ಭಾರತವೇ ತಂತ್ರಜ್ಞಾನ ಎಂಜಿನ್
Team Udayavani, Aug 15, 2022, 6:00 AM IST
ಸ್ವಾತಂತ್ರ್ಯದ ಈ ಅಮೃತ ಮಹೋತ್ಸವ ಹೊತ್ತಿನಲ್ಲಿ ನಾವು ಖುಷಿ ಪಡುವ ವಿಚಾರಗಳೂ ಸಾಕಷ್ಟಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ಅದ್ವಿತೀಯ ಸಾಧನೆ ಮಾಡಿದ್ದು, ಈಗಾಗಲೇ ಕಡಿಮೆ ವೆಚ್ಚದಲ್ಲೂ ಉಪಗ್ರಹ ಉಡಾವಣೆ ಮಾಡಬಹುದು ಎಂಬುದನ್ನು ಜಗತ್ತಿಗೇ ಸಾರಿ ಹೇಳಿದ್ದೇವೆ. ಅದರಲ್ಲೂ ಮಂಗಳಯಾನವಂತೂ ಜಗತ್ತಿಗೇ ಮಾದರಿಯಾಗಿತ್ತು. ಹಾಗೆಯೇ, ಡಿಜಿಟಲೀಕರಣದ ವಿಚಾರದಲ್ಲೂ ಬೇರೆಯವರಿಗಿಂತ ನಾವು ಮುಂದೆ ಇರುವುದು ಹೆಮ್ಮೆಯ ವಿಚಾರ. ಇಂಟರ್ನೆಟ್ ತಡವಾಗಿ ಬಂದರೂ, ಅದನ್ನು ಅನ್ವಯ ಮಾಡಿಕೊಳ್ಳುವಲ್ಲಿ ಮುಂದಿದ್ದೇವೆ. ಮುಂದಿನ ದಿನಗಳಲ್ಲಿ ಭಾರತವೇ ಡಿಜಿಟಲೀಕರಣದ ಹೃದಯವಾಗಲಿದೆ ಎಂಬುದು ಖಾತ್ರಿ.
ತ್ವರಿತಗತಿಯಲ್ಲಿ ಕೃಷಿ ಸುಧಾರಣೆಯಾಗಲಿ
ಸ್ವಾತಂತ್ರ್ಯ ಬಂದು ಆಗಷ್ಟೇ ದಶಕ ಕಳೆದಿತ್ತು. ಒಂದು ದೇಶದಿಂದ ಮತ್ತೂಂದು ದೇಶಕ್ಕೆ ಹೋಗುವುದೇ ದೊಡ್ಡ ಸವಾಲಾ ಗಿತ್ತು. ಇಂತಹ ಸಂದರ್ಭದಲ್ಲಿ ಭೂಮಿಯಿಂದಲೇ ಆಚೆ ನೆಗೆದು, ಪ್ರಪಂಚದ ಆಗು ಹೋಗು ಗಳನ್ನು ನೋಡುವ ಕಲ್ಪನೆಯೂ ಇರಲಿಲ್ಲ. ಆ ಕಲ್ಪನೆಗೆ ರೆಕ್ಕೆಪುಕ್ಕ ಕಟ್ಟಿದ್ದು ಭಾರತೀಯ ಬಾಹ್ಯಾಕಾಶ ವಿಜ್ಞಾನ. ಅಷ್ಟೇ ಅಲ್ಲ, ಎಲ್ಲ ಭಾಗಗಳೊಂದಿಗೆ ಸಂಪರ್ಕ ಸಾಧಿಸುವ ಸಾಹಸಕ್ಕೂ ಕೈಹಾಕಿತು. ಇಂದು ಅದೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಾವಿದ್ದೇವೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿರುವ ಬೆರಳೆಣಿಕೆಯಷ್ಟು ದೇಶಗಳಲ್ಲಿ ನಾವೂ ಒಬ್ಬರಾಗಿದ್ದೇವೆ. ಇದು ಭಾರತದ ಹೆಗ್ಗಳಿಕೆ.
ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಪೈಪೋಟಿ ನಡೆಸಬೇಕಾದರೆ ತನ್ನಲ್ಲಿರುವ ಎಲ್ಲ ಸಾಮರ್ಥ್ಯ ವನ್ನು ಒಗ್ಗೂಡಿಸಿ ನೇರವಾಗಿ ಹೊಸ ತಂತ್ರಜ್ಞಾನಗಳ ಕಡೆಗೆ ಕಪ್ಪೆಯಂತೆ ಜಿಗಿಯಬೇಕಾದ ಅನಿವಾರ್ಯತೆ ಅಂದು ಭಾರತಕ್ಕಿತ್ತು. ಬಾಹ್ಯಾಕಾಶ ತಂತ್ರಜ್ಞಾನದ ಮಟ್ಟಿಗೆ ಹೇಳುವುದಾದರೆ, ಇದರಲ್ಲಿ ಯಶಸ್ವಿಯೂ ಆಯಿತು. ಅದರ ಫಲವಾಗಿ ಇಂದು ಮೀನು ಗಾರರು ಎಲ್ಲಿ ಹೋದರೆ ಮೀನು ಸಿಗುತ್ತದೆ? ಎಲ್ಲಿ ಚಂಡಮಾರುತ ಅಪ್ಪಳಿಸ ಲಿದೆ? ಕೃಷಿ ಬೆಳೆಗಳ ಮುನ್ಸೂಚನೆ ಇಂತಹ ಹತ್ತಾರು ಮಾಹಿತಿಗಳು ಕುಳಿತಲ್ಲಿಯೇ ದೊರೆಯುತ್ತಿವೆ. ಅಷ್ಟೇ ಯಾಕೆ, ದೂರ ಸಂವೇದಿ ಉಪಗ್ರಹಗಳಿಂದಲೇ ಮಾಹಿತಿ ಪಡೆದು ನಾಲ್ಕು ಲಕ್ಷ ಕೊಳವೆಬಾವಿಗಳನ್ನು ಕೊರೆಯಲಾಗಿದೆ.
ಇಷ್ಟು ಸಾಕೇ? ಇಲ್ಲ, ನಮ್ಮಲ್ಲಿ ಈಗಿರುವ ಸಂಪನ್ಮೂಲ ಕೊರತೆಯಲ್ಲೂ ಹೆಚ್ಚಿನ ರೀತಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಬಳಸಿಕೊಂಡು ಸಾಮಾನ್ಯರ ದೈನಂದಿನ ಬದುಕಿನಲ್ಲಿ ಮತ್ತು ದೇಶದ ಬೆನ್ನೆಲುಬು ಕೃಷಿಯಲ್ಲಿ ಸುಧಾರಣೆಗಳನ್ನು ತರುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಬೆಳವಣಿಗೆಗಳೂ ನಡೆಯುತ್ತಿವೆ. ಆದರೆ, ಅದು ಇನ್ನಷ್ಟು ತ್ವರಿತ ಗತಿಯಲ್ಲಿ ಆಗಬೇಕಿದೆ.
ಬಾಹ್ಯಾಕಾಶಕ್ಕೆ ಸಂಬಂಧಿಸಿದ ಯೋಜನೆಗಳು ಈ ಮೊದಲು ಸರಕಾರದ ಅನುದಾನವನ್ನು ಅವಲಂಬಿಸಿ ದ್ದವು. ಆದರೆ, ಈಗ ಖಾಸಗಿ ಸಂಸ್ಥೆಗಳು ಕೂಡ ಈ ಕ್ಷೇತ್ರದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳು ತ್ತಿವೆ. ಸ್ವತಂತ್ರವಾಗಿ ಬಾಹ್ಯಾಕಾಶ ಪ್ರವಾಸೋದ್ಯಮ, ಬಾಹ್ಯಾಕಾಶ ಅಡ್ವೆಂಚರ್, ಬಾಹ್ಯಾಕಾಶ ಗಣಿಗಾರಿಕೆ, ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವ ಕೆಲಸವನ್ನು ಸರಕಾರವೂ ಮಾಡುತ್ತಿದೆ. ಇವು ಇನ್ನಷ್ಟು ಶೀಘ್ರ ಗತಿಯಲ್ಲಿ ನಡೆಯಬೇಕು. ಆಗ ದೇಶದ ಅರ್ಥ ವ್ಯವಸ್ಥೆಯಲ್ಲಿ ಬಾಹ್ಯಾಕಾಶ ಕ್ಷೇತ್ರ ಗಮನಾರ್ಹ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
ಇನ್ನು ಬಾಹ್ಯಾಕಾಶ ಸೇವೆ ಮತ್ತು ಮೂಲಸೌಕರ್ಯ ಸೇರಿ 400 ಬಿಲಿಯನ್ ಡಾಲರ್ ಇದೆ. ಇದರಲ್ಲಿ ಭಾರತದ ಪಾಲು ಕೇವಲ ಶೇ.2ರಿಂದ 3ರಷ್ಟಿದೆ. ಅದನ್ನು 10ರಿಂದ 20ಕ್ಕೆ ತಲುಪಿಸುವುದು ನಮ್ಮ ತತ್‌ಕ್ಷಣದ ಗುರಿ. ಪ್ರಸ್ತುತ ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ಸಾಧನೆಯು ಆ ಗುರಿಗೆ ಅಡಿಪಾಯವಾಗಿದೆ. ಅದನ್ನು ಬಳಸಿಕೊಂಡು ನಾವು ನುಗ್ಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು, ಉದ್ಯಮಗಳು, ಸ್ಟಾರ್ಟ್‌ಅಪ್‌ಗ್ಳು ಕೂಡ ಮುಂದೆಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.
ಈಚೆಗೆ ಅಮೃತ ಮಹೋತ್ಸವದ ಅಂಗವಾಗಿ ದೇಶದ 750 ಶಾಲಾಹೆಣ್ಣುಮಕ್ಕಳು ಅತಿ ಚಿಕ್ಕ ರಾಕೆಟ್ ಉಡಾವಣೆ ಮಾಡಿದರು. ಇದರಲ್ಲಿ ಸಣ್ಣಪುಟ್ಟ ತೊಂದರೆಗಳು ಕಂಡುಬಂದವು. ಹಾಗಂತ ನಿರಾಸೆ ಆಗಬೇಕಿಲ್ಲ. ಯಾವೊಂದು ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿ, ಕಾರ್ಯರೂಪಕ್ಕೆ ತರುವಾಗ ತೊಂದರೆಗಳು ಸಹಜ. ಇದರಿಂದ ನಮ್ಮಲ್ಲಿನ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ. ಏನೂ ಇಲ್ಲದೆ ಮಾಡುವುದು ಗುಡ್‌ಥಿಂಗ್. ಹಾಗೆ ನೋಡಿದರೆ, ನಮ್ಮ ಮೊದಲ ಎಸ್‌ಎಲ್‌ವಿ, ಪಿಎಸ್‌ಎಲ್‌ವಿ ಸೇರಿದಂತೆ ಎಲ್ಲ ಪ್ರಾಜೆಕ್ಟ್ಗಳಲ್ಲೂ ಒಂದಿಲ್ಲೊಂದು ಅಡಚಣೆ ಕಂಡುಬಂದಿದ್ದವು.
ಅದೇ ರೀತಿ, “ಚಂದ್ರಯಾನ-2′ ಬಗ್ಗೆ ಹೇಳುವು ದಾದರೆ, ಲ್ಯಾಂಡರ್ ತನ್ನ ಕಕ್ಷೆಗೆ ಸೇರಲಿಲ್ಲ ಎನ್ನುವುದನ್ನು ಹೊರತುಪಡಿಸಿದರೆ, ಉಳಿದೆಲ್ಲ ಕಾರ್ಯವೂ ಉತ್ತಮವಾಗಿ ನಡೆಯುತ್ತಿದೆ. ಚಂದ್ರಯಾನ-2 ಸಾಕಷ್ಟು ಮಾಹಿತಿಯನ್ನು ಸಂಗ್ರಹ ಮಾಡಿ ನಮಗೆ ನೀಡುತ್ತಿದೆ. ಚಂದ್ರಯಾನ-1ಕ್ಕಿಂತಲೂ ಹೆಚ್ಚು ಸಾಮರ್ಥ್ಯ ಇರುವ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಅಳವಡಿಸಲಾಗಿತ್ತು. ಅದು ನಿರಂತರವಾಗಿ ಮಾಹಿತಿ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಇದು ಸಾಕಷ್ಟು ಮಾಹಿತಿ ನೀಡಲಿದೆ. ಅದರಲ್ಲಿ ಮುಖ್ಯವಾಗಿ ಇಮೇಜಿಂಗ್ ಸ್ಪೆಕ್ಟ್ರೋ ಮೀಟರ್. ಐದು ಮೈಕ್ರಾನ್ ತರಂಗಾಂತರದವರೆಗೂ ನೋಡಲಿದೆ. ರೇಡಾರ್ “ಡ್ಯುವಲ್ ಫ್ರಿಕ್ವೆನ್ಸಿ’ಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಚಂದ್ರನಲ್ಲಿ ಐಸ್ ಬೇರೆ ಬೇರೆ ರೀತಿಯಲ್ಲಿರುವುದನ್ನು ತಿಳಿಯಲು ಸಾಧ್ಯವಾಗುತ್ತದೆ.
-ಡಾ| ಎ.ಎಸ್. ಕಿರಣ್ ಕುಮಾರ್,
ಇಸ್ರೋದ ಮಾಜಿ ಅಧ್ಯಕ್ಷರು
ಡಿಜಿಟಲೀಕರಣಕ್ಕೆ ಭಾರತವೇ ಹೃದಯ
ಇಡೀ ದೇಶ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. 1947ರಲ್ಲಿ ನಮಗೆ ರಾಜ ಕೀಯ ಸ್ವಾತಂತ್ರ್ಯ ಸಿಕ್ಕಿತು ನಿಜ, ಆದರೆ ಆರ್ಥಿಕ ಸ್ವಾತಂತ್ರ್ಯದ ಸವಿ ಅನುಭವಿಸಲು ಸಾಧ್ಯವಾಗಿದ್ದು 90ರ ದಶಕದಲ್ಲಿ ಅಂದರೆ ಉದಾರೀಕರಣದ ನೀತಿಗಳಿಗೆ ನಾವು ತೆರೆದುಕೊಂಡ ನಂತರ ಎಂದೇ ಹೇಳಬೇಕಾಗುತ್ತದೆ. ಈ ಅಲ್ಪಾವಧಿಯಲ್ಲೇ ಅನೇಕ ಸವಾಲುಗಳನ್ನು ಮೀರಿ “ತಂತ್ರಜ್ಞಾನ ಪ್ರಜಾ ಪ್ರಭುತ್ವ’ದ ಹೊಸಭಾಷ್ಯ ಬರೆದಿದ್ದು ಭಾರತದ ಹೆಗ್ಗಳಿಕೆ.
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಪರಿಕಲ್ಪನೆಯೊಂದಿಗೆ ಭಾರತವು ಜಾಗತಿಕ ಮಟ್ಟದಲ್ಲಿ ಡಿಜಿಟಲೀಕರಣದಲ್ಲಿ ಅಕ್ಷರಶಃ ಕ್ರಾಂತಿ ಮಾಡುತ್ತಿದೆ. ಇದರಡಿ ಸೃಷ್ಟಿಯಾದ ಬಹುವಿಧ ಮಾರುಕಟ್ಟೆ ವೇದಿಕೆಗಳು ಡಿಜಿಟಲ್ ಆಧಾರಿತ ಸರಕು ಸಾಗಣೆ ವ್ಯವಸ್ಥೆ ರೂಪಿಸಿವೆ. ಪರಿಣಾಮ 1.4 ಬಿಲಿಯನ್ ಭಾರತೀಯರು ಈ ಹೊಸ ವ್ಯವಸ್ಥೆಗೆ ಸೇರ್ಪಡೆಗೊಂಡಿದ್ದಾರೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಪ್ರಜಾಪ್ರಭುತ್ವಕ್ಕೆ ಸಾಕ್ಷಿ. ಈ ನಿಟ್ಟಿನಲ್ಲಿ ಹೇಳುವುದಾದರೆ, ಭಾರತದ “ತಂತ್ರಜ್ಞಾನ ಎಂಜಿನ್’ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಉತ್ಕೃಷ್ಟಗೊಳಿಸಿದೆ.
ಡಿಜಿಟಲ್ ಮಂತ್ರದ ಮೋಡಿ
ಇದು ರಾಷ್ಟ್ರದ ಉದ್ಯಮ ವರ್ಗ ಮತ್ತು ಕಳೆದ ಮೂರು ದಶಕಗಳಲ್ಲಿ ಬಂದುಹೋದ ಸರಕಾರಗಳ ನೀತಿಗಳ ಕೊಡುಗೆ ಎಂದರೆ ತಪ್ಪಾಗದು. ಇಂದು ಡಿಜಿಟಲ್ ಕ್ಷೇತ್ರದಲ್ಲಿ ಭಾರತವು ವಿಶ್ವದ ಮೊದಲ ಮೂರು ರಾಷ್ಟ್ರಗಳಲ್ಲಿ ಒಂದಾಗಿದೆ. ಮುಂದಿನ ಎರಡೂವರೆ ದಶಕಗಳ ಹೊತ್ತಿಗೆ ನಾವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಿಕೊಳ್ಳಲಿದ್ದೇವೆ. ನಿಸ್ಸಂದೇಹವಾಗಿ ಆ ವೇಳೆಗೆ ಭಾರತವು ವಿಶ್ವದ ಡಿಜಿಟಲೀಕರಣದ ಹೃದಯವಾಗಿ ಹೊರಹೊಮ್ಮಲಿದೆ. ಮಾತ್ರವಲ್ಲ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಲಿದೆ. ಇದೆಲ್ಲವೂ ಸಾಧ್ಯವಾಗಿದ್ದು 2015ರ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಪಠಿಸಿದ “ಡಿಜಿಟಲ್ ಇಂಡಿಯಾ’ ಮಂತ್ರದಿಂದ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ಭಾರತ ಪ್ರಾಬಲ್ಯ ಹೊಂದಿದೆ. ವಾರ್ಷಿಕ 175 ಬಿಲಿಯನ್ ಡಾಲರ್ ಮೊತ್ತದ ಸಾಫ್ಟ್ವೇರ್ ಅನ್ನು ರಫ್ತು ಮಾಡುತ್ತಿದ್ದು, 5.1 ದಶಲಕ್ಷ ಜನರಿಗೆ ಉದ್ಯೋಗ ನೀಡಿದೆ. ಒಟ್ಟಾರೆ ಜಾಗತಿಕ ಸಾಫ್ಟ್ವೇರ್ ಹೊರಗುತ್ತಿಗೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. 60ರಷ್ಟಿದೆ. ಜಗತ್ತಿನ ಹತ್ತು ಟಾಪ್ ಮಾಹಿತಿ ತಂತ್ರಜ್ಞಾನ ಸೇವಾ ಕಂಪೆನಿಗಳಲ್ಲಿ ಐದು ಭಾರತೀಯ ಮೂಲದ ಕಂಪೆನಿಗಳಾಗಿವೆ. ಇನ್ನು ಮೊದಲ ಐದ ರಲ್ಲಿ ಮೂರು ಭಾರತೀಯ ಕಂಪೆನಿಗಳಾಗಿವೆ. ಟಾಪ್ ಹತ್ತು ಕಂಪೆನಿಗಳಲ್ಲಿ ಮೂರು ಮಿಲಿ ಯನ್‌ಗೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುವ 6 ಮಿಲಿಯನ್ ಸಾಫ್ಟ್ವೇರ್ ಉದ್ಯೋಗಿಗಳಲ್ಲಿ ಒಂದು ಮಿಲಿಯನ್ ಭಾರತೀಯರಾಗಿದ್ದಾರೆ. ಇದು ನಮ್ಮ ದೇಶದ ಹೆಮ್ಮೆ ಎಂದು ಹೇಳಬಹುದು.
ಬೆಳವಣಿಗೆ ಹಾದಿ…
ಅಂದಹಾಗೆ, ಸ್ವಾತಂತ್ರ್ಯದ ಆರಂಭಿಕ ದಿನಗಳಲ್ಲಿ ದೇಶದ ಆಂತರಿಕ ವೃದ್ಧಿ ದರ (ಜಿಡಿಪಿ) ನಿರೀಕ್ಷೆಯಂತೆ ತುಂಬಾ ಕಡಿಮೆ ಇತ್ತು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ದರದ ಮೇಲಿನ ನಿಯಂತ್ರಣ, ಲೈಸೆನ್ಸ್ ರಾಜ್, ಖಾಸಗಿ ಬಂಡವಾಳವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ಫಲವಾಗಿ ದೇಶದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ಶೇ. 3.5ರಷ್ಟು ತಲುಪಿದೆ. ಆಗ ವಿಶ್ವದ ಸಿಎಜಿಆರ್ ಶೇ. 4.5ರಷ್ಟಿತ್ತು. ಇದಾದ ಮೇಲೆ 1991ರಲ್ಲಿ ಜಾಗತಿಕ ಅರ್ಥವ್ಯವಸ್ಥೆ ಪ್ರವರ್ಧಮಾನಕ್ಕೆ ಬರಲು ಶುರುವಾಯಿತು. ಆಗ ಭಾರತದ ಜಿಡಿಪಿ 275 ಬಿಲಿಯನ್ ಡಾಲರ್ ಇತ್ತು. ಇಂದು 3.16 ಟ್ರಿಲಿಯನ್ ಡಾಲರ್ ಇದ್ದು, ಸಿಎಜಿಆರ್ ಶೇ. 8.2ರಷ್ಟಿದೆ. ಇದರಲ್ಲಿ ಉದ್ಯಮಿಗಳ ಕೊಡುಗೆ ಅಪಾರ.
ದೇಶಾದ್ಯಂತ ಇಂದು 75 ಸಾವಿರಕ್ಕೂ ಅಧಿಕ ಸ್ಟಾರ್ಟ್ ಅಪ್ ಇವುಗಳ ಮೌಲ್ಯ 450 ಬಿಲಿಯನ್ ಡಾಲರ್‌ನಷ್ಟಿದೆ. 105 ಯುನಿಕಾರ್ನ್ಗಳಿವೆ. 2014-21ರ ಅವಧಿಯಲ್ಲಿ ಸುಮಾರು 120 ಬಿಲಿಯನ್ ಡಾಲರ್ ಬಂಡವಾಳ ಹರಿದುಬಂದಿದೆ. 2022-23ರ ಆರ್ಥಿಕ ವರ್ಷದಲ್ಲಿ ಈ ಸ್ಟಾರ್ಟ್‌ಅಪ್ ಹೆಚ್ಚುವರಿಯಾಗಿ 120ರಿಂದ 150 ಬಿಲಿಯನ್ ಡಾಲರ್ ಬಂಡವಾಳ ಆಕರ್ಷಿಸುವ ನಿರೀಕ್ಷೆ ಇದೆ.
“ಬೆಳವಣಿಗೆ ನಡುವೆ ಮೈಮರೆಯುವಂತಿಲ್ಲ’
ಈ ಎಲ್ಲ ಬೆಳವಣಿಗೆಗಳ ನಡುವೆ ನಾವು ನಿರಾತಂಕವಾಗಿ ಕುಳಿತುಕೊಳ್ಳುವಂತಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದ ಹೊಸ ಆವಿಷ್ಕಾರಗಳು ನಿರಂತರವಾಗಿರಬೇಕು. ಈ “ಟೆಕ್ನಾಲಜಿಕಲ್ ಲೀಡರ್‌ಶಿಪ್’ ಮುಂದುವರಿಸಿಕೊಂಡು ಹೋಗಬೇಕಾದರೆ, ಉನ್ನತ ಶಿಕ್ಷಣದಲ್ಲಿ ಹೂಡಿಕೆ ಅವಶ್ಯಕತೆ ಇದೆ. ನಾವು ತಂತ್ರಜ್ಞಾನದ ತಜ್ಞರು, ಡಾಕ್ಟರೆಟ್, ಮಾಸ್ಟರ್‌ಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತೀಯ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಿಸಬೇಕಿದೆ. ಈ ಮಧ್ಯೆ ಇತರ ಆರ್ಥಿಕತೆಯ ಕ್ಷೇತ್ರಗಳಾದ ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಇದರಲ್ಲಿ ಕೂಡ ಹೆಚ್ಚು ಹೂಡಿಕೆ ಅಗತ್ಯವಿದೆ.
-ಟಿ.ವಿ. ಮೋಹನ್‌ದಾಸ್ ಪೈ,
ಅಧ್ಯಕ್ಷರು, ಆರಿನ್ ಕ್ಯಾಪಿಟಲ್ ಪಾರ್ಟನರ್
ನಿಶಾ ಹೊಳ್ಳ, ಟೆಕ್ನಾಲಜಿ ಫೆಲೋ, ಸಿ- ಕ್ಯಾಂಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.