ಐಎಎಸ್ ಡೆಪ್ಯೂಟೇಶನ್: ಕೇಂದ್ರ Vs ರಾಜ್ಯ
Team Udayavani, Jan 22, 2022, 6:35 AM IST
ಐಎಎಸ್ ಅಧಿಕಾರಿಗಳ ಡೆಪ್ಯೂಟೇಶನ್ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಮತ್ತೊಮ್ಮೆ ವಿವಾದವೇರ್ಪಟ್ಟಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ದಿಲ್ಲಿಗೆ ಕರೆಸಿಕೊಳ್ಳುವಲ್ಲಿ ಕೇಂದ್ರ ಸರಕಾರಕ್ಕೇ ಹೆಚ್ಚಿನ ಅಧಿಕಾರ ಸಿಗುವ ಸಂಬಂಧ ಇರುವ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಇದು ರಾಜ್ಯ ಸರಕಾರಗಳ ವಿರೋಧಕ್ಕೆ ಕಾರಣವಾಗಿದೆ.
ಸದ್ಯ ಇರುವ ನಿಯಮವೇನು?
ಐಎಎಸ್(ಕೇಡರ್)ನಿಯಮ- 1954ರ ನಿಯಮ 6(1)ರಂತೆ, ಸಂಬಂಧಿತ ರಾಜ್ಯ ಸರಕಾರದ ಒಪ್ಪಿಗೆಯ ಮೇರೆಗೆ ಕೇಂದ್ರ ಸರಕಾರ ಐಎಎಸ್ ಅಧಿಕಾರಿಗಳನ್ನು, ಕೇಂದ್ರ ಸೇವೆಗೆ ಅಥವಾ ಇತರ ರಾಜ್ಯಗಳು, ಅಥವಾ ಒಂದು ಕಂಪೆನಿ ಅಥವಾ ಸಂಸ್ಥೆ ಅಥವಾ ಸಂಘಟನೆಯ ಸೇವೆಗೆ ನಿಯೋಜಿಸಬಹುದು. ಒಂದು ವೇಳೆ ರಾಜ್ಯಗಳು ಕಳುಹಿಸಲು ನಿರಾಕರಣೆ ಮಾಡಿದಲ್ಲಿ, ಆಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಚರ್ಚಿಸಿ ಇದನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಅಲ್ಲದೆ ಈಗ ಪ್ರತೀ ವರ್ಷವೂ ಕೇಂದ್ರ ಸರಕಾರ, ಕೇಂದ್ರ ಸೇವೆಗೆ ಬರಬಹುದಾದಂಥ ಅಧಿಕಾರಿಗಳ ಪಟ್ಟಿ ಮಾಡಿ ರಾಜ್ಯಗಳಿಗೆ ಕಳುಹಿಸುತ್ತದೆ. ಕೆಲವೊಮ್ಮೆ ರಾಜ್ಯಗಳು ಕಳುಹಿಸಲು ಒಪ್ಪುವುದಿಲ್ಲ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷವೇರ್ಪಡುತ್ತದೆ.
ಸದ್ಯ ಕೇಂದ್ರ ಸೇವೆಯಲ್ಲಿ ಎಷ್ಟು ಮಂದಿ ಅಧಿಕಾರಿಗಳಿದ್ದಾರೆ?
2021ರ ಜನವರಿ 1ರ ಪ್ರಕಾರ ದೇಶದಲ್ಲಿ ಒಟ್ಟು 5,200 ಐಎಎಸ್ ಅಧಿಕಾರಿಗಳಿದ್ದು, ಇವರಲ್ಲಿ 458 ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದಾರೆ.
ತಿದ್ದುಪಡಿ ನಿಯಮದಲ್ಲೇನಿದೆ?
ನಿಯಮ 6(1)ರಲ್ಲಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರಕಾರ, ರಾಜ್ಯಗಳಿಗೆ ಡಿ.20ರಂದು ಪತ್ರ ಬರೆದಿದೆ. ರಾಜ್ಯಗಳ ಕೇಡರ್‌ನಲ್ಲಿರುವ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳುಹಿಸುತ್ತಿಲ್ಲ. ಇದರಿಂದ ಕೇಂದ್ರ ಸೇವೆಯಲ್ಲಿ ಅಧಿಕಾರಿಗಳ ಕೊರತೆ ಕಂಡು ಬಂದಿದೆ. ಹೀಗಾಗಿ, ರಾಜ್ಯಗಳು ಅರ್ಹ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಸಜ್ಜಾಗುವಂತೆ ನೋಡಿಕೊಳ್ಳಬೇಕು. ಎಷ್ಟು ಮಂದಿ ಕೇಂದ್ರ ಸೇವೆಗೆ ಬರಬೇಕು ಎಂಬ ಬಗ್ಗೆ ರಾಜ್ಯ ಸರಕಾರಗಳ ಜತೆ ಚರ್ಚಿಸಿ ಕೇಂದ್ರ ಸರಕಾರವೇ ನಿರ್ಧರಿಸುತ್ತದೆ. ಹಾಗೆಯೇ, ಒಂದು ವೇಳೆ ರಾಜ್ಯಗಳ ಒಪ್ಪಿಗೆ ಇಲ್ಲದೇ ಹೋದರೆ, “ನಿರ್ದಿಷ್ಟ ಸಮಯದಲ್ಲಿ’ ಮಾಹಿತಿ ನೀಡಬೇಕು ಎಂಬ ಹೊಸ ಪದವನ್ನು ಸೇರಿಸಲಾಗಿದೆ.
ರಾಜ್ಯಗಳ ವಿರೋಧವೇಕೆ?
ಕೇಂದ್ರ ಸರಕಾರ ಹೊಸ ತಿದ್ದುಪಡಿಯಿಂದಾಗಿ ರಾಜ್ಯಗಳ ಅಧಿಕಾರಕ್ಕೆ ಕೊಕ್ಕೆ ಇಟ್ಟಂತಾಗುತ್ತದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಒಡಿಶಾ, ಎನ್‌ಡಿಎ ರಾಜ್ಯವಾದ ಬಿಹಾರ ಮತ್ತು ಬಿಜೆಪಿ ರಾಜ್ಯ ಮಧ್ಯ ಪ್ರದೇಶ ಕೂಡ ಹೊಸ ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಿದೆ.
ಹಿಂದಿನ ವಿವಾದಗಳು
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಲ ಮುಖ್ಯ ಕಾರ್ಯದರ್ಶಿಯವರ ಕೊನೆಯ ಕೆಲಸದ ದಿನದಂದು, ಕೇಂದ್ರ ಸರಕಾರ ಕೇಂದ್ರ ಸೇವೆಗೆ ಬರುವಂತೆ ಸೂಚಿಸಿತ್ತು. ಆದರೆ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಲಿಲ್ಲ. ಅಲ್ಲದೆ ತಮಿಳುನಾಡಿನಲ್ಲಿ ಜಯಲಲಿತಾ ಸಿಎಂ ಆಗಿದ್ದ ವೇಳೆ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳುಹಿಸಲು ಒಪ್ಪಿಗೆ ನೀಡಿರಲಿಲ್ಲ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.