ಹಾರುವ ಕನಸಿಗೆ ರೆಕ್ಕೆ ಕಟ್ಟಿದ ಅನ್ನಿ ದಿವ್ಯಾ
Team Udayavani, Mar 27, 2022, 6:55 AM IST
ಹಾರುವ ಕನಸು ಕಾಣುವವರು ಹಲವರು. ಆದರೆ ರೆಕ್ಕೆ ಸಿಗುವುದು ಎಲ್ಲೋ ಕೆಲವರಿಗೆ ಮಾತ್ರ. ಅದೇ ರೀತಿ ಬಾಲ್ಯದಿಂದಲೇ ಹಾರುವ ಕನಸು ಕಂಡು, 19ನೇ ವಯಸ್ಸಿನಲ್ಲೇ ಏರ್ ಇಂಡಿಯಾ ಮೂಲಕ ಹಾರಾಟ ಆರಂಭಿಸಿ, ಅನೇಕರಿಗೆ ಸ್ಫೂರ್ತಿಯಾದ ಯುವತಿ ಅನ್ನಿ ದಿವ್ಯಾರ ಕಥೆಯಿದು.
ಅದು ಮಧ್ಯಮ ವರ್ಗದ ಕುಟುಂಬ. ದಂಪತಿ ಹಾಗೂ ಮೂರು ಮಕ್ಕಳು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿದ್ದರು. ಹೆಚ್ಚು ವಿದ್ಯಾಭ್ಯಾಸ ಮಾಡುವುದಕ್ಕೆ ಅವಕಾಶ ಸಿಕ್ಕದ ತಂದೆ, ಸೇನೆ ಸೇರಿ 19 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದರು. ಪಠಾಣ್‌ಕೋಟ್‌ನಲ್ಲಿ ವಾಯುನೆಲೆಯ ಸನಿಹದಲ್ಲೇ ಆ ಕುಟುಂಬದ ಮನೆ ಯಿತ್ತರಾದ್ದರಿಂದ 3 ಮಕ್ಕಳ ತಾಯಿಗೆ, ತನ್ನ ಒಬ್ಬ ಮಗುವನ್ನಾದರೂ ಪೈಲಟ್ ಮಾಡಬೇಕು ಎನ್ನುವ ಕನಸಿತ್ತು. ಅದಕ್ಕೆ ಸಿಕ್ಕಿದ್ದು ಮಧ್ಯದ ಮಗಳು ಅನ್ನಿ ದಿವ್ಯಾ.
ಅನ್ನಿ ದಿವ್ಯಾ ವಿಮಾನ ಹಾರಾಡುವುದನ್ನು ತೀರಾ ಹತ್ತಿರದಲ್ಲೇ ನೋಡುತ್ತಾ ಬೆಳೆದವರು. ತಂದೆಯ ನಿವೃತ್ತಿಯ ಅನಂತರ ಕುಟುಂಬ ಆಂಧ್ರಪ್ರದೇಶದ ವಿಜಯವಾಡಕ್ಕೆ ಸ್ಥಳಾಂತರಗೊಂಡಿ ತ್ತಾದರೂ ದಿವ್ಯಾರ ಮನಸ್ಸಲ್ಲಿ ಹಾರಾಟದ ಕನಸು ಮಾಸಿರಲಿಲ್ಲ. “ಅಮ್ಮಾ, ನಾನು ವಿಮಾನದಂತೇ ಹಾರಬೇಕು’ ಎಂದು ತಾಯಿ ಬಳಿ ಆಸೆ ಹೇಳಿಕೊಳ್ಳುತ್ತಿದ್ದರು. ಅದಕ್ಕೆ ತಾಯಿ ತನ್ನ ಕನಸನ್ನೂ ಸೇರಿಸಿ, “ನೀನು ಹಾರಬೇಕೆಂದರೆ ಪೈಲಟ್ ಆಗಿ ರೆಕ್ಕೆಗಳನ್ನು ಕಟ್ಟಿಕೊಳ್ಳಬೇಕು’ ಎಂದು ಹೇಳಿದ್ದರು.
ಹೀಗೆ ಬಾಲ್ಯದಿಂದಲೇ ಹಾರುವ ಕನಸಿನೊಂದಿಗೇ ಬೆಳೆದ ದಿವ್ಯಾ, 17ನೇ ವಯಸ್ಸಿಗೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿರುವ “ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ’ಯಲ್ಲಿ ಪೈಲಟ್ ತರಬೇತಿಗೆ ಸೇರಿಕೊಂಡರು. ಆದರೆ ಮಗಳಿಗೆ ಪ್ರಸಿದ್ಧ ಅಕಾಡೆಮಿಯಲ್ಲಿ ನೋಂದಣಿ ಮಾಡಿಸುವುದು ತಂದೆ ತಾಯಿಗೆ ಸುಲಭದ ಕೆಲಸವಾಗಿರಲಿಲ್ಲ. ಶುಲ್ಕವಾಗಿ ಪಾವತಿಸಬೇಕಿದ್ದ ಲಕ್ಷಾಂತರ ರೂಪಾಯಿಗಾಗಿ ಅವರು ಸಾಲ ಮಾಡಬೇಕಾಯಿತು. ಬರೋಬ್ಬರಿ 15 ಲಕ್ಷ ರೂಪಾಯಿ ಸಾಲ ಮಾಡಿ ಮಗಳಿಗೆ ತರಬೇತಿ ಕೊಡಿಸಿದರು. ಎರಡು ವರ್ಷಗಳ ಕಾಲ ಪೈಲಟ್ ತರಬೇತಿ ಪಡೆಯುವುದು ದಿವ್ಯಾರಿಗೂ ಒಂದು ಸವಾಲಾಗಿತ್ತು.
ಚಿಕ್ಕ ವಯಸ್ಸಿನಲ್ಲಿ ಹೆತ್ತ ತಂದೆ ತಾಯಿಯನ್ನು ಬಿಟ್ಟು ಬೇರೆಯದ್ದೇ ರಾಜ್ಯಕ್ಕೆ ಬಂದಿದ್ದರವರು. ಇನ್ನೂ ಪದವಿಯನ್ನೂ ಪಡೆಯದ ಹುಡುಗಿ ವಿಮಾನ ಹಾರಿಸುವಂತಹ ದೊಡ್ಡ ಸವಾಲಿನ ಕೆಲಸಕ್ಕೆ ಕೈ ಹಾಕಿದ್ದರು. ಅದಕ್ಕೆ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಸಿದ್ಧವಾಗಬೇಕಿತ್ತು. ಇದರ ಮಧ್ಯೆ ಭಾಷೆಯೂ ಒಂದು ಸಮಸ್ಯೆಯಾಗಿ ಕಾಡಲಾರಂಭಿಸಿತ್ತು. ಕೇವಲ ಹಿಂದಿ ಮತ್ತು ತೆಲುಗು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು ಬರುತ್ತಿದ್ದ ದಿವ್ಯಾರಿಗೆ ಇಂಗ್ಲಿಷ್ ಅಷ್ಟರ ಮಟ್ಟಿಗೆ ಬರುತ್ತಿರಲಿಲ್ಲ. ಅದೇ ಕಾರಣಕ್ಕೆ ಅವರು ಹಲವಾರು ಬಾರಿ ಅವಮಾನಕ್ಕೀಡಾಗಿದ್ದೂ ಇದೆ. ಆದರೆ ಪ್ರತೀ ಬಾರಿ ಆಗಸ ನೋಡಿ ಹಾರುವ ಕನಸನ್ನು ನೆನಪಿಸಿಕೊಳ್ಳುತ್ತಿದ್ದ ಅವರು ಹಠ ಬಿಡದೆ ತರಬೇತಿ ಪಡೆದರು ಮತ್ತು ಇಂಗ್ಲಿಷ್‌ನ್ನೂ ಕಲಿತು ಸರಾಗವಾಗಿ ಮಾತನಾಡಲಾರಂಭಿಸಿದರು.
2019ರಲ್ಲಿ ತರಬೇತಿ ಮುಗಿಸಿದ ದಿವ್ಯಾರಿಗೆ ತಮ್ಮ 19ನೇ ವಯಸ್ಸಿನಲ್ಲೇ ಏರ್ ಇಂಡಿಯಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರನ್ನು ಹೆಚ್ಚಿನ ತರಬೇತಿಗಾಗಿ ಸ್ಪೇನ್‌ಗೆ ಕಳುಹಿಸಿಕೊಡ ಲಾಯಿತು. ಅಲ್ಲಿ ಅವರಿಗೆ ಬೋಯಿಂಗ್ 737 ವಿಮಾನದ ಪೈಲಟ್ ಆಗಿ ಕೆಲಸದ ತರಬೇತಿ ನೀಡಲಾಯಿತು. ಅಲ್ಲಿ ಎರಡು ವರ್ಷ ತರಬೇತಿ ಪಡೆದ ಅನಂತರ ಅವರನ್ನು ಹೆಚ್ಚಿನ ತರಬೇತಿಗಾಗಿ ಲಂಡನ್‌ಗೆ ಕಳುಹಿಸಲಾಯಿತು. ಅಲ್ಲಿ ಅವರು ಬೋಯಿಂಗ್ 777 ವಿಮಾನ ಹಾರಾಟದ ತರಬೇತಿಯನ್ನು ಪಡೆದರು.
ಅದಾದ ಅನಂತರ ದಿವ್ಯಾ ಅವರು 30ನೇ ವರ್ಷದವರಾಗಿದ್ದಾಗ ಅಂದರೆ 2017ರಲ್ಲಿ ಅವರನ್ನು ರಿಯಾದ್‌ನಿಂದ ಮುಂಬಯಿಗೆ ಪ್ರಯಾಣ ಮಾಡುತ್ತಿದ್ದ ಬೋಯಿಂಗ್ 777 ವಿಮಾನಕ್ಕೆ ಕಮಾಂಡರ್ ಆಗಿ ನೇಮಕ ಮಾಡಲಾಯಿತು. ವಿಶ್ವದ ಅತ್ಯಂತ ದೊಡ್ಡ ವಿಮಾನ ಹಾಗೂ ಟ್ವಿನ್ ವಿಮಾನ ಎನಿಸಿಕೊಂಡಿರುವ ಬೋಯಿಂಗ್ 777 ವಿಮಾನಕ್ಕೆ ಕಮಾಂಡರ್ ಆಗಿ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಪೈಲಟ್ ಆಗಿ ದಿವ್ಯಾ ಹೊರಹೊಮ್ಮಿದರು.
ಇಷ್ಟರ ಮಟ್ಟಿಗೆ ಸಾಧನೆ ಮಾಡಿದ ದಿವ್ಯಾ ಅವರ ಪೈಲಟ್ ಹಾದಿ ಅಷ್ಟು ಸುಲಭವಾಗಿರಲಿಲ್ಲ. ದಿವ್ಯಾ ಅವರು ಮೊದಲನೆಯದಾಗಿ ಉತ್ತರ ಪ್ರದೇಶದಲ್ಲಿ ವಿಮಾನ ಹಾರಾಟದ ತರಬೇತಿ ಪಡೆಯು ವಾಗ ದಿವ್ಯಾರಿಗೆ ತಂದೆ ತಾಯಿಯಿಂದ ಸಂಪೂರ್ಣ ಬೆಂಬಲವಿತ್ತಾದರೂ ಕುಟುಂಬದ ಇನ್ನಾರದ್ದೂ ಬೆಂಬಲವಿರ ಲಿಲ್ಲ. ಹಾಗಾಗಿ ದಿವ್ಯಾ ಕುಟುಂಬದವ ರಿಂದಲೇ ದೂರವಾಗಲಾರಂಭಿಸಿದರು. ಸುಮ್ಮನೆ ಕೋಣೆಯೊಳಗೆ ಕುಳಿತುಕೊಳ್ಳು ತ್ತಿದ್ದರು. ಆದರೆ ಒಂದು ಸಮಯದಲ್ಲಿ ಅವರಿಗೆ “ನಾನೇಕೆ ತಲೆ ತಗ್ಗಿಸಬೇಕು?’ ಎನ್ನುವ ಪ್ರಶ್ನೆ ಮೂಡಿತು. ಅದಾದ ಅನಂತರ ಅವರು ಯಾರ ಹೀಯಾಳಿಕೆಗೂ ತಲೆ ಕೊಡದೆ ಮುನ್ನಡೆಯಲಾರಂಭಿಸಿದರು.
ದೇಶೀಯ ಮತ್ತು ವಿದೇಶಿ ವಿಮಾನಗಳನ್ನೂ ಹಾರಾಟ ಮಾಡಿರುವ ದಿವ್ಯಾರಿಗೆ ಒಮ್ಮೆ ಪುರುಷ ಸಹೋದ್ಯೋಗಿ ಯೊಂದಿಗೆ ಕೆಲಸ ಮಾಡಬೇಕಾಗಿ ಬಂದಿತು. ಇಬ್ಬರೂ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತಿದ್ದಾಗ, ಪುರುಷ ಸಹೋದ್ಯೋಗಿಯು, “ಹೆಣ್ಣು ಮಕ್ಕಳು ಸಹಜವಾಗಿ ಅಡುಗೆ ಮನೆಯಲ್ಲೇ ಇರುತ್ತಾರಲ್ಲವೇ? ನೀವೇಕೆ ಪೈಲಟ್ ಆದಿರಿ’ ಎಂದು ಪ್ರಶ್ನಿಸಿದರಂತೆ. ಆ ಪ್ರಶ್ನೆ ಕೇಳಿ ನಕ್ಕ ದಿವ್ಯಾ, “ಹೌದು. ಯಾರಿಗೆ ಯಾವ ಕೆಲಸ ಇಷ್ಟವೋ ಅವರು ಅದನ್ನೇ ಮಾಡಬೇಕು. ನನಗೆ ಹಾರುವುದು ಇಷ್ಟವಿತ್ತು, ಈಗ ಹಾರುತ್ತಿದ್ದೇನೆ. ಬಹುಶಃ ನಿಮಗೆ ಅಡುಗೆ ಬಗ್ಗೆ ಹೆಚ್ಚು ಆಸಕ್ತಿಯಿದ್ದಂತಿದೆ. ನೀವೂ ಅಡುಗೆ ಮಾಡುತ್ತಾ ಅಡುಗೆ ಮನೆಯಲ್ಲೇ ಇರಬಹುದು’ ಎಂದು ನಗುತ್ತಲೇ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಅದನ್ನು ಕೇಳಿದ ಪೈಲಟ್ ಮರು ಮಾತನಾಡದೆ ಸುಮ್ಮನಾಗಿದ್ದರಂತೆ.
ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಮೇಲುಗೈ ಸಾಧಿಸಿದ್ದಾರೆ. ಆದರೆ ವಿಮಾನಯಾನ ವಿಚಾರ ಅಥವಾ ಸಾರಿಗೆ ವಿಚಾರ ಬಂದಾಗ ಅದು ಒಂದು ಕೈ ಹಿಂದೆಯೇ ಇದೆ. ಇದು ಭಾರತದಲ್ಲಿ ಮಾತ್ರವೇ ಇರುವ ಸಮಸ್ಯೆಯಲ್ಲ. ಜಾಗತಿಕವಾಗಿ ಈ ಕ್ಷೇತ್ರಗಳಲ್ಲಿ ಮಹಿಳೆಯರ ಸ್ಥಾನ ಪುರುಷರಿಗಿಂತ ಹಿಂದೆಯೇ ಇದೆ. ಜಾಗತಿಕವಾಗಿ ವಿಮಾನಯಾನ ಕ್ಷೇತ್ರದಲ್ಲಿ ಕೇವಲ ಶೇ.4 ಭಾಗ ಮಾತ್ರವೇ ಹೆಣ್ಣು ಮಕ್ಕಳ ಪಾಲಾಗಿದೆ. ಆದರೆ ಈ ವಿಚಾರದಲ್ಲಿ ಭಾರತ ಒಂದು ರೀತಿಯಲ್ಲಿ ಸಾಧನೆ ಮಾಡಿದೆ ಎನ್ನಬಹುದು. ಜಾಗತಿಕವಾಗಿ ಅತೀ ಕಡಿಮೆ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಈ ಕ್ಷೇತ್ರದಲ್ಲಿದ್ದರೂ ಭಾರತದಲ್ಲಿ ವಿಮಾನಯಾನ ಕ್ಷೇತ್ರದ ಶೇ. 14 ಪಾಲು ಹೆಣ್ಣು ಮಕ್ಕಳದ್ದಾಗಿದೆ. ಅದರಲ್ಲಿ ನಾನೂ ಒಬ್ಬಳು ಎನ್ನುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ನಮ್ಮ ಹೆಮ್ಮೆಯ ಮಹಿಳಾ ಪೈಲಟ್ ಅನ್ನಿ ದಿವ್ಯಾ.
“ಬೋಯಿಂಗ್ 777 ವಿಮಾನದ ಕಮಾಂಡರ್ ಆಗಿ ಆಯ್ಕೆಯಾದಾಗ ನಾನು ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದೇನೆ ಎನ್ನುವ ವಿಚಾರ ನನಗೇ ಗೊತ್ತಿರಲಿಲ್ಲ. ಹೆಣ್ಣಿಗೆ ಎಲ್ಲ ಕ್ಷೇತ್ರಗಳಲ್ಲೂ ಅದರಲ್ಲೂ ಸಾರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಸವಾಲು ಇದ್ದೇ ಇದೆ. ಗಂಡಿಗಿಂತ ಹೆಚ್ಚು ಪರಿಶ್ರಮ ಆಕೆ ಹಾಕಲೇಬೇಕಾಗುತ್ತದೆ. ಆದರೆ ನಿಮ್ಮ ಕನಸಿನ ಗುರಿ ಒಂದೇ ಕಡೆ ಕೇಂದ್ರೀಕೃತವಾಗಿದ್ದರೆ ಎಲ್ಲ ಕೆಲಸವೂ ಸಾಧ್ಯ’ ಎನ್ನುತ್ತಾರೆ ದಿವ್ಯಾ.
ಕೆಲಸದ ಜತೆ ಓದು: ದಿವ್ಯಾ ಅವರು ಏರ್ ಇಂಡಿಯಾದಲ್ಲಿ ಕೆಲಸ ಆರಂಭಿಸಿದ ಅನಂತರ ವಿದ್ಯಾ ಭ್ಯಾಸದ ಕಡೆಯೂ ಗಮನ ಕೊಟ್ಟರು. ಏವಿಯೇಶನ್ ವಿಭಾಗ ದಲ್ಲೇ ಬಿಎಸ್ಸಿ ಪದವಿ ಪಡೆದುಕೊಂಡರು. ಅದರ ಜತೆಯಲ್ಲಿ ಕ್ಲಾಸಿಕಲ್ ಕೀಬೋರ್ಡ್ ವಾದನವನ್ನೂ ಅಭ್ಯಾಸ ಮಾಡಿದರು.
ಬದುಕೇ ಬದಲಾಯಿತು: ಬೋಯಿಂಗ್ 777 ವಿಮಾನದ ಕಾಕ್‌ಪಿಟ್‌ನಲ್ಲಿ ದಿವ್ಯಾ ಕುಳಿತ ಅನಂತರ ಅವರ ಬದುಕೇ ಬದಲಾಯಿತು. ಸಹೋದರ, ಸಹೋದರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ದಿವ್ಯಾರ ಸಂಬಳವೇ ಬಂಡವಾಳಯವಾಯಿತು. ಏನೂ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ದಿವ್ಯಾ ಅಂದದ ಮನೆಯೊಂದನ್ನು ಕಟ್ಟಿಸಿಕೊಟ್ಟರು. ಪುಟ್ಟ ವಯಸ್ಸಿಗೇ ದೊಡ್ಡ ಸಾಧನೆ ಮಾಡಿದ ದಿವ್ಯಾರನ್ನು ಅಂದು ತೆಗಳಿದವರೂ ಈಗ ಹೊಗಳಲಾರಂಭಿಸಿ ದ್ದಾರೆ. ಹೆಚ್ಚು ಸಮಯ ಆಗಸದಲ್ಲೇ ಕಳೆವ ದಿವ್ಯಾ ಹಲವಾರು ದೇಶಗಳನ್ನು ಸುತ್ತಿದ್ದಾರೆ. ಜಾಗತಿಕವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿ ಒಟ್ಟು 500 ಮಂದಿಯಿರುವ ಆ ಪಟ್ಟಿಯಲ್ಲಿ ಈ 35 ವರ್ಷದ ಯುವತಿಯ ಹೆಸರೂ ಇದೆ. ತೆಲುಗು, ಹಿಂದಿ, ಇಂಗ್ಲಿಷ್, ಉರ್ದು ಜತೆ ಅನೇಕ ಭಾಷೆಗಳನ್ನು ಕಲಿತಿರುವ ದಿವ್ಯಾ ಉರ್ದು ವಿನಲ್ಲಿ 30ಕ್ಕೂ ಅಧಿಕ ಕವಿತೆಗಳನ್ನೂ ಬರೆದಿದ್ದಾರೆ.
–ಮಂದಾರ ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.