Modi ಜತೆ ಸೇರಲು ಎಚ್‌ಡಿಕೆಗೆ ನಾನೇ ಹೇಳಿದ್ದೆ ! ; ಎಚ್.ಡಿ. ದೇವೇಗೌಡ
ಮುಂದೊಮ್ಮೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಆಗುತ್ತಾ?
Team Udayavani, Feb 15, 2024, 6:20 AM IST
ಬೆಂಗಳೂರು: ಯಾವುದೇ ಷರತ್ತುಗಳಿಲ್ಲದೆ ಸುಗಮವಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿಯಾಗಿದೆ. ಪ್ರಾದೇಶಿಕ ಪಕ್ಷವನ್ನು ಉಳಿಸಬೇಕೆಂಬ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲು ನಾನೇ ಕುಮಾರಸ್ವಾಮಿಗೆ ಹೇಳಿದೆ. ರಾಜ್ಯದ ಎಲ್ಲ ಕ್ಷೇತ್ರಗಳ ಪರಿಚಯ ಮೋದಿ ಹಾಗೂ ಅಮಿತ್ ಶಾ ಅವರಿಗೆ ಇದ್ದು, ಸೀಟು ಹಂಚಿಕೆ ಸಹ ಸುಗಮವಾಗಿಯೇ ನಡೆಯಲಿದೆ…
ಇದು ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ “ನೇರಾನೇರ’ ನುಡಿ. ಸೈದ್ಧಾಂತಿಕವಾಗಿ ವಿರುದ್ಧವಿರುವ ಪಕ್ಷದ ಜೊತೆಗೆ ಮೈತ್ರಿ ಯಾಕಾಯ್ತು, ಕಾಂಗ್ರೆಸ್ ಬಗ್ಗೆ ತಮ್ಮ ನಿಲುವೇನು, ರಾಜ್ಯ ಸರ್ಕಾರದ “ಕರ ಸಮರ’ದ ಬಗ್ಗೆ ಅಭಿಪ್ರಾಯವೇನು? ಎಂಬಿತ್ಯಾದಿ ವಿಷಯಗಳೂ ಸೇರಿದಂತೆ ಅನೇಕ ಪ್ರಚಲಿತ ವಿದ್ಯಮಾನಗಳ ಬಗ್ಗೆ “ಉದಯವಾಣಿ’ ವಿಶೇಷ ಸಂದರ್ಶನದಲ್ಲಿ ದೇವೇಗೌಡರು ತಮ್ಮ ಅಂತರಂಗ ಬಿಚ್ಚಿಟ್ಟಿದ್ದಾರೆ.
ಮೈತ್ರಿ ಆಗಿದ್ದು ಆಯಿತು. ಸಿದ್ಧಾಂತ ಹೇಗೆ?
ಸಮಸ್ಯೆಗಳು ಬಂದಾಗ ಅವುಗಳ ಬಗ್ಗೆ ಮಾತನಾಡಲು, ಪಕ್ಷದ ನಿಲುವು ವ್ಯಕ್ತಪಡಿಸುವ ಎಲ್ಲ ಅಧಿಕಾರ ಮತ್ತು ಹಕ್ಕು ನಮಗಿದೆ. ನಾನು ಈಗಾಗಲೇ ಹೇಳಿದ್ದೇನೆ. ಪಕ್ಷ ವಿಲೀನ ಮಾಡಲ್ಲ. ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡುವುದಿಲ್ಲ ಎಂದು ನೂರಕ್ಕೆ ನೂರು ಭರವಸೆ ಕೊಡುತ್ತೇವೆ. ಪಕ್ಷ ಬೆಳೆಸುತ್ತೇವೆ, ಅದರ ಜತೆಗೆ ಸಂಬಂಧವನ್ನು ಉಳಿಸಿಕೊಂಡು ಹೋಗುತ್ತೇವೆ.
ರಾಜಕೀಯ ಜೀವನದುದ್ದಕ್ಕೂ ಸೆಕ್ಯುಲರ್ ರಾಜಕಾರಣ ಮಾಡಿದ ದೇವೇಗೌಡರು ಈಗ ಇದ್ದಕ್ಕಿದ್ದ ಹಾಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು ಯಾಕೆ?
ನಾನು ನನ್ನ 60 ವರ್ಷದ ರಾಜಕೀಯದಲ್ಲಿ ಸೆಕ್ಯುಲರ್ ರಾಜಕಾರಣ ಮಾಡಿದೆ. ದುರಂತ ಏನೆಂದರೆ, ಕೇಂದ್ರದಲ್ಲಿ ನನ್ನ ಸರಕಾರ ತೆಗೆದರು. ಅದಕ್ಕೆ ಕಾರಣ ಯಾರು ಎನ್ನುವುದು ಈಗ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಹಾಗಾಗಿ ಅದರ ಬಗ್ಗೆ ಈಗ ಹೆಚ್ಚು ಮಾತನಾಡಲ್ಲ. ಪಾರ್ಲಿಮೆಂಟ್‌ನಲ್ಲಿ ವಿಶ್ವಾಸಮತದ ಪ್ರಶ್ನೆ ಬಂದಾಗ ನಿಮ್ಮ ಸರಕಾರ ಉಳಿಸುತ್ತೇವೆ ಎಂದು ಸ್ವತಃ ವಾಜಪೇಯಿ ಅವರು ಹೇಳಿದ್ದರು. ಅನೇಕ ಎನ್‌ಡಿಎ ಮುಖಂಡರು ನನ್ನ ಮನೆಗೆ ಬಂದು ಮನವಿ ಮಾಡಿಕೊಂಡರು, ಆದರೆ ನಿಮ್ಮ ಜತೆ ಬರಲ್ಲ, ನಿಮ್ಮ ಬೆಂಬಲ ಬೇಕಿಲ್ಲ ಎಂದು ಖಂಡತುಂಡವಾಗಿ ನಾನು ಹೇಳಿದ್ದೆ. ಈ ಹಿನ್ನೆಲೆಯಿಂದ ಬಂದ ರಾಜಕಾರಣಿ ನಾನು.
ಹಾಗಿದ್ದರೆ ಬಿಜೆಪಿ ಜತೆಗಿನ ಈಗಿನ ಮೈತ್ರಿ ಯಾರ ನಿರ್ಧಾರ?
ಕರ್ನಾಟಕದಲ್ಲಿ ಕುಮಾರಸ್ವಾಮಿ ನಮ್ಮ ಪಕ್ಷಕ್ಕೆ ಸಾಕಷ್ಟು ದುಡಿದಿದ್ದರು. ಹಲವಾರು ಅಡಚಣೆ ಎದುರಿಸಿ 48 ಸೀಟು ಗೆಲ್ಲಿಸಿದ್ದರು. ಮತ್ತೂಂದೆಡೆ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ 50 ಸಾವಿರ ರೂ. ಸಾಲ ಮನ್ನಾ ಮತ್ತಿತರ ರಿಯಾಯಿತಿಗಳೊಂದಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್‌ಗೆ 78 ಸೀಟು ಸಿಕ್ಕಿತು. ಗುಲಾಂ ನಬಿ ಆಜಾದ್, ಅಶೋಕ್ ಗೆಹೊÉàಟ್ ನನ್ನನ್ನು ಭೇಟಿ ಮಾಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವ ಹೈಕಮಾಂಡ್ ಪ್ರಸ್ತಾವವನ್ನು ನನ್ನ ಮುಂದಿಟ್ಟರು. ಮಲ್ಲಿಕಾರ್ಜನ ಖರ್ಗೆ ಆಥವಾ ಪರಮೇಶ್ವರ್ ಅವರನ್ನು ಸಿಎಂ ಮಾಡಿ ಎಂದೆ, ಅದನ್ನು ಒಪ್ಪದಿದ್ದಾಗ ನಾನೂ ಸಹ ಹೈಕಮಾಂಡ್ ಪ್ರಸ್ತಾವ ನಿರಾಕರಿಸಿದೆ. ಆದರೆ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನು ಒಪ್ಪಿಸಿದರು. ಬಳಿಕ ಅವರ ಸರಕಾರ ಉರುಳಿಸಿದರು, ಯಾರು ಬೀಳಿಸಿದರು, 18 ಶಾಸಕರನ್ನು ಮುಂಬಯಿಗೆ ಕಳಿಸಿದ್ದು ಯಾರು ಅಂತ ಎಲ್ಲರಿಗೂ ಗೊತ್ತು. ಹಾಗಾಗಿ, ಕುಮಾರಸ್ವಾಮಿ ಅವರನ್ನು ಮೋದಿ ಜತೆ ಹೋಗಲು ನಾನೇ ಹೇಳಿದೆ, ಇದು ಸತ್ಯ.
ಅಂದರೆ, ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಂದೆಯೂ ನಿಮ್ಮದೇ ಪೌರೋಹಿತ್ಯವಾ?
ಮೈತ್ರಿ ವಿಚಾರವಾಗಿ ಮೊದಲು ದಿಲ್ಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ರಾಜಕಾರಣದಲ್ಲಿ 60 ವರ್ಷಗಳ ಸುದೀರ್ಘ ಅನುಭವ ಆದ ಮೇಲೆ ಮೋದಿ ನಾಯಕತ್ವ ನಂಬಿ ಬಂದಿದ್ದೇನೆ. ಇನ್ನು ಮುಂದೆ ಕುಮಾರಸ್ವಾಮಿ ಜತೆ ಮಾತುಕತೆ ನಡೆಸಿಕೊಳ್ಳಿ, ಅವರಿಗೆ ರಾಜ್ಯದ ಪ್ರತೀ ಲೋಕಸಭಾ ಕ್ಷೇತ್ರದ ಬಗ್ಗೆ ಅಂಕಿ-ಅಂಶ ಸಮೇತ ಮಾಹಿತಿ ಇದೆ. ಮುಂದೆ ನೀವುಂಟು; ಅವರುಂಟು ಅಂತ ಹೇಳಿ ಬಂದೆ.
ಮೈತ್ರಿಗೆ ಸೂತ್ರವೇನು? ಷರತ್ತುಗಳೇನು?
ಮೈತ್ರಿಗೆ ಷರತ್ತುಗಳೇನೂ ಇಲ್ಲ, 40 ವರ್ಷಗಳಿಂದ ನಾನು ಜೆಡಿಎಸ್ ಪಕ್ಷವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದೇನೆ. ಆದರೆ ಪಕ್ಷವನ್ನು ಸಂಪೂರ್ಣ ನಾಶ ಮಾಡಲು ಕಾಂಗ್ರೆಸ್‌ನವರು ಪ್ರಯತ್ನಪಟ್ಟರು. ಈಗಲೂ ಪಕ್ಷ ಉಳಿಸಬೇಕು. ರಾಜ್ಯದ ಜನರ ಹಿತದೃಷ್ಟಿಯಿಂದ ಒಂದು ಪ್ರಾದೇಶಿಕ ಪಕ್ಷ ಇರಬೇಕು ಅನ್ನುವುದು ನನ್ನ ಹಂಬಲ. ಅದಕ್ಕಾಗಿಯೇ ಮೋದಿಯವರ ಜತೆ ಹೋಗಲು ಕುಮಾರಸ್ವಾಮಿಗೆ ಹೇಳಿದೆ.
ಮುಂದೊಮ್ಮೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಆಗುತ್ತಾ?
ಪಕ್ಷ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ, ಪಕ್ಷ ಸಂಘಟನೆಯೊಂದೇ ಗುರಿ. ಇದೇ ಸಂದರ್ಭದಲ್ಲಿ ಮೋದಿ, ಶಾ, ನಡ್ಡಾ ಅವರ ನಾಯಕತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸುವುದು. ಮೈತ್ರಿ ಎಂದೂ ಮುರಿಯಲ್ಲ, ವಿಲೀನ ಆಗಲ್ಲ, ನಮ್ಮ ಪಕ್ಷ ಉಳಿಸಿಕೊಂಡು, ಬೆಳಿಸಿಕೊಂಡು ಹೋಗ್ತೀವೆ. ಆದರೆ ಮೈತ್ರಿಗೆ ಅಪಾಯ ಆಗದ ರೀತಿ ನೋಡಿಕೊಂಡು ಹೋಗ್ತೀವೆ.
ಹಾಗಾದರೆ ಮೈತ್ರಿಯನ್ನು ರಾಜ್ಯ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರಾ?
ತೊಂದರೆ ಏನೂ ಇಲ್ಲ; ಬಿ.ವೈ. ವಿಜಯೇಂದ್ರ ಖುದ್ದು ನನ್ನ ಮನೆಗೆ ಬಂದಿದ್ದರು. ಯಡಿಯೂರಪ್ಪ ಅವರ ಜತೆಗೂ ನಾನು ಮಾತನಾಡಿದೆ. ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಅಶ್ವತ್ಥನಾರಾಯಣ, ಡಿ. ವಿ. ಸದಾನಂದ ಗೌಡ, ಸೋಮಣ್ಣ ಎಲ್ಲರೂ ಮಾತನಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಜತೆ ಸಹಭಾವನೆ ಇದೆ. ಬಿಜೆಪಿಯಲ್ಲಿ ನನಗ್ಯಾರೂ ಶತ್ರುಗಳಿಲ್ಲ. ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂಬ ತೀರ್ಮಾನ ಮಾಡಿದ್ದೇವೆ. ಇದರಲ್ಲಿ ಯಾವುದೇ ತರಹದ ಸಂಕುಚಿತ ಮನೋಭಾವನೆ ಇಲ್ಲ.
ಮಂಡ್ಯ, ಹಾಸನ ಕ್ಷೇತ್ರಗಳ ಬಗ್ಗೆ ಬಿಜೆಪಿ ಪಟ್ಟು ಹಿಡಿದರೆ?
ಏನೂ ತೊಂದರೆ ಇಲ್ಲ. ಅದೆಲ್ಲ ಅವರಿಗೆ (ಮೋದಿ, ಅಮಿತ್ ಶಾ) ಗೊತ್ತಿದೆ. ನೋಡ್ತಾ ಇರಿ, ಎಲ್ಲವೂ ಸುಲಲಿತವಾಗಿ ಆಗುತ್ತದೆ. ಮೋದಿ ಮತ್ತು ಅಮಿತ್ ಶಾ ಇಬ್ಬರು ತಮ್ಮದೇ ಆದ ಮೂಲಗಳಿಂದ ಎಲ್ಲ ಕ್ಷೇತ್ರಗಳ ಮಾಹಿತಿಗಳನ್ನು ತರಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸರಕಾರದ ಬಗ್ಗೆ ಏನು ಹೇಳ್ತೀರಾ?
ಒಂದೇ ಮಾತಿನಲ್ಲಿ ಹೇಳಬೇಕಾದರೆ, ಅಭಿವೃದ್ದಿ ಕೆಲಸಗಳಿಗೆ ಹಣ ನೀಡುವುದರಲ್ಲಿ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ, ಭ್ರಷ್ಟಾಚಾರ ಎಲ್ಲೆ ಮೀರಿದೆ; ಇಷ್ಟೊಂದು ಆಡಳಿತ ಶಿಥಿಲತೆ ಹಿಂದೆಂದೂ ಕಂಡಿರಲಿಲ್ಲ. ಸರಕಾರ ಐದು ಗ್ಯಾರಂಟಿಗಳ ಬಗ್ಗೆ ಹೇಳುತ್ತದೆ. ಆದರೆ ನೀರಾವರಿ, ಇತರ ಅಭಿವೃದ್ಧಿ ಕಾರ್ಯಗಳನ್ನೂ ನೋಡಬೇಕಾಗುತ್ತದೆ. ಕಳೆದ 9 ತಿಂಗಳಲ್ಲಿ ಯೋಚನೆ ಮಾಡಿದರೆ ಅಭಿವೃದ್ದಿ ದಿಕ್ಕಿನತ್ತ ಸರಕಾರ ಸಾಗುತ್ತಿಲ್ಲ. ಅಭಿವೃದ್ಧಿಗೆ ಹಣ ನೀಡುವುದರಲ್ಲಿ ಸಿದ್ದರಾಮಯ್ಯ ಸಂಪೂರ್ಣ ಹಿಂದೆ ಬಿದ್ದಿದ್ದಾರೆ. ವಿಧಿ ಇಲ್ಲದೆ ಹೇಳಬೇಕಾಗಿದೆ. ಅದಕ್ಕೆ ಅವರೇ ಕಾರಣ ಅಂತ ಹೇಳಲ್ಲ. ಭ್ರಷ್ಟಾಚಾರ ಎಲ್ಲೆ ಮೀರಿ ಹೋಗಿದೆ. ಈ ಪರಿಯಲ್ಲಿ ಸಿದ್ದರಾಮಯ್ಯ ಆಡಳಿತದ ಶಿಥಿಲತೆ ನಾನು ಹಿಂದೆಂದೂ ನೋಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನರೇ ಇದಕ್ಕೆ ಕಡಿವಾಣ ಹಾಕುತ್ತಾರೆ.
ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಕರಸಮರದ ಬಗ್ಗೆ ಏನಂತೀರಾ?
ಅದೆಲ್ಲ ಉಪಯೋಗ ಇಲ್ಲ. ಒಂದು ರಾಜ್ಯವೇ ಪ್ರಧಾನಿ ವಿರುದ್ಧ ಹೋರಾಟ ಮಾಡುವುದು ಎಲ್ಲಾದರೂ ಉಂಟೆ? ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ವ್ಯಕ್ತಿ ಅಲ್ಲ; ಪ್ರಧಾನಿ ಹುದ್ದೆಯ ಘನತೆ-ಗೌರವ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು. ಕೇಂದ್ರ ಸರಕಾರದ ವೈಟ್ ಪೇಪರ್ ವಿರುದ್ಧ ಕಾಂಗ್ರೆಸ್‌ನವರು ಬ್ಲಾಕ್ ಪೇಪರ್ ಅಂತ ತಂದ್ರು. ಆದರೆ ಸಂಸತ್ತಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ವೇತಪತ್ರ ಮಂಡಿಸಿ, ಅದರ ವಿವರಣೆ ನೀಡಿದ್ದು ನಾನು ಕೇಳಿದೆ. ರಾಜ್ಯಗಳಿಗೆ ಅನುದಾನ ನೀಡಿದ್ದು ಸತ್ಯ ಅಲ್ಲ ಎಂದಾದರೆ ದೇಶದ ಕ್ಷಮೆ ಕೇಳುತ್ತೇನೆ ಎಂದು ಅವರು ಸವಾಲು ಹಾಕಿದರು. 1991ರಲ್ಲಿ ನಾನು ಸಂಸತ್ ಪ್ರವೇಶಿಸಿದೆ. ಅಲ್ಲಿಂದ ಇಲ್ಲಿವರೆಗೆ ಇಂತಹ ದಿಟ್ಟ, ಚಾಣಾಕ್ಷ ಮಹಿಳೆಯನ್ನು ನಾನು ಕಂಡಿಲ್ಲ. ಮಹಾತ್ಮಾ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹಕ್ಕಾಗಿ ದಂಡಿ ಯಾತ್ರೆ ಕೈಗೊಂಡ ರೀತಿ ಕಾಂಗ್ರೆಸ್‌ನವರು “ನನ್ನ ತೆರಿಗೆ ನನ್ನ ಹಕ್ಕು’ ಹೆಸರಲ್ಲಿ ದಿಲ್ಲಿ ಚಲೋ ಎಂದು ಹೊರಟರು. ಓಹೋಹೋ ಏನ್ ಪ್ರಚಾರ, ಗಾಂಧೀಜಿ ಫೋಟೋ ಹಾಕಿ ದೊಡ್ಡದಾಗಿ ಜಾಹೀರಾತು ಬೇರೆ… ಎಷ್ಟು ಜನ ರಿಯಲ್ ಗಾಂಧಿಗಳಿದ್ದಾರೆ? ಎಷ್ಟು ಜನ ರಿಯಲ್ ಕಾಂಗ್ರೆಸ್‌ನವರು ಇದ್ದಾರೆ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಯಾರಿದ್ದಾರೆ? ಎಂದು ತಾಕತ್ತಿ¤ದ್ದರೆ ಕಾಂಗ್ರೆಸ್‌ನವರು ಹೇಳಲಿ, ನಾನು ಇನ್ನೂ ಇದ್ದೇನೆ, ಬೇಕಿದ್ದರೆ ನನ್ನ ವಿರುದ್ಧ ಟೀಕೆ ಮಾಡಲಿ.
ಯುಪಿಎ ಈಗ ಐಎನ್‌ಡಿಐಎ ಆಗಿದೆ; ಅದರ ಭವಿಷ್ಯ ಏನು?
ದೇಶದಲ್ಲಿ ಐಎನ್‌ಡಿಐಎ (ಇಂಡಿಯಾ) ಒಕ್ಕೂಟ ಎಲ್ಲಿದೆ ತೋರಿಸಿ, ದಿನಕ್ಕೊಬ್ಬರು ಕೈ ಬಿಟ್ಟು ಹೋಗುತ್ತಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡುವುದೇ ವ್ಯರ್ಥ. ನಾವು ಕರ್ನಾಟಕದಲ್ಲಿ ಒಂದಿಷ್ಟು ಗಟ್ಟಿಯಾಗಿ ಇದ್ದೇವೆ ಎಂದು ಕಾಂಗ್ರೆಸ್‌ನವರಿಗೆ ಅಹಂಕಾರ ಇದೆ. ಆದರೆ ಆ ಅಹಂಕಾರ, ಆ ಸೊಕ್ಕು ಲೋಕಸಭಾ ಚುನಾವಣೆಯಲ್ಲಿ ಜನ ಮುರೀತಾರೆ. ಕಾದು ನೋಡಿ ಇನ್ನೇನೇನು ಆಗುತ್ತದೆಯೆಂದು. ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಮೊದಲು ಏನೇನು ನಡೆಯುತ್ತದೆ ಎಂದು ನೋಡ್ತಾ ಇರಿ…
ಎಷ್ಟು ಸೀಟುಗಳ ಬೇಡಿಕೆ ಇಟ್ಟಿದ್ದೀರಿ?
ಇಷ್ಟೇ ಸೀಟು ಬೇಕು, ಇದೇ ಕ್ಷೇತ್ರಗಳು ಬೇಕು ಬೇಡಿಕೆ ಇಟ್ಟಿಲ್ಲ. ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನುವುದೆಲ್ಲವೂ ಮಾಧ್ಯಮಗಳ ಸೃಷ್ಟಿ. ಸೀಟುಗಳ ಹಂಚಿಕೆಗೆ ಏನೂ ತೊಂದರೆ ಇಲ್ಲ. ಸೀಟುಗಳ ಬಗ್ಗೆ ತೀರ್ಮಾನ ಮಾಡುವ ರಾಜಕೀಯ ಪ್ರಬುದ್ಧತೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗಿದೆ. ಎರಡೂ ಪಕ್ಷಗಳು ಸೇರಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲುತ್ತೇವೆ.
-ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.