ಉತ್ತಮ ಪ್ರಾತಿನಿಧ್ಯ, ಹೆಚ್ಚಾಯ್ತು ನಿರೀಕ್ಷೆ!
Team Udayavani, May 31, 2019, 3:00 AM IST
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಮತ್ತೆ ನಾಲ್ಕು ಸಚಿವ ಸ್ಥಾನ ದಕ್ಕಿದ್ದು, ಮಹತ್ವದ ಖಾತೆಗಳು ರಾಜ್ಯದ ಪಾಲಾಗುವ ನಿರೀಕ್ಷೆ ಮೂಡಿದೆ. ಸದ್ಯ ಕೇಂದ್ರ ಸಂಪುಟದಲ್ಲಿ ಉತ್ತರ ಕರ್ನಾಟಕ, ಬೆಂಗಳೂರಿಗೆ ಆದ್ಯತೆ ಸಿಕ್ಕಂತಾಗಿದ್ದು, ಹಳೆ ಮೈಸೂರು ಹಾಗೂ ಪರಿಶಿಷ್ಟ ಜಾತಿ, ಪಂಗಡಕ್ಕೆ ಪ್ರಾತಿನಿಧ್ಯ ಸಿಗಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಹಿಂದಿನ ಕೇಂದ್ರ ಸರ್ಕಾರದಲ್ಲೂ ಸಚಿವರಾಗಿದ್ದವರ ಪೈಕಿ ನಿರ್ಮಲಾ ಸೀತಾರಾಮನ್ ಹಾಗೂ ಡಿ.ವಿ.ಸದಾನಂದಗೌಡ ಅವರು ಮತ್ತೆ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಉಳಿದಂತೆ ಸಂಸದರಾದ ಪ್ರಹ್ಲಾದ ಜೋಷಿ ಹಾಗೂ ಸುರೇಶ್ ಅಂಗಡಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಾಗಿವೆ. ಪಕ್ಷ, ಸರ್ಕಾರ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಹಿರಿಮೆಯಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಕರ್ನಾಟಕದ ಕೋಟಾದಡಿಯಲ್ಲೇ ಸಚಿವ ಸ್ಥಾನ ಪಡೆದಿದ್ದಾರೆ. ಆ ಮೂಲಕ ಮಹಿಳಾ ಪ್ರಾತಿನಿಧ್ಯವೂ ದೊರೆತಂತಾಗಿದೆ.
ರೈಲ್ವೆ ಖಾತೆ, ಯೋಜನೆ ಮತ್ತು ಸಾಂಖ್ಯೀಕ ಇಲಾಖೆ ಸೇರಿದಂತೆ ಇತರೆ ಖಾತೆ ನಿಭಾಯಿಸಿರುವ ಸದಾನಂದಗೌಡರಿಗೆ ಅವಕಾಶ ಕಲ್ಪಿಸುವ ಮೂಲಕ ಬೆಂಗಳೂರು ಮಾತ್ರವಲ್ಲದೆ ಒಕ್ಕಲಿಗ ಸಮುದಾಯ, ಕರಾವಳಿಗೂ ಪ್ರಾತಿನಿಧ್ಯ ನೀಡಿದಂತಾಗಿದೆ. ಜತೆಗೆ ಹಳೆ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನೂ ಈಡೇರಿಸಿದಂತಾಗಿದೆ ಎಂಬ ಲೆಕ್ಕಾಚಾರವಿದೆ. ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಹ್ಲಾದ್ ಜೋಷಿಯವರು ಮೊದಲ ಬಾರಿಗೆ ಕೇಂದ್ರ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ.
ಬ್ರಾಹ್ಮಣ ಸಮುದಾಯ, ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯದ ಜತೆಗೆ ಹಿರಿತನ, ಅನುಭವ ಪರಿಗಣಿಸಿ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಮಾತು ಕೇಳಿಬಂದಿದೆ. ಬಿಜೆಪಿಯ ಪ್ರಬಲ ಮತಬ್ಯಾಂಕ್ ಎನಿಸಿರುವ ಲಿಂಗಾಯಿತ ಸಮುದಾಯದ ಸುರೇಶ್ ಅಂಗಡಿಯವರಿಗೆ ವರಿಷ್ಠರು ಸಂಪುಟದಲ್ಲಿ ಅವಕಾಶ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿದಂತಾಗಿದೆ ಎನ್ನಲಾಗಿದೆ.
ಮತ್ತಷ್ಟು ಸಚಿವ ಸ್ಥಾನದ ನಿರೀಕ್ಷೆ: ಕಳೆದ ಬಾರಿ ರಾಜ್ಯದಲ್ಲಿ 17 ಸಂಸದರು ಆಯ್ಕೆಯಾಗಿದ್ದ ಸಂದರ್ಭದಲ್ಲೇ ಕೇಂದ್ರ ಸಂಪುಟದಲ್ಲಿ ನಾಲ್ಕು ಮಂದಿಗೆ ಅವಕಾಶ ದೊರಕಿತ್ತು. ಈ ಬಾರಿ ಎಂಟು ಸ್ಥಾನ ಹೆಚ್ಚುವರಿಯಾಗಿದ್ದು, 25 ಸ್ಥಾನಕ್ಕೇರಿದೆ. ಹಾಗಾಗಿ ಸಹಜವಾಗಿಯೇ ಸಂಪುಟದಲ್ಲಿ ರಾಜ್ಯಕ್ಕೆ ಇನ್ನಷ್ಟು ಪ್ರಾತಿನಿಧ್ಯ ಸಿಗಬೇಕು ಎಂಬ ನಿರೀಕ್ಷೆಯೂ ಇದೆ.
ಉತ್ತರ ಕರ್ನಾಟಕದ ಎಲ್ಲ ಸ್ಥಾನಗಳನ್ನೂ ಬಿಜೆಪಿ ಗೆದ್ದಿರುವುದರಿಂದ ಆ ಭಾಗದ ಇಬ್ಬರು ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಬಿಜೆಪಿ ಉತ್ತಮ ಸಾಧನೆ ತೋರಿದ್ದರೂ ಒಂದು ಸಚಿವ ಸ್ಥಾನವನ್ನಷ್ಟೇ ನೀಡಲಾಗಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಈ ಭಾಗಕ್ಕೆ ಮತ್ತೂಂದು ಸಚಿವ ಸ್ಥಾನ ಸಿಗಬೇಕು ಎಂಬುದು ಆ ಭಾಗದ ನಾಯಕರ ನಿರೀಕ್ಷೆ.
ಕರಾವಳಿ ಭಾಗದಲ್ಲೂ ಎಲ್ಲ ಸ್ಥಾನವನ್ನೂ ಬಿಜೆಪಿ ಗೆದ್ದಿದ್ದು, ಈ ಭಾಗದ ಸಂಸದರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹವಿದೆ. ಶೋಭಾ ಕರಂದ್ಲಾಜೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಸದಾನಂದಗೌಡರು ಕರಾವಳಿ ಮೂಲದ ವರಾದರೂ ಸದ್ಯ ಬೆಂಗಳೂರು ಪ್ರತಿನಿಧಿಸುವುದರಿಂದ ಕರಾವಳಿಗೂ ಒತ್ತು ನೀಡಬೇಕು ಎಂಬ ಮಾತುಗಳಿವೆ. ರಾಜ್ಯದ ಐದು ಪರಿಶಿಷ್ಟ ಜಾತಿ, ಎರಡು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿದೆ.
ಹಾಗಾಗಿ ಈ ಸಮುದಾಯದ ಒಬ್ಬ ಸಂಸದರಿಗಾದರೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ಸಂಪುಟ ಸೇರುವ ಮಾತು ಕೇಳಿಬಂದಿತ್ತು. ಇನ್ನೊಂದೆಡೆ ಕಾಂಗ್ರೆಸ್ ಹಿರಿಯ ನಾಯಕ ಖರ್ಗೆಯವರನ್ನು ಪರಾಭವಗೊಳಿಸಿ ಬಂಜಾರ ಸಮುದಾಯದ ಉಮೇಶ್ ಜಾಧವ್ ಅವರಿಗೂ ಮಣೆ ಹಾಕಬಹುದು ಎಂಬ ನಿರೀಕ್ಷೆ ಮೂಡಿತ್ತು. ಹಾಗಾಗಿ ಮುಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪ್ರಾತಿನಿಧ್ಯ ಸಿಗುವುದೇ ಎಂಬ ನಿರೀಕ್ಷೆ ಇನ್ನೂ ಹಸಿರಾಗಿದೆ.
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.