ಅಲ್ಯಾರೋ ಬಿಕ್ಕಳಿಸ್ತಾ ಇದಾರೆ, ನಿಮ್ಗೂ ಕೇಳಿಸ್ತಿದ್ಯಾ?
Team Udayavani, Jun 26, 2018, 3:36 AM IST
ರಾಮೇಗೌಡರು, ಸ್ಪಷ್ಟವಾಗಿ ಹೇಳಿಬಿಟ್ಟರು: “ಚಿಕ್ಕಣ್ಣಾ, ರಮೇಶಾ, ಸಣ್ಣಪ್ಪಾ, ಪರಶೂ -ನನ್ನ ಮಾತು ಕೇಳಿ. ನಾವು ಬದುಕ್ತಾ ಇರೋದು ಬರದ ಸೀಮೆಯಲ್ಲಿ. ನಮ್ಮೆಲ್ಲರ ಜಮೀನಿಗೆ ಹತ್ತಿರದಲ್ಲೇ ಕೆರೆ ಇದೆ. ಅದೋ, ಮಳೆ ಬಂದ್ರೆ ತುಂಬಿರುತ್ತೆ. ಇಲ್ಲದಿದ್ರೆ ಖಾಲಿ ಬಿದ್ದಿರುತ್ತೆ. ಇದೇ ಕಾರಣದಿಂದ, ಕೆರೆಯ ನೀರು ನಂಬಿಕೊಂಡು ಬೆಳೆ ತೆಗೆಯೋಕೆ ನಮ್ಮಿಂದ ಆಗ್ತಾ ಇಲ್ಲ. ವ್ಯವಸಾಯದಿಂದ ಲಾಭ ಬೇಡ. ಪ್ರತಿವರ್ಷ, ಮೂರು ಹೊತ್ತಿನ ಅನ್ನಕ್ಕೆ ಆಗುವಷ್ಟಾದ್ರೂ ಬೆಳೆಯಲೇಬೇಕು. ಅದೇ ಉದ್ದೇಶದಿಂದ ಬೋರ್‌ವೆಲ್ ಹಾಕಿ ಸೋಕೆ ಪ್ಲಾನ್ ಮಾಡಿದೀನಿ. ಈಗ ನಿಮ್ಮನ್ನೆಲ್ಲ ಯಾಕೆ ಕರೆಸಿದೆ ಅಂದ್ರೆ- ನಾನು ಬೋರ್‌ವೆಲ್ ಹಾಕಿಸಿದ್ದನ್ನ ನೋಡಿ, ನೀವೂ ಸಾಲ ತಗೊಂಡು ಬೋರ್ ಹಾಕಿಸಲು ಹೋಗಬೇಡಿ ಅಂತ ಹೇಳ್ಳೋಕೆ. ಯಾಕೆ ಗೊತ್ತ? ನಮ್ಮ ಜಮೀನು ಇರೋದು ಬರದ ನಾಡಿನಲ್ಲಿ. ಭೂಮಿಯ ಒಳಗೆ ನೀರಿನ ಸೆಲೆ ಸ್ವಲ್ಪ ಮಾತ್ರ ಇರುತ್ತೆ. ಅಂಥಾ ಜಾಗದಲ್ಲಿ ಒಂದೇ ಒಂದು ಬೋರ್ ಇದ್ರೆ ಅಂದಾಜು ಹತ್ತು ವರ್ಷದ ತನಕ ನೀರು ಸಿಗುತ್ತೆ. ಅದೇ, ಒಂದೇ ಏರಿಯಾದಲ್ಲಿ ಐದಾರು ಬೋರ್‌ವೆಲ್ ತೆಗೆಸ್ತೇವೆ ಅಂದೊRಳ್ಳಿ; ಆಗ ಏನಾಗುತ್ತೆ ಅಂದ್ರೆ- ಭೂಮಿ ತಳಭಾಗದಲ್ಲಿ ಸಡಿಲ ಆಗುತ್ತೆ. ಮಣ್ಣಿನ ಫಲವತ್ತತೆ ಕಡಿಮೆಯಾಗಿ ಇಳುವರೀನೂ ಕಡಿಮೆ ಸಿಗುತ್ತೆ.
ಅದಕ್ಕೇ ಒಂದು ಕೆಲ್ಸ ಮಾಡೋಣ. ಬೋರ್‌ವೆಲ್ ಹಾಕಿಸಿ, ಮೊದಲ ಎರಡು ತಿಂಗಳು ನನ್ನ ಜಮೀನಿಗೆ ನೀರು ತಗೊಳೆ¤àನೆ. ಆನಂತರದ ದಿನಗಳಲ್ಲಿ ನೀವೂ ಏನಾದ್ರೂ ಕೃಷಿ ಮಾಡಿ. ನನ್ನ ಬೋರ್‌ವೆಲ್‌ನಿಂದಲೇ ನೀರು ಹಾಯಿಸಿಕೊಳ್ಳಿ. ನೀವು ಮೂವರೂ, ಬೋರ್ ಆನ್ ಮಾಡಿದಾಗ ಮೀಟರ್ ಓಡಿರುತ್ತಲ್ಲ; ಅಷ್ಟು ದುಡ್ಡು ಕೊಟ್ರೆ ಸಾಕು; ಇದರಿಂದ ಒಂದ್ಕಡೇಲಿ ಉಳಿತಾಯ ಆಗುತ್ತೆ. ಇನ್ನೊಂದ್ಕಡೆ, ಬ್ಯಾಂಕ್‌ನ ಸಾಲಗಾರ ಆಗುವುದೂ ತಪ್ಪುತ್ತೆ. ಏನಂತೀರ?’
ರಾಮೇಗೌಡರು, ವಿರುಪಾಪುರದ ರೈತ. ಅವರಿಗೆ ಎಂಟು ಎಕರೆ ಜಮೀನಿತ್ತು. ಮಳೆಯನ್ನು ನಂಬಿಕೊಂಡೇ ಕೃಷಿ ಮಾಡಬೇಕಿತ್ತು. ಹಾಗಾಗಿ, ಅಷ್ಟೆಲ್ಲಾ ಜಮೀನಿದ್ದರೂ ಏನೇನೂ ಪ್ರಯೋಜನ ವಿರಲಿಲ್ಲ. ಹಾಗಾಗಿ, ಬೋರ್‌ವೆಲ್ ಹಾಕಿಸಲು ಗೌಡರು ನಿರ್ಧರಿಸಿ ದ್ದರು. ತಮ್ಮ ಜಮೀನಿಗೆ ಅಂಟಿಕೊಂಡಂತೆಯೇ ಇರುವ ಉಳಿದ ರೈತರೂ ಬೋರ್‌ವೆಲ್ ಹಾಕಿಸಿಬಿಟ್ಟರೆ, ಸತತ ಬಳಕೆಯ ಕಾರಣ ದಿಂದ ತುಂಬ ಬೇಗನೆ ಅಂತರ್ಜಲ ಬತ್ತಿಹೋಗಿ ಎಲ್ಲರೂ ಕಷ್ಟಕ್ಕೆ ಸಿಕ್ಕಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಅವರಿಗಿತ್ತು. ಹಾಗೆ ಆಗದಿರಲಿ ಎಂಬ ಸದಾಶಯದಿಂದಲೇ ನೆರೆಹೊರೆಯ ರೈತರನ್ನು ಕರೆದು ಅವರಿಗೆ ಸಲಹೆ ನೀಡಿದ್ದರು.
ತುಂಬಾ ಕಡಿಮೆ ಖರ್ಚಿನಲ್ಲಿ ತಮ್ಮೆಲ್ಲರಿಗೂ ನೀರಾವರಿ ಸೌಲಭ್ಯ ದೊರಕುತ್ತದೆ ಎಂಬ ಕಾರಣಕ್ಕೆ, ಎಲ್ಲ ರೈತರೂ- “ನೀವು ಹೇಳಿದಂತೆ ಆಗಲಿ ಅಣ್ಣೋರೇ…’ ಎಂದಿದ್ದರು. ನಂತರದ ಕೆಲವೇ ದಿನಗಳಲ್ಲಿ ರಾಮೇಗೌಡರ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ್ದಾಯ್ತು. ಗೌಡರ ಖುಷಿಗೆ ಪಾರವೇ ಇಲ್ಲ. ಕಬ್ಬು, ಭತ್ತ, ಚೆಂಡುಹೂವು, ತರಕಾರಿ… ಹೀಗೆ ಬಗೆಬಗೆಯ ಬೆಳೆಯನ್ನು ಬಿತ್ತನೆ ಮಾಡಿದರು.
ಉಹುಂ, ಈ ಸಡಗರದಲ್ಲಿ ಅವರು ನೆರೆಹೊರೆಯ ರೈತರನ್ನು ಮರೆಯಲಿಲ್ಲ. “ಮೊದಲ ಎರಡು ತಿಂಗಳು ಮಾತ್ರ ನಾನು ನೀರು ತಗೊಳ್ಳೋದು, ಆ ಮೇಲೆ ಸರದಿ ಪ್ರಕಾರ ನಿಮ್ಮ ಜಮೀನಿಗೂ ನೀರು ತಗೊಳ್ಳಿ. ಯಾರಿಗೆ ಮೊದಲು ನೀರು ಹರಿಸಬೇಕು ಅಂತ ನೀವ್‌ನೀವೇ ಮಾತಾಡಿಕೊಂಡು ಫೈನಲ್ ಮಾಡಿ. ನೀರಿನ ಹಂಚಿಕೆ ಅಥವಾ ಇಳುವರಿ ಪಡೆಯುವ ವಿಚಾರಕ್ಕೆ ನಮ್ಮಲ್ಲಿ ಭಿನ್ನಾಭಿಪ್ರಾಯ ಬರೋದು ಬೇಡ’ ಎಂದು ಕಿವಿಮಾತು ಹೇಳಿದರು.
ನಾವು ಯೋಚಿಸುವುದೇ ಒಂದಾದರೆ, ಜೀವನದಲ್ಲಿ ನಡೆಯುವುದೇ ಒಂದು. ರಾಮೇಗೌಡ ಮತ್ತು ಜೊತೆಗಾರರ ವಿಷಯದಲ್ಲೂ ಹೀಗೇ ಆಯಿತು. ಮೊದಲ ವರ್ಷ ಅಂದು ಕೊಂಡಂತೆಯೇ ರಾಮೇಗೌಡರು ನಾಲ್ಕೈದು ಬಗೆಯ ಕೃಷಿ ಮಾಡಿದರು. ಅದರಲ್ಲಿ ಕಬ್ಬು ಮತ್ತು ಹೂವಿನ ಬೆಳೆಗೆ ರೇಟು ಸಿಗಲಿಲ್ಲ. ಅಂದುಕೊಂಡದ್ದಕ್ಕಿಂತ 10 ಕ್ವಿಂಟಾಲ್ ಹೆಚ್ಚಿಗೆ ಭತ್ತ ಬೆಳೆದದ್ದು ನಿಜ; ಆದರೆ, ಎರಡು ಬೆಳೆಗಳಿಂದ ಆದ ನಷ್ಟ ತಡೆ ಯಲು, ಮುಖ್ಯವಾಗಿ ಬ್ಯಾಂಕ್ ಸಾಲದ ಕಂತು ಕಟ್ಟಲು ಅಷ್ಟೂ ಫಸಲನ್ನು ಮಾರಬೇಕಾಗಿ ಬಂತು. ಇದರ ಜೊತೆಗೆ, ನೆರೆಹೊರೆಯ ರೈತರಿಗೆ ನೀರಿನ ಹಂಚಿಕೆ ಆಯಿತಲ್ಲ; ಅದರ ಕೆಇಬಿ ಬಿಲ್‌ನ ಹಣ ಕೂಡ ನಿರೀಕ್ಷೆಗಿಂತ ಜಾಸ್ತಿಯೇ ಬಂದು ಅದೂ ಕೂಡ ಕೈಕಚ್ಚಿತು. ಗೌಡರಿಗೆ- ಹೇಳಲಾರೆ, ಹೇಳದಿರಲಾರೆ ಎಂಬಂಥ ಸಂಕಟ.
ಇವರ ಕಥೆ ಹೀಗಾದರೆ, ಆ ರೈತರ ಪಾಡು ಇನ್ನೂ ಕೆಟ್ಟದಿತ್ತು. ನೀರಾವರಿಯ ಅನುಕೂಲ ಇರುವುದರಿಂದ ಚೆನ್ನಾಗಿ ಬೆಳೆ ತೆಗೆದು ಭಾರೀ ಲಾಭ ಮಾಡಿಕೊಳ್ಳಬೇಕೆಂದೇ ಅವರೆಲ್ಲ ಲೆಕ್ಕ ಹಾಕಿದ್ದರು. ಬಗೆಬಗೆಯ ಕೃಷಿಗೆ ಮುಂದಾಗಿದ್ದರು. ಹಗಲಿರುಳೆನ್ನದೆ ಕೆಲಸ ಮಾಡಿದರಲ್ಲ; ಅದೇ ಕಾರಣಕ್ಕೆ ಬೆಳೆಯೂ ಹುಲುಸಾಗಿ ಬಂತು. ಆದರೆ, ಫಸಲು ಕೈಸೇರುವ ಹೊತ್ತಿಗೆ ಮಾರುಕಟ್ಟೆಯಲ್ಲಿ ರೇಟು ಬಿದ್ದುಹೋಯ್ತು. ಕುಂಬಳಕಾಯಿ ಗಾತ್ರದ ಎಲೆ ಕೋಸಿಗೆ, ಕೆ.ಜಿ.ಗೆ ಕೇವಲ 1 ರೂಪಾಯಿ ಬೆಲೆ ಸಿಕ್ಕಿತು. ಟೊಮೆಟೋ, ಬೀನ್ಸ್, ಬದನೆಗೂ ಇದೇ ಗತಿಯಾಯಿತು.
***
“ರಾಮೇಗೌಡರನ್ನ ನಂಬಿಕೊಂಡು ನಾವು ಮೋಸ ಹೋದ್ವಿ…’ ರಮೇಶ ಅಸಹನೆಯಿಂದ ಹೇಳಿದ. “ಅನುಮಾನ್ವೇ ಬೇಡ. ನಾವು ಯಾಮಾರಿಬಿಟ್ವಿ. ಗೌಡರು, ನಾಲ್ಕು ಬೆಳೆ ತೆಗೆದು ನಾಲ್ಕು ಥರದಲ್ಲಿ ಲಾಭ ಮಾಡಿಕೊಂಡ್ರು. ನಾವು ಒಂದೊಂದೇ ಬೆಳೆ ನಂಬಿಕೊಂಡು ನಾಮ ಹಾಕಿಸಿಕೊಂಡ್ವಿ…’ ಚಿಕ್ಕಣ್ಣನೂ ದನಿಗೂಡಿಸಿದ. ಜಮೀನಿಗೆ ನೀರು ಬೇಕು ಅನ್ನಿಸಿದಾಗೆಲ್ಲಾ ಗೌಡರ ಮನೆಗೆ ಹೋಗಿ- “ಯಜಮಾನೆÅà… ಮೋಟ್ರಾ ಆನ್ ಮಾಡಬೇಕು. ಕೀ ಕೊಡಿ ಅಂತ ಕೇಳಬೇಕಿತ್ತು. ಬೇಸಾಯದ ಬಗ್ಗೆ ಅಷ್ಟೆಲ್ಲಾ ಅನುಭವ ಇದ್ರೂ ಗೌಡರು ನಮಗೆ ಯಾವುದೇ ಸಲಹೆ ಕೊಡಲಿಲ್ಲ’ ಸಣ್ಣಪ್ಪ ಮತ್ತು ಪರಶು ಒಟ್ಟಿಗೇ ಹೀಗೆಂದರು. ಬೆಳೆ ಹಾನಿಯಿಂದ ಲಾಸ್ ಆಗಿತ್ತಲ್ಲ; ಅದಕ್ಕೆ ಕಾರಣ ಹುಡುಕುವ ಹಾಗೂ ಭವಿಷ್ಯದ ಬಗ್ಗೆ ಯೋಚಿಸುವ ಉದ್ದೇಶದಿಂದ ಎಲ್ಲರೂ ಒಂದೆಡೆ ಸೇರಿದ್ದರು. “ಗೌಡರಿಂದ ಅನ್ಯಾಯವಾಗಿದೆ. ಅದರಿಂದ ಬಚಾವ್ ಆಗಬೇಕಾದರೆ, ತಕ್ಷಣ ಬ್ಯಾಂಕ್ ಸಾಲ ಪಡೆದು ಎಲ್ಲರೂ ಬೋರ್‌ವೆಲ್ ಹಾಕಿಸುವುದೆಂದೂ, ಅದಕ್ಕಾಗಿ ಬ್ಯಾಂಕಿನಿಂದ ಸಾಲ ಪಡೆಯುವುದೆಂದೂ, ಪ್ರತಿವರ್ಷವೂ ಮೂರು ಬೆಳೆ ಸಿಗುವಂಥ ಕೃಷಿ ಪದ್ಧತಿ ಅನುಸರಿಸಿ ಲಾಭ ಪಡೆಯಬೇಕೆಂದೂ’ ನಿರ್ಧರಿಸಿದರು.
“ಬೇಡ ಕಣÅಯ್ಯ, ದಯವಿಟ್ಟು ದುಡುಕಬೇಡಿ. ಈ ಬಾರಿ ನೀವೇ ಮೊದಲು ನೀರು ತಗೊಂಡು ಕೃಷಿ ಮಾಡಿ. ಎಲ್ಲರೂ ಬೋರ್‌ವೆಲ್ ಕೊರೆಸಿದ್ರೆ, ಅಂತರ್ಜಲ ಬತ್ತಿಹೋಗುತ್ತೆ. ಒಂದೇ ವರ್ಷದಲ್ಲಿ ನೀರು ಬರೋದು ನಿಂತು ಹೋಗುತ್ತೆ. ಆಮೇಲೆ ಬ್ಯಾಂಕ್ ಸಾಲ ತೀರಿಸೋಕೆ ಆಗದೆ ಒದ್ದಾಡುವ ಹಾಗೆ ಆಗುತ್ತೆ. ಎಲ್ರೂ ಒಟ್ಟಾಗಿ ತೊಂದ್ರೆಗೆ ಸಿಕ್ಕಿಕೊಳ್ತೀವಿ. ಅಂಥಾ ಸಂಕಟಕ್ಕೆ ದಾರಿ ಮಾಡಬೇಡಿ. ನನ್ನ ಮಾತು ಕೇಳಿ…’ ರಾಮೇಗೌಡರು ಹೀಗೆಲ್ಲಾ ಕೇಳಿಕೊಂಡರು. ಏನೂ ಪ್ರಯೋಜನ ಆಗಲಿಲ್ಲ. “ಗೌರೆ¾ಂಟು ಹೇಗಿದ್ರೂ ಸಾಲ ಕೊಡುತ್ತೆ. ಮುಂದೆ ಅದೇ ಗೌರೆ¾ಂಟು ಸಾಲ ಮನ್ನಾ ಮಾಡುತ್ತೆ. ಹೀಗಿರುವಾಗ ಯಾಕೆ ಹೆದರಿಕೆ? ಸಾಲ ಪಡೆದು ಬೋರ್‌ವೆಲ್ ಹಾಕ್ಸಿ.
ಭೂಮ್ತಾಯಿ ಯಾವತ್ತೂ ರೈತರ ಕೈ ಬಿಡೋದಿಲ್ಲ. ಆ ಗೌಡರ ಹತ್ರ ನೀರಿನ ಭಿಕ್ಷೆ ಕೇಳುವ ದರ್ದು ನಿಮಗೇನಿದೆ? ನಿಮ್ಮ ಪಾಡಿಗೆ ನೀವು ಮುಂದುವರೀರಿ. ಗೌಡರ ಮಾತಿಗೆ ಕೇರ್ ಮಾಡಬೇಡಿ… ಎಂದು, ಊರಿನ ಕೆಲವರು ಚುಚ್ಚಿ ಕೊಟ್ಟರು. ಪರಿಣಾಮ, ಹಾಂ ಹೂಂ ಅನ್ನುವುದರೊಳಗೆ, ನಾಲ್ಕು ಮಂದಿಗೂ ಬ್ಯಾಂಕ್ ಸಾಲ ಮಂಜೂರಾಯಿತು. ಎಲ್ಲರ ಜಮೀನಿನಲ್ಲೂ ನೀರು ಬುಗ್ಗೆಯಂತೆ ಉಕ್ಕಿತು.
***
ಆನಂತರದಲ್ಲಿ ನಡೆದುದನ್ನು ಹೇಳಿದರೂ ಕಷ್ಟ. ಹೇಳದಿದ್ದರೂ ಕಷ್ಟ. ಇಂಥಾ ಕಥೆಗಳೇನಾದರೂ ಸಿನಿಮಾದವರ ಕೈಗೆ ಸಿಕ್ಕಿದರೆ ತೆರೆಯ ಮೇಲೆ ಪವಾಡಗಳೇ ನಡೆದುಹೋಗುತ್ತವೆ. ರೈತ(ಆ ವೇಷದಲ್ಲಿರುವ ನಾಯಕ) ಎಲ್ಲಾ ಅಡೆತಡೆಗಳನ್ನು ಮೀರಿ ಗೆದ್ದು ಬಿಡುತ್ತಾನೆ. ಆದರೆ, ಬದುಕು ಸಿನಿಮಾ ಅಲ್ಲವಲ್ಲ…ಹಾಗಾಗಿ, ಇಲ್ಲಿ ಯಾವ ಮ್ಯಾಜಿಕ್ಕೂ ನಡೆಯು ವುದಿಲ್ಲ. ಹಠಕ್ಕೆ, ಆಸೆಗೆ ಬಿದ್ದು ಬೋರ್‌ವೆಲ್ ಹಾಕಿಸಿಕೊಂಡ ರೈತಾಪಿ ಜನರ ಬದುಕಲ್ಲೂ ಹೀಗೇ ಆಯಿತು. ರಟ್ಟೆಯಲ್ಲಿ ಶಕ್ತಿಯಿರುವಾಗಲೇ ಸಂಪಾದಿಸಬೇಕು. ಎರಡೇ ವರ್ಷದಲ್ಲಿ ಸಾಲ ಮುಕ್ತರಾಗಬೇಕು ಎಂದೆಲ್ಲ ಆಸೆಪಟ್ಟು ನಾಲ್ಕಾರು ರೀತಿಯ ಬೆಳೆ ಬೆಳೆದರು. ಬೆಳೆಯೂ ಹುಲುಸಾಗಿಯೇ ಬಂತು. ಆದರೆ, ದುರ್ವಿಧಿಗೆ ಯಾರು ಹೊಣೆ ಹೇಳಿ? ಒಬ್ಬ ರೈತನ ಫಸಲಿಗೆ ಬೆಲೆ ಬಿದ್ದು ಹೋಯಿತು, ಮತ್ತೂಬ್ಬ ಲಾಭ ಗಳಿಸಿದ ಖುಷಿಯಲ್ಲಿ ಅರ್ಧದಷ್ಟನ್ನು ಮಜಾ ಉಡಾಯಿಸಿ ಬೀದಿಗೆ ಬಂದ. ಮತ್ತೂಬ್ಬ ಮಾರುಕಟ್ಟೆಯಲ್ಲೇ ಮುಗ್ಗರಿಸಿ ಬಿದ್ದು ಕಾಲು ಮುರಿದುಕೊಂಡ. ಕಡೆಯವನ ಬೆಳೆಗೂ ರೇಟು ಸಿಗಲಿಲ್ಲ. ಇಷ್ಟಾದ ಮೇಲೂ ಇವರು ಸುಮ್ಮನೇ ಇರಲಿಲ್ಲ.
ಕಳೆದುಕೊಂಡಲ್ಲೇ ಪಡೆಯುವ ಹುಮ್ಮಸ್ಸಿನಲ್ಲಿ ಮತ್ತೆ ಐದಾರು ಬಗೆಯ ಬೀಜ, ಗೊಬ್ಬರವನ್ನು ಜಮೀನಿಗೆ ತುಂಬಿದರು. ಆಮೇಲೆ ಏನಾಯಿತೆಂದರೆ- ಕೆಲವೇ ದಿನಗಳ ಅಂತರದಲ್ಲಿ ಬೋರ್‌ವೆಲ್‌ಗಳು ನೀರೆತ್ತುವುದನ್ನು ನಿಲ್ಲಿಸಿಬಿಟ್ಟವು! ಆಗ, ನಾಲ್ವರೂ ರೈತರಿಗೆ ದಿಕ್ಕು ತೋಚದಂತಾಯಿತು. ಬೆಳೆ ಕಣ್ಮುಂದೆಯೇ ಒಣಗತೊಡಗಿತು. ಏಕಾಏಕಿ ಬೋರ್‌ವೆಲ್‌ಗಳಲ್ಲಿ ನೀರು ನಿಂತುಹೋಗಿದ್ದೇಕೆ ಎಂದು ಚೆಕ್ ಮಾಡಲು ಬಂದ ಇಂಜಿನಿಯರ್‌ಗಳು, ಕೃಷಿ ಅಧಿಕಾರಿಗಳು, ಅತಿಯಾದ ಗೊಬ್ಬರ ಬಳಕೆಯಿಂದ ಮಣ್ಣು ಹಾಳಾಗಿದೆ. ಅಂತರ್ಜಲ ಬತ್ತಿ ಹೋಗಿದೆ. ಈ ನೆಲದಲ್ಲಿ ಇನ್ಮುಂದೆ ಕೃಷಿ ಮಾಡಿ ಯಶಸ್ಸು ಪಡೆ ಯೋದು ಕಷ್ಟ ಎಂದು ವರದಿ ನೀಡಿದರು. ಎಲ್ಲವನ್ನೂ ಗಮನಿ ಸುತ್ತಿದ್ದ ರಾಮೇಗೌಡರು, “ನಿಮಗೆಲ್ಲ ಸಣ್ಣಮಕ್ಕಳಿಗೆ ಹೇಳಿದಂತೆ ಹೇಳಿದೆ. ನನ್ನ ಮಾತನ್ನ ಯಾರೂ ಕೇಳಲಿಲ್ಲ. ಈಗ ನಿಮ್ಮ ಹೊಟ್ಟೆ ಮೇಲೆ ನೀವೇ ಕಲ್ಲುಹಾಕ್ಕೊಂಡಿದ್ದೂ ಅಲ್ಲದೆ, ನನ್ನ ಬದುಕಿಗೂ ಕೊಳ್ಳಿ ಇಟ್ರಲ್ಲಯ್ನಾ’ ಎಂದು ಸಂಕಟದಿಂದ ಹೇಳಿದರು.
ಮುಂದಿನ ಕಥೆ ಕೇಳಿ: ಆ ರೈತರಿಗೆ, ಮೊದಲು ಬ್ಯಾಂಕಿನ ನೋಟಿಸ್ ಬಂತು. ಆಮೇಲೆ ಅಧಿಕಾರಿಗಳು ಬಂದ್ರು, ಕಡೆಗೊಮ್ಮೆ ಪೊಲೀಸರೂ ಬಂದುಬಿಟ್ರಾ. ಆನಂತರದಲ್ಲಿ ಕೆಲವೊಂದು ಬೆಳವಣಿಗೆಗಳಾದವು. ವಿರುಪಾಪುರದ “ಬರಡು ನೆಲ’ವನ್ನು ವಿದೇಶಿ ಕಂಪನಿಯೊಂದಕ್ಕೆ ಮಾರಲು ಸರ್ಕಾರ ನಿರ್ಧರಿಸಿತು. ವಿದೇಶಿ ಕಂಪನಿ ಅಂದಮೇಲೆ ಲಕ್ಷ ಲಕ್ಷ ಲಾಭ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆಯಲ್ಲಿ ಈ ರೈತರು- ಜಮೀನು ಮಾರಲು ತಾವೆಲ್ಲಾ ಮನಸ್ಸಂತೋಷದಿಂದ ಒಪ್ಪಿರುವುದಾಗಿ ಪತ್ರಕ್ಕೆ ಸಹಿ ಮಾಡಿಯೇ ಬಿಟ್ಟರು. ತಾವು ಕೋಟ್ಯಧಿಪತಿಗಳಾದಂತೆ, ಸಾಲ ತೀರಿಸಿ ಬಂಗಲೆ ಕಟ್ಟಿಸಿದಂತೆ ಕನಸು ಕಾಣತೊಡಗಿದರು.
ಇದೀಗ ಹೊಸದೊಂದು ಸುದ್ದಿ ಬಂದಿದೆ. ವಿರುಪಾಪುರದ “ಬರಡು ನೆಲಕ್ಕೆ’ ಸರ್ಕಾರವೇ ರೇಟ್ ಫಿಕ್ಸ್ ಮಾಡಲಿದೆಯಂತೆ. ಜನ ಭೂಮಿ ಖರೀದಿಗೆ ಬರುತ್ತಿದ್ದಾರೆ. ಅದೇ ಊರಿನ ಒಂದು ಮೂಲೇಲಿ ನಾಲ್ಕಾರು ಮಂದಿ ಎದೆ ಬಡಿದುಕೊಂಡು ಅಳುವ ಸದ್ದು- ನಿಮಗೆ ಕೇಳಿಸ್ತಿದ್ಯಾ?
– ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.