![Rajiv Kumar’s term ends; new Returning Officer to be appointed soon](https://www.udayavani.com/wp-content/uploads/2025/02/rajiv-415x233.jpg)
![Rajiv Kumar’s term ends; new Returning Officer to be appointed soon](https://www.udayavani.com/wp-content/uploads/2025/02/rajiv-415x233.jpg)
Team Udayavani, Sep 12, 2022, 6:20 AM IST
ಬಹುನಿರೀಕ್ಷಿತ ಜ್ಞಾನವಾಪಿ ಶೃಂಗಾರ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ಮುಂದೆ ನಡೆಸಬಹುದೇ ಬೇಡವೇ ಎಂಬ ಬಗ್ಗೆ ವಾರಾಣಸಿಯ ಜಿಲ್ಲಾ ನ್ಯಾಯಾಲಯ ಸೋಮವಾರ (ಸೆ. 12) ತೀರ್ಪು ಪ್ರಕಟಿಸುವ ಸಾಧ್ಯತೆಗಳು ಇವೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕೂಡ ವಿಚಾರಣೆ ನಡೆದು, ಅದರ ಆದೇಶದ ಮೇಲೆ ಜಿಲ್ಲಾ ನ್ಯಾಯಾಲಯದಲ್ಲಿ ಅದರ ವಿಚಾರಣೆ ನಡೆದಿತ್ತು. ಹಾಗಿದ್ದರೆ ಯಾಕೆ ಈ ವಿಚಾರ ಸುದ್ದಿಯಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.
ಎಲ್ಲಿದೆ ಜ್ಞಾನವಾಪಿ ಮಸೀದಿ ಮತ್ತು ಏನಿದು ವಿವಾದ ಮತ್ತು ಇತಿಹಾಸ?
ವಾರಾಣಸಿಯಲ್ಲಿ ಇರುವ ಕಾಶಿ ವಿಶ್ವನಾಥ ದೇಗುಲ ಸಮೀಪವೇ ಈ ಮಸೀದಿ ಇದೆ. ಸದ್ಯ ನಡೆಯುತ್ತಿರುವ ವಾದಗಳ ಪ್ರಕಾರ ಮಸೀದಿ ಇರುವ ಸ್ಥಳ ಕೂಡ ಮೂಲ ಕಾಶಿ ವಿಶ್ವನಾಥ ದೇಗುಲ ವ್ಯಾಪ್ತಿಗೆ ಸೇರಿದ್ದು ಮತ್ತು ಅಲ್ಲಿ ಇರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂಬ ಬಗ್ಗೆ ಐವರು ಮಹಿಳೆಯರು ಅರ್ಜಿ ಸಲ್ಲಿಸಿರುವುದರಿಂದ ಈ ಪ್ರಕರಣ ಚರ್ಚೆಯಲ್ಲಿ ಇದೆ. ಪುರಾಣ ಕಾಲದಿಂದಲೂ ಇರುವ ಕಾಶಿ ವಿಶ್ವನಾಥ ದೇಗುಲವನ್ನು ಮೊಘಲ್ ಸಾಮ್ರಾಜ್ಯದ ದೊರೆ ಸುಲ್ತಾನ್ ಮೊಹಮ್ಮದ್ ಘೋರಿಯ ಸೇನಾಧಿ ಪತಿ ಕುತುಬುದ್ದೀನ್ ಐಬಕ್ 12ನೇ ಶತ ಮಾನದಲ್ಲಿ ನಾಶ ಮಾಡಿದ್ದ ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ. 13ನೇ ಶತಮಾನದಲ್ಲಿ ದಿಲ್ಲಿ ಸುಲ್ತಾನರ ಮನೆತನದ ರಾಜಕುಮಾರಿ ರಜಿಯತ್- ಉದ್- ದೀನ್ ಎಂಬವಳು ದೇಗುಲ ನಿರ್ಮಾಣಕ್ಕೆ ತಡೆ ಯೊಡ್ಡಿದ್ದಳು ಮತ್ತು ಮಸೀದಿ ನಿರ್ಮಾಣಕ್ಕೆ ಆದೇಶ ನೀಡಿದ್ದಳು.
ಮೊಘಲ್ ಚಕ್ರವರ್ತಿ ಅಕºರ್‌ನ ಕಾಲದಲ್ಲಿ ಇದ್ದ ನಾರಾಯಣ ಭಟ್ಟ ದೇಗುಲವನ್ನು ಪುನರ್ ನಿರ್ಮಿಸಿದ್ದ. 17ನೇ ಶತಮಾನದಲ್ಲಿ ಅಂದರೆ 1669ರಲ್ಲಿ ಔರಂಗಜೇಬ್ ಮತ್ತೆ ದೇಗುಲ ಒಡೆದು ಹಾಕಲು ಆದೇಶಿಸಿದ್ದ ಮತ್ತು ಆ ಅವಶೇಷಗಳ ಮೇಲೆಯೇ ಮಸೀದಿ ನಿರ್ಮಿಸಲು ಆದೇಶ ನೀಡಿದ್ದ. ಆದರೆ ಸದ್ಯ ನಿರ್ಮಾಣವಾಗಿರುವ ಮಸೀದಿಯ ಹೊರಭಾಗದಲ್ಲಿಯೇ ಶಿವದೇವರ ವಾಹನವಾಗಿರುವ ನಂದಿಯ ವಿಗ್ರಹವನ್ನು ದೇಗುಲಕ್ಕೆ ಮುಖ ಮಾಡಿ ಕೆತ್ತಲಾಗಿದೆ.
1780ರಲ್ಲಿ ಪುನರ್ ನಿರ್ಮಾಣ
ಕೆಲವೊಂದು ಮೌಖಿಕವಾದಗಳ ಪ್ರಕಾರ ಮಸೀದಿ ನಿರ್ಮಾಣಗೊಂಡಿದ್ದರೂ, ಅರ್ಚಕರಿಗೆ ಒಳಭಾಗದಲ್ಲಿ ಇದ್ದು, ಧಾರ್ಮಿಕ ಕ್ರಿಯಾಭಾಗಗಳನ್ನು ನಡೆಸಲು ಅವಕಾಶ ನೀಡಲಾಗಿತ್ತು ಎನ್ನಲಾಗುತ್ತಿದೆ. ಇಂದೋರ್‌ನಲ್ಲಿ ಆಳ್ವಿಕೆ ನಡೆಸುತ್ತಿದ್ದ ಮರಾಠಿ ಆಡಳಿತಗಾರ್ತಿ ಅಹಲ್ಯಾಬಾಯಿ ಹೋಳ್ಕರ್ 1780ರಲ್ಲಿ ಈಗ ಇರುವ ಕಾಶಿ ವಿಶ್ವನಾಥ ದೇಗುಲ ನಿರ್ಮಿಸಿದ್ದರು.
1984ರಲ್ಲಿ ಮೊದಲ ಬೇಡಿಕೆ
ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಸೀದಿಯ ಸ್ಥಳವನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂಬ ಒತ್ತಾಯ ಕೇಳಿ ಬಂದದ್ದು 1984ರಲ್ಲಿ. 558 ಧಾರ್ಮಿಕ ಮುಖಂಡರು ಮತ್ತು ಸ್ವಾಮೀಜಿಗಳು ಭಾಗವಹಿಸಿದ್ದ ಹೊಸದಿಲ್ಲಿಯಲ್ಲಿ ನಡೆದ ಮೊದಲ ಧರ್ಮ ಸಂಸತ್‌ನಲ್ಲಿ ಅಯೋಧ್ಯೆ (ಈಗ ವಿವಾದ ಮುಕ್ತಾಯವಾಗಿದೆ), ಮಥುರಾ ಮತ್ತು ವಾರಾಣಸಿಯನ್ನು ಬಿಟ್ಟುಕೊಡುವಂತೆ ಆಗ್ರಹಿಸಲಾಗಿತ್ತು.
ಮೊದಲ ಬಾರಿಗೆ ಕೋರ್ಟ್‌ಗೆ ಅರ್ಜಿ
ಜ್ಞಾನವಾಪಿ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾದದ್ದು 1991ರಲ್ಲಿ. ಅದೇ ಸಂದರ್ಭದಲ್ಲಿ ಅಧಿಕಾರದಲ್ಲಿ ಇದ್ದ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರಕಾರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991ನ್ನು ಸಂಸತ್‌ನಲ್ಲಿ ಅಂಗೀಕರಿಸಿತ್ತು. ಅದರ ಪ್ರಕಾರ 1947ರ ಆ. 15ರ ಬಳಿಕ ದೇಶದಲ್ಲಿ ಇರುವ ಯಾವುದೇ ಧಾರ್ಮಿಕ ಸ್ಥಳಗಳು ಹೊಂದಿರುವ ವಿಚಾರ ಮತ್ತು ವಿವಾದದ ಸ್ಥಿತಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಬಗ್ಗೆ ಪ್ರಧಾನವಾಗಿ ಉಲ್ಲೇಖೀಸಲಾಗಿದೆ. ಈಗ ಈ ಕಾಯ್ದೆಯ ಔಚಿತ್ಯ ಪ್ರಶ್ನೆ ಮಾಡಿ ಮೊಕದ್ದಮೆ ಹೂಡಲಾಗಿದೆ.
ಇನ್ನು ಜ್ಞಾನವಾಪಿ ಮೊಕದ್ದಮೆ ವಿಚಾರಕ್ಕೆ ಬಂದರೆ, ಅರ್ಚಕರೊಬ್ಬರು ಮಸೀದಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ಅವಕಾಶ ಕೊಡಬೇಕು ಎಂದು ವಾರಾಣಸಿಯ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೂಲ ಕಾಶಿ ವಿಶ್ವನಾಥ ದೇಗುಲದ ಅವಶೇಷದ ಮೇಲೆಯೇ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಆ ಜಮೀನಿನ ಮಾಲಕತ್ವವನ್ನು ಹಿಂದೂಗಳಿಗೆ ಕೊಡಿಸಬೇಕು ಎಂದೂ ಪ್ರಾರ್ಥಿಸಲಾಗಿತ್ತು. ಆದರೆ, ಮಸೀದಿಯ ಆಡಳಿತ ಮಂಡಳಿ ಅದಕ್ಕೆ ಆಕ್ಷೇಪ ಮಾಡಿ, ಅರ್ಚಕರ ಬೇಡಿಕೆಯೇ 1991ರ ಕಾಯ್ದೆಯ ನಿಯಮಗಳನ್ನು ಉಲ್ಲಂ ಸುತ್ತದೆ ಎಂದು ಪ್ರತಿ ಅರ್ಜಿ ಸಲ್ಲಿಸಿತ್ತು. 1998ರಲ್ಲಿ ವಿಚಾರಣೆ ನಡೆದು, ಅರ್ಚಕರ ಅರ್ಜಿ ತಿರಸ್ಕೃತಗೊಂಡಿತ್ತು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ವೇಳೆ ಒಟ್ಟಾರೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತ್ತು. 2019ರಲ್ಲಿ ಅಯೋಧ್ಯೆ ವಿವಾದ ಇತ್ಯರ್ಥವಾಗುವವರೆಗೆ ಸುಪ್ತವಾಗಿಯೇ ಇತ್ತು.
ಮತ್ತೆ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ
ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯೆ ವಿವಾದ ಇತ್ಯರ್ಥಗೊಂಡ ಬಳಿಕ 2019ರ ಡಿಸೆಂಬರ್‌ನಲ್ಲಿ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಾಣಸಿ ಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಾರಿ ಕಾಶಿ ವಿಶ್ವನಾಥನ ಅತ್ಯಂತ ನಿಕಟವರ್ತಿ ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ ಎಂಬ ಹೆಸರಿನಲ್ಲಿ ಅರ್ಜಿ ಸಲ್ಲಿಕೆ ಮಾಡಿ, ಭಾರತೀಯ ಪುರಾತತ್ವ ಇಲಾಖೆಯ ಮೂಲಕ ಜ್ಞಾನವಾಪಿ ಮಸೀದಿಯ ಮೂಲ ಪತ್ತೆ ಮಾಡುವಂತೆ ಅರಿಕೆ ಮಾಡಿಕೊಳ್ಳಲಾಗಿತ್ತು. 2020ರಲ್ಲಿ ಸಿವಿಲ್ ಕೋರ್ಟ್‌ಗೆ 1991ರಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದವರೇ ಮರು ಅರಿಕೆ ಮಾಡಿಕೊಂಡು, ವಜಾಗೊಳಿಸಲಾಗಿದ್ದ ಅರ್ಜಿಯನ್ನು ಮತ್ತೆ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಧೀಶರಿಗೆ ಅರಿಕೆ ಮಾಡಿಕೊಂಡಿದ್ದರು. ಅದನ್ನು ಪುರಸ್ಕರಿಸಿದ್ದ ಕೋರ್ಟ್ ಸಮೀಕ್ಷೆಗೆ ಆದೇಶ ನೀಡಿತ್ತು. ಮಸೀದಿಯ ಆಡಳಿತ ಮಂಡಳಿ ಅಂಜುಮಾನ್ ಇಂತೆಜಾಮಿಯಾ ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. 2020ರ ಫೆಬ್ರ ವರಿಯಲ್ಲಿ ಸಿವಿಲ್ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು ಮತ್ತು 1991ರ ಕಾಯ್ದೆಯ ಅನ್ವಯ ಯಥಾಸ್ಥಿತಿ ಕಾಪಾಡಬೇಕು ಎಂದು ಆದೇಶ ನೀಡಿತ್ತು.
2 ವರ್ಷಗಳ ಅವಧಿಯಲ್ಲಿ ನಡೆದದ್ದು …
2021 ಮಾ. 12
1991ರ ಕಾಯ್ದೆಯ ಸಿಂಧುತ್ವ ಪ್ರಶ್ನೆ ಮಾಡಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ಮುಖ್ಯ ನ್ಯಾ| ಎಸ್.ಎ.ಬೋಬೆx ನೇತೃತ್ವದ ನ್ಯಾಯಪೀಠ. 2020ರ ಅಕ್ಟೋಬರ್‌ನಲ್ಲಿ ಕೂಡ ಇದೇ ಮಾದರಿ ಅರ್ಜಿ ಸಲ್ಲಿಕೆಯಾಗಿತ್ತು.
2021 ಏ. 9
ವಾರಾಣಸಿಯ ಹಿರಿಯ ಶ್ರೇಣಿ ವಿಭಾಗದ ತ್ವರಿತ ಗತಿಯ ನ್ಯಾಯಾಲಯ ಮಸೀದಿಯ ಮೂಲ ತಿಳಿಯಲು ಎಎಸ್‌ಐಗೆ ಆದೇಶ ನೀಡಿತ್ತು.
2021 ಆ.18
ವಿಶ್ವ ವೇದ ಸಂಸ್ಥಾನ ಸಂಘಕ್ಕೆ ಸೇರಿದ ಐವರು ಮಹಿಳೆಯರಿಂದ ಜ್ಞಾನವಾಪಿ ಮಸೀದಿ ವ್ಯಾಪ್ತಿಯಲ್ಲಿ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿಯನ್ನು ಪೂಜಿಸಲು ಅವಕಾಶ ನೀಡಬೇಕು ಎಂದು ವಾರಾಣಸಿ ಕೋರ್ಟ್‌ಗೆ ಅರ್ಜಿ.
2021 ಸೆ.9
ಅಲಹಾಬಾದ್ ಹೈಕೋರ್ಟ್‌ನಿಂದ ತ್ವರಿತಗತಿ ನ್ಯಾಯಾಲಯಕ್ಕೆ ತರಾಟೆ. ಸಮೀಕ್ಷೆಗೆ ತಡೆಯಾಜ್ಞೆ.
2022 ಏ. 8
ಸಿವಿಲ್ ನ್ಯಾಯಾಲಯದಿಂದ ಅಡ್ವೊಕೇಟ್ ಕಮಿಷನರ್ ಅನ್ನು ನೇಮಿಸಿ ಜ್ಞಾನವಾಪಿ ಮಸೀದಿಯ ವೀಡಿಯೋ ಚಿತ್ರೀಕರಣ ನಡೆಸಲು ಆದೇಶ. ಮಸೀದಿ ಆಡಳಿತ ಮಂಡಳಿಯಿಂದ ಅಲಹಾಬಾದ್ ಹೈಕೋರ್ಟ್ ಮೇಲ್ಮನವಿ ಮತ್ತು ಎ. 21ರಂದು ಮೇಲ್ಮನವಿ ವಜಾ.
2022 ಮೇ 6 ಸಮೀಕ್ಷೆ ಆರಂಭ
2022 ಮೇ 7
ವಾರಾಣಸಿ ಸಿವಿಲ್ ಕೋರ್ಟ್‌ಗೆ ಮಸೀದಿ ಆಡಳಿತ ಮಂಡಳಿಯಿಂದ ಅಡ್ವೊಕೇಟ್ ಕಮಿಷನರ್ ವಜಾಕ್ಕೆ ಒತ್ತಾಯ
2022 ಮೇ 12
ಕೋರ್ಟ್‌ನಿಂದ ಅರ್ಜಿ ತಿರಸ್ಕಾರ. ಸಮೀಕ್ಷೆಗೆ ಅಡ್ಡಿ ಪಡಿಸಿದ್ದಕ್ಕೆ ಎಫ್ಐಆರ್ ದಾಖಲಿಸಲು ಆದೇಶ.
2022 ಮೇ 13
ಮಸೀದಿ ಆಡಳಿತ ಮಂಡಳಿಯಿಂದ ವೀಡಿಯೋಗ್ರಫಿ ಪ್ರಶ್ನಿಸಿ ಮೇಲ್ಮನವಿ.
2022 ಮೇ 17
ಮಸೀದಿಯ ವ್ಯಾಪ್ತಿಯಲ್ಲಿ ರುವ “ವಝು ಖಾನಾ’ ವನ್ನು ಸೀಲ್ ಮಾಡಲು ಸುಪ್ರೀಂ ಕೋರ್ಟ್ ಆದೇಶ ಮತ್ತು ನಮಾಜ್‌ಗೆ ಅವಕಾಶ. ಅದೇ ದಿನ ವಾರಾಣಸಿ ಸಿವಿಲ್ ಕೋರ್ಟ್‌ನಿಂದ ಅಡ್ವೊಕೇಟ್ ಕಮಿಷನರ್ ವಜಾಗೊಳಿಸಿ ಆದೇಶ.
2022 ಮೇ 19
ಸುಪ್ರೀಂ ಕೋರ್ಟ್‌ನಿಂದ ವಿಚಾರಣೆ ಒಂದು ದಿನ ಮುಂದೂಡಿಕೆ. ಅದೇ ದಿನ ವಾರಾಣಸಿ ಕೋರ್ಟ್‌ಗೆ ವೀಡಿಯೋಗ್ರಫಿ ನಡೆಸಿದ ಬಗ್ಗೆ ವರದಿ ಸಲ್ಲಿಕೆ.
2022 ಮೇ 20
ಸುಪ್ರೀಂ ಕೋರ್ಟ್‌ನಿಂದ ಜಿಲ್ಲಾ ಕೋರ್ಟ್‌ಗೆ ಪ್ರಕರಣ ವರ್ಗಾವಣೆ.
2022 ಮೇ 23
ಜಿಲ್ಲಾ ಕೋರ್ಟ್‌ನಿಂದ ವಿಚಾರಣೆ ಆರಂಭ.
2022 ಮೇ 24,25
ಹಿಂದೂಗಳ ಅರ್ಜಿ ಪರಿಗಣಿ ಸಲು ಕೋರ್ಟ್ ಒಪ್ಪಿಗೆ.
2022 ಜು.21
ಸುಪ್ರೀಂ ಕೋರ್ಟ್‌ನಿಂದ ಜಿಲ್ಲಾ ಕೋರ್ಟ್ ಆದೇಶದ ಬಳಿಕ ಅಕ್ಟೋಬರ್‌ನಲ್ಲಿ ಪ್ರಕರಣ ಕೈಗೆತ್ತಿಕೊಳ್ಳಲು ಸಮ್ಮತಿ.
2022 ಆ.24
ಹಿಂದೂಗಳು ಮತ್ತು ಮುಸ್ಲಿಂ ಬಣಗಳ ವಾದ ಆಲಿಸಿದ ಬಳಿಕ ಸೆ. 12ರ ವರೆಗೆ ತೀರ್ಪು ಕಾಯ್ದಿರಿಸಲು ಜಿಲ್ಲಾ ಕೋರ್ಟ್ ತೀರ್ಮಾನ.
-ಸದಾಶಿವ ಕೆ.
CEC: ರಾಜೀವ್ ಕುಮಾರ್ ಅವಧಿ ಅಂತ್ಯ; ಶೀಘ್ರವೇ ನೂತನ ಚುನಾವಣಾಧಿಕಾರಿ ನೇಮಕ
ICC ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಹಣವೆಷ್ಟು ಗೊತ್ತಾ? ಇಲ್ಲಿದೆ ಡಿಟೈಲ್ಸ್
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ವೈಟ್‌ವಾಶ್ ಶ್ರೀಲಂಕಾ 2-0 ಸರಣಿ ಜಯಭೇರಿ
Kaup: ಕುಂಕುಮ ವರ್ಣದ ಇಳಕಲ್ ಶಿಲೆಯಲ್ಲೇ ಕಟ್ಟಿದ ದೇಗುಲ!
Champions Trophy : ಭಾರತ ಕ್ರಿಕೆಟ್ ತಂಡದೊಂದಿಗೆ ಕುಟುಂಬ ಸದಸ್ಯರ ಪ್ರಯಾಣವಿಲ್ಲ
You seem to have an Ad Blocker on.
To continue reading, please turn it off or whitelist Udayavani.