Govt.,ಗಂಗಾರತಿ ರೀತಿ ಕಾವೇರಿ ಜತೆ “ಕೃಷ್ಣಾ ಆರತಿ’ಯೂ ನಡೆಯಲಿ!
ಕೃಷ್ಣಾ ನದಿ ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆ ಪೋಷಿಸುವುದು ಅಗತ್ಯ ; ಕಾವೇರಿಯಂತೆ ಕೃಷ್ಣೆಗೂ ಸಮಾನ ಪ್ರಾತಿನಿಧ್ಯ ಸಿಗಬೇಕು
Team Udayavani, Jul 30, 2024, 6:23 AM IST
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಕೆಆರ್‌ಎಸ್‌ಗೆ ಭೇಟಿ ನೀಡಿದ ವೇಳೆ ಕಾವೇರಿ ನದಿಗೆ “ಗಂಗಾರತಿ’ ಮಾದರಿಯಲ್ಲಿ “ಕಾವೇರಿ ಆರತಿ’ ಆರಂಭಿಸಲು ತೀರ್ಮಾನಿಸಿದ್ದು ಸ್ವಾಗತಾರ್ಹವಾಗಿದೆ. ಸರಕಾರವೇ ಕಾವೇರಿ ಜಲಭಾಗ್ಯ ನಿಗಮ ಹಾಗೂ ಧಾರ್ಮಿಕ ದತ್ತಿ ಇಲಾಖೆ ಜಂಟಿಯಾಗಿ ಕಾರ್ಯಕ್ರಮ ರೂಪಿಸುವುದು ಹಾಗೂ ಈ ಕುರಿತು ಅಧ್ಯಯನ ನಡೆಸಲು ವಾರಾಣಸಿಗೆ ತೆರಳಲು ನಿಯೋಗ ಕಳುಹಿಸುವ ಕುರಿತು ಘೋಷಣೆ ಮಾಡಿದ್ದಾರೆ.
ಪ್ರತೀ ವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವ, ಕುಂಭಮೇಳ ಮಾಡುತ್ತಾರೆ. ಶಿವಮೊಗ್ಗ, ಉತ್ತರ ಕನ್ನಡದ ಜನತೆ ಶರಾವತಿಗೆ ತೆಪ್ಪೋತ್ಸವ ಮಾಡುತ್ತಾರೆ. ಆ ಮೂಲಕ ಅವರ ಜೀವನಾಡಿಯಂತಿರುವ ನದಿಗಳ ಸಾಂಸ್ಕೃತಿಕ ಹಿರಿಮೆ ಸಾರುತ್ತಾರೆ. ಮುಂದಿನ ಪೀಳಿಗೆಯೂ ನದಿಗಳ ಬಗೆಗೆ ಮಾತೃತ್ವದ ಗೌರವವನ್ನು ಹೊಂದುವಂತೆ ನೋಡಿಕೊಳ್ಳುತ್ತಾರೆ. ಆದರೆ, ತಲೆ-ತಲಾಂತರಗಳಿಂದ ನಮ್ಮನ್ನು ಪಾಲನೆ-ಪೋಷಿಸುತ್ತಿರುವ ಕೃಷ್ಣೆಗೆ ವರ್ಷಕ್ಕೊಮ್ಮೆ ನದಿಪೂಜೆ, ಬಾಗಿನ ಕೊಟ್ಟು ಕೈ ಮುಗಿಯಬೇಕು; ಕಾರ್ತಿಕದಲ್ಲಿ ದೀಪ ಹಚ್ಚಬೇಕು. ಪ್ರತಿ 12 ವರ್ಷಗಳಿಗೊಮ್ಮೆ ಗುರು ಕನ್ಯಾರಾಶಿ ಪ್ರವೇಶಿಸಿದಾಗ ಸಾಕ್ಷಾತ್ ಗಂಗೆಯೇ ಕೃಷ್ಣೆಯ ಭೇಟಿಗೆ ಆಗಮಿಸುವ ವೇಳೆ ನೆರವೇರುವ ಕನ್ಯಾಗತವನ್ನು ಅದ್ಧೂರಿಯಾಗಿ ಆಚರಿಸಬೇಕು ಅಂತ ನಮಗೆ ಎಂದಿಗೂ ಅನಿಸಲಿಲ್ಲ. ಕೊಡಗಿನ ಜನತೆಗೆ ಕಾವೇರಿ ಕುಲದೈವವಾದಳು. ನಮ್ಮ ಪಾಲಿನ ಮಹಾತಾಯಿ ಕೃಷ್ಣೆಯ ದೈವತ್ವವನ್ನು ನಾವು ಇಂದಿಗೂ ಅರಿಯದಿರುವುದು ಉತ್ತರ ಕರ್ನಾಟಕದ ಅತಿದೊಡ್ಡ “ಸಾಂಸ್ಕೃತಿಕ ದುರಂತ’.
ಹೀಗಾಗಿಯೇ ಕಾವೇರಿಯ ಜತೆಗೆ ಕೃಷ್ಣೆಗೂ ಆರತಿ ನಡೆಯಲಿ ಎಂದು ಉತ್ತರ ಕರ್ನಾಟಕದ ಜನ ಧ್ವನಿ ಎತ್ತದಿರುವಂತಾಗಿದೆ. ಕರ್ನಾಟಕದ ಮಟ್ಟಿಗೆ ಕಾವೇರಿ ದಕ್ಷೀಣದ ಗಂಗೆಯಾದರೆ, ಕೃಷ್ಣೆ ಉತ್ತರದ ಗಂಗೆ. ಹೀಗಾಗಿ ಕೃಷ್ಣೆ-ಕಾವೇರಿ ಇಬ್ಬರಿಗೂ ಸಮಾನ ಪ್ರಾತಿನಿಧ್ಯ ಸಿಕ್ಕರೆ ಮಾತ್ರ ಸರಕಾರದ ಇಂಥ ಹೊಸತನದ ಪ್ರಯತ್ನಕ್ಕೊಂದು ಅರ್ಥ ಬರುತ್ತದೆ.
ಕೃಷ್ಣೆಯ ಧಾರ್ಮಿಕ ಹಿನ್ನೆಲೆ: ಸ್ಕಂದ ಪುರಾಣದ ಭಾಗವಾದ ಶ್ರೀ ಕೃಷ್ಣವೇಣಿ ಮಾಹಾತೆ¾ ಕೃಷ್ಣಾನದಿಯ ಜನ್ಮದ ರೋಚಕತೆ ತೆರೆದಿಡುತ್ತದೆ. ಕಲಿಯುಗದಲ್ಲಿ ಪಾಪಕರ್ಮಗಳು ಹೆಚ್ಚಾಗಿ ಕಾಮಧೇನು, ಕಲ್ಪವೃಕ್ಷಗಳ ಪ್ರಭಾವ ಕಡಿಮೆಯಾದಾಗ ನಾರದರು ಭಗವಾನ್ ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣು ಜನರ ಕಷ್ಟಗಳು ಹಾಗೂ ಪಾಪಕರ್ಮಗಳ ಪರಿಹಾರಕ್ಕಾಗಿ ಕಾಮಧೇನು, ಕಲ್ಪವೃಕ್ಷಗಳ ಬದಲಾಗಿ ನದಿನೀರು ತೀರ್ಥರೂಪದಲ್ಲಿ ಪೂಜ್ಯತೆ ಪಡೆದು, ಅದನ್ನು ಜನ ವೀಕ್ಷಿಸುವುದರಿಂದ, ಪೂಜಿಸುವುದರಿಂದ ಪಾಪ ಕಳೆದು ಸನ್ಮಾರ್ಗದ ದಾರಿಯಲ್ಲಿ ನಡೆದು ಮೋಕ್ಷ ಹೊಂದುತ್ತಾರೆ.
ಹೀಗಾಗಿ ನಾನೇ ಸ್ವತಃ ನದಿಯಾಗಿ ಹರಿದು ಮನುಕುಲದ ಉದ್ಧಾರ ಮಾಡುತ್ತೇನೆ ಎಂದು ಭಗವಾನ್ ವಿಷ್ಣು ಹೇಳುತ್ತಾನೆ.
ಇದರಿಂದಾಗಿಯೇ ನೀಲಿ ಮತ್ತು ಕಪ್ಪು ಬಣ್ಣದ ಮೈಕಾಂತಿಯನ್ನು ಹೊಂದಿರುವ 4 ಕೈಗುಳುಳ್ಳ, ಹಳದಿ ರೇಷ್ಮೆಯ ಪಿತಾಂಬರ ತೊಟ್ಟಿರುವ ಬಾಲಕಿಯನ್ನು ವಿಷ್ಣು ಸೃಷ್ಟಿಸುತ್ತಾನೆ. ಆಗ ಬ್ರಹ್ಮನು ಅವಳನ್ನು ಮಗಳಾಗಿ ಸ್ವೀಕರಿಸಿ, ಸ್ಪರ್ಶಿಸುವ ಮೂಲಕ ಕೆಲವು ತೀರ್ಥಗಳನ್ನು ಸೃಷ್ಟಿಸುತ್ತಾನೆ. ಹೀಗೆ ಜನ್ಮ ತಾಳಿದ ದೇವಿ ಕೃಷ್ಣೆಯು ಭೂಲೋಕಕ್ಕೆ ಬ್ರಹ್ಮ, ವಿಷ್ಣು, ಮಹೇಶ್ವರರ ಆದಿಯಾಗಿ ಋಷಿ ಮುನಿಗಳ ಜೊತೆಗೆ ಆಗಮಿಸುತ್ತಾಳೆ. ಸಹ್ಯಾದ್ರಿ ಪರ್ವತದ ಮಡಿಲಿನಲ್ಲಿ ವಿಷ್ಣುವಿನ ರೂಪ ಪಡೆದ ಬಿಳಿ ಅಶ್ವತ್ಥ ಮರದ ಕೆಳಗೆ ಕೃಷ್ಣಾ ನದಿ ಜನಿಸಿದಾಗ ಆಲದ ಎಲೆಯ ಮೇಲೆ ಕೃಷ್ಣ ಪ್ರಕಟನಾದನೆಂಬ ಪೌರಾಣಿಕ ಹಿನ್ನೆಲೆ ಇದೆ.
ಒಮ್ಮೆ ಶ್ರೀ ಸುಬ್ರಹ್ಮಣ್ಯ ದೇವರು ಋಷಿಗಳೊಂದಿಗೆ ಶಿವನ ದರ್ಶನಕ್ಕಾಗಿ ಕೈಲಾಸಕ್ಕೆ ಬಂದರು. ಪುರಾಣಗಳಿಂದ ಸುತ್ತುವರಿದ 6 ಭಾಗಗಳೊಂದಿಗೆ (ಷಡಂಗಗಳು) ಅವರು ವೇದದ ವ್ಯಕ್ತಿತ್ವದಂತೆ ಗೊಚರಿಸತೊಡಗಿತು. ಸುಬ್ರಹ್ಮಣ್ಯರು ಪರಮೇಶ್ವರನನ್ನು ಕೃಷ್ಣಾ ನದಿಯ ಹಿರಿಮೆಯನ್ನು ತಿಳಿಸಿಕೊಡಲು ಮನವಿ ಮಾಡಿದಾಗ ಪರಶಿವನು ಶ್ರೀ ವಿಷ್ಣುವಿನ ಪಾದಗಳನ್ನು ಒಮ್ಮೆ ಮಾತ್ರ ಸ್ಪರ್ಶಿಸಿದ ಗಂಗೆಯು ಮಾನವನಿಗೆ ಕೇವಲ ಆಲೋಚನೆ ಮಾತ್ರದಿಂದಲೇ ಮೋಕ್ಷವನ್ನು ನೀಡಬಲ್ಲವಳಾದರೆ, ಕೃಷ್ಣ ನಿಜವಾಗಿಯೂ ವಿಷ್ಣುವಿನ ದೇಹ. ಹೀಗಾಗಿ ಕೃಷ್ಣೆಯ ವ್ಯಕ್ತಿತ್ವವು ಎಲ್ಲರಿಗಿಂತ ಹಿರಿದು ಎಂಬ ಮಹಿಮೆಯನ್ನು ಪರಶಿವ ಕೇವಲ ಒಂದೇ ವಾಕ್ಯದಲ್ಲಿ ವಿವರಿಸುತ್ತಾನೆ. ಅಂತೆಯೇ ನಮ್ಮ ಶರಣರೂ ಕೃಷ್ಣೆಯನ್ನು “ಹಿರಿಹೊಳಿ’ ಎಂದು ಕರೆದಿ¨ªಾರೆ.
ಅಭಿಮಾನ ಶೂನ್ಯತೆ ದೂರವಾಗಬೇಕಿದೆ: ಉತ್ತರ ಭಾರತದ ಗಂಗೆ ಇಡೀ ದೇಶಕ್ಕೆ “ಪಾಪವಿನಾಶಿನಿ’ಯಾದಳು.
ಕಾವೇರಿ ಕನ್ನಡ ನಾಡಿನ “ಜೀವನದಿ’ಯಾದಳು. ಶರಾವತಿ ಕನ್ನಡದ “ಭಾಗೀರಥಿ’ಯಾದಳು. “ಗಂಗಾ ಸ್ನಾನ, ತುಂಗಾ ಪಾನ’ ಎಂದು ಹಿರಿಯರು ಕೃಷ್ಣೆಯ ಉಪನದಿಯಾದ ತುಂಗೆಗೂ ಧಾರ್ಮಿಕ ಮಹತ್ವ ನೀಡಿದರು. ಪಕ್ಕದ ಆಂಧ್ರದವರು ಗೋದಾವರಿಯನ್ನು “ತಾಯಿ’ ಎಂದರು. ಮಹಾರಾಷ್ಟ್ರದವರು ಇದೇ ಕೃಷ್ಣೆಯನ್ನು “ಮಾಯಿ’ ಎಂದರು. ಆದರೆ ನಮ್ಮ ಉತ್ತರ ಕರ್ನಾಟಕದ ಜನಕ್ಕೆ ಮಾತ್ರ ಕೃಷ್ಣೆಯ ಮಹತ್ವ ಮತ್ತು ಹಿರಿಮೆ ಅರ್ಥವಾಗಲಿಲ್ಲ!
ಸಾಂಸ್ಕೃತಿಕವಾಗಿ ಕಲೆ, ಸಾಹಿತ್ಯಿಕವಾಗಿ ಕೃಷ್ಣೆಯನ್ನು ಸ್ತುತಿಸುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಕಾವೇರಿ, ಶರಾವತಿ ಜತೆಗೆ ತುಂಗೆ-ಭದ್ರೆಯರ ಕುರಿತು ಸಾಹಿತ್ಯ, ಸಿನೆಮಾ ಹಾಡುಗಳು, ನೃತ್ಯಗಳು ರಚಿತವಾದವು. ಹಿರಿಯ ಕಲಾವಿದರ ಬಾಯಲ್ಲಿ ಈ ನದಿಗಳ ವೈಭವ ನಲಿದಾಡಿತು. ಆದರೆ ಇದೇ ಪ್ರಾಮುಖ್ಯತೆ ಕೃಷ್ಣೆಗೆ ಇಂದಿಗೂ ಯಾಕೆ ದೊರೆತಿಲ್ಲ? ಇದು ನಮ್ಮ ಜನಗಳ ಅಭಿಮಾನ ಶೂನ್ಯತೆಯನ್ನು ಪ್ರತಿಫಲಿಸುತ್ತದೆ. ಇದರಿಂದಾಗಿ ಸಾಮಾಜಿಕ ನ್ಯಾಯ ಪಡೆಯುವಲ್ಲಿಯೂ ಹಿಂದೆ ಬಿದ್ದಿದ್ದೇವೆ. ಕಾವೇರಿ ಜಲಾನಯನ ಪ್ರದೇಶದ ಯೋಜನೆಗಳು ಅಲ್ಲಿಯ ಜನರಿಗೆ ಅಸ್ಮಿತೆಯ ಸಂಕೇತವಾದರೆ, ನಮ್ಮ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ಜಲಾನಯನ ಪ್ರದೇಶದ ಯೋಜನೆಗಳು ಕೇವಲ ರಾಜಕೀಯ ಪ್ರಚಾರಕ್ಕಷ್ಟೇ ಸೀಮಿತವಾದವು.ತಮಿಳುನಾಡಿನ ಜನ ಕಾವೇರಿ ನೀರನ್ನು ಕೇಳಿದರೆ ಹಳೆ ಮೈಸೂರು ಭಾಗದ ಜನ ಬೀದಿಗಿಳಿದು ಹೋರಾಡುತ್ತಾರೆ. ದಶಕಗಳಿಂದ ಕೃಷ್ಣೆಯ ಸಾವಿರಾರು ಟಿಎಂಸಿ ನೀರು ಆಂಧ್ರ-ತೆಲಂಗಾಣದ ಪಾಲಾದರೂ ನಮ್ಮ ಜನ ಗಾಢ ನಿದ್ರೆಯಲ್ಲಿದ್ದಾರೆ!
60 ವರ್ಷಗಳ ಹಿಂದೆ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ ಇಂದಿಗೂ ಪೂರ್ಣವಾಗಿಲ್ಲ. ಹಂತ-3ರ ಯೋಜನೆಗಳು ಪೂರ್ಣಗೊಂಡರೆ ಉತ್ತರದ ಬಹುಪಾಲು ಜಿಲ್ಲೆ ಗಳ ಭೂಮಿ ಹಸುರಿನಿಂದ ಕಂಗೊಳಿಸುತ್ತದೆ. ನಮ್ಮ ಸರಕಾರಗಳಿಗೆ ಭದ್ರಾ ಮೇಲ್ದಂಡೆ ಯೋಜನೆ, ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಮೇಲೆ ಇರುವ ಮಮಕಾರ ಕೃಷ್ಣೆಯ ಮೇಲೆ ಏಕೆ ಹುಟ್ಟುತ್ತಿಲ್ಲ?
ಕಾವೇರಿಯ ಮೇಲೆ ಮೈಸೂರು ಮಹಾರಾಜರಿಗೆ ವಿಶೇಷ ಅಕ್ಕರೆಯಿತ್ತು. ತುಂಗಭದ್ರೆಯ ದಡದಲ್ಲಿ ವೈಭವದ ವಿಜಯನಗರ ಸಾಮ್ರಾಜ್ಯ ನಿರ್ಮಾಣವಾಗಿತ್ತು. ಹೀಗಾಗಿ ವಿಜಯನಗರದ ಅರಸರು ತುಂಗಭದ್ರೆಯನ್ನು ದೈವವಾಗಿ ಕಂಡರು. ನಮ್ಮ ಕೃಷ್ಣೆಗೆ ಮೈಸೂರು ಮಹಾರಾಜರೂ ಸಿಗಲಿಲ್ಲ; ವಿಜಯನಗರದ ವೈಭವವೂ ದೊರಕಲಿಲ್ಲ. ಹೀಗಾಗಿ ಕೃಷ್ಣೆಯ ದೈವತ್ವ, ಪೂಜ್ಯತೆ, ಸಮೃದ್ಧತೆ, ವೈಶಾಲತೆ ನಮ್ಮ ಜನಕ್ಕೆ ಅರ್ಥವಾಗಲಿಲ್ಲ.
ಸಾಂಸ್ಕೃತಿಕ ಹಿನ್ನೆಲೆ, ಜಲ ಸಂಪನ್ಮೂಲ, ನೀರಾವರಿ ಬಳಕೆ ಎಲ್ಲದರಲ್ಲೂ ಕೃಷ್ಣೆ ಕಾವೇರಿಗಿಂತ ಹಿರಿಯಳು. ಆದರೆ ಕೃಷ್ಣೆಗೆ ದೊರೆಯಬೇಕಾದ ಸಾಂಸ್ಕೃತಿಕ, ಧಾರ್ಮಿಕ ಪ್ರಾತಿನಿಧ್ಯ ದೊರೆತಿಲ್ಲ. ಸರಕಾರದ ಯೋಜನೆ ಅನುಷ್ಠಾನದ ವಿಷಯದಲ್ಲೂ ಕಾವೇರಿ ಕೊಳ್ಳಕ್ಕಿರುವ ಗಂಭೀರತೆ ಕೃಷ್ಣೆಯ ವಿಷಯದಲ್ಲಿಲ್ಲ.
ಈ ಹಿಂದೆ ಬಿಜೆಪಿ ಸರಕಾರ ಹರಿಹರದಲ್ಲಿ ತುಂಗಭದ್ರೆಯ ದಂಡೆಯಲ್ಲಿ ಗಂಗಾ ತಟದ ಮಾದರಿಯಲ್ಲಿ ಮಂಟಪಗಳು ಹಾಗೂ ಸ್ನಾನಘಟ್ಟ ನಿರ್ಮಿಸಿ ತುಂಗಾರತಿ ಮಾಡುವುದಾಗಿ ಘೋಷಿಸಿತ್ತು. ತುಂಗೆ, ಕಾವೇರಿಯ ಜತೆ ಕೃಷ್ಣೆಯ ವಿಷಯದಲ್ಲಿಯೂ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ವ್ಯಕ್ತವಾದಾಗ ಮಾತ್ರ ನಾಡಿನಲ್ಲಿ ಸಾಮರಸ್ಯ ನೆಲೆಯೂರುತ್ತದೆ.
ಎಲ್ಲ ನದಿಗಳೂ ಪ್ರಾಮುಖ್ಯತೆ ಬೇಕು: ನಮ್ಮ ನದಿಗಳ ಬಗೆಗಿನ ಅಸಂಖ್ಯ ಸಂಗತಿಗಳು ನಮಗೆ ಗೊತ್ತಿಲ್ಲ. ಅವುಗಳನ್ನು ಶೋಧಿಸುವ, ಪೋಷಿಸುವ ಕೆಲಸವನ್ನು ಸುಸಂಸ್ಕೃತ ಸಮಾಜ ಮಾಡಬೇಕು. ಕೃಷ್ಣೆ, ಕಾವೇರಿ, ತುಂಗಭದ್ರೆ ಮಾತ್ರವಲ್ಲ, ಚಿಕ್ಕ-ಪುಟ್ಟ ನದಿಗಳು ನಮಗೆ ದೈವಸ್ವರೂಪ. ಈ ಎಲ್ಲ ನದಿಗಳು ನಮಗೆ ನೆಮ್ಮದಿಯ ಬದುಕು ಕಟ್ಟಿಕೊಟ್ಟಿವೆ. ನಾಗರಿಕತೆಯ ಪಾಠ ಹೇಳಿಕೊಟ್ಟಿವೆ. ಅವುಗಳ ಬಗ್ಗೆ ನಮಗೆ ಧನ್ಯತೆ ಮತ್ತು ಪೂಜ್ಯತೆಯ ಭಾವ ಬೆಳೆಯಬೇಕು.
ಕೇವಲ ಕೃಷ್ಣೆ ಮಾತ್ರವಲ್ಲ ಕಾವೇರಿಯೂ ಬಗೆಗೂ ನಮ್ಮ ಅಭಿಮಾನ ಗಟ್ಟಿಯಾಗಿದೆ. ಆದರೆ ನಮ್ಮ ಜೀವನದ ಅವಿಭಾಜ್ಯ ಅಂಗ ಕೃಷ್ಣೆಗೂ ಪ್ರಾಧಾನ್ಯತೆ ದೊರೆಯಲಿ, ಆಕೆಗೂ ಕಾವೇರಿಗೆ ದೊರೆಯುವ ಪ್ರಾಶಸ್ತ್ಯ ದೊರೆಯಬೇಕೆಂಬುದಷ್ಟೇ ಕಳಕಳಿ. ಅದಕ್ಕಾಗಿ ಕೃಷ್ಣೆಯ ಬಗ್ಗೆ ಸಮಗ್ರ ಅಧ್ಯಯನ, ಸಂಶೋಧನೆ ನಡೆಯಬೇಕು. ಸಾಹಿತ್ಯ, ಹಾಡು. ಕಥೆ, ನೃತ್ಯ, ರೂಪಕಗಳ ರಚನೆಯಾಗಬೇಕು. ಕಲಾವಿದರು, ಸಿನೆಮಾ ನಟರು ಕೃಷ್ಣೆಯನ್ನು ಸಾಂಸ್ಕೃತಿಕವಾಗಿ ಹಾಗೂ ಕಲಾತ್ಮಕವಾಗಿ ಶ್ರೀಮಂತಗೊಳಿಸಬೇಕು. ನದಿಪೂಜೆ, ದೀಪೋತ್ಸವ, ತೆಪ್ಪೋತ್ಸವ, ಕೃಷ್ಣಾರತಿ, ಉಪನದಿಗಳ ಸಂಗಮ ಕ್ಷೇತ್ರದಲ್ಲಿ ಕುಂಭಮೇಳಗಳು ಜರಗಬೇಕು. ಈ ನಿಟ್ಟಿನಲ್ಲಿ ಸರಕಾರದ ಜತೆ ಸಾರ್ವಜನಿಕರ ಸಹಭಾಗಿತ್ವ, ಆಸಕ್ತಿ, ಅಭಿಮಾನವು ಮಹತ್ವ ಪಡೆದುಕೊಳ್ಳುತ್ತದೆ. ಆ ಮೂಲಕ ಕೃಷ್ಣೆಯ ಬಗೆಗಿನ ಶತಮಾನಗಳ ಅಭಿಮಾನ ಶೂನ್ಯತೆಯನ್ನು ಕಳಚಲು ಜಾಗೃತರಾಗೋಣ.
-ಸಂಗಮೇಶ ಆರ್. ನಿರಾಣಿ ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.