ಆಸೆಗಣ್ಣಿನ ಗೊಂಬೆ ಟು ‘ಹುಣ್ಸ್ ಮಕ್ಕಿ ಹುಳ’ : ಬೆಂದ ಬದುಕಿನ ಸ್ಫೂರ್ತಿದಾಯಕ ನಡೆ
Team Udayavani, Sep 7, 2021, 3:37 PM IST
ಕುಂದಾಪುರದ ಹುಣ್ಸೆಮಕ್ಕಿಯವರಾದ ವಿನುತಾ ವಿಶ್ವನಾಥ್ ಅವರ ಚೊಚ್ಚಲ ಕೃತಿಯೇ ‘ಹುಣ್ಸ್ ಮಕ್ಕಿ ಹುಳ’. ನಾ ತಿಂದ್ ಬದ್ಕ್ ಎಂಬ ಇದರ ಅಡಿಬರಹ ಕುಂದಾಪುರ ಕನ್ನಡದಲ್ಲಿದೆ. ಇವರದಲ್ಲದ ತಪ್ಪಿಗೆ ಬದುಕಿನಲ್ಲಿ ಅನುಭವಿಸಿದ ಬವಣೆಗಳು, ಇವರು ಅದನ್ನು ಎದುರಿಸಿದ ಪರಿ ಓದುಗರಿಗೆ ಒಂದು ಬಗೆಯ ಸ್ಫೂರ್ತಿಯೇ ಸೈ. ಇಷ್ಟು ಚಿಕ್ಕ ಪ್ರಾಯದಲ್ಲಿಯೇ ಆತ್ಮಕಥೆ ಬರೆಯ ಹೊರಟ ಇವರು ಅನುಭವಿಸಿದ ಬದುಕು ಯಾವ ರೀತಿಯದ್ದಾಗಿರಬೇಕೆಂದು ತಿಳಿಯಬೇಕೆಂದರೆ ಈ ಪುಸ್ತಕ ಒಮ್ಮೆ ಓದಲೇಬೇಕು.
ಆಟವಾಡುತ್ತಾ ಕಳೆಯಬೇಕಾದ ಬಾಲ್ಯದ ಏಳನೇ ವಯಸ್ಸಿನಲ್ಲಿಯೇ ಬೆಂಕಿಯ ಅವಘಡಕ್ಕೆ ಸಿಲುಕಿದ್ದು ಲೇಖಕಿಯ ಜೀವನಕ್ಕೆ ಪ್ರಮುಖ ತಿರುವಾಯ್ತು. ಆ ಅವಘಡಕ್ಕೆ ಸಿಲುಕಿ ಮುಖ, ಮೈ ಕಲೆಯಾದ ಮೇಲೆ ಜನರು ಒಂದಿಷ್ಟು ಅನುಕಂಪ ತೋರಿಸುವುದರ ಜೊತೆಗೆ ಮುಖ ಮುಚ್ಚಿಕೊಂಡು ಓಡಾಡು ಎಂಬ ಬುದ್ಧಿಮಾತು ಹೇಳಿದ್ದು, ಆಗ ಇವರ ಮನಸ್ಥಿತಿ ಹೇಗಿರಬೇಡ? ಇವರಿಗೋ ಕಲೆ ದೇಹದ ಹೊರಗಡೆಯಿದ್ದರೆ ಈ ಮನುಷ್ಯರಿಗೆ ಮನಸ್ಸೆಲ್ಲಾ ಕಲೆ ಎನ್ನಲು ವಿಷಾದವಾಗುತ್ತದೆ.
ಇದನ್ನೂ ಓದಿ : ಕಲಬುರಗಿ ಪಾಲಿಕೆ: ದೋಸ್ತಿ ವಿಚಾರದಲ್ಲಿ ಸ್ಥಳೀಯರ ಮುಖಂಡರ ಮಾತಿಗೆ ಮನ್ನಣೆ ಎಂದ ಎಚ್ ಡಿಡಿ
ಈ ಆತ್ಮಕಥೆಯನ್ನು ಒಟ್ಟು 15 ವಿಭಾಗಗಳಾಗಿ ವಿಂಗಡಿಸಲಾಗಿದೆ. ಚಿಕ್ಕವಳಿದ್ದಾಗ ಬಹಳ ಸುಂದರವಿದ್ದುದರಿಂದ ಪರಿಚಯದ ಎಲ್ಲರೂ ‘ಗೊಂಬೆ’ ಎನ್ನುತ್ತಿದ್ದರಂತೆ, ಹೀಗೆ ಎಲ್ಲರ ದೃಷ್ಟಿ ತಾಕಿಯೇ ಅವತ್ತೊಂದು ದಿನ ಮೈ ಸುಟ್ಟಿತೇನೋ ಎನ್ನುತ್ತಾರೆ. ಲೇಖಕಿ 5 ನೇ ಕ್ಲಾಸ್ ನಲ್ಲಿರುವಾಗ ಪೇಪರ್ ನಲ್ಲಿ ಬಂದ ಜಾಹಿರಾತು ನೋಡಿ ಮುಖದ ಗಾಯದ ಕಲೆ ಹೋಗಲು ಅಪ್ಪ ಕರೆದುಕೊಂಡು ಹೋಗಿ ಸರ್ಜರಿ ಮಾಡಿಸಿದರೂ ಮುಖ ಬದಲಾಗದೇ ಹಾಗೆಯೇ ಇದ್ದುದ್ದು ಲೇಖಕಿಯನ್ನು ಆ ಸಮಯಕ್ಕೆ ಒಂದಷ್ಟು ನಿರಾಶೆಗೆ ಹಾಗೂ ದುಃಖಕ್ಕೀಡು ಮಾಡಿತ್ತಂತೆ. ಯಾಕೆಂದರೆ ಸರ್ಜರಿ ಮಾಡಿದವರು ಇನ್ನೂ ಮೆಡಿಕಲ್ ಓದುತ್ತಿದ್ದ ಸ್ಟೂಡೆಂಟ್ಸ್ ಆಗಿದ್ದರು. ಇದನ್ನೆಲ್ಲ ಓದುವಾಗ ಆ ಎಳೆಯ ಆಸೆಗಣ್ಣುಗಳು, ಈಡೇರದಿದ್ದಾಗ ಆಗುವ ಆ ಬೇಸರ ಕಣ್ಮುಂದೆ ಸುಳಿದಂತಾಗುತ್ತದೆ.
ಅತೀ ಪ್ರೀತಿಸುವ ಸೋದರತ್ತೆ, ಅವರ ಮಗಳು, ಲೇಖಕಿಗೆ ಡಿಪ್ಲೋಮಾ ಸೀಟು ಕೊಡಿಸಲು ಅವರು ಹೋರಾಡಿದ ಪರಿ, ಸೀಟು ಸಿಕ್ಕೇ ಸಿಗುತ್ತದೆ ಎಂಬ ಅವರ ಆ ಆತ್ಮ ವಿಶ್ವಾಸದ ಕುರಿತು ಓದುವಾಗ ನಾವು ಇದ್ದ ರೀತಿಯಲ್ಲೇ ನಮ್ಮನ್ನು ಪ್ರೀತಿಸುವ ಜೀವಗಳು ಹತ್ತಿರವಿದ್ದರೆ ಬದುಕು ಅದೆಷ್ಟು ಚೆನ್ನ ಎನಿಸದೇ ಇರುವುದಿಲ್ಲ. ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಲೇಖಕಿ ಎರಡು ಜಡೆ ಹಾಕಿಕೊಂಡು ಹೋದಾಗ ‘ಏನು, ಕೋತಿ ಕ್ಲಾಸಿಗೆ ಬಂದಿದೆ’ ಎಂದದ್ದು, ಇವರು ಅತ್ತದ್ದು, ಅತ್ತೆಗೆ ತಿಳಿದು ಅವರು ಅದನ್ನು ಮುಖ್ಯ ಶಿಕ್ಷಕಿಯಲ್ಲಿ ಹೇಳಿದ್ದು, ಆ ಟೀಚರ್ ಗೆ ವಿಷಯ ತಿಳಿದು ಅವರು ಮತ್ತೆ ಗಣಿತದ ಲೆಕ್ಕದ ವಿಷಯದಲ್ಲಿ ಲೇಖಕಿಗೆ ಹೊಡೆದು ಸೇಡು ತೀರಿಸಿಕೊಂಡಿದ್ದೆಲ್ಲ ಓದುವಾಗ ಇಂತವರು ಶಿಕ್ಷಕಿ ಸ್ಥಾನಕ್ಕೆ ಅರ್ಹರಲ್ಲ ಎನಿಸುತ್ತದೆ. ಏಕೆಂದರೆ ಪುಟ್ಟ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಕೇವಲ ಅಂದವಿಲ್ಲ ಎನ್ನುವ ಕಾರಣಕ್ಕೆ ಎಲ್ಲರೆದುರು ಹೀಗಳೆಯುವುದು ಎಷ್ಟು ಸರಿ?
ಪಿಯುಸಿಯಲ್ಲಿ ಫೇಲ್ ಆದರೂ ಛಲ ಬಿಡದೆ ಡಿಪ್ಲೊಮಾ ಪದವಿ ಮುಗಿಸಿದ ಕುರಿತು ಓದುವಾಗ ಲೇಖಕಿ ಎಂತಹ ಛಲಗಾತಿಯೆಂಬುದನ್ನು ಅರಿಯಬಹುದು. ಅವರಿಗಾದ ಮೊದಲ ಪ್ರೀತಿ ಆ ವಯಸ್ಸಿಗದು ಸಹಜವೇ ಅನ್ನಿಸುತ್ತದೆ. ಆ ಹುಡುಗ ನಂತರ ಕಾರಣವೇ ತಿಳಿಸದೆ ಬಿಟ್ಟು ಹೋದಾಗ ಲೇಖಕಿ ಆತನನ್ನು ಸಂಪರ್ಕಿಸಲು ಪಡುವ ಕಷ್ಷ, ಅದಕ್ಕಾಗಿ ಮಾಟ-ಮಂತ್ರದ ಮೊರೆ ಹೋದ ಕುರಿತು ಓದುವಾಗ ನಿಜ ಪ್ರೀತಿ ಮಾಡಿದವರಿಗೇ ಎಷ್ಟೊಂದು ನೋವು ಎನ್ನಿಸದೆ ಇರುವುದಿಲ್ಲ. ಇನ್ನು, ಲೇಖಕಿ ಉಳಿದುಕೊಂಡ ಪಿ.ಜಿ. ಯವರ ಕೆಟ್ಟ ಗುಣ, ಬೇಕಂತಲೇ ಹಳಸಿದ ಊಟ ಕೊಡುತ್ತಿದ್ದುದರ ಕುರಿತೂ ಬರೆದಿದ್ದಾರೆ. ಕೇವಲ ಹಣಕ್ಕಾಗಿ ಹಪ-ಹಪಿಸುವ ಕೆಲವು ಪಿ.ಜಿ. ಮಾಲಕರೂ ಇರುತ್ತಾರೆ ಎಂಬುದು ಸತ್ಯ.
ಮೊದಲ ಪ್ರೀತಿ ಕಳೆದುಹೋದ ನೋವಿನಲ್ಲೇ ಮುಳುಗಿರುವಾಗ ಕಂಪೆನಿಯವರೂ ನಾಲ್ಕು ತಿಂಗಳಿಂದ ಸಂಬಳ ಕೊಡದೆ ಸತಾಯಿಸಿದ ಪರಿಗೆ ಲೇಖಕಿ ಯಾವ ರೀತಿ ಒದ್ದಾಡಿರಬೇಡ. ಅದೂ ಬೆಂಗಳೂರಿನಲ್ಲಿ ಹಣವಿಲ್ಲದೆ ಜೀವನ ಸಾಧ್ಯವೇ ? ಇಷ್ಟೆಲ್ಲ ಹೋರಾಟದ ಹಾದಿಯ ನಡುವೆಯೇ ಇವರ ಬದುಕಿನಲ್ಲೂ ಹೂವ ಹಾದಿ ಚಿಗುರಿದ್ದು ಸುಳ್ಳಲ್ಲ. ಗೆಳೆಯ ಚೇತನ್ ನ ಒತ್ತಾಯಕ್ಕೆ ಹಾಗೂ ಇವರಿಗೂ ನಟನೆಯ ಆಸೆಯಿದ್ದುದರಿಂದ ಕಾಲಿಟ್ಟಿದ್ದು ರಂಗಭೂಮಿಯತ್ತ.
ಎನ್.ಜಿ.ಓ ನಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿ ಭಯವನ್ನೆಲ್ಲ ತೊರೆದು ನಾಲ್ಕು ಜನರ ಮುಂದೆ ಮಾತನಾಡಿದ್ದು, ಇವರ ಆತ್ಮ ವಿಶ್ವಾಸವನ್ನು ಇನ್ನೂ ಹೆಚ್ಚಿಸಿತೆನ್ನಬಹುದು. ಇನ್ನು, ಉತ್ತಮ ಶಿಕ್ಷಕರಾದ ಸಂತೋಷ್ ಮಾಸ್ಟ್ರು, ಮಾವನ ಮಗಳು ಅಶ್ವಿನಿ, ಗೆಳೆಯ ಹಾಗೂ ಮುಂದೆ ಜೀವನದ ಭಾಗವಾದ ಪತಿ ಚೇತನ್ ಇವರೆಲ್ಲರ ಪಾತ್ರ ಇಲ್ಲಿ ಮುಖ್ಯವಾಗಿದೆ. ನಾಯಿಗಳೆಂದರೆ ಆಗದ ಇವರಿಗೆ ಭೀಮನೆಂಬ ನಾಯಿ ಸಿಕ್ಕಿ ಅದು ಸ್ವಂತ ಮಗುವಿನಂತೆಯೇ ಆಗಿದ್ದು ಓದುವಾಗ ಖುಷಿಯಾಗುತ್ತದೆ. ಇವರ ಪತಿಯಾದ ಚೇತನ್ ರವರ ಸಹಕಾರ ಮೆಚ್ಚುವಂತದ್ದು. ಇವರು ಕೆಲಸ ಮಾಡುತ್ತಿದ್ದ ಎನ್. ಜಿ. ಓನಲ್ಲಿ “ಸೌಂದರ್ಯ ಹಾಗೂ ಮಾನಸಿಕ ಆರೋಗ್ಯ” ಕುರಿತು ಪ್ರಬಂಧ ಬರೆಯುವ ಅವಕಾಶವಿದ್ದಾಗ ಅದನ್ನೇ ಬರೆದುಕೊಟ್ಟ ಲೇಖಕಿಗೆ ಇಲ್ಲೂ ಒಂದು ಮಹತ್ವದ ತಿರುವು ದೊರೆಯಿತು. ಅದು ಸಾವಿರಾರು ಜನರು ಓದುವಂತಾಗಿ, ಇವರ ಧೈರ್ಯದ ಕುರಿತು ಹೊಗಳಿದ್ದರಂತೆ. ಚೇತನ್ ನ ಸಲಹೆಯಂತೆ ಅದನ್ನೇ ಫೇಸ್ಬುಕ್ ನಲ್ಲಿ ಹಾಕಿದಾಗ ಮತ್ತೆ ಹಲವು ಜನರ ಪ್ರಶಂಸೆ. ಇದರಿಂದಾಗಿಯೇ ಗೆಳೆಯರ ಬಳಗ ದೊಡ್ಡದಾಯಿತೆನ್ನುತ್ತಾರೆ.
ಕೇವಲ ಬಿಳಿ ಚರ್ಮ, ತೆಳ್ಳನೆಯ ದೇಹಸ್ಥಿತಿ, ಸುಂದರ ಸ್ವರ ಇದ್ದರೇನೇ ಅವರು ಬದುಕಲು ಅರ್ಹರು ಎಂಬ ಸಣ್ಣ ಮನಸ್ಥಿತಿಯ ಜನರ ನಡುವೆ ಲೇಖಕಿ ವಿನುತಾ ವಿಶ್ವನಾಥ್, ಬದುಕನ್ನು ಎದುರಿಸುತ್ತಿರುವ ಪರಿ ನಿಜಕ್ಕೂ ನಮಗೆಲ್ಲ ಸ್ಫೂರ್ತಿದಾಯಕ. ಈ ಪುಸ್ತಕ ಓದಿ ಮುಗಿಸುವಾಗ ‘ಅಬ್ಬಾ ಛಲಗಾತಿಯೇ’ ಅನ್ನಿಸದಿರುವುದಿಲ್ಲ. ಈ ನಿಟ್ಟಿನಲ್ಲಿ ಈ ಪುಸ್ತಕದ ಮೂಲಕ ವಿನುತಾ ವಿಶ್ವನಾಥ್ ಓದುಗರಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.
~ವಿನಯಾ ಕೌಂಜೂರು
ಇದನ್ನೂ ಓದಿ : ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಡಿಜಿಟಲೈಸ್ಡ್ ವ್ಯವಸ್ಥೆ ಜಾರಿ: ಸಚಿವ ಮಾಧುಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.