ಹೌಡಿ ಮೋದಿ ಎನ್ನುತ್ತಿದೆ ಅಮೆರಿಕ!
Team Udayavani, Sep 22, 2019, 5:13 AM IST
ಅಮೆರಿಕದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್‌ನಲ್ಲಿ ಸೆ.22ರಂದು ಭಾರತೀಯ ಸಮುದಾಯ ಆಯೋಜಿಸಿರುವ “ಹೌಡಿ ಮೋದಿ’ ಕಾರ್ಯಕ್ರಮದತ್ತ ಜಗತ್ತಿನ ಕುತೂಹಲದ ಚಿತ್ತ ನೆಟ್ಟಿದೆ. 2014ರಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಿಂತು ಇಡೀ ಜಗತ್ತಿಗೆ ಮೋಡಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ 50,000 ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿ¨ªಾರೆ. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ 60 ಸಂಸದರು ಭಾಗವಹಿಸಲಿರುವುದು. ಟೆಕ್ಸಾಸ್ ಇಂಡಿಯಾ ಫೋರಂ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈಗಾಗಲೇ ಟೆಕ್ಸಾಸ್‌ನಾದ್ಯಂತ ಮೋದಿಯವರನ್ನು ಸ್ವಾಗತಿಸುವ ಬಿಲ್ ಬೋರ್ಡ್‌ಗಳು ರಾರಾಜಿಸಲಾರಂಭಿಸಿವೆ! ಕಳೆದ ಮೂರು ತಿಂಗಳಲ್ಲಿ ಮೋದಿ ಮತ್ತು ಟ್ರಂಪ್ ನಡುವಿನ ಮೂರನೇ ಭೇಟಿ ಇದಾಗಲಿದ್ದು, ಅಮೆರಿಕದ ಸಾಂಸ್ಕೃತಿಕ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಭಾರತೀಯ ಅಮೆರಿಕನ್ನರು ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಳ್ಳುವುದಕ್ಕೆ ಹೌಡಿ ಮೋದಿ ಮಹತ್ವದ ವೇದಿಕೆಯಾಗಲಿದೆ.
ಏನು ವಿಶೇಷತೆ?
ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಹೊರತುಪಡಿಸಿ ಮತ್ಯಾವ ವಿದೇಶಿ ಗಣ್ಯರ ಕಾರ್ಯಕ್ರಮಕ್ಕೂ ಇಷ್ಟು ಜನ ಸೇರಿದ ನಿದರ್ಶನ ಅಮೆರಿಕದಲ್ಲಿಲ್ಲ. ಅಲ್ಲದೇ ಇದುವರೆಗೂ ಅಮೆರಿಕದಲ್ಲಿ ಯಾವೊಬ್ಬ ವಿದೇಶಿ ರಾಜಕಾರಣಿಯೂ 50 ಸಾವಿರ ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಇತಿಹಾಸವಿಲ್ಲ. ಹೀಗಾಗಿ ಈ ಕಾರ್ಯಕ್ರಮದ ಮೂಲಕ ಅಮೆರಿಕ ನೆಲದಲ್ಲಿ ಮೋದಿ ದಾಖಲೆ ಬರೆಯಲಿ¨ªಾರೆ.
ಹ್ಯೂಸ್ಟನ್-ಭಾರತ ನಂಟು
ಹೂಸ್ಟನ್‌ನಲ್ಲಿ 93 ಸಾವಿರ ಭಾರತೀಯ ಸಂಜಾತರಿದ್ದಾರೆ. ಹ್ಯೂಸ್ಟನ್ ಮೂಲದ ಸುಮಾರು 33 ಉದ್ಯಮಗಳು, ಭಾರತದಾದ್ಯಂತ ತಮ್ಮ ಘಟಕಗಳನ್ನು ಸ್ಥಾಪಿಸಿವೆ. ಇನ್ನೊಂದೆಡೆ ಭಾರತದ 28 ಕಂಪೆನಿಗಳು ಹೂಸ್ಟನ್‌ನಲ್ಲಿ ಬ್ರಾಂಚ್‌ಗಳನ್ನು ಹೊಂದಿವೆ. 2009-2018ರವರೆಗೆ ಹೂಸ್ಟನ್-ಭಾರತದ ನಡುವಿನ ವಾರ್ಷಿಕ ವಹಿವಾಟು ಸರಾಸರಿ 4.8 ಶತಕೋಟಿ ಡಾಲರ್‌ಗಳಷ್ಟಿತ್ತು. 2018ರಲ್ಲಿ ವಾರ್ಷಿಕ ವಹಿವಾಟು 7.2 ಶತಕೋಟಿ ಡಾಲರ್‌ಗೆ ಏರಿತು.
650 ಸಂಸ್ಥೆಗಳ ಸಹಯೋಗ
ಹೌಡಿ ಮೋದಿ ಕಾರ್ಯಕ್ರಮಕ್ಕೆ ಟೆಕ್ಸಾಸ್ ಇಂಡಿಯಾ ಫೋರಂ ಅಷ್ಟೇ ಅಲ್ಲದೆ, ಅಕ್ಷಯ ಪಾತ್ರ ಫೌಂಡೇಷನ್, ಪತಂಜಲಿ ಯೋಗಪೀಠ, ಪಾಟೀದಾರ್ ಫೌಂಡೇಷನ್, ಐಐಟಿ ಅಲುಮ್ನಿ ಯೂನಿಯನ್ ಸೇರಿದಂತೆ 650ಕ್ಕೂ ಹೆಚ್ಚು ಸಂಸ್ಥೆಗಳು ಸಹಯೋಗ ನೀಡುತ್ತಿವೆ.
ಏನು ಘೋಷಣೆಗಳಾಗಬಹುದು?
ಕಳೆದ ಕೆಲವು ಸಮಯದಿಂದ ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ, ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್, ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಕ್ಕೆ ಪೂರಕವಾಗುವಂಥ ಘೋಷಣೆಗಳನ್ನು ಮಾಡಬಹುದು. ಭಾರತದ ಕೆಲವು ನಿಲುವುಗಳಿಂದ ಮುನಿಸಿಕೊಂಡಿದ್ದ ಅಮೆರಿಕ ಹಿಂದೆ ತಾನು ಭಾರತಕ್ಕೆ ಕೊಟ್ಟಿದ್ದ ಜಿಎಸ್‌ಪಿ(ಜನರ ಲೈಸ್ಡ್ ಸಿಸ್ಟಂ ಆಫ್ ಪ್ರಿಫರೆನ್ಸ್) ಮಾನ್ಯತೆಯನ್ನು ರದ್ದುಗೊಳಿಸಿತ್ತು. ಈ ನಿಟ್ಟಿನಲ್ಲೀಗ ಅಮೆರಿಕದಿಂದ ಶುಭಸಮಾಚಾರ ಸಿಗುವ ಸಾಧ್ಯತೆಗಳಿವೆ. ಜೂನ್ 5ರಂದು ಭಾರತವು ಆ್ಯಪಲ್ ಸೇರಿದಂತೆ ಅಮೆರಿಕದ ಒಟ್ಟು 28 ಉತ್ಪನ್ನಗಳ ಮೇಲಿನ ಸುಂಕವನ್ನು
ಹೆಚ್ಚಿಸಿತು .(ಭಾರತದ ಈ ನಡೆಯನ್ನು ನಾವು ಸಹಿಸಲಾರೆವು ಎಂದು ಅಂದು ಟ್ರಂಪ್ ಟ್ವೀಟ್ ಮಾಡಿದ್ದರು). ವೀಸಾ ವಿಚಾರದಲ್ಲೂ ಭಾರತಕ್ಕೆ ತುಸು ವಿನಾಯಿತಿ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಭಾರತ ಮತ್ತು ಅಮೆರಿಕದ ಸಂಬಂಧ ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗಿಲ್ಲ. ಎರಡೂ ದೇಶಗಳ ನಡುವೆಯೂ ವ್ಯೂಹಾತ್ಮಕ ಪಾಲುದಾರಿಕೆ ಮತ್ತು ಉಗ್ರವಾದ ವಿರೋಧಿ ಹೋರಾಟದಲ್ಲಿ ಬಹುದೊಡ್ಡ ಮೈತ್ರಿಯಿದೆ ಎನ್ನುವುದನ್ನೂ ಮರೆಯುವಂತಿಲ್ಲ. ಅತ್ತ ಶ್ವೇತ ಭವನವೂ ತನ್ನ ಪ್ರಕಟಣೆಯಲ್ಲಿ, “ಉಭಯ ರಾಷ್ಟ್ರಗಳ ಜನರ ನಡುವಿನ ಬಾಂಧವ್ಯ ವೃದ್ಧಿಗೆ ಹಾಗೂ ಸಹಭಾಗಿತ್ವ ಯೋಜನೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಅವಕಾಶ’ ಎಂದು ಹೇಳಿದೆ.
ಆಯೋಜಕರೇನಂತಾರೆ?
ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾಗಿರುವ ಡಾ| ಜಿತೇಂದ್ರ ಅಗರ್ವಾಲ್ ಅವರು, ಹೌಡಿ ಮೋದಿ ಕಾರ್ಯಕ್ರಮದ ತಯಾರಿ ಕಳೆದ ಮೂರು ವರ್ಷದಿಂದ ನಡೆಯುತ್ತಿದೆ ಎನ್ನುತ್ತಾರೆ. ಲೋಕಸಭಾ ಚುನಾವಣೆಗಳು ಮುಗಿದ ನಂತರ ತಾವು ಖಂಡಿತ ಈ ಕಾರ್ಯಕ್ರಮಕ್ಕೆ ಬರುವುದಾಗಿ ಮೋದಿ ಹೇಳಿದ್ದರಂತೆ. “ನಾಲ್ಕು ತಿಂಗಳ ಹಿಂದೆ ನಾವು ಪ್ರಧಾನಿಗಳಿಗೆ ಅಧಿಕೃತ ಆಹ್ವಾನ ಕಳಿಸಿದ್ದು’ ಎನ್ನುತ್ತಾರೆ ಅಗರ್ವಾಲ್. ಈ ಕಾರ್ಯಕ್ರಮದಲ್ಲಿ ನೂರಾರು ನೃತ್ಯಪಟುಗಳು, ಗಾಯಕರು ಭಾಗವಹಿಸಲಿರುವುದು ವಿಶೇಷ. ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಹ್ಯೂಸ್ಟನ್ ಭಾರತೀಯರು ತಿಂಗಳುಗಳಿಂದ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.
ಟೆಕ್ಸಾಸ್‌ನಲ್ಲಿ ಭಾರತೀಯರು
ಅಮೆರಿಕದ ಎರಡನೇ ಅತಿದೊಡ್ಡ ರಾಜ್ಯವಾಗಿರುವ ಟೆಕ್ಸಾಸ್‌ನಲ್ಲಿ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಅಲ್ಲಿನ ಭಾರತೀಯ ಸಮುದಾಯದ ಜನರು ಆರ್ಥಿಕವಾಗಿ ಸದೃಢರಾಗಿದ್ದು, ಅನೇಕರು ಪ್ರಮುಖ ಉದ್ಯಮಿಗಳಾಗಿಯೂ ಹೊರಹೊಮ್ಮಿದ್ದಾರೆ. 2019ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಸಮುದಾಯದ ಬೆಂಬಲ ಪಡೆಯಲು ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕೆ ಬರಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತದೆ.
ಪಾಕ್-ಚೀನಗೆ ಸ್ಪಷ್ಟ ಸಂದೇಶ
ಹ್ಯೂಸ್ಟನ್ ಕಾರ್ಯಕ್ರಮವು ಪಾಕಿಸ್ತಾನ ಹಾಗೂ ಆಪ್ತಮಿತ್ರ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಎಷ್ಟೇ ಹೆಣಗಾಡಿದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ ಹಾಗೂ ಅಮೆರಿಕ ಮತ್ತು ಭಾರತದ ನಡುವಿನ ಬಾಂಧವ್ಯ ಅಬಾಧಿತ ಎಂಬ ಸ್ಪಷ್ಟ ಸಂದೇಶವನ್ನು ಈ ಕಾರ್ಯ ಕ್ರಮ ಎರಡೂ ದೇಶಗಳಿಗೆ ಕಳುಹಿಸಲಿದೆ.
ಹಿಂದೆಯೂ ಮೋಡಿ ಮಾಡಿದ್ದ ಭಾಷಣ
1. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಭಾಷಣ
ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ಲ್ಲಿರುವ ಮ್ಯಾಡಿಸನ್ ಸ್ಕ್ವೆìರ್ ಗಾರ್ಡನ್‌ನಲ್ಲಿ 20 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಪ್ರಥಮ ಬಾರಿಗೆ ವಿಶ್ವದ ಗಮನ ಮೋದಿಯವರತ್ತ ಹರಿಯುವಂತೆ ಮಾಡಿತು. ವಿಶೇಷವೆಂದರೆ, ಕೆಲವೇ ವರ್ಷಗಳ ಹಿಂದೆ ದೇಶಕ್ಕೆ ಕಾಲಿಡುವುದಕ್ಕೂ ವೀಸಾ ನಿರಾಕರಿಸಿದ್ದ ಅದೇ ಅಮೆರಿಕದಲ್ಲಿ, ಅದೇ ಅಮೆರಿಕದ ಸಂಸದರ ಎದುರೇ ಬೃಹತ್ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಮರು ವರ್ಷ ಅವರು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯ ಕಾರ್ಯಕ್ರಮದಲ್ಲಿ 20 ಸಾವಿರ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದರು.
2.ಸಿಡ್ನಿ ಆಲ್ ಫೋನ್ಸ್ ಅರೇನಾ
ಆಸ್ಟ್ರೇಲಿಯಾದ ಸಿಡ್ನಿಯ ಆಲ್ ಫೋನ್ಸ್ ಅರೇನಾ ಸ್ಟೇಡಿಯಂನಲ್ಲಿ ಮ್ಯಾಡಿಸನ್ ಸ್ಕ್ವೇರ್‌ನಂಥ 360 ಡಿಗ್ರಿ ವೇದಿಕೆಯಿರಲಿಲ್ಲವಾದರೂ, ಅನಿವಾಸಿ ಭಾರತೀಯರ ಕ್ರೇಜ್ ಏನೂ ಕಡಿಮೆಯಿರಲಿಲ್ಲ. 20 ಸಾವಿರಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮೋದಿ ಮಾಡಿದ ಭಾಷಣ ಬಹಳ ಸದ್ದು ಮಾಡಿತ್ತು. ಆಸ್ಟ್ರೇಲಿಯನ್ ಮಾಧ್ಯಮಗಳು ಈ ಕಾರ್ಯಕ್ರಮಕ್ಕೆ ಬಹಳ ಪ್ರಚಾರ ನೀಡಿದವು.
3 .ಲಂಡನ್‌ನ ವೆಂಬ್ಲೆ ಸ್ಟೇಡಿಯಂ
ಪ್ರಧಾನಿ ಮೋದಿಯವರಿಗಾಗಿ ಬ್ರಿಟಿಷ್-ಇಂಡಿಯನ್ ಸಮುದಾಯ ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವಂತೂ ತನ್ನ ಅದ್ದೂರಿತನದಿಂದ ಸದ್ದು ಮಾಡಿತು. 60ಸಾವಿರ ಭಾರತೀಯರು ಸೇರಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡೇವಿಡ್ ಕೆಮರಾನ್ ಮತ್ತು ತಂಡ, ಮೋದಿ ಮತ್ತು ಅನಿವಾಸಿ ಭಾರತೀಯರ ಕೊಡುಗೆಯನ್ನು ಬಹಳಕೊಂಡಾಡಿತು.
4. ದುಬೈನಲ್ಲಿ ದರ್ಬಾರ್
2015ರಲ್ಲಿ ದುಬೈನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಂದು ಪುಟ್ಟ ಭಾರತವೇ ಸೃಷ್ಟಿಯಾಗಿತ್ತು. ದುಬೈ ಭಾರತೀಯರು ಪ್ರಧಾನಿ ಮೋದಿ ಅವರ ಸ್ವಾಗತಕ್ಕೆ ಹಮ್ಮಿಕೊಂಡಿದ್ದ “ಮರ ಹಬ್ ನಮೋ’ ಕಾರ್ಯಕ್ರಮಕ್ಕೆ 50 ಸಾವಿರ ಜನಸಾಕ್ಷಿಯಾಗಿದ್ದರು. ಭಯೋತ್ಪಾದನೆಗೆ ಸಂಬಂಧಿಸಿ ಪಾಕಿಸ್ಥಾನದ ಮೇಲೆ ಪರೋಕ್ಷವಾಗಿ ವಾಗ್ಧಾಳಿ ನಡೆಸಲು ಈ ವೇದಿಕೆಯನ್ನು ಮೋದಿ ಸಕ್ಷಮವಾಗಿ ಬಳಸಿಕೊಂಡರು. ವಿಶೇಷವೆಂದರೆ, 1981ರ ನಂತರ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.