ರೈತರ ಭವಿಷ್ಯ ಕಾಯುವುದು ಹೇಗೆ?
Team Udayavani, Mar 21, 2018, 2:05 AM IST
ತಂಬಾಕು ರಹಿತ ಶುದ್ಧ ಅಡಿಕೆಯನ್ನು ಮಾರಲು ಹಾಗೂ ಬಳಸಲು ಸದ್ಯ ಯಾವುದೇ ಕಾನೂನಿನ ತೊಂದರೆ
ಇಲ್ಲ. ಆದರೆ, ಭವಿಷ್ಯದಲ್ಲಿ ಶುದ್ಧ ಅಡಿಕೆಯನ್ನೂ ನಿಷೇಧಿಸುವ ಸಂದರ್ಭ ಬರಬಹುದು. ಗುಟ್ಕಾ ಕುರಿತ ದಾವೆ ವಿಚಾರಣೆ ಈಗಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಅಡಿಕೆಯು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಸರಕಾರದ ನಿಲುವು. ಹೀಗೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರಷ್ಟೇ? ಇದರಿಂದಾಗಿ ಅಡಿಕೆಯ ಕುರಿತ ಚರ್ಚೆ ಪುನಃ ಆರಂಭಗೊಂಡಿದೆ. ವಿವಿಧ ರಾಜಕೀಯ ಪಕ್ಷಗಳು ಇದನ್ನು ತಮ್ಮಿಷ್ಟದಂತೆ ವ್ಯಾಖ್ಯಾನಿಸುತ್ತಿದ್ದು, ವಿಷಯ ರಾಜಕೀಯಗೊಳ್ಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇದು ಅಡಿಕೆ ಬೆಳೆಗಾರರನ್ನು ಮತ್ತಷ್ಟು ಗೊಂದಲಕ್ಕೆ ನೂಕುವ ಸಂಗತಿ. ನಿಜವೆಂದರೆ, ಕಳೆದೆರಡು ದಶಕಗಳಿಂದ ಕೇಂದ್ರ ಸರಕಾರದಲ್ಲಿ ಅಧಿಕಾರ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳೂ ಅಡಿಕೆಯ ವಿಷಯದಲ್ಲಿ ಒಂದೇ ಬಗೆಯ ದೃಷ್ಟಿಕೋನವನ್ನೇ ಹೊಂದಿವೆ. ಆದ್ದರಿಂದ, ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದೆ, ವೈಜ್ಞಾನಿಕನೆಲೆಯಲ್ಲಿ ಚಿಂತಿಸಬೇಕಿದೆ. ಅಂಥ ಸಂಯಮಪೂರ್ಣ ಸಾಮೂಹಿಕ ಪ್ರಯತ್ನ ಮಾತ್ರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಹಾದಿ ತೋರೀತು.
ಈಗಿರುವ ಕಾನೂನಿನ ನಿಲುವೇನು?
ನಮ್ಮ ದೇಶದಲ್ಲಿ ಆಹಾರದ ಗುಣಮಟ್ಟ ನಿರ್ಧರಿಸುವ ಮತ್ತು ನಿಗಾವಹಿಸುವ ಜವಾಬ್ದಾರಿಯು ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಡಿಯಲ್ಲಿ ಬರುವ ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರದ ಮೇಲಿದೆಯಷ್ಟೆ. ಇದು ತಂಬಾಕಿನೊಂದಿಗಿನ ಅಡಿಕೆಯ ಉತ್ಪನ್ನಗಳನ್ನು ಆರೋಗ್ಯಕ್ಕೆ ಹಾನಿಕರ ಎಂದು ಘೋಷಿಸಿ ಹಲವು ವರ್ಷಗಳಾದವು. ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ವೈದ್ಯಕೀಯ ವರದಿಗಳ ಆಧಾರದಲ್ಲಿಯೇ ಕೈಗೊಂಡ ತೀರ್ಮಾ ನವದು. ಹೀಗಾಗಿ ರಾಷ್ಟ್ರಾದ್ಯಂತ ಬಹುತೇಕ ರಾಜ್ಯಗಳು ತಂಬಾಕುಯುಕ್ತ ಅಡಿಕೆಯ ಬಳಕೆಯನ್ನು ನಿಷೇಧಿಸಿದವು. ಕರ್ನಾಟಕವೂ ಗುಟ್ಕಾವನ್ನು ಮೇ 2013ರÇÉೇ ನಿಷೇಧಿಸಿದೆ. ಆನಂತರ, ಝರದಾ, ಮಾವಾ ತರಹದ ತರಹೇವಾರಿ ಸುವಾಸನಾಯುಕ್ತ ರಾಸಾಯನಿಕಗಳುಳ್ಳ ಅಡಿಕೆ ಉತ್ಪನ್ನಗಳನ್ನೂ ಅಕ್ಟೋಬರ್ 2016ರಲ್ಲಿ ನಿಷೇಧಿಸಲಾಯಿತು. ಹೀಗಾಗಿ ಇವನ್ನೆಲ್ಲ ತಯಾರಿಸುವುದು, ಮಾರುವುದು ಹಾಗೂ ಬಳಸು ವುದು ಈಗ ಕಾನೂನು ಬಾಹಿರ ಚಟುವಟಿಕೆ. ತಂಬಾಕಿನಲ್ಲಿರುವ ನಿಕೋಟಿನ್ ಹಾಗೂ ಇತರ ಹಲವಾರು ರಾಸಾಯನಿಕ ಸಂಯುಕ್ತಗಳು ತೀರಾ ಅಪಾಯಕಾರಿಯಾದ್ದರಿಂದ, ಈ ತೀರ್ಮಾನ ಅವಶ್ಯವೇ ಆಗಿತ್ತು. ಹೀಗಾಗಿ, ಸಾರ್ವಜನಿಕ ಅರೋಗ್ಯದ ಹಿತದೃಷ್ಟಿಯಿಂದ ತೆಗೆದುಕೊಂಡ ಸರಕಾರದ ಈ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಲೇಬೇಕು.
ಅಂದರೆ, ತಂಬಾಕುರಹಿತ ಶುದ್ಧ ಅಡಿಕೆಯನ್ನು ಮಾರಲು ಹಾಗೂ ಬಳಸಲು ಸದ್ಯ ಯಾವುದೇ ಕಾನೂನಿನ ತೊಂದರೆ
ಇಲ್ಲ. ಆದರೆ, ಭವಿಷ್ಯದಲ್ಲಿ ಶುದ್ಧ ಅಡಿಕೆಯನ್ನೂ ನಿಷೇಧಿಸುವ ಸಂದರ್ಭ ಬರಬಹುದು. ಏಕೆಂದರೆ, ಗುಟ್ಕಾ ಕುರಿತ ದಾವೆಯೊಂದರಿಂದ ಆರಂಭವಾದ ಅಡಿಕೆಯ ಕುರಿತ ವಿಚಾರಣೆಯೊಂದು ಈಗಲೂ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದು ಇಂಡಿಯನ್ ಅಸ್ತಮಾ ಸೊಸೈಟಿ ಹಾಗೂ ಅಂಕುರ್ ಗುಟ್ಕಾ ಕಂಪನಿ ನಡುವೆ ಆರಂಭ ವಾದ ಕಾನೂನು ಸಮರ. ಅಡಿಕೆ ಹಾಗೂ ಆರೋಗ್ಯ ಕುರಿತಿರುವ ದಾಖಲೆಗಳ ಪರಿಶೀಲನೆ ಮತ್ತು ಅದರ ಮೇಲಣ ವಿಚಾರಣೆ ಇದೀಗ ನಡೆದಿದೆ. ಹೀಗಾಗಿ, ಮುಂದೊಂದು ದಿನ ಸುಪ್ರೀಂ ಕೋರ್ಟ್ ಶುದ್ಧ ಅಡಿಕೆಯೂ ಆರೋಗ್ಯಕ್ಕೆ ಹಾನಿಕರ ಎಂಬ ಖಚಿತ ನಿರ್ಧಾರಕ್ಕೆ ಬರಲೂಬಹುದು! ಅಂಥ ತೂಗುಗತ್ತಿ ಯೊಂದು ಅಡಿಕೆ ಬೆಳೆಗಾರರ ಮೇಲಿರುವದೇನೋ ನಿಜ.
ಅಡಿಕೆ ಕ್ಯಾನ್ಸರ್-ಕಾರಕವೇ?
ಹಾಗಾದರೆ, ಈಗ ಕೇಳಿಕೊಳ್ಳಲೇಕಾದ ಪ್ರಮುಖ ಪ್ರಶ್ನೆ:
ಶುದ್ಧ ಅಡಿಕೆಯೂ ಕ್ಯಾನ್ಸರ್ ತರುವ ಸಾಮಗ್ರಿಯೇ? ಅಡಿಕೆ ಯನ್ನು ಪಾರಂಪರಿಕವಾಗಿ ಹಲವಾರು ರೂಪಗಳಲ್ಲಿ ಬಳಸುತ್ತಿ ರುವ ಭಾರತೀಯರು ಮತ್ತು ದಕ್ಷಿಣ ಏಷ್ಯನ್ನರು ಈ ಮಾತನ್ನು ಒಪ್ಪಲಿಕ್ಕಿಲ್ಲ. ನಮ್ಮ ದೇಶದ ಮನೆಮದ್ದು ಸಂಸ್ಕೃತಿ ಮತ್ತು ಆರ್ಯುವೇದವಂತೂ ಅಡಿಕೆಯನ್ನು ಅಮೂಲ್ಯ ಆಹಾರ ಮತ್ತು ಆರೋಗ್ಯ ಗುಣವರ್ಧಕವೆಂದೇ ಗೌರವಿಸುತ್ತದೆ. ಆದರೆ, ಈ ಆಳ ನಂಬಿಕೆಗಳನ್ನೊಮ್ಮೆ ಪಕ್ಕಕ್ಕಿಟ್ಟು ಜಾಗತಿಕ ವೈದ್ಯಕೀಯ ಕ್ಷೇತ್ರದ ವಿದ್ಯಮಾನಗಳನ್ನು ಗಮನಿಸಿದರೆ, ಎದುರಾಗುವದು ಮಾತ್ರ ವ್ಯತಿರಿಕ್ತ ಸಂಗತಿ!
ವಿಶ್ವ ಆರೋಗ್ಯ ಸಂಸ್ಥೆಯ ಆಶ್ರಯದಲ್ಲಿರುವ ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು (ಐnಠಿಛಿrnಚಠಿಜಿಟnಚl ಅಜಛಿncy fಟ್ಟ Rಛಿsಛಿಚrcಜ ಟn ಇಚncಛಿr – ಐಅRಇ) ಕ್ಯಾನ್ಸರ್-ಕಾರಕ ವಸ್ತುಗಳ ಕುರಿತಾಗಿ ಸಂಶೋಧನೆ ನಡೆಸಿ, ನೀತಿರೂಪಿಸುವ ಅಧಿಕೃತ ಅಂತರಾಷ್ಟ್ರೀಯ ಸಂಸ್ಥೆ. ಹಲವು ದಶಕಗಳ ಕಾಲ ಜಗತ್ತಿ ನಾದ್ಯಂತದ ವೈದ್ಯರು, ಆಸ್ಪತ್ರೆಗಳು ಮತ್ತು ತಜ್ಞರ ಸಹಯೋಗ ದೊಂದಿಗೆ ಸಂಶೋಧನೆ ನಡೆಸಿ, ಶುದ್ಧ ಅಡಿಕೆಯೂ ಕ್ಯಾನ್ಸರ್-ಕಾರಕ ಎಂದು ಈ ಸಂಸ್ಥೆ 2004ರಲ್ಲಿಯೇ ಅಧಿಕೃತ ವಾಗಿಯೇ ಹೇಳಿದೆ! ಈ ನಿರ್ಧಾರಕ್ಕೆ ಬರಲು ನಡೆಸಿದ ವ್ಯಾಪಕ ಅಧ್ಯ ಯನ-ಸಂಶೋಧನಾ ತಂಡಗಳಲ್ಲಿ ಭಾರತದ ಪ್ರತಿಷ್ಟಿತ ಸಂಶೋ ಧನಾ ಸಂಸ್ಥೆಗಳಾದ ಮುಂಬೈ ಟಾಟಾ ಕ್ಯಾನ್ಸರ್ ಸಂಶೋಧನಾ ಸಂಸ್ಥೆ, ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾನಿಲಯ ಮುಂತಾದವುಗಳ ತಜ್ಞರೂ ಇದ್ದರು. ಅವರ ಪ್ರಕಾರ, ಅಡಿಕೆ ಯನ್ನು ಸತತವಾಗಿ ತಿನ್ನುವವರಲ್ಲಿ ಬಾಯಿಯ ಒಳಚರ್ಮವು ರಕ್ಷಣೆಗಾಗಿರುವ ಲೋಳೆಯಂಥ ದ್ರವವನ್ನು ಸ್ರವಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇದರಿಂದಾಗಿ, ಒಳಚರ್ಮ ದಪ್ಪಗಾಗುತ್ತ ಓರಲ…
ಸಬ್-ಮ್ಯುಕೋಸಲ… ಫೈಬ್ರೋಸಿಸ್ ಎಂಬ ರೋಗ ಬರುತ್ತದೆ. ಇದು ನಂತರದಲ್ಲಿ ಕ್ಯಾನ್ಸರಿಗೆ ದಾರಿ ಮಾಡಿ ಕೊಡುತ್ತದೆ ಎಂಬುದು ಅದರ ಖಚಿತ ಅಭಿಪ್ರಾಯ. ಹಾಗೆಂದೇ, ಕ್ಯಾನ್ಸರ್ ಉಂಟುಮಾಡಬಲ್ಲ ಪ್ರಮುಖ ಪದಾರ್ಥ ಗಳೆಂದು ಜಾಗ ತಿ ಕವಾಗಿ ಗುರುತಿಸಿರುವ ತಂಬಾಕು, ಅಲ್ಕೋ ಹಾಲ…, ಇತ್ಯಾದಿ ಗಳ ಗುಂಪಿನÇÉೇ (ಕಾರ್ಸಿನೋಜನಿಕ್ ವರ್ಗ-1) ಅಡಿಕೆಯನ್ನೂ ಸ್ಪಷ್ಟವಾಗಿ ಸೇರಿಸಲಾಗಿದೆ. ಹೀಗಾಗಿ, ಅಡಿಕೆ ತಿನ್ನುವದನ್ನು ನಿರ್ಬಂಧಿಸುವ ನೀತಿ ಕೈಗೊಳ್ಳಬೇಕೆಂದು ಕೇಂದ್ರ ಸರಕಾರದ ಮೇಲೆ ಜಾಗತಿಕ ಒತ್ತಡ ಇದ್ದೇ ಇದೆ!
ಈಗ ಎದುರಾಗುವ ಪ್ರಶ್ನೆ: ಹಾಗಾದರೆ, ಶುದ್ಧ ಅಡಿಕೆಯೂ ಕ್ಯಾನ್ಸರ್ ಉಂಟುಮಾಡುವದೇ? ಸಾವಿರಾರು ವರ್ಷಗಳಿಂದ ಜನರು ಅಡಿಕೆಯ ತಾಂಬೂಲ ತಿನ್ನುತ್ತಿ¨ªಾರೆ. ಈಗಲೂ ಹಳ್ಳಿ ಗಳಲ್ಲಿ ಅಡಿಕೆ-ವೀಳ್ಯದೆಲೆ-ಸುಣ್ಣದ ಮಿಶ್ರಣದ ಎಲೆಯಡಿಕೆ ಯನ್ನು ಮೆಲ್ಲುತ್ತ, ಆರೋಗ್ಯಕರವಾಗಿಯೇ ತುಂಬುಜೀವನ ನಡೆಸುವ ಹಲವರು ಕಾಣುತ್ತಾರೆ. ಅಂದರೆ, ಆಧುನಿಕ ವೈದ್ಯ ಕೀಯಲೋಕದ ಈ ತೀರ್ಮಾನದಲ್ಲಿಯೇ ದೋಷವಿದೆಯೇ? ಇದು ಚರ್ಚಾಸ್ಪದ ವಿಷಯವಾದ್ದರಿಂದ, ಈ ತೀರ್ಮಾನವನ್ನು ಪ್ರಶ್ನಿಸುವ ಅಗತ್ಯಇದೆ. ಆದರೆ ಒಂದಂಶವನ್ನು ನೆನಪಿಡಬೇಕು. ಇದು ಸಂಶೋಧನಾ ಸಂಸ್ಥೆಗಳು ಹಾಗೂ ವಿಜ್ಞಾನಿಗಳು ಕೈಗೊಳ್ಳಬೇಕಾದ ಸಂಶೋಧನಾ ಕಾರ್ಯವೇ ಹೊರತು, ರಾಜಕೀಯದಂಗಳದ ಜಗಳವಾಗಲೀ ಅಥವಾ ಬೀದಿಹೋರಾಟದ ವಸ್ತುವಾಗಲೀ ಅಲ್ಲ!
ಇನ್ನೇನು ಸಂಶೋಧನೆಯಾಗಬೇಕಿದೆ?
ಅಡಿಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿ ವಿಷಯವನ್ನು ಪುನ ರ್ವಿಮರ್ಶಿಸುವುದಾದರೆ, ಅದಕ್ಕೆ ಎರಡು ಪ್ರಮುಖ ಆಯಾಮಗಳಿವೆ. ಒಂದನೆಯದು: ಅಡಿಕೆ ಕ್ಯಾನ್ಸರ್-ಕಾರಕ ಎಂದು ತೀರ್ಮಾನಕ್ಕೆ ಬರಲಾದ ಸಂಶೋಧನಾ ವಿಧಾನಗಳನ್ನು ವ್ಯವಸ್ಥಿತವಾಗಿ ಅಭ್ಯ ಸಿಸಿ, ವೈಜ್ಞಾನಿಕವಾಗಿ ಪ್ರಶ್ನಿಸುವದು. ಎರಡನೆಯದು: ಅಡಿ ಕೆಯು ಸುರಕ್ಷಿತ ಹಾಗೂ ಔಷಧಿಗುಣ ವುಳ್ಳದ್ದು ಎನ್ನುವ ಕುರಿತು ಸಂಶೋಧನೆ ನಡೆಸಿ, ನಿಖರ ಉತ್ತರ ಕಂಡುಕೊಳ್ಳುವದು.
ಅಡಿಕೆಗೆ ಕ್ಯಾನ್ಸರ್ ತರುವ ಗುಣವಿದೆಯೆಂಬ ತೀರ್ಮಾನಕ್ಕೆ ಬರಲು ಕಾರಣವಾದ ಸಂಶೋಧನಾ ವಿಧಾನಗಳÇÉೇ ನ್ಯೂನತೆ ಗಳಿರುವ ಸಾಧ್ಯತೆಗಳಿವೆ. ಅವರು ಅಧ್ಯಯನಕ್ಕೆ ಆಯ್ದು ಕೊಂಡ ಅಡಿಕೆಯ ಸ್ವರೂಪವೆಂಥದ್ದು? ಅಧಿಕ ಟ್ಯಾನಿನ್ ಪ್ರಮಾಣ ವಿರುವ ಎಳೆಯಡಿಕೆಯೇ ಅಥವಾ ಬಲಿತ ಚಾಲಿಯೇ? ಅಡಿಕೆ ಯಲ್ಲಿನ ಅರೆಕೋಲಿನ್ ಎಂಬ ಅಲ್ಕೊಲೈಡ್ ರಾಸಾಯನಿಕ ಕ್ಯಾನ್ಸರ್-ಕಾರಕವಾಗಿರಬಹುದಾದರೂ, ಅಡಿಕೆಯಲ್ಲಿರುವ ಉಳಿದ ಸಸ್ಯಜನ್ಯ ರಾಸಾಯನಿಕಗಳು ದೇಹದಲ್ಲಿ ಒಟ್ಟಾಗಿ ಬೇರೆಯೇ ಪರಿಣಾಮ ಬೀರುವದಿಲ್ಲವೇ? ಪರೀಕ್ಷೆಗೆ ಬಳಸಿದ್ದು ಮಾರುಕಟ್ಟೆಯಿಂದ ಪಡೆದ ಅಡಿಕೆಯಾದರೆ, ಅದರ ಜೊತೆ ಸುವಾಸನೆಗಾಗಿ ಅಥವಾ ಕೆಡದಂತೆ ಕಾಯ್ದಿಡಲು ಸೇರಿಸಿದ್ದ ರಾಸಾಯನಿಕಗಳ ಬೆರಕೆಯಿತ್ತೇ? ಪರೀಕ್ಷೆಗೆ ಒಳಪಡಿಸಿದ ರೋಗಿಗಳಲ್ಲಿ ತಂಬಾಕುರಹಿತ ಶುದ್ಧ ಅಡಿಕೆಯನ್ನು ಮಾತ್ರ ತಿನ್ನುತ್ತಿದ್ದ ವ್ಯಕ್ತಿಗಳೆಷ್ಟು? ಸಂಶೋಧನೆಯ ಕಾಲಾವಧಿ ಮತ್ತು ಪ್ರಯೋಗಕ್ಕೆ ಒಳಗಾದ ರೋಗಿಗಳ ಸಂಖ್ಯೆಯೆಷ್ಟು? ಅವರ ವಯಸ್ಸು, ಸಾಮಾಜಿಕ, ಆರ್ಥಿಕ, ಸಾಂಸ್ಕತಿಕ ಹಿನ್ನೆಲೆಗಳೇನು? ಹೀಗೆ, ಅನೇಕ ಮೂಲಭೂತ ಪ್ರಶ್ನೆಗಳಿಗೆ ಉತ್ತರಬೇಕಿದೆ. ಇಂಥ ವೈಜ್ಞಾನಿಕ ಜಿಜ್ಞಾಸೆಗೆ ತರ್ಕಬದ್ಧ ಅಧ್ಯಯನ ಮತ್ತು ಫೂರಕ ಸಂಶೋಧನೆಗಳ ಅಗತ್ಯವಿದೆ.
ಸಂಶೋಧನೆಯಾಗಬೇಕಾದ ಎರಡನೆಯ ಆಯಾಮ ವೆಂದರೆ, ಅಡಿಕೆಯ ಸುರಕ್ಷತೆ ಹಾಗೂ ಔಷಧಿ ಗೌಣಧರ್ಮದ ಕುರಿತು. ಅಡಿಕೆಯಲ್ಲಿ ಹಲವಾರು ಬಗೆಯ ûಾರಗಳಿವೆ. ಅವುಗಳು ಒಂದು ಸಮ್ಮಿಶ್ರಣವಾಗಿ ಹೇಗೆ ಜೀರ್ಣವಾಗುತ್ತವೆ? ದೇಹದಲ್ಲಿ ಅವು ಒಂದು ದ್ರಾವಣವಾಗಿ ಸೇರಿದಾಗ, ಅವುಗಳ ಗುಣಧರ್ಮವೇನಿರುತ್ತದೆ? ತಾಂಬೂಲದಲ್ಲಿ ಬಳಸುವ ವೀಳ್ಯ ದೆಲೆ ಮತ್ತು ಸುಣ್ಣವು ಅಡಿಕೆಯ ಜೀವರಾಸಾಯನಿಕಗಳು ಮತ್ತು ಅವುಗಳ ಕಾರ್ಯಸ್ವರೂಪವನ್ನು ಬದಲಾಯಿಸುತ್ತ ವೆಯೆ? ತಾಂಬೂಲಕ್ಕೆ ಜೀರ್ಣಕಾರಕ ಹಾಗೂ ಶಕ್ತಿದಾಯಕ ಗುಣವಿರುವುದಾದರೆ, ಅದರ ಕಾರ್ಯವಿಧಾನಗಳೇನು? ಪ್ರಯೋಗಾಲಯದಲ್ಲಿ ಬೇರ್ಪಡಿಸಿದ ಅರೆಕೋಲಿನ್ ಕ್ಯಾನ್ಸರ್ ಗುಣ ತೋರಬಹುದು. ಆದರೆ, ಅಡಿಕೆಯನ್ನು ಸೇವಿಸಿದಾಗ ಅದರಲ್ಲಿನ ಉಳಿದ ರಾಸಾಯನಿಕಗಳು ಅರೆಕೋಲಿನ್ ಗುಣ ಧರ್ಮವನ್ನು ಬದಲಾಯಿಸುವುದಿಲ್ಲವೇ? ಇವೆಲ್ಲವೂ ಬಹಳ ಗಂಭೀರ ಪ್ರಶ್ನೆಗಳು. ಜೀವವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನಿಗಳು ಜೊತೆಯಾಗಿ ಪರಿಶೋಧಿಸಬೇಕಾದ ಅಂಶಗ
ಳಿವು. ಈ ಬಗೆಯ ಪ್ರಯತ್ನಗಳು ಹಲವೆಡೆ ಬಿಡಿಬಿಡಿಯಾಗಿ ಈಗಾಗಲೇ ನಡೆಯುತ್ತಲೂ ಇವೆ. ಈ ಬಗೆಯ ವೈಜ್ಞಾನಿಕ ಶೋಧಗಳು ಸಮಯ, ಪರಿಶ್ರಮ, ತಜ್ಞತೆ ಹಾಗೂ ಆರ್ಥಿಕ ಸಹಾಯ ಬೇಡುತ್ತವೆ. ವಿಸ್ತೃತ, ಸಮಗ್ರವಾದ ಸಂಶೋಧನಾ ಯೋಜನೆ ಗಳಿಂದ ಮಾತ್ರ ಇದು ಸಾಧ್ಯ.
ಬದಲಾಗಬೇಕಿದೆ ಪೊಟ್ಟಣಗಳ ಮುದ್ರಣ ನಿಯಮ ಆರೋಗ್ಯದ ಮೇಲೆ ಅಡಿಕೆಯ ಪರಿಣಾಮದ ಕುರಿತಾಗಿ ಈ ತೆರನ ಸಮಗ್ರ ಸಂಶೋಧನೆ ನಡೆಸಿ ಉತ್ತರ ಕಂಡು ಕೊಳ್ಳುವುದರ ಪೂರ್ವದಲ್ಲಿಯೇ, ಕೇಂದ್ರ ಆರೋಗ್ಯ ಇಲಾಖೆ ಅವಸರದ ಹೆಜ್ಜೆಯೊಂದನ್ನು ಇರಿಸಿರುವುದು, ಇನ್ನೊಂದು ಗಮನಿಸಬೇಕಾದ ಅಂಶ. ಆರೋಗ್ಯ ಇಲಾಖೆಯಡಿಯಲ್ಲಿನ ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರ 2011 ಅಗಸ್ಟ್ 1ರಂದು ಗೆಜೆಟ್ ಪ್ರಕಟಣೆಯ ಮೂಲಕ ಹೊರ ಡಿಸಿದ ಪ್ರಮುಖ ಅದೇಶವೊಂದಿದೆ. ಸಿದ್ಧ ಆಹಾರ ಸಾಮಗ್ರಿ ಗಳನ್ನು ಮಾರುಕಟ್ಟೆಯಲ್ಲಿ ಮಾರುವಾಗ ಬಳಸುವ ಪೊಟ್ಟಣಗಳ ಕುರಿತಂತೆ ಪಾಲಿಸಬೇಕಾದ ನಿಯಮಗಳ ಕುರಿತಾಗಿರುವ ಕಾನೂನಿದು. ಈ ಆದೇಶದ 2ನೇ ಅಧ್ಯಾಯದ 31ನೇ ನಿಯಮದಂತೆ, ಮಾರುಕಟ್ಟೆಯಲ್ಲಿ ಮಾರುವ ಶುದ್ಧಅಡಿಕೆಯ ಪೊಟ್ಟಣಗಳ ಮೇಲೂ ಅಡಿಕೆ ಜಗಿಯುವದು ಆರೋಗ್ಯಕ್ಕೆ ಹಾನಿಕರ ಎಂಬ ಸೂಚನೆ ಮುದ್ರಿಸುವದು ಕಡ್ಡಾಯ. ಬಳಕೆದಾರರನ್ನು ನಿಧಾನವಾಗಿ ಅಡಿಕೆಯ ಬಳಕೆಯಿಂದ ಹಿಮ್ಮುಖಗೊಳಿಸುವದು ಇದರ ಉದ್ದೇಶ!
ವೀಳ್ಯದೆಲೆಯೊಂದಿಗೆ ತಿನ್ನುವ ತಾಂಬೂಲದಲ್ಲಿನ ಶುದ್ಧ ಅಡಿಕೆಯು ಆರೋಗ್ಯಕ್ಕೆ ಹಾನಿಕರ ಎಂದು ವೈಜ್ಞಾನಿಕವಾಗಿನ್ನೂ ಸಿದ್ಧವಾಗಿಲ್ಲ. ಹೀಗಿರುವಾಗ, ಸರಕಾರ ಈ ಅನಪೇಕ್ಷಿತ ಮತ್ತು ಅವಸರದ ತೀರ್ಮಾನ ಕೈಗೊಂಡಿದ್ದೇಕೆ? 2011ರಲ್ಲಿ ಈ ನಿಯಮ ಜಾರಿಯಾದಾಗಲೇ ಇದನ್ನು ಪ್ರಶ್ನಿಸಬೇಕಿತ್ತು. ಭವಿಷ್ಯದಲ್ಲಿ ಅಡಿಕೆ ಬೆಳೆಗಾರರಿಗೆ ಬಹಳಷ್ಟು ಸಂಕಟ ತರಬಹುದಾದ ಕಾನೂನು ಹೆಜ್ಜೆಯಿದು. ಆದ್ದರಿಂದ, ಈ ನಿಯಮವನ್ನು ಕೈಬಿಡಬೇಕಾದ ಜರೂರತ್ತಿದೆ. ಕೇಂದ್ರ ಸರಕಾರದ ಆರೋಗ್ಯ ಇಲಾಖೆಯು ಈ ನಿಯಮವನ್ನು ಬದಲಾಯಿ ಸುವಂತೆ, ಜನಪ್ರತಿನಿಧಿಗಳು, ಸಾಮಾಜಿಕ ಮುಖಂಡರು ಹಾಗೂ ಅಡಿಕೆ ಬೆಳೆಗಾರರಿಗೆ ಸಂಬಂಧಿಸಿದ ಸಹಕಾರಿ ಸಂಸ್ಥೆಗಳು ಜೊತೆಯಾಗಿ ಪ್ರಯತ್ನಿಸಬೇಕಿದೆ.
ಭವಿಷ್ಯಚಿಂತನೆಯ ದಿಶೆಗಳೇನು?
ಕಳೆದ ಎರಡು-ಮೂರು ದಶಕಗಳಲ್ಲಿ ಅಡಿಕೆಯ ಕೃಷಿ ವಿಜ್ಞಾನ, ಸಂಸ್ಕರಣೆಯ ತಂತ್ರಗಳು, ಉತ್ಪನ್ನಗಳ ಮೌಲ್ಯವರ್ಧನೆ ಇತ್ಯಾದಿಗಳಲ್ಲಿನ ತಂತ್ರಜ್ಞಾನದಲ್ಲಿ ಗಣನೀಯ ಸಾಧನೆಗಳಾಗಿ ರುವದೇನೋ ನಿಜ. ಸಹಕಾರಿ ಸಂಸ್ಥೆಗಳ ಪ್ರಯತ್ನದಿಂದಾಗಿ ರೈತರು ತಮ್ಮ ಉತ್ಪನ್ನಗಳನ್ನು ನೆಮ್ಮದಿಯಿಂದ ಮಾರುವ ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯೂ ನಿರ್ಮಾಣವಾಗಿದೆ. ಇತ್ತೀಚೆಗಂತೂ, ಯುವ ನವೋದ್ಯಮಿಗಳು ಹೊಸ ಪ್ರಯೋಗಗಳ ಮೂಲಕ ಅಡಿಕೆಯ ಬಳಕೆಯನ್ನು ಹಿಗ್ಗಿಸುತ್ತಲೂ ಇ¨ªಾರೆ. ಅಡಿಕೆಯಿಂದ ತಯಾರಿಸಿದ ಚಹ, ಚಾಕೋಲೇಟ…, ಶೃಂಗಾರ ಮತ್ತು ಕರಕುಶಲ ಸಾಮಾಗ್ರಿ ಇತ್ಯಾದಿಗಳೆಲ್ಲ ಹೊಸ ಗ್ರಾಹಕರನ್ನು ಆಕರ್ಷಿಸುತ್ತಿರುವುದು ಅಡಿಕೆಯ ರೈತರೆಲ್ಲ ಸ್ವಾಗತಿಸುವ ವಿದ್ಯಾಮಾನಗಳೆ.
ಆದರೆ, ಈ ಬೆಳವಣಿಗೆಗಳು ಮಲೆನಾಡು ಹಾಗೂ ಕರಾ ವಳಿಯ ಅಡಿಕೆ ರೈತರ ಮೊಗದಲ್ಲಿ ನಗು ಬರಿಸುತ್ತಿಲ್ಲ. ಅವರ ಸಂಕಷ್ಟ ಮುದುವರಿದೇ ಇದೆ. ಏಕೆಂದರೆ, ಅವರ ಸಮಸ್ಯೆಗಳು ಬಲು ಮೂಲಭೂತವಾದದ್ದು. ಏರುತ್ತಿರುವ ನಿರ್ವಹಣಾ
ವೆಚ್ಚ ಹಾಗೂ ಕೂಲಿಕಾರರ ತೀವ್ರ ಕೊರತೆ ಅವರನ್ನು ಕಂಗೆಡಿಸಿದೆ. ಹೀಗಾಗಿ, ಈ ಪ್ರದೇಶಗಳ ಗ್ರಾಮೀಣ ಯುವಕರ ನಗರಮುಖೀ ವಲಸೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಸತತ ವಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಕಡಿಮೆ ಯಾದ್ದರಿಂದ, ಇದೀಗ ತೋಟಕ್ಕೆ ನೀರಿನ ಕೊರತೆಯೂ ಬಾಧಿಸುತ್ತಿದೆ. ಮಲೆನಾಡಿನ ಕಣಿವೆಗಳ ಬಹುತೇಕ ಅಡಿಕೆ ತೋಟಗಳು ಒಣಗುತ್ತಿದ್ದು, ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಈ ಬಗೆಯ ಗಂಭೀರ ಸಮಸ್ಯೆಗಳ ಸುಳಿ
ಯಲ್ಲಿ ಸಿಲುಕಿರುವ ರೈತರಿಗೆ, ಸರಕಾರದ ಅಡಿಕೆ ನಿಷೇಧದ ಭೀತಿಯೂ ಬೆನ್ನೇರಬಾರದು.
ಹೀಗಾಗಿ, ಸೂಕ್ತ ವೈಜ್ಞಾನಿಕ ಅಧ್ಯಯನಗಳಿಗೆ ಚಾಲನೆ ನೀಡುವ ಕೆಲಸ ಮೊದಲಾಗಬೇಕು. ಹಾಗೆ ಕಂಡುಕೊಂಡ
ನಿಖರ ಕಾಣೆRಗಳ ಆಧಾರದಲ್ಲಿಯೇ ಭವಿಷ್ಯದ ನೀತಿ ರೂಪುಗೊಳ್ಳಬೇಕು. ಅಲ್ಲಿಯವರೆಗೆ, ಸರಕಾರವು ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬ ಸೊಲ್ಲು ಕೈಬಿಟ್ಟು, ಆ ಕುರಿತು ಈಗಾಗಲೇ ಹೊರಡಿಸಿದ ಪೊಟ್ಟಣ ಮುದ್ರಣ ನಿಯಮವನ್ನು ಹಿಂಪಡೆಯಬೇಕಿದೆ. ಜೊತೆಗೆ, ಮಲೆನಾಡು ಹಾಗೂ ಕರಾ ವಳಿಯ ಒಣಗುತ್ತಿರುವ ತೋಟಗಳಿಗೆ ನೀರುಣಿಸುವ ವ್ಯಾಪಕ ಜಲಮರುಪೂಣ ಮತ್ತು ಕೆರೆ ಪುನಜ್ಜೀìವನ ಯೋಜನೆಗಳಿಗೆ ಸರ್ಕಾರ ಮುಂದಾಗಬೇಕಿದೆ. ಇದು ರೈತರು ಮತ್ತು ಅವರ ಸಂಘಟನೆಗಳ ಸಂಪೂರ್ಣ ಸಹಭಾಗಿತ್ವದಿಂದ ಮಾತ್ರ ಸಾಧ್ಯ. ರೈತರ ಹಿತಕಾಯುವ ಸಂಘ-ಸಂಸ್ಥೆಗಳು ಒಕ್ಕೊರಲಿನಿಂದ ಈ ಬಗೆಯ ಒತ್ತಾಯವನ್ನು ಮಾಡಬೇಕಿದೆ. ಅದು ಮಾತ್ರ ಅಡಿಕೆಯ ರೈತರ ಭವಿಷ್ಯವನ್ನು ಕಾಯಬಹುದೇನೋ.
– ಕೇಶವ ಎಚ್. ಕೊರ್ಸೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.