I.N.D.I.A ಅವಿಶ್ವಾಸ, 2024ರ ಚುನಾವಣೆ, ಮೋದಿ ಪ್ರಚಾರ
Team Udayavani, Aug 14, 2023, 7:10 AM IST
ಇದೇ ಆ.8ರಿಂದ 10ರ ವರೆಗೆ ಸಂಸತ್‌ನ ಲೋಕಸಭೆಯಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಚರ್ಚೆ, ಹಲವಾರು ವಿಚಾರಗಳನ್ನು ತೆರೆದಿಟ್ಟಿತು. ಮಣಿಪುರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಹೇಳಿಕೆ ನೀಡಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು, ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್ ಮತ್ತು ಬಿಆರ್‌ಎಸ್, ಪ್ರಧಾನಿಯವರಿಂದ ಹೇಳಿಕೆ ಪಡೆಯುವಲ್ಲಿ ಯಶಸ್ವಿಯಾದವು. ಆದರೆ ಅಂದುಕೊಂಡದ್ದನ್ನು ಅವುಗಳು ಸಾಧಿಸಿದವೆಯೇ ಎಂಬುದು ಮಾತ್ರ ಖಚಿತವಾದಂತಿಲ್ಲ.
2024ರ ಮೇ ತಿಂಗಳ ಒಳಗೆ ಲೋಕಸಭೆಗೆ ಚುನಾವಣೆ ನಡೆದು ಹೊಸ ಸರಕಾರ ಬರಲಿದೆ. ಹಾಗೆ ನೋಡಿದರೆ ಇನ್ನು ಎಂಟು ತಿಂಗಳು ಮಾತ್ರ ಈಗಿನ ಸಂಸತ್‌ನ ಅವಧಿ ಇದೆ. ಈಗಿನಿಂದಲೇ ಎಲ್ಲ ಪಕ್ಷಗಳು ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿದ್ದು, ಇದಕ್ಕೆ ಪೂರಕವಾಗಿ ವೇದಿಕೆಯನ್ನೂ ನಿರ್ಮಾಣ ಮಾಡಿಕೊಳ್ಳುತ್ತಿವೆ. ಅಂಥದ್ದೊಂದು ವೇದಿಕೆಯಾಗಬಹುದು ಎಂಬ ನಿರೀಕ್ಷೆಯಿಂದಲೇ, ವಿಪಕ್ಷಗಳ ಕೂಟ ಐ.ಎನ್.ಡಿ.ಐ.ಎ. ಈ ಅವಿಶ್ವಾಸದ ಹಾದಿ ಹಿಡಿದಿತ್ತು ಎಂಬುದು ಸುಲಭವಾಗಿ ವಿಶ್ಲೇಷಿಸಬಹುದಾದ ವಿಚಾರ.
ಆದರೆ ಈ ಅವಕಾಶವನ್ನು ವಿಪಕ್ಷಗಳು ಸರಿಯಾಗಿ ಬಳಸಿಕೊಂಡವೋ ಅಥವಾ ಆಡಳಿತ ಪಕ್ಷ ಚೆನ್ನಾಗಿ ಬಳಸಿಕೊಂಡಿತೋ ಎಂಬ ಬಗ್ಗೆ ಕಳೆದ ಮೂರು ದಿನಗಳಿಂದಲೂ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇವೆ. ಕೆಲವರು ಅವಿಶ್ವಾಸ ನಿರ್ಣಯದ ಮೂಲಕ ಕಾಂಗ್ರೆಸ್, ಪ್ರಧಾನಿ ಮೋದಿಯವರಿಗೊಂದು ಚುನಾವಣ ಭಾಷಣಕ್ಕೆ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿತು ಎಂದೇ ವಾದಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡನೆ ಮಾಡದೇ ಹೋಗಿದ್ದರೆ ಅವರು ಉತ್ತರ ಕೊಡುವ ಸನ್ನಿವೇಶ ನಿರ್ಮಾಣವಾಗುತ್ತಿರಲಿಲ್ಲ. ಹಾಗೆಯೇ ಇಂಥದ್ದೊಂದು ಆಕ್ರಮಣಕಾರಿ ಭಾಷಣಕ್ಕೂ ಸಾಕ್ಷಿಯಾಗಬೇಕಾಗಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಅತ್ತ ಕಾಂಗ್ರೆಸ್ ಕೂಡ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ನೋಡಿದೆ ಎಂಬುದು ಒಪ್ಪತಕ್ಕ ವಿಚಾರವೇ. ಆದರೆ ಭಾಷಣಕಾರರ ಆಯ್ಕೆಯಲ್ಲಿ ಕಾಂಗ್ರೆಸ್ ಒಂದಷ್ಟು ಎಡವಿತು ಎಂಬ ಬಗ್ಗೆ ಆಕ್ಷೇಪಗಳಿವೆ. ಜತೆಗೆ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯನು ವಿಪಕ್ಷ ನಾಯಕ ಸ್ಥಾನದಲ್ಲಿ ಕುಳಿತಿದ್ದ ಅಧೀರ್ ರಂಜನ್ ಚೌಧರಿ ಅವರು ಆರಂಭಿಸಿದ್ದಿದ್ದರೆ ಅದಕ್ಕೊಂದು ಗಾಂಭೀರ್ಯತೆ ಬರುತ್ತಿತ್ತು. ಅನಂತರದಲ್ಲಿ ಉಳಿದವರು ಮಾತನಾಡಬಹುದಿತ್ತು. ರಾಹುಲ್ ಗಾಂಧಿ, ಗೌರವ್ ಗೋಗೊಯ್ ಜತೆಗೆ ಕೇರಳದ ಸಂಸತ ಶಶಿ ತರೂರ್ ಅವರಿಗೂ ಒಂದು ಅವಕಾಶ ಮಾಡಿಕೊಡಬಹುದಾಗಿತ್ತು. ಆಗ ಆಡಳಿತ ಪಕ್ಷವನ್ನು ಕಟ್ಟಿ ಹಾಕುವಲ್ಲಿ ಇನ್ನೂ ಒಂದಿಷ್ಟು ಸಫಲತೆ ಸಿಗುತ್ತಿತ್ತು.
ಇಡೀ ಅವಿಶ್ವಾಸ ಗೊತ್ತುವಳಿಯ ಪ್ರಮುಖ ಕಾರಣ, ಮಣಿಪುರ ಹಿಂಸಾಚಾರ. ಮೇ ತಿಂಗಳ ಆರಂಭದಲ್ಲಿ ಆರಂಭವಾದ ಗಲಾಟೆ ಈಗ ಒಂದಷ್ಟು ಹದ್ದುಬಸ್ತಿಗೆ ಬಂದಿದೆಯಾದರೂ, ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ. ಅಲ್ಲಿ ಯಾವಾಗ ಬೇಕಾದರೂ, ಮತ್ತೆ ಹಿಂಸಾಚಾರ ಸಂಭವಿಸಬಹುದು ಎಂಬ ಶಂಕೆಗಳೂ ಇವೆ. ಹೀಗಾಗಿಯೇ ಇನ್ನೂ ಭದ್ರತೆ ವಿಚಾರದಲ್ಲಿ ಕೇಂದ್ರ ಸರಕಾರವಾಗಲಿ ಅಥವಾ ಇಲ್ಲಿನ ರಾಜ್ಯ ಸರಕಾರವಾಗಲಿ ಒಂದು ಹೆಜ್ಜೆಯನ್ನೂ ಹಿಂದಕ್ಕೆ ಇಡದಂಥ ಸ್ಥಿತಿ ಇದೆ. ಅಲ್ಲದೆ ನೂರಾರು ಮಂದಿಯನ್ನು ಬಲಿಪಡೆದಿರುವ ಈ ಹಿಂಸಾಚಾರದ ಬಗ್ಗೆ ದೇಶದ ಗಮನಸೆಳೆಯುವ ದೃಷ್ಟಿಯಿಂದಲೇ ಕಾಂಗ್ರೆಸ್ ಈ ಅವಿಶ್ವಾಸ ನಿರ್ಣಯ ಮಂಡಿಸಿತು. ಈ ವಿಚಾರದಲ್ಲಿ ಈಶಾನ್ಯ ಭಾರತಕ್ಕೇ ಸೇರಿದ ಸಂಸದ ಗೌರವ್ ಗೋಗೊಯ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಒಂದಷ್ಟು ಅಂಶಗಳನ್ನು ಪ್ರಸ್ತಾವಿಸಿ, ಘಟನೆಯ ಗಂಭೀರತೆ ಬಗ್ಗೆ ಗಮನಸೆಳೆದರು. ಈ ವಿಚಾರದಲ್ಲಿ ಈ ನಾಯಕರ ಗೆಲುವು ಎಂದೂ ಕರೆಯಬಹುದು. ಅಲ್ಲದೆ ವಿಪಕ್ಷಗಳ ಸಾಲಿನಿಂದ ಮಾತನಾಡಿದ ಬಹುತೇಕ ಮಂದಿ ಮಣಿಪುರ ಹಿಂಸಾಚಾರದ ಬಗ್ಗೆ ಗಮನ ಸೆಳೆಯದೇ ಇರಲಿಲ್ಲ.
ಆದರೆ ಆಡಳಿತ ಪಕ್ಷದ ಸಾಲಿನಲ್ಲಿ ಈ ವಿಚಾರವನ್ನು ಸಂಪೂರ್ಣವಾಗಿ ಮುಟ್ಟಿದ್ದು ಗೃಹ ಸಚಿವ ಅಮಿತ್ ಶಾ ಅವರು ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದರೂ ಶಾಂತಿ ಮರುಸ್ಥಾಪನೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಪ್ರಸ್ತಾವಿಸುತ್ತಲೇ, ಈಶಾನ್ಯ ಭಾರತದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸದನದ ಮುಂದಿಡುತ್ತಾ ಹೋ ದರು. ಅಲ್ಲದೆ ಅಮಿತ್ ಶಾ ಅವರ ಶೈಲಿಯಲ್ಲಿ ಪ್ರಧಾನಿಯವರು ಮಣಿಪುರ ಹಿಂಸಾಚಾರದ ಬಗ್ಗೆ ಉತ್ತರವನ್ನೇನೂ ಕೊಡಲಿಲ್ಲ. ಆದರೆ ಈಶಾನ್ಯ ಭಾರತದಲ್ಲಿ ಎನ್‌ಡಿಎ ಸರಕಾರ ಬಂದ ಮೇಲೆ ಆದ ಅಭಿವೃದ್ಧಿಗಳು ಮತ್ತು ಈಶಾನ್ಯ ಭಾರತದ ಮೇಲೆ ಸರಕಾರದ ಹೆಚ್ಚಿನ ಗಮನದ ಬಗ್ಗೆ ಒತ್ತಿ ಒತ್ತಿ ಹೇಳಿದರು. ಇದಕ್ಕಿಂತ ಹೆಚ್ಚಿನದಾಗಿ, ಈಶಾನ್ಯ ಭಾರತವನ್ನು ಕಾಂಗ್ರೆಸ್ ಆಡಳಿತದಲ್ಲಿ ಹೇಗೆ ಅವಗಣಿಸಲಾಗಿತ್ತು ಎಂಬ ವಿಷಯವನ್ನು ಹೇಳುವ ಮೂಲಕ ವಿಪಕ್ಷವನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದರು. ಈ ವಿಚಾರದಲ್ಲಿ ಅವರು ಹೆಚ್ಚೇ ಸಫಲವಾದರು.
ಆ.10ರಂದು ಮೋದಿ ಮಾಡಿದ ಭಾಷಣವನ್ನು ಗಮನಿಸಿದರೆ, ಇದು ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಉತ್ತರಕ್ಕಿಂತ ಹೆಚ್ಚಾಗಿ 2024ರ ಚುನಾವಣೆಯ ಪೂರ್ವ ತಯಾರಿಯಂತೆಯೇ ತೋರುತ್ತಿತ್ತು. ಜತೆಗೆ ಲೋಕಸಭೆಯಲ್ಲಿ ತಾನಾಗಿಯೇ ಸಿಕ್ಕ ಅವಕಾಶವನ್ನು ಮೋದಿಯವರು ಸಂಪೂರ್ಣವಾಗಿಯೇ ಬಳಸಿಕೊಂಡರು. ವಿಶೇಷವೆಂದರೆ ಮೋದಿಯವರ ಭಾಷಣದಲ್ಲಿ ಮುಕ್ಕಾಲು ಭಾಗ ಕಾಂಗ್ರೆಸ್ ಅನ್ನು ತೆಗಳಲು ಬಳಕೆಯಾಗಿತ್ತು.
ಅದರಲ್ಲೂ ರಾಹುಲ್ ಗಾಂಧಿಯವರ ಭಾರತಾಂಬೆಯ ಸಾವು ಉಲ್ಲೇಖವನ್ನು ತೆಗೆದುಕೊಂಡು, ಈ ಹಿಂದೆ ದೇಶದಲ್ಲಿ ಆಗಿದ್ದ ಘಟನಾವಳಿಗಳನ್ನು ನೆನಪಿಸಿಕೊಂಡರು. ಚೀನ ಯುದ್ಧ, ಶ್ರೀಲಂಕಾಗೆ ಕಚ್ಚೇತೀವು ದ್ವೀಪ ಬಿಟ್ಟುಕೊಟ್ಟದ್ದು, ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆಯೂ ಪ್ರಸ್ತಾವಿಸಿದರು. ಈ ಎಲ್ಲವೂ ಆಗಿದ್ದು ಯಾರ ಕಾಲದಲ್ಲಿ ಎಂದು ಪ್ರಶ್ನಿಸುತ್ತಲೇ ನೆಹರೂ ಮತ್ತು ಇಂದಿರಾ ಗಾಂಧಿಯವರ ಮೇಲೂ ಆರೋಪ ಮಾಡಿದರು. ತಮ್ಮ ಅಧಿಕಾರಾವಧಿಯಲ್ಲಿ ಭಾರತದ ಕೀರ್ತಿ ವಿದೇಶಗಳಲ್ಲೂ ಹೆಚ್ಚಿದ ಬಗ್ಗೆ ವಿವರಿಸುತ್ತಲೇ, 2024ರಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದೇ ಗೆಲ್ಲುತ್ತೆ ಎಂದರು. ಐಎನ್‌ಡಿಐಎಯಲ್ಲಿರುವ ಪಕ್ಷಗಳ ನಡುವಿನ ಸಂಬಂಧದ ಬಗ್ಗೆಯೂ ಟೀಕಿಸಿದರು.
ಒಟ್ಟಾರೆಯಾಗಿ ಪ್ರಧಾನಿ ನರೇಂದ್ರ ಮೋದಿಯವರು 2 ಗಂಟೆಗಳ ಕಾಲ ಲೋಕಸಭೆಯಲ್ಲಿ ನೀಡಿದ ಚರ್ಚೆ ಮೇಲಿನ ಉತ್ತರ, ಲೋಕಸಭೆ ಚುನಾವಣ ಪ್ರಚಾರಕ್ಕೆ ವೇದಿಕೆ ಸೃಷ್ಟಿಸಿದಂತಾಯಿತು. ಮೋದಿ ಅವಿಶ್ವಾಸ ಗೊತ್ತುವಳಿಯನ್ನು ಸಮರ್ಥವಾಗಿ ಬಳಸಿಕೊಂಡರು ಎಂಬ ವಿಶ್ಲೇಷಣೆ ಜೋರಾಗಿಯೇ ಸಾಗಿದೆ.
ಸದ್ಯದಲ್ಲಿ ಮಣಿಪುರ ಹಿಂಸಾಚಾರ ವಿಚಾರ ಲೋಕಸಭೆ ಚುನಾವಣೆ ಮೇಲೆ ಪ್ರಮುಖ ಪಾತ್ರ ಬೀರುವ ಸಾಧ್ಯತೆಗಳು ಕಡಿಮೆ. ಇದಕ್ಕೆ ಹೊರತಾಗಿಯೇ ವಿಪಕ್ಷಗಳು ಯೋಜನೆ ರೂಪಿಸಬೇಕಾದ ಅನಿವಾರ್ಯತೆ ಇದೆ. ಇದು ನೇರವಾಗಿ ತಮ್ಮ ಮತ್ತು ವಿಪಕ್ಷಗಳ ಸಮೂಹದ ನಡುವಿನ ಹಣಾಹಣಿಯಾಗಿರುವುದರಿಂದ ಮೋದಿಯವರು ತಮಗೆ ಸಿಗುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಮಾತುಗಳೂ ಇವೆ.
ಸದ್ಯದಲ್ಲೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಸೇರಿದಂತೆ ಐದು ರಾಜ್ಯಗಳ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಸೆಮಿಫೈನಲ್ ರೀತಿಯ ಚುನಾವಣೆಗಳಿವು. ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಗೆದ್ದಿರುವ ವಿಶ್ವಾಸವಿದೆ. ಈ ವಿಶ್ವಾಸ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕೆಲಸ ಮಾಡಬಹುದು. ಆದರೆ ಲೋಕಸಭೆ ಚುನಾವಣೆಯಲ್ಲಿ ಮೋದಿ ವರ್ಸಸ್ ಯಾರು ಎಂಬ ಪ್ರಶ್ನೆ ಎದುರಾದಾಗ ಅಲ್ಲಿ ಒಬ್ಬರನ್ನು ನಿಲ್ಲಿಸಲೇಬೇಕಾಗುತ್ತದೆ. ಈ ವಿಚಾರದಲ್ಲಿ ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಹೋಮ್‌ವರ್ಕ್ ನಡೆಸುತ್ತಿದ್ದಾರೆ ಎಂಬುದಕ್ಕೆ ಲೋಕಸಭೆಯಲ್ಲಿನ ಅವರ ಭಾಷಣವೇ ಸಾಕ್ಷಿ. ಹೀಗಾಗಿ ಮುಂದಿನ ದಿನಗಳಲ್ಲಿ ಎನ್‌ಡಿಎ ವರ್ಸಸ್ ಐಎನ್‌ಡಿಐಎ ಸಮರ ಬೇರೊಂದು ಮಟ್ಟಕ್ಕೆ ತಲುಪಲೂಬಹುದು.
ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.