ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೇಕೆ ಐಎಎಸ್ ಯಶಸ್ಸು?
Team Udayavani, Jun 1, 2022, 6:05 AM IST
ಮೊದಲೆಲ್ಲ ಒಂದು ಮಾತಿತ್ತು. ಯುಪಿಎಸ್‌ಸಿಯಲ್ಲಿ ಅನುಕೂಲ ಆಗುತ್ತೆ ಅಂತಾನೇ ಡಿಗ್ರಿಯಲ್ಲಿ ಮಾನವಿಕ ವಿಜ್ಞಾನ ತೆಗೆದುಕೊಂಡು ಸಿದ್ಧತೆ ನಡೆಸುತ್ತಿದ್ದರು. ಆದರೆ ಅನಂತರದ ದಿನಗಳಲ್ಲಿ ಈ ಟ್ರೆಂಡ್ ಬದಲಾಗಿ, ಈಗ ಬಿಇ, ಎಂಬಿಬಿಎಸ್ ಮಾಡಿದ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ. ಇದರ ಹಿಂದಿನ ಗುಟ್ಟೇನು? ಇವರಿಗೆಯಶಸ್ಸು ಸಿಗುತ್ತಿರುವುದು ಹೇಗೆ? ಇದರ ಮೇಲೊಂದು ನೋಟ ಇಲ್ಲಿದೆ…
ಯುಪಿಎಸ್‌ಸಿ ಪರೀಕ್ಷೆ ಅಂದರೇನು? ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಪ್ರತೀ ವರ್ಷವೂ ದೇಶಾದ್ಯಂತ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ. ಈ ಮೂಲಕ ಭಾರತ ಸರಕಾರದ ಉನ್ನತ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಗಾಗಿ ಇದನ್ನು ನಡೆಸಲಾಗುತ್ತದೆ. ಅಂದರೆ ಭಾರತೀಯ ನಾಗರಿಕ ಸೇವೆ(ಐಎಎಸ್), ಭಾರತೀಯ ವಿದೇಶಾಂಗ ಸೇವೆ(ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ(ಐಪಿಎಸ್)ಗೆ ಈ ಮೂಲಕವೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪರೀಕ್ಷೆ ನಡೆಯುವುದು ಹೇಗೆ? ಇದು ಮೂರು ಹಂತಗಳಲ್ಲಿ ನಡೆಯುತ್ತದೆ. ಅಂದರೆ ಮೊದಲ ಹಂತ ಪ್ರಿಲಿಮಿನರಿ. ಇದರಲ್ಲಿ ಎರಡು ಆಬjಕ್ಟೀವ್ ಪತ್ರಿಕೆಗಳು ಇರುತ್ತವೆ. ಪೇಪರ್ 1ರಲ್ಲಿ ಜನರಲ್ ಸ್ಟಡೀಸ್, ಪೇಪರ್ 2 ಕೂಡ ಜನರಲ್ ಸ್ಟಡಿ ಎಂತಿದ್ದರೂ ಈ ಪೇಪರ್ ಅನ್ನು ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ ಟೆಸ್ಟ್(ಸಿಎಸ್ ಎಟಿ) ಎಂದೆ ಕರೆಯಲಾಗುತ್ತದೆ.
ಎರಡನೇ ಹಂತ ಮೇನ್. ಇದರಲ್ಲಿ ಪ್ರಬಂಧ ರೂಪದಲ್ಲಿ ಒಟ್ಟಾರೆಯಾಗಿ 9 ಪೇಪರ್‌ಗಳಿರುತ್ತವೆ. ಎರಡು ಪೇಪರ್‌ಗಳ ಅಂಕಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು, ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನವೇ ಮೂರನೇ ಹಂತವಾಗಿದ್ದು, ಇದರಲ್ಲಿ ಉಳಿದ ಏಳು ಪೇಪರ್‌ಗಳ ಅಂಕ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಮೂರರಲ್ಲೂ ತೇರ್ಗಡೆಯಾಗುವ ಅಭ್ಯರ್ಥಿ ವರ್ಷದಲ್ಲಿ ಒಟ್ಟು 36 ಗಂಟೆಗಳ ಕಾಲ ಪರೀಕ್ಷೆ ಬರೆಯಬೇಕಾಗುತ್ತದೆ.
ಪ್ರಕ್ರಿಯೆ ಹೇಗೆ?
ಪ್ರಿಲಿಮಿನರಿ ಪರೀಕ್ಷೆ – ಜೂನ್‌ನಲ್ಲಿ ಈ ಪರೀಕ್ಷೆ ನಡೆಯುತ್ತದೆ. ಆಗಸ್ಟ್‌ನಲ್ಲಿ ಫಲಿತಾಂಶ
ಮೇನ್ಸ್ – ಪ್ರಿಲಿಮಿನರಿ ಪಾಸಾದವರಿಗೆ ಪ್ರತೀ ವರ್ಷದ
ಅಕ್ಟೋಬರ್‌ನಲ್ಲಿ ಈ ಪರೀಕ್ಷೆ
ಪರ್ಸನಾಲಿಟಿ ಟೆಸ್ಟ್(ಸಂದರ್ಶನ) –
ಮಾರ್ಚ್‌ನಲ್ಲಿ ನಡೆಯುತ್ತದೆ. ಮೇಯಲ್ಲಿ ಫಲಿತಾಂಶ
ಈ ಮೂರರಲ್ಲಿ ತೇರ್ಗಡೆಯಾದವರಿಗೆ ವೈದ್ಯಕೀಯ ಪರೀಕ್ಷೆ ಸೇರಿದಂತೆ ಉಳಿದೆಲ್ಲ ಪ್ರಕ್ರಿಯೆ ಮುಗಿಸಲಾಗುತ್ತದೆ. ಸೆಪ್ಟಂಬರ್‌ನಿಂದ ಇವರಿಗೆ ತರಬೇತಿ ಕಾರ್ಯಕ್ರಮ ಆರಂಭವಾಗುತ್ತದೆ.
ಶೈಕ್ಷಣಿಕ ಅರ್ಹತೆ: ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಲು ದೇಶದ ಯಾವುದಾದರೊಂದು ಅಂದರೆ ಕೇಂದ್ರ, ರಾಜ್ಯ ಅಥವಾ ಸ್ವಾಯತ್ತ ವಿವಿಯಿಂದ ಪದವಿ ಪಡೆದಿರಬೇಕು. ದೂರಶಿಕ್ಷಣದ ಅಡಿಯಲ್ಲಿ ಪದವಿ ಪಡೆದವರೂ ಪರೀಕ್ಷೆ ತೆಗೆದುಕೊಳ್ಳಬಹುದು.
ತಾಂತ್ರಿಕ ಶಿಕ್ಷಣದವರೇ ಏಕೆ ಹೆಚ್ಚು ಆಯ್ಕೆ?: ಇದಕ್ಕೆ ವಿಭಿನ್ನ ಅಭಿಪ್ರಾಯಗಳೂ ಇವೆ. ಸಾಮಾನ್ಯ ಅಭಿಪ್ರಾಯದ ಪ್ರಕಾರ, ಎಂಜಿನಿಯರ್ ವ್ಯಾಸಂಗ ಮಾಡಿದವರಷ್ಟೇ ಹೆಚ್ಚಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ. ಉಳಿದವರೂ ಪಾಸಾಗುತ್ತಾರೆ. ಆದರೆ ಪ್ರತೀ ವರ್ಷದ ಟಾಪರ್ಸ್ ಪಟ್ಟಿಯಲ್ಲಿ ಮಾತ್ರ ಎಂಜಿನಿಯರಿಂಗ್ ಓದಿದವರೇ ಹೆಚ್ಚಿರುತ್ತಾರೆ. ಅಂದರೆ 2021ರ ಫಲಿತಾಂಶದ ಪ್ರಕಾರ, 10 ಟಾಪರ್ಸ್‌ಗಳಲ್ಲಿ 4 ಮಂದಿ ಐಐಟಿ ಪಾಸಾದವರಿದ್ದಾರೆ. ಟಾಪ್ 1 ಶುಭಂ ಕುಮಾರ್ ಅವರು ಮತ್ತು ಟಾಪ್ 8 ಜೀವನಿ ಕಾರ್ತಿಕ್ ನಾಗೀಭಾಯಿ ಐಐಟಿ ಬಾಂಬೆಯಲ್ಲಿ ವ್ಯಾಸಂಗ ಮಾಡಿದವರಾಗಿದ್ದಾರೆ.
ಇನ್ನು ಟಾಪ್ 7 ಪ್ರವೀಣ್ ಕುಮಾರ್ ಐಐಟಿ ಕಾನ್ಪುರದಲ್ಲಿ ಓದಿದ್ದರೆ, ಟಾಪ್ 3 ಅಂಕಿತಾ ಜೈನ್ ದಿಲ್ಲಿ ಟೆಕ್ನಿಕಲ್ ಯೂನಿವರ್ಸಿಟಿಯ ಹಳೇ ವಿದ್ಯಾರ್ಥಿಯಾಗಿದ್ದಾರೆ. ಇನ್ನು ಟಾಪ್ 2 ಜಾಗೃತಿ ಆವಸ್ಥಿ ಮೌಲಾನಾ ಆಜಾದ್ ತಾಂತ್ರಿಕ ವಿವಿಯ ವಿದ್ಯಾರ್ಥಿ. ಇದರ ಜತೆಗೆ ಕಳೆದ ವರ್ಷ ವಾರಾಣಸಿಯ ಐಐಟಿಯ 17 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಟಾಪ್ 25ರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು
ಎಂಜಿನಿಯರಿಂಗ್ ಓದಿದವರಿಗೆ ಸುಲಭವೇ?: ಈ ಹಿಂದೆ ಪರೀಕ್ಷೆ ಬರೆದು ಪಾಸಾಗಿರುವ ಎಂಜಿನಿಯರಿಂಗ್ ಮೂಲದ ಅಭ್ಯರ್ಥಿಗಳ ಪ್ರಕಾರ ಹೌದು. ಇದಕ್ಕೆ ಕಾರಣವೂ ಇದೆ. ಕಲೆ ಸೇರಿದಂತೆ ಇತರ ಮಾನವಿಕ ವಿಜ್ಞಾನ ಓದಿದವರಿಗೆ ಆಪ್ಟಿಟ್ಯೂಡ್ ಟೆಸ್ಟ್ ಕೊಂಚ ಕಷ್ಟಕರವಾಗುತ್ತದೆ. ಆದರೆ ತಾಂತ್ರಿಕ ಮತ್ತು ವೈದ್ಯಕೀಯ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಈ ಆಪ್ಟಿಟ್ಯೂಡ್ ಟೆಸ್ಟ್ ಸುಲಭವಾಗುತ್ತದೆ.
ಅಂದರೆ 2011ರಿಂದ ಪ್ರಿಲಿಮಿನರಿಯ ಎರಡನೇ ಪೇಪರ್ ಆಗಿ ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ ಟೆಸ್ಟ್ ಅನ್ನು ಪರಿಚಯಿಸಲಾಗಿದೆ. ಇದನ್ನು ತಾಂತ್ರಿಕ ಮತ್ತು ವೈದ್ಯಕೀಯ ವ್ಯಾಸಂಗ ಮಾಡಿದವರು ಸಿಇಟಿ ಮತ್ತು ನೀಟ್ ಬರೆಯುವಾಗಲೇ ಹೇಗೆ ನಿವಾರಿಸುವುದು ಎಂಬುದನ್ನು ಕಲಿತಿರುತ್ತಾರೆ. ಸಿಎಸ್‌ಎಟಿ ಪೇಪರ್‌ನಲ್ಲಿ ಗಣಿತ ಸಾಮರ್ಥ್ಯ, ವಿಶ್ಲೇಷಣ ಸಾಮರ್ಥ್ಯ, ರೀಸನಿಂಗ್, ಇಂಗ್ಲಿಷ್ ಭಾಷೆಗಳು ಇರುತ್ತವೆ. ಇದು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸುಲಭ ಎಂದೇ ಹೇಳಲಾಗುತ್ತಿದೆ.
ವೈದ್ಯ, ಎಂಜಿನಿಯರ್‌ಗಿಂತ ನಾಗರಿಕ ಸೇವೆಯಲ್ಲಿ ಅವಕಾಶ ಹೆಚ್ಚು; ವೆಂಕಟರಾಮ್: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕೂ ಸರಕಾರಿ ಹುದ್ದೆಯಲ್ಲಿ ದ್ದುಕೊಂಡು ನಾಗರಿಕ ಸೇವೆ ಸಲ್ಲಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ನಾಗರಿಕ ಸೇವಾ ಕ್ಷೇತ್ರ ಆಯ್ಕೆಗೆ ಸಾಕಷ್ಟು ಕಾರಣಗಳಿರುತ್ತವೆ. ಉದಾ- ಸೇವಾ ಮನೋಭಾವ, ಸ್ಟೇಟಸ್, ಅವಕಾಶಗಳು ಹಾಗೂ ಸೌಲಭ್ಯವಾರು ಬೇರೆ ಬೇರೆಯಾಗಿರುತ್ತವೆ.
ಎಂಜಿನಿಯರಿಂಗ್ ಕೋರ್ಸ್ ಮಾಡಿದ ಎಲ್ಲರಿಗೂ ಉತ್ತಮ ಅವ ಕಾಶಗಳಿರುವುದಿಲ್ಲ. ಉತ್ತಮ ವೇತನ ಹಾಗೂ ಸೇವಾ ಭದ್ರತೆಗಳಿರುವುದಿಲ್ಲ. ವೇತನಗಳಿದ್ದರೂ ಐಎಎಸ್ ಹಂತಕ್ಕೆ ಹೋಲಿಸಿಕೊಳುÛ ವಂತಿರುವುದಿಲ್ಲ. ಹೀಗಾಗಿ ನಾಗರಿಕ ಸೇವಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ತಾಣ ಗಳಲ್ಲಿ ಜಾಗೃತಿ ಹೆಚ್ಚಾಗಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿ ಗಳು ಹೆಚ್ಚಾಗುತ್ತಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಯಿಂದಲೇ ಒಂದಲ್ಲ ಒಂದು ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಾರೆ. ಇದು ಕೂಡ ಯುಪಿಎಸ್ಸಿ ಪರೀಕ್ಷೆಗೆ ಆಕರ್ಷಣೆ ಇರ ಬಹುದು ಎನ್ನುತ್ತಾರೆ ಯುಪಿಎಸ್ಸಿ 655ನೇ ರ್‍ಯಾಂಕ್ ಪಡೆದಿರುವ ವೆಂಕಟರಾಮ್.
ಕಾಲೇಜುಗಳಲ್ಲೇ ಪ್ರೇರಣೆ ನೀಡಿದರೆ ಉತ್ತಮ
ನಾಗರಿಕ ಸೇವೆ ಮಾಡಬೇಕೆಂಬ ಮನಃಸ್ಥಿತಿಯಲ್ಲಿ ಎಂಜಿನಿಯ ರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಪದವೀಧರರು ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳು ತ್ತಿದ್ದಾರೆ. ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು…. ಹೀಗೆ ಯಾವುದೇ ಕೋರ್ಸ್‌ಗಳಿರಬಹುದು. ಆದರೆ ವಿದ್ಯಾರ್ಥಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೇರಣೆ ನೀಡುವ ವಾತಾವರಣ ಕಲ್ಪಿಸುವಂತಿರಬೇಕು. ಉತ್ತಮ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದವರು ಯುಪಿಎಸ್ಸಿಗೆ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲವಾದಲ್ಲಿ ವೈಯಕ್ತಿಕವಾಗಿ ಗುರಿ ಇದ್ದವರು ಮಾತ್ರ ತುಂಬಾ ಕಷ್ಟಪಟ್ಟು ಪ್ರಯತ್ನ ಮಾಡುತ್ತಾರೆ. ಅದರ ಬದಲಾಗಿ ಕಾಲೇಜುಗಳಲ್ಲಿಯೇ ಪ್ರೇರಣೆ ನೀಡಿದಾಗ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯತ್ತ ಬರುತ್ತಾರೆ.
ಈ ವರ್ಷದ ಪ್ರಥಮ ರ್‍ಯಾಂಕ್ ಧೃತಿ ಶರ್ಮ ಕೂಡ ಕಲಾ ವಿಭಾಗದ ಜೆಎನ್‌ಯು ವಿದ್ಯಾರ್ಥಿನಿಯಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜು ಗಳು ಉತ್ತಮ ಗುಣಮಟ್ಟದಲ್ಲಿವೆ. ಕಲಾ ಕಾಲೇಜುಗಳು ಮತ್ತಷ್ಟು ಗುಣಮಟ್ಟ ಸಾಧಿಸಬೇಕಿದೆ. ಕಲಾ ವಿಭಾಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯಾವುದೋ ಒಂದು ಕಾಲೇಜಿನಲ್ಲಿ ಸೇರುವ ಬದಲು. ಐಎಎಸ್ ಮಾಡಬೇಕೆಂಬ ಗುರಿ ಇದ್ದರೆ ಉತ್ತಮ ಕಾಲೇಜುಗಳನ್ನು ಸೇರುವುದು ಉತ್ತಮ. ಕೆಲವು ಕಾಲೇಜುಗಳಲ್ಲಿ ಇಂಟಿಗ್ರೇಟೆಡ್ ಕೋರ್ಸ್‌ಗಳನ್ನು ಸಹ ಮಾಡುತ್ತಿದ್ದಾರೆ. ಇದು ನೀಟ್ ಹಾಗೂ ಸಿಇಟಿಗೆ ಅನುಕೂಲವಾಗಲಿದೆ. ಆದರೆ ಯುಪಿಎಸ್ಸಿಗೆ ಉಪಯೋಗವಿಲ್ಲ ಎಂದು ಇನ್‌ಸೈಟ್‌ನ ಸ್ಥಾಪಕ ವಿನಯ್‌ಕುಮಾರ್ ಹೇಳುತ್ತಾರೆ.
ಶ್ರಮ, ತಾಳ್ಮೆ ಇದ್ದರಷ್ಟೇ ಯುಪಿಎಸ್ಸಿ ತೇರ್ಗಡೆ ಸಾಧ್ಯತೆ
ಯುಪಿಎಸ್ಸಿ ತೇರ್ಗಡೆ ಹೊಂದಲು ತುಂಬಾ ಶ್ರಮ, ತಾಳ್ಮೆ ಇರಬೇಕು. ಇದರ ಜತೆಗೆ ಅತೀ ದೊಡ್ಡ ಸ್ಫೂರ್ತಿ ಇರಬೇಕು. ಇಲ್ಲವಾದಲ್ಲಿ ಕಷ್ಟ. ಸಾಮಾನ್ಯವಾಗಿ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿರುವವರು ವಿಜ್ಞಾನ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗಿರುತ್ತದೆ. ಉತ್ತರ ಭಾರತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ದಕ್ಷಿಣ ಭಾರತದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ಇದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಚಿಂಗ್ ಸೆಂಟರ್‌ಗಳು ಆರಂಭವಾಗುತ್ತಿವೆ. ಅದೇ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ಪುಸ್ತಕ ಓದಬೇಕು ಎಂಬುದನ್ನು ತಿಳಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಇನ್ನೂ ಅರಿವು ಮೂಡಿಸಬೇಕು. ಪದವಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಕರ್ನಾಟಕದಲ್ಲಿ ಮೊದಲ ರ್‍ಯಾಂಕ್, ದೇಶಕ್ಕೆ 31ನೇ ರ್‍ಯಾಂಕ್ ಪಡೆದ ಅವಿನಾಶ್ ವಿ. ಹೇಳುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.