ಉತ್ತಮ ಮತದಾರರಿಂದ ಉತ್ತಮ ಸರಕಾರ
Team Udayavani, Apr 17, 2018, 3:56 AM IST
ತನ್ನದೊಂದು ಮತದಿಂದ ಏನು ಮಹಾ ಆದೀತೆಂಬ ನಿಲುವು ಪ್ರಜಪ್ರಭುತ್ವದ ಅನಾಗರಿಕ ಅಣಕ. ಮತಗಟ್ಟೆಯಿಂದ ದೂರವುಳಿದು ಮತದಾನ ದಿನವನ್ನು ಕೇವಲ ರಜಾ ದಿನವಾಗಿ ಕಾಣುವುದು ದೇಶದ ಇತಿಹಾಸವನ್ನೇ ಅವಮಾನಿಸಿದಂತೆ ಅಲ್ಲವೇ? ಮತದಾನದಲ್ಲಿ ಪಾಲ್ಗೊಳ್ಳದಿದ್ದರೆ ಪ್ರಜೆ ತನ್ನ ಧ್ವನಿಯನ್ನು ತಾನೇ ಕೈಯಾರೆ ಕಳೆದುಕೊಳ್ಳುತ್ತಾನೆ.
“ಜನರಿಂದ, ಜನರಿಗಾಗಿ, ಜನರ ಆಡಳಿತ ವ್ಯವಸ್ಥೆ’ ಎನ್ನುವುದು ಪ್ರಜಾಪ್ರಭುತ್ವದ ದಿವ್ಯ ವ್ಯಾಖ್ಯೆ. ಮೈಸೂರು ವಿಶ್ವವಿದ್ಯಾನಿಲಯದ ನಿಘಂಟು “ಪ್ರಜೆಗಳು ಸಾûಾತ್ತಾಗಿ ಅಥವಾ ಪ್ರತಿನಿಧಿಗಳ ಮೂಲಕ ನಡೆಸುವ ಸರ್ಕಾರ’ ಎಂದು ಪ್ರಜಾಪ್ರಭುತ್ವ ತತ್ವವನ್ನು ಅರ್ಥೈಸುತ್ತದೆ. ದೇಶದ ಎಲ್ಲ ವರ್ಗದವರೂ ಸಮಾನರೆಂಬ ಗ್ರಹಿಕೆ ಇಲ್ಲಿ ಮುಖ್ಯವಾಗುತ್ತದೆ. ಪ್ರಜಾಪ್ರಭುತ್ವದ ಪರಿಕಲ್ಪನೆ ಉಗಮಿಸಿದ್ದು ಪ್ರಾಚೀನ ಗ್ರೀಕ್ ದೇಶದ ಅಥೆನ್ಸ್‌ನಲ್ಲಿ. ಕ್ಲೆಯಿಸ್‌ಥೆನ್ಸ್ ಎಂಬಾತ ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ಧೋರಣೆಯಡಿ ಅಲ್ಲಿ ಕ್ರಿ.ಪೂ. 510ರ ವೇಳೆಗೆ ಈ ವಿಶಿಷ್ಟ ಆಡಳಿತ ಏರ್ಪಾಡಿನ ಚಿಂತನೆ ಮಂಡಿಸಿದ. ಆದ್ದರಿಂದ ಆತನೇ ಪ್ರಜಾ ಪ್ರಭುತ್ವದ ಪಿತಾಮಹ ಎನ್ನಬಹುದು. ಶ್ರೀಮದ್ ರಾಮಾಯಣ ದಲ್ಲಿ ದಶರಥ ತನ್ನ ಹಿರಿಯ ಮಗ ಶ್ರೀರಾಮನಿಗೆ ಮುಂದೆ ಪಟ್ಟ ಕಟ್ಟಬಹುದೆ ಎಂದು ಅಯೋಧ್ಯೆಯ ಪ್ರಜೆಗಳನ್ನು ಕೇಳುತ್ತಾನೆ. ಇದಕ್ಕೆ ಮೊದಲು ತನ್ನ ಮಕ್ಕಳಾದ ಶ್ರೀರಾಮ, ಭರತ, ಲಕ್ಷ್ಮಣ, ಶತ್ರುಘ್ನರ ಪೈಕಿ ಯಾರು ಬಲು ಸಮರ್ಥರು, ಅರ್ಹರು ಎನ್ನುವುದನ್ನು ನಿಷ್ಕರ್ಷಿ ಸುವುದನ್ನು ಆತ ಮರೆಯುವುದಿಲ್ಲ. ದಶರಥನಿಗೆ ರಾಮನೇ ಸರಿ ಆಯ್ಕೆಯೆನ್ನಿಸುತ್ತದೆ. ರಾಮ ಹಿರಿಮಗ ಎನ್ನುವುದನ್ನು ಅವನು ಪರಿಗಣಿಸುವುದಿಲ್ಲ. ವಯಸ್ಸಿಗಿಂತ ಸಂಯಮ, ಪರಾಕ್ರಮಕ್ಕೆ ಮಣೆ. ಅಂದರೆ ಇಲ್ಲೂ ದಶರಥನದು ಪ್ರಜಾಸತ್ತಾತ್ಮಕ ಆಯ್ಕೆಯೇ. ಪ್ರಜಾಸತ್ತೆಯಲ್ಲಿ ಚುನಾವಣೆಯೇ ಧನಾತ್ಮಕ ಪರಿವರ್ತನೆಗಳನ್ನು ತರಬಲ್ಲ ಪರಮ ಅವಕಾಶ,
ಬ್ರಹ್ಮಾಸ್ತ್ರ. ಘನತೆಯ ಬದುಕಿಗೆ ಚುನಾವಣೆ ನಡೆ ಹಾಸುತ್ತದೆ. ನಮಗೆ ಉತ್ತಮ ಸರ್ಕಾರ ಬೇಕಾದರೆ ನಾವು ಉತ್ತಮ ಮತದಾರರಾಗಬೇಕು. ಮತದಾನ ನಮ್ಮ ಹಕ್ಕಿಗಿಂತಲೂ ನಮ್ಮ ಜವಾಬ್ದಾರಿ. ಪೌರತ್ವದ ಪ್ರಮುಖ ಕ್ರಿಯೆ. ಅದು ಗೌರವಯುತವಾಗಿ ಬಾಳುವ ಅಧಿಕಾರ ಚಾಲನೆ. ಮತ ದಾರರ ಪೈಕಿ ಯುವಕರೇ ಹೆಚ್ಚಿರುವುದರಿಂದ ಅವರ ಹೊಣೆ ಯಂತೂ ಅತಿ ಮಹತ್ವದ್ದು. ಮತಗಟ್ಟೆಯಿಂದ ದೂರ ಉಳಿಯ ಬಹುದು. ಆದರೆ ಅದರಿಂದ ಮುಂದೆ ಎದಿರಾಗುವ ದುಷ್ಪರಿಣಾಮಗಳಿಂದ ದೂರ ಉಳಿಯಲಾಗದು. ಮತ ಚಲಾಯಿಸದವರ ಆಯ್ಕೆ ದುರ್ಬಲ ಸರ್ಕಾರ ಎನ್ನುವ ಉಕ್ತಿಯಿದೆ. ತನ್ನದೊಂದು ಮತದಿಂದ ಏನು ಮಹಾ ಆದೀತೆಂಬ ನಿಲುವು ಪ್ರಜಪ್ರಭುತ್ವದ ಅನಾಗರಿಕ ಅಣಕ. ಪ್ರತೀ ಮತವೂ ನಿರ್ಣಾ ಯಕವೇ. ಮತ ಚಲಾವಣೆಯಿಂದ ಪ್ರಜೆಗಳ ಪಾಲಿಗೆ ದಕ್ಷ ಪ್ರತಿ ನಿಧಿ ಆಯ್ಕೆ ಗೊಳ್ಳದಿರಬಹುದು. ಆದರೆ ಮತ ಚಲಾಯಿಸದಿದ್ದರೆ ಅದಕ್ಷ ಪ್ರತಿನಿಧಿ ಆಯ್ಕೆಗೊಳ್ಳುವ ಸಾಧ್ಯತೆ ಹೆಚ್ಚುವುದು.
ಅಮೆರಿಕದ ಆರ್ಥಿಕ ತಜ್ಞ, ರಾಜಕೀಯ ಸಲಹೆಗಾರರೂ ಆಗಿದ್ದ ಬನ್ರಾಡ್ ಬರೂಚ್‌ರ(1870-1965) ವ್ಯಂಗ್ಯೋಕ್ತಿಯಿದು:
“ಕನಿಷ್ಠ ಆಶ್ವಾಸನೆಯ ಅಭ್ಯರ್ಥಿಯನ್ನು ಬೆಂಬಲಿಸಿ. ಏಕೆಂದರೆ ಅವರಿಂದ ಕನಿಷ್ಠ ನಿರಾಸೆ’. ಒಂದು ಸೂಕ್ಷ್ಮವನ್ನು ನಾವಿಲ್ಲಿ ಗಮನಿಸಲೇಬೇಕು. ಹೊಣೆಗಾರಿಕೆಯ ಮತದಾನವೆಂದರೆ ಇಡೀ ಜನ ಸಮುದಾಯದ ಸದಾಶಯಗಳನ್ನು ಬಯಸುವುದು. ಸ್ಪರ್ಧಿ ಸುವ ಉಮೇದುವಾರರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನಷ್ಟೇ ಅಲ್ಲದೆ ದೇಶದ ಹಿತಾಸಕ್ತಿಯನ್ನೂ ಈಡೇರಿಸಬಲ್ಲರೆ ಎಂದು ಮತದಾರ ಅಳೆದು, ತೂಗಿ ನೋಡಬೇಕು. ಒಬ್ಬ ಉಮೇದು ವಾರರಿಗೆ ಮತ ಚಲಾವಣೆಯಾಗುವುದಕ್ಕಿಂತಲೂ ಹೆಚ್ಚಾಗಿ ದೇಶದ ಭವಿತವ್ಯಕ್ಕೆ ಮತ ಎನ್ನುವುದು ಪ್ರಧಾನವಾಗುತ್ತದೆ. ಭಾರತಕ್ಕೆ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶವೆಂಬ ಹಿರಿಮೆಯಿದೆ. ಈ ಹಿಗ್ಗಿನಲ್ಲಿ ವಿಷಾದವೂ ಇದೆಯೆನ್ನುವುದು ನಿಷ್ಠುರ ಸತ್ಯ. ಏಕೆಂದರೆ ನಮ್ಮ ಸಂಸತ್ತು, ಶಾಸನ ಸಭೆಗಳಲ್ಲಿ ಗುರುತರ ಆರೋಪ ಹೊತ್ತಿರುವ ಸದಸ್ಯರೂ ಇದ್ದಾರೆ. ಚುನಾವಣೆಯಿಂದ ಚುನಾವಣೆಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರ್ಬಲ ವರ್ಗ ದವರ ಕಡೆಗಣನೆ ಹೆಚ್ಚುತ್ತಲೇ ಇರುವುದು ಕಣ್ಣಿಗೆ ಕಂಡಂತೆಯೇ ಇದೆ. ಎಂದಮೇಲೆ ನಾವಿಂದು ಮತದಾನದಲ್ಲಿ ಎಷ್ಟೇ ವಿವೇಚನೆ ವಹಿಸಿದರೂ ಸಾಲದು. ಮತದಾನ ಸಂದರ್ಭದಲ್ಲಿ ಯಾವುದೇ ಆಮಿಷಕ್ಕೊಳಗಾಗಬಾರದು, ಭಯ ಭೀತಿ ಸಲ್ಲದು ಮುಂತಾಗಿ ಪದೇ ಪದೆ ಹೇಳಿಸಿಕೊಳ್ಳುವುದೂ ಸಹ ಮತದಾರರ ಪಾಲಿಗೆ ಅವಮಾನವೇ ಹೌದು.
ದುರ್ದೈವವೆಂದರೆ ರಾಜಕೀಯ ಪಕ್ಷಗಳು ಒಂದಲ್ಲೊಂದು ಲಾಭಕ್ಕೆ ಆರೋಪಿಗಳ ಬೆಂಬಲಕ್ಕೆ ನಿಲ್ಲುವುದಿದೆ! ಈ ಪ್ರವೃತ್ತಿಯಿಂದ ಪ್ರಜಾಪ್ರಭುತ್ವ ಅಷ್ಟರಮಟ್ಟಿಗೆ ಸೊರಗುತ್ತದೆ. ನಮ್ಮದು ಅತಿ ದೊಡ್ಡ ಸಮರ್ಥ ಜನತಾಂತ್ರಿಕ ವ್ಯವಸ್ಥೆಯೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ ಎನ್ನುವಂತಾಗಬಾರದು. ಚುನಾವಣೆ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿಯ ವೇದಿಕೆ ಕಲ್ಪಿಸಿಕೊಡುತ್ತದೆ. ಒಂದು ಅರ್ಥದಲ್ಲಿ ದೇಶದ ಪ್ರತಿಯೊಬ್ಬರೂ ರಾಜಕಾರಣಿಗಳೇ ಹೌದು. ಭಾರತಕ್ಕೆ ಸ್ವಾತಂತ್ರÂ ಬಂದು ಎಪ್ಪತ್ತೂಂದು ವರ್ಷಗಳು ತುಂಬುತ್ತಿದೆ. ನಾವಿಂದು ನಮಗೆ ಬೇಕಾದ ಸರಕಾರವನ್ನು ಆಯ್ಕೆ ಮಾಡಿ ಕೊಳ್ಳುವ ಸಲುವಾಗಿ ಮತ ಚಲಾಯಿಸುವುದೇ ಒಂದು ಹಬ್ಬ. ಸ್ವಾತಂತ್ರÂಕ್ಕಾಗಿ ಹೋರಾಡಿದವರ ಪರಿಶ್ರಮವೆಷ್ಟು? ಅವರು ಅನುಭವಿಸಿದ ನೋವು, ಅಪಮಾನ, ಕಳೆದಕೊಂಡ ಆಸ್ತಿ ಪಾಸ್ತಿ, ಬಂಧು ಮಿತ್ರರ ಅಗಲಿಕೆ, ಸಾವು ಕಲ್ಪನೆಗೂ ಮೀರಿದ್ದು. ಹಾಗಾಗಿ ಮತಗಟ್ಟೆಯಿಂದ ದೂರವುಳಿದು ಮತದಾನ ದಿನವನ್ನು ಕೇವಲ ರಜಾ ದಿನವಾಗಿ ಕಾಣುವುದು ಅಕ್ಷರಶಃ ದೇಶದ ಇತಿಹಾಸವನ್ನೇ ಅವಮಾನಿಸಿದಂತೆ ಅಲ್ಲವೇ? ಮತದಾನದಲ್ಲಿ ಪಾಲ್ಗೊಳ್ಳದಿದ್ದರೆ ಪ್ರಜೆ ತನ್ನ ಧ್ವನಿಯನ್ನು ತಾನೇ ಕೈಯಾರೆ ಕಳೆದುಕೊಳ್ಳುತ್ತಾನೆ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ “”ಚುನಾವಣೆ ಜನರಿಗೆ ಸೇರಿದ್ದು. ಅದು ಅವರ ನಿರ್ವಚನ. ಚುನಾವಣೆಗೆ ಬೆನ್ನು ತಿರುಗಿಸಿದ ಮತದಾರ ತನ್ನ ಬೆನ್ನು ಸುಟ್ಟುಕೊಳ್ಳತ್ತಾನೆ. ಪರಿಣಾಮ ಆತ ತನ್ನ ಬೊಕ್ಕೆಗಳ ಮೇಲೆಯೇ ಕೂರಬೇಕಾದೀತು” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ಅಭಿಪ್ರಾ ಯಗಳು ದಾಖಲಾಗುವುದು ನಾವು ನೀಡುವ ಮತಗಳ ಮೂಲಕವೇ. ಆಹಾರ, ಔಷಧಿ, ಶಿಕ್ಷಣ, ವಸತಿ, ಸಾರಿಗೆ, ಸಂಪರ್ಕ, ಭದ್ರತೆ ಹೀಗೆ ಬದುಕಿನ ಎಲ್ಲ ಅಂಶಗಳೂ ಒಳಗೊಂಡಂತೆ ಮಹತ್ವದ ನಿರ್ಣಯಗಳು ಸಾಧ್ಯವಾಗುವುದು ನಾವು ಚಲಾಯಿಸುವ ಮತಗಳಿಂದಲೇ.
ತೀವ್ರ ವಿಪರ್ಯಾಸವೆನ್ನಬಹುದಾದ ಸಂಗತಿಯೆಂದರೆ ಬರಲಿ ರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತ ಚಲಾಯಿಸಿದವರಿಗೆ ಮಾಲ್‌ಗಳಲ್ಲಿ ಖರೀದಿಸಿದ ಸರಕುಗಳಿಗೆ ಇಂತಿಷ್ಟು ರಿಯಾಯಿತಿ ಎಂದು ಪ್ರಕಟಿಸಿರುವುದು! ಹೊಣೆಗಾರಿಕೆಯನ್ನು ನಿಭಾಯಿಸಿದ್ದಕ್ಕೆ ಉಡುಗೊರೆ, ಇನಾಮು ಅಗತ್ಯವೆ?ಸರಿಯೇ? ಇದೇ ನಿಟ್ಟಿನಲ್ಲಿ ಸಾಗಿದರೆ ನಾಳೆ ಕಳ್ಳರನ್ನು ಹಿಡಿದಿದ್ದಕ್ಕೆ ಪೋಲಿಸರಿಗೆ, ಸಿಲಬಸ್ ಮುಗಿಸಿದ್ದಕ್ಕೆ ಶಿಕ್ಷಕರಿಗೆ, ರೈಲನ್ನು ಸರಿಯಾದ ಸಮಯಕ್ಕೆ ಊರು ತಲುಪಿಸಿದ ಚಾಲಕರಿಗೆ, ರೋಗ ನಿವಾರಿಸಿದ್ದಕ್ಕೆ ವೈದ್ಯರಿಗೆ, ನಿರಂತರ ನೀರು ಅಥವಾ ವಿದ್ಯುತ್ ಸರಬರಾಜು ಮಾಡಿದ್ದಕ್ಕೆ ಆಯಾ ಇಲಾಖೆ ಸಿಬ್ಬಂದಿಗೆ, ಓದಲು ಪುಸ್ತಕ ಒದಗಿಸಿದಕ್ಕೆ ಗ್ರಂಥಪಾಲಕರಿಗೆ…ಕಡೆಗೆ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳದಿದ್ದಕ್ಕೆ ನಿವೇಶನದಾರರಿಗೂ ಬಹುಮಾನ ಪ್ರದಾನಿಸಬೇಕಾದೀತು! ಒಂದಂತೂ ಸ್ಪಷ್ಟ. ಚುನಾವಣೆಯಲ್ಲಿ ಭಾಗಿಯಾಗಿದ್ದಕ್ಕೆ ಹಾಗೆ ಮಾಲ್‌ನಲ್ಲಿ ಅಗ್ಗದ ದರದಲ್ಲಿ ಸರಕು ಒದಗಿಸಿದರೆ ಮತದಾನವನ್ನು ಅಮಾನ್ಯಿàಕರಿಸಿ ದಂತೆಯೇ ಆಗುವುದು. ಮುಂದೆ ಎಂಥ ಆಭಾಸದ, ಅಷ್ಟೇ ಕಠಿಣತಮ ಸನ್ನಿವೇಶ ಉದ್ಭವಿಸಬಹುದೆಂದು ಅಂದಾಜಿಸಬಹುದು. ಸರ್ವರಿಗೂ ಜಾಗೃತಿ ಮೂಡುವಂತೆ ಮತದಾನದ ಮಹತ್ವವನ್ನು ವಿವರಿಸುವುದೇ ರಾಜಮಾರ್ಗ.
– ಬಿಂಡಿಗನವಿಲೆ ಭಗವಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.