ಶಿಕ್ಷಣದಲ್ಲಿ ಭಾರತೀಯ ಭಾಷೆಗಳಿಗಿರಲಿ ಪ್ರಾಶಸ್ತ್ಯ
Team Udayavani, Oct 8, 2021, 6:20 AM IST
ಶಿಕ್ಷಣ ವ್ಯಕ್ತಿಯ ಬೌದ್ಧಿಕ, ನೈತಿಕ, ಭಾವನಾತ್ಮಕ ಸಾಮರ್ಥ್ಯಗಳನ್ನು ಹೆಚ್ಚಿಸಿ ಮಾನಸಿಕವಾಗಿ ಸದೃಢ ಗೊಳಿಸುವ ತಳಹದಿಯಾಗಿದೆ. ಶಿಕ್ಷಣ ಎಂದರೆ “ಅಕ್ಷರ ಮತ್ತು ಧ್ವನಿಗಳ ಮೇಳೈಸುವಿಕೆಯ ಸುಜ್ಞಾ ನದ ದಾರಿದೀಪ’. ನಮ್ಮ ದೇಶ ಸಾವಿರಾರು ಭಾಷೆಗಳ, ನೂರಾರು ಸಂಸ್ಕೃತಿಗಳ ಜ್ಞಾನ ನೀಡುವ ನೆಲೆವೀಡು. ಈ ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಸಾರುವ ಭಾರತೀಯ ಭಾಷಾ ಶಿಕ್ಷಣ ವಿಶ್ವಕ್ಕೆ ಮಾದರಿಯಾಗಿದೆ.
ಶಿಕ್ಷಣದಲ್ಲಿ ಹೊಸತನದ ಸ್ವರೂಪವು ಮಾನವ ಬದುಕಿಗೆ ಹೊಸ ಚಿತ್ತಾರವನ್ನು ಬರೆಯುವ ಮತ್ತು ಭಾಷೆಗಳ ಸಾಹಿತ್ಯ ಕೃಷಿಗೆ ಉತ್ತೇಜನ ನೀಡುವ ಮುನ್ನುಡಿಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ “ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020’ನ್ನು ಅನುಷ್ಠಾನಗೊಳಿಸುತ್ತಿರುವುದು ಸ್ವಾಗ ತಾರ್ಹ. ಇದನ್ನು ನಮ್ಮ ರಾಜ್ಯದಲ್ಲಿ ಮೊದಲು ಜಾರಿಗೊಳಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಕೇಂದ್ರದಿಂದ ಹೊರಡಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ತ್ರಿಭಾಷಾ ಸೂತ್ರ ಮತ್ತು ಪದವಿ ಶಿಕ್ಷಣದಲ್ಲಿ ವಿಷಯ ಮತ್ತು ಭಾಷೆಗಳ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗೆ ನೀಡಲಾಗಿದೆ. ಪದವಿಯಲ್ಲಿ ವಿದ್ಯಾರ್ಥಿಯು ತಾನು ಓದುವ ವಿಷಯ ಮತ್ತು ಯಾವುದಾದರೂ ಎರಡು ಭಾಷೆಗಳನ್ನು ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಂಡು ಓದಲು ಅವಕಾಶ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಂದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತ, ವಿಷಯಾಧಾರಿತ ಮತ್ತು ಆಯ್ಕೆ ಆಧಾರಿತ ರಾಷ್ಟ್ರೀಯ ಭಾವೈಕ್ಯದ ಶಿಕ್ಷಣ ಎಂಬ ಘೋಷ ವಾಕ್ಯ ವನ್ನು ಹೊರ ಹೊಮ್ಮಿಸುತ್ತಿದೆ. ಹಿಂದಿ, ಸಂಸ್ಕೃತ ಇತ್ಯಾದಿ ಭಾರತೀಯ ಭಾಷೆಗಳ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡುವ, ಮೌಲ್ಯಾಧಾರಿತ ಶಿಕ್ಷಣ ವನ್ನು ಅಳವಡಿಸುವ, ವಿದ್ಯಾರ್ಥಿಗೆ ತಾನು ಓದುವ ವಿಷಯ ಹಾಗೂ ಭಾಷೆಗಳ ಆಯ್ಕೆಗೆ ಸಂಪೂರ್ಣ ಸ್ವಾತಂತ್ರ್ಯವಿರಬೇಕೆಂಬ ಆಶಯ ಸ್ಪಷ್ಟವಾಗಿದೆ.
ಆದರೆ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗು ತ್ತಿರುವ ಹೊಸ ಶಿಕ್ಷಣ ನೀತಿಯು ಕೇಂದ್ರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿದೆ. ಕೇಂದ್ರದ ಶಿಕ್ಷಣ ನೀತಿಯನ್ನು ತಿದ್ದುಪಡಿ ಮಾಡಿ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ಶಿಕ್ಷಣದಲ್ಲಿ ಎರಡು ಭಾಷೆಗಳಲ್ಲಿ ಒಂದು ಭಾಷೆಯಾಗಿ ಕಡ್ಡಾಯವಾಗಿ ಕನ್ನಡವನ್ನು ಪ್ರಥಮ ಮತ್ತು ಮಾತೃಭಾಷೆಯಾಗಿ ಓದುವುದು, ಜತೆಗೆ ಇನ್ನೊಂದು ಭಾಷೆಯನ್ನು ಆರಿಸಿಕೊಳ್ಳುವುದು ಎಂದು ತಿಳಿಸಲಾಗಿದೆ. ಕನ್ನಡ ಕಡ್ಡಾಯವಾದಾಗ ವಿದ್ಯಾರ್ಥಿಗಳ ಇನ್ನೊಂದು ಆಯ್ಕೆ ಸಹಜವಾಗಿಯೇ ವ್ಯವಹಾರಿಕ ಮತ್ತು ಔದ್ಯೋಗಿಕ ಭಾಷೆಯಾದ ಇಂಗ್ಲಿಷ್ ಭಾಷೆಯಾಗುತ್ತದೆ. ವಿದ್ಯಾರ್ಥಿಗಳು ಇಂಗ್ಲಿಷನ್ನು ಆಯ್ಕೆ ಮಾಡಿಕೊಂಡಲ್ಲಿ ಹಿಂದಿ, ಸಂಸ್ಕೃತ, ತುಳು, ಕೊಂಕಣಿ ಹಾಗೂ ಇತರ ಭಾರತೀಯ ಭಾಷೆಗಳ ಅಧ್ಯಯನಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆರಂಭದಿಂದ ಶಿಕ್ಷಣದ ಮಾಧ್ಯಮ ಭಾಷೆಯಾಗಿ ಆಂಗ್ಲ ಭಾಷೆ ಇದ್ದರೂ ಭಾರತೀಯ ಭಾಷೆಗಳಿಗೆ ಮಹತ್ವ ನೀಡುವ ಶಿಕ್ಷಣ ನೀತಿಯಿತ್ತು. ಹಿಂದಿನ ಎರಡೂ ರಾಷ್ಟ್ರೀಯ ಶಿಕ್ಷಣ ನೀತಿಗಳಲ್ಲಿ ಪದವಿ ಕಲಿಕೆಯ ಭಾಷಾ ಆಯ್ಕೆಯಲ್ಲಿ ವಿದ್ಯಾರ್ಥಿಗೆ ಸ್ವತಂತ್ರ ಅವಕಾಶವಿತ್ತು. ಪ್ರಸ್ತುತ ಇರುವ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್ ಶಿಕ್ಷಣದಲ್ಲಿ ವಿದ್ಯಾರ್ಥಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ಆದರೆ ಈಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿ ತಾನು ಕಲಿಯ ಬಯಸುವ ಎರಡು ಭಾಷೆಗಳ ಆಯ್ಕೆಗೆ ಅವಕಾಶವೇ ಇಲ್ಲದಂತಾಗಿದೆ. ಕನ್ನಡವನ್ನು ಮಾತೃಭಾಷೆಯಾಗಿ ಕಡ್ಡಾಯಗೊಳಿಸಿದರೆ ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಕಸಿದು ಕೊಂಡಂತಾಗುತ್ತದೆ. ಭಾಷಾ ಅಯ್ಕೆಗೆ ಅವಕಾಶ ಇಲ್ಲದೆ ಯಾವುದೋ ಒಂದು ಭಾಷೆ ಯನ್ನು ಒತ್ತಡದಿಂದ ಓದುವ ಸಂದಿಗ್ಧತೆ ನಿರ್ಮಾಣವಾಗುತ್ತದೆ. ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯಲ್ಲದ ಸುಮಾರು ಶೇ.35ರಷ್ಟು ವಿದ್ಯಾರ್ಥಿಗಳು ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳನ್ನು ಮಾತನಾಡುವವರಿದ್ದಾರೆ. ಕನ್ನಡೇತರ ವಿದ್ಯಾರ್ಥಿಗಳು ಭಾಷಾ ಅಧ್ಯಯನದಲ್ಲಿ ಕಷ್ಟ ಪಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ಅನೇಕ ಭಾಷಾ ವಿಷಯಗಳಲ್ಲಿ ಉನ್ನತ ವ್ಯಾಸಂಗ, ಸಂಶೋಧನೆಗೆ ಅವಕಾಶ ಇಲ್ಲದಂತಾಗುತ್ತದೆ.
ರಾಜ್ಯದಲ್ಲಿರುವ ಅನೇಕ ವಿಶ್ವವಿದ್ಯಾನಿಲಯಗಳ ಹಲವು ಭಾಷಾ ವಿಭಾಗಗಳು ಮುಚ್ಚಿಹೋಗುವ ಸಂದರ್ಭ ಎದುರಾಗಬಹುದು. ಅನೇಕ ಮಹಾವಿದ್ಯಾಲಯಗಳಲ್ಲಿ ಹಿಂದಿ, ಸಂಸ್ಕೃತ ಇತ್ಯಾದಿ ಭಾಷೆಗಳನ್ನು ತಮ್ಮ ಬದುಕಿನ ಭಾಷೆ ಎಂದುಕೊಂಡು ಪ್ರೀತಿಯಿಂದ ಭಾಷಾ ಬೋಧನೆ ಮಾಡುತ್ತಿರುವ ಸಾವಿರಾರು ಪ್ರಾಧ್ಯಾಪಕರು ಉದ್ಯೋಗ ವಂಚಿತರಾಗಿ ಬೀದಿಗೆ ಬೀಳುತ್ತಾರೆ. ಕನ್ನಡೇತರ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದಲ್ಲಿ ಪ್ರಾಥಮಿಕ ಹಂತದ ಮೂಲಭೂತ ಕನ್ನಡದ ವ್ಯವಹಾರಿಕ ಭಾಷಾ ಶಿಕ್ಷಣ ಬೋಧಿಸುವುದು ಸಮಂಜಸವೇ? ಪ್ರತೀ ಸೆಮಿಸ್ಟರ್‌ನಲ್ಲಿ ವಿದ್ಯಾ ರ್ಥಿಗಳು ಭಾಷಾ ವಿಷಯವನ್ನು ಬದಲಿಸಿ ಕೊಳ್ಳಬಹುದು ಎಂಬ ನೀತಿ ಭಾಷೆಗಳ ಪ್ರೌಢಿ ಮೆಯನ್ನು ಬೆಳೆಸುವುದೇ? ಉನ್ನತ ಶಿಕ್ಷಣದ ಅರ್ಹತೆಗೆ ಧಕ್ಕೆಯಾಗುವುದಿಲ್ಲವೆ? ಎಂಬ ಪ್ರಶ್ನೆ ಮೂಡುತ್ತದೆ. ಈ ಶಿಕ್ಷಣ ನೀತಿಯು ಪೂರ್ವ ತಯಾರಿ ಇಲ್ಲದ, ಅಧ್ಯಾಪಕರಿಗೆ ತರಬೇತಿ ನೀಡದ, ವಿದ್ಯಾರ್ಥಿಗಳು, ಹೆತ್ತವರಿಗೆ ಸ್ಪಷ್ಟ ಮಾಹಿತಿಯನ್ನು ಕೊಡದ, ತರಾತುರಿಯಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ನಿಲುವಿನ ಗೊಂದಲದ ನೀತಿಯಾಗಿದ್ದು, ವಿದ್ಯಾರ್ಥಿಗಳ ಓದು ಮತ್ತು ಭವಿಷ್ಯವನ್ನು ಅಯೋಮಯವಾಗಿಸುವುದರಲ್ಲಿ ಸಂದೇಹವಿಲ್ಲ.
ರಾಜ್ಯದಲ್ಲಿ ಕನ್ನಡಿಗರು ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ ಅವರ ಅಭಿರುಚಿಯ ಭಾಷೆ ಓದುವ, ಸಾಹಿತ್ಯ ಬೆಳೆಸುವ ಅವಕಾಶ ಸಿಗುವಂತಾಗಬೇಕು. ನವ ಜೀವನದ ಹಾದಿಗೆ ಹೊಸ ಕನಸಿನ ಮುನ್ನುಡಿ ಬರೆಯುವ ಯುವ ವಿದ್ಯಾರ್ಥಿಗಳ ಇಚ್ಛಾಸ್ವಾತಂತ್ರ್ಯವನ್ನು ಸರಕಾರ ಕಸಿದುಕೊಳ್ಳಬಾರದು. ಗುರು ಸಂಸ್ಕೃತಿ ಮತ್ತು ಪರಂಪರೆಗೆ ವಿಶೇಷ ಮೌಲ್ಯವುಳ್ಳ ನಾಡಿನಲ್ಲಿ ಭಾಷಾ ವೃದ್ಧಿ, ಉದ್ಯೋಗ ಸೃಷ್ಟಿಯಾಗುವ ಶಿಕ್ಷಣ ನೀತಿ ನಮ್ಮದಾಗಬೇಕು. ಕನ್ನಡ ಕನ್ನಡಿಗರ ಮಾತೃಭಾಷೆ ಎಂಬಂತೆ ದೇಶದ ರಾಷ್ಟ್ರೀಯ ಸ್ತರದ, ರಾಷ್ಟ್ರೀಯ ಸಂಸ್ಕೃತಿಯನ್ನು ಬಿಂಬಿಸುವ, ದೇಶದ ಅತೀ ಹೆಚ್ಚು ಜನ ಮಾತನಾಡುವ ಅಗ್ರಮಾನ್ಯ ಹಿಂದಿ ಭಾಷೆಯನ್ನು ಗೌರವಿಸಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ. ಭಾರತದ ಸಮಗ್ರ ಸಂಸ್ಕೃತಿಯ ಸೂಕ್ಷ್ಮ ಪರಿಚಯ ಮತ್ತು ಹಿಂದಿ ಸಾಹಿತ್ಯದ ಜ್ಞಾನ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು. ಸಂಸ್ಕೃತ ಭಾಷೆಯ ಅಧ್ಯಯನದಿಂದ ನೈಜ ಭಾಷಾ ಜ್ಞಾನ ಮತ್ತು ವೇದ ಉಪನಿಷತ್ತುಗಳ ಅರಿವು ಮೂಡಿಸಬೇಕು. ರಾಜ್ಯದಲ್ಲಿ ಕನ್ನಡಕ್ಕೆ ಸಮನಾಗಿ ಹಿಂದಿ, ಸಂಸ್ಕೃತ ಇತ್ಯಾದಿ ಭಾರತೀಯ ಭಾಷೆಗಳನ್ನು ಓದುವುದಕ್ಕೆ ಅವಕಾಶ ಲಭ್ಯವಾಗಬೇಕು. ಕನ್ನಡ ಗಂಧದ ಸೌಹಾರ್ದತೆಯ ಸಿರಿವಂತ ಭುವಿಯಲ್ಲಿ ಭಾರತೀಯ ಭಾಷೆಗಳ ಸಾಹಿತ್ಯ ಚಿಗುರೊಡೆಯುವ ಶಿಕ್ಷಣ ನೀತಿಯಿರಲಿ.
ಶಿಕ್ಷಣ ನೀತಿಯಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೊಸ ಜ್ಞಾನ, ಆವಿಷ್ಕಾರ, ಸಂಶೋಧನೆ ನಡೆಸಲು ವಿಫುಲ ಅವಕಾಶ ಲಭ್ಯವಾಗಬೇಕು. ಶಿಕ್ಷಣದಲ್ಲಿ ಹೊಸತನ ಸಮಾಜದ ವಿಕಾಸಕ್ಕೆ ಹಿತವಾಗುವಂತೆ ಕವ ಲೊಡೆಯಬೇಕು. ಶಿಕ್ಷಣದ ಪ್ರಗತಿಯಲ್ಲಿ ಬದುಕು ಬೆಳಗಬೇಕೇ ವಿನಾ ಕಮರಬಾರದು. ದೇಶದ ಶೈಕ್ಷಣಿಕ ಮತ್ತು ಸಾಂಸ್ಕೃತಿಕತೆಯ ಆರೋಗ್ಯಪೂರ್ಣ ಸಮಾಜ ನಿರ್ಮಿಸುವ, ದೇಶಿ ಭಾಷೆಗಳನ್ನು ರಕ್ಷಿಸುವ, ಭರವಸೆಯ ಶಿಕ್ಷಣ ನೀತಿ ನಮ್ಮದಾಗಬೇಕೆಂಬುದು ಭಾಷಾ ಸ್ನೇಹಿ, ಶಿಕ್ಷಣ ಪ್ರೇಮಿ ಸಮಾಜದ ಆಶಯ.
– ಪ್ರಫುಲ್ಲಾ ಬಿ., ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.