ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸಾಲದು
Team Udayavani, Apr 2, 2023, 6:30 AM IST
ಆನೆ ಬಗೆಗಿನ ನಾಲ್ಕು ಕಥೆಗಳು ನನಗೆ ಬಾಲ್ಯದಿಂದಲೂ ಇಷ್ಟವಾದವು. ನೀವೂ ಇದನ್ನು ಕೇಳಿರುತ್ತೀರಿ ಅಜ್ಜ- ಅಜ್ಜಿಯಿಂದಲೋ, ಅಮ್ಮನಿಂದಲೋ ಅಥವಾ ಶಾಲೆಯ ಮಾಸ್ತರರಿಂದಲೋ. ಅದೇ ಆನೆ ಮತ್ತು ಸರಪಳಿ, ಆನೆ ಮತ್ತು ಇರುವೆ ಇತ್ಯಾದಿ. ಇಂದಿನ ಸ್ಥಿತಿಗೆ ಆ ಎರಡಕ್ಕಿಂತ ಈ ಎರಡು ಕಥೆಗಳು ಹೆಚ್ಚು ಅರ್ಥಪೂರ್ಣವೆನಿಸುತ್ತವೆ.
ಒಂದು: ಆನೆಯೊಂದು ನಿತ್ಯವೂ ನದಿಯಲ್ಲಿ ಜಲ ಕ್ರೀಡೆಯ ಮಾಡಿ ವಾಪಸು ತನ್ನ ನಿವಾಸಕ್ಕೆ ಹೋಗುತ್ತಿತ್ತು. ಹೀಗೆ ಸಾಗುವ ಹಾದಿಯಲ್ಲಿ ಒಬ್ಬ ಟೈಲರ್ ಇದ್ದ. ದಿನವೂ ಏನಾದರೂ ತಿಂಡಿ ಕೊಡುತ್ತಿದ್ದ. ಆನೆಗೂ ಅವನಿಗೂ ಗೆಳೆತನ ಉಂಟಾ ಯಿತು. ಒಂದು ದಿನ ಆತ ಕೆಟ್ಟ ಮನಸ್ಥಿತಿಯಲ್ಲಿದ್ದ. ಆನೆ ಬಂದು ಘಿಳಿಟ್ಟದ್ದನ್ನು (ಆಹಾರ ಕೊಡಲಿಲ್ಲವೆಂದು) ಕಂಡು ಸಿಟ್ಟಿಗೆದ್ದು, ಸೂಜಿಯಿಂದ ಚುಚ್ಚಿದ. ಆನೆ ನೋವಿನಿಂದ ಓಡಿ ಹೋಯಿತು. ಮಾರನೆಯ ದಿನ ನೇರವಾಗಿ ನದಿಗೆ ಹೋಗಿ ವಾಪಸು ಬರುವಾಗ ಸೊಂಡಿಲಿನಲ್ಲಿ ಕೆಸರಿನ ನೀರು ತುಂಬಿಕೊಂಡು ಬಂದು ಟೈಲರ್ ಮೇಲೆ ಸುರಿಯಿತು. ಬಟ್ಟೆಯೆಲ್ಲ ಕೆಸರಾಯಿತು. ಆಗ ಅವನಿಗೆ ತನ್ನ ತಪ್ಪಿನ ಅರಿವಾಯಿತು.
ಎರಡು: ಇದು ಮತ್ತೊಂದು ಕಥೆ. ಆನೆಗಳ ಹಿಂಡೊಂದು ಯಾವಾಗಲೂ ನದಿಗೆ ನೀರು ಕುಡಿಯಲೆಂದು ಹೋಗುತ್ತಿತ್ತು. ಆ ಹಾದಿಯಲ್ಲಿ ಇಲಿಗಳ ಬಿಲವೂ ಇತ್ತು. ಆನೆಗಳ ಕಾಲಿಗೆ ಸಿಕ್ಕು ಎಷ್ಟೋ ಇಲಿಗಳು ಸತ್ತವು. ಇದನ್ನು ಕಂಡ ಇಲಿಗಳು ಒಮ್ಮೆ ಆನೆಗಳ ಬಳಿಗೆ ಹೋಗಿ, ತಮ್ಮ ಕಷ್ಟ ಹಾಗೂ ನಷ್ಟವನ್ನು ಹೇಳಿಕೊಂಡವು.
“ನಿಮ್ಮ ಕಷ್ಟ ಕಾಲದಲ್ಲಿ ನಾವೂ ಸಹಾಯ ಮಾಡುತ್ತೇವೆ’ ಎಂದು ಹೇಳಿದವು. ಆ ಕ್ಷಣದಲ್ಲಿ ಇವು ಏನು ಸಹಾಯ ಮಾಡಬಲ್ಲವು ಎಂದೆನಿಸಿದರೂ ಆನೆಗಳು ಆಯಿತು ಎಂದು ಒಪ್ಪಿ ದಾರಿ ಬದಲಿಸಿದವು. ಒಂದು ದಿನ ಬೇಟೆಗಾರರು ಆನೆಗಳನ್ನು ಹಿಡಿಯಲು ಬಂದರು. ಒಂದು ಆನೆ ಮರಿಗೆ ಬಲೆ ಹಾಕಿ ಹಿಡಿದುಬಿಟ್ಟರು. ಹಿಂಡಿನಿಂದ ತಪ್ಪಿಸಿಕೊಂಡ ಮರಿಯನ್ನು ಹುಡುಕಿಕೊಂಡು ಬಂದ ಆನೆಗಳಿಗೆ ಸಮಸ್ಯೆ ಅರಿವಾಯಿತು. ಏನೂ ತೋಚಲಿಲ್ಲ. ಆಗ ಜೋರಾಗಿ ಳಿಟ್ಟವು. ಇದನ್ನು ಕೇಳಿಸಿಕೊಂಡ ಇಲಿಗಳು ಓಡೋಡಿ ಬಂದು ಬಲೆಯನ್ನು ಕಡಿದು ಆನೆ ಮರಿಯನ್ನು ಬಂಧ ಮುಕ್ತಗೊಳಿಸಿದವು.
ಸತ್ಯಕಥೆ
ಡಿ. ಟಿ. ಜಯಕುಮಾರ್ ಮೈಸೂರು ಭಾಗದ ಪ್ರಭಾವಿ ಜೆಡಿಎಸ್ ಸಚಿವರು. ನಂಜನಗೂಡು ಕ್ಷೇತ್ರದಿಂದ ಆಯ್ಕೆ ಯಾಗಿದ್ದವರು. 2004ರಲ್ಲಿ ಜೆಡಿಎಸ್-ಕಾಂಗ್ರೆಸ್, ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದವರು. ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಆಗ ಒಮ್ಮೆ ಕೆಡಿಪಿ ಸಭೆಯಲ್ಲಿ ಆನೆ ದಾಳಿ ಮತ್ತು ಆನೆಗಳಿಂದ ಆಗುತ್ತಿರುವ ಬಾಳೆ, ಕಬ್ಬು ಇತ್ಯಾದಿ ಬೆಳೆ ನಾಶದ ಬಗ್ಗೆಯೂ ಚರ್ಚೆಯಾಯಿತು. ಆಗ ಸಚಿವರು ದಿಢೀರನೆ ಅಧಿಕಾರಿಗಳಿಗೆ, “ಇನ್ನು ಮುಂದೆ ಕಾಡಿನಲ್ಲೇ ಕಬ್ಬು, ಬಾಳೆ, ರಾಗಿ ಎಲ್ಲವನ್ನೂ ಬೆಳೆಯಿರಿ. ಸಮಸ್ಯೆಯೇ ಇರದು’ ಎಂದರು. ಸಚಿವರ ಈ ಉತ್ತರದಿಂದ ಕೆಲವು ಅಧಿಕಾರಿಗಳು ಅವಾಸ್ತವಿಕ ಎನ್ನುವಂತೆ ಪಿಸಕ್ಕನೆ ನಕ್ಕರು.
ಈಗಿನ ಕಥೆ
ದುರಂತಮಯವಾದುದು. ಎರಡೂ ಭಾಗಗಳಿಂದ. ಆನೆ- ನಮ್ಮ ಸಂಘರ್ಷದಲ್ಲಿ ಎರಡೂ ಪಾಳಯದಲ್ಲಿ ಜೀವ ನಷ್ಟಗ ಳುಂಟಾಗುತ್ತಿವೆ. ಯಾರ ಜೀವದ ಮೌಲ್ಯ ಹೆಚ್ಚು ಎಂದು ತಕ್ಕಡಿ ಹಿಡಿಯುವುದು ಸರಿಯೂ ಅಲ್ಲ, ಸಾಧುವೂ ಅಲ್ಲ. ಪ್ರತೀ ಜೀವಕ್ಕೂ ಮೌಲ್ಯವಿದೆ.
ಇತ್ತೀಚೆಗೆ ಅಂದರೆ ಎರಡು ತಿಂಗಳ ಹಿಂದೆಯಷ್ಟೇ ಸುಳ್ಯದ ಬಳಿ ಬೆಳ್ಳಂಬೆಳಗ್ಗೆ ಯುವತಿ ಹಾಗೂ ಮಧ್ಯ ವಯಸ್ಕ ರೊಬ್ಬರನ್ನು ಆನೆಯೊಂದು ತುಳಿದು ಕೊಂದ ಘಟನೆ ಮಾಸಿ ಹೋಗಿಲ್ಲ. ಅಂಥ ಘಟನೆ ಹಾಸನ, ಮೈಸೂರು, ಕೊಡಗು ಸಹಿತ ಹಲವೆಡೆ ಆಗಾಗ್ಗೆ ಸಂಭವಿಸುತ್ತಲೇ ಇರುತ್ತದೆ. ಸರಕಾರಿ ಅಂಕಿಅಂಶಗಳ ಪ್ರಕಾರ ಬರೀ ಕರ್ನಾಟಕದಲ್ಲೇ 2022-23ರ ಹತ್ತು ತಿಂಗಳಲ್ಲಿ 41 ಮಂದಿ ಆನೆ-ಮನುಷ್ಯ ಸಂಘರ್ಷದಲ್ಲಿ ಸತ್ತಿದ್ದಾರೆ. ಸರಕಾರಕ್ಕೆ ಎರಡೂ ಪಾಳಯಕ್ಕೆ ಸಮಾಧಾನ ಮಾಡುವ ಹೊಣೆ. ಸಂತ್ರಸ್ತ ಕುಟುಂಬಕ್ಕೆ ಕೊಡುವ ಪರಿಹಾ ರವನ್ನೂ 15 ರಿಂದ 30 ಲಕ್ಷ ರೂ. ಗೆ ಏರಿಸಲಾಗಿದೆ.
ಕೇಂದ್ರ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಇಲಾಖೆಯ ಮಾಹಿತಿ ಪ್ರಕಾರ ಇತ್ತೀಚೆಗಿನ ಮೂರು ವರ್ಷಗಳಲ್ಲಿ (2019-22)ಅನುಕ್ರಮವಾಗಿ 585, 461, 535. ಆನೆಗಳ ಜನಸಂಖ್ಯೆ ಇರುವ ಪ್ರಮುಖ 24 ರಾಜ್ಯಗಳಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಸಹಿತ 16 ರಲ್ಲಿ ಅಂಕಿ ಅಂಶಗಳನ್ನು ಗಮನಿಸಿದಾಗ, ಕರ್ನಾಟಕದಲ್ಲಿ 29,23,27 ಎಂದಿದೆ. ಅತೀ ಹೆಚ್ಚು ಒಡಿಶಾದಲ್ಲಿ ಒಟ್ಟು 322, ಝಾರ್ಖಂಡ್ 291, ಪಶ್ಚಿಮ ಬಂಗಾಲ 230, ಅಸ್ಸಾಂನಲ್ಲಿ 229 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡು, ಕೇರಳದಲ್ಲೂ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ.
ಹಾಗೆಯೇ ರೈಲಿಗೆ ಸಿಕ್ಕು, ವಿದ್ಯುದಾಘಾತಕ್ಕೆ ಸಿಲುಕಿ ಸತ್ತ ಆನೆಗಳ ಸಂಖ್ಯೆ ಈ ಮೂರು ವರ್ಷಗಳಲ್ಲಿ 239. ಕರ್ನಾಟಕ ದಲ್ಲೂ 25 ಆನೆಗಳು ಹೀಗೆ ದುರಂತಕ್ಕೀಡಾಗಿವೆ. ಈ ಸಂಖ್ಯೆ ಅಸ್ಸಾಂ, ಪಶ್ಚಿಮ ಬಂಗಾಲ ಹಾಗೂ ತಮಿಳುನಾಡಿನಲ್ಲಿ
ಕೊಂಚ ಹೆಚ್ಚಿದೆ.
ಭವಿಷ್ಯದ ಕಥೆ
ಇದುವರೆಗಿನ ಕಥೆಗಳೆಲ್ಲ ಪೂರ್ಣಗೊಂಡಿವೆ. ಆನೆ ಮತ್ತು ಮನುಷ್ಯ ಸಂಘರ್ಷದ ಕಥೆಗೆ ಯಾರು ಪೂರ್ಣವಿರಾಮ ಹಾಕಬೇಕು ಎಂಬುದೀಗ ಭವಿಷ್ಯದ ಪ್ರಶ್ನೆ.
ಸರಕಾರಿ ಅಂಕಿಅಂಶಗಳ ಪ್ರಕಾರ ಪ್ರಸ್ತುತ 24 ರಾಜ್ಯಗಳಲ್ಲಿ ಒಟ್ಟು 29, 964 ಆನೆಗಳಿವೆ. ಅಂದರೆ ಹತ್ತಿರಹತ್ತಿರ 30 ಸಾವಿರ. ಕರ್ನಾಟಕದಲ್ಲೇ ಅತೀ ಹೆಚ್ಚು ಅಂದರೆ 6,049 ಆನೆಗಳಿವೆ. ಅನಂತರದ ಸ್ಥಾನ ಅಸ್ಸಾಂಗೆ (5,719). ಮೂರನೇ ಸ್ಥಾನ ಕೇರಳಕ್ಕೆ (5,706). ನಾಲ್ಕು ವಲಯಗಳಲ್ಲಿ ದಕ್ಷಿಣ ವಲಯ (ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಅಂಡಮಾನ್ ನಿಕೋಬಾರ್, ತಮಿಳುನಾಡು) ದಲ್ಲೇ ಅತಿ ಹೆಚ್ಚು 14, 612 ಆನೆಗಳಿವೆ. ಇದರಲ್ಲೂ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲೇ 14, 516 ಆನೆಗಳಿವೆ.
ಅದಕ್ಕಾಗಿ ಇಬ್ಬರೂ ಉಳಿಯುವುದು ಹೇಗೆ ಎಂದು ಪರಿಹಾರ ಹುಡುಕಬೇಕಾದ ಹೊತ್ತಿದು. ಇದುವರೆಗೆ ಸರಕಾ ರಗಳು, ಅರಣ್ಯ ಇಲಾಖೆಗಳು ಮಾಡಿರುವುದು ಪ್ರವಾಹವನ್ನು ತಡೆಯುವ ವಿಫಲ ಯತ್ನವನ್ನೇ. ಕೆಲವು ದಶಕಗಳ ಹಿಂದೆ ಸ್ವಾಭಾವಿಕ ಅರಣ್ಯ ನಮ್ಮ ಅಗತ್ಯಗಳಿಗೆ ಬದಲಾಗುತ್ತಾ ಹಾಗೂ ವಿವಿಧ ರಾಷ್ಟ್ರಗಳ ಫಂಡ್‌ಗಾಗಿ ಆ ಕೊರತೆ ತುಂಬಿಸಿಕೊಳ್ಳಲು ಸಾಮಾಜಿಕ ಅರಣ್ಯ ಸೃಷ್ಟಿಯಾಯಿತು. ದಿನೇದಿನೆ ಆನೆಗಳ ಪ್ರದೇಶವೂ ಕಡಿಮೆಯಾಯಿತು.
ಇದರ ಪರಿಣಾಮವೆಂಬಂತೆ ಆನೆ ದಾಳಿ ಹೆಚ್ಚಿದಂತೆಲ್ಲ ಅದನ್ನ ತಡೆಯಲೆಂದೇ ಹೆಚ್ಚು ಯೋಚಿಸಿದೆವು. ಕಂದಕಗಳನ್ನು ಸೃಷ್ಟಿಸಲಾಯಿತು, ವಿದ್ಯುತ್ ಬೇಲಿ ಹಾಕಲಾಯಿತು..ಹಲವು ತಂತ್ರಗಳನ್ನು ಹೆಣೆದರೂ ಆನೆಗಳು ನುಗ್ಗುವುದು ನಿಲ್ಲಿಸಲಿಲ್ಲ. ಈಗ ಕರ್ನಾಟಕವೂ ಸಹಿತ ಹಲವೆಡೆ ಅವುಗಳ ಸ್ಥಳಾಂತರಕ್ಕೆ ಯೋಚಿಸುತ್ತಿದ್ದೇವೆ. 14 ಸಾವಿರ ಆನೆಗಳ ಸ್ಥಳಾಂತರ ಕಾರ್ಯ ಸಾಧುವೇ?
ಆನೆ ಮತ್ತು ಮನುಷ್ಯ ಸಂಘರ್ಷಕ್ಕೆ ಪರಿಹಾರ ಹುಡುಕುವ ಸಮಿತಿಯು ಆನೆ ದಾಳಿಗೆ ತುತ್ತಾದ ಹಳ್ಳಿಗಳ ಸಮೀಕ್ಷೆ ನಡೆಸಿತ್ತು. ಆಗ ಹಳ್ಳಿಗನೊಬ್ಬ ಅನುಭವದ ಮಾತು ಹೇಳಿದ್ದ. “ಸ್ವಾಮಿ ಯೋರೇ, ಏನೇ ಮಾಡಿದ್ರೂ ಒಂದೇ ವರ್ಷ. ಆನೆ ಭಲೇ ಬುದ್ಧಿವಾನ್. ಕಂದಕ ಮಾಡಿದರೆ ಮರ ಬೀಳಿಸಿ ಹತ್ತಿ ಮೇಲೆ ಬರುತ್ತೆ. ಇವ್ಯಾವುದೂ ಪರ್ಮನೆಂಟ್ ಅಲ್ಲ’. ಮತ್ತೆ ಯಾವುದು ಪರ್ಮನೆಂಟ್? ಎಂದು ಕೇಳಿದ್ದಕ್ಕೆ, “ನಾವೇ ಬಿಟ್ಟು ಹೋಗ ಬೇಕು’ ಎಂದಿದ್ದ. ಅದು ಸಾಧ್ಯವೇ ಎಂದಿದ್ದಕ್ಕೆ “ನಾವು ಹೋಗೋದಾದರೂ ಎಲ್ಲಿಗೆ’ ಎಂಬ ಪ್ರಶ್ನೆಯನ್ನೂ ಆತನೇ ಕೇಳಿದ್ದ. ಎಂಥ ಇಕ್ಕಟ್ಟಿನ ಸ್ಥಿತಿ.
ಹಲಸು, ಬಿದಿರು ಇತ್ಯಾದಿ ಇದ್ದ ನಮ್ಮ ಅರಣ್ಯಗಳಿಗೆ ಪರ್ಯಾಯವಾಗಿ ನೀಲಗಿರಿ, ಅಕೇಶಿಯಾ ನೆಟ್ಟು ಬೆನ್ನು ತಟ್ಟಿ ಕೊಳ್ಳುವ ಮೊದಲು ಯೋಚಿಸಿದ್ದರೆ ಈಗ ಮಾಜಿ ಸಚಿವ ಡಿ.ಟಿ. ಜಯಕುಮಾರ್ ಅವರ ಅಂದಿನ ಮಾತು ಪರಿಹಾರ ಎನಿಸು ತ್ತಿರಲಿಲ್ಲ. ನಮ್ಮ ಹೆಜ್ಜೆಗಳನ್ನು ಮರು ವಿಮರ್ಶಿಸಬೇಕಾದ ಹೊತ್ತಿನಲ್ಲಿ ನನಗೆ ಇಲಿ ಮತ್ತು ಆನೆಗಳ ಕಥೆಯೇ ಹೆಚ್ಚು ಸೂಕ್ತ ಎನಿಸುತ್ತದೆ.ಇದು ಬರೀ ಆನೆ ಮಾತು, ಉಳಿದವುಗಳದ್ದಲ್ಲ. ಉಳಿದವದ್ದು ಬೇರೆಯೇ ಇದೆ. ಆದರೂ ಈ ಅಧ್ಯಾಯಕ್ಕೆ ಇನ್ನೆಷ್ಟು ಪುಟಗಳಿವೆಯೋ ಖಂಡಿತ ಗೊತ್ತಿಲ್ಲ.
-ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.