ಬೆಂಗಳೂರಿನ ವಾಯು ಮಾಲಿನ್ಯದ ತೊಂದರೆಗಳನ್ನು ಇ-ವಾಹನಗಳು ನಿಭಾಯಿಸುವುದೇ?
ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರ್ವಜನಿಕ ಸಾರಿಗೆಯಾಗಿ ಬಳಸುವುದೇ ಸದ್ಯಕ್ಕೆ ಆಡಳಿತ ಮುಂದಿರುವ ಪರಿಹಾರೋಪಾಯ.
Team Udayavani, Apr 26, 2020, 8:37 PM IST
Representative Image
ಬೆಂಗಳೂರು:ವಾಯಮಾಲಿನ್ಯದಿಂದಾಗಿ ನವದೆಹಲಿಯಲ್ಲಿ ಘೋಷಿಸಲಾಗಿರುವ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯು ಸಾರ್ವಜನಿಕ ಸಾರಿಗೆಯ ಮಹತ್ವ ಹಾಗೂ ಅಗತ್ಯಕ್ಕೆ ಮತ್ತಷ್ಟು ಪುಷ್ಟಿನೀಡಿದೆ. ಭಾರತದಲ್ಲಿ ವಾಯುಮಾಲಿನ್ಯವು ಬಹುತೇಕರ ಸಾವಿಗೆ ಕಾರಣವಾಗುತ್ತಿದ್ದು, ಈ ಬಗ್ಗೆ ಸಂಶೋಧನೆ ನಡೆಸಿರುವ ಅಂತರಾಷ್ಟ್ರೀಯ ಸಂಸ್ಥೆ ‘ಇಂಟರ್‍ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್’ ಪ್ರಕಾರ ಡಿಸೇಲ್ ಇಂಜಿನ್‍ನ ಹೊರಬಿಡುವ ಹೊಗೆಯು ಕ್ಯಾನ್ಸರ್ ಕಾರಕವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮತ್ತೊಂದು ಅಧ್ಯಯನವು ಭಾರತದ ಆರು ಪ್ರಮುಖ ಮಾಲಿನ್ಯಯುತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ನಗರದಲ್ಲಿ ಹೆಚ್ಚುತ್ತಿರುವ ಡಿಸೇಲ್ ಜನರೇಟರ್ ಉಪಕರಣಗಳು, ವಾಹನಗಳ ಹೊಗೆ, ಕೈಗಾರಿಕಾ ಚಟುವಟಿಕೆಗಳ ಹೆಚ್ಚಳ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರ್ವಜನಿಕ ಸಾರಿಗೆಯಾಗಿ ಬಳಸುವುದೇ ಸದ್ಯಕ್ಕೆ ಆಡಳಿತ ಮುಂದಿರುವ ಪರಿಹಾರೋಪಾಯ.
ನಾರ್ತ್‍ವೆಸ್ಟರ್ನ್ ವಿಶ್ವವಿದ್ಯಾಲಯದ ಅಧ್ಯಯನವೊಂದು ವಾಯುಮಾಲಿನ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಹಾಗೂ ಆಂತರಿಕ ದಹನಕಾರಿ ಇಂಜಿನ್‍ಗಳನ್ನು (ಸಾಮಾನ್ಯವಾಗಿರುವ ಪೆಟ್ರೋಲ್, ಡಿಸೇಲ್ ಇಂಜಿನ್) ಹೊಂದಿರುವ ವಾಹನಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿದೆ. ಸಂಶೋಧಕರ ಪ್ರಕಾರ ದಹನಕಾರಿ ಇಂಜಿನ್‍ಗಳಿಗೆ ಹೋಲಿಸಿದರೆ ವಿದ್ಯುತ್ ಚಾಲಿತ ವಾಹನಗಳು ಪರಿಸರ ಹಾಗೂ ವಾಯುಮಾಲಿನ್ಯಕ್ಕೆ ಸಕಾರಾತ್ಮಕ ಪರಿಣಾಮವನ್ನೇ ಬೀರುತ್ತವೆ. ಒಟ್ಟು ಸಾರಿಗೆ ವ್ಯವಸ್ಥೆಯು ವಿದ್ಯುತ್ ಚಾಲಿತ ವಾಹನಗಳಿಗೆ ಬದಲಾಗುವುದರೊಂದಿಗೆ ಗಾಳಿಯ ಗುಣಮಟ್ಟ ಸುಧಾರಿಸಬಹುದು.
ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ (ಬಿ.ಎಂ.ಟಿ.ಸಿ.) ಸಾರಿಗೆ ಸಂಸ್ಥೆಯು 2014ರಲ್ಲಿ ಇ-ಬಸ್‍ಗಳ ಪ್ರಾಯೋಗಿಕ ಓಡಾಟವನ್ನು ಆರಂಭಿಸಿತ್ತಾದರೂ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಸಫಲವಾಗಿರಲಿಲ್ಲ. ಹೀಗಾಗಿ ಇದುವರೆಗೂ ಬಿಎಂಟಿಸಿ ಒಂದೇ ಒಂದು ಎಲೆಕ್ಟ್ರಿಕ್ ಬಸ್ಸನ್ನು ಹೊಂದಿಲ್ಲ. 5 ವರ್ಷಗಳ ಬಳಿಕ ಇದೀಗ ಕೇಂದ್ರ ಸರಕಾರದ `ಫಾಸ್ಟರ್ ಅಡಾಪ್ಶನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಫೇಮ್)’ ಇದರ ಎರಡನೇ ಹಂತದ ಅನುಷ್ಠಾನವಾಗಿ ಇದೀಗ ಅಕ್ಟೋಬರ್‍ನಲ್ಲಿ 300 ಇ – ಬಸ್‍ಗಳಿಗಾಗಿ ಟೆಂಡರ್ ಕರೆಯಲಾಗಿದೆ.
ಬಿಎಂಟಿಸಿ ಆಡಳಿತ ನಿರ್ದೇಶಕ ಸಿ. ಶಿಕಾ ಅವರು “ಭಾರಿ ಕೈಗಾರಿಕಾ ಇಲಾಖೆ (ಡಿ.ಹೆಚ್.ಐ)ಯ ಎಫ್‍ಎಎಂ – 2 ನೀತಿಯ ಅನ್ವಯ ಈಗ ಒಟ್ಟು ವೆಚ್ಚದ ಗುತ್ತಿಗೆಯನ್ನು ಮಾದರಿಯಾಗಿ ನೀಡಲಾಗಿದೆ. ಹೆಬ್ಬಾಳ, ಎಚ್.ಎಸ್.ಆರ್., ಕೆ.ಆರ್. ಪುರಂ ಮತ್ತು ವೈಟ್‍ಫೀಲ್ಡ್ ಡಿಪೋಗಳನ್ನು ಎಲೆಕ್ಟ್ರಿಕ್ ಬಸ್ ಡಿಪೋಗಳಾಗಿ ಪರಿವರ್ತಿಸಲು ಆಯ್ಕೆ ಮಾಡಲಾಗಿದೆ” ಎನ್ನುತ್ತಾರೆ.
ಕಿಕ್ಕಿರಿದ ರಸ್ತೆಗಳೇ ಸಮಸ್ಯೆ
ಎಲೆಕ್ಟ್ರಿಕ್ ಬೈಕ್ ಹೊಂದಿರುವ ಕಾಲೇಜು ವಿದ್ಯಾರ್ಥಿ ಸುಮೇದ್ ಸುನೀಲ್ ಕೇದಾರಿ ಅವರು ತಾನು ಪ್ರತಿದಿನ 24 ಕಿಲೋಮೀಟರ್ ಪ್ರಯಾಣಿಸುತ್ತಿರುವುದಾಗಿಯೂ, ಅದಾಗ್ಯೂ ಚಾರ್ಜಿಂಗ್ ಕೇಂದ್ರಗಳ ಕೊರತೆಯಿಂದಾಗಿ ಬೈಕ್ ಅನ್ನು ನಗರದಿಂದ ಹೊರಗೆ ತೆಗೆದುಕೊಂಡು ಹೋಗಲು ಹಿಂಜರಿಯುತ್ತೇನೆ ಎಂದಿದ್ದಾರೆ.ನಗರ ವ್ಯವಹಾರಗಳ ಕಾರ್ಯಕರ್ತನಾಗಿರುವ ಸಂಜೀವ್ ದ್ಯಾಮನ್ನವರ್ ಹೇಳುವಂತೆ ‘ರಸ್ತೆಗಳು ಕಿಕ್ಕಿರಿದ ಕಾರಣದಿಂದ ಬಸ್ಸುಗಳು 10 ಕಿಲೋಮೀಟರ್ ತಲುಪಲು 1 ಗಂಟೆಯ ಅವಧಿಯನ್ನು ತೆಗೆದುಕೊಳ್ಳುವುದರಿಂದ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಖಾಲಿಯಾಗುತ್ತದೆ’.
ಬ್ಯಾಟರಿ ಚಾಲಿತ ವಾಹನಗಳ ಮೇಲೆ ಇತ್ತೀಚಿನ ತೆರಿಗೆ ಕಡಿತದಂತಹ ಪ್ರೋತ್ಸಾಹಕರ ನೀತಿಯು ಅಗತ್ಯವಾಗಿದೆ ಎಂದು ಅಭಿಪ್ರಾಯಪಡುವ ಸಂಜೀವ್, ‘ರಸ್ತೆಯಲ್ಲಿ ಬಸ್ಸುಗಳಿಗೆ ಸಂಚರಿಸಲು ಪ್ರಾಮುಖ್ಯತೆ ಒದಗಿಸುವ ಲೇನ್‍ಗಳನ್ನು ರಚಿಸುವ ಮೂಲಕ ಎಲೆಕ್ಟ್ರಿಕ್ ಬಸ್‍ಗಳನ್ನು ಯಶಸ್ವಿಯಾಗಿ ಅಳವಡಿಸಬಹುದಾದರೂ, ಅಂತಿಮವಾಗಿ ಬೆಂಗಳೂರಿನಂತಹ ನಗರದಲ್ಲಿ ಇ-ಬಸ್‍ಗಳ ಓಡಾಟ ಅತ್ಯಂತ ಕಷ್ಟಕರ’ ಎಂಬುದು ಅವರ ಅಂದಾಜು.
ದ್ಯಾಮನ್ನನವರ್ ಅವರ ಇನ್ನೊಂದು ಸಲಹೆಯ ಪ್ರಕಾರ `ನೇರ ವಿದ್ಯುತ್ ಸಂಪರ್ಕದ ತಂತಿಗಳ ಮೂಲಕ ಬಸ್ಸುಗಳನ್ನು ಓಡಿಸುವುದು ಬಳಕೆಯ ಹಾಗೂ ನಿರ್ವಹಣೆಯ ವೆಚ್ಚವನ್ನು ತಗ್ಗಿಸುತ್ತದೆ, ಆದರೆ ಈ ಯೋಜನೆಯ ಆರಂಭಿಕ ಹೂಡಿಕೆಯು ಅತ್ಯಂತ ಹೆಚ್ಚಾಗಿರುತ್ತದೆ’.‘ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ಮರುಬಳಕೆಯೇ ಒಂದು ಚಿಂತೆಯಾಗಿದ್ದು, ದ್ವಿತೀಯ ಮಾರುಕಟ್ಟೆ ಇದ್ದಲ್ಲಿ ಬಳಸಿದ ಬ್ಯಾಟರಿಯನ್ನು ಇತರ ಅವಶ್ಯಕತೆಗಳಿಗೆ ಬಳಸಿಕೊಳ್ಳಬಹುದು’ ಎಂಬುದಾಗಿ ದ್ಯಾಮನ್ನವರ್ ವಿವರಿಸುತ್ತಾರೆ.
ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಬೇಕು
2019ರಲ್ಲಿ ಹುಂಡೈ ಮೋಟಾರ್ ಕಂಪೆನಿಯು ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. 15 ಕೋಟಿ ವಾಹನ ಚಾಲಕರಿರುವ ನಮ್ಮ ದೇಶದಲ್ಲಿ ಆಗಸ್ಟ್ ವೇಳೆಗೆ 130 ಕೋನಾ ಎಂಬ ಹೆಸರಿನ ಈ ಎಸ್‍ಯುವಿಗಳನ್ನು ವಿತರಕರಿಗೆ ಮಾರಾಟ ಮಾಡಲು ಸಾಧ್ಯವಾಗಿದೆಯಷ್ಟೇ. ವಿಶ್ವದ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿರುವ ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳ ಕೊರತೆಯಿಂದಾಗಿಯೇ ಇ-ಕಾರುಗಳ ಮಾರಾಟದಲ್ಲಿ ವೇಗವನ್ನು ಕಾಣದಿರಲು ಕಾರಣವಾಗಿದೆ. 2018ರಲ್ಲಿ ಭಾರತದ 650 ಚಾರ್ಜಿಂಗ್ ಕೇಂದ್ರಗಳಿದ್ದು, ಇ-ವಾಹನಗಳ ಅತಿದೊಡ್ಡ ಮಾರುಕಟ್ಟೆಯಾಗಿರುವ ಪಕ್ಕದ ಚೀನಾವು ಸುಮಾರು 4,56,000 ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ ಎಂಬುದಾಗಿ ಅಧಿಕೃತ ದತ್ತಾಂಶಗಳೇ ವಿವರಣೆ ಒದಗಿಸುತ್ತವೆ. ಜಾಗತಿಕ ವಾಹನ ತಯಾರಕರ ಪ್ರಕಾರ, ಪ್ರತೀ 1000 ಭಾರತೀಯರಿಗೆ 27 ಇ-ಕಾರುಗಳಷ್ಟೇ ಇವೆ. ಜರ್ಮನಿಯಲ್ಲಿ ಇದೇ ಸಂಖ್ಯೆಯ ಜನರಿಗೆ 570 ಕಾರುಗಳಿವೆ.
2017ರಲ್ಲಿ ಆಗ್ನೇಯ ಚೀನಾದ ನಗರವಾಗಿರುವ ಶೆನ್ಜೆನ್‍ನಲ್ಲಿ 16,359 ವಿದ್ಯುತ್ ಬಸ್ಸುಗಳ ಓಡಾಟ ಆರಂಭಿಸಿರುವುದಾಗಿ ಘೋಷಿಸಿತ್ತು. ಈ ಬಗ್ಗೆ ಅಧ್ಯಯನ ನಡೆಸಿರುವ ವಲ್ರ್ಡ್ ಬ್ಯಾಂಕ್ ಹಾಗೂ ಗ್ಲೋಬಲ್ ಎನ್ವಿರಾನ್‍ಮೆಂಟ್ ಫೆಸಿಲಿಟಿಯ ಪ್ರಕಾರ ‘ರಾಷ್ಟ್ರೀಯ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರೋತ್ಸಾಹ ಹಾಗೂ ನೀತಿಗಳಿಂದಾಗಿ ಇ-ಬಸ್ ಹಾಗೂ ಡಿಸೇಲ್ ಬಸ್ಸುಗಳ ನಡುವಿನ ನಿರ್ವಹಣೆಯ ಅಂತರವನ್ನು ಕಡಿಮೆಗೊಳಿಸಬಹುದಾಗಿದೆ. ಶೆನ್ಜೆನ್‍ನಲ್ಲಿ ಅಳವಡಿಸಲಾಗಿರುವ ವಿದ್ಯುತ್ ಬಸ್‍ಗಳ ಯೋಜನೆಯಿಂದ ಕಂಡುಕೊಂಡಂತೆ ಓಡಾಟ ಹಾಗೂ ನಿರ್ವಹಣಾ ವೆಚ್ಚವು ಡಿಸೇಲ್ ಬಸ್ಸುಗಳಿಗಿಂತ ಅತ್ಯಂತ ಕಡಿಮೆಯಾಗಿದೆ’.
ಇದೇ ನಗರದಲ್ಲಿ ಇನ್ನೊಂದು ಮಾದರಿಯ ಇ-ಬಸ್ಸನ್ನು ಓಡುತ್ತಿದ್ದು, 5 ಗಂಟೆಗಳ ಚಾರ್ಜಿಂಗ್‍ನಿಂದ 250 ಕಿಲೋಮೀಟರ್ ಓಡುತ್ತವೆ ಮತ್ತು ಇವು ಇಡೀ ದಿನವೊಂದರ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ಸಾಕಾಗುತ್ತದೆ. ಬಸ್ಸಿನ ತಯಾರಕರೇ ಜೀವಮಾನದ ನಿರ್ವಹಣೆ ಖಾತರಿಯನ್ನು ಬಸ್ಸಿಗೆ ಹಾಗೂ ಬ್ಯಾಟರಿಗಳಿಗೆ ನೀಡುತ್ತಿದ್ದಾರೆ. ಇದೇ ಕಾರಣದಿಂದ ಶೆನ್ಝೆನ್ ನಗರವು 2016 ಹಾಗೂ 2017ರಲ್ಲೇ ವಾಯುಗುಣಮಟ್ಟದ ಅಭಿವೃದ್ಧಿ ಗುರಿಯನ್ನು ಸಾಧಿಸಿಕೊಂಡಿದೆ.
ಟ್ರಾಫಿಕ್ ತಜ್ಞರಾಗಿರುವ ಎಮ್.ಎನ್. ಶ್ರೀಹರಿ ಅವರು ಹೇಳುವಂತೆ ‘ಇ-ಬಸ್‍ಗಳ ವಿಷಯದಲ್ಲಿ ಭಾರತದಲ್ಲಿ ತಂತ್ರಜ್ಞಾನ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಇದೇ ಸಂದರ್ಭದಲ್ಲಿ ಚೀನಾವು ಎಲ್ಲ ಸಮಯದಲ್ಲೂ ನಮಗಿಂತಲೂ ವೇಗವಾಗಿ ಮುಂದಡಿಯಿಡುತ್ತಿದೆ. ವೇಗವಾಗಿ ರೀಚಾರ್ಜ್ ಮಾಡುವ ತಂತ್ರಜ್ಞಾನ ಹಾಗೂ ಅಧಿಕ ಶೇಖರಣಾ ಸಾಮಥ್ರ್ಯದ ಬ್ಯಾಟರಿಗಳ ಕೊರತೆಯನ್ನು ನೀಗಿಸುವಲ್ಲಿ ಶ್ರಮಿಸಬೇಕಿದೆ’ ಎಂದು ಅಭಿಪ್ರಾಯಪಡುತ್ತಾರೆ.
*ಪ್ರಜ್ವಲಾ ಹೆಗ್ಡೆ, 101ರಿಪೋರ್ಟರ್ಸ್
ಚಿತ್ರಗಳು: ವಿಜಯ್ ರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.