ಅನ್ನದಾತನ ಕಂಗೆಡಿಸಿದ ಆಶ್ಲೇಷಾ ಮಳೆ; ನೆಲಕಚ್ಚಿದ ಬೆಳೆ


Team Udayavani, Aug 8, 2022, 6:40 AM IST

asಅನ್ನದಾತನ ಕಂಗೆಡಿಸಿದ ಆಶ್ಲೇಷಾ ಮಳೆ; ನೆಲಕಚ್ಚಿದ ಬೆಳೆ

ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಆಶ್ಲೇಷಾ ಮಳೆ ರೈತನನ್ನು ಅಕ್ಷರಶಃ ಕಂಗೆಡಿಸಿದೆ. ನದಿ ತೀರದ ಜಮೀನುಗಳು ಪ್ರವಾಹಕ್ಕೆ ತುತ್ತಾಗಿದ್ದರೆ, ಕೆಲವೆಡೆ ದಿನವಿಡೀ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಕಟಾವಿಗೆ ಬಂದಿದ್ದ ಬೆಳೆಗಳು ನೆಲಕಚ್ಚಿವೆ. ತರಕಾರಿ ಬೆಳೆಗಳು ಕಟಾವಿಗೆ ಬಂದಿದ್ದು, ಕೊಯ್ಲು ಮಾಡಲು ಸಾಧ್ಯವಾಗದಂತಾಗಿದೆ. ಸತತ ಮಳೆಯಿಂದ ಹೊಲದಲ್ಲಿ ನೀರು ನಿಂತಿರುವುದರಿಂದ ಬೆಳೆ ಹಾನಿ ಸಮೀಕ್ಷೆ ನಡೆಸಲು ತೊಂದರೆಯಾಗಿದೆ.

ಕೊಳೆಯುತ್ತಿರುವ ಮೆಕ್ಕೆ ಜೋಳ
ದಾವಣಗೆರೆ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಶೀತ ಹೆಚ್ಚಾಗಿ ಬೆಳೆಗಳು ಕೊಳೆಯುವ ಹಂತಕ್ಕೆ ಬಂದಿವೆ. ಕೆಲವೆಡೆ ಬಿತ್ತನೆ ಮಾಡುವುದಕ್ಕೂ ಸಾಧ್ಯವಾಗದ ಸ್ಥಿತಿ. ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುವ ಜಿಲ್ಲೆಯ ಅನೇಕ ಭಾಗದಲ್ಲಿ ನೀರು ನಿಂತಿರುವ ಪರಿಣಾಮ ಇಳುವರಿ ಕುಂಠಿತವಾಗಲಿದೆ. ಮೇ ಕೊನೆ ಮತ್ತು ಜೂನ್‌ ಮೊದಲ ವಾರ ಬಿತ್ತಿರುವ ಮೆಕ್ಕೆಜೋಳ ಸೂಲಂಗಿ ಹಂತಕ್ಕೆ ಬಂದಿದೆ. ತಗ್ಗು ಪ್ರದೇಶದ ಹೊಲಗಳಲ್ಲಿನ ಮೆಕ್ಕೆಜೋಳ, ಜೋಳ, ಅಕ್ಕಡಿ ಬೆಳೆಗಳಾದ ತೊಗರಿ, ಹೆಸರು ಶೀತದ ಬಾಧೆಗೆ ಕೊಳೆಯುತ್ತಿವೆ. ದಾವಣಗೆರೆ ತಾಲೂಕಿನ ಮಾಯಕೊಂಡ, ಬಾಡ, ಅತ್ತಿಗೆರೆ ಇತರೆ ಭಾಗದಲ್ಲಿ ಬಿತ್ತನೆ ಮಾಡಿರುವ ಬೆಳೆ ನಾಶಪಡಿಸಿ ಬೇರೆ ಬೆಳೆಯತ್ತ ರೈತರು ಮುಖ ಮಾಡಿದ್ದಾರೆ. ಹೊನ್ನಾಳಿ, ನ್ಯಾಮತಿ ಭಾಗದಲ್ಲಿ ಅತಿ ಮಳೆಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ.

ಕಟಾವಿಗೆ ಬಂದಿದ್ದ ಬೆಳೆ ಹಾನಿ
ಬೆಳಗಾವಿ: ನಿರಂತರ ಮಳೆ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಕಟಾವಿಗೆ ಬಂದಿದ್ದ ಹೆಸರು, ಉದ್ದು ಬೆಳೆ ಹಾಳಾಗಿದ್ದರೆ; ಬೆಳೆದು ನಿಂತಿದ್ದ ಹತ್ತಿ, ಮೆಕ್ಕೆಜೋಳ ಬೆಳೆಗಳು ನೀರುಪಾಲಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ಪ್ರತಿಶತ ಶೇ.98 ಬಿತ್ತನೆಯಾಗಿದೆ. ಆದರೆ ವ್ಯಾಪಕ ಮಳೆ ರೈತರನ್ನು ಮತ್ತೆ ಆತಂಕಕ್ಕೆ ದೂಡಿದೆ. ಹೊಲದಲ್ಲಿ ನೀರು ನಿಂತಿರುವುದರಿಂದ ಬೆಳೆ ಹಾನಿ ಸಮೀಕ್ಷೆಗೆ ತೊಂದರೆಯಾಗಿದೆ. ರಾಮದುರ್ಗ-ಸವದತ್ತಿ ತಾಲೂಕುಗಳಲ್ಲಿ ಹೆಸರು, ಉದ್ದು ಕಟಾವಿಗೆ ಬಂದಿದ್ದವು. ಆದರೆ ಮಳೆಯ ಪರಿಣಾಮ ಈ ಬೆಳೆಗಳು ನಷ್ಟಕ್ಕೆ ತುತ್ತಾಗಿವೆ. ಈಗಿನ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ ಬೆಳೆಗಳು ಹಾನಿಗೊಳಗಾಗಿವೆ. 134 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳು ನೀರು ಪಾಲಾಗಿವೆ.

ಕಾಫಿನಾಡಲ್ಲಿ ಬೆಳೆಗೆ ಮಳೆ ಆತಂಕ
ಚಿಕ್ಕಮಗಳೂರು: ಅತಿಯಾದ ಮಳೆಯಿಂದ ಕಾಫಿಗೆ ಕೊಳೆರೋಗ ಬಾ ಧಿಸುವ ಆತಂಕ ಎದುರಾಗಿದೆ. ಉಪಬೆಳೆಯಾದ ಕಾಳುಮೆಣಸು ಬೆಳೆಗೂ ಕೊಳೆರೋಗ ತಗಲುವ ಭೀತಿ ಎದುರಾಗಿದೆ. ಕೊಳೆರೋಗ ತಡೆಗಟ್ಟಲು ಸಕಾಲದಲ್ಲಿ ಬೋಡೋì ದ್ರಾವಣ ಸಿಂಪಡಣೆಗೂ ಮಳೆ ಅಡ್ಡಿಯಾಗಿದೆ. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಭಾಗದಲ್ಲಿ ನಿರಂತರ ಮಳೆ, ಶೀತ ವಾತಾವರಣದಿಂದ ಅಡಕೆಗೆ ಕೊಳೆರೋಗ ಬಾ ಧಿಸುವ ಆತಂಕ ಎದುರಾಗಿದೆ. ಇದರಿಂದ ಬೋಡೋì ದ್ರಾವಣ ಸಿಂಪಡಣೆಗೆ ಅಡ್ಡಿಯಾಗಿದೆ. ಅಡಕೆ ಕಾಯಿ ಉದುರುತ್ತಿದ್ದು ಇಳುವರಿ ಕಡಿಮೆಯಾಗುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಭತ್ತ ನಾಟಿ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ. ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ತರಕಾರಿ ಬೆಳೆಗಳು ಕಟಾವಿಗೆ ಬಂದಿದ್ದು, ಕೊಯ್ಲು ಮಾಡಲು ಸಾಧ್ಯವಾಗದಂತಾಗಿದೆ.

ರೈತರಿಗೆ ಕಣ್ಣೀರು ತರಿಸಿದ ಮಳೆ
ಶಿವಮೊಗ್ಗ: ಜಿಲ್ಲೆಯಲ್ಲಿ 45,797 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು ಜುಲೈನಲ್ಲಿ ಸುರಿದ ಮಳೆಗೆ 2,316 ಹೆಕ್ಟೇರ್‌, ಆಗಸ್ಟ್‌ನಲ್ಲಿ ಈವರೆಗೆ 230 ಹೆಕ್ಟೇರ್‌ ಬೆಳೆ ನಾಶವಾಗಿದೆ. ಪ್ರವಾಹಕ್ಕೆ ಸಿಲುಕಿ ಹಾಳಾಗಿರುವ ಬೆಳೆ ಒಂದೆಡೆಯಾದರೆ ಮೊಳಕೆಯೊಡೆದ ಸಸಿಗಳು ಚಿಗುರದಿರುವುದು ಮತ್ತೂಂದು ಸಮಸ್ಯೆ. 33,768 ಹೆಕ್ಟೇರ್‌ ಭತ್ತ ಬಿತ್ತನೆ ಮಾಡಲಾಗಿದ್ದು ಮಳೆಯಿಂದ ಯಾವುದೇ ತೊಂದರೆ ಆಗಿಲ್ಲ. ಮಳೆ ಕಾರಣಕ್ಕೆ ಬೆಳೆ ಸಮೀಕ್ಷೆಗೆ ತೀವ್ರ ಹಿನ್ನಡೆಯಾಗಿದೆ. 4 ಲಕ್ಷ ಬೆಳೆ ಸಮೀಕ್ಷೆಯಲ್ಲಿ ಈವರೆಗೆ ಆಗಿರುವುದು 4 ಸಾವಿರ ಮಾತ್ರ.

ಬದಲಾದ ಹವಾಮಾನ: ಬೆಳೆಗಳಿಗೆ ಕುತ್ತು
ಕಲಬುರಗಿ: ಸತತ ಮಳೆ, ಸೂರ್ಯೋದಯ ಕಾಣದ ಹಿನ್ನೆಲೆಯಲ್ಲಿ ಬೆಳೆಗಳು ಬೆಳವಣಿಗೆಯಿಂದ ಕುಂಠಿತಗೊಂಡಿವೆ. ತೊಗರಿ ನೆಲದ ಮೇಲಿಂದ ಮೊಣಕಾಲು ಮಟ್ಟದವರೆಗೂ ಸಹ ಬೆಳೆದಿಲ್ಲ. ಸತತ ಮಳೆಯಿಂದ ಬೇರುಗಳೆಲ್ಲ ನೀರಲ್ಲಿ ಕೊಳೆಯುವಂತಾಗಿದೆ. ಒಟ್ಟಾರೆ ತೊಗರಿ ಬೆಳೆ ಕೈಗೆ ಬಾರದಂತಾಗಿದೆ. ಬೆಳೆಗಳಿಗೆ ಈ ಮೊದಲು ಬಸವನಹುಳು ಹಾಗೂ ಹಂದಿಗಳ ಕಾಟ ಎದುರಾಗಿದ್ದರೆ ಈಗ ವರುಣನ ಕಾಟ. ತೊಗರಿಯಿಂದ ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆ ಕಡಿಮೆಯಾಗಿ ಆ ಜಾಗದಲ್ಲಿ ಸೋಯಾಬಿನ್‌ ಬಿತ್ತನೆಯಾಗಿದೆ. ಆದರೆ ಸತತ ಮಳೆಗೆ ಸೋಯಾಬಿನ್‌ ಬೆಳೆ ಹಳದಿ ರೋಗಕ್ಕೆ ತಿರುಗಿದೆ. ಇನ್ನುಳಿದಂತೆ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಸಹ ಸತತ ಮಳೆಗೆ ಕೊಳೆತು ಹೋಗುತ್ತಿವೆ.

ಮಳೆಗೆ 265 ಹೆಕ್ಟೇರ್‌ ಬೆಳೆಹಾನಿ
ಕೊಪ್ಪಳ: ಕೃಷಿ, ತೋಟಗಾರಿಕೆ ಸೇರಿ ಒಟ್ಟು 265 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಗೀಡಾಗಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಭತ್ತ, ಮೆಕ್ಕೆಜೋಳ ಬೆಳೆಯೇ ಹೆಚ್ಚು ಹಾನಿಗೀಡಾಗಿದೆ. ಭತ್ತ 204 ಹೆಕ್ಟೇರ್‌ ಹಾನಿಯಾಗಿದ್ದರೆ, ಮೆಕ್ಕೆಜೋಳ 14 ಹೆಕ್ಟೇರ್‌, ಸಜ್ಜೆ 1.2 ಹೆಕ್ಟೇರ್‌, ಹೆಸರು 14 ಹೆಕ್ಟೇರ್‌, ಹತ್ತಿ 0.4 ಹೆಕ್ಟೇರ್‌ ಹಾನಿಯಾಗಿದೆ. ಮೆಣಸಿನ ಗಿಡ, ಟೊಮ್ಯಾಟೋ, ಈರುಳ್ಳಿ ಸೇರಿ ಒಟ್ಟು 31 ಹೆಕ್ಟೇರ್‌ ಪ್ರದೇಶ ಬೆಳೆ ಹಾನಿಗೀಡಾಗಿದೆ. ಕೆಲವೊಂದು ಹೋಬಳಿಯಲ್ಲಿ ಅತಿಯಾದ ಮಳೆಯಾಗಿದೆ. ಅತಿಯಾದ ಮಳೆಯಿಂದ ಮೆಕ್ಕೆಜೋಳ, ಭತ್ತದ ಬೆಳೆ ಕೊಳೆಯಲಾರಂಭಿಸಿದೆ. ಜಿಲ್ಲಾಡಳಿತವು ಬೆಳೆ ಹಾನಿ ಸಮೀಕ್ಷೆ ಕೈಗೊಂಡಿದೆ. ವರದಿಯ ಪೂರ್ಣ ಚಿತ್ರಣ ಬರುವುದು ಬಾಕಿಯಿದೆ.

ಹಳದಿಯಾದ ಶೇಂಗಾ ಬೇಳೆ
ಹಾವೇರಿ: ಜಿಲ್ಲೆಯಲ್ಲಿ ಮೆಣಸಿನಕಾಯಿ, ಹತ್ತಿ, ಶೇಂಗಾ, ಗೋವಿನಜೋಳ, ಟೊಮೆಟೋ ಸೇರಿ ತೋಟಗಾರಿಕೆ ಬೆಳೆ ದೊಡ್ಡ ಪ್ರಮಾಣದಲ್ಲಿ ಹಾನಿಗೀಡಾಗಿದೆ. ಮಳೆಯಿಂದಾಗಿ ಕೃಷಿ ಅ ಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳದ ಸ್ಥಿತಿ ಎದುರಾಗಿದೆ. ತೇವಾಂಶ ಹೆಚ್ಚಾಗಿ ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಗಳು ಕಂದು ಹಾಗೂ ಹಳದಿ ಬಣ್ಣಕ್ಕೆ ತಿರುಗಿವೆ. ಈರುಳ್ಳಿ, ಬೆಳ್ಳುಳ್ಳಿ ಬೆಳೆಯಲ್ಲಿ ಕಳೆ ಹೆಚ್ಚಾಗಿದೆ. ಮೆಕ್ಕೆಜೋಳ 1740 ಹೆಕ್ಟೇರ್‌, ಶೇಂಗಾ 22 ಹೆಕ್ಟೇರ್‌, ಸೋಯಾಬಿನ್‌ 192 ಹೆಕ್ಟೇರ್‌, ಹತ್ತಿ 151 ಹೆಕ್ಟೇರ್‌ ಸೇರಿದಂತೆ 9,372 ಹೆಕ್ಟೇರ್‌ ಬೆಳೆ ಹಾನಿ, 724 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಕುರಿತು ಅಧಿಕಾರಿಗಳು ವರದಿ ನೀಡಿದ್ದರು. ಈ ವರದಿ ವಾಸ್ತವಾಂಶ ಒಳಗೊಂಡಿಲ್ಲ ಎನಿಸುತ್ತದೆ. ಈ ಕುರಿತಂತೆ ಪುನರ್‌ ಪರಿಶೀಲನೆ ನಡೆಸಿ ನಿಖರ ವರದಿ ನೀಡಬೇಕೆಂದು ಕೃಷಿ ಇಲಾಖೆ ಅಧಿ ಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

ಕೈಕೊಟ್ಟ ಅಲಸಂದೆ, ಉದ್ದು ಬೇಳೆ
ಮೈಸೂರು: ಮಳೆಯಿಂದಾಗಿ 199 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಭತ್ತ, ಮುಸುಕಿನ ಜೋಳ, ಅಲಸಂದೆ, ಉದ್ದು ಬೆಳೆ ಕೈಕೊಟ್ಟಿದೆ. ಹೊಗೆಸೊಪ್ಪು ಬೆಳೆ ಕೂಡ ಹಾನಿಗೀಡಾಗಿದೆ. ಕೃಷ್ಣರಾಜ ಸಾಗರ ಹಾಗೂ ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ನಾಶವಾಗಿದೆ. ಎಣ್ಣೆಕಾಳುಗಳು, ಕೆಲವು ದ್ವಿದಳ ಧಾನ್ಯಗಳ ಬೆಳೆ ಈಗಾಗಲೇ ಕೆಲವು ಪ್ರದೇಶಗಳಲ್ಲಿ ಕಟಾವು ಆಗಿದೆ. ಜಿಲ್ಲೆಯಲ್ಲಿ ಬಿತ್ತನೆ ಗುರಿಯಲ್ಲಿ ಶೇ.59 ಸಾಧಿಸಲಾಗಿದೆ. ಜೋಳ-ಹೈಬ್ರಿàಡ್‌, ಮುಸುಕಿನ ಜೋಳ, ಚಿಯಾ, ಅಲಸಂದೆ, ಉದ್ದು, ಹೆಸರು, ನೆಲಗಡಲೆ, ಎಳ್ಳು, ಹತ್ತಿ, ಹೊಗೆಸೊಪ್ಪು ಬೆಳೆ ಬೆಳೆಯಲಾಗಿದೆ ಎಂದು ಮೈಸೂರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್‌.ಚಂದ್ರಶೇಖರ್‌ ತಿಳಿಸಿದ್ದಾರೆ.

9497 ಹೆಕ್ಟೇರ್‌ ಕೃಷಿ ಬೆಳೆ ಹಾನಿ
ವಿಜಯಪುರ: ನಿರಂತರ ಮಳೆ ಹಾಗೂ ಡೋಣಿ ನದಿ ಪ್ರವಾಹದಿಂದಾಗಿ ಪ್ರಾಥಮಿಕ ವರದಿ ಪ್ರಕಾರ 9497 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ಕೃಷಿ ಬೆಳೆ ಹಾನಿಯಾಗಿದೆ. ತೊಗರಿ, ಹತ್ತಿ, ಸೂರ್ಯಕಾಂತಿ, ಮೆಕ್ಕೆಜೋಳ, ಹೆಸರು ಅತಿ ಹೆಚ್ಚು ಹಾನಿಯಾದ ಬೆಳೆ. ತೋಟಗಾರಿಕೆ ಬೆಳೆಗಳಲ್ಲಿ ಬಹು ವಾರ್ಷಿಕ ಬೆಳೆಗಳಾದ ದ್ರಾಕ್ಷಿ ನಾಲ್ಕು ಹೆಕ್ಟೇರ್‌, ಲಿಂಬೆ ಎರಡು ಎಕರೆ ಮಾತ್ರ ಹಾನಿಯ ಅಂದಾಜಿದೆ. ಆದರೆ ವಾರ್ಷಿಕ ಬೆಳೆ ಈರುಳ್ಳಿ 236 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದದ್ದು ಹಾನಿಯಾಗಿದೆ ಎಂದು ತೋಟಗಾರಿಕೆ ಬೆಳೆ ಹಾನಿಯ ಪ್ರಾಥಮಿಕ ಅಂದಾಜು ಮಾಡಲಾಗಿದೆ. ಪ್ರವಾಹ ತಗ್ಗುತ್ತಲೇ ಡೋಣಿ ನದಿ ತೀರದಲ್ಲಿ ಜಂಟಿ ಸಮೀಕ್ಷೆಗೆ ಜಿಲ್ಲಾಡಳಿತ ಸೂಚಿಸಿದೆ.

ಹತ್ತಿ ಬೆಳೆಗೆ ಹಾನಿ
ರಾಯಚೂರು: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಜಿಲ್ಲೆಯಲ್ಲಿ ಹತ್ತಿ ಬಿತ್ತನೆ ಹೆಚ್ಚಾಗಿ ಮಾಡಿದ್ದು, ಸತತ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತು ಕಾಂಡ ಕೊಳೆಯುವ ಭೀತಿಯಿದೆ. ಅದರ ಜತೆ ಕಸ ಹೆಚ್ಚಾಗುತ್ತಿದ್ದು, ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಜಮೀನು ಹಸಿಯಾಗಿದ್ದು, ಕೂಲಿ ಕಾರ್ಮಿಕರು ಓಡಾಡುವುದು ಕಷ್ಟದ ಸ್ಥಿತಿಯಿದೆ. ಸಿರವಾರ, ಹಟ್ಟಿ, ಮಸ್ಕಿ, ಮುದಗಲ್‌ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಭತ್ತ ಬೆಳೆ ಹಾನಿಯಾಗಿದೆ. ರಾಯಚೂರು ತಾಲೂಕಿನ ಕಲಮಲ, ಶಕ್ತಿನಗರ ಹೋಬಳಿಯಲ್ಲಿ ಇಳುವರಿ ಕುಂಠಿತಗೊಳ್ಳುವ ಭೀತಿ ಶುರುವಾಗಿದೆ. ಮಳೆ ಸಂಪೂರ್ಣ ಕಡಿಮೆಯಾದ ಮೇಲೆ ಬೆಳೆ ಹಾನಿ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದು ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.

ಹುಲುಸಾಗಿದ್ದ ಬೆಳೆ ಮಣ್ಣುಪಾಲು
ಬೀದರ: ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್‌ಗೂ ಅಧಿ ಕ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನೀರು ಪಾಲಾಗಿದೆ. ಆರಂಭದಲ್ಲಿ ಬಸವನ (ಶಂಖದ) ಹುಳು ಬಾಧೆಯಿಂದ ಬೆಳೆ ಕಳೆದುಕೊಂಡು ಹಲವೆಡೆ ರೈತರು ಮರು ಬಿತ್ತನೆ ಮಾಡಿ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ. ಈಗ ನಿರಂತರ ಮಳೆಯಿಂದ ಮತ್ತಷ್ಟು ಹೊರೆಯಾಗಿದೆ. ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಜಮೀನು ಜಲಾವೃತವಾಗಿದ್ದು, ಹುಲುಸಾಗಿ ಬೆಳೆದಿದ್ದ ಬೆಳೆ ಮಣ್ಣು ಪಾಲಾಗಿದೆ. ಸೋಯಾಬಿನ್‌, ತೊಗರಿ ಬೆಳೆ ಹಾನಿಯಾಗಿದೆ. ಪ್ರಾಥಮಿಕ ವರದಿಯಂತೆ ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್‌ನಷ್ಟು ಹಾನಿಯಾಗಿದೆ.

78 ಕೋಟಿ ಹಾನಿ ಸಂಭವ
ಯಾದಗಿರಿ: ಮಳೆ ಅವಾಂತರಕ್ಕೆ ಜಿಲ್ಲೆಯ ಜನ ನಲುಗಿ ಹೋಗಿದ್ದಾರೆ. ಬೆಳೆ ಹಾನಿ ಜತೆ ಮನೆಗಳೂ ಹಾನಿಯಾಗಿವೆ. ಜಿಲ್ಲೆಯಲ್ಲಿ ಬೆಳೆ ಹಾನಿ, ಮನೆ ಹಾನಿ ಹಾಗೂ ಇನ್ನಿತರ ಹಾನಿ ಸೇರಿ 78 ಕೋಟಿ ರೂ. ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಜೂನ್‌ನಿಂದ ಇಲ್ಲಿವರೆಗೆ 29.9 ಮಿ.ಮೀ. ಮಳೆಯಾಗಬೇಕಿತ್ತು ಆದರೆ, 120 ಮಿ.ಮೀ. ಮಳೆಯಾಗಿದೆ. ಸಿಡಿದು ಬಡಿದು ಇಬ್ಬರು ಮೃತಪಟ್ಟಿದ್ದು, 9 ಪ್ರಾಣಿಗಳು ಬಲಿಯಾಗಿವೆ. ಒಂದು ವಾರದಿಂದ ಸುರಿದ ಮಳೆಗೆ 289 ಮನೆಗಳು ಕುಸಿದಿವೆ. ಹಾನಿಯಾದವರಿಗೆ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತದಿಂದ ಮಾಹಿತಿ ಲಭ್ಯವಾಗಿದೆ.

ನೆಲಕಚ್ಚಿದ ಜೋಳ, ತೊಗರಿ, ಎಲೆಕೋಸು
ಕೋಲಾರ: ಸುಮಾರು 300 ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕೆ ಬೆಳೆ ನಾಶವಾಗಿದೆ. ಸೋಮವಾರದವರೆಗಿನ ವರದಿಗಳ ಪ್ರಕಾರ ಸುಮಾರು 200 ಹೆಕ್ಟೇರ್‌ನಷ್ಟು ಕೃಷಿ ಬೆಳೆ ನಾಶವಾಗಿದ್ದರೆ, 100 ಹೆಕ್ಟೇರ್‌ನಷ್ಟು ವಿವಿಧ ತೋಟಗಾರಿಕೆ ಬೆಳೆ ನಾಶವಾಗಿದೆ. 163.8 ಹೆಕ್ಟೇರ್‌ ರಾಗಿ, ಟೊಮೆಟೋ 50 ಹೆಕ್ಟೇರ್‌ನಷ್ಟು ನಷ್ಟವಾಗಿದೆ. ಜೋಳ 2 ಹೆಕ್ಟೇರ್‌, ಭತ್ತ 4 ಹೆಕ್ಟೇರ್‌, ಕಳ್ಳೇಕಾಯಿ 4 ಹೆಕ್ಟೇರ್‌, ತೊಗರಿ 17 ಹೆಕ್ಟೇರ್‌, ತೋಟಗಾರಿಕೆ ಬೆಳೆಗಳಾದ ಹಸಿರು ಮೆಣಸಿನಕಾಯಿ, ಎಲೆ ಕೋಸು, ಹೂ ಕೋಸು, ಬೀಟ್ರೋಟ್‌, ಹೂ ಬೆಳೆ ಸೇರಿದಂತೆ 50 ಹೆಕ್ಟೇರ್‌ ಬೆಳೆಗಳು ನಾಶವಾಗಿದೆ.

ರಾಗಿ ಹೊಲದಲ್ಲಿ ನೀರು
ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ, ತಿಪಟೂರು, ಕುಣಿಗಲ್‌, ತುಮಕೂರು ಮತ್ತಿತರೆ ತಾಲೂಕಿನಲ್ಲಿ ರಾಗಿಯೇ ಪ್ರಧಾನ ಬೆಳೆ. ಆದರೆ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿದೆ. ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿ ಶೇಂಗಾ ಬಿತ್ತನೆಯೂ ಕುಂಠಿತವಾಗಿದೆ. ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಲು ಮುಂದಾದರೂ ಸುರಿಯುತ್ತಿರುವ ಮಳೆಯಿಂದ ಬೆಳೆ ನಷ್ಟ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಇಲ್ಲಿಯವರೆಗೆ ಬಂದಿರುವ ನಷ್ಟದ ವರದಿ ಪ್ರಕಾರ ಜಿಲ್ಲೆಯಲ್ಲಿ 484.54 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಮುಸುಕಿನ ಜೋಳ ನಾಶ
ಚಿಕ್ಕಬಳ್ಳಾಪುರ: ಮಳೆಯಿಂದಾಗಿ ಬಹುತೇಕ ಕೆರೆ, ಕುಂಟೆ, ಕಲ್ಯಾಣಿ, ಚೆಕ್‌ಡ್ಯಾಂಗಳು ತುಂಬಿ ಕೋಡಿ ಹರಿಯುತ್ತಿದೆ. ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ಜನಜೀವನದ ಜೊತೆಗೆ ರೈತರ ನೆಮ್ಮದಿ ಹಾಳಾಗಿದೆ. ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನಲ್ಲಿ ಬೆಳೆದಿದ್ದ ಮುಸುಕಿನ ಜೋಳ 37.95 ಹೆಕ್ಟೇರ್‌ ನಾಶವಾಗಿದೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳಿಂದ ದೃಢಪಟ್ಟಿದೆ. ಜಿಲ್ಲೆಯಲ್ಲಿ ಭತ್ತ 1.19, ರಾಗಿ 02, ಮುಸುಕಿನಜೋಳ 37.95, ಕಡಲೆಕಾಯಿ 1.7 ಸಹಿತ 42.84 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳು ನಾಶವಾಗಿದೆ.

ಕಾಫಿ , ಮೆಣಸು ಬೆಳೆಗಳಿಗೂ ಹಾನಿ
ಹಾಸನ: ವರುಣಾರ್ಭಟಕ್ಕೆ ಜಿಲ್ಲೆಯಲ್ಲಿ ಒಟ್ಟು 2166 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಆಲೂಗಡ್ಡೆ ಬೆಳೆ ಗಡ್ಡೆ ಕಟ್ಟುವ ಹಂತದಲ್ಲಿ ಹೊಲಗಳಲ್ಲಿ ನೀರು ನಿಂತು ಕೊಳೆಯಲಾರಂಭಿಸಿದೆ. 770 ಹೆಕ್ಟರ್‌ನಷ್ಟು ಬೆಳೆ ಹಾನಿಯಾಗಿದೆ. ಶುಂಠಿ, ತರಕಾರಿ, ಬಾಳೆ ಸೇರಿ 1100 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಹಾನಿಯ ಪ್ರಮಾಣ ಇನ್ನೂ ಹೆಚ್ಚಾಗಲಿದ್ದು, ಸಮೀಕ್ಷೆ ಮುಂದುವರಿದಿದೆ. ಕಾಫಿ , ಮೆಣಸು ಬೆಳೆಗಳಿಗೂ ಹಾನಿಯಾಗಿದೆ. ಕಾಫಿ ಮಂಡಳಿಯ ಅಂದಾಜಿನ ಪ್ರಕಾರ ಶೇ.30 ಕಾಫಿ ಬೆಳೆಗೆ ಹಾನಿಯಾಗಿದೆ.

1140 ಹೆಕ್ಟೇರ್‌ ಬೆಳೆ ನಾಶ
ಮಂಡ್ಯ: ಮಳೆಯಿಂದ ಜಿಲ್ಲೆಯಾದ್ಯಂತ ಆ.7ರವರೆಗೆ 1140.75 ಹೆಕ್ಟೇರ್‌ ಪ್ರದೇಶ ಬೆಳೆ ನಾಶವಾಗಿದೆ. ಇದರಲ್ಲಿ ಕೃಷಿ ಬೆಳೆ 187.60 ಹೆಕ್ಟೇರ್‌ ಪ್ರದೇಶ ನಾಶವಾದರೆ, ತೋಟಗಾರಿಕೆ ಬೆಳೆ 953.15 ಹೆಕ್ಟೇರ್‌ ಪ್ರದೇಶ ಹಾನಿಯಾಗಿದೆ. ಒಟ್ಟು 4.56 ಕೋಟಿ ರೂ. ನಷ್ಟ ಸಂಭವಿಸಿದೆ. ಕೃಷಿ ಬೆಳೆಗೆ 2.06 ಕೋಟಿ ರೂ., ತೋಟಗಾರಿಕೆ ಬೆಳೆ 2.50 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಿದೆ.

150 ಹೆಕ್ಟೇರ್‌ ಬೆಳೆ ಹಾಳು
ರಾಮನಗರ: ಕೃಷಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಾದ್ಯಂತ ಬಿತ್ತನೆ ಮಾಡಲಾಗಿದ್ದ 22,299 ಹೆಕ್ಟೇರ್‌ನಲ್ಲಿ 150 ಹೆಕ್ಟೇರ್‌ ಬೆಳೆ ಹಾಳಾಗಿದೆ. ಅದರಲ್ಲಿ 91 ಹೆಕ್ಟೇರ್‌ ರಾಗಿ ಬೆಳೆ, ಮುಸುಕಿನ ಜೋಳ 30 ಹೆಕ್ಟೇರ್‌, ನೆಲಗಡಲೆ 20 ಹೆಕ್ಟೇರ್‌ಪ್ರದೇಶದಲ್ಲಿ ನಾಶವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ವಾಣಿಜ್ಯ ಬೆಳೆಗಳೂ ಮಣ್ಣು ಪಾಲಾಗಿದೆ. ರಾಮಗನಗರ, ಚನ್ನಪಟ್ಟಣ, ಮಾಗಡಿಯಲ್ಲಿ 212 ಹೆಕ್ಟೇರ್‌ ವಾಣಿಜ್ಯ ಬೆಳೆ ನಾಶವಾಗಿದೆ.

ಬೆಳೆಹಾನಿ ಸಮೀಕ್ಷೆಗೆ ಮಳೆ ಅಡ್ಡಿ
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಮಾಹಿತಿಯಂತೆ ಆ. 7ರ ವರೆಗೆ 228.29 ಹೆ.ಕೃಷಿ ಹಾಗೂ 25.62 ಹೆ. ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿವೆ. ಭಾರೀ ಮಳೆ ಇನ್ನೂ ಮುಂದುವರಿದಿರುವ ಕಾರಣ ಮಳೆ ನಿಂತು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ಬಳಿಕವಷ್ಟೆ ನಿಖರವಾಗಿ ಬೆಳೆ ಹಾನಿಯನ್ನು ಅಂದಾಜಿಸಬಹುದಾಗಿದೆ. ಬೆಳೆ ಹಾನಿ ಸಮೀಕ್ಷೆ ಮುಂದುವರಿದಿದ್ದು ಬಹಳಷ್ಟು ಕೃಷಿ ಮತ್ತು ತೋಟಗಾರಿಕಾ ಪ್ರದೇಶಗಳಲ್ಲಿ ಇನ್ನೂ ನೀರು ಆವರಿಸಿರುವ ಹಿನ್ನೆಲೆಯಲ್ಲಿ ಹಾನಿ ಸಮೀಕ್ಷೆ ಸಾಧ್ಯವಾಗುತ್ತಿಲ್ಲ.

ಕೈಗೆ ಬಾರದ ತೊಗರಿ
ಕಲಬುರಗಿ: ಸತತ ಮಳೆ, ಸೂರ್ಯೋದಯ ಕಾಣದ ಹಿನ್ನೆಲೆಯಲ್ಲಿ ಬೆಳೆಗಳು ಬೆಳವಣಿಗೆಯಿಂದ ಕುಂಠಿತಗೊಂಡಿವೆ. ತೊಗರಿ ನೆಲದ ಮೇಲಿಂದ ಮೊಣಕಾಲು ಮಟ್ಟದವರೆಗೂ ಸಹ ಬೆಳೆದಿಲ್ಲ. ಸತತ ಮಳೆಯಿಂದ ಬೇರುಗಳೆಲ್ಲ ನೀರಲ್ಲಿ ಕೊಳೆಯುವಂತಾಗಿದೆ. ಒಟ್ಟಾರೆ ತೊಗರಿ ಬೆಳೆ ಕೈಗೆ ಬಾರದಂತಾಗಿದೆ. ಬೆಳೆಗಳಿಗೆ ಈ ಮೊದಲು ಬಸವನಹುಳು ಹಾಗೂ ಹಂದಿಗಳ ಕಾಟ ಎದುರಾಗಿದ್ದರೆ ಈಗ ವರುಣನ ಕಾಟ.ಸತತ ಮಳೆಗೆ ಸೋಯಾಬಿನ್‌ ಬೆಳೆ ಹಳದಿ ರೋಗಕ್ಕೆ ತಿರುಗಿದೆ.

ಭತ್ತ, ಜೋಳ ಬೆಳೆ ನಾಶ
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ 663.86 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಮೆಕ್ಕೆಜೋಳ ಹಾನಿಯಾಗಿದೆ. ಭಟ್ಕಳ, ಹೊನ್ನಾವರ, ಸಿದ್ದಾಪುರ, ಶಿರಸಿ ಭಾಗದಲ್ಲಿ ಹಾಗೂ ಜೋಯಿಡಾ, ಯಲ್ಲಾಪುರ ಭಾಗದಲ್ಲಿ ಭತ್ತದ ನಾಟಿ ಮುಗಿದಿತ್ತು. ಆದರೆ ಭತ್ತ ಬೆಳೆದು ನಿಲ್ಲುವ ಹೊತ್ತಿಗೆ ವಾರಗಟ್ಟಲೆ ಸುರಿದ ಮಳೆ ಹಾಗೂ ನೆರೆಯಿಂದಾಗಿ ಸಂಪೂರ್ಣ ನಾಶವಾಗಿದೆ. ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರದಲ್ಲಿ ಭತ್ತಕ್ಕೆ ಹೆಚ್ಚು ಹಾನಿಯಾದರೆ, ದಾಂಡೇಲಿ ತಾಲೂಕಿನಲ್ಲಿ ಕಬ್ಬು, ಮುಂಡಗೋಡದಲ್ಲಿ ಮೆಕ್ಕೆಜೋಳ ಹಾನಿಯಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿದ್ದು, ಮಳೆ ಕಡಿಮೆಯಾದ ನಂತರ ನಿಖರ ಮಾಹಿತಿ ದೊರೆಯಲಿದೆ.

ಸೂರ್ಯಕಾಂತಿ, ಶೇಂಗಾ ನಾಶ
ಗದಗ: ಜಿಲ್ಲೆಯ ಪ್ರಮುಖ ಹೆಸರು ಬೆಳೆ ಸಂಪೂರ್ಣ ನೆಲಕಚ್ಚಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್‌ಗೂ ಅಧಿ ಕ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆ ಕಾಯಿ ಬಿಟ್ಟು ಕಟಾವು ಹಂತದಲ್ಲಿರುವಾಗಲೇ 69 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸಂಪೂರ್ಣ ನಾಶವಾಗಿದೆ. 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿ, ತಲಾ 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾದ ಸೂರ್ಯಕಾಂತಿ ಹಾಗೂ ಶೇಂಗಾ ಬೆಳೆಗಳು ಶೇ. 10ರಷ್ಟು ನಾಶವಾಗಿದೆ. ಇನ್ನೂ ಸರ್ವೇ ಕಾರ್ಯ ಮುಂದುವರಿದಿದೆ.

ಭತ್ತ, ಜೋಳ ಬಹುತೇಕ ನಾಶ
ಬಳ್ಳಾರಿ: ಮಳೆಗೆ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಲ್ಲಿ 780ಕ್ಕೂ ಹೆಚ್ಚು ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಅಂದಾಜು 1.6 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಭತ್ತದ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ. ವಿಜಯನಗರ ಜಿಲ್ಲೆಯಲ್ಲೂ 765.31 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 1.4 ಕೋಟಿ ರೂ. ನಷ್ಟವಾಗಿದೆ ಎಂದು ಸಮೀಕ್ಷೆಯಿಂದ ಅಂದಾಜಿಸಲಾಗಿದೆ. ಹಾನಿಯಾದ ಬೆಳೆಯಲ್ಲಿ ಶೇ.90ರಷ್ಟು ಮುಸುಕಿನ ಜೋಳ ನಷ್ಟವಾಗಿದ್ದು, ಇನ್ನುಳಿದ ಹತ್ತಿ, ಭತ್ತ, ರಾಗಿ, ಜೋಳ, ಸಜ್ಜೆ ಬೆಳೆ ಸಣ್ಣ ಪ್ರಮಾಣದಲ್ಲಿ ನಷ್ಟವಾಗಿದೆ.

ತೋಟಗಳು ಜಲಾವೃತ
ಚಾಮರಾಜನಗರ: ಜಿಲ್ಲೆಯಲ್ಲಿ ಒಟ್ಟು 677 ಎಕರೆ ಬೆಳೆ ಹಾನಿಗೀಡಾಗಿದೆ. ಈ ಪೈಕಿ 248 ಎಕರೆ ಕೃಷಿ ಬೆಳೆಗಳು ನಷ್ಟಕ್ಕೀಡಾಗಿದ್ದರೆ, 429 ಎಕರೆಯಷ್ಟು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಮೂರು ದಿನಗಳ ಹಿಂದೆಯಷ್ಟೇ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಮೇಲಂತೂ ತೋಟಗಾರಿಕೆ ಬೆಳೆಗಳಿಗೆ ಆದ ನಷ್ಟ ಹೆಚ್ಚಿದೆ. ಇವೆರಡು ಜಲಾಶಯಗಳ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ ಪರಿಣಾಮ ನೂರಾರು ಎಕರೆ ತೋಟಗಳು ಜಲಾವೃತಗೊಂಡಿವೆ.

ಹೆಸರು, ಸೋಯಾ, ಗೋವಿನಜೋಳ ನಷ್ಟ
ಧಾರವಾಡ: ಸತತ ಮಳೆಯಿಂದ ಧಾರವಾಡ ಜಿಲ್ಲೆಯ ಕೆಲವು ಬೆಳೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಹೆಸರು, ಸೋಯಾ ಮತ್ತು ಗೋವಿನಜೋಳದ ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ನವಲಗುಂದ ತಾಲೂಕಿನಲ್ಲಿ ಮುಂಗಾರು ಸಮಯಕ್ಕೆ ಸರಿಯಾಗಿ ಬಿತ್ತನೆಯಾದ ಹೆಸರು ಬೆಳೆಗೆ ಮಳೆಯ ಕಾಟ ತೀವ್ರವಾಗಿದ್ದು, ಹಳದಿ ಬಣ್ಣಕ್ಕೆ ತಿರುಗಿದೆ. ಅಷ್ಟೇಯಲ್ಲ, ಧಾರವಾಡ ತಾಲೂಕಿನಲ್ಲೂ ಸೋಯಾ ಅವರೆ ಈ ವರ್ಷ 3-4 ಅಡಿ ಎತ್ತರಕ್ಕೆ ಬೆಳೆದಿದ್ದು, ಭಾರಿ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಆತಂಕ ಶುರುವಾಗಿದೆ. ಜಿಲ್ಲಾಡಳಿತ ಇನ್ನು ಬೆಳೆಹಾನಿ ಸಮೀಕ್ಷೆ ಮಾಡಿಲ್ಲವಾದರೂ ಮಳೆಯ ಆವಾಂತರಕ್ಕೆ ಬೆಳೆನಷ್ಟವಂತೂ ಸಂಭವಿಸಿದೆ.

ಹೆಸರು, ಸೂರ್ಯಕಾಂತಿ ಬೆಳೆೆ ಹಾನಿ
ಬಾಗಲಕೋಟೆ: ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು ಬೆಳೆ ಮತ್ತು ಮನೆಗಳ ಹಾನಿ ಸಮೀಕ್ಷೆಗೂ ಮಳೆ ಬಿಡುತ್ತಿಲ್ಲ. ನಿರಂತರ ಮಳೆಗೆ ಹೆಸರು ಮತ್ತು ಸೂರ್ಯ ಕಾಂತಿ ಬೆಳೆಗೆ ಹಾನಿಯಾಗಿದೆ. ಇದು ಇನ್ನೂ ನಿಖರವಾಗಿ ಮಾಹಿತಿ ಸಿಕ್ಕಿಲ್ಲ. ಸ್ಥಳೀಯ ಮಟ್ಟದಲ್ಲಿ ಸಮೀಕ್ಷೆ ನಡೆಸಿ, ವರದಿ ನೀಡಲು ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.

415.97 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭತ್ತವೇ ಪ್ರಧಾನ ಬೆಳೆಯಾಗಿದೆ. ಈಗಾಗಲೇ ನೇಜಿ (ನಟ್ಟಿ) ಶುರುವಾದಾಗಲೇ ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಉಡುಪಿ, ಕುಂದಾಪುರ, ಬೈಂದೂರು, ಕಾಪು, ಬ್ರಹ್ಮಾವರ, ಹೆಬ್ರಿ, ಕಾರ್ಕಳ ಸಹಿತ ಎಲ್ಲ ತಾಲೂಕುಗಳಲ್ಲಿಯೂ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು.

ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ 415.97 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದ್ದು, ಸುಮಾರು 339.43 ಕೋ.ರೂ. ನಷ್ಟವಾಗಿದೆ. ಕಳೆದ ಒಂದು ವಾರದಲ್ಲಿ ಬೈಂದೂರು ಹಾಗೂ ಕುಂದಾಪುರ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದ ಇನ್ನಷ್ಟು ಬೆಳೆ ಹಾನಿಯಾಗಿದ್ದು, ತಾಲೂಕು ಹಂತದಲ್ಲಿ ಅದರ ಸಮೀಕ್ಷೆ ಕಾರ್ಯವೂ ನಡೆಯುತ್ತಿದೆ.

ಇನ್ನು ತೋಟಗಾರಿಕೆ ಬೆಳೆಯಲ್ಲಿ ಅಡಿಕೆ ಮತ್ತು ತೆಂಗು ಹೆಚ್ಚು ಬೆಳೆಯುತ್ತಿದ್ದು, ಒಟ್ಟಾರೆಯಾಗಿ 8.80 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ ಇದರಲ್ಲಿ ಅಡಿಕೆ ಬೆಳೆ ಪ್ರಮಾಣ ಹೆಚ್ಚಿದೆ. ತೆಂಗು, ಮಲ್ಲಿಗೆ ಸಹಿತ ವಿವಿಧ ತೋಟಗಾರಿಕೆ ಬೆಳೆಗಳು ಇದರಲ್ಲಿ ಸೇರಿಕೊಂಡಿವೆ. ಸುಮಾರು 10 ಕೋ.ರೂ.ಗಳಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಭತ್ತದ ಗದ್ದೆಗಳಲ್ಲಿ ನೀರು ಇಳಿದ ಅನಂತರದಲ್ಲಿ ಮರು ನೇಜಿ ಶುರುವಾಗಿದೆ. ಈಗ ಬಹುತೇಕ ಎಲ್ಲ ಗದ್ದೆಗಳಲ್ಲೂ ಬಿತ್ತನೆ ಪೂರ್ಣಗೊಂಡಿದೆ. ಆದರೆ, ಬೆಳೆ ನಷ್ಟದ ಪರಿಹಾರ ಇನ್ನು ಯಾವೊಬ್ಬ ರೈತರ ಕುಟುಂಬಕ್ಕೂ ಬಂದಿಲ್ಲ.

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.