ರೂಪಕದ ಬೆಳಕಲ್ಲಿ ಸ್ಥೈರ್ಯದ ಹನಿಗಳ ಹೆಕ್ಕುತ್ತಾ


Team Udayavani, May 25, 2018, 5:56 AM IST

achebe-and-mandela.jpg

ಚಿನುವಾ ಅಶಿಬೆಯ Things fall apart, ನೀವು ಓದಿದ್ದೀರಾ? ಯಶಸ್ಸೆಲ್ಲವೂ ವೈಫ‌ಲ್ಯದಷ್ಟೇ ಟೊಳ್ಳೆನ್ನುವ ವಿಶ್ವಪ್ರಜ್ಞೆಯನ್ನು ಅಪ್ಪಟ ಮಾನವೀಯ ನೆಲೆಗಟ್ಟಿನಲ್ಲಿ ಅತ್ಯಂತ ಸಮರ್ಥವಾಗಿ ಶೋಧಿಸಿದ ಕೃತಿ ಅದು. ಆಫ್ರಿಕಾ ಖಂಡದ ಮೂಲ ನಿವಾಸಿಯಾಗಿ ಆ ನೆಲದ ಸಮಾನ ಸಂಘರ್ಷಗಳನ್ನು, ಅದರ ಆಪ್ತ ಆದ್ರತೆಯ ತೆರೆಗಳನ್ನು ಮೊದಲ ಬಾರಿಗೆ ಆಂಗ್ಲ ಭಾಷೆಯಲ್ಲಿ ಅಭಿವ್ಯಕ್ತಿಸುವ ಮೂಲಕ ಮಧ್ಯವರ್ತಿಗಳ ಉಪಟಳವಿಲ್ಲದೇ ನೇರವಾಗಿ ನಮ್ಮ ಎದೆಯಾಳವನ್ನೂ ಸೋಕಿಸಿ ಸಾಂತ್ವನಗೊಳಿಸಿದ್ದು ಆ ಕೃತಿಯ ಲೇಖಕ ಅಶಿಬೆ ಎನ್ನುವುದು ವಿಶೇಷ.

ನಾವು ಶೋಷಣೆಗೊಳಗಾದಂತೆಯೇ ಆಫ್ರಿಕಾ ಕೂಡಾ ಹಿಂಸೆಗೊಳಗಾಯಿತು. ಹಾಗಾಗಿಯೇ ಈಗಲೂ, ಗಾಂಧಿ ನಿಜವಾಗಿ ಹುಟ್ಟಿದ್ದು ಆಫ್ರಿಕಾ ಖಂಡದಲ್ಲಿ ಎಂದರೆ ನಾವು ನಿರಾಕರಿಸಲಾರೆವು. ಅವರ ಸತ್ಯಾಗ್ರಹದ ಬೇರುಗಳು ಆಫ್ರಿಕಾ ನೆಲದ ಸಂಕಟದ ತೇವವನ್ನು ಹೀರಿಕೊಂಡೇ ಬೆಳೆದವು ಎಂದರೆ ನಾವು ಅಸೂಯೆಗೀಡಾಗಲಾರೆವು. ಆಫ್ರಿಕಾ ಹಾಗೂ ಭಾರತ ಗಾಂಧಿಯ ಬೌದ್ಧಿಕ ಹಾಗೂ ನೈತಿಕ ನಿಲುವುಗಳ ಸತ್ವಕ್ಕೆ ಸಮಾನ ಸಹಕಾರವನ್ನು ನೀಡಿತು ಎಂದಿದ್ದ ಮಂಡೇಲಾರ ಮಾತುಗಳನ್ನು ನಾವು ನಮ್ಮ ಆಪ್ತ ಸಖನ ಆಲಾಪಗಳಾಗಿಯೇ ಗುರುತಿಸಿಕೊಂಡು ನೆಮ್ಮದಿಗೊಳ್ಳುತ್ತೇವೆ. ಅಲ್ಲಿನ ಯಾವುದೋ ಸಂಗ್ರಾಮಕ್ಕೆ ನಮ್ಮ ನೆಲದಲ್ಲಿ ಎದುರುಗನ್ನಡಿಯೊಂದು ಪ್ರತಿಫ‌ಲಿಸುತ್ತಲೇ ಇತ್ತು ಎನ್ನುವುದು ನಮಗೆ ಇಂದೂ ಇಷ್ಟವಾಗುವ ಸಂಗತಿ.

ಈ ನಿಟ್ಟಿನಲ್ಲಿ, ಅಶಿಬೆ ಹೇಳಿದ ಮಾನವೀಯ ಗ್ರಹಿಕೆ ಹಾಗೂ ಗೌರವಗಳ ದೃಷ್ಟಿಕೋನದಿಂದ ಯುರೋಪಿನ ಸಂಸ್ಕೃತಿಯೊಂದಿಗೆ ಆಫ್ರಿಕಾ ಸಂಧಿಸಿದ ಗಳಿಗೆಯನ್ನೇ ನಾನು ಅತ್ಯಂತ ದೊಡ್ಡದಾದ ವಿಪತ್ತು ಎಂದು ಬಣ್ಣಿಸುತ್ತೇನೆ. ಪರಸ್ಪರ ಚಿಗುರಬೇಕಾಗಿದ್ದ ಆಪ್ತ ಭಾವಗಳನ್ನು ಈ ಒಮ್ಮುಖತೆ ಸಂಪೂರ್ಣವಾಗಿ ನಿರಾಕರಿಸಿತು. ಏಕೆಂದರೆ ಆಫ್ರಿಕಾವನ್ನು ಯುರೋಪ್‌ ಎಂದೂ ಅರ್ಥ ಮಾಡಿಕೊಳ್ಳಲೇ ಇಲ್ಲ. ಬಹಳ ದೊಡ್ಡ ನೋವೆಂದರೆ ಆಫ್ರಿಕಾವನ್ನು ಅರ್ಥ ಮಾಡಿಕೊಳ್ಳಲು ಯಾವುದೇ ಕಾರಣವಿಲ್ಲವೆಂಬುದನ್ನು ಯುರೋಪ್‌ ನಂಬಿಕೊಂಡಿತು. ಈಗಲೂ ಈ ತಿರಸ್ಕಾರದ ಸಂಕಟ ನಮ್ಮ ನೆಲವನ್ನು ಕಾಡುತ್ತದೆ ಎಂಬ ಮಾತುಗಳು ನಮ್ಮ ಹೃದಯಗಳಲ್ಲಿಯೂ ಒಂದೇ ರೀತಿಯ ಜೀವ ರಾಗಗಳನ್ನು ಹೊಮ್ಮಿಸುತ್ತವೆ.

1958ರಲ್ಲಿ ಮೊದಲ ಬಾರಿಗೆ ಮುದ್ರಿತವಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಮಾರಾಟವಾದ, ಇಂದಿಗೂ ಜಗತ್ತಿನ ಅತಿ ಶ್ರೇಷ್ಠ ಪುಸ್ತಕಗಳ ಸಾಲಿನಲ್ಲಿ ಉಳಿದುಹೋಗಿರುವ ಅವನ ಈ ಮೊದಲ ಕಾದಂಬರಿ ಬಗ್ಗೆ ಎರಡು ಸಾಲು. ಕಥೆಯ ಹೀರೋ ಒಕಾಂಕೊ ತನ್ನ ಇಡೀ ಸೀಮೆಯ ಅತಿ ಪ್ರಬಲ ಜಟ್ಟಿಗ. ಸಾಮಾಜಿಕವಾಗಿ ಅತ್ಯಂತ ನಿರುಪಯುಕ್ತಿಯಾದ ತನ್ನ ಅಪ್ಪನೊಂದಿಗೆ ಕಡು ಬಡತನದಲ್ಲಿ ಬೆಳೆದ ಅವನು ಪೌರುಷದ ಕನಸನ್ನು ತನ್ನ ಶಕ್ತಿಯುತ ನಡೆ ನುಡಿಗಳ ಮೂಲಕ ಗಟ್ಟಿ ಮಾಡಿಕೊಂಡವನು. ಸಿಕ್ಕ ಸ್ಪರ್ಧಾತ್ಮಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ತನ್ನಿಡೀ ಜನಾಂಗದ ದೃಷ್ಟಿಯಲ್ಲಿ ಜಗಜಟ್ಟಿಯಾದವನು. ಸುತ್ತಲಿನ ಒಂಬತ್ತು ಹಳ್ಳಿಗಳ ಜನ ಅವನ ನೆರಳು ಕಂಡರೂ ಹೆದರುವಷ್ಟು ಅವನು ಪ್ರಬಲ. ತನ್ನ ದೈಹಿಕ ಪ್ರಾಬಲ್ಯವನ್ನು ಪ್ರತಿಪಾದಿಸುವ ಭರದಲ್ಲಿಯೇ ಅವನು ತನ್ನ ಸಂಪತ್ತನ್ನು ವೃದ್ಧಿಸಿಕೊಂಡಿದ್ದಾನೆ.

ಬಹುಪತ್ನಿ ವ್ರತಸ್ಥನಾಗಿ ತನ್ನ ಕುಟುಂಬವನ್ನೂ ವೃದ್ಧಿಸಿಕೊಂಡಿದ್ದಾನೆ. ಆಕಾಂಕ್ಷೆಯೇ ಇಲ್ಲದೇ ನಿರ್ಲಿಪ್ತ ಬದುಕು ಸವೆಸಿದ ಅಪ್ಪನನ್ನು ತನ್ನ ಮಹತ್ವಾಕಾಂಕ್ಷೆಯೆಂಬ ಆಕ್ರೋಶದ ಬಿಸಿಯಲ್ಲಿ ಕರಗಿಸಿ ಹಾಕಿದ್ದಾನೆ. ಅವನ ಹೆಂಡತಿಯಂದಿರು, ಮಕ್ಕಳು ಅವನ ಆಕ್ರೋಶದ ಬೆಂಕಿಗೆ ಎಂದು ಆಹುತಿಯಾಗಿಬಿಡುತ್ತೇವೋ ಎನ್ನುವ ಭಯದಲ್ಲಿಯೇ ಅವನ ಸುತ್ತ ಜೀವನ ಸಾಗಿಸುತ್ತಿದ್ದಾರೆ. ಸಮಾಜ ತನ್ನನ್ನು ದುರ್ಬಲನೆಂದುಬಿಡಬಹುದು ಎಂಬ ಆತಂಕದಿಂದಲೇ ಒಂದು ಸನ್ನಿವೇಶದಲ್ಲಿ ಅವನು ಪ್ರೀತಿಸಿದ ಸಾಕು ಮಗನನ್ನು ಕೊಡಲಿಯೇಟಿನಲ್ಲಿ ಕೊಂದು ಬಿಡುತ್ತಾನೆ. ಎಲ್ಲರನ್ನೂ,
ಎಲ್ಲವನ್ನೂ ಹುರಿದು ಮುಕ್ಕಿಯೇಬಿಡುತ್ತೇನೆಂದು ಸದಾ ಕಾಲ ನಿಂತಿರುವ ಒಕಾಂಕೊನ ಈ ಕ್ರೌರ್ಯ ನೈಜವಾದದ್ದಾ? ಅವನ ಆಕ್ರೋಶದ ಮೂಲಬೇರುಗಳು ಎಲ್ಲಿ? ಎನ್ನುವುದನ್ನು ಅಶಿಬೆ ವಿವರಿಸುವುದು ನೋಡಿ. ಒಕಾಂಕೊನ ಇಡೀ ಜೀವನವನ್ನು ದೈಹಿಕ ಸೋಲು, ನಿಶ್ಶಕ್ತಿಗಳೆನ್ನುವ ಭಯಗಳು ಅತಿಕ್ರಮಿಸಿಕೊಂಡಿವೆ.

ಹಾಗಾಗಿ ದೈಹಿಕ ಕ್ರೌರ್ಯಗಳನ್ನು ಆನಂದಿಸುವ, ಎದುರು ಸಿಕ್ಕಿದ್ದನ್ನು ಬಗ್ಗುಬಡಿಯುವುದಕ್ಕಾಗಿ ಮುನ್ನುಗ್ಗುವ ಅವನು ಇಂದು ಅತ್ಯಂತ ಶಕ್ತಿಶಾಲಿ. ಪೌರುಷದ ಯಾವುದೇ ಕುರುಹುಗಳನ್ನು ತೋರದೇ ಸುಮ್ಮನೇ ಕುಳಿತು ಎದ್ದುಹೋದ ಅವನ ಅಪ್ಪನ ಆಕ್ರೋಶ ರಹಿತವಾದ, ಆಕಾಂಕ್ಷ ರಹಿತವಾದ ಮನೋ ಭಾವ ಅವನಲ್ಲಿ ಹುಟ್ಟಿಸಿದ ಅಸಹಾಯಕತೆಯ ಕೀಳರಿಮೆಯೇ ಅವನ ಈ ಭಯದ ಮೂಲ. ಕಥೆಯ ಉಳಿದ ಅಂಶಗಳು ಇಂತಿವೆ. ಒಕಾಂಕೊ ತನ್ನ ಪ್ರಾಬಲ್ಯವನ್ನು ಪ್ರತಿ ಕ್ಷಣವೂ ಸ್ಥಿರೀಕರಿಸುವ ಭರದಲ್ಲೇ ಒಮ್ಮೆ ಎಡವಿ ತನ್ನದೇ ಸಮುದಾಯದ ಮುಖಂಡನೊಬ್ಬನನ್ನು ಸಾಯಿಸಿ ಬಿಡುತ್ತಾನೆ. ಕೆಲವು ಸಮಯದ ಬಹಿಷ್ಕಾರಕ್ಕೆ ಗುರಿಯಾಗುವ ಅವನು ಹಿಂತಿರುಗಿ ಬರುವಷ್ಟರಲ್ಲಿ ಮಿಶನರಿಗಳು ತನ್ನ ಇಡೀ ಸೀಮೆಯ ಜನ-ಜೀವನವನ್ನು ತಮ್ಮ ಅಡಿಯಾಳಾಗಿ ಮಾಡಿಸಿ ಕೊಂಡುಬಿಟ್ಟಿರುತ್ತವೆ. ಎದುರುಗೊಳ್ಳುವ ಪರಿಸ್ಥಿತಿಗಳು ಅವನ ನಿಶ್ಶಕ್ತಿಯನ್ನು ಮೊದಲಬಾರಿಗೆ ರುಜುವಾತು ಮಾಡಿಬಿಡುತ್ತವೆ.

ಒಮ್ಮೆ ತಾನು ಅಸಹಾಯಕನೆಂದು ಅವನಿಗೆ ಮನದಟ್ಟಾದ ಕೂಡಲೇ ಸೋಲುವ ಭಯದಿಂದ ಒಕಾಂಕೊ ಹಗ್ಗಕ್ಕೆ ತನ್ನ 
ಕೊರಳೊಡ್ಡಿಕೊಂಡು ಬಿಡುತ್ತಾನೆ. ಅವನ ಸಮುದಾಯದ ಆಚರಣೆಗಳ ಅವಸರಗಳು ಕಡೆಗೆ ಅವನ ಅಂತ್ಯ ಸಂಸ್ಕಾರವನ್ನೂ ನಿರಾಕರಿಸಿ ಮಿಶನರಿಯ ಪ್ರತಿನಿಧಿಗಳೇ ಆ ಕಾರ್ಯ ನೆರವೇರಿಸಲು ಕಾರಣವಾಗುತ್ತವೆ. ತಾನು ಸೋಲುತ್ತೇನೆಂಬ ಆತಂಕ ವ್ಯಕ್ತಿಯಲ್ಲಿ ಬಗೆಹರಿಯದ ಕೀಳರಿಮೆಯನ್ನು ಹುಟ್ಟು ಹಾಕುತ್ತದಷ್ಟೇ ಅಲ್ಲ, ಅವನನ್ನು ಅತ್ಯಂತ ಜಾಗರೂಕನನ್ನಾಗಿಯೂ, ವೀರೋಚಿತನನ್ನಾಗಿಯೂ ಮಾಡುತ್ತದೆ ಎಂದು ಬಣ್ಣಿಸುವ ಸಾಲುಗಳಲ್ಲಿ ಇಡೀ ಕಥೆಯ ಮೂಲಸೆಲೆ ಅಡಕವಾಗಿದೆ. ಮುಂಚೆ ಎಷ್ಟೇ ಯಶಸ್ವಿಯಾಗಿ ದ್ದರೂ ಒಮ್ಮೆ ಸೋತ ವ್ಯಕ್ತಿಯನ್ನು ಸಾಮಾಜಿಕ ಪ್ರಜ್ಞೆಯು ಹೇಗೆ ನಿರಾಕರಿಸುತ್ತಾ ಸಾಗುತ್ತದೆ ಎನ್ನುವುದನ್ನು ಅಶಿಬೆಯ ಈ ಕಥೆ ಅರ್ಥವತ್ತಾಗಿ ನಿರೂಪಿಸಿದೆ. ಧಾರ್ಮಿಕ ಭಾವಕೋಶಗಳಿಗೆ ಜೊತೆಯಾಗುವ ಆಕ್ರೋಶದ, ಅಸಹನೆಯ ಆರ್ಬುದ ಇಡೀ ವ್ಯವಸ್ಥೆಯನ್ನು ರೋಗಗ್ರಸ್ಥ ಮಾಡುತ್ತಿರುವಾಗ ವರ್ತಮಾನವನ್ನು ತಿರಸ್ಕರಿಸುವ ಸಮಾಜಕ್ಕೆ ಸರಿದಾರಿ ಕಾಣಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಸಮಾಜವೊಂದಕ್ಕೆ ಖಚಿತವಾದ ಸಹಜ ನಿಲುವುಗಳಿಲ್ಲದೇ ಹೋದರೆ ಸರಳವೂ ಸಂಕೀರ್ಣವಾಗುತ್ತದೆ. ಅದಕ್ಕಾಗಿಯೇ ರಾಷ್ಟ್ರೀಯತೆಯೆಂಬ ಪರಿಕಲ್ಪನೆಗೆ ಭಯದ,
ಆತಂಕದ ಲೇಪ ಇದ್ದೇ ಇರುತ್ತದೆ ಎನ್ನುವುದು. 

ಅಸಂಗತವಾಗಿ ಹೋಗಿಬಿಡುತ್ತೇನೆ ಎಂದಾಗಲೇ ಧರ್ಮವೊಂದಕ್ಕೆ ಜಿಹಾದ್‌ನ ನಂಟು ದೊರೆಯುವುದು. ಧರ್ಮವನ್ನು ನಂಬಿ ನಡೆಯುವ ದೇಶವೊಂದು ಇಂತಹ ಕೀಳರಿಮೆಯಿಂದ ನಲುಗಲು ಆರಂಭಿಸಿದ ಮರುಗಳಿಗೆಯೇ ಅದು ತನ್ನ ಸೇನಾ ಸಂಪತ್ತುಗಳನ್ನು ವೃದ್ಧಿಸಿಕೊಂಡು ಸುದ್ದಿಮಾಡುತ್ತದೆ. ತನ್ನ ಜನ ಹಸಿವಿನಿಂದ ಸತ್ತರೂ, ಕೇಜಿಗಟ್ಟಲೆ ಪರಮಾಣು ಶಕ್ತಿಯ ಕೀಲಿಕೈಗಳನ್ನು ಜೇಬಿನಲ್ಲಿಟ್ಟುಕೊಂಡು ನಿಯಂತ್ರಣದ ನಾಟಕವಾಡುತ್ತಾ ನೆರೆರಾಷ್ಟ್ರಗಳನ್ನು ಹೆದರಿಸುವ ಪ್ರಯತ್ನಕ್ಕೆ ಕೈ ಹಾಕುತ್ತದೆ. ಕೀಳರಿಮೆಯ ಮೊದಲ ಅಭಿವ್ಯಕ್ತಿಯೇ ಮೇಲರಿಮೆ ಎನ್ನುವುದು ಸಾರ್ವತ್ರಿಕ ಸತ್ಯ!

***
ಇದೇ ಮೊದಲ ಬಾರಿಗೆ ನಮ್ಮ ಸೇನಾ ಪಡೆಗಳ ನಿರ್ವಹಣೆಗೆ ಅತಿ ಕನಿಷ್ಠ ಹಣವನ್ನು ಮೀಸಲಿಡಲಾಗಿದೆಯೆನ್ನುವುದು ದೊಡ್ಡ ಸುದ್ದಿಯಾಗಿ ಹರಿದಾಡುತ್ತಿದೆ. ಕೇಂದ್ರದ ಈ ಸಾಲಿನ ಒಟ್ಟು ಆಯವ್ಯಯದ ಕೇವಲ ಶೇ.7.8ರಷ್ಟು ಮಾತ್ರ ಅಂದರೆ, ಒಟ್ಟು ಜಿಡಿಪಿಯ ಕೇವಲ ಶೇ.1.6ರಷ್ಟು ಮೊತ್ತವನ್ನು ಮಾತ್ರ ಸೇನಾ ವೆಚ್ಚಕ್ಕೆ ಮೀಸಲಿಡಲಾಗಿಟ್ಟಿದ್ದು ಇದು ಜಿಡಿಪಿಯ ಅನುಪಾತಕ್ಕೆ ಹೋಲಿಸಿದಲ್ಲಿ 1962ರ ಭಾರತ-ಚೀನಾ ಯುದ್ಧದ ಕಾಲದಿಂದ ಮೀಸಲಿಟ್ಟ ಅತಿ ಕಡಿಮೆ ಆಯವ್ಯಯ ಮೊತ್ತ ಹಾಗೂ ಇದು ಅತ್ಯಂತ ಅಪಾಯಕಾರಿ ಎನ್ನುವುದು ಪ್ರಬಲವಾಗುತ್ತಿರುವ ಕೂಗು. ದೇಶವನ್ನು ಯುದ್ಧ ಸನ್ನದ್ಧ ಮಾಡುವಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರದ ಅನಾದರ ಇಡೀ ದೇಶವನ್ನು ಅತ್ಯಂತ ದೊಡ್ಡ ಅಪಾಯಕ್ಕೆ ನೂಕಿದೆ ಎನ್ನುವುದು ಈ ಆರೋಪದ ತಿರುಳು. ವಿಶ್ವಾದ್ಯಂತ ಸಕಾರಾತ್ಮಕವಾಗಿ ಸುದ್ದಿಯಾಗಬಹುದಾಗಿದ್ದ ಅಭಿನವ ಶಸ್ತ್ರತ್ಯಾಗದ ನೆಪವೊಂದಕ್ಕೆ ಇಂತಹ ದುರ್ವಿಧಿ! 

ಇಂತಹುದೊಂದು ಅಯಾಚಿತ ನಿರ್ಧಾರ ದೇಶವೊಂದರ ಧನಾತ್ಮಕ ಕ್ರಮವಾಗಿ ಇತರೆ ರಾಷ್ಟ್ರಗಳ ವೀರೋಚಿತ ಭಾವಗಳನ್ನು ತಲುಪಬಹುದಿತ್ತು. ಈ ಅಭೂತ ನಿಲುವಿಗೆ ಪ್ರತಿಕ್ರಿಯೆಯಾಗಿ ಸುಮ್ಮನೇ ಕೆಲಸವಿಲ್ಲದೇ ಕೂತಿರುವ ಯುಎನ್‌ಓ ಸಹಾ ಎಚ್ಚರಗೊಳ್ಳಬಹುದಿತ್ತು. ಆದರೆ ಆಗವೊ ಲ್ಲದು. ಎಂದು ಮಾತನಾಡಬೇಕೋ ಅಂದು ಮೌನವಾದರೆ ಮೌನ ಅರ್ಥ ಕಳೆದುಕೊಳ್ಳುತ್ತದೆ. ಎಂದು ಮೌನವಾಗಿರ 
ಬೇಕೋ ಅಂದು ಮಾತಿನ ಸರಣಿಯನ್ನು ಪೋಣಿಸುತ್ತಾ ಕೂತರೆ ಮಾತೂ ನಂಬಿಕೆ ಕಳೆದುಕೊಳ್ಳುತ್ತದೆ.

ಪರೋಕ್ಷ ಯುದ್ಧವನ್ನು ಸಾರುತ್ತಾ, ಸೋಲುತ್ತಲೇ ಗೆಲ್ಲುವ ಅಂತಾರಾಷ್ಟ್ರೀಯ ಭಯೋತ್ಪಾದಕರು, ಒಳಿತೆಂದು ಊಹಿಸಿ ಕೊಂಡೇ ಒಳಗಿನ ರಕ್ತ ಬಸಿದು ಬಸವಳಿಸುವ ಅಂತಾರಾಜ್ಯಗಳ ವೃತ್ತಿಪರ ನಕ್ಸಲ್‌ ಬಂಡುಕೋರರುಗಳನ್ನು ಸೋಲಿಸಲು ಇಂದು ಅನಿವಾರ್ಯವಾಗಿ ರಕ್ಷಣಾ ಕ್ಷೇತ್ರ ಬಲಗೊಳ್ಳಬೇಕೆನ್ನುವುದು ಸತ್ಯ. ಆದರೆ ನಿಧಾನವಾಗಿಯಾದರೂ ಶಸ್ತ್ರಸನ್ಯಾಸವನ್ನು ತೆಗೆದು ಕೊಳ್ಳುವ ಗಟ್ಟಿತನ ದೊಡ್ಡದು ಎಂದು ಅರ್ಥವಾದಲ್ಲಿ ಮಾತ್ರ ಮಾನವಕುಲ ಪ್ರಬಲಗೊಳ್ಳಲು ಸಾಧ್ಯ. ಆ ಗಟ್ಟಿತನದ ಅರ್ಥ ಗಾಂಧಿಯ ಒಣಗಿಹೋದ ಬೆತ್ತಲು ಎದೆಯ ಮೇಲೆ ಕೆತ್ತಲ್ಪಟ್ಟಿತ್ತು. ಬುದ್ಧನ ಅರೆ ನಿಮೀಲಿತ ಕಣ್ಣುಗಳ ರೆಪ್ಪೆಗಳ ಮೇಲೆ ಹಚ್ಚೆಯಾಗಿ ಹರಡಿತ್ತು. ಮೃದುತ್ವಕ್ಕಷ್ಟೇ ಕಲ್ಲನ್ನು ಕರಗಿಸುವ ಧೈರ್ಯ, ನಿರಾಳತೆಗಳು. ಹಾಗಾಗಿ ಅಲೌಕಿಕವೆನಿಸಿದರೂ ಅಮೂರ್ತ ವಾಗದ ಈ ಆಶಯ ನಿಜ ಆದಾಗಲಷ್ಟೇ ಜಗತ್ತು ಲೌಕಿಕಕ್ಕೆ ಬೇಕಾದ ತನ್ಮಯತೆ, ಸ್ಥೈರ್ಯಗಳನ್ನು ಗಳಿಸಿಕೊಳ್ಳುವುದು. ಕಡೆಗೆ ಲಾವೊತ್ಸುನ ದಾವ್‌ ದ ಜಿಂಗ್‌ ಎಂಬ ಬದುಕಿನ ಹಾದಿಯ ಒಂದು ಸಣ್ಣ ಸಾಲು: True fullness always seems empty.

*ಫ‌ಣಿಕುಮಾರ್‌ ಟಿ.ಎಸ್‌.

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.