Hiroshima Day: ಬಾಂಬ್‌ ಬಿದ್ದ ಆ ದಿನ ಹುಳಗಳಂತೆ ಸತ್ತರು ಜನ


Team Udayavani, Aug 6, 2023, 12:27 PM IST

Hiroshima Day: ಬಾಂಬ್‌ ಬಿದ್ದ ಆ ದಿನ ಹುಳಗಳಂತೆ ಸತ್ತರು ಜನ

ಕಳೆದ ವರ್ಷ “ಜರ್ನಲ್‌ ಆಫ್ ರೇಡಿಯೇಶನ್‌ ರಿಸರ್ಚ್‌’ ಪತ್ರಿಕೆಯಲ್ಲಿ ಒಂದು ಪ್ರಬಂಧ ಪ್ರಕಟವಾಯಿತು. ಜಪಾನಿನ ಯಾಸು ಮಿನಾಮಿಯಲ್ಲಿ ವಾಸವಿದ್ದ ಮೂವರ ಹಲ್ಲಿನ ಪರೀಕ್ಷೆಯ ವರದಿ ಅದು. ಮೂರು ಹಲ್ಲುಗಳನ್ನೂ ಅರೆದು, ಎಕ್ಸ್‌ ರೇಗೆ ಒಡ್ಡಿ ಪರೀಕ್ಷೆ ಮಾಡಲಾಗಿತ್ತು. ಈ ಹಲ್ಲುಗಳ ಹೊರಪದರವಾದ ಎನಾಮೆಲ್ಲಿನಲ್ಲಿ ವಿಕಿರಣಗಳು ತಗುಲಿ ಆಗುವ ವ್ಯತ್ಯಾಸಗಳನ್ನು ಲೆಕ್ಕ ಹಾಕುವುದು ಉದ್ದೇಶ. ಫ‌ಲಿತಾಂಶ ಮಾತ್ರ ಸ್ವಾರಸ್ಯಕರ. ಒಂದು ಹಲ್ಲಿನ ಎನಾಮೆಲ್ಲಿನಲ್ಲಿ ಸಾಮಾನ್ಯವಾಗಿ ಆಗುವ ವ್ಯತ್ಯಾಸಗಳಿಗಿಂತಲೂ ಸುಮಾರು ಹತ್ತು ಪಟ್ಟು ಹೆಚ್ಚು ಇತ್ತು. ಅರ್ಥಾತ್‌, ಈ ಹಲ್ಲಿಗೆ ಸಾಮಾನ್ಯಕ್ಕಿಂತಲೂ ಹೆಚ್ಚು ವಿಕಿರಣಗಳಿಂದ ತೊಂದರೆ ಆಗಿದೆ ಅನ್ನುವುದು ತೀರ್ಮಾನ.

ಇದು 78 ವರ್ಷಗಳ ಹಿಂದೆ ಹಿರೋಷಿಮಾದಲ್ಲಿ ನಡೆದ ಘಟನೆಯ ಪರಿಣಾಮ! ಇದೇ ದಿನ 78 ವರ್ಷಗಳ ಹಿಂದೆ, 1945ನೇ ಇಸವಿಯಲ್ಲಿ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕಾ, ಜಪಾನಿನ ಹಿರೋಷಿಮಾ ನಗರದ ಮೇಲೆ ಮೊಟ್ಟ ಮೊದಲ ಪರಮಾಣು ಬಾಂಬನ್ನು ಸಿಡಿಸಿತ್ತು. ಇನ್ನೆರಡು ದಿನದ ನಂತರ ಮತ್ತೂಂದು ಬಾಂಬು ನಾಗಸಾಕಿ ಪಟ್ಟಣದ ಮೇಲೆ ಬಿದ್ದಿತ್ತು. ಅಂದಿನಿಂದ ಇಂದಿನವರೆಗೆ ನೂರಾರು ಪರಮಾಣು ಬಾಂಬುಗಳನ್ನು ಪರೀಕ್ಷಿಸಲಾಗಿದೆಯಾದರೂ, ಯುದ್ಧದಲ್ಲಿ ಬಳಸಿದ್ದು ಇವೆರಡೇ. ಆ ಮೂರನೆ ಹಲ್ಲಿನಲ್ಲಿ ಕಂಡ ಅಧಿಕ ವಿಕಿರಣದ ಅಂಶ ಈ ಬಾಂಬುಗಳದ್ದು ಎನ್ನುವುದು ತೀರ್ಮಾನ. ಅಂದು ಸಿಡಿದ ಬಾಂಬಿನ ಒಟ್ಟಾರೆ ಫ‌ಲಿತಾಂಶಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಅಗಿಲ್ಲ ಎನ್ನುವುದಕ್ಕೆ 75 ವರ್ಷಗಳಾದ ಮೇಲೂ ನಡೆಯುತ್ತಿರುವ ಇಂತಹ ಅಧ್ಯಯನಗಳೇ ಪುರಾವೆ.

ಎಚ್ಚರಿಸಿದ್ದರು ಐನ್‌ ಸ್ಟೈನ್‌:

ಇಂದು ಆ ಘಟನೆಯನ್ನು ವಿಶ್ವದಾದ್ಯಂತ “ಹಿರೋಷಿಮಾ ದಿನ’ ಎಂದು ನೆನಪಿಸಿಕೊಳ್ಳುತ್ತೇವೆ. ಜಗತ್ತಿನ ಚರಿತ್ರೆಯಲ್ಲಿ ಅಚ್ಚೊತ್ತಿರುವ ಈ ಘಟನೆಯ ಮೂಲ, 1939ರಲ್ಲಿ ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್‌ ಐನ್‌ ಸ್ಟೈನ್‌ ಅಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ಎಫ್. ಡಿ. ರೂಸ್ವೆಲ್ಟರಿಗೆ ಬರೆದ ಒಂದು ಪತ್ರ. ಈ ಪತ್ರದಲ್ಲಿ ಅಮೆರಿಕ ಹಾಗೂ ಫ್ರಾನ್ಸಿನಲ್ಲಿ ಪರಮಾಣುಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳನ್ನು ಉಲ್ಲೇಖೀಸಿದ್ದ ಐನ್‌ ಸ್ಟೆçನ್‌, “ಈ ಪ್ರಕ್ರಿಯೆಯನ್ನು ಬಳಸಿಕೊಂಡು ಅತ್ಯಂತ ಪ್ರಬಲವಾದಂತಹ ಹೊಸ ಬಗೆಯ ಬಾಂಬನ್ನು ತಯಾರಿಸುವುದು ಸಾಧ್ಯ. ಒಂದೇ ಒಂದು ಬಾಂಬು ಇಡೀ ಬಂದರನ್ನೂ, ಸುತ್ತಮುತ್ತಲಿನ ಕೆಲವು ಪ್ರದೇಶವನ್ನೂ ನಾಶ ಮಾಡಿ ಬಿಡುವಷ್ಟು ಶಕ್ತಿಶಾಲಿಯಾಗಿರುತ್ತದೆ’ ಎಂದು ಬರೆದಿದ್ದಲ್ಲದೆ, ಇಂತಹ ಪ್ರಯತ್ನಕ್ಕೆ ವಿಶೇಷವಾದ ಧನಸಹಾಯವನ್ನೂ, ವ್ಯವಸ್ಥೆಯನ್ನೂ ಅಮೆರಿಕ ಮಾಡದಿದ್ದರೆ, ಜರ್ಮನಿ ಅದನ್ನು ಮೊದಲೇ ಸಾಧಿಸಿಬಿಡಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

ಐನ್‌ ಸ್ಟೈನ್‌ ಅವರು ಬರೆದ ಪತ್ರದ ಫ‌ಲವಾಗಿ ಅಮೆರಿಕ ಸರ್ಕಾರ  ಮನ್‌ ಹಟ್ಟನ್‌ ಯೋಜನೆ ಎಂಬ ರಹಸ್ಯ ಯೋಜನೆಯನ್ನು ಹಮ್ಮಿಕೊಂಡಿತು. ಅಮೆರಿಕ ಹಾಗೂ ಯುರೋಪಿನ ಪ್ರತಿಷ್ಠಿತ ವಿಜ್ಞಾನಿಗಳು ಕೈ ಜೋಡಿಸಿದ ಯೋಜನೆ ಅದು. ಇದರ ಫ‌ಲವಾಗಿ 1942ನೇ ಇಸವಿಯಲ್ಲಿ  ಮೊದಲ ಪರಮಾಣು ಬಾಂಬನ್ನು ಟೆಕ್ಸಾಸಿನ ಟ್ರಿನಿಟಿ ಎಂಬ ಮರಳುಗಾಡಿನಲ್ಲಿ ಪರೀಕ್ಷಿಸಲಾಯಿತು. ತದನಂತರ 1945ರಲ್ಲಿ ಮೊದಲ ಬಾಂಬನ್ನು ಹಿರೋಷಿಮಾದ ಮೇಲೆ, ಅಲ್ಲಿದ್ದ ಮಿಲಿಟರಿ ಸರಕು ಉಗ್ರಾಣವನ್ನು ನಾಶ ಮಾಡಲೆಂದು ಹಾಕಲಾಯಿತು. ಆದರೆ ಈ ಬಾಂಬು ಐನ್‌ ಸ್ಟೈನ್‌ ನಿರೀಕ್ಷಿಸಿದ್ದಂತೆ ಹಿರೋಷಿಮಾದ ಮಿಲಿಟರಿ ನೆಲೆಗಳನ್ನಲ್ಲದೆ ಅದರ ಸುತ್ತಲಿನ ಪ್ರದೇಶಗಳನ್ನೂ ನಾಶ ಮಾಡಿತು.

ಊಹೆಗೆ ನಿಲುಕದ ಅನಾಹುತ:

ಪರಮಾಣು ಬಾಂಬಿನ ಶಕ್ತಿಯ ಬಗ್ಗೆ ಐನ್‌ ಸ್ಟೆçನ್‌  ಊಹಿಸಿದ್ದರು ನಿಜ. ಆದರೆ ಅವರು ಊಹಿಸಲು ಆಗದ ಸಂಗತಿ ಏನೆಂದರೆ ಪರಮಾಣು ಬಾಂಬಿನಿಂದ ಹೊರಡುವ ವಿಕಿರಣಗಳ ಪರಿಣಾಮ. ಇದು ಬಾಂಬು ಸಿಡಿದ ನಂತರವಷ್ಟೆ ತಿಳಿದು ಬಂದಿತ್ತು. ಹಿರೋಷಿಮಾ ನಗರದಲ್ಲಿ ಬಾಂಬು ಹಾಕಿದ ನೆಲೆಯಿಂದ ಸುಮಾರು ನಾಲ್ಕು ಕಿಲೋಮೀಟರ್‌ವರೆಗೆ ಬಾಂಬಿನ ಪರಿಣಾಮ ದಾಖಲಾಗಿದೆ. ಈ ಬಾಂಬಿನ ಸಿಡಿತಕ್ಕೆ ಸಿಕ್ಕು ಸತ್ತವರ ಸಂಖ್ಯೆ ಎಷ್ಟೆಂಬುದು ಇಂದಿಗೂ ಅಂದಾಜೇ. ಬಾಂಬು ಸಿಡಿದ ದಿನವೇ ಕನಿಷ್ಠ 1,40,000 ಜನರು ಮೃತರಾದರು. ಅನಂತರದ ಕೆಲವು ತಿಂಗಳುಗಳಲ್ಲಿ ಬಾಂಬಿನಿಂದ ಗಾಯ­ಗೊಂಡು ಸತ್ತವರ ಸಂಖ್ಯೆಯನ್ನೂ ಸೇರಿಸಿದರೆ ಒಟ್ಟು 2,40,000 ಸಾವಿರ ಮಂದಿ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ.

ತಲೆಮಾರುಗಳನ್ನೂ ಕಾಡಬಹುದು!

ಈ ಸಾವುಗಳು ಅಂದಾಜು ಏಕೆಂದರೆ, ಪರಮಾಣು ಬಾಂಬಿನ ಪರಿಣಾಮ ಕೇವಲ ಅದು ಬಿದ್ದ ಜಾಗದಲ್ಲಿಯಷ್ಟೆ ಆಗುವುದಿಲ್ಲ. ಒಂಭತ್ತು ಕಿಲೋಮೀಟರು ದೂರದಲ್ಲಿದ್ದ ಯಾಸು ಮಿಸಾಮಿಯಲ್ಲಿದ್ದವರ ಹಲ್ಲಿನ ಮೇಲೂ ಅದು ಪ್ರಭಾವ ಬೀರಬಹುದು. ಅದರ ಪರಿಣಾಮ ಕೇವಲ ಅಂದಷ್ಟೆ ಅಲ್ಲ. ಹತ್ತಾರು ವರ್ಷಗಳ ನಂತರ ಕಾಣಬಹುದು. ಅದು ಕೇವಲ ಆ ಪೀಳಿಗೆಗಷ್ಟೆ ಸೀಮಿತವಾಗಿರಬೇಕಿಲ್ಲ. ಮುಂದಿನ ಹಲವು ತಲೆಮಾರುಗಳವರೆಗೂ ಇರಬಹುದು. ಅಣುಬಾಂಬುಗಳಿಗೆ ಈಡಾಗಿ ಬದುಕಿ ಉಳಿದವರನ್ನು ಜಪಾನೀಯರು “ಹಿಬಾಕುಶಾ’ ಎಂದು ಕರೆಯುತ್ತಾರೆ. ಇವರ ಮೇಲೆ ಬಾಂಬು ಎಷ್ಟು ಘಾಸಿ ಮಾಡಿದೆ ಎಂದರೆ ಅದಕ್ಕಾಗಿಯೇ ಅಂದರೆ ಕೇವಲ ಅಣುಬಾಂಬಿನಿಂದ ಉಂಟಾಗಬಹುದಾದ ಖಾಯಿಲೆಗಳನ್ನು ಅಧ್ಯಯನ ಮಾಡಲೆಂದೇ  ಜಪಾನಿನಲ್ಲಿರುವ ಸಂಶೋಧನಾಲಯ, ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಬಿದ್ದ ಅಣುಬಾಂಬುಗಳು ಮಾನವರ ಮೇಲೆ ಬೀರಿದ ಪರಿಣಾಮಗಳ ಒಟ್ಟಾರೆ ಸಾರಾಂಶವನ್ನು ಎರಡು ವರ್ಷಗಳ ಹಿಂದೆ ಪ್ರಕಟಿಸಿತ್ತು.

ಅಣುಬಾಂಬು ಖಾಯಿಲೆ ಸಂಶೋಧನಾಲಯದ ವರದಿಯ ಪ್ರಕಾರ, ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಬಾಂಬು ಬಿದ್ದಾಗ ಇದ್ದ ಜನರಲ್ಲಿ ಅಂದಾಜು 2,10,000 ಮಂದಿ ಮರಣಿಸಿದ್ದು, 2,10,000 ಮಂದಿ ಬದುಕಿ ಉಳಿದರು. ಆದರೆ ಇವರ ಆರೋಗ್ಯವೂ ವಿಕಿರಣಗಳ ಪ್ರಭಾವದಿಂದ ಹದಗೆಡುತ್ತಲೇ ಇದೆ. ಆರಂಭದಲ್ಲಿ ರಕ್ತದ ಕ್ಯಾನ್ಸರಿನಂತಹ ಖಾಯಿಲೆಗಳು ಬಾಂಬು ಬಿದ್ದ ಐದಾರು ವರ್ಷಗಳಲ್ಲಿಯೇ ಕಾಣಿಸಿಕೊಂಡಿದ್ದವು. ಅದಾದ ನಂತರ ಇನ್ನೂ ಹಲವು ಬಗೆಯ ಕ್ಯಾನ್ಸರುಗಳನ್ನೂ “ಹಿಬಾಕುಶಾ’ಗಳಲ್ಲಿ ಕಾಣಲಾಯಿತು. ಬಾಂಬು ಬಿದ್ದಾಗ ಮಕ್ಕಳಾಗಿದ್ದು, ಬದುಕಿ ವೃದ್ಧರಾದವರನ್ನೂ ಇದು ಕಾಡಿದೆ. ಅವರಲ್ಲಿ ಲ್ಯುಕೀಮಿಯಾ ಉಳಿದವರಿಗಿಂತ ಹೆಚ್ಚಿದೆ. ಇವೆಲ್ಲ ಅಧ್ಯಯನಗಳ ಫ‌ಲವಾಗಿ ಪರಮಾಣು ಬಾಂಬುಗಳನ್ನು ನಿಷೇಧಿಸಬೇಕು ಎಂಬ ಹೋರಾಟ ಆರಂಭವಾಗಿತ್ತು. ಹೀಗಾಗಿ ಇಂದು ಪರಮಾಣು ಬಾಂಬುಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರುವ ದೇಶಗಳು ಅವನ್ನು ಬಳಸದಂತೆ ನಿಷೇಧವಿದೆ.

ಬಾಂಬುಗಳ ತಯಾರಿಕೆ ನಿಂತಿಲ್ಲ!

ಇವೆಲ್ಲವನ್ನೂ ನಾವು ಇಂದು ನೆನಪಿಸಿಕೊಳ್ಳುವುದು ಅಗತ್ಯ. ಏಕೆಂದರೆ 78 ವರ್ಷಗಳ ನಂತರ ನಮ್ಮ ಬಳಿ ಇನ್ನೂ ಪ್ರಬಲವಾದ ಪರಮಾಣು ಬಾಂಬು ಇದೆ. ಹೈಡ್ರೊಜನ್‌ ಬಾಂಬು ಎನ್ನುವ ಹಿರೋಷಿಮಾವನ್ನು ತಾಕಿದ ಬಾಂಬಿನ ಐವತ್ತು ಪಟ್ಟು ಶಕ್ತಿಶಾಲಿ ಬಾಂಬುಗಳಿವೆ. ಇವು ನೆಲ ತಾಕಿ ಸಿಡಿಯಬೇಕೆಂದಿಲ್ಲ. ಕ್ಷಿಪಣಿಗಳನ್ನೇರಿ ಬಂದು ಆಕಾಶದಲ್ಲಿ ಎರಡು ಕಿಮೀ ಎತ್ತರದಲ್ಲಿ ಸಿಡಿದರೂ, ಸುಮಾರು ನಲವತ್ತು ಕಿಮೀ ವ್ಯಾಪ್ತಿಯ ಪ್ರದೇಶದಲ್ಲಿ ಅದರ ಪರಿಣಾಮವನ್ನು ಕಾಣಬಹುದು. ಬಾಂಬು ಬಿದ್ದ ನಗರದಲ್ಲಿ ಹತ್ತು ಲಕ್ಷ ಜನರಿದ್ದರೆ, ಅವರಲ್ಲಿ ಏಳು ಲಕ್ಷ ಜನರು ನೇರವಾಗಿ ಬಾಧಿತರಾಗುತ್ತಾರೆ. ವೈದ್ಯಕೀಯ ನೆರವನ್ನಾಗಲಿ, ಪರಿಹಾರವನ್ನಾಗಲಿ ಸಹಾಯವನ್ನಾಗಲಿ ಒದಗಿಸಲು ಕಷ್ಟ ಎಂದು ಈ ವರದಿ ಲೆಕ್ಕವನ್ನೂ ಹಾಕಿದೆ.

ಐನ್‌ ಸ್ಟೈನ್‌ ಬಾಂಬು ತಯಾರಿಸಬೇಕು ಎಂದು ಪತ್ರ ಬರೆದದ್ದು ನಿಜ. ಹಾಗೆಯೇ ಹಿರೋಷಿಮಾ ಹಾಗೂ ನಾಗಸಾಕಿಯಲ್ಲಿ ಆದ ಹಾನಿಯನ್ನು ಗಮನಿಸಿ, ಸಂಕಟ ಪಟ್ಟಿದ್ದೂ ಅಷ್ಟೇ ಸತ್ಯ. ಆದರೂ ಬಾಂಬುಗಳ ತಯಾರಿಕೆ ನಿಂತಿಲ್ಲ. ಆ ಸಂಶೋಧನೆಗಳು ಕಡಿಮೆ ಆಗಿಲ್ಲ ಎನ್ನುವುದು ದೊಡ್ಡ ಸತ್ಯ. ಇವುಗಳಿಂದ ನಾಳೆ ಏನಾಗಬಹುದು ಎನ್ನುವುದು ಕೇವಲ ಊಹೆಗೆ ಬಿಟ್ಟಿದ್ದು ಅಷ್ಟೆ. “ಹಿರೋಷಿಮಾ ದಿನ’ ಕಾಲದ ಸೆಳೆತದಲ್ಲಿ ನಮ್ಮ ನೆನಪು ಅಳಿಸಿಹೋಗದಂತೆ ಕಾಯುವ ಒಂದು ಉಪಾಯ ಎನ್ನಬೇಕಷ್ಟೆ.

ಭಯದ ಮಧ್ಯೆಯೇ ಬದುಕು:

ಮಾನವರ ಆರೋಗ್ಯದ ಮೇಲೆ ಪರಮಾಣು ಬಾಂಬುಗಳ ಪ್ರಭಾವವೇನು? ಎಂಬ ಪ್ರಶ್ನೆಗೆ ಮರಳಿ ಹಿರೋಷಿಮಾಗೇ ಹೋಗಬೇಕು. ಅಲ್ಲಿ ಬಾಂಬು ಬಿದ್ದಲ್ಲಿಂದ ಅರ್ಧ ಕಿಮೀ ಫಾಸಲೆಯಲ್ಲಿ ಇದ್ದ ಎಲ್ಲರೂ ಆ ಕ್ಷಣದಲ್ಲಿಯೇ ಸಾವನ್ನಪ್ಪಿದ್ದರು. ಅಲ್ಲಿಂದ ಒಂದು ಕಿ. ಮೀ ದೂರದಲ್ಲಿದ್ದವರಲ್ಲಿ ಶೇಕಡ 90ರಷ್ಟು ಮಂದಿ ಸ್ವರ್ಗವಾಸಿಗಳಾಗಿದ್ದರು. ಒಂದೂವರೆ ಕಿಲೋಮೀಟರ್‌ ಫಾಸಲೆಯಲ್ಲಿದ್ದವರಲ್ಲಿ ಅರ್ಧಕ್ಕರ್ಧ ಮಂದಿ ಸಾವನ್ನಪ್ಪಿದ್ದರು. ಆ ಕ್ಷಣಕ್ಕೆ ಸಾವನ್ನಪ್ಪಿದವರೇ  ಪುಣ್ಯವಂತರು. ಕಾರಣ, ಬದುಕುಳಿದವರ ಕಥೆ ಇನ್ನೂ ಹೀನಾಯವಾಗಿತ್ತು. ಇವರಲ್ಲಿ ಹಲವರು ಸುಟ್ಟಗಾಯಗಳಿಂದ ನರಳಿದರು. ಬಾಂಬು ಸಿಡಿದಾಗ ಹೊರಬಿದ್ದ ಶಾಖ ಎಷ್ಟಿತ್ತೆಂದರೆ ಸುಮಾರು ಒಂದರಿಂದ ಎರಡು ಕಿಲೋಮೀಟರು ಫಾಸಲೆಯಲ್ಲಿ ಇದ್ದವರ ಚರ್ಮ ಬೆಂದು, ಸುಲಿದು ಹೋಗಿತ್ತು. ಒಂದೆಡೆ ಬಾಂಬಿನಿಂದ ಉಂಟಾದ ಒತ್ತಡದಿಂದ ಸತ್ತವರು ಹಲವರು. ಇನ್ನು ಕೆಲವರು ಬಾಂಬು ಹುಟ್ಟಿಸಿದ ಬೇಗೆಯಿಂದ ಸತ್ತವರು. ಮತ್ತೂ ಹಲವರು ವಿಕಿರಣಗಳ ಹೊಡೆತದಿಂದ ಸತ್ತರು. ಇದು ಯಾವುದೂ ಆಗದೆ ಉಳಿದುಕೊಂಡವರು ಅನಂತರದ ದಿನಗಳಲ್ಲಿ ಕ್ಯಾನ್ಸರ್‌, ಸುಟ್ಟಗಾಯಗಳಿಂದ ನರಳಿ ಸತ್ತರು. ಹಾಗೂ ಉಳಿದುಕೊಂಡವರು ಯಾವಾಗ ಯಾವ ಕ್ಯಾನ್ಸರ್‌ ಬರುತ್ತದೆಯೋ ಎನ್ನುವ ಭಯದಲ್ಲಿಯೇ ಬದುಕಿದ್ದರು. ಈಗ ಹೀಗೆ ಬದುಕುಳಿದವರ ಸಂತಾನಗಳಿಗೆ ಏನಾಗಬಹುದು ಎನ್ನುವ ಆತಂಕ ಸೃಷ್ಟಿಯಾಗಿದೆ. ಏಕೆಂದರೆ ಬಾಂಬು ಕೇವಲ ಬೆಂಕಿಯನ್ನಷ್ಟೆ ಸುರಿದಿರಲಿಲ್ಲ. ವಿಕಿರಣಗಳನ್ನೂ ಸುರಿದಿತ್ತು.

-ಕೊಳ್ಳೇಗಾಲ ಶರ್ಮ

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.