ಅವ್ವನೆಂಬ ಆಧಾರಸ್ತಂಭಕ್ಕೆ ಆಸರೆಯಾಗಿ
Team Udayavani, Oct 26, 2018, 12:30 AM IST
ಇತ್ತೀಚೆಗೆ ಕೋಟಿಗಟ್ಟಲೆ ಹಣ ವ್ಯಯಿಸಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿದ.ಆಸ್ಪತ್ರೆಯ ತಲೆಬಾಗಿಲೆದುರು ಗಾಲಿ ಕುರ್ಚಿಯ ಮೇಲೆ ಕುಳಿತ ಅವ್ವನನ್ನು ಕರೆತಂದ. ಕತ್ತರಿ ಹಿಡಿಯಲು ಸಾಧ್ಯವಿಲ್ಲದ ಅವ್ವನ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು,ಗಾಲಿಕುರ್ಚಿಯ ಹಿಂದೆ ವಿನೀತನಾಗಿ ನಿಂತುಕೊಂಡು,ಬಂದ ಅತಿಥಿಗಳನ್ನೆಲ್ಲ ಸಾಲಾಗಿ ಅವಳ ಬದಿ ನಿಲ್ಲಿಸಿ,ಭವ್ಯ ಆಸ್ಪತ್ರೆಯ ಉದ್ಘಾಟನೆ ಮಾಡಿಸಿದ…!
“ನನಗ ಬರ್ಲಿಕ್ಕೆ ಲೇಟ್ ಆಗ್‌ತೈತಿ, ನೀವು ಮುಂದ ನಡದ ಬಿಡ್ರೀ, ಯಾಕಂದ್ರ ನಾನು ನಮ್ಮವ್ವಗ ಜಳಕ(ಸ್ನಾನ) ಮಾಡ್ಲಿ , ಊಟ ಮಾಡ್ಲಿ ಬರಬೇಕು…’
ಈಗ್ಗೆ ಮೂರು ವರ್ಷಗಳ ಹಿಂದೆ ವಿಜಯಪುರದ ಗೆಳೆಯನೊಬ್ಬನ ಗೃಹ ಪ್ರವೇಶಕ್ಕೆ ನಮ್ಮೊಡನೆ ಬರುತ್ತೇನೆಂದು ಹೇಳಿದ್ದ ವೈದ್ಯಮಿತ್ರನೊಬ್ಬ ನಾವೆಲ್ಲಾ ಹೊರಟು ನಿಂತಾಗ ಕೊನೆಯ ಗಳಿಗೆಯಲ್ಲಿ ಹೇಳಿದ ಮಾತಿದು. ನನಗೆ ಹೆಮ್ಮೆ ಎನಿಸಿತು, ಅವನ ಮಾತೃಸೇವೆಯ ರೀತಿಯನ್ನು ನೋಡಿ. ಅವನು ನನ್ನ ಸಹೋದ್ಯೋಗಿ ಸರ್ಜನ್. ತನ್ನ ತಾಯಿಯ ಬಗೆಗೆ ಅವನು ತೋರಿದ ಪ್ರೀತಿ, ಮರಣಕ್ಕೆ ಅತೀ ಸಮೀಪ ತಲುಪಿದ ಅವಳನ್ನು ಶತಾಯಗತಾಯ ಬದುಕಿಸಿಕೊಂಡು ಬಂದ ಘಟನೆ, ಎಲ್ಲ ನೆನಪಾದವು. ಹೌದು, ಅದೊಂದು ನೆನಪಿಡಲೇಬೇಕಾದ ತಾಯ ಪ್ರೀತಿಯ ಪರಾಕಾಷ್ಠೆಯ ಪ್ರಸಂಗ.
ಅವರದು ಮಧ್ಯಮ ವರ್ಗದ ಕುಟುಂಬ. ತಂದೆ ಸರಕಾರಿ ಸೇವೆಯಲ್ಲಿದ್ದು ಹಲವು ವರ್ಷಗಳ ಮೊದಲು ತೀರಿ ಹೋದರು. ಮನೆಯ ಜವಾಬ್ದಾರಿಯೆಲ್ಲ ತಾಯಿಯ ಮೇಲೆ. ತಂದೆ ಮಾಡಿದ್ದ ಆಸ್ತಿ, ಹಣ ಹೇಳಿಕೊಳ್ಳುವಷ್ಟು ಇರದಿದ್ದರೂ, ಆತ್ಮತೃಪ್ತಿಯ ಸುಖಜೀವನ ಸಾಗಿಸಿದವರು. ಜೊತೆಗೆ ಅದೇ ತಾನೇ ಪ್ರಾರಂಭಿಸಿದ ಇವನ ವೈದ್ಯಕೀಯ ವೃತ್ತಿಯ ಸಂಪಾದನೆ ಕೂಡ ಸಹಾಯಕ್ಕೆ ಬಂದಿತ್ತು. ಆ ಮನೆಯಲ್ಲಿ ಹಣಕ್ಕೆ ಕೊರತೆ ಇದ್ದಿತ್ತೇ ವಿನಹ ಪ್ರೀತಿಗೆ ಬರವಿರಲಿಲ್ಲ. ದಿನಾಲೂ ಸಂಜೆ ತನ್ನ ಕಷ್ಟಗಳನ್ನೆಲ್ಲ ತಾಯಿಯೆದುರು ಹೇಳುವುದು, ಆಕೆಯಿಂದ ಮಾರ್ಗದರ್ಶನ, ಸಲಹೆ ಪಡೆಯುವುದು ಅನೂಚಾನವಾಗಿ ವರ್ಷಗಟ್ಟಲೆ ನಡೆದಿತ್ತು.
ಪುಟ್ಟ ಮಕ್ಕಳು ತಮ್ಮ ತಾಯಂದಿರಿಂದ ಕಥೆ ಕೇಳಿದಂತೆ, ಪ್ರತಿದಿನ ರಾತ್ರಿ ಅವಳೊಡನೆ ಜೀವನಾನುಭವದ ವಿಷಯಗಳನ್ನು ಚರ್ಚಿಸುವುದನ್ನು, ಅಷ್ಟೇನೂ ಓದಿಲ್ಲದ ಅವ್ವ ನೀಡಿದ ಸಲಹೆಗಳನ್ನು ಶಿರಸಾವಹಿಸಿ ಪಾಲಿಸುವುದನ್ನು ತನ್ನ ಜೀವನದ ಧ್ಯೇಯವನ್ನಾಗಿ ಸಿಕೊಂಡುಬಿಟ್ಟಿದ್ದ. ಇವನ ಕಷ್ಟ ಕಾಲದಲ್ಲಿ ಅವಳು ಇವನಲ್ಲಿ ತುಂಬುತ್ತಿದ್ದ ಧೈರ್ಯ ಯಾವ “ವ್ಯಕ್ತಿತ್ವ ವಿಕಸನ ಗುರು’ವಿಗೂ ಕಡಿಮೆಯದಾಗಿರಲಿಲ್ಲ. ಎಷ್ಟಾದರೂ ಅವಳು ಜೀವನವೆಂಬ ವಿಶ್ವವಿದ್ಯಾಲಯಕ್ಕೆ ಕಷ್ಟಪಟ್ಟು ಮಣ್ಣು ಹೊತ್ತವಳಲ್ಲವೇ?
ತಾಯಿ ಪ್ರತಿದಿನ ತಪ್ಪದೆ ತೋಟಕ್ಕೆ ಹೋಗಿ ಅವರು ಸಾಕಿದ ಮೂರು ಎಮ್ಮೆಗಳನ್ನು ಮೇಯಿಸುತ್ತಿದ್ದರೆ, ಇವನೂ ಅವಳೊಡನೆ ಜೊತೆಯಾಗಿ, ಎಮ್ಮೆಗಳನ್ನು ಕಟ್ಟುವ ದಾಬೇಲಿಯನ್ನು ಚೆನ್ನಾಗಿ ಗುಡಿಸಿ ಸ್ವತ್ಛ ಮಾಡಿ ಎಮ್ಮೆಗಳ ಮೈ ತೊಳೆಯುವಾಗ ಅವ್ವನೊಡನೆ ಕೈಗೂಡಿಸುತ್ತಿದ್ದ. ಅವಳು ನೀರು ಹಾಕುವುದು, ಇವನು ಅವುಗಳ ಮೈ ಉಜ್ಜುವುದು. ಇಬ್ಬರೂ ಮಾತಾಡುತ್ತ ಆ ವೇಳೆಯ ಸಂತೋಷವನ್ನು ಆಸ್ವಾದಿಸುವುದು ಸಾಮಾನ್ಯವಾಗಿತ್ತು. ಆ ಕ್ಷಣದಲ್ಲಿ ತಾನು ಸರ್ಜನ್ ಎನ್ನುವುದನ್ನು ಪೂರ್ತಿ ಮರೆತು ಅವನ ಅವ್ವನ ಮುಖದಲ್ಲಿ ಮೂಡುತ್ತಿದ್ದ ಸಂತಸದ ಗೆರೆಗಳನ್ನು ಕಂಡು ಖುಷಿಪಡುತ್ತಿದ್ದ. ಯಾವುದೇ ಆಪರೇಷನ್ ಮಾಡಿದಾಗಿನ ಸಂತೋಷಕ್ಕಿಂತ ಹೆಚ್ಚಿನ ಸಂತಸ ಅಲ್ಲಿ ತನಗಾಗುತ್ತದೆಂದು ಅನೇಕ ಬಾರಿ ನನ್ನೆದುರು ಹೇಳಿದ್ದ. ಎಮ್ಮೆಗಳ ಹಾಲು ಕರೆದು ಮನೆಗೆ ತಂದು ಕಾಯಿಸಿ ಇಬ್ಬರೂ ಜೊತೆಯಾಗಿ ಕುಳಿತು ಊಟ ಮಾಡಿದಾಗಲೇ ಆ ದಿನದ ಪ್ರಾರಂಭ. ಎಂಥ ಧನ್ಯರು ಇಬ್ಬರೂ!
ಅದೊಂದು ದಿನ, ಈತನಿಗೆ ಒಂದು ಎಮರ್ಜೆನ್ಸಿ ಆಪರೇಶನ್ ಬಂದದ್ದರಿಂದ ಅವ್ವನೊಂದಿಗೆ ತೋಟಕ್ಕೆ ಹೋಗಲಾಗಿರಲಿಲ್ಲ. ಅದೇನೋ ತಳಮಳ, “ಇವತ್ತು ಅವ್ವನೊಡನೆ ನಾನಿಲ್ಲವಲ್ಲ’ ಎಂದು. ಆದರೂ ಕೂಡ ತನ್ನ ತಂಗಿಯನ್ನು ಅವಳೊಡನೆ ಕಳಿಸಿದ್ದ. ಆಪರೇಶನ್ ಮುಗಿಸಿ ಇನ್ನೇನು ಅವ್ವನೆಡೆಗೆ ತೆರಳಬೇಕು
ಅನ್ನುವುದರೊಳಗೆ, ತಂಗಿಯ ಫೋನ್: “ಅವ್ವ, ಹೆಂಡಿ ಕಸ ಮಾಡ್ತಿದ್ದಾಕಿ ಎಚ್ಚರ ತಪ್ಪಿ ಬಿದ್ದಾಳ. ಮಾತಾಡಿದ್ರ ಮಾತ ಆಡೊಲ್ಲಳು. ಲಗೂನ ಬಾ…’
ಇವನು ಹೋಗಿ ನೋಡಿದರೆ ಅವ್ವನಿಗೆ ಎಚ್ಚರವಿಲ್ಲ, ಮಾತಿಲ್ಲ. ಕಣ್ಣು ತೆರೆದು ನೋಡುತ್ತಿಲ್ಲ. ಆಕಾಶವೇ ತಲೆ ಮೇಲೆ ಬಿದ್ದಂತಾಯಿತು.
ಬೆಳಿಗ್ಗೆ ತಾನೇ “ನೀ ಬರ್ಲಿಲ್ಲಂದ್ರ ಬಿಡಪ, ನಾ ಅಂತೂ ಎಮ್ಮಿಗೋಳ ಹೊಟ್ಟಿಗಿ ಹಾಕಿ ಬರಾಕಿನಾ…’ ಎಂದು ಹಠ ಹಿಡಿದ ಅವ್ವ ಈಗ ಈ ಸ್ಥಿತಿಯಲ್ಲಿ!
ಅಲ್ಲಿಯೇ ಪರೀಕ್ಷೆ ಮಾಡಿ ನೋಡಿದರೆ, ಇದು ಮೆದುಳಿನ ರಕ್ತಸ್ರಾವ ಎಂದು ಗೊತ್ತಾಯಿತು. ತಮ್ಮದೇ ಅಂಬುಲೆನಲ್ಲಿ, ಬೆಳಗಾವಿಯ ಆಸ್ಪತ್ರೆಗೆ ಕರೆದೊಯ್ದು, ರಕ್ತ ಪರೀಕ್ಷೆ, ಸಿ.ಟಿ. ಸ್ಕಾ éನ್ ಇತ್ಯಾದಿಗಳನ್ನು ಮಾಡಿದಾಗ ತಿಳಿದು ಬಂದದ್ದೇನೆಂದರೆ, ಮೆದುಳಿನ ಒಂದು ರಕ್ತನಾಳ ಒಡೆದು ರಕ್ತಸ್ರಾವವಾಗಿ, ಮೆದುಳಿಗೆ ಒತ್ತಡ ಬಿದ್ದು, ಬಾವು ಬಂದಿತ್ತು. ನ್ಯುರೋಸರ್ಜನ್‌ರ ಅಭಿಪ್ರಾಯದಂತೆ ಇಂಥ ರೋಗಿಗಳು ಗುಣ ಮುಖರಾದದ್ದು ಕಡಿಮೆ. ಆದರೂ ಐ.ಸಿ.ಯು.ನಲ್ಲಿಟ್ಟು ಔಷಧೋಪಚಾರ, ಆರೈಕೆ ಪ್ರಾರಂಭಿಸಿ¨ªಾರೆ.
ಅವ್ವನ ಈ ಸ್ಥಿತಿ ಕಂಡು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿದೆ. ಪ್ರೀತಿಯ ತಾಯಿಯ ಈ ಸ್ಥಿತಿಗೆ ಮರುಗುತ್ತ, ಹಗಲು ಇರುಳುಗಳನ್ನು ಒಂದು ಮಾಡಿ ಅವಳ ಹತ್ತಿರ ಕುಳಿತೆ ಬಿಟ್ಟ, ಅವಳ ಮುಖವನ್ನೇ ದಿಟ್ಟಿಸುತ್ತ, ಈಗೋ ಇನ್ನಾವಾಗಲೋ ಕಣ್ತೆರೆದು ತನ್ನೆಡೆಗೆ ನೋಡಿ ಮುಗುಳ್ನಕ್ಕಾಳೆಂದು. ಊಟ ನಿದ್ರೆ ಬಿಟ್ಟು ಅವ್ವನ ಉಪಚಾರ ನಿರಂತರ ಸಾಗಿತು. ಆದರೆ, ಏನೂ ಪ್ರಯೋಜನವಾಗಲಿಲ್ಲ. ಹೀಗೆಯೇ ನಾಲ್ಕು ದಿನ ಉರುಳಿದವು. ಐದನೇ ದಿನ ಒಮ್ಮೆಲೇ ಪರಿಸ್ಥಿತಿ ಬಿಗಡಾಯಿಸಿತು. ಉಸಿರಾಟದಲ್ಲಿ ಏರು ಪೇರಾಗತೊಡಗಿತು. ಅದು ಸಾವು ಸಮೀಪಿಸಿದ್ದನ್ನು ತೋರಿಸುತ್ತಿತ್ತು. ಅವಳನ್ನು ನೋಡಿಕೊಳ್ಳುತ್ತಿದ್ದ ನ್ಯುರೋಸರ್ಜನರು ಬಂದು, “ಬದುಕುವ ಲಕ್ಷಣ ಇಲ್ಲವೆಂದೂ, ಬೇಕಾದರೆ ಈಗಲೇ ಮನೆಗೆ ಕರೆದುಕೊಂಡು ಹೋಗಬಹುದೆಂದು’ ಸೂಚಿಸಿದರು. ಆದರೆ ಈತ ಅದನ್ನೊಪ್ಪಲಿಲ್ಲ.
“ನಮ್ಮವ್ವ ಸಾಯಾಕ ಸಾಧ್ಯನ ಇಲ್ಲ. ನೀವು ಈಗ ಆಪರೇಷನ್ ಮಾಡ್ರೀ. ಅವಳು ಗ್ಯಾರಂಟಿ ಉಳಿತಾಳ. ಅವಳು ಮತ್ತ ನಮ್ಮ ಮನಿಯೊಳಗ ಬಂದ ಕುಂದರತಾಳ. ನಾ ಇನ್ನ ಹತ್ತಿಪ್ಪತ್ತು ವರ್ಷ ಅವಳ ಸೇವಾ ಮಾಡಾವ ಅದೀನಿ…’ ಎಂದು ಇವನೆಂದಾಗ, “ಹಾಗೆಲ್ಲ ಸಾಮಾನ್ಯ ಜನರ ಹಂಗ ಮಾತಾಡಬ್ಯಾಡ್ರಿ. ಸ್ವಲ್ಪ ವೈದ್ಯರ ಹಾಗೆ ವಿಚಾರ ಮಾಡ್ರಿ. ಈ ಸ್ಥಿತಿಯೊಳಗ ಆಪರೇಷನ್ ಮಾಡೂದು ಹ್ಯಾಂಗ ಸಾಧ್ಯ? ನಿಮ್ಮವ್ವ ಟೇಬಲ್ ಮ್ಯಾಲೆ ಸಾಯೋ ಸಾಧ್ಯತೆ ಅದ’ ಎಂದು ಹೇಳಿದರೂ ಕೂಡ ಇವನು ಹಠಕ್ಕೆ ಬಿದ್ದವನಂತೆ…
“ನಮ್ಮವ್ವನ್ನ, ನಾ ಹಿಂಗ ನಮ್ಮನೀಗೆ ಕರಕೊಂಡ ಹೋಗಾಕ ಸಾಧ್ಯ ಇಲ್ಲ. ಅಕಿ ಆರಾಮ ಆಗ್ತಾಳ. ನೀವು ಆಪರೇಶನ್ ಮಾಡ್ರಿ..!’ ಎಂಬ ಒಂದೇ ಮಾತು ಇವನದು.
ವೈದ್ಯರು ಈತನ ಮನೆಯವರನ್ನು, ಗೆಳೆಯರನ್ನು ಕರೆದು ಸ್ಥಿತಿಯನ್ನು ವಿವರಿಸಿ ಅವರ ಮುಖೇನ ತಿಳಿ ಹೇಳಿದರೂ ಇವನು ತನ್ನ ಹಠ ಬಿಡಲೇ ಇಲ್ಲ. ಕೊನೆಗೆ ಇವನ ಒತ್ತಾಯಕ್ಕೆ ಮಣಿದು ಏನಾದರಾಗಲಿ ಎಂದು ಆಪರೇಶನ್ ಮಾಡಿ ಮೆದುಳಿನ ಸುತ್ತ ಸಂಗ್ರಹಗೊಂಡಿದ್ದ ಹೆಪ್ಪುಗಟ್ಟಿದ ರಕ್ತವನ್ನು ಹೊರತೆಗೆದಿದ್ದಾರೆ.
ಆಶ್ಚರ್ಯವೆನ್ನುವಂತೆ ಟೇಬಲ್ ಮೇಲೆ ಅಂಥ ಅವಘಡ ಸಂಭವಿಸಿಲ್ಲ. ತಾಯಿ ಜೀವಂತವಾಗಿ ಹೊರಬಂದಾಗ ಇವನ ಸಂತೋಷಕ್ಕೆ ಪಾರವೇ ಇಲ್ಲ. ಅವ್ವ ಮತ್ತೆ ಮೊದಲಿನಂತಾಗುತ್ತಾಳೆಂಬ ಭರವಸೆಯ ಬೆಳ್ಳಿಗೆರೆ ಮಿಂಚತೊಡಗಿತು. ತನ್ನ ದೃಢ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸಿ, ಉಪಚಾರಕ್ಕೆ ನಿಂತುಬಿಟ್ಟ. ಸಾಮಾನ್ಯಸ್ಥಿತಿ ಸುಧಾರಿಸಿದೊಡನೆ ವೈದ್ಯರು ಡಿಸಾcರ್ಜ್ ಮಾಡಿ ಮುಂದೆ ಮನೆಯಲ್ಲೇ ನೋಡಿಕೊಳ್ಳುವಂತೆ ತಿಳಿಸಿ ಕಳಿಸಿದ್ದಾರೆ.
ಮುಂದಿನ ನಾಲ್ಕೆದು ತಿಂಗಳು ಇವನಿಗೆ ಆತಂಕದ ಕ್ಷಣಗಳು. ಹಗಲು ಇರುಳೆನ್ನದೆ ಅವ್ವನದ್ದೇ ಕಾಳಜಿ. ಈಗ ಕಣ್ಣು ತೆರೆದಾಳು, ಆಗ ತೆರೆದಾಳು ಎಂಬ ಆಸೆಯಿಂದ ಮನಸ್ಸು ಗಟ್ಟಿ ಮಾಡಿಬಿಟ್ಟಿದ್ದ. ಮೂಗಿನ ನಳಿಯ ಮುಖಾಂತರ ಆಹಾರ ನೀಡುವುದು, ಕಾಲ ಕಾಲಕ್ಕೆ ಅವಳ ಮಗ್ಗಲು ಬದಲಾಯಿಸುವುದು ಮುಂತಾದ ಅವ್ಯಾಹತವಾದ ಆರೈಕೆ, ಉಪಚಾರ ನಡೆಸಿದ. ಕಡೆಗೊಂದು ದಿನ, ಪವಾಡ ಸದೃಶ ಘಟನೆ ಸಂಭವಿಸಿಯೇಬಿಟ್ಟಿತು.
ಅವ್ವ ಕಣ್ಣು ತೆರೆದಳು!
ಇವನಿಗೆ ಸ್ವರ್ಗ ಮೂರೇ ಗೇಣು. ಸಂತೋಷದ ಪರಾಕಾಷ್ಠೆಯಲ್ಲಿ ಕುಣಿದಾಡಿಬಿಟ್ಟ. ಮಮತೆಯ ಅವ್ವ ಕಣ್ಣು ತೆರೆದು ತನ್ನೆಡೆಗೆ ನೋಡಿದಾಗಿನ ಕ್ಷಣದಲ್ಲಿ ತನಗಾದ ಭಾವನೆಯನ್ನು ವಿವರಿಸಲ ಸಾಧ್ಯ ಎಂದಿದ್ದ ನನ್ನ ಮುಂದೆ. ದುರಾದೃಷ್ಟವೆಂದರೆ ಆತನ ತಾಯಿಗೆ ಮಾತು ಬರಲಿಲ್ಲ, ನಡೆದಾಡಲು ಸಾಧ್ಯವಾಗಲಿಲ್ಲ!
“ಇರ್ಲಿ ಬಿಡ್ರಿ. ನಮ್ಮವ್ವ ನನ್ನ ಕಣ್ಣ ಮುಂದ ಅದಾಳಲ ಅಷ್ಟ ಸಾಕ ನನಗ..’ ಅನ್ನುತ್ತಾ ಸಮಾಧಾನ ಮಾಡಿಕೊಳ್ಳುತ್ತಾನೆ.
ಅದರ ನಂತರ ಈತನ ದಿನಚರಿಯ ಮುಖ್ಯ ಭಾಗವೆಂದರೆ ಅವ್ವನ ಉಪಚಾರ. ಉಳಿದಿದ್ದೆಲ್ಲ ಗೌಣ. ಬೆಳಿಗ್ಗೆ ಎಲ್ಲೊಡನೆ ಅವಳ ಸ್ನಾನ, ಊಟ ಮಾಡಿಸದೆ ಮನೆ ಬಿಡುವುದಿಲ್ಲ. ಮಧ್ಯಾಹ್ನ ಊಟದ ವೇಳೆಗೆ ಮನೆಗೆ ಬಂದು ಊಟ ಮಾಡಿಸಿ ಮತ್ತೆ ಆಸ್ಪತ್ರೆ. ರಾತ್ರಿ ಬಂದೊಡನೆ ಅವಳ ಎದುರು ಕುಳಿತು ಊಟ ಮಾಡಿಸಿ, ಹಾಗೆಯೇ ಅವಳ ಕುರ್ಚಿಯೆದುರು ನೆಲದ ಮೇಲೆ ಮಲಗಿ ಸುದ್ದಿಗಳನ್ನು ಹೇಳುತ್ತಾನೆ. ನಂತರ ಕುರ್ಚಿಯಿಂದ ಹಾಸಿಗೆಗೆ ವರ್ಗಾಯಿಸಿದ ನಂತರವೇ ಇವರ ಊಟ ನಿದ್ದೆ. ಮತ್ತೆ ರಾತ್ರಿ ಒಂದೆರಡು ಬಾರಿ ಅವಳ ಮಗ್ಗುಲು ಬದಲಾಯಿಸಿದಾಗಲೇ ಸಮಾಧಾನ. ಹೀಗೆ ದಣಿವಿಲ್ಲದಂತೆ ಸೇವೆ ಮಾಡತೊಡಗಿ ಆರೇಳು ವರ್ಷಗಳಾದವು. ಒಂದು ದಿನವೂ ಬೇಸರಿಸಿಕೊಂಡಿಲ್ಲ. ಬೇರೆ ಊರಿಗೆ ಹೋದರೆ ಎರಡು ದಿನಕ್ಕಿಂತ ಹೆಚ್ಚಿಗೆ ಹೋಗುವುದಿಲ್ಲ. ಗುಡಿ ಗುಂಡಾರಗಳಿಗೆ ಹೋಗಬೇಕಾದರೆ ಗಾಲಿ ಕುರ್ಚಿಯಲ್ಲಿ ಆಸೀನಳಾದ ಅವ್ವನನ್ನು ಮುಂದಿಟ್ಟುಕೊಂಡೇ ಹೋಗುವುದು. ಮದುವೆ, ಮಂಗಳ ಕಾರ್ಯಗಳಿಗೆಲ್ಲ ಅವಳು ಇರಲೇಬೇಕು. ಯಾರಾದರೂ ಎದುರಾದರೆ “ಬೇ ಎವ್ವ…ಇವರ ಗುರ್ತು ಸಿಕ್ಕತಿಲ್ಲ? ಇವರು ಇಂತಿಂಥವರು..’ ಎಂದು ಅವ್ವನೆಡೆಗೆ ನೋಡುತ್ತಾನೆ. ಅವಳ ಮುಖದಲ್ಲಿ ಮೂಡಿದ ಪರಿಚಯದ ಭಾವ ಇವನನ್ನು ಖುಷಿಪಡಿಸುತ್ತದೆ.
ಈಗ ಪರಿಸ್ಥಿತಿ ಬದಲಾಗಿದೆ. ಆರ್ಥಿಕ ಅಡಚಣೆಯೆಲ್ಲ ತೊಲಗಿ ಕೈಯಲ್ಲಿ ಹಣವಿದೆ. “ಅದಕ್ಕೆ ನಮ್ಮ ಅವ್ವನ ಆಶೀರ್ವಾದವೇ ಕಾರಣ’ಎನ್ನುತ್ತಾನೆ. ಇತ್ತೀಚೆಗೆ ಕೋಟಿಗಟ್ಟಲೆ ಹಣ ವ್ಯಯಿಸಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿದ.
“ಉದ್ಘಾಟನೆಗೆ ಯಾರನ್ನು ಕರೆಸುತ್ತೀ?’ಎಂದು ಕೇಳಿದರೆ ಕಣ್ಣು ತುಂಬಿಕೊಂಡು “ನಮ್ಮವ್ವನಲ್ಲದೆ ಮತ್ತಾರು ಅದಕ್ಕೆ ಅರ್ಹರು?’ ಅನ್ನುತ್ತ ಹೆಮ್ಮೆಯ, ಅಭಿಮಾನದ ನೋಟ ಬೀರಿದ. ಆಸ್ಪತ್ರೆಯ ತಲೆಬಾಗಿಲೆದುರು ಗಾಲಿ ಕುರ್ಚಿಯ ಮೇಲೆ ಕುಳಿತ ಅವ್ವನನ್ನು ಕರೆತಂದ. ಕತ್ತರಿ ಹಿಡಿಯಲು ಸಾಧ್ಯವಿಲ್ಲದ ಅವ್ವನ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಗಾಲಿಕುರ್ಚಿಯ ಹಿಂದೆ ವಿನೀತನಾಗಿ ನಿಂತುಕೊಂಡು, ಬಂದ ಅತಿಥಿಗಳನ್ನೆಲ್ಲ ಸಾಲಾಗಿ ಅವಳ ಬದಿ ನಿಲ್ಲಿಸಿ, ಭವ್ಯ ಆಸ್ಪತ್ರೆಯ ಉದ್ಘಾಟನೆ ಮಾಡಿಸಿದ…!
ಇತ್ತೀಚೆಗೆ ಒಂದು ನೃತ್ಯ ಕಾರ್ಯಕ್ರಮಕ್ಕೆ ಅವ್ವನನ್ನು ಗಾಲಿಕುರ್ಚಿ ಸಮೇತ ಕರೆತಂದು ಹಾಲ್‌ನಲ್ಲಿ ಕುಳ್ಳಿರಿಸಿಬಿಟ್ಟ. ನೃತ್ಯ ನೋಡುವಾಗ ಅವಳ ಕಣ್ಣಲ್ಲಿ ಕಂಡ ಸಂತೋಷ, ಸಂಭ್ರಮ, ತೃಪ್ತಿಯ ಮಿಂಚಿನಲ್ಲಿ ಇವನು ಬೆಳಗತೊಡಗಿದ್ದ!
– ಡಾ. ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.