Hamas – Israel: ಸದ್ದಿಲ್ಲದೆ ಮುರಿದ ಸಂಧಿಯ ಅವಕಾಶ
Team Udayavani, Oct 12, 2023, 11:10 AM IST
ಏನಿದು ಶಾಂತಿ ಸ್ಥಾಪಿಸುವ ಒಪ್ಪಂದ?:
ಏಕಾಏಕಿ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಯುದ್ಧ ಸಾರುವುದಕ್ಕೆ ಮಧ್ಯ ಪ್ರಾಚ್ಯ ಬಿಕ್ಕಟ್ಟಿನ ಬಗ್ಗೆ ಅಧ್ಯಯನ ನಡೆಸುವವರು ಹಲವು ಕಾರಣಗಳನ್ನು ಮುಂದಿಡುತ್ತಾರೆ. ಹಾಲಿ ಬಿಕ್ಕಟ್ಟು ಆರಂಭವಾಗುವುದಕ್ಕಿಂತ ಮೊದಲೇ ಅಮೆರಿಕ ಸರಕಾರ ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ಸುಸಜ್ಜಿತ ಬಾಂಧವ್ಯ ಸ್ಥಾಪನೆಗೆ ಪ್ರಯತ್ನ ಮಾಡು ತ್ತಿತ್ತು. ಹಮಾಸ್ ಉಗ್ರರಿಗೆ ಅದು ಬೇಕಾಗಿರಲಿಲ್ಲ. ಅದನ್ನು ಹಾಳು ಮಾಡುವ ನಿಟ್ಟಿನಲ್ಲಿಯೇ ಈ ದಾಳಿ ನಡೆಸಿದ್ದಾರೆ ಎಂಬ ವಾದವೂ ಇದೆ. ಒಪ್ಪಂದದ ಪ್ರಾಥ ಮಿಕ ಚೌಕಟ್ಟು ಹೇಗೆ ಇರಬೇಕು ಎಂಬುದರ ಬಗ್ಗೆ ಅಮೆರಿಕ ಕಳೆದ ವಾರ ಘೋಷಣೆ ಮಾಡುತ್ತಿದ್ದಂತೆಯೇ ಈ ದಾಳಿ ನಡೆದಿದೆ.
ಅಮೆರಿಕದ ಒತ್ತಾಸೆ ಏನೆಂದರೆ ಸೌದಿ ಅರೇಬಿಯಾ 1948ರ ಬಳಿಕ ಮೊದಲ ಬಾರಿಗೆ ಇಸ್ರೇಲ್ ಅನ್ನು ಒಂದು ದೇಶ ಎಂದು ಮಾನ್ಯತೆ ನೀಡಬೇಕು. ಅದುವೇ ಉದ್ದೇ ಶಿತ ಒಪ್ಪಂದದ ಪ್ರಧಾನ ಚೌಕಟ್ಟು. ಇಸ್ರೇಲ್- ಪ್ಯಾಲೆಸ್ತೀನ್ ಮುನಿಸಿನ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರಕಾರ ಇಸ್ರೇಲ್ ಅನ್ನು ಒಂದು ರಾಷ್ಟ್ರ ಎಂದು ಮಾನ್ಯತೆ ನೀಡಲು ಹಿಂದೇಟು ಹಾಕಿತ್ತು. ಅದರ ಬದಲಾಗಿ ಪ್ಯಾಲೇಸ್ತೀನ್‌ಗೆ ಪ್ರತ್ಯೇಕ ಸ್ಥಾನಮಾನ ನೀಡಬೇಕು ಎಂದು ವಾದಿಸುತ್ತಾ ಬಂದಿದೆ. ಬದಲಾಗಿರುವ ಪರಿಸ್ಥಿತಿಯಲ್ಲಿ ಸೌದಿ ಅರೇಬಿಯಾಕ್ಕೆ ಪ್ಯಾಲೆಸ್ತೀನ್ ಪ್ರಶ್ನೆಗಿಂತ ಇರಾನ್‌ನಿಂದ ತೊಂದರೆಯಾಗದಂತೆ ಅಮೆರಿಕದಿಂದ ಪ್ರತೀ ಖಾತರಿ ಪಡೆಯುವುದು ಅಗತ್ಯವಾಗಿ ಪರಿಣಮಿಸಿದೆ. ಇರಾನ್ ತನ್ನ ಮೇಲೆ ದಾಳಿ ನಡೆಸಲಿದೆ ಎಂದು ಯಾವತ್ತೂ ಆತಂಕ ದಲ್ಲಿರುವ ಸೌದಿ ಅರೇಬಿಯಾ, ಅಮೆರಿಕ ಆ ದೇಶದ ಜತೆಗೆ ರಕ್ಷಣ ಒಪ್ಪಂದ ಮಾಡಿಕೊಳ್ಳಬಾರದು ಎಂಬ ಷರತ್ತು ಮುಂದಿಟ್ಟಿದೆ. ಇದರ ಜತೆಗೆ ಸೌದಿ ಅರೇ ಬಿಯಾ ಕೈಗೊಂಡಿರುವ ನಾಗರಿಕ ಪರಮಾಣು ಒಪ್ಪಂದಕ್ಕೆ ಬೆಂಬಲ ನೀಡಬೇಕು ಎಂಬುದೂ ಸೌದಿ ಅರೇಬಿಯಾದ ಒತ್ತಾಸೆ.
ಇಸ್ರೇಲ್ ಜತೆಗಿನ ಬಾಂಧವ್ಯ ಸುಧಾರಣೆ ಸೌದಿ ಅರೇಬಿಯಾಕ್ಕೆ ಲಾಭ ಹೇಗೆ?:
ಅರಬ್ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ರಾಷ್ಟ್ರ. ಇಸ್ರೇಲ್ ಜತೆಗೆ ಬಾಂಧವ್ಯ ಸುಧಾರಿಸಿಕೊಂಡರೆ ಆ ದೇಶಕ್ಕೆ ಆರ್ಥಿಕವಾಗಿ ಲಾಭ ತಂದು ಕೊಡಲಿದೆ. ಮುಸ್ಲಿಂ ಬಾಹುಳ್ಯವಿರುವ ಮಧ್ಯ ಪ್ರಾಚ್ಯದಲ್ಲಿ ಒಂದು ಪ್ರಧಾನ ಪಾತ್ರವೂ ಇಸ್ರೇಲ್‌ಗೆ ಈ ಒಪ್ಪಂದದಿಂದ ಸಿಗಲಿದೆ. ರಾಜಕೀಯವಾಗಿ ಅಸ್ಥಿರತೆ ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸ್ಥಿರತೆಯನ್ನೂ ತಂದು ಕೊಡಲಿದೆ. ಇದರಿಂದಾಗಿ ಪಶ್ಚಿಮ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ತರಲಿದೆ ಎನ್ನುವುದು ಲೆಕ್ಕಾಚಾರ.
ಒಪ್ಪಂದದಿಂದ ಅಮೆರಿಕಕ್ಕೆ ಏನು ಅನುಕೂಲ?:
ಮಧ್ಯ ಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಲಾಭವನ್ನು ಚೀನ ತನಗೆ ಅನುಕೂಲಕರವಾಗಿ ತಿರುಗಿಸಿಕೊಂಡೀತು ಎನ್ನುವುದು ಅಮೆರಿಕದ ಆತಂಕ. ಈಗಾಗಲೇ ಅಲ್ಲಿ ಡ್ರ್ಯಾಗನ್ ರಾಷ್ಟ್ರದ ಕುರುಹುಗಳು ಮೂಡಿವೆ. ಸೌದಿ ಅರೇಬಿಯಾಕ್ಕೆ ಇರಾನ್ ಜತೆಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂಬ ಖಾತರಿ ನೀಡಿದರೆ ಚೀನದ ಸಾಮ್ರಾಜ್ಯ ವಿಸ್ತರಣೆಗೆ ತಡೆಯೊಡ್ಡಿದಂತೆ ಆಗುತ್ತದೆ ಎನ್ನುವುದು ಅಮೆರಿಕದ ಲೆಕ್ಕಾಚಾರ. ಎಪ್ರಿಲ್‌ನಲ್ಲಿ ನಡೆದಿದ್ದ ಬೆಳವಣಿಗೆಯಲ್ಲಿ ಸೌದಿ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ನಡೆಸುವಲ್ಲಿ ಕ್ಸಿ ಜಿನ್‌ಪಿಂಗ್ ಸರಕಾರ ಯಶಸ್ವಿಯಾಗಿತ್ತು. ಈ ಮೂಲಕ ಅಮೆರಿಕದ ರೀತಿಯಲ್ಲಿಯೇ ಚೀನ ಕೂಡ ಜಗತ್ತಿನ ಮಧ್ಯಸ್ಥಿಕೆದಾರನ ಸ್ಥಾನಕ್ಕೆ ಏರಿಕೆಯಾಗಿತ್ತು.
ಪ್ಯಾಲೆಸ್ತೀನಿಯರಿಗೆ ಏನಾಗಲಿದೆ?:
ಉದ್ದೇಶಿತ ಒಪ್ಪಂದದಿಂದ ಪ್ಯಾಲೆಸ್ತೀನಿಯರಿಗೆ ಏನು ಸಿಗಲಿದೆ ಎಂಬುದರ ಬಗ್ಗೆ ತತ್‌ಕ್ಷಣಕ್ಕೆ ಊಹಿಸಲು ಸಾಧ್ಯವಿಲ್ಲ ಎಂಬ ವಾದ ಮಧ್ಯಪ್ರಾಚ್ಯ ಬಿಕ್ಕಟ್ಟಿನ ತಜ್ಞರದ್ದು. 2002ರಲ್ಲಿ ಜಾರಿಯಾಗಿರುವ ಶಾಂತಿ ಒಪ್ಪಂದಕ್ಕೆ ಸೌದಿ ಅರೇಬಿಯಾ ಪೂರ್ಣ ರೀತಿಯಲ್ಲಿ ಬದ್ಧತೆ ತೋರಿಸಬೇಕು. ಅಂದರೆ ಪ್ಯಾಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಂಗೀಕರಿಸಿದರೆ, ಇಸ್ರೇಲ್ ಜತೆಗೆ ಶಾಂತಿ ಸ್ಥಾಪನೆ ಮತ್ತು ಅದಕ್ಕೆ ಮಾನ್ಯತೆ ನೀಡುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ. 1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನಿ ನೆಲದಿಂದ ತನ್ನ ಸೇನೆ ವಾಪಸ್ ಪಡೆಯಬೇಕು ಎನ್ನುವುದು ಮತ್ತೂಂದು ಷರತ್ತು.
ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಇಲ್ ಸೌದ್ ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಜತೆಗೆ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಧ್ಯಪ್ರಾಚ್ಯದ ಹಿತದೃಷ್ಟಿಯಿಂದ ಇಸ್ರೇಲ್ ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡದಿದ್ದರೂ ಉತ್ತಮ ಬಾಂಧವ್ಯ ಸಾಧ್ಯವಿದೆ ಎಂದು ಹೇಳಿದ್ದರು. ಆದರೆ ಇದು ಸೀಮಿತ ವ್ಯಾಪ್ತಿಯದ್ದಾಗಲಿದೆ. ಅದಕ್ಕಾಗಿ 2 ರಾಷ್ಟ್ರಗಳ ರಚನೆಯಾಗಬೇಕು ಎಂದಿದ್ದರು. ಆದರೆ ಇಲ್ಲಿ ಪ್ಯಾಲೆಸ್ತೀನಿಯರು ನೇರವಾಗಿ ಮಾತುಕತೆಯಲ್ಲಿ ಭಾಗಿಯಾಗಿಲ್ಲ.
ಆದರೆ 2020ರಲ್ಲಿ ಅಮೆರಿಕ ಸರಕಾರವೇ ಮುತುವರ್ಜಿ ವಹಿಸಿ ಇಸ್ರೇಲ್, ಯುಎಇ ಮತ್ತು ಬಹ್ರೈನ್ ಸರಕಾರಗಳ ನಡುವೆ ನಡೆಸಿದ್ದ ಅಬ್ರಾಹಾಂ ಒಪ್ಪಂದದ ಅನ್ವಯ ಮೊದಲ ಹಂತದಲ್ಲಿ ಇಸ್ರೇಲ್‌ಗೆ ಮಾನ್ಯತೆ ನೀಡಬೇಕು ಎಂದಾಗಿತ್ತು.
ಅಮೆರಿಕ ಏಕೆ ಒಪ್ಪಂದಕ್ಕೆ ಆದ್ಯತೆ ನೀಡುತ್ತಿದೆ?:
ಮುಂದಿನ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಮಧ್ಯ ಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಬಗ್ಗೆ ಒಪ್ಪಂದ ಮಾಡಿ, ಅದನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾದರೆ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಒಂದು ಹೆಗ್ಗಳಿಕೆಯೇ ಆಗಲಿದೆ. ಚುನಾವಣೆ ಪ್ರಚಾರದ ವೇಳೆ ಶಾಂತಿ ಸ್ಥಾಪನೆಯ ಹರಿಕಾರ ಎಂಬ ಹೆಗ್ಗಳಿಕೆಯೂ ಅವರಿಗೆ ಪಾಪ್ತವಾಗಲಿದೆ. ಜತೆಗೆ ತಮ್ಮ ನೇತೃತ್ವದ ಸರಕಾರ ಹೊಂದಿರುವ ವಿದೇಶಾಂಗ ನೀತಿ ವಿಫಲವಾಗಿಲ್ಲ, ಯಶಸ್ವಿಯಾಗಿದ್ದಕ್ಕೆ ಅತ್ಯುತ್ತಮ ನಿದರ್ಶನ ಎಂದೂ ಹೇಳಿಕೊಳ್ಳಲು ಅದು ನೆರವಾಗಲಿದೆ.
ಶಾಂತಿ ಪ್ರಕ್ರಿಯೆಗೆ ಧಕ್ಕೆ ತಂದ ಯುದ್ಧ :
ಅಮೆರಿಕದ ಹಾಲಿ ಸರಕಾರ ಒಪ್ಪಂದ ಜಾರಿಯಾಗಬೇಕು ಎಂಬುದರ ಮೂಲ ಉದ್ದೇಶ ರಾಜಕೀಯವೇ ಹೌದಾಗಿದ್ದರೂ, ಅದರಿಂದ ಒಂದಷ್ಟು ಕಾಲ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದಲ್ಲಿ ಗುಂಡು, ಬಾಂಬ್ ಮತ್ತು ರಾಕೆಟ್‌ಗಳ ಮೊರೆತ ನಿಲ್ಲಲು ನೆರವಾಗು¤ತ್ತೋ ಏನೋ. ಆದರೆ ಕಳೆದ ಶನಿವಾರದಿಂದ ಆರಂಭವಾಗಿರುವ ಇಸ್ರೇಲ್- ಹಮಾಸ್ ಉಗ್ರರ ನಡುವಿನ ಕಾಳಗ ಈ ಎಲ್ಲ ಪ್ರಕ್ರಿಯೆ ಮುರಿದು ಬೀಳಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ದಾಳಿ ಆರಂಭವಾದ ದಿನವೇ ಸೌದಿ ಅರೇಬಿಯಾ ಸರಕಾರ ಪ್ರತಿಕ್ರಿಯೆ ನೀಡಿ “ದಶಕಗಳಿಂದ ಒಂದು ಸ್ಥಳವನ್ನು ಬಲವಂತವಾಗಿ ಹಿಡಿತದಲ್ಲಿ ಇರಿಸಿಕೊಳ್ಳುವುದರಿಂದ ಪ್ರತಿಕೂಲ ಪರಿಣಾಮ ಉಂಟಾದೀತು. ಪ್ಯಾಲೆಸ್ತೀನಿಯರ ನೆಲವನ್ನು ಇಸ್ರೇಲ್ ಒಪ್ಪಿಸಿದ್ದರೆ ಹೀಗೆ ಆಗುತ್ತಿರಲಿಲ್ಲ’ ಎಂದು ವಾದಿಸಿತ್ತು. ಇದರಿಂದಾಗಿ ಶಾಂತಿ ಸ್ಥಾಪನೆ ಮಾಡಿಕೊಳ್ಳಲು ಹೆಚ್ಚು ಆದ್ಯತೆ ನೀಡುತ್ತಿದ್ದ ಅಧ್ಯಕ್ಷ ಜೋ ಬೈಡೆನ್ ನೇತೃತ್ವದ ಸರಕಾರಕ್ಕೆ ಕೋಪವನ್ನೂ ತರಿಸಿತ್ತು. ಈ ಅಂಶ ಕೂಡ ಉದ್ದೇಶಿತ ಒಪ್ಪಂದದ ಮುಂದಿನ ಹಂತವನ್ನು ಜಾರಿಗೊಳಿಸುವಲ್ಲಿ ತೊಡಕು ತಂದೊಡ್ಡಿದೆ.
ಹಮಾಸ್ ಮತ್ತು ಇರಾನ್ ಕೂಡ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಆಗಬಾರದು ಎಂಬ ಕಾರಣದಿಂದ ಹಠಾತ್ ಆಗಿ ಯುದ್ಧ ಘೋಷಣೆ ಮಾಡಿ ಮುಂದಿನ ಹಲವು ವರ್ಷಗಳ ವರೆಗೆ ರಕ್ತಪಾತ ಮುಂದುವರಿಯುವಂತೆ ಮಾಡಬೇಕು ಎಂಬ ಉದ್ದೇಶ ಹೊಂದಿರುವಂತೆ ಇದೆ ಎಂಬ ವಿಶ್ಲೇಷಣೆಗಳೂ ನಡೆದಿವೆ.
ಹಾಲಿ ಸಮರಕ್ಕೆ ಇರಾನ್ ಬೆಂಬಲ ನೀಡಿದೆ, ಇಲ್ಲ ಎಂಬ ವಾದಗಳ ಮಧ್ಯೆ ಹೊಸ ಮಾತೊಂದು ಕೇಳಿ ಬಂದಿದೆ. ಅದೇನೆಂದರೆ ಹಮಾಸ್ ಉಗ್ರ ಸಂಘಟನೆಯ ಪರವಾಗಿರುವ ಪ್ಯಾಲೆಸ್ತೀನ್ ಸರಕಾರದ ಅಧಿಕಾರಿಯೊಬ್ಬರ ಪ್ರಕಾರ ಯುದ್ಧಕ್ಕೆ ಇರಾನ್ ಬೆಂಬಲ ನೀಡಿದೆಯೋ ಇಲ್ಲವೋ ಎಂಬ ಅಂಶ ಪ್ರಧಾನವಲ್ಲ. ಉಗ್ರ ಸಂಘಟನೆ ತಾನು ಹೊಂದಿರುವ ಮಾರಕ ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸುವಲ್ಲಿಯಂತೂ ಇರಾನ್ ಪಾತ್ರವಿದೆ ಎಂದು ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.