ನೆನಪಿದೆಯಾ? ಹಾಕಿ ವಿಶ್ವವನ್ನಾಳಿತ್ತು ಭಾರತ: ವಿಶ್ವದಲ್ಲೇ ಬೃಹತ್ ಹಾಕಿ ಮೈದಾನ ನಿರ್ಮಿಸಿರುವ ಒಡಿಶಾ
ಹದಿನೈದನೇ ವಿಶ್ವಕಪ್ ಆತಿಥ್ಯಕ್ಕೆ ಸಿದ್ಧವಾಗಿದೆ ಭಾರತ
Team Udayavani, Jan 11, 2023, 8:15 AM IST
ಜ.13ರಿಂದ 29ರ ವರೆಗೆ ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಹಾಕಿ ವಿಶ್ವಕಪ್ ನಡೆಯಲಿದೆ. ತನ್ನದೇ ನೆಲದಲ್ಲಿ ಭಾರತ ಆಡುತ್ತಿರುವುದರಿಂದ ಮತ್ತೊಮ್ಮೆ ಹಳೆಯ ಸಂಭ್ರಮವನ್ನು ಹೊಮ್ಮಿಸಲಿ ಎನ್ನುವುದು ಅಭಿಮಾನಿಗಳ ಬಯಕೆ.ಒಡಿಶಾ ಸತತ 2ನೇ ಬಾರಿಗೆ ಹಾಕಿ ವಿಶ್ವಕಪ್‌ನ ಆತಿಥ್ಯವನ್ನು ವಹಿಸಿದೆ.ಇದು ಭಾರತದ ಪಾಲಿನ ದಾಖಲೆಯೂ ಹೌದು. ಒಂದೇ ದೇಶ ಸತತ 2ನೇ ಬಾರಿಗೆ ಆತಿಥ್ಯ ವಹಿಸಿರುವ ಮೊದಲ ಉದಾಹರಣೆಯಿದು. ಈ ಕೂಟದ ಮೇಲೆ ಹಾಕಿ ಅಭಿಮಾನಿಗಳ ನಿರೀಕ್ಷೆ ಅಗಾಧ. ಆ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಒಡಿಶಾ ಸರಕಾರವೇ ಜವಾಬ್ದಾರಿ ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಹಿಂದಿನ ವೈಭವದ ನೆನಪುಗಳು ಇಲ್ಲಿವೆ.
1920-80: ಒಲಿಂಪಿಕ್ಸ್‌ನಲ್ಲಿ 8 ಚಿನ್ನ, 1 ಬೆಳ್ಳಿ, 2 ಕಂಚು!
ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡದ ಸಾಧನೆಯನ್ನು ನೋಡಿದರೆ ಯಾರಿಗೇ ಆದರೂ ಅಚ್ಚರಿಯೆನಿಸುತ್ತದೆ. 1920ರಿಂದ 80ರ ನಡುವೆ ಒಟ್ಟು 8 ಚಿನ್ನ, 1 ಬೆಳ್ಳಿ, 2 ಕಂಚುಗಳನ್ನು ಗೆದ್ದಿತ್ತು. ಪ್ರತೀ ಬಾರಿ ಕಣಕ್ಕಿಳಿಯುವಾಗಲೂ ಭಾರತವೇ ಮೆಚ್ಚಿನ ತಂಡವಾಗಿರುತ್ತಿತ್ತು. ಆ ಹಳೆಯ ನೆನಪುಗಳನ್ನು ಇಲ್ಲಿ ನೀಡಲಾಗಿದೆ.
1928 ಆ್ಯಮ್‌ಸ್ಟರ್‌ಡಂ
ನೆದರ್ಲೆಂಡ್‌ನ ಆ್ಯಮ್‌ಸ್ಟರ್‌ಡಂನಲ್ಲಿ ನಡೆದ ಈ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ತನ್ನ ಒಲಿಂಪಿಕ್ಸ್ ಇತಿಹಾಸದ ಮೊದಲ ಚಿನ್ನ ಜಯಿಸಿತು. ಇದೇ ಕೂಟದಲ್ಲಿ ಮೇಜರ್ ಧ್ಯಾನ್‌ಚಂದ್ ಎಂಬ ಹಾಕಿ ವಿಸ್ಮಯ ಪ್ರಕಟವಾಗಿದ್ದು. ಅವರು ಒಟ್ಟು 14 ಗೋಲು ಬಾರಿಸಿದರು. ಫೈನಲ್‌ನಲ್ಲಿ ನೆದರ್ಲೆಂಡ್ ವಿರುದ್ಧ ಅವರೇ ಹ್ಯಾಟ್ರಿಕ್ ಗೋಲು ಬಾರಿಸಿದರು.
1932 ಲಾಸ್ ಏಂಜಲೀಸ್
ಈ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೇ ಮೂರು ಹಾಕಿ ತಂಡಗಳು. ಆತಿಥೇಯ ಅಮೆರಿಕ, ಭಾರತ, ಜಪಾನ್. ಭಾರತೀಯ ತಂಡದಲ್ಲಿ ಬ್ರಿಟಿಷರೂ ಇದ್ದರು! ಹಾಗಾಗಿ ತಂಡದೊಳಗೆ ಎಲ್ಲವೂ ಸರಿಯಿರಲಿಲ್ಲ. ಒಬ್ಬರಂತೂ ತಂಡದ ಅಧಿಕೃತ ದಿರಿಸಾದ ಪೇಟವನ್ನು ತಿರಸ್ಕರಿಸಿದರು! ಇದರ ಮಧ್ಯೆ ರೂಪ್ ಸಿಂಗ್ (ಧ್ಯಾನ್ ಚಂದ್ ಸಹೋದರ) ಅಮೆರಿಕದ ವಿರುದ್ಧ 10, ಧ್ಯಾನ್ ಚಂದ್ 8 ಗೋಲು ಹೊಡೆದರು. ಇನ್ನು ಫೈನಲ್‌ನಲ್ಲಿ ಜಪಾನ್ ಅನ್ನು 11-1ರಿಂದ ಸೋಲಿಸಿ ಭಾರತ ಚಿನ್ನ ಗೆದ್ದಿತು.
1936, ಬರ್ಲಿನ್
ಈ ವರ್ಷದ ಒಲಿಂಪಿಕ್ಸ್ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಿತು. ಅಲ್ಲೇ ಭಾರತ 3ನೇ ಚಿನ್ನ ಜಯಿ ಸಿತು. ಲೀಗ್‌ನಲ್ಲಿ ಹಂಗೇರಿ, ಜಪಾನ್, ಫ್ರಾನ್ಸ್ ಎದುರು ಭಾರತ ಒಂದೇ ಒಂದು ಗೋಲು ಬಿಟ್ಟುಕೊಡಲಿಲ್ಲ. ಭಾರತ ಫೈನಲ್‌ನಲ್ಲಿ ಆತಿಥೇಯ ಜರ್ಮನಿಯನ್ನು 8-1 ಗೋಲುಗಳಿಂದ ಮಣಿಸಿತು. ಧ್ಯಾನ್ ಚಂದ್ ಹ್ಯಾಟ್ರಿಕ್ ಗೋಲು ಬಾರಿಸಿದ್ದರು. 3ನೇ ಒಲಿಂಪಿಕ್ಸ್ ಚಿನ್ನ ಗೆದ್ದು ಮಾಂತ್ರಿಕ ಧ್ಯಾನ್ ನಿವೃತ್ತರಾದರು. ಜರ್ಮನಿಯ ಅಂದಿನ ಸರ್ವಾಧಿಕಾರಿ ಹಿಟ್ಲರ್ ಧ್ಯಾನ್ ಆಟಕ್ಕೆ ಮಾರು ಹೋಗಿದ್ದರು.
1948, ಲಂಡನ್
2ನೇ ವಿಶ್ವಯುದ್ಧದ ಕಾರಣ 1940, 44ರ ಎರಡು ಒಲಿಂಪಿಕ್ಸ್‌ಗಳು ರದ್ದಾದವು. 1948ರಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಒಲಿಂಪಿಕ್ಸ್ ನಡೆಯಿತು. ಇದು ಸ್ವತಂತ್ರ ಭಾರತ ಭಾಗವಹಿಸಿದ ಮೊದಲ ಒಲಿಂಪಿಕ್ಸ್. ಹಾಕಿ ತಂಡಕ್ಕೆ ಭಾವನಾತ್ಮಕವಾಗಿ ಬಹಳ ಮುಖ್ಯ ಕೂಟ. 12 ವರ್ಷಗಳಾದ ಮೇಲೆ ಭಾರತ ಕಣಕ್ಕಿಳಿದಿತ್ತು. ಆಗಷ್ಟೇ ಇಂಗ್ಲೆಂಡ್‌ನಿಂದ ಭಾರತ ಸ್ವಾತಂತ್ರ್ಯ ಪಡೆದಿತ್ತು. ಆಟಗಾರರಿಗೆ ಬೇಕಾದ ತರಬೇತಿ, ನೆರವು ಕಡಿಮೆಯೇ ಇತ್ತು. ಜತೆಗೆ ಭಾರತ- ಪಾಕ್ ವಿಭಜನೆಯಾಗಿದ್ದರಿಂದ ಪ್ರತಿಭಾವಂತ ಆಟಗಾರರು ಹಂಚಿ ಹೋಗಿದ್ದರು. ಇಂತಹ ಹೊತ್ತಿನಲ್ಲಿ ಬಲ್ಬಿàರ್ ಸಿಂಗ್ ಎಂಬ ಮತ್ತೂಬ್ಬ ಮಾಂತ್ರಿಕ ಹುಟ್ಟಿಕೊಂಡರು. ಫೈನಲ್‌ನಲ್ಲಿ ಭಾರತ ಆತಿಥೇಯ ಬ್ರಿಟನ್‌ನನ್ನೇ 4-0ಯಿಂದ ಸೋಲಿಸಿತು. ಬಲ್ಬಿàರ್ ಈ ಪಂದ್ಯದಲ್ಲಿ 2 ಗೋಲು ಬಾರಿಸಿದ್ದರು.
1952 ಹೆಲ್ಸಿಂಕಿ
ಬಲ್ಬಿàರ್ ಸಿಂಗ್‌ರ ಮತ್ತೂಂದು ಅದ್ಭುತ ಆಟಕ್ಕೆ ಸಾಕ್ಷಿಯಾಗಿದ್ದು ಫಿನ್ಲಂಡ್‌ನ ಹೆಲ್ಸಿಂಕಿ. ಇಲ್ಲವರು ಮೂರು ಪಂದ್ಯವಾಡಿದರು. ಒಟ್ಟು 9 ಗೋಲು ಬಾರಿಸಿದರು. ಲೀಗ್‌ನಲ್ಲಿ ಆಸ್ಟ್ರಿಯಾ ವಿರುದ್ಧ 1, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 3 ಗೋಲು ಬಾರಿಸಿದರು. ಭಾರತ ಫೈನಲ್‌ಗೇರಿತು. ಅಲ್ಲಿ ನೆದರ್ಲೆಂಡ್ ವಿರುದ್ಧ 5 ಗೋಲು ಬಾರಿಸಿದರು. ಭಾರತ 6-1ರಿಂದ ಚಿನ್ನವನ್ನು ಕೊರಳಿಗೇರಿಸಿಕೊಂಡಿತು.
1956, ಮೆಲ್ಬರ್ನ್
ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ನಡೆದ ಈ ಒಲಿಂಪಿಕ್ಸ್‌ನಲ್ಲಿ ಭಾರತ ಸತತ 6ನೇ ಚಿನ್ನ ಜಯಿಸಿತು. ಇನ್ನೊಂದು ಅರ್ಥದಲ್ಲಿ 2ನೇ ಬಾರಿಗೆ ಹ್ಯಾಟ್ರಿಕ್ ಚಿನ್ನ ಜಯಿಸಿತು. ಲೀಗ್‌ನಲ್ಲಿ ಭಾರತ ಸಿಂಗಾಪುರ, ಅಫ್ಘಾನಿಸ್ಥಾನ, ಅಮೆರಿಕವನ್ನು ಧೂಳೀಪಟ ಮಾಡಿತು. ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ 1-0ಯಿಂದ ಗೆಲುವು ಸಾಧಿಸಿದ ಭಾರತ, ಫೈನಲ್‌ನಲ್ಲಿ ಪಾಕನ್ನೂ ಅಷ್ಟೇ ಅಂತರದಿಂದ ಮಣಿಸಿತು. ಇಲ್ಲಿ ಮರೆಯಲೇಬಾರದ ಸಂಗತಿಯೆಂದರೆ ಬಲ್ಬಿರ್ ಸಿಂಗ್ ಅದ್ಭುತ ಆಟ. ಫೈನಲ್‌ನಲ್ಲಿ ಅವರ ಬಲಗೈಗೆ ಗಾಯವಾಗಿತ್ತು. ಅದರ ನಡುವೆಯೂ ಆಡಿ ತಂಡವನ್ನು ಗೆಲ್ಲಿಸಿದರು.
1964, ಟೋಕಿಯೊ
ಇಟಲಿಯ ರೋಮ್‌ನಲ್ಲಿ 1960ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಫೈನಲ್‌ನಲ್ಲಿ ಸೋತು ಬೆಳ್ಳಿ ಗೆದ್ದಿತ್ತು. ಮೊದಲ ಬಾರಿಗೆ ಪಾಕ್ ಚಿನ್ನ ಗೆದ್ದಿತ್ತು. 1964ರಲ್ಲಿ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮತ್ತೆ ಭಾರತ ಚಿನ್ನ ಜಯಿಸಿತು. ವಿಶೇಷವೆಂದರೆ ಭಾರತ-ಪಾಕಿಸ್ಥಾನಗಳು ಸತತ ಮೂರನೇ ಬಾರಿಗೆ ಫೈನಲ್‌ನಲ್ಲಿ ಎದುರಾಗಿದ್ದು. ಒಟ್ಟಾರೆ ಭಾರತ ಕಠಿನ ಪರಿಸ್ಥಿತಿಗಳನ್ನು ಎದುರಿಸಿ ಸೆಮಿಫೈನಲ್‌ಗೇರಿತು. ಅಲ್ಲಿ ಆಸೀಸ್ ವಿರುದ್ಧ 3-1ರಿಂದ ಗೆಲುವು ಸಾಧಿಸಿತು. ಫೈನಲ್‌ನಲ್ಲಿ ಎದುರಾದ ಪಾಕ್ ತಂಡ ಅತ್ಯಂತ ಬಲಿಷ್ಠವಾಗಿತ್ತು. ಹಾಗೆಯೇ ಮೆಚ್ಚಿನ ತಂಡವಾಗಿತ್ತು. ಅದರ ವಿರುದ್ಧ 1-0ಯಿಂದ ರೋಚಕ ಗೆಲುವು ಸಾಧಿಸಿತು.
1980, ಮಾಸ್ಕೋ
ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತ ಚಿನ್ನ ಗೆಲ್ಲದೇ ಮಾಸ್ಕೋಗೆ ಬಂದಿಳಿದಿತ್ತು. ಒಂದು ರೀತಿಯ ವಿಚಿತ್ರ ಸ್ಥಿತಿ. ಕಷ್ಟಪಟ್ಟು ಸೆಮಿಫೈನಲ್‌ಗೇರಿದ ಭಾರತ ಅಲ್ಲಿ ಆತಿಥೇಯ ರಷ್ಯಾವನ್ನು 4-2ರಿಂದ ಮಣಿಸಿತು. ಫೈನಲ್‌ನಲ್ಲಿ ಸ್ಪೇನ್‌ನಿಂದ ಕಠಿನಾತಿಕಠಿನ ಪೈಪೋಟಿ ಎದುರಿಸಿತು. ಮೊಹಮ್ಮದ್ ಶಾಹಿದ್ ಬಾರಿಸಿದ ಒಂದು ನಿರ್ಣಾಯಕ ಗೋಲಿನ ಪರಿಣಾಮ ಭಾರತ 4-3ರಿಂದ ಚಿನ್ನ ಪಡೆಯಿತು. ಇದರೊಂದಿಗೆ ಭಾರತದ ಚಿನ್ನದ ಸಂಖ್ಯೆ 8ಕ್ಕೇರಿತು. ಅನಂತರ ಮತ್ತೊಂದು ಚಿನ್ನ ಗೆದ್ದಿಲ್ಲ.
1975ರಲ್ಲೊಮ್ಮೆ
ವಿಶ್ವ ಚಾಂಪಿಯನ್, ಆದರೆ…
1978ರಿಂದ 2014ರ ವರೆಗೆ ಸತತವಾಗಿ ಗುಂಪು ಹಂತದಲ್ಲೇ ಸೋಲು, 2018ರಲ್ಲಿ ಕ್ವಾರ್ಟರ್ ಫೈನಲ್‌ಗೆ
ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ 8 ಚಿನ್ನ ಗೆದ್ದರೂ ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. 1971ರಲ್ಲಿ ನಡೆದ ಮೊದಲ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ ವಿರುದ್ಧ ಸೋಲನುಭವಿಸಿತ್ತು. ಅಂತರ 1-2 ಗೋಲುಗಳು. ಕಡೆಗೆ ಕಂಚಿನ ಪದಕಕ್ಕಾಗಿ ಕೀನ್ಯಾ ವಿರುದ್ಧ ಸೆಣೆಸಿ, 2-1ರಿಂದ ಗೆದ್ದು ಸಮಾಧಾನಪಟ್ಟಿತು.
1973ರಲ್ಲಿ ಭಾರತ ತನ್ನ ಪ್ರದರ್ಶನವನ್ನು ಇನ್ನಷ್ಟು ವೃದ್ಧಿಸಿಕೊಂಡಿತು. ಇಲ್ಲಿ ಫೈನಲ್‌ಗೆ ನೆಗೆದು, ಅಲ್ಲಿ ಸೋತು ಬೆಳ್ಳಿ ಪಡೆಯಿತು. ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ ವಿರುದ್ಧ 1-0ಯಿಂದ ರೋಚಕ ಗೆಲುವು ಪಡೆಯಿತು. ಫೈನಲ್‌ನಲ್ಲಿ ಎದುರಾಗಿದ್ದು ಬಲಿಷ್ಠ ನೆದರ್ಲೆಂಡ್ ತಂಡ. ನಿಗದಿತ ಅವಧಿ ಮುಗಿದಾಗ ಪಂದ್ಯ 2-2ರಿಂದ ಸಮಗೊಂಡಿತು. ಕಡೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ 2-4ರಿಂದ ಸೋತುಹೋಯಿತು.
1975ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ವಿಶ್ವಕಪ್ ನಡೆಯಿತು. ಇಲ್ಲಿ ಮೊದಲ ಬಾರಿಗೆ ಭಾರತ ವಿಶ್ವಕಪ್ ಗೆದ್ದಿತು. ಸೆಮಿಫೈನಲ್‌ನಲ್ಲಿ ಆತಿಥೇಯ ಮಲೇಷ್ಯಾವನ್ನು 3-2ರಿಂದ ಭಾರತ ಸೋಲಿಸಿತು. ಇನ್ನೊಂದು ಕಡೆ ಪಾಕಿಸ್ಥಾನ, ಪಶ್ಚಿಮ ಜರ್ಮನಿಯನ್ನು 5-1ರಿಂದ ಮಣಿಸಿತು. ಫೈನಲ್‌ನಲ್ಲಿ ಭಾರತ, ಪಾಕಿಸ್ಥಾನಗಳು ಎದುರಾದವು. ಇಲ್ಲಿ ಭಾರತ 2-1ರಿಂದ ಗೆಲುವು ಸಾಧಿಸಿ, ಟ್ರೋಫಿ ಜಯಿಸಿತು. ಇದೇ ಭಾರತದ ಮೊದಲ ವಿಶ್ವಕಪ್ ಗೆಲುವಿನ ಸಂಭ್ರಮ. ಅದಾದ ಮೇಲೆ ಕಪ್ ಗೆದ್ದೇ ಇಲ್ಲ!
1978ರಿಂದ 2014ರ ವರೆಗೆ ಸತತವಾಗಿ ಗುಂಪು ಹಂತದಲ್ಲೇ ಭಾರತ ಸೋತು ಹೊರಬಿದ್ದಿದೆ. 2018ರಲ್ಲಿ ಭುವನೇಶ್ವರದಲ್ಲಿ ವಿಶ್ವಕಪ್ ನಡೆದಿದ್ದಾಗ ಭಾರತ ಕ್ವಾರ್ಟರ್ ಫೈನಲ್‌ವರೆಗೆ ಏರಿತ್ತು. ಇದೊಂದು ಸಮಾಧಾನಕರ ಸಂಗತಿ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವುದರಿಂದ, ಈ ಬಾರಿ ಭಾರತ ಫೈನಲ್ಗೇರಬಹುದೆಂಬ ವಿಶ್ವಾಸವಿದೆ. ಕೋಟ್ಯಂತರ ಭಾರತೀಯರ ಹಾರೈಕೆಯೂ ತಂಡದ ಜತೆಗಿದೆ.
ಟೋಕಿಯೊದಲ್ಲಿ ಭಾರತ ಹಾಕಿಯ ಪುನರುತ್ಥಾನ!
2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿಯ ಪುನರುತ್ಥಾನವಾಯಿತು ಎಂದರೆ ತಪ್ಪಲ್ಲ. ಲೀಗ್ ಹಂತದಲ್ಲಿ ಭಾರತ ತನ್ನ ಮೊದಲ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ 3-2ರಿಂದ ಜಯಿಸಿತು. ಆಸ್ಟ್ರೇಲಿಯಾ ವಿರುದ್ಧ 7-1ರಿಂದ ಹೀನಾಯವಾಗಿ ಸೋತು ಹೋಯಿತು. 3ನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ 3-0ಯಿಂದ ಗೆದ್ದ ಭಾರತ, 4ನೇ ಪಂದ್ಯದಲ್ಲಿ ಅದ್ಭುತ ಉತ್ತರವನ್ನೇ ನೀಡಿತು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅರ್ಜೆಂಟೀನಾವನ್ನು 3-1ರಿಂದ ಮಣಿಸಿತು. ಜಪಾನ್ ವಿರುದ್ಧ 5-3ರಿಂದ ಗೆದ್ದು ಗುಂಪು “ಎ’ನಲ್ಲಿ 2ನೇ ಸ್ಥಾನಿಯಾಯಿತು. ಕ್ವಾರ್ಟರ್ ಫೈನಲ್‌ನಲ್ಲಿ ಪ್ರಬಲ ಇಂಗ್ಲೆಂಡ್ ಭಾರತಕ್ಕೆ ಎದುರಾಳಿ. ಆ ತಂಡವನ್ನು ಸುಲಭವಾಗಿ 3-1ರಿಂದ ಮಣಿಸಿ ಭಾರತ ಸೆಮಿಫೈನಲ್‌ಗೇರಿತು.
ಸೆಮಿಫೈನಲ್‌ನಲ್ಲಿ ಭಾರತ 5-2ರಿಂದ ಬೆಲ್ಜಿಯಂ ವಿರುದ್ಧ ಸೋತುಹೋಯಿತು! ಹೀಗೆಂದರೆ ಭಾರತೀಯರ ಆಟವನ್ನೇ ತಪ್ಪಾಗಿ ವಿಶ್ಲೇಷಣೆ ಮಾಡಿದಂತೆ. ಪಂದ್ಯದ ಕೊನೆಯ ಅವಧಿಯವರೆಗೆ ಭಾರತಕ್ಕೇ ಗೆಲ್ಲುವ ಅವಕಾಶವಿದ್ದಿದ್ದು. ಅದು ಹೇಗೆಂದು ಕೇಳಿ… ಬೆಲ್ಜಿಯಂ ಮೊದಲ ಗೋಲನ್ನು ಬಹಳ ಬೇಗ ಬಾರಿಸಿತು. ಅನಂತರ ಭಾರತ ಸತತ 2 ಗೋಲುಗಳನ್ನು ಬಾರಿಸಿ ಮುನ್ನಡೆ ಸಾಧಿಸಿತು. ಇನ್ನೇನು ಮೊದಲ ಅವಧಿ ಮುಗಿಯಬೇಕು ಎನ್ನುವಾಗ ಬೆಲ್ಜಿಯಂ ಇನ್ನೊಂದು ಗೋಲು ಬಾರಿಸಿ ಅಂಕವನ್ನು 2-2ರಿಂದ ಸಮಗೊಳಿಸಿತು. ಪಂದ್ಯ 49ನೇ ನಿಮಿಷಕ್ಕೆ ಹೋಗುವರೆಗೆ ಎರಡೂ ತಂಡಗಳು ಜಿದ್ದಾಜಿದ್ದಿನಿಂದ ಕಾದಾಡಿದವು. ಆಗ ಬೆಲ್ಜಿಯಂ ದಿಢೀರನೇ ಗೋಲು ಬಾರಿಸಿತು. ಪಂದ್ಯ ಮುಗಿಯಲು ಕೇವಲ 10 ನಿಮಿಷವಿದ್ದಿದ್ದರಿಂದ ಭಾರತಕ್ಕೆ ಆಕ್ರಮಣಕಾರಿಯಾಗದೇ ದಾರಿಯೇ ಇರಲಿಲ್ಲ. ಇದನ್ನು ಬೆಲ್ಜಿಯಂ ಚೆನ್ನಾಗಿ ಉಪಯೋಗಿಸಿಕೊಂಡು ಮತ್ತೆರಡು ಗೋಲು ಬಾರಿಸಿತು. ಹಾಗೆ ಭಾರತ ಫೈನಲ್ ಅವಕಾಶ ತಪ್ಪಿಸಿಕೊಂಡಿದ್ದು.
ಆದ್ದರಿಂದ ಭಾರತ ಕಂಚಿನ ಪಂದ್ಯದಲ್ಲಿ ಆಡಿತು. ಅರ್ಥಾತ್ ಇನ್ನೊಂದು ಸೆಮಿಫೈನಲ್‌ನಲ್ಲಿ ಸೋತಿದ್ದ ಬಲಿಷ್ಠ ತಂಡ ಜರ್ಮನಿಯನ್ನು ಎದುರಿಸಿತು. ಅಲ್ಲಿ ಭಾರತ ಆರಂಭದಲ್ಲಿ 3-1ರಿಂದ ಹಿಂದಿತ್ತು. ಅನಂತರ ಅದ್ಭುತವಾಗಿ ತಿರುಗಿಬಿದ್ದು 5-4ರಿಂದ ಗೆಲುವು ಸಾಧಿಸಿತು. 2021ರಲ್ಲಿ ನಡೆದ ಮೂರನೇ ಅತ್ಯುತ್ತಮ ಪಂದ್ಯ ಇದೆಂದು ಸ್ವತ ಎಫ್ಐಎಚ್ ಹೇಳಿತು!
ಕುತೂಹಲಕಾರಿ ಸಂಗತಿಗಳು
ನಾಲ್ಕು ಬಾರಿ ವಿಶ್ವಕಪ್ ಗೆದ್ದು, ಕೂಟದಲ್ಲಿ ಅತ್ಯಂತ ಯಶಸ್ವಿ ತಂಡ ಎಂಬ ಹೆಗ್ಗಳಿಕೆ ಹೊಂದಿರುವ ಪಾಕಿಸ್ಥಾನ ಈ ಬಾರಿ ಅರ್ಹತೆಯನ್ನು ಪಡೆದುಕೊಳ್ಳುವುದಕ್ಕೇ ವಿಫಲವಾಗಿದೆ! 2014 ಸೇರಿ ಈ ಕೂಟವನ್ನು ಪಾಕ್ ಎರಡನೇ ಬಾರಿಗೆ ತಪ್ಪಿಸಿಕೊಳ್ಳುತ್ತಿದೆ.
ಈ ಬಾರಿಯದ್ದೂ ಸೇರಿ ಭಾರತ 4ನೇ ಬಾರಿಗೆ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. 1982ರಲ್ಲಿ ಮುಂಬಯಿಯಲ್ಲಿ, 2010ರಲ್ಲಿ ದಿಲ್ಲಿಯಲ್ಲಿ, 2014ರಲ್ಲಿ ಒಡಿಶಾದಲ್ಲಿ ಈ ಹಿಂದೆ ವಿಶ್ವಕಪ್ ಆಯೋಜಿತಗೊಂಡಿತ್ತು.
1971ರಲ್ಲಿ ಹಾಕಿ ವಿಶ್ವಕಪ್ ಆರಂಭವಾಯಿತು. ಪ್ರಸ್ತುತ ನಡೆಯುತ್ತಿರುವುದು 15ನೇ ಆವೃತ್ತಿಯಾಗಿದೆ.
2023ರ ಕೂಟ ಹಾಕಿ ವಿಶ್ವಕಪ್ 50 ವರ್ಷ ದಾಟಿದ ಸಂಭ್ರಮಾಚರಣೆಯೂ ಹೌದು.
ಸತತ 2ನೇ ಬಾರಿ ವಿಶ್ವಕಪ್ ಆಯೋಜಿಸುತ್ತಿರುವ ಮೊದಲ ದೇಶ ಭಾರತ.
ಇದೇ ಮೊದಲ ಬಾರಿಗೆ ಪುರುಷರ ಹಾಕಿ ವಿಶ್ವಕಪ್ ಅನ್ನು ಎರಡು ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಈ ಬಾರಿ ಭುವನೇಶ್ವರ ಮತ್ತು ರೂರ್ಕಿಯಲ್ಲಿ ಕೂಟ ನಡೆಯುತ್ತಿದೆ.
ಇದು ಏಷ್ಯಾ ಖಂಡದಲ್ಲಿ ನಡೆಯುತ್ತಿರುವ 7ನೇ ವಿಶ್ವಕಪ್. ಈ ಕೂಟಗಳ ಆತಿಥ್ಯ ವಹಿಸಿದ್ದಾಗ ಭಾರತ, ಪಾಕಿಸ್ಥಾನ, ಮಲೇಷ್ಯಾಗಳು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
ಈ ಬಾರಿ ವೇಲ್ಸ್ ಮತ್ತು ಚಿಲಿ ತಂಡಗಳು ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿವೆ.
ಒಂದು ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಏಕೈಕ ಭಾರತೀಯ ರಾಜಿಂದರ್ ಸಿಂಗ್. ಅವರು 1982ರ ಮುಂಬಯಿ ವಿಶ್ವಕಪ್‌ನಲ್ಲಿ 12 ಗೋಲು ಬಾರಿಸಿದ್ದರು.
2014, 2018ರಲ್ಲಿ ಅರ್ಜೆಂಟೀನಾ ಪರ ಆಡಿ ಅತ್ಯುತ್ತಮ ಸಾಧನೆ ಮಾಡಿದ್ದ ಪೀಲಟ್ ಈ ಬಾರಿ ಜರ್ಮನಿ ಪರ ಆಡಲಿದ್ದಾರೆ. ಅವರು 2022ರಲ್ಲಿ ತಮ್ಮ ನಾಗರಿಕತ್ವವನ್ನು ಜರ್ಮನಿಗೆ ಬದಲಾಯಿಸಿಕೊಂಡಿದ್ದಾರೆ.
ಪೀಲಟ್ ಮಾದರಿಯಲ್ಲೇ ಅರ್ಜೆಂ ಟೀನಾದ ಜೊಖೀನ್ ಮೆನಿನಿ ತಂಡ ಬದಲಾಯಿಸಿಕೊಂಡಿದ್ದಾರೆ. ಅವರು ಈ ಬಾರಿ ಸ್ಪೇನ್ ಪರ ಆಡಲಿದ್ದಾರೆ.
-ಮಾಹಿತಿ: ಕೆ. ಪೃಥ್ವಿಜಿತ್
ವಿನ್ಯಾಸ: ಸತೀಶ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.