ಸ್ವಾತಂತ್ರ್ಯ ಹೋರಾಟದ ಕಹಳೆಗೆ ಶಿಕ್ಷಣ ತೊರೆದು ಚಳವಳಿಗೆ ಧುಮುಕಿದ ಹಿರಿಯಡಕ ರಾಮರಾಯ ಮಲ್ಯ
Team Udayavani, Aug 14, 2021, 7:20 AM IST
ಗಾಂಧೀಜಿಯವರು ಮಂಗಳೂರಿನಲ್ಲಿ ಮೊಳಗಿಸಿದ್ದ ಸ್ವಾತಂತ್ರ್ಯ ಹೋರಾಟದ ಕಹಳೆಗೆ ಶಿಕ್ಷಣ ತೊರೆದು ಚಳವಳಿಗೆ ಧುಮುಕಿದವರು ಹಿರಿಯಡಕದ ರಾಮರಾಯ ಮಲ್ಯರು. ಇವರು ಪತ್ರಕರ್ತ, ಸ್ವಾತಂತ್ರ್ಯಯೋಧ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು.
ಸ್ವಾತಂತ್ರ್ಯ ಹೋರಾಟದ ಸ್ವಯಂ ಅನುಭವ ಆಧರಿಸಿದ ಇವರ ಕಾದಂಬರಿ “ವಾಲಂಟಿಯರ್ ಶ್ಯಾಮು’. ರಾಮರಾಯ ಮಲ್ಯರ ತಂದೆ ಶೇಷಗಿರಿ ಮಲ್ಯರ ಏಕಮಾತ್ರ ಪುತ್ರ. ಶೇಷಗಿರಿ ಮಲ್ಯರು ಪೆರ್ಡೂರು ದೇವಸ್ಥಾನದಲ್ಲಿ ಕರಣಿಕರಾಗಿದ್ದರು. ಊರಿನ ಖಾಸಗಿ ಶಾಲೆಯಲ್ಲಿ ಕನ್ನಡ-ಸಂಸ್ಕೃತ ಪ್ರಾಥಮಿಕ ಶಿಕ್ಷಣ ಪಡೆದ ಮಲ್ಯರು ಉಡುಪಿ ಮಿಶನ್ ಹೈಸ್ಕೂಲ್‌ನಲ್ಲಿ ಉತ್ತೀರ್ಣರಾದರು. ಬಳಿಕ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿಗೆ ಸೇರಿದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಕಾರ್ನಾಡು ಸದಾಶಿವ ರಾಯರು ಸತ್ಯಾಗ್ರಹಿ ಸೈನ್ಯದ ಮುಂಚೂಣಿಯಲ್ಲಿದ್ದರು. ಗಾಂಧಿ ಕರೆಗೆ ಓಗೊಟ್ಟು ಮಲ್ಯರು ಕಾಲೇಜು ಶಿಕ್ಷಣವನ್ನು ತ್ಯಜಿಸಿ ಚಳವಳಿಗೆ ಇಳಿದರು. ಜಿಲ್ಲೆಯಾದ್ಯಂತ ಸಂಚರಿಸಿ ತರಗತಿಗಳ ಬಹಿಷ್ಕಾರಕ್ಕೆ ಕರೆ ನೀಡಿದರು. ಇಂಥ ವಿದ್ಯಾರ್ಥಿಗಳಿಗೆ ಆರಂಭ ಗೊಂಡ ರಾಷ್ಟ್ರೀಯ ವಿದ್ಯಾಲಯ “ತಿಲಕ್ ವಿದ್ಯಾಲಯ’ದಲ್ಲಿ ಮಲ್ಯರು ಪಾಠವನ್ನೂ ಮಾಡಿದರು. ಖಾದಿ ಪ್ರಚಾರ, ರಾಜಕೀಯ ಪರಿಷತ್ ಸಂಘಟನೆ ಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. “ಸತ್ಯಾಗ್ರಹಿ’ ವಾರ ಪತ್ರಿಕೆ ಪ್ರಕಟಿಸಿದರು. ಹಿರಿಯಡಕ ನಾರಾಯಣ ರಾವ್ ಮತ್ತು ಮಂಗಳೂರಿನ ವಿ.ಎಸ್.ಕುಡ್ವರು ಸಹಕರಿಸಿದರು. ಮಲ್ಯರ ಲೇಖನಿ ಯಿಂದಾಗಿ ಪತ್ರಿಕೆ ಅಖೀಲ ಕರ್ನಾಟಕದ ಪ್ರಸಿದ್ಧಿ ಪಡೆಯಿತು. ಆಗ ಮಲ್ಯ, ನಾರಾಯಣ ರಾಯರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಆಗ ಕುಡ್ವರು ಪತ್ರಿಕೆಯನ್ನು ನಿರ್ವಹಿಸಿದ್ದರು. ಜೈಲಿನಿಂದ ಹೊರಬಂದ ಬಳಿಕ ಮತ್ತೆ ಸಂಪಾದಕತ್ವವನ್ನು ವಹಿಸಿಕೊಂಡರು. ಚಳವಳಿಯ ರಭಸ ಕಡಿಮೆಯಾಗಿ ಪತ್ರಿಕೆ ನಷ್ಟಕ್ಕೊಳಗಾಯಿತು. ಆಗ ಮೊಳಹಳ್ಳಿ ಶಿವರಾಯರ ಸಲಹೆಯಂತೆ ಸಹಕಾರ ಚಳವಳಿಗೆ ಧುಮುಕಿದರು. ಪಾನ ನಿರೋಧ ಸಮಿತಿಗೆ ಪ್ರಚಾರಕರಾಗಿ, “ಕನ್ನಡ’ ಸಹಕಾರಿ’ ಪತ್ರಿಕೆಯ ಸಂಪಾದಕರಾದರು.
1930ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಮಾಡಿದಾಗ ಮಲ್ಯರು ಮತ್ತೆ ಸಕ್ರಿಯರಾದರು. ಉಪ್ಪಿನ ಕಾನೂನು ಮುರಿದ ಕಾರಣ 6 ತಿಂಗಳು ಶಿಕ್ಷೆಗೆ ಗುರಿಯಾದರು. ಜೈಲಿನಿಂದ ಹೊರ ಬರು ತ್ತಲೇ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಜಿಲ್ಲೆಯ ರಾಜಕೀಯ ಕಲಾಪಗಳನ್ನು ಮುನ್ನಡೆಸಿದರು. ಬಳಿಕ ಕೆಲ ಕಾರಣಗಳಿಗೆ ರಾಜಕಾರಣ ದಿಂದ ಅಂತರ ಕಾಯ್ದುಕೊಂಡರು. ಸಹಕಾರಿ ಪತ್ರಿಕೆಯನ್ನು ಮುನ್ನಡೆ ಸುತ್ತ ಮದ್ರಾಸಿನ ಹಿಂದೂ ಪತ್ರಿಕೆ ಯ ವರದಿಗಾರರಾದರು. 1939ರಲ್ಲಿ “ಸ್ವತಂತ್ರ ಭಾರತ’ ಪತ್ರಿಕೆಯ ಸಂಪಾದಕರಾ ದರು. ಪತ್ರಿಕೆ ಬಹುಕಾಲ ಉಳಿಯಲಿಲ್ಲ. ಕೊನೆಯ ವರೆಗೂ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದರು. ಈ ನಡುವೆ ದಿ| ಎನ್.ಎಸ್. ಕಿಲ್ಲೆಯವರ “ಸರ್ವೋದಯ’, ಎ.ಎಸ್. ಕಾಮತ್ ಅವರ “ಸ್ವದೇಶಾಭಿಮಾನಿ’ ಪತ್ರಿಕೆಗಳಲ್ಲೂ ಕೆಲಸ ಮಾಡಿದರು. ಕೆಲ ಕಾಲ “ಚರಕಾ ಸಂದೇಶ’ ಪತ್ರಿಕೆಯನ್ನು ನಡೆಸಿದರು. ಬಂಟ್ವಾಳ ನಾರಾಯಣ ನಾಯಕ್ ಮತ್ತಿತರರ ನೆರವಿನಿಂದ “ಸಮಾಚಾರ’ ಪತ್ರಿಕೆಯ ಸಂಪಾದಕರಾಗಿ ಕೊನೆಯವರೆಗಿದ್ದರು. “ಸೀತಾರಾಮ’ ಎಂಬ ಗುಪ್ತನಾಮದಿಂದ ಅನೇಕ ಸಣ್ಣಕತೆಗಳನ್ನೂ ಬರೆದಿದ್ದಾರೆ.
ಮಲ್ಯರ ಜೀವನರಥಕ್ಕೆ ಕಾಂಗ್ರೆಸ್ ಧ್ಯೇಯ ಮತ್ತು ಪತ್ರಿಕಾರಂಗ ಎರಡು ಚಕ್ರಗಳಂತಿದ್ದವು. ಮನ ನೋಯಿಸುವ ಲೇಖನ ಬರೆ ಯುತ್ತಿರಲಿಲ್ಲವಾದರೂ ಸತ್ಯದಿಂದ ಎಂದೂ ವಿಚಲಿತ ರಾಗಿರಲಿಲ್ಲ. ಪ್ರತಿಫಲಾ ಪೇಕ್ಷೆ ಇಲ್ಲದೆ, ದೇಶ ಸ್ವತಂತ್ರ ವಾದ ಬಳಿಕ ಯಾವುದೇ ಅಧಿಕಾರ ಪಟ್ಟಕ್ಕೇರದೆ ದುಡಿದು 56ನೆಯ ವಯಸ್ಸಿ ನಲ್ಲಿ 1955ರ ಡಿಸೆಂಬರ್ 19ರಂದು ನಿಧನ ಹೊಂದಿದ ಮಲ್ಯರು ನಿಜಕ್ಕೂ ಕರ್ಮಯೋಗಿ.
–ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.