇಲಾದ ಗಾಯ ಅದರಿಂದಾದ ನೋವು, ಸಂಕಟ, ಅವಮಾನ. ಇವೆಲ್ಲವನ್ನು ಅವರು ಎದುರಿಸಿದ ರೀತಿ, ಸುಟ್ಟ ಗಾಯದ ನಡುವೆ ಮಿಂಚುವ ಆ ನಗು, ಪ್ರತಿಯೊಬ್ಬ ಹೆಣ್ಣುಮಗಳಿಗೆ ಸ್ಫೂರ್ತಿ. ಕಲೆ ಇರುವುದು ನನ್ನ ಮುಖದಲ್ಲಿ ಅಲ್ಲ ನೀವು ನೋಡುವ ದೃಷ್ಟಿಕೋನದಲ್ಲಿ ಎಂದು ಸುಟ್ಟ ಮಡಿಕೆಯಂತೆ ಗಟ್ಟಿಯಾದ ಹೆಣ್ಣಿನ ಆತ್ಮಕಥೆ.
- ಭಾಗ್ಯಶ್ರೀ ಸುರೇಶ್, ಸಾಲಿಗ್ರಾಮ
ಪುಸ್ತಕ: ಮಹಾಪಲಾಯನ ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಇದು ಬದುಕಿಗಾಗಿ ಪಲಾಯನಗೈದವರ ಕಥೆ! ತಿಂಗಳುಗಳ ಕಾಲ ನಾಲ್ಕು ಸಾವಿರ ಮೈಲಿಗೂ ಅಧಿಕ ದೂರ ಕಾಲ್ನಡಿಗೆಯಲ್ಲೇ ಸಾಗಿ ಹಾದಿಯಲ್ಲಿ ಎದುರಾದ ಹಿಮಪರ್ವತ, ದಟ್ಟ ಕಾನನ, ಮುಗಿಯದ ಮರುಭೂಮಿ ಎಲ್ಲವನ್ನೂ ದಾಟಿ ಭಾರತ ದೇಶಕ್ಕೆ ಓಡಿ ಬಂದವರ ರೋಚಕ ಅನುಭವ ಕಥನ. 2ನೇ ಮಹಾಯುದ್ಧದ ಸಂದರ್ಭ ಕಮ್ಯುನಿಸ್ಟ್ ಆಡಳಿತ ಮೇರೆ ಮೀರಿದ್ದ ಕಾಲದಲ್ಲಿ ರಷ್ಯಾದ ಕ್ಯಾಂಪ್‌ಗ್ಳಲ್ಲಿ ಯುದ್ಧ ಕೈದಿಗಳಾಗಿ ಸೆರೆಸಿಕ್ಕು ಅನಂತರ ಅಲ್ಲಿಂದ ಪಲಾಯನಗೈದು ಬಂದ ಪೋಲೆಂಡಿನ ಸ್ಲಾವೋಮಿರ್‌ರಾವಿಸ್ ತಾನೇ ಬರೆದ ಕೃತಿ “ದಿ ಲಾಂಗ್ ವಾಕ್’. ಇದರ ಕನ್ನಡಾನುವಾದ ಲೇಖಕ ತೇಜಸ್ವಿಯವರ “ಮಹಾಪಲಾಯನ” 2022 ನೇ ವರ್ಷದಲ್ಲಿ ನಾನು ಓದಿ ನನಗೆ ಮೆಚ್ಚುಗೆಯಾದ ಪುಸ್ತಕ.
- ರಾಘು, ತೆಕ್ಕಟ್ಟೆ
ಪುಸ್ತಕ: ಕಾಲೇಜು ತರಂಗ ಲೇಖಕರು: ಡಾ| ಬಿ .ಜಿ .ಎಲ್. ಸ್ವಾಮಿ
ವಿಶ್ವವಿದ್ಯಾನಿಲಯಗಳ ನೇಮಕಾತಿ, ಅನುದಾನ ಪಡೆಯುವಲ್ಲಿ ಸರಕಾರಿ ವ್ಯವಸ್ಥೆ ಕೆಲಸ ಮಾಡುವ ರೀತಿಯನ್ನು ಲೇಖಕರು ಲಘು ಹಾಸ್ಯದ ಮೂಲಕ ತಿಳಿಸುತ್ತಾ ಹೋಗುತ್ತಾರೆ. ಅವರ ಮೊನಚು, ವ್ಯಂಗ್ಯ ಮಾತುಗಳು ನಗು ಮೂಡಿಸುವುದರ ಜತೆಗೆ ಅದರ ಹಿಂದಿರುವ ಕಾಳಜಿಯೂ ಅರಿವಿಗೆ ಬರುತ್ತದೆ. “ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಣ್ಣ ಮನೋಭಾವ ಬಿಡಲಿ, ವಿಶಾಲ ದೃಷ್ಟಿಯನ್ನು ಬೆಳೆಸಿಕೊಳ್ಳಲಿ, ಉಪಾಧ್ಯಾಯ ವೃತ್ತಿಯನ್ನು ಕೈಹಿಡಿದವರು ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ಅಧ್ಯಯನದಲ್ಲಿ ತೊಡಗಲಿ, ತನ್ನ ಕಲ್ಪನೆಯನ್ನು, ಸಾಮರ್ಥ್ಯವನ್ನು ಉಪಯೋಗಿಸಿ ಪಾಠ ಕ್ರಮದ ಕಟ್ಟಡವನ್ನು ಕಟ್ಟಬೇಕಾದ ಕರ್ತವ್ಯ ಉಪಾಧ್ಯಾಯನದು” ಎಂಬ ಅವರ ಮಾತುಗಳು ಎಂದಿಗೂ ಪ್ರಸ್ತುತ.
ಶಾಂತಲಾ ಎನ್. ಹೆಗ್ಡೆ , ಸಾಲಿಗ್ರಾಮ
ಪುಸ್ತಕ: ಅಪೂರ್ವ ರಾಮಾಯಣ ಮತ್ತು ಸಂಪೂರ್ಣ ಮಹಾಭಾರತ
ಲೇಖಕರು: ಶ್ರೀ ರಾಮರಾವ್ ಸರೋದೆ
2022ರಲ್ಲಿ ನನಗೆ ಬಹಳ ಖುಷಿ ಕೊಟ್ಟಂತಹ ಪುಸ್ತಕ ವೆಂದರೆ “ಅಪೂರ್ವ ರಾಮಾಯಣ ಮತ್ತು ಸಂಪೂರ್ಣ ಮಹಾಭಾರತ’. ಈ ಪುಸ್ತಕವನ್ನು ಓದುತ್ತಾ ಹೋದ ಹಾಗೆ ಅದರಲ್ಲಿರುವ ವಿಚಾರಗಳು ದೃಶ್ಯರೂಪದಲ್ಲಿ ನನಗೆ ಕಾಣಿಸುತ್ತಿತ್ತು. ನನಗೆ ಗೊತ್ತಿರದ ವಿಷಯಗಳು ಇದನ್ನು ಓದಿದ ಮೇಲೆ ತಿಳಿಯಿತು. ರಾಮಾಯಣ ಹಾಗೂ ಮಹಾಭಾರತವನ್ನು ಓದಿದರೆ ಅಥವಾ ಓದಿಸಿ ಕೇಳಿದರೆ ಕಷ್ಟಗಳೆಲ್ಲವು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಯಾವುದೇ ಪುಸ್ತಕಗಳಾಗಲಿ,ಅದು ದೇವರ ಸಮಾನ. ಪ್ರತಿಯೊಬ್ಬ ಮನುಷ್ಯ ಕೂಡ ಜೀವನದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.
- ಶ್ರದ್ಧಾ ಸೋಮಂತಡ್ಕ, ಬೆಳ್ತಂಗಡಿ
ಪುಸ್ತಕ: ಕಂತ್ರೆಲಾಂತ್ಲೆಂ (ಕೊಂಕಣಿ)
ಲೇಖಕರು: ಮೊಲಿ ಮಿರಾಂದ, ಕುಲೆÏàಕರ್
ನನಗೆ ಖುಷಿ ಕೊಟ್ಟ ಪುಸ್ತಕ ಕಂತ್ರೆಲಾಂತ್ಲೆಂ. ಖ್ಯಾತ ಕನ್ನಡ ಸಾಹಿತಿ ಬಿ.ಎಂ. ರೋಹಿಣಿ ಇವರ ಆತ್ಮಕಥೆ “ನಾಗಂದಿಗೆಯೊಳಗಿಂದ’ ಇದರ ಕೊಂಕಣಿ ಅನುವಾದ. ಈ ಆತ್ಮಕಥನ ನಮ್ಮೂರ ಸ್ಥಳ, ಜನರ ನೆನಪುಗಳನ್ನು ಮರುಕಳಿಸುತ್ತದೆ. ರೋಹಿಣಿ ಟೀಚರ್ ಅತ್ಯಂತ ಸುಂದರವಾಗಿ ಅವರ ಜೀವನದ ಜತೆಗೆ ಹಲವು ವಿಚಾರಗಳನ್ನು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅಷ್ಟೇ ಸೊಗಸಾಗಿ ಮೊಲಿ ಮಿರಾಂದ ಇದನ್ನು ಕೊಂಕಣಿಯಲ್ಲಿ ಅನುವಾದಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿತು. ಸಮಾಜಕ್ಕೆ ಒಂದು ಕನ್ನಡಿಯಂತಿರುವ ಈ ಪುಸ್ತಕವನ್ನು ಕೊಂಡು ಓದಿದರೆ ಲೇಖಕಿಯರ ಶ್ರಮ ಸಾರ್ಥಕವಾಗುವುದು.
- ರಿಚರ್ಡ್ ಅಲ್ವಾರಿಸ್, ಕುಲಶೇಖರ
ಪುಸ್ತಕ: ಪ್ರಿಯೆ ಚಾರುಶಿಲೆ ಲೇಖಕರು: ನಾಗರಾಜ ವಸ್ತಾರೆ
ನನ್ನನ್ನು ಪ್ರೀತಿಯಿಂದ ಹಿಡಿದಿಟ್ಟ ಪುಸ್ತಕವಿದು. ನಾನು ಮೊದಲನೇ ಪುಟದ ಸಾಲುಗಳಿಗೆ ಸೋತು ಹೋಗಿದ್ದೆ. ಹಿರಿ ಹಿರಿ ಹಿಗ್ಗಿಸಿದ ಸಿರಿಯೂ ಸರಿಯೇ ಆಯಿತಲ್ಲ!. “ಐಳನ್’, ಮಾತಂಗಿ ಇಬ್ಬರೂ ಜಗನ್ನಾಥ ಜಗಮೊಹನನ ದರ್ಶನಕ್ಕೆಂದು ಒಡಿಸ್ಸಾದಲ್ಲಿ ಅಲೆದಲೆದು, ತಿರುತಿರುಗಿ ಕೊನೆಗೂ ರಥಯಾತ್ರೆಯನ್ನು ನಿರುಕಿಸಿದ್ದಲ್ಲದೆ ಎಳೆದೆಳೆದು, ಹಿಗ್ಗಾಮುಗ್ಗಾ ಜಗ್ಗಿ ಸಾಲದ್ದಕ್ಕೆ ಕೊನೆಯಲ್ಲಿ ಸಫಲತೆಯನ್ನೂ ಕಂಡೇಬಿಟ್ಟರೆ? ಎಂಬುದನ್ನು ಪುಸ್ತಕ ಓದಿ ತಿಳಿಯಿರಿ. ಒಂದೊಳ್ಳೆ ಸಾಹಿತ್ಯವಿದೆ. ಕೆಲವು ಕಡೆ ತುಂಬಾ ಎಳೆದು, ಜಗ್ಗಿ ಕಥೆ ಹೆಣೆದರೆ? ಎಂದೆನಿಸದಿರದು. ಆದರೆ ಅದರ ಸಾಹಿತ್ಯದ ರುಚಿ ಓದಿ ತಿಳಿಯಬೇಕು. ಓದಿದ ಸಾಲುಗಳನ್ನೆ ಮತ್ತೆ ಮತ್ತೆ ಓದಬೇಕು ಎಂದೆನಿಸಿ ಬಿಡುತ್ತದೆ.
- ದಿವ್ಯಶ್ರೀ ಹೆಗಡೆ, ಉಜಿರೆ
ಪುಸ್ತಕ: ವೈದ್ಯರ ಚೌ ಚೌ ಬಾತ್ ಲೇಖಕರು: ಡಾ| ಎ. ಪಿ. ಭಟ್
ವಿಷಯ ನಿರೂಪಣೆಯಲ್ಲಿ ಆರಂಭದಿಂದ ಕೊನೆಯ ತನಕ ಓದುಗರ ಮನಸನ್ನು ಅರಳಿಸುವುದೇ ಈ ಕೃತಿಯ ಮೂಲದ್ರವ್ಯ ಎನ್ನುವುದು ನನ್ನ ಅನಿಸಿಕೆ. ಓದುಗರಿಗೆ ಮನೋಲ್ಲಾಸವನ್ನುಉಂಟುಮಾಡುವುದರೊಂದಿಗೆ ಅವರ ವಿಚಾರಕೋಶವನ್ನು ಸಮೃ ದ್ಧಗೊಳಿಸಬಹುದಾದ ಅನೇಕ ಮೌಲಿಕ ಮಾಹಿತಿಗಳೂ ಸೇರಿಕೊಂಡಿರುವ ಈ ಕೃತಿಯಲ್ಲಿ ವಸ್ತುವಿನ ದೃಷ್ಟಿಯಿಂದ ಗಮನಾರ್ಹವಾದ ವೈವಿಧ್ಯವಿದೆ. ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಲೇಖನಗಳೊಂದಿಗೆ ಆತ್ಮವೃತ್ತಾಂತವನ್ನು ಹೋಲುವ ಕುಟುಂಬ ಚಿತ್ರಣ, ಘಟನೆಗಳು, ವ್ಯಕ್ತಿಗಳ ಚಿತ್ರಣಗಳ ಮೂಲಕ ಸಂಸ್ಕೃತಿಯನ್ನು ಕಟ್ಟಿಕೊಡುವ ವಿಧಾನ ತುಂಬ ಮನೋಜ್ಞವಾಗಿ ಬಂದಿದೆ.
- ಡಾ| ರಮಾನಂದ ಬನಾರಿ , ಮಂಜೇಶ್ವರ
ಪುಸ್ತಕ: ತೇಜೋ ತುಂಗಭದ್ರಾ ಲೇಖಕರು: ವಸುಧೇಂದ್ರ
ಎರಡು ದೇಶಗಳ ಜನಸಾಮಾನ್ಯರ ಜೀವನದ ಸ್ಥಿತಿಗತಿಗಳನ್ನು ಚಿತ್ರಿಸುವ ಈ ಕಾದಂಬರಿಯೂ ಭಾರತ ಎಷ್ಟು ಶ್ರೀಮಂತ ರಾಷ್ಟ್ರವಾಗಿತ್ತೆಂಬುದನ್ನು ತಿಳಿಸುತ್ತದೆ. ಅನೇಕ ತಿರುವು, ಹಾಸ್ಯಗಳಿಂದ ಕೂಡಿದ ಕಾದಂಬರಿಯು ಎರಡು ನದಿಗಳು ಸಮುದ್ರವನ್ನು ಸೇರಿ ಹೇಗೆ ಒಂದಾಗುತ್ತದೋ ಹಾಗೆಯೇ ಇಲ್ಲಿ ಎರಡು ಪಾತ್ರಗಳು ಕೊನೆಗೆ ಒಂದೇ ಎಂದು ಸಾಬೀತಾಗುತ್ತದೆ. ವಸುಧೇಂದ್ರ ಅವರು ಸೃಷ್ಟಿಸಿದ ತೇಜೋ ತುಂಗಭದ್ರಾವೆಂಬ ಅತ್ಯದ್ಭುತ ಮಾಯಾಲೋಕ ಅವರ ಅಭಿ ಮಾನಿಯಾಗಲು ನನಗೆ ಇನ್ನೊಂದು ಕಾರಣ ಸಿಕ್ಕಂತೆ ಅನಿಸಿದ್ದಂತೂ ನಿಜ.
- ವಿಧಿಶ್ರೀ, ಮಂಗಳೂರು
ಪುಸ್ತಕ: ಹೆರ್ಮನ್ ಮ್ಯೋಗ್ಲಿಂಗ್ ಮತ್ತು ಗಾಟ್‌ಫ್ರೈಡ್ ವೈಗ್ಲೆ
ಲೇಖಕರು: ಇಂಗ್ಲಿಷ್ ಮೂಲಕ ಕನ್ನಡಕ್ಕೆ: ಪ್ರೊ| ಎ.ವಿ. ನಾವಡ.
ಇದೊಂದು ಕುತೂಹಲಕಾರಿ ಪುಸ್ತಕ; ನಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಲು ಇದೊಂದು ಅಮೂಲ್ಯ ದಾಖಲೆಯೂ ಹೌದು. ಇಲ್ಲಿನ ಜಾತ್ರೆ, ಉತ್ಸವಗಳಲ್ಲಿ ನೆರೆಯುವವರಿಗೆ ಕ್ರೈಸ್ತಮತವನ್ನು ಪರಿಚಯಿಸಿದ ಪಾದ್ರಿಗಳು, ಸುಳ್ಯ, ಕುಂಬ್ಳೆ ಮಾರ್ಗವಾಗಿ ಮಂಗಳೂರಿಗೆ ಹಿಂದಿರುಗಿದ ಕಾಲ್ನಡಿಗೆಯ ಪ್ರವಾ ಸದ ದಿನಚರಿ ದಾಖಲೆ ಇದು. ಮ್ಯೋಗ್ಲಿಂಗ್ ತಾವು ಕಂಡ ಜನಜೀವನ, ಸಮಾಜ, ಆಚರಣೆಗಳನ್ನು ಮತ್ತು ತಾವು ಸ್ಥಳೀಯರೊಂದಿಗೆ ನಡೆಸಿದ ಮತೀಯ ವಿಚಾರಗಳ ಚರ್ಚೆಯನ್ನು ಮುಖ್ಯವಾಗಿ ದಾಖಲಿಸಿದ್ದರೆ, ವೈಗ್ಲೆ ಕರಾವಳಿ ಜಿಲ್ಲೆಯ ಭೌಗೋಳಿಕ ಲಕ್ಷಣಗಳನ್ನು ಕೂಡ ದಾಖಲಿಸಿದ್ದಾರೆ.
- ಡಾ| ಬಿ. ಜರ್ನಾದನ ಭಟ್, ಬೆಳ್ಮಣ್ಣು
ಪುಸ್ತಕ: ಇದ್ದೂ ಇಲ್ಲದ್ದು ಲೇಖಕರು: ನಾ.ಮೊಗಸಾಲೆ
ಮೂರು ತಲೆಮಾರುಗಳ ಬದುಕನ್ನು, ನಂಬಿಕೆ, ಸಂಸ್ಕೃತಿ, ಧರ್ಮ, ದೇವರುಗಳ ಮೇಲಿನ ನಂಬಿ ಕೆಗಳು ಕಾಲಾನುಕ್ರಮದಲ್ಲಿ ಪಲ್ಲಟ ಗೊಳ್ಳುತ್ತಾ ಹೋಗುವುದನ್ನು ಇಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಇಂದು ಹೆಚ್ಚಿನ ಊರುಗಳಲ್ಲಿ ವಿದ್ಯಾವಂತರು ಉದ್ಯೋಗದ ನಿಮಿತ್ತ ಊರನ್ನು ಬಿಟ್ಟಿರುವುದರಿಂದ ಊರಲ್ಲಿ ವೃದ್ಧರೇ ಉಳಿದುಕೊಂಡು ಬಿಟ್ಟಿದ್ದಾರೆ. ತಲೆಮಾರುಗಳಿಂದ ಆಚರಿಸಿಕೊಂಡು ಬಂದ ದೈವ, ದೇವರುಗಳ ಆರಾ ಧನೆಯನ್ನು ಮುಂದಿನ ಪೀಳಿಗೆ ನಡೆಸಿಕೊಂಡು ಹೋಗುವುದೇ ಎನ್ನುವ ಆತಂಕದೊಂದಿಗೆ ದೇವರು ಅನಾಥವಾಗುವ ನೋವನ್ನು, ದೇವರ ನಂಬಿಕೆ, ಪೂಜೆಗೆ ಸಂಬಂಧಿಸಿದಂತೆ ಜಿಜ್ಞಾಸೆಯನ್ನು ನವಿರಾಗಿ ನಮ್ಮ ಮುಂದಿಡುತ್ತದೆ.
- ಮಿತ್ರಪ್ರಭಾ ಹೆಗ್ಡೆ,ಕಾರ್ಕಳ
ಪುಸ್ತಕ: ಮಿಸ್ಸಿಂಗ್ ಲಿಂಕ್ ಲೇಖಕರು: ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಮಾನವ ನೀನು ಯಾರು?, ಭೂಮಿಗೆ ಹೇಗೆ ಬಂದೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ತೇಜಸ್ವಿಯವರ “ಮಿಸ್ಸಿಂಗ್ ಲಿಂಕ್’ ಪುಸ್ತಕ. ಸುಮಾರು 37 ಲಕ್ಷ ವರ್ಷಗಳ ಹಿಂದೆ ಮಾನವ ವಿಕಾಸದ ಆರಂಭವನ್ನು ತೇಜಸ್ವಿಯವರು ಅತ್ಯಂತ ಸಂಕ್ಷಿಪ್ತವಾಗಿ, ಸರಳವಾಗಿ ನಿರೂಪಿಸಿದ್ದಾರೆ. ಡಾರ್ವಿನ್‌ನ “ಪಳಿಯುಳಿಕೆ ಅಧ್ಯಯನ’ವನ್ನು ಸರಳವಾಗಿ ವಿವರಿಸಿದ್ದಾರೆ. ಈಗ ಇರುವ ಚಿಂಪಾಂಜಿ, ಗೊರಿಲ್ಲಾಗಳು ಮುಂದೆ ಮಾನವನಾಗಬಹುದೇ? ಮಾನವ ಹಲವು ವರ್ಷಗಳ ಅನಂತರ ಏನಾಗಬಹುದು? ಎಂಬುದನ್ನು ತಿಳಿಯಲು ಮಿಸ್ಸಿಂಗ್ ಲಿಂಕ್ ಓದಲೇಬೇಕು.
- ಡಾ| ಪ್ರವೀಣ್ ಬಗ್ಗತೋಟ, ಉಡುಪಿ
ಪುಸ್ತಕ: ಪುನರ್ವಸು ಲೇಖಕರು: ಡಾ| ಗಜಾನನ ಶರ್ಮ
ಈ ಕೃತಿ ಪ್ರಕೃತಿ ಆರಾಧನೆ, ಗೋವಿನ ನಿಷ್ಕಲ್ಮಷ ಪ್ರೀತಿ, ಮಾತನಾಡದ ಇಬ್ಬರು ಶರಾವತಿಯರು ಮತ್ತು ಅವರೊಡ ಲೊಳಗೆ ಅದುಮಿಟ್ಟುಕೊಂಡ ನೋವು, ಆದರ್ಶದ ಮೂರ್ತಿ ದತ್ತಪ್ಪ, ಆದರಣೀಯ ತುಂಗಮ್ಮ, ವೃತ್ತಿ ನಿಷ್ಠೆಯ ಗಣಪನ ಪಾತ್ರಗಳನ್ನು ನೆನಪಿಸಿ ಭಾವುಕರನ್ನಾಗಿಸುತ್ತದೆ. ಹಳೆಯದನ್ನು ಕಳಚಿ ಹೊಸತನ್ನು ತೊಡುವ ಅನಿ ವಾರ್ಯತೆ ಹೇಗೆ ಮನುಕುಲದ ಒಂದು ಸಮೃದ್ಧ ಪರಂಪರೆಯನ್ನೇ ಕೊಚ್ಚಿಕೊಂಡು ಹೋಗಿ ಸರ್ವನಾಶ ಮಾಡುತ್ತದೆ ಎಂಬುದು ಕಾದಂಬರಿ ಓದಿ ಮುಗಿಸಿದಾಗ ಭಾರವಾದ ಮನಸ್ಸಿಗೆ ಅರಿವಾಗುತ್ತದೆ.
- ಪೂರ್ಣಿಮಾ ಕಮಲಶಿಲೆ, ಕುಂದಾಪುರ
ಪುಸ್ತಕ: Partitioned freedom‘ ಲೇಖಕರು: ರಾಮ್ ಮಾಧವ್
ಭಾರತ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತಿಕೆ ಹೊಂದಿದ ದೇಶ. ಸುದೀರ್ಘ ಸಂಗ್ರಾಮದಿಂದ ಭಾರತವು ಸ್ವತಂತ್ರ್ಯವಾಯಿತು. ಆದರೆ ಇನ್ನೊಂದು ನಿಟ್ಟಿನಲ್ಲಿ ಭಾರತ ವಿಂಗ ಡಣೆ ಆಯಿತು. ನಮ್ಮದೇ ಆದಂತಹ ಭಾಗ ಇನ್ನೊಂದು ರಾಷ್ಟ್ರ ವಾಯಿತು. ಇದರ ಕುರಿತಾಗಿ ಇಂದಿನ ಯುವ ಜನತೆಯಲ್ಲಿ ಕಾಡುವ ಪ್ರಶ್ನೆಗೆ, ಈ ಪುಸ್ತಕವು ಸವಿಸ್ತಾರ ರೀತಿಯಲ್ಲಿ ಮಾಹಿತಿ, ಉತ್ತರವನ್ನು ನೀಡುತ್ತದೆ. ಓದುಗರ ಮನಸಿನಲ್ಲಿ ರಾಷ್ಟ್ರೀಯತೆಯ ಮನೋಭಾವ ಮೂಡಿಸುತ್ತದೆ. ಭಾರತದ ಯುವ ಜನಾಂಗಕ್ಕೆ ಭಾರತದ ಇತಿಹಾಸದ ಕುರಿತು ಆಳವಾದ ಜ್ಞಾನ ನೀಡುತ್ತದೆ.
- ರೇಶಲ್ ಬಿಟ್ರ್ನಿ ಫೆರ್ನಾಂಡೀಸ್, ಸುರತ್ಕಲ್
ಪುಸ್ತಕ: ಬಿಸಿಲಿನ ಷಡ್ಯಂತ್ರದ ವಿರುದ್ಧ ಲೇಖಕರು: ನಾಗರಾಜ್ ಮಂಜುಳೆ
ಮರಾಠಿ ಕವನ ಸಂಕಲನದ ಕನ್ನಡ ಅನುವಾದ. “ಒಂದೊಮ್ಮೆ ನನ್ನ ಕೈಯಲ್ಲಿ ಲೇಖನಿ ಇಲ್ಲದೆ ಹೋಗಿದ್ದರೆ ಬಹುಶಃ ಉಳಿ ಇರುತ್ತಿತ್ತು ಇಲ್ಲ ಸಿತಾರ್, ಕೊ ಳಲು, ಕುಂಚ ಇರುತ್ತಿತ್ತೋ ಏನೋ. ಏನಿರುತ್ತಿತ್ತೋ ಅದನ್ನು ಬಳಸಿ ನನ್ನೊ ಳಗಿನ ಅತೀವ ಕೋಲಾಹಲವನ್ನು ಅಗೆದು ಹೊರಹಾಕುತ್ತಿದ್ದೆ’. ಇಡೀ ಸಂಕಲನದ 55 ಕವನಗಳೂ ಕವಿಯ ಈ ಬಗೆಯ ತುಡಿತವನ್ನು ಹೊರಹೊಮ್ಮಿಸಿ ಓದುಗರೆದೆಯ ಕೋಲಾಹಲಕ್ಕೂ ಬಿಡುಗಡೆಯನ್ನು ಕರುಣಿಸುತ್ತದೆ. ಗಟ್ಟಿ ದನಿಯಬ್ಬರಕೆ ಉಡುಗಿ ಹೋಗಿರಬಹುದಾದ ಕ್ರೂರ ವಾಸ್ತವವನ್ನು ಮುಖಕ್ಕೆ ಹಿಡಿಯುವಂತೆ ತೋರುತ್ತದೆ. ಬಿಸಿಲಿನ ಷಡ್ಯಂತ್ರಕ್ಕೆ ಹೆದರಿದ ಬೋನ್ಸಾಯಿಯಂತಲ್ಲದೇ ರೊಚ್ಚಿಗೆದ್ದ ಗುಲ್ಮೊಹರ್‌ನಂತೆ ಹೂವಾಗಿ ಅರಳುವ ಹಂಬಲ ಕವಿಯಂತೆ ಓದುಗರಲ್ಲೂ ಮೂಡುತ್ತದೆ.
- ಅಭಿಲಾಷಾ ಎಸ್., ಬ್ರಹ್ಮಾವರ
ಪುಸ್ತಕ: ಸ್ವಾಮಿ ವಿವೇಕಾನಂದ ಲೇಖಕರು: ಪ್ರೊ| ಕೆ. ಭೈರಪ್ಪ
ಇಂದಿನ ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ಒಂದು ಸಮಾಜದಲ್ಲಿ ಇರುವುದು ತೀರಾ ಕಡಿಮೆ. ಸಮಾಜದೊಡನೆ ಇರುವ ಸಂಬಂ ಧವನ್ನು ತಿಳಿಸುವಂತಹ ಪ್ರಸಂಗಗಳು, ಸ್ವಾಮಿ ವಿವೇಕಾನಂದರ ಈ ಪುಸ್ತಕವನ್ನು ಓದಿದಾಗ ಅವರು ನಮ್ಮ ದೇಶವನ್ನು ಪ್ರೀತಿಸುತ್ತಿದ್ದ ರೀತಿ, ಅವರಲ್ಲಿರುವ ರಾಷ್ಟ್ರಭಕ್ತಿ, ದೇಶಪ್ರೇಮ ನನಗೆ ಬಹಳ ಇಷ್ಟವಾಯಿತು. ಇಂದಿನ ಯುವ ಜನಾಂಗವು ಸ್ವಾಮಿ ವಿವೇಕಾನಂದರ ಆದರ್ಶ, ಬೋಧನೆಗಳನ್ನು ರೂಢಿಸಿ ಕೊಂಡರೆ ನಮ್ಮ ದೇಶದಲ್ಲಿ ಯಾವುದೇ ಕೋಮು ಗಲಭೆಗಳು ಅಥವಾ ಜಾತಿ, ಧರ್ಮಗಳ ಮಧ್ಯೆ ಇರುವ ಜಂಜಾಟಗಳು ನಡೆಯಲಾರವು ಎನ್ನುವುದು ನನ್ನ ಅಭಿಪ್ರಾಯ.
- ಆಶ್ರಿತಾ ರೈ.ನಿಡಳ್ಳಿ, ಪುತ್ತೂರು
ಪುಸ್ತಕ: ಚಿರಸ್ಮಿತ ಲೇಖಕರು: ಯತಿರಾಜ್ ವೀರಾಂಬುಧಿ
ಇದು ನನ್ನ ಜೀವನವನವನ್ನೇ ಬದಲಾಯಿಸಿದ ಕಾದಂಬರಿ. ಅದರಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಒಂದೊಂದು ಕೂಡ ಅದ್ಭುತ. ಇಂದಿಗೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಈ ಕಾದಂಬರಿಯನ್ನು ಓದಿದ ಅನಂತರವೇ ನನ್ನ ಒಳಗಿರುವ ಬರಹಗಾರ್ತಿಯ ಪರಿಚಯ ನನಗೆ ಆಗಿದ್ದು. ಈ ಕಾದಂಬರಿಯಲ್ಲಿ ಬರುವ ಸುಹಾಸಿನಿ ಮತ್ತು ಸುಫಲಾ ಪಾತ್ರಗಳು ಅವಿಸ್ಮರಣೀಯ. ನಾಯಕಿ ಜೀವನ ಅಸ್ತವ್ಯಸ್ತವಾಗಿ ಕೊನೆಗೆ ಅವಳೊಬ್ಬಳು ಬರಹಗಾರ್ತಿಯಾಗಿ ರೂಪುಗೊಳ್ಳುತ್ತಾಳೆ. ಇದು ನನ್ನ ಮನಸಿನ ಮೇಲೆ ಅಗಾಧವಾದ ಪ್ರಭಾವ ಬೀರಿದ ಮತ್ತು ನನ್ನ ಮನಸಿಗೆ ಬಹಳ ಹತ್ತಿರವಾದ ಕಾದಂಬರಿ.
- ಸುಶ್ಮಿತಾ ಕೆ. ಎನ್., ಅನಂತಾಡಿ
ಪುಸ್ತಕ: ಮೋನು ಸ್ಮತಿ ಲೇಖಕರು: ಬೋಳುವಾರು ಮಹಮದ್ ಕುಂಞಿ
ಲೇಖಕರ ಆತ್ಮಕಥೆ ಮೋನು ಸ್ಮತಿ ನಾನು ಇತ್ತೀಚೆಗೆ ಓದಿದ ಪುಸ್ತಕ ಗಳಲ್ಲಿ ಅತ್ಯುತ್ತಮವಾದದ್ದು. ಹಾಸ್ಯ ರಸವನ್ನೇ ಜೀವ ನದಿಯಾಗಿ ಇಲ್ಲಿ ಮಹಮದ್ ಅವರು ಹರಿಸಿದ್ದಾರೆ. ತಮ್ಮ ಬರಹದ ಪಯಣದಲ್ಲಿ ಸಹಕರಿಸಿದ ಮಹನೀಯರನ್ನು ನೆನೆಯುತ್ತ ಪುಸ್ತಕ ಆರಂಭಿಸಿ ಬಳಿಕ ಅವಿಭಾಜ್ಯ ದಕ್ಷಿಣ ಕನ್ನಡದ ಸಮಾಜ, ಧಾರ್ಮಿಕ ಅಂಶ, ತನ್ನ ನಿಷ್ಠುರ ಸಿದ್ಧಾಂತ, ತನ್ನ ವೃತ್ತಿ ಜೀವನ, ಬಂಡಾಯ ಚಳವಳಿ ಆರಂಭಿಸಿ ಸ್ವತಃ ಕುವೆಂಪು ಅವರನ್ನೇ ಪ್ರಶ್ನಿಸಿದ್ದು ಮುಂತಾದ ಹಲವು ವಿಷಯಗಳ ಕುರಿತು ಬರೆದು ಅವರ ಆಂತರ್ಯದ ದರ್ಶನ ನೀಡುತ್ತಾರೆ. ಸಿದ್ಧಾಂತವಾದಿ ಹಿಂದೂಸ್ತಾನಿ ಪ್ರಜೆಯ ಜೀವನ ದರ್ಶನ ನೀಡುತ್ತದೆ.
- ಮಿತ್ತಬೈಲು ವಾಮನ್ ನಾಯಕ್, ಮಂಗಳೂರು
ಪುಸ್ತಕ: ಫೆರಾರಿ ಮಾರಿದ ಫಕೀರ ಲೇಖಕರು: ರಾಬಿನ್ ಶರ್ಮಾ
ಆಗರ್ಭ ಶ್ರೀಮಂತ, ಹೆಸರಾಂತ ವಕೀಲನಾದ ಜೂಲಿಯನ್ ಮ್ಯಾಂಟಲ್ ತನ್ನೆಲ್ಲ ಆಸ್ತಿ, ಇಷ್ಟವಾದ ಫೆರಾರಿ ಕಾರನ್ನು ಮಾರಾಟ ಮಾಡಿ ತನ್ನ ಮನಸ್ಸಿನ ಪ್ರಶ್ನೆಗೆ ಉತ್ತರ ಕಾಣಲು ಭಾರತ ಪ್ರವಾಸ ಕೈಗೊಳ್ಳುತ್ತಾನೆ. ವರ್ಷ ಕಳೆದ ಮೇಲೆ ಲೇಖಕರನ್ನು ಜೂಲಿಯನ್ ಭೇಟಿ ಮಾಡಿದಾಗ ಲೇಖಕರು ಹೇಳುತ್ತಾರೆ ಅವನೊಬ್ಬ ಪರಿವರ್ತನೆಯ ಪ್ರತೀ ಕನಾಗಿದ್ದ ಎಂದು. ಮನಸ್ಸಿನ ಹಸಿವನ್ನು ನೀಗಿಸುವ, ವೈಯಕ್ತಿಕ ಮತ್ತು ಆಧ್ಯಾತ್ಮಿಕ ಯಶಸ್ಸಿಗೆ ದಾರಿದೀಪವಾಗುವ ಅಮೂಲ್ಯವಾದ ಕೃತಿ. ಈ ಕೃತಿ ಓದಿ ಮುಗಿಸಿದ ಮೇಲೆ ಜೀವನವನ್ನೇ ಪರಿ ವರ್ತನೆ ಮಾಡುವ ಪ್ರಾಚೀನ ಸಂಸ್ಕೃತಿಯ ಕೇಂದ್ರ ಅದು ನಮ್ಮ ಭಾರತ ದೇಶ ಎಂದಾಗ ಹೆಮ್ಮೆ ಆಗುತ್ತದೆ, ರೋಮಾಂಚನ ಉಂಟು ಮಾಡುತ್ತದೆ.
- ಶಿಲ್ಪಾ, ಕಡಬ
ಪುಸ್ತಕ: MY LIFE IN FULL ಲೇಖಕರು: ಇಂದಿರಾ ನೂಯಿ
ತಮಿಳುನಾಡಿನ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಇಂದಿರಾ ನೂಯಿ ಅವರಲ್ಲಿ ಮೇಧಾ ಶಕ್ತಿ, ಶ್ರಮ, ಛಲಗಳು ಮೇಳೈಸಿದ್ದವು. ಅಮೆರಿಕದ ಯೇಲ್ ವಿವಿಯಲ್ಲಿ ಉನ್ನತ ಪದವಿ ಪಡೆದ ಅವರು ಉದ್ಯೋಗಕ್ಕೆ ಸೇರಿದೆಲ್ಲೆಡೆ ತನ್ನ ಛಾಪು ಮೂಡಿಸಿದ್ದರು. ಜಾಗತಿಕ ಮಟ್ಟದ ಪೆಪ್ಸಿ ಕಂಪೆನಿಯು ಅವರನ್ನು ಆಹ್ವಾನಿಸಿ ಸಿಇಒ ಹುದ್ದೆಯನ್ನು ನೀಡಿತು. ಕೌಟುಂಬಿಕ ಜೀವನ ಮತ್ತು ಔದ್ಯೋಗಿಕ ಜೀವನಗಳಿಗೆ ಪ್ರಾಧಾನ್ಯ ನೀಡಿದ್ದು ಅವರ ಈ ಮುಂದಿನ ಮಾತು ಉದ್ಯೋಗಸ್ಥ ಮಹಿಳೆಯರಿಗೆ ದಾರಿದೀಪದಂತಿದೆ. Being a mom and a wife is a full time job, and being an executive is more than a full time job.
- ಶಾಂತಾರಾಂ ಭಟ್ ಮಾಳ, ಕಾರ್ಕಳ
ಪುಸ್ತಕ: ಕಗ್ಗತ್ತಲ ಕಾಲ-ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ
ಲೇಖಕರು: ಎಸ್.ಬಿ.ರಂಗನಾಥ್ ( ಅನುವಾದಕರು )
ಭಾರತದ ಸಂಪತ್ತನ್ನು ನೋಡಿ ಅಸೂಯೆ ಪಟ್ಟು ಟರ್ಕರ ಆಕ್ರ ಮಣಕ್ಕೆ ಒಳಗಾದ ಮಾರ್ಗಕ್ಕೆ ಪರ್ಯಾಯವಾಗಿ ಜಲ ಮಾರ್ಗ ಕಂಡುಹಿಡಿದು ಅದರಲ್ಲಿ ಈ ದೇಶ ತಲುಪಿ ಇಲ್ಲಿನ ಸಂಪತ್ತನ್ನು ಲೂಟಿ ಹೊಡೆದ ಬಗೆಯನ್ನು “An Era of Darkness&The British Empire in India” ಎಂಬ ಪುಸ್ತಕದಲ್ಲಿ ಸಂಸದ, ಲೇಖಕ ಶಶಿ ತರೂರ್ ಅವರು ಸವಿಸ್ತಾರವಾಗಿ ದಾಖಲೆ ಸಮೇತ ವಿವರಿಸಿದ್ದಾರೆ. ಇದನ್ನು ಅಷ್ಟೇ ಸೊಗಸಾಗಿ ಕನ್ನಡಕ್ಕೆ “ಕಗ್ಗತ್ತಲ ಕಾಲ-ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ’ ಎನ್ನುವ ಹೆಸರಲ್ಲಿ ಅನುವಾದ ಮಾಡಿದ್ದಾರೆ.
- ತೋಳೂರು ರಜಿ, ಕೊಡಗು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.