ಗುಡಿ ಸುತ್ತಿ ಸೋತ ಗೌಡರು; ದೇಗುಲ ಮೆಟ್ಟಿಲೇರದೆ ಗೆದ್ದ ಜಿಗಜಿಣಗಿ
Team Udayavani, May 25, 2019, 5:00 AM IST
ವಿಜಯಪುರ: ಲೋಕಸಭೆ ಹಾಲಿ ಚುನಾವಣೆಯಲ್ಲಿ ಸೋತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಈ ಬಾರಿ ಮತ್ತೆ ಗೆದ್ದಿರುವ ಕೇಂದ್ರ ಹಾಲಿ ಸಚಿವ ರಮೇಶ ಜಿಗಜಿಣಗಿ ಸಮಕಾಲೀನ ರಾಜಕೀಯ ನಾಯಕರು. ಇಬ್ಬರೂ ಒಂದೇ ಪಕ್ಷದಲ್ಲಿ ದಶಕಗಳ ಕಾಲ ಜೊತೆಯಾಗಿ ಅಧಿಕಾರದ ರಾಜಕೀಯ ಮಾಡಿದವರು. ಆದರೆ ಇಬ್ಬರಲ್ಲೂ ದೈವಿ ಭಕ್ತಿ, ಟೆಂಪಲ್ ರನ್, ಕುಟುಂಬ ರಾಜಕಾರಣ ಹೀಗೆ ಹಲವು ವೆರುಧ್ಯ, ವಿಭಿನ್ನ ವ್ಯಕ್ತಿತ್ವ ಇದೆ. ಈ ಬಾರಿಯ ಲೋಕಸಭೆ ಚುನಾವಣೆ ಫಲಿತಾಂಶದಲ್ಲೂ ಇಬ್ಬರಿಗೂ ವಿಭಿನ್ನ ಫಲಿತವನ್ನೇ ಪಡೆದಿರುವುದು ಸಮಕಾಲೀನ ರಾಜಕೀಯ ನಾಯಕರಿಬ್ಬರ ವ್ಯಕ್ತಿತ್ವ ವಿಶ್ಲೇಷಣೆ ನಡೆದಿದೆ.
ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ರಮೇಶ ಜಿಗಜಿಣಗಿ ಇಬ್ಬರೂ ಜನತಾ ಪರಿವಾರ ನಾಯಕರು. ದೇವೇಗೌಡರು ಅಪ್ಪಟ ದೈವ ಭಕ್ತರು. ದೇವೇಗೌಡರು ಮಾತ್ರವಲ್ಲ ಅವರ ಇಡೀ ಕುಟುಂಬ ದೇವರು ಹಾಗೂ ಜೋತಿಷ್ಯ ಹಾಗೂ ದ್ಯೆವಿ ನಂಬಿಕೆಯ ಹೊರತಾಗಿ ಏನನ್ನೂ ಮಾಡುವುದಿಲ್ಲ. ಸಚಿವ ರೇವಣ್ಣ ಅವರಂತೂ ನಿಂಬೆ ಹಣ್ಣುಗಳಿಂದಾಗಿ ಈ ಹೆಸರಿನಿಂದಲೇ ಗುರುತಿಸಿಕೊಳ್ಳುವಂ ತಾಗಿದೆ. ಹೀಗೆ ದೇವೇಗೌಡರ ಕುಟುಂಬ ಟೆಂಪಲ್ ರನ್, ವಿಶೇಷ ಪೂಜೆ ಅಂತೆಲ್ಲ ಸದಾ ಸುದ್ದಿಯಲ್ಲಿರುತ್ತದೆ.
ತಾಯಿಗೆ ಕೊಟ್ಟ ಮಾತು: ಆದರೆ ರಮೇಶ ಜಿಗಜಿಣಗಿ ಇದಕ್ಕೆ ವಿರುದ್ದ ನಡೆಯವರು. ಸ್ವಯಂ ದಲಿತರಾಗಿದ್ದರೂ ದಲಿತರ ಸ್ವಾಭಿಮಾನದ ಪ್ರತೀಕ ಎಂದೇ ಕರೆಯುವ ದೇವಸ್ಥಾನ ಪ್ರವೇಶದ ವಿಷಯದಲ್ಲಿ ಜಿಗಜಿಣಗಿ ಈವರೆಗೆ ದಲಿತರಿಗೆ ಪ್ರವೇಶ ಇಲ್ಲದ ಯಾವ ದೇವಸ್ಥಾನದಲ್ಲೂ ಗುಡಿ ಪ್ರವೇಶ ಮಾಡುವುದಿಲ್ಲ. ಎಷ್ಟೇ ಒತ್ತಾಯ ಮಾಡಿದರೂ ಸರಿ, ರಾಜಕೀಯ ವಿರೋಧಿಗಳು ಈ ವಿಷಯವನ್ನೇ ಪ್ರಚಾರ ಅಸ್ತ್ರ ಮಾಡಿಕೊಂಡರೂ ಜಗ್ಗಿಲ್ಲ. “ನನ್ನ ತಾಯಿ ಕೆಲವರ ಭಾವನೆಗೆ ಧಕ್ಕೆ ಆಗುತ್ತದೆ ಎಂದಾದರೆ ಎಂದೂ ದೇವಸ್ಥಾನ ಪ್ರವೇಶಿಸಬೇಡ’ ಎಂದಿದ್ದಾರೆ ಎನ್ನುತಲ್ಲೇ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ದೇವೇಗೌಡರು ದೇವರನ್ನು ಅರಸಿ ಗುಡಿಗಳನ್ನು ಸುತ್ತಿಯೂ ಇಡೀ ಕುಟುಂಬ ಸೋಲುವಂತಾಗಿದ್ದರೆ, ನಿರ್ದಿಷ್ಟವಾಗಿ ಯಾವ ಗುಡಿಯ ಮೆಟ್ಟಿಲನ್ನೂ ಏರದೇ ರಮೇಶ ಜಿಗಜಿಣಗಿ ಸತತ ಆರು ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ.
ಅಂದಿನ ಜನತಾ ಪರಿವಾರದ ನಾಯಕ ರಾಮಕೃಷ್ಣ ಹೆಗಡೆ ಅವರನ್ನು ವಿರೋಧಿಸುತ್ತಲೇ ರಾಜಕೀಯ ಮಾಡುತ್ತ ಬಂದ ದೇವೇಗೌಡರು, ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದರು. ಇದಕ್ಕಾಗಿ ತಮ್ಮ ಇಬ್ಬರು ಪುತ್ರರನ್ನು ರಾಜಕೀಯಕ್ಕೆ ತಂದು ಕಿರಿಯ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಎರಡು ಬಾರಿ ಸಿಎಂ, ಹಿರಿಯ ಪುತ್ರ ಎಚ್.ಡಿ.ರೇವಣ್ಣ ಅವರನ್ನು ಹಲವು ಬಾರಿ ಶಾಸಕ-ಮಂತ್ರಿ ಮಾಡಿದರು. ಕುಮಾರಸ್ವಾಮಿ ಪತ್ನಿ ಅನಿತಾ ಶಾಸಕಿ ಆಗಿದ್ದರೆ, ರೇವಣ್ಣ ಪತ್ನಿ ಭವಾನಿ ಜಿಪಂ ಸದಸ್ಯೆ-ಸ್ಥಾಯಿ ಸಮಿತಿ ಅಧ್ಯಕ್ಷೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರೇವಣ್ಣ ಪುತ್ರ ಹಾಗೂ ತಮ್ಮ ಮೊಮ್ಮಗ ಪ್ರಜ್ವಲ್ ಗೆದ್ದಿದ್ದರೆ, ಮತ್ತೂಬ್ಬ ಮೊಮ್ಮಗ ನಿಖೀಲ್ ಮಂಡ್ಯ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ.
ಕುಟುಂಬ ರಾಜಕಾರಣಕ್ಕೆ ವಿರೋಧ: ಆದರೆ ರಮೇಶ ಜಿಗ ಜಿಣಗಿ ಅವರು ಕುಟುಂಬ ರಾಜಕೀಯದಿಂದ ದೂರ ಇದ್ದಾರೆ. ತಮ್ಮ ಇಬ್ಬರು ಪುತ್ರರಿದ್ದರೂ ಒಬ್ಬರನ್ನೂ ಅವರು ರಾಜಕೀಯಕ್ಕೆ ಪರಿಚಯಿಸಿಲ್ಲ, ಕನಿಷ್ಟ ಗ್ರಾಪಂ ಸದಸ್ಯರನ್ನಾಗಿ ಮಾಡುವಲ್ಲೂ ಯೋಚಿಸಿಲ್ಲ. ಇಷ್ಟೇ ಅಲ್ಲದೇ ತಮ್ಮ ನಾಲ್ಕು ದಶಕಗಳ ರಾಜಕೀಯದಲ್ಲಿ ಯಾವ ಗಣ್ಯರು, ಪ್ರಮುಖ ಕಾರ್ಯಕರ್ತರು ಕೂಡ ಜಿಗಜಿಣಗಿ ಅವರ ಪುತ್ರರ ಮುಖವನ್ನೇ ನೋಡಿಲ್ಲ. ಅಷ್ಟರ ಮಟ್ಟಿಗೆ ರಾಜಕೀಯ ಪ್ರವೇಶದ ಮಾತಿರಲಿ ಆಡಳಿತದಲ್ಲಿ ಕೂಡ ಎಲ್ಲೂ ತಮ್ಮ ಮಕ್ಕಳನ್ನು ಪರಿಚಯಿಸಲು ಮುಂದಾಗಿಲ್ಲ. ಇನ್ನು ದೇವೇಗೌಡರು ರಾಮಕೃಷ್ಣ ಹೆಗಡೆ ಅವರನ್ನು ವಿರೋಧಿಸುತ್ತಲೇ ರಾಜಕೀಯ ಮಾಡುತ್ತ ಬಂದಿದ್ದರೆ, ಜಿಗಜಿಣಗಿ ಅವರು ಹೆಗಡೆ ಅವರೇ ನನ್ನ ರಾಜಕೀಯ ಗುರು. ಆವರ ಆದರ್ಶದ ಮಾರ್ಗ ದಲ್ಲೇ ನನ್ನ ನಡೆ ಎಂದು ಇಂದಿಗೂ ಬಹಿರಂಗವಾಗಿ ಸ್ಮರಿಸುತ್ತಾರೆ.
* ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.