ಚಟಾಧೀನತೆಯ ಚರಮಸೀಮೆ…
Team Udayavani, Jan 19, 2019, 12:30 AM IST
ಧೂಮಪಾನದ ದುಷ್ಪರಿಣಾಮದಿಂದ ಸಂಭವಿಸುವ ಗ್ಯಾಂಗ್ರೀನ್ ಅದು. ಮುಟ್ಟಿ ನೋಡಿದರೆ ಕಾಲು ತಣ್ಣಗಿತ್ತು. ರಕ್ತನಾಳಗಳು ಕಟ್ಟಿಕೊಂಡು ನಾಡಿಮಿಡಿತ ಇರಲಿಲ್ಲ. ಬೆರಳುಗಳು ಕೊಳೆತು ಅಸಾಧ್ಯ ದುರ್ವಾಸನೆ ಬೀರುತ್ತಿದ್ದವು. ಅವನ ಹೆಂಡತಿ, ಮಗ ಕೈಮುಗಿದು ಕರುಣಾಜನಕ ಸ್ಥಿತಿಯಲ್ಲಿ ನಿಂತಿದ್ದರು.
ನಾನಾಗ ಬಳ್ಳಾರಿಯ ವೈದ್ಯಕೀಯ ವಿದ್ಯಾಲಯದಲ್ಲಿ ಎಮ….ಎಸ್. ಮಾಡುತ್ತಿದ್ದೆ. ಅಲ್ಲಿಯ “ಹತ್ತನೆಯ ಬ್ಲಾಕ್’ ಎಂದು ಕರೆಸಿಕೊಳ್ಳುವ ವಾರ್ಡಿನ ಜವಾಬ್ದಾರಿ ನನ್ನದಾಗಿತ್ತು. ಸಾಮಾನ್ಯವಾಗಿ ಮೊದಲನೆಯ ವರ್ಷದ ವಿದ್ಯಾರ್ಥಿಗಳಿಗೆ ಆ ವಾರ್ಡ್ ಕೊಡುವುದು ರೂಢಿ. ಯಾಕೆಂದರೆ ಆ ವಾರ್ಡ್‌ನಲ್ಲಿ ನಂಜು ಇದ್ದಂಥ, ದಿನಾಲೂ ಡ್ರೆಸ್ಸಿಂಗ್ ಅವಶ್ಯವಿರುವಂಥ ರೋಗಿಗಳನ್ನು ಅಡ್ಮಿಟ್ ಮಾಡುತ್ತಿದ್ದರು. “ಸ್ವತ್ಛ’ ಹಾಗೂ ತುರ್ತುನಿಗಾ ಅವಶ್ಯವಿರುವ ಕೇಸುಗಳನ್ನೆಲ್ಲ ಮುಖ್ಯ ಕಟ್ಟಡದಲ್ಲಿ ಅಡ್ಮಿಟ್ ಮಾಡಿ ಸೀನಿಯರ್ ಸ್ನಾತಕೋತ್ತರ ವಿದ್ಯಾರ್ಥಿಗಳ ಸುಪರ್ದಿಗೆ ಬಿಡುತ್ತಿದ್ದರು. ಮೊದಲ ವರ್ಷ ಆ ವಾರ್ಡನ್ನು ನೋಡಿಕೊಳ್ಳುತ್ತಿದ್ದ ನಾನು, ಸೀನಿಯರ್ ಆದ ಮೇಲೆ ಕೂಡ ಆ ವಾರ್ಡನ್ನು ಕೇಳಿ ಪಡೆದಿದ್ದೆ. ಯಾಕೆಂದರೆ, ಇಂಥ ರೋಗಿಗಳನ್ನು ಆರೈಕೆ ಮಾಡುವುದರಲ್ಲಿ ನನಗೆ ಅದೇನೋ ತೃಪ್ತಿ. ನಂಜು, ಕೀವು ಇತ್ಯಾದಿಗಳಿಂದ ಕೀಳರಿಮೆ ಹೊಂದಿ ತಮ್ಮನ್ನು ತಾವೇ ಶಪಿಸಿಕೊಳ್ಳುತ್ತಿರುವ ಅವರಿಗೆ ಸಾಂತ್ವನ ಹೇಳುವುದು, ಅವ ರೊಂದಿಗೆ ಒಂದಿಷ್ಟು ಕಾಲ ಕಳೆಯುವುದು ನನ್ನ ಉದ್ದೇಶವಾಗಿತ್ತು.
ಒಂದು ದಿನ, ಸುಮಾರು ನಲವತ್ತೈದು ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಕಾಲಿಗೆ “ಗ್ಯಾಂಗ್ರೀನ್’ ಮಾಡಿಕೊಂಡು ಬಂದು ಅಡ್ಮಿಟ್ ಆದ. ಆತನ ಕಾಲಿನ ಐದೂ ಬೆರಳುಗಳು ಕರ್ರಗಾಗಿದ್ದವು. ಅವನ ಒಂದು ಕಾಲನ್ನು ಮೊದಲೇ ತೆಗೆಯಲಾಗಿತ್ತು. ಈಗ ಈ ಕಾಲನ್ನೂ ತೆಗೆಯಬೇಕಾದ ಪರಿಸ್ಥಿತಿ. ಅತೀವ ನೋವಿನಿಂದ ಚಡಪಡಿಸುತ್ತಿದ್ದ. ಆದಷ್ಟು ಬೇಗ ಆ ಕಾಲನ್ನೂ ತೆಗೆಯುವಂತೆ ಗೋಗರೆಯುತ್ತಿದ್ದ. ಅನೇಕ ವರ್ಷಗಳ ಅವಿರತ ಧೂಮಪಾನದ ದುಷ್ಪರಿಣಾಮದಿಂದ ಅವನ ರಕ್ತನಾಳಗಳು ಸಣ್ಣದಾಗಿ, ಕಾಲಿಗೆ ರಕ್ತ ಸರಬರಾಜು ಇಲ್ಲದಂತಾಗಿ ಸಂಭವಿಸುವ ಗ್ಯಾಂಗ್ರೀನ್ ಅದು. ಮುಟ್ಟಿ ನೋಡಿದರೆ ಕಾಲು ತಣ್ಣಗಿತ್ತು. ರಕ್ತನಾಳಗಳು ಕಟ್ಟಿಕೊಂಡು ನಾಡಿಮಿಡಿತ ಇರಲಿಲ್ಲ. ಬೆರಳುಗಳು ಕೊಳೆತು ಅಸಾಧ್ಯ ದುರ್ವಾಸನೆ ಬೀರುತ್ತಿದ್ದವು. ಅವನೊಂದಿಗೆ ಬಂದ ಅವನ ಹೆಂಡತಿ, ಮಗ ಕೈಮುಗಿದು ಕರುಣಾಜನಕ ಸ್ಥಿತಿಯಲ್ಲಿ ನಿಂತಿದ್ದರು. ಆತನ ರೋಗದ “ಇತಿಹಾಸ’ ಕೇಳಿದಾಗ ಗೊತ್ತಾಯಿತು, ಈಗ ಸುಮಾರು ಆರು ತಿಂಗಳ ಹಿಂದಷ್ಟೇ ಇದೇ ಕಾರಣಕ್ಕಾಗಿ ಒಂದು ಕಾಲು ತೆಗೆಯಲಾಗಿದ್ದು, ಈಗ ಮತ್ತೆ ಈ ಕಾಲಿಗೆ ಅಂಥದೇ ಪರಿಸ್ಥಿತಿ. ಅವನ ಗೋಳನ್ನು ನೋಡಲಾಗುತ್ತಿಲ್ಲ.
ಇಂಥ ಸ್ಥಿತಿಯಲ್ಲಿ ತಡೆಯಲಾರದಷ್ಟು ನೋವು ಇರುತ್ತದೆ. ಕಾಲನ್ನು ಹಾಸಿಗೆಯಿಂದ ಕೆಳಗೆ ಜೋತು ಬಿಟ್ಟರೆ, ಒಂದಿಷ್ಟು ರಕ್ತ ಕಾಲ ಕಡೆಗೆ ಹರಿದು ಸ್ವಲ್ಪ ನೋವು ಕಡಿಮೆಯಾಗುತ್ತಿರುತ್ತದೆ. ಅದೂ ಕೂಡ ಮೊದಲಿನ ಕೆಲವು ದಿನ ಮಾತ್ರ. ಬರಬರುತ್ತಾ ರಕ್ತನಾಳಗಳು ಪೂರ್ಣ ಕಟ್ಟಿಕೊಂಡು ಹಗಲು ರಾತ್ರಿ ಬಿಡದೆ ನೋವು ಕಾಡುತ್ತದೆ. ಈ ರೋಗದಲ್ಲಿ ಕಾಲಿನ ರಕ್ತನಾಳಗಳು ಮಾತ್ರ ಕಟ್ಟಿಕೊಂಡಿರುತ್ತವೆ, ನೋವಿನ ಜ್ಞಾನವನ್ನು ಮೆದುಳಿಗೆ ತಲುಪಿಸುವ ನರಮಂಡಲ ವ್ಯವಸ್ಥೆ ಸಹಜ ಸ್ಥಿತಿಯಲ್ಲಿಯೇ ಇರುತ್ತದೆ. ರಕ್ತ ಸಿಗದ ನರಗಳು ಚೀರುತ್ತಿರುತ್ತವೆ. ಹೀಗಾಗಿ ರಕ್ತವಿಲ್ಲದೆ ಕಾಲು ನಿಷ್ಪ್ರಯೋಜಕವಾದರೂ ಕೂಡ ನೋವು ನಿರಂತರ. ಈಗ ಇಲ್ಲಿ ಬರುವ ಮುಖ್ಯ ಪ್ರಶ್ನೆಯೆಂದರೆ ಒಂದು ಕಾಲನ್ನು ತೆಗೆದರೂ ಕೂಡ ಬೀಡಿ ಸೇದುವುದನ್ನು ಬಿಡದ ಆತನ ಮನಸ್ಥಿತಿ. ಆತನಿಗೆ ಈ ವಿಷಯವಾಗಿ ಕೇಳಿದರೆ ನೋವಿನಿಂದ ಒದ್ದಾಡುತ್ತ, ಇನ್ನು ಮೇಲೆ ಖಂಡಿತ ಬಿಡುತ್ತೇನೆಂಬ “ಭರವಸೆ’ ಕೊಟ್ಟ. ಆದರೂ ನನಗೆ ಗೊತ್ತಿತ್ತು, ಚಟಗಳನ್ನು ಬಿಡುವುದು ಹೇಳಿದಷ್ಟು ಸುಲಭದ ಕೆಲಸವಲ್ಲ, ಎಂದು.
ಇಡೀ ಜನಸಮುದಾಯಕ್ಕೆ ಚಟಗಳನ್ನು ತೊರೆಯುವುದರ ಬಗ್ಗೆ ಅಥವಾ ಚಟ ಮಾಡದಿರುವ ಬಗ್ಗೆ ತಿಳಿಹೇಳುತ್ತ ಆದರ್ಶಪ್ರಾಯರಾಗಿರಬೇಕಾದ ವೈದ್ಯರಲ್ಲಿಯೇ ಕೆಲವರಿಗೆ ಇವುಗಳಿಂದ ದೂರವಿರಲು ಸಾಧ್ಯವಿಲ್ಲವೆಂದ ಮೇಲೆ ಸಾಮಾನ್ಯರ ಪಾಡೇನು? ಅದೇ ವೈದ್ಯಕೀಯ ವಿದ್ಯಾಲಯ ದಲ್ಲಿಯೇ ಪ್ರೊಫೆಸರ್ ಒಬ್ಬರು, ಕೈಯಲ್ಲಿ ಸಿಗರೇಟ್ ಹಿಡಿದೇ ರೋಗಿಗಳನ್ನು ಪರೀಕ್ಷೆ ಮಾಡುವುದನ್ನೂ ನಾನು ಕಂಡಿದ್ದೆ. ಮತ್ತೆ ಸಂಜೆಯಾದೊಡನೆ ಪ್ರತಿನಿತ್ಯ “ಮದ್ಯಾರಾಧನೆ’ ಇಲ್ಲದೆ ಅವರು ಮಲಗುತ್ತಲೇ ಇರಲಿಲ್ಲ. ಅವರು ಕೈಯಲ್ಲಿ ಪೆನ್ ಹಿಡಿದರೆ ಕೈ ನಡುಗುತ್ತಿತ್ತು. ಇಂದಿನ ಸಿಗರೇಟ್ ಹಾಗೂ ಹಿಂದಿನ ರಾತ್ರಿ ಕುಡಿದ ಮದ್ಯ ಎರಡೂ ಕೂಡಿಕೊಂಡು ಅವರ ಉಸಿರಿಗೆ ವಿಚಿತ್ರ ವಾಸನೆ ನೀಡುತ್ತಿದ್ದವು. ಅಕ್ಷರ ಬರೆಯಬೇಕಾದರೆ ವೈಬ್ರೇಶನ್ ಮೋಡ್‌ನಲ್ಲಿ ಬರೆದಂಥ ಅಕ್ಷರಗಳು. ಆಪರೇಶನ್ ಮಾಡುವಾಗ ನೈಫ್ ಹಿಡಿದರೆ ಅವರ ಕೈಯನ್ನು ಇನ್ನೊಬ್ಬರು ಹಿಡಿಯಬೇಕೇನೋ ಅನ್ನುವಂಥ ಪರಿಸ್ಥಿತಿ..!
ಇಷ್ಟೆಲ್ಲ ಇದ್ದೂ ಇವರು ಆ ದಿನಗಳಲ್ಲಿ ವಿದ್ಯಾರ್ಥಿಗಳ “ನೆಚ್ಚಿನ ಪ್ರೊಫೆಸರ್’ ಕೂಡ ಆಗಿದ್ದುದು ವಿಪರ್ಯಾಸ. ಪ್ರತಿದಿನ ರಾತ್ರಿ ಇವರ ನಿತ್ಯದ “ಡೋಜ್’ನ್ನು ಗ್ಲಾಸಿನಲ್ಲಿ ಹಾಕಿಕೊಟ್ಟು, ಅವರ ನೆಚ್ಚಿನ ಕುರುಕಲುಗಳನ್ನು ಮುಂದಿಟ್ಟು, ಅವರ ಕಾಲು ನೀವುತ್ತಾ ಕುಳಿತಿರುತ್ತಿದ್ದರಂತೆ ಅವರ ಹೆಂಡತಿ, ಪಾಪದ ಹೆಂಗಸು! ಒಂದು ಬಾರಿ ನಾನು ಈ ವಿಷಯವನ್ನು ನನ್ನ ಹೆಂಡತಿಯ ಮುಂದೆ ತಿಳಿಸುತ್ತ, “”ಅವರ ಹೆಂಡತಿ ಎಷ್ಟು ಒಳ್ಳೆಯವಳು ನೋಡು. ತನ್ನ ಗಂಡನ ಬೇಕು-ಬೇಡಗಳನ್ನು ಚೆನ್ನಾಗಿ ಅರ್ಥೈಸಿಕೊಂಡು, ಸೇವೆ ಮಾಡುತ್ತಾಳೆ” ಎಂದೆ. ಅದಕ್ಕೆ ನನ್ನವಳು ಕೊಟ್ಟ ಉತ್ತರ ತಾರ್ಕಿಕ ಮತ್ತು ಅರ್ಥಪೂರ್ಣ ಎನಿಸಿತು. “”ದಿನಾಲೂ ಗ್ಲಾಸಿನಲ್ಲಿ “ವಿಷ’ ಹಾಕಿಕೊಟ್ಟು, ಅವನು ಸ್ವಲ್ಪ, ಸ್ವಲ್ಪವಾಗಿ ಸಾವಿಗೆ ಸಮೀಪ ಆಗುತ್ತಿರುವುದನ್ನು, ಮೌನವಾಗಿ ನೋಡುತ್ತಾ ಕುಳಿತ ಅವಳೆಂಥ ಒಳ್ಳೆಯ ಹೆಂಡತಿ?” ಎಂದಿದ್ದಳು. ಆ ತರ್ಕ ನನಗೆ ಸರಿಯೆನಿಸಿತು. ಆದರೆ ಅವಳ ಪರಿಸ್ಥಿತಿ ಏನಿತ್ತೋ ಏನೋ? ಆದರೂ ಸಹ ಹೆಂಡತಿ ಅಥವಾ ಮನೆಯಲ್ಲಿರುವ ಇನ್ನಿತರರು ಚಟ ಕಲಿಯುವ ಮೊದಲ ದಿನಗಳಲ್ಲೇ ಅವರನ್ನು ಬೆದರಿಸಿ, ತಿಳಿಹೇಳಿ ಅಥವಾ ವಿನಂತಿ ಮಾಡಿಕೊಂಡು ಹದ್ದುಬಸ್ತಿನಲ್ಲಿಟ್ಟರೆ ಅನೇಕರು “ಚಟಾಧೀನ’ರಾಗುವುದನ್ನು ತಪ್ಪಿಸಬಹುದು. ಯಾಕೆಂದರೆ ಒಂದು ಬಾರಿ ಮನಸ್ಸಿನೊಂದಿಗೆ, ಶರೀರ ಕೂಡ ಚಟಕ್ಕೆ ಅಧೀನವಾದರೆ ಅವರು ತಿರುಗಿಬಾರದ ದಾರಿಯಲ್ಲಿರುತ್ತಾರೆ. ಸಾಮಾನ್ಯವಾಗಿ ಯಾವುದೇ ಚಟ ಪ್ರಾರಂಭವಾದಾಗ ಬರೀ ಒಂದು ಕುತೂಹಲವಾಗಿರುತ್ತದೆ. ಬರಬರುತ್ತ ಅಭ್ಯಾಸವಾಗುತ್ತದೆ. ಕೊನೆಗೆ ವ್ಯಸನವಾಗಿ ಆಂಟಿಕೊಂಡುಬಿಡುತ್ತದೆ. ವ್ಯಸನದ ಹಂತ ಮುಟ್ಟಿದಾಗ ಮನಸ್ಸಷ್ಟೇ ಅಲ್ಲ ಶರೀರದ ಜೀವಕೋಶಗಳೂ ಕೂಡ ಅವಲಂಬಿತವಾಗುತ್ತವೆ. ಇದು “ಚಟಾಧೀನತೆ’ಯ ಪರಮಾವಧಿ. ಈ ಸ್ಥಿತಿಯಲ್ಲಿ ಮನುಷ್ಯ ವ್ಯಸನ ಮುಕ್ತನಾಗಬೇಕೆಂದು ಮನಸ್ಸು ಮಾಡಿದರೂ ಶರೀರ ಅದನ್ನೇ ಆಪೇಕ್ಷಿಸುತ್ತದೆ.
ಬೀಡಿ ಸೇದಿ ಕಾಲು ಕೊಳೆತ ಈ ಮನುಷ್ಯ ಆರ್ತನಾಗಿ ನನ್ನೆಡೆಗೆ ನೋಡುತ್ತಿದ್ದ, ಮೊದಲು ಆತನಿಗೆ ನೋವು ನಿವಾರಕ ಚುಚ್ಚುಮದ್ದು ನೀಡಿ, ಆತನ ರಕ್ತಪರೀಕ್ಷೆ ಇತ್ಯಾದಿಗಳನ್ನೆಲ್ಲ ಮಾಡಿಸಿ ಅಂದೇ ರಾತ್ರಿ ಆತನ ಕಾಲು ತೆಗೆದೆವು. ಶಸ್ತ್ರಚಿಕಿತ್ಸಾ ಕೋಣೆಯಿಂದ ಹೊರಬಂದಾಗ ಆತನ ಮುಖದ ಮೇಲೆ ಸಂತೋಷದ ಭಾವ. ಎಂಥ ವಿಪರ್ಯಾಸ! ಯಾವ ಕಾಲಿನ ಸಹಾಯದಿಂದ ಊರು ಕೇರಿ ಸುತ್ತಿದ್ದನೋ, ಯಾವ ಕಾಲಿನಿಂದ ತಿರುಗಾಡಿ ತನ್ನ ಅನ್ನ ಸಂಪಾದಿಸಿದ್ದನೋ ಆ ಕಾಲನ್ನು ತೆಗೆದಾಗ ಸಂತಸ! ಮುಂದೆ ಮತ್ತದೇ ಔಷಧಿ, ಇಂಜೆಕ್ಷನ್, ಡ್ರೆಸ್ಸಿಂಗ್ ಇತ್ಯಾದಿಗಳ “ರಿಚುವಲ್’ಗಳು, ಅಷ್ಟೇ. ಬರೀ ಹತ್ತೇ ದಿನಗಳಲ್ಲಿ ಗಾಯ ಮಾಯ್ದು ಮನೆಗೆ ಹೊರಟ. ಬರುವಾಗ ಬಗಲಲ್ಲಿ ಬಡಿಗೆ ಹಿಡಿದುಕೊಂಡು ನಡೆಯುತ್ತ ಬಂದವ ಹೋಗುವಾಗ ಗಾಲಿ ಕುರ್ಚಿಯಲ್ಲಿ ಕುಳಿತಿದ್ದ. ಬದಿಯಲ್ಲಿ ಹರಿದ ಸೀರೆ ಉಟ್ಟ ದುಃಖತಪ್ತ ಹೆಂಡತಿ, ಹಿಂದೆ ಗಾಲಿ ಕುರ್ಚಿ ನೂಕುವ ಹಿರಿಮಗ.
ಮುಂದೆ ಆಗಾಗ ಬೇರೆ ಬೇರೆ ಕಾರಣಗಳಿಗಾಗಿ ಆಸ್ಪತ್ರೆಗೆ ಬರುತ್ತಿದ್ದ. ಬೀಡಿ ಬಿಟ್ಟ ಬಗ್ಗೆ ಕೇಳಿದರೆ “ಹೂn’ ಅನ್ನುತ್ತಿದ್ದನಾದರೂ ಅವನು ಉತ್ತರಿಸಿದ್ದ ರೀತಿಯಿಂದ, ಬಿಟ್ಟಿಲ್ಲ ಎಂಬುದು ಸ್ಪಷ್ಟವಾಗುತ್ತಿತ್ತು. ಮತ್ತೆ ತಿಳಿಹೇಳಿ ಕಳಿಸುತ್ತಿ¨ªೆ. ನಾಲ್ಕೈದು ತಿಂಗಳ ನಂತರ ಅವನು ಮತ್ತೆ ಬಂದ. ಈ ಬಾರಿ ಎಡಗೈಯ ನಾಲ್ಕು ಬೆರಳುಗಳು ಕರ್ರಗಾಗಿದ್ದವು. ಹೆಬ್ಬೆರಳೊಂದು ಮಾತ್ರ ಉಳಿದಿತ್ತು. T.A.O.(Thromboangitis obliterans) ಎಂದು ವೈದ್ಯಕೀಯವಾಗಿ ಕರೆಸಿಕೊಳ್ಳುವ ಈ ರೋಗ ಪ್ರಮುಖವಾಗಿ ಕಾಲಿನ ರಕ್ತನಾಳಗಳನ್ನು ಆವರಿಸಿಕೊಳ್ಳುತ್ತದೆ. ಆದರೆ ಕೆಲವೊಬ್ಬರಲ್ಲಿ ಕೈಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ.
ಈ ರೋಗಕ್ಕೆ ನಿಜವಾದ ಕಾರಣಗಳು ಪೂರ್ತಿಯಾಗಿ ತಿಳಿದಿಲ್ಲ ವಾದರೂ ಧೂಮಪಾನ ಮಾಡುವವರಲ್ಲಿ ಮಾತ್ರ ಸಂಭವಿಸುತ್ತದೆ. ಧೂಮಪಾನ ತ್ಯಜಿಸಿದರೆ ಮಾತ್ರ ಹತೋಟಿಗೆ ಬರಹುದಾದ ಈ ರೋಗಕ್ಕೆ ಆ ದಿನಗಳಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆಗಳು ಲಭ್ಯವಿರಲಿಲ್ಲ. ಈಗ ಕೆಲವೊಂದು ಔಷಧಿಗಳು ಲಭ್ಯವಿದ್ದರೂ ಕೂಡ ಧೂಮಪಾನ ಮುಂದುವರಿಸಿದವರಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿಲ್ಲ.
ಆಗ ಉಳಿದ ಒಂದೇ ಮಾರ್ಗವೆಂದರೆ ಕೊಳೆತ ಭಾಗವನ್ನು ಕತ್ತರಿಸಿ ತೆಗೆಯುವುದು. ಮತ್ತೆ ಅವನನ್ನು ಬಯ್ಯಬೇಕು ಎಂದುಕೊಂಡೆ. ಬಯ್ಯುವುದು ವ್ಯರ್ಥವೆಂದು ಗೊತ್ತಿತ್ತು. ಆದರೂ ಇದೇ ರೀತಿ ಮುಂದುವರಿದರೆ ಇನ್ನೊಂದು ಕೈ ಕೂಡ ನಿರುಪಯುಕ್ತವಾಗುತ್ತದೆಂದು ಎಚ್ಚರಿಕೆ ನೀಡಿ, ಕೊಳೆತ ನಾಲ್ಕು ಬೆರಳುಗಳನ್ನು ತೆಗೆದು ಉಪಚಾರ ಮಾಡಿ ಕಳಿಸಲಾಯಿತು. ಈ ಬಾರಿ ಅವರ ಮನೆ ಮಂದಿಯ ಮುಖದ ಮೇಲಿನ ನಿರಾಸೆ ಸ್ಪಷ್ಟವಾಗಿ ತೋರುತ್ತಿತ್ತು. ಅವರ ಯಾವ ಉಪದೇಶಕ್ಕೂ ಕಿವಿಗೊಡದೆ, ನಮ್ಮ ಬೆದರಿಕೆಗೂ ಜಗ್ಗದೆ ಅವನು ತನ್ನ ಚಟವನ್ನು ಮುಂದುವರಿಸಿದ್ದ.
ಅರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿದ್ದುಕೊಂಡು, ಸರಕಾರದಿಂದಲೇ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಬಳ್ಳಾರಿಯ ವೈದ್ಯಕೀಯ ವಿದ್ಯಾಲಯಕ್ಕೆ ನಿಯೋಜನೆಗೊಂಡಿದ್ದ ನಾನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಅಲ್ಲಿಯೇ ಅಸಿಸ್ಟಂಟ್ ಸರ್ಜನ್ ಆಗಿ ಮುಂದುವರಿದೆ. ನಾನು ಎಮ್.ಎಸ್. ಮಾಡಿದ ಯೂನಿಟ್‌ನಲ್ಲೆ ಕೆಲಸ ಮುಂದುವರಿಸಿದೆ. ಒಂದು ದಿನ ಓ.ಪಿ.ಡಿ.ಯಲ್ಲಿದ್ದಾಗ ಅದೇ ವ್ಯಕ್ತಿ ಬಂದು ನನ್ನೆದುರು ನಿಂತ. ನನಗೂ ಅವನಿಗೂ ಎಂಥ ಸಂಬಂಧ ಬೆಳೆದಿತ್ತೆಂದರೆ ತಮ್ಮ ಮನೆಯವರಿಗೆ ಏನೇ ಆದರೂ ನನ್ನನ್ನು ಹುಡುಕಿಕೊಂಡು ನನ್ನೆದುರು ಬಂದು ನಿಲ್ಲುತ್ತಿದ್ದರು. ಈಗ ಮತ್ತೆ ಬಂದಿದ್ದ, ಯಥಾರೀತಿ ದೈನ್ಯತೆಯ ಭಾವ ತುಂಬಿಕೊಂಡು. ಜೊತೆಗೆ ಅವನ ಕಿರಿಯ ಮಗ ಮತ್ತು ಹೆಂಡತಿ ಮಾತ್ರ. ದೊಡ್ಡ ಮಗನೆಲ್ಲಿ ಎಂದು ಕೇಳಿದರೆ, ಇವನಿಗಾಗಿ ಬೇಸತ್ತು ಬೇರೆ ಮನೆ ಮಾಡಿಕೊಂಡಿದ್ದಾನೆ ಎಂದು ಅವನ ಹೆಂಡತಿ ಹೇಳಿದಳು. ಮಗನಿಗೆ ಬೇಸರಿಸಿಕೊಂಡು ಹೋಗುವ ಅಧಿಕಾರ ಅವಕಾಶ ಇದೆ, ಆದರೆ ಹೆಂಡತಿಗೆ?
ಈಗ ನೋಡಿದರೆ ಉಳಿದ ಒಂದು ಕೈಯನ್ನೂ ಕರ್ರಗಾಗಿಸಿಕೊಂಡು ಬಂದಿದ್ದ. ನನಗೆ ಅವನ ಕಷ್ಟ ನೋಡಲಾಗಲಿಲ್ಲ. ಈ ಬಾರಿ ಬೀಡಿ ಬಿಟ್ಟಿಲ್ಲದುದರ ಬಗ್ಗೆ ನಾನು ಕೇಳಲಿಲ್ಲ, ಅವನ ಹೆಂಡತಿಯೂ ಹೇಳಲಿಲ್ಲ. ಅದು ಗೊತ್ತಿದ್ದ ವಿಷಯವೇ ಆಗಿತ್ತಲ್ಲ. ಕೈ ಕಾಲುಗಳನ್ನು ಕತ್ತರಿಸಿ ಹಾಕಿದರೂ ಚಟ ಬಿಡಲು ಸಾಧ್ಯವಾಗದ ಹಂತ ತಲುಪಿಬಿಟ್ಟಿದ್ದವು, ಅವನ ಮನಸು ಹಾಗೂ ಶರೀರ. ಅವನ ದೇಹದ ಪ್ರತಿಯೊಂದು ಜೀವಕೋಶ ಕೂಡ ನಿಕೋಟಿನ್‌ಗಾಗಿ ಹಂಬಲಿಸತೊಡಗಿತ್ತು. ತನ್ನನ್ನೇ ತಾನು ಬೈಯ್ದುಕೊಳ್ಳುವ ಸ್ಥಿತಿಯಲ್ಲಿ ಇದ್ದವನಿಗೆ ನಾನೂ ಬೈಯ್ದು ಅವನ ಕ್ಲೇಶವನ್ನು ಹೆಚ್ಚಿಸಬಾರದೆಂದು ನಿರ್ಧರಿಸಿ, ಸುಮ್ಮನೆ ಅಡ್ಮಿಟ್ ಮಾಡಿ, ಅಂದೇ ರಾತ್ರಿ ಅವನ ಕೈ ಕತ್ತರಿಸಿದೆವು.
ಅಂದು ನನಗಾದ ಸಂಕಟ ಅಷ್ಟಿಷ್ಟಲ್ಲ. ಇಂಥ ಸಂದರ್ಭಗಳಲ್ಲಿ ಜನರ ನೋವನ್ನು “ನಿಜವಾದ ಅರ್ಥದಲ್ಲಿ’ ಶಮನ ಮಾಡಲು ಸಾಧ್ಯವಾಗದಿರುವ ಈ ವೈದ್ಯಕೀಯದ ಬಗ್ಗೆ ಬೇಸರವಾಗುತ್ತದೆ. ಅಂದು ತುಂಬ ಬೇಸರಗೊಂಡು ಇನ್ನು ಮುಂದೆ ಕನಿಷ್ಟ ಒಂದು ವರ್ಷದವರೆಗೆ ಕೈ ಅಥವಾ ಕಾಲು ಕತ್ತರಿಸಿ ಹಾಕುವ ಇಂಥ ಕೇಸುಗಳನ್ನು ನನಗೆ ದಯವಿಟ್ಟು ಕೊಡಬೇಡಿರೆಂದು ನಮ್ಮ ಪ್ರೊಫೆಸರ್‌ಗೆ ಕೇಳಿಕೊಂಡೆ. ನಮ್ಮ ಪ್ರೊಫೆಸರ್ ನನ್ನೆಡೆ ನೋಡಿ ಅರ್ಥಗರ್ಭಿತವಾಗಿ ನಕ್ಕರಷ್ಟೇ. ಅವರ ಮುಖದಲ್ಲಿ ಹಲವು ವರ್ಷ ಇಂಥ ನೋವುಗಳನ್ನು ನೋಡಿದ, ಶಮನ ಮಾಡಿದ, ಕೆಲವೊಮ್ಮೆ ಅಸಹಾಯಕರಾದ ಅನುಭವದ ಭಾವ ಕಾಣುತ್ತಿತ್ತು. ಅಂದು ರಾತ್ರಿ ನನಗೆ ನಿದ್ರೆ ಬರಲಿಲ್ಲ. ಎರಡೂ ಕೈ, ಎರಡೂ ಕಾಲು ಕತ್ತರಿಸಿಕೊಂಡು ಅಸಹಾಯಕನಾದ ಅವನ ಮುಖ, ಬದಿಯಲ್ಲಿ ಅಳುತ್ತ ನಿಂತ ಅವನ ಹೆಂಡತಿ ಹಾಗೂ ಅಮಾಯಕ ಮಗನ ದೃಶ್ಯ ಕಣ್ಮುಂದೆ ಬರತೊಡಗಿತ್ತು. ಮರು ದಿನದಿಂದ ಯಥಾ ರೀತಿ ಔಷಧೋಪಚಾರ, ಡ್ರೆಸ್ಸಿಂಗ್ ಎಂಬ “ನಿತ್ಯಸತ್ಯ’.
ಏಳನೆಯ ದಿನ ನಾನು ಓ.ಪಿ.ಡಿ.ಯಲ್ಲಿದ್ದಾಗ ಹತ್ತನೇ ವಾರ್ಡಿನ ನರ್ಸ್ ಫೋನ್ ಮಾಡಿ, ಅರ್ಜೆಂಟಾಗಿ ವಾರ್ಡಿಗೆ ಬಂದು ಹೋಗಲು ತಿಳಿಸಿದಳು. ನನಗೆ ಸ್ವಲ್ಪ ಗಾಬರಿಯಾಯಿತು, ಆತನಿಗೆ ಏನಾದರೂ ಆಗಿರಬಹುದೇ ಎಂದು. ಯಾಕೆಂದರೆ ಈ ಮೂರು ವರ್ಷಗಳಲ್ಲಿ ಅವನೊಂದಿಗೆ ಸ್ವಲ್ಪಮಟ್ಟಿನ ಅಟ್ಯಾಚ್‌ಮೆಂಟ್ ಬೆಳೆದುಬಿಟ್ಟಿತ್ತು. ಅಲ್ಲಿ ಹೋದೊಡನೆ ನನ್ನನ್ನು ವಾರ್ಡಿನ ಬಾಗಿಲಲ್ಲಿ ನಿಲ್ಲಿಸಿ ಆ ನರ್ಸ್ ತೋರಿಸಿದ ದೃಶ್ಯದಿಂದ ನಾನು ಆವಾಕ್ಕಾಗಿ ಹೋದೆ.
…ಎರಡೂ ಕೈಗಳಿಲ್ಲದ ಅವನು ಬೀಡಿ ಸೇದುತ್ತಿದ್ದ!
ಹತ್ತು ವರ್ಷದ ಅವನ ಮಗ ತನ್ನ ಕೈಯಿಂದ ಇವನ ಬಾಯಿಗೆ ಬೀಡಿ ಇಡುತ್ತಿದ್ದ….!!
ಡಾ. ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.