ಜೈಲುಗಳಲ್ಲಿ ರಾಜಾತಿಥ್ಯ
Team Udayavani, Nov 25, 2022, 6:10 AM IST
ಹೊಟೇಲ್‌ಗಳಿಗಿಂತ ಜೈಲುಗಳೇ ವಾಸಿಯೇ? ದಿಲ್ಲಿಯ ಸಚಿವ ಸತ್ಯೇಂದರ್ ಜೈನ್ ಅವರ ತಿಹಾರ್ ಜೈಲಿನಲ್ಲಿರುವ ವೀಡಿಯೋಗಳನ್ನು ಗಮನಿಸಿದರೆ ಈ ಸಂಶಯ ಬರದೇ ಇರದು. ಮೈಕೈಗೆ ,ಕಾಲಿಗೆ ಮಸಾಜ್, ಬೇಕೆಂದ ಅಡುಗೆ… ಇಂಥ ಸೌಲಭ್ಯ ಸಿಗುವುದು ಎಂದರೆ ಏನು? ಸತ್ಯೇಂದರ್ ಜೈನ್ ಅವರ ಈ ವೀಡಿಯೋಗಳು ಬಿಡುಗಡೆಯಾದ ಮೇಲೆ ಜೈಲಿನ ಐಷಾರಾಮಿ ಆತಿಥ್ಯದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿಯೂ ಶಶಿಕಲಾ ಅವರ ರಾಜಾತಿಥ್ಯ ದೇಶಾದ್ಯಂತ ಭಾರೀ ಸುದ್ದಿಯಲ್ಲಿದ್ದುದನ್ನು ನೆನಪಿಸಿಕೊಳ್ಳಬಹುದು.
ಈಗಿನದ್ದೇ ವಿವಾದ? :
ಇಲ್ಲ, ಬಹು ಹಿಂದಿನಿಂದಲೂ ಜೈಲುಗಳಲ್ಲಿನ ರಾಜಾತಿಥ್ಯದ ಬಗ್ಗೆ ವಿವಾದಗಳಿವೆ. ಹಣವಿದ್ದರೆ ಜೈಲುಗಳಲ್ಲಿ ಎಲ್ಲ ಸೌಲಭ್ಯಗಳನ್ನೂ ಪಡೆಯಬಹುದು ಎಂಬುದಕ್ಕೆ ನಮ್ಮ ಮುಂದೆ ಹಲವಾರು ಉದಾಹರಣೆಗಳು ಇವೆ. ಸತ್ಯೇಂದರ್ ಅವರ ವಿವಾದದ ಬಳಿಕ ತಿಹಾರ್ ಜೈಲಿನ ನಿವೃತ್ತ ಅಧಿಕಾರಿಯೊಬ್ಬರು ಈ ಐಷಾರಾಮಿ ಕರ್ಮಕಾಂಡದ ಬಗ್ಗೆ ಬಾಯಿ
ಬಿಟ್ಟಿದ್ದಾರೆ. ತಿಹಾರ್ ಜೈಲಿನಲ್ಲಿ ಇಂಥವೆಲ್ಲ ಮಾಮೂಲು ಎಂದಿದ್ದಾರೆ. ಅಂದರೆ ಸುನಿಲ್ ಗುಪ್ತಾ ಎಂಬ ಅಧಿಕಾರಿ 1981ರಿಂದ 2016ರ ವರೆಗೆ ತಿಹಾರ್ ಜೈಲಿನಲ್ಲಿ ಕಾನೂನು ಅಧಿಕಾರಿ ಮತ್ತು ವಕ್ತಾರರಾಗಿ ಕೆಲಸ ಮಾಡಿದ್ದಾರೆ. ಕೆಲವು ಅಪರಾಧಿಗಳು ಲೈಂಗಿಕ ತೃಷೆಯನ್ನೂ ತೀರಿಸಿಕೊಳ್ಳುತ್ತಿದ್ದರು. ಅಲ್ಲದೆ ಸೊಡೋಮಿ(ಸಲಿಂಗ ಲಿಂಗಿಕ ಕ್ರಿಯೆ) ಎಂಬುದು ಇಲ್ಲಿ ಸಾಮಾನ್ಯವೆಂಬಂತೆ ಆಗಿತ್ತು. ಪವರ್‌ಫುಲ್ ಕೈದಿಗಳ ಮುಂದೆ ಜೈಲಿನ ಅಧಿಕಾರಿಗಳೂ ತಲೆಬಾಗುತ್ತಾರೆ ಎಂದು ಆರೋಪಿಸಿದ್ದಾರೆ.
ಕೈದಿಗಳ ವ್ಯವಸ್ಥೆ ಬಗ್ಗೆ ತಿಹಾರ್ ಜೈಲಿನ ಮಾರ್ಗಸೂಚಿಗಳು ಏನಿವೆ? :
ಕೈದಿಗಳ ಆಹಾರ ಮತ್ತು ಆರೋಗ್ಯದ ಕುರಿತಂತೆ ತಿಹಾರ್ ಜೈಲಿನಲ್ಲಿ ಮಾರ್ಗಸೂಚಿಗಳಿವೆ. ಕೈದಿಗಳ ಆರೋಗ್ಯ ಸ್ಥಿತಿ ಆಧಾರದ ಮೇಲೆ ಅವರಿಗೆ ಯಾವ ರೀತಿಯ ಆಹಾರ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಹಾಗೆಯೇ ಜೈಲಿನಲ್ಲಿ ಆಸ್ಪತ್ರೆಯೂ ಇದ್ದು, ಶೇ.5ರಷ್ಟು ಕೈದಿಗಳನ್ನು ಒಂದು ಬಾರಿಗೆ ಸೇರಿಸಿ ಚಿಕಿತ್ಸೆ ನೀಡಬಹುದು. ಫಿಸಿಯೋಥೆರಪಿ, ಡ್ರಗ್ಸ್ ಬಿಡಿಸುವಿಕೆ, ಕಿವಿ ಕೇಳದೇ ಇರುವುದು, ಮಾತು ಬಾರದಿರುವುದು, ಕಣ್ಣು ಕಾಣಿಸದಿರುವ ಸಮಸ್ಯೆಗಳಿಗೂ ಚಿಕಿತ್ಸೆಯುಂಟು. ಸಾಮಾನ್ಯವಾಗಿ ಫಿಸಿಯೋಥೆರವಿಗೆ ಅವಕಾಶವಿದ್ದರೂ ಜೈಲಿನಲ್ಲಿ ಇದಕ್ಕೆ ಬೇಡಿಕೆ ಬರುವುದಿಲ್ಲ. ಹಬ್ಬದ ಸಂದರ್ಭಗಳಲ್ಲಿ ಕೈದಿಗಳ ಆಯಾಯ ಧರ್ಮಗಳಿಗೆ ಅನುಗುಣವಾಗಿ ಇತರ ಆಹಾರವನ್ನೂ ನೀಡುವ ಸೌಲಭ್ಯವೂ ಇದೆ. ಗಂಭೀರವಾದ ಆರೋಗ್ಯ ಸಮಸ್ಯೆ ಇದ್ದರೆ ಜೈಲಿನ ಆರೋಗ್ಯಾಧಿಕಾರಿ ಸಲಹೆ ಮೇರೆಗೆ ಹೊರಗೆ ದಾಖಲಿಸಬಹುದು.
ಹಿಂದಿನ ವಿಐಪಿ ಕೇಸ್‌ಗಳು :
ಶಶಿಕಲಾ :
ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಅವರ ಸ್ನೇಹಿತೆ ಶಶಿಕಲಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇವರಿಗೆ ಜೈಲಿನಲ್ಲಿ ಐದು ಬ್ಯಾರಕ್‌ಗಳನ್ನು ನೀಡಲಾಗಿತ್ತು. ಇದರಲ್ಲೇ ಒಂದು ಕಿಚನ್ ಕೂಡ ಇತ್ತು. ಜೈಲಿನ ಇತರ ಕೈದಿಗಳಂತೆ ಇವರು ಸಮವಸ್ತ್ರ ಧರಿಸುತ್ತಿರಲಿಲ್ಲ. ತಮಗೆ ಬೇಕಾದ ಉಡುಪುಗಳನ್ನು ಬಳಕೆ ಮಾಡುತ್ತಿದ್ದರು. ಇವರಿಗೆಂದೇ ಒಂದು ವಿಸಿಟರ್ ಕೋಣೆಯನ್ನೂ ಮೀಸಲಾಗಿ ಇಡಲಾಗಿತ್ತು. ಇಲ್ಲಿಗೆ ಆಗಾಗ್ಗೆ ತಮಿಳುನಾಡಿನ ರಾಜಕಾರಣಿಗಳು ಬಂದು ಚರ್ಚೆ ನಡೆಸಿ ಹೋಗುತ್ತಿದ್ದರು. ಇವರಿದ್ದ ಐದು ರೂಂಗಳತ್ತ ಯಾರೂ ಹೋಗದಂತೆ ಬ್ಯಾರಿಕೇಡ್ ಹಾಕಲಾಗಿತ್ತು ಎಂದು ಆಗ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಸುಬ್ರತಾ ರಾಯ್ :
ಸಹರಾ ಇಂಡಿಯಾ ಪರಿವಾರ್‌ನ ಮಾಲಕ ಸುಬ್ರತಾ ರಾಯ್ ಅವರೂ ದಿಲ್ಲಿಯ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್ ಪಡೆದುಕೊಂಡಿದ್ದಾರೆ. 2014ರ ಮಾರ್ಚ್‌ನಲ್ಲಿ 20 ಸಾವಿರ ಕೋಟಿ ರೂ.ಗಳನ್ನು ಹೂಡಿಕೆದಾರರು ಮತ್ತು ಬ್ಯಾಂಕ್‌ಗೆ ಕಟ್ಟದ ಹಿನ್ನೆಲೆಯಲ್ಲಿ ಜೈಲಿಗೆ ಹಾಕಲಾಗಿತ್ತು. ಜೈಲಿನಲ್ಲಿದ್ದ ಅಷ್ಟು ದಿನ ಅವರಿಗೆ ಹವಾನಿಯಂತ್ರಿತ ಕೊಠಡಿ, ಪಾಶ್ಚಾತ್ಯ ಶೈಲಿಯ ಟಾಯ್ಲೆಟ್, ಮೊಬೈಲ್ ಫೋನ್, ವೈಫೈ ಮತ್ತು ವೀಡಿಯೋ ಕಾನ್ಫೆರೆನ್ಸಿಂಗ್ ಸೌಲಭ್ಯಗಳನ್ನು ನೀಡಲಾಗಿತ್ತು. ಈ ವ್ಯವಸ್ಥೆಗಳಿಗಾಗಿ ದಿನಕ್ಕೆ 54,400 ರೂ.ಗಳನ್ನು ಸಹರಾ ಕಂಪೆನಿ ನೀಡುತ್ತಿತ್ತು. ಅಷ್ಟೇ ಅಲ್ಲ ಸುಬ್ರತಾ ರಾಯ್ ಅವರಿಗೆ ಒಬ್ಬ ಭದ್ರತಾ ಸಿಬಂದಿಯನ್ನೂ ನೀಡಲಾಗಿತ್ತು. ಸ್ವತಂತ್ರ ಭಾರತದಲ್ಲಿ ಇವರೇ ಈ ಪ್ರಮಾಣದ ಸೌಲಭ್ಯ ಪಡೆದಿದ್ದು ಎಂದು ಪತ್ರಕರ್ತರೊಬ್ಬರು ಬರೆದಿರುವ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.
ಅಮರ್ ಸಿಂಗ್ :
ವೋಟಿಗಾಗಿ ಹಣ ಪ್ರಕರಣದಲ್ಲಿ ಸಮಾಜವಾದಿ ನಾಯಕರಾಗಿದ್ದ ಅಮರ್ ಸಿಂಗ್ ಕೂಡ ತಿಹಾರ್ ಜೈಲಿಗೆ ಹೋಗಿದ್ದರು. ಇವರಿಗೆ ಕಿಡ್ನಿ ಸಂಬಂಧಿತ ರೋಗಗಳು ಇದ್ದುದರಿಂದ ಪ್ರತ್ಯೇಕ ಬ್ಯಾರಿಕೇಡ್‌ನ ವ್ಯವಸ್ಥೆ ಪಡೆದಿದ್ದರು. ಇದರಲ್ಲಿ ಅಟ್ಯಾಚ್‌ಡ್ ಪಾಶ್ಚಾತ್ಯ ಶೈಲಿಯ ಶೌಚಾಲಯ, ಮನೆಯ ಆಹಾರ, ಮಿನರಲ್ ನೀರು ವ್ಯವಸ್ಥೆ ಇತ್ತು. ದಿನಕ್ಕೆ ನಾಲ್ಕರಿಂದ ಐದು ಬಾರಿ ಇತರ ಕೈದಿಗಳಿಂದ ಇವರ ಕೊಠಡಿಯನ್ನು ಸ್ವತ್ಛ ಮಾಡಿಸಲಾಗುತ್ತಿತ್ತು.
ಗುರುಮೀತ್ ರಾಮ್ ರಹೀಮ್ ಸಿಂಗ್ :
ದೇರಾ ಸಚ್ಚಾ ಸೌಧದ ಗುರುಮೀತ್ ರಾಮ್ ರಹೀಮ್ ಸಿಂಗ್‌ಗೆ ಅತ್ಯಾಚಾರ ಪ್ರಕರಣ ಸಂಬಂಧ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಹಾಗೆಯೇ ಪತ್ರಕರ್ತರೊಬ್ಬರ ಸಾವಿನ ಸಂಬಂಧವೂ ಜೈಲು ಶಿಕ್ಷೆಯಾಗಿದೆ. ಈತ ಸದ್ಯ ಹರಿಯಾಣದ ಸುನೈರಿಯಾ ಜೈಲಿನಲ್ಲಿದ್ದಾನೆ. ಗುರುಮೀತ್ ಸಿಂಗ್ ಜತೆಗೇ ಜೈಲಿನಲ್ಲಿದ್ದು, ಈಗ ಬಿಡುಗಡೆಯಾಗಿ ಹೊರಗೆ ಬಂದಿರುವ ವ್ಯಕ್ತಿಯೊಬ್ಬ ಜೈಲಿನ ಸ್ಥಿತಿಯನ್ನು ಬಣ್ಣಿಸಿದ್ದಾನೆ. ಈತನ ಪ್ರಕಾರ, ಗುರುಮೀತ್ ಜೈಲಿಗೆ ಬಂದ ಮೇಲೆ ಎಲ್ಲವೂ ಬದಲಾಯಿತು. ಈತ ಜೈಲಿನಲ್ಲಿ ಎಲ್ಲೆಂದರಲ್ಲಿ ಓಡಾಡಬಹುದಾಗಿತ್ತು. ಬಹುಪಾಲು ಸಮಯ ಈತ ತನ್ನ ಬ್ಯಾರಕ್‌ನಲ್ಲಿ ಇರುತ್ತಲೇ ಇರಲಿಲ್ಲ. ಅಲ್ಲದೆ ಈತನಿದ್ದ ಬ್ಯಾರಕ್ ಕಡೆಗೆ ಉಳಿದವರನ್ನು ಹೋಗಲೂ ಬಿಡುತ್ತಿರಲಿಲ್ಲ. ಮೊದಲು ಜೈಲಿನಲ್ಲಿ ನಾವೆಲ್ಲರೂ ಬಟ್ಟೆ ತೊಳೆಯುವುದು ಸಹಿತ ಇತರ ಕೆಲಸಗಳಿಗೆ ಆರಾಮವಾಗಿ ಓಡಾತ್ತಿದ್ದೆವು. ಗುರುಮೀತ್ ಬಂದ ಮೇಲೆ ಎಲ್ಲವೂ ಬದಲಾಯಿತು. ಈತನನ್ನು ಕಾಣಲು ಬಂದವರಿಗೆ ಎಷ್ಟು ಅವಧಿಯನ್ನು ಬೇಕಾದರೂ ಕೊಡುತ್ತಾರೆ ಎಂದಿದ್ದ.
ಲಾಲು ಪ್ರಸಾದ್ ಯಾದವ್ :
ಮೇವು ಹಗರಣದಲ್ಲಿ ಝಾರ್ಖಂಡ್‌ನ ಬಿರ್ಸಾ ಮುಂಡಾ ಕೇಂದ್ರ ಜೈಲಿನಲ್ಲಿ 2013ರಿಂದ ಮೂರು ತಿಂಗಳ ಕಾಲ ಲಾಲು ಜೈಲು ವಾಸ ಅನುಭವಿಸಿದ್ದರು. ಈ ವೇಳೆ ಲಾಲು ಅವರಿಗೂ ವಿಐಪಿ ಟ್ರೀಟ್‌ಮೆಂಟ್ ಸಿಕ್ಕಿತ್ತು. ಇವರಿಗೆ ಟಿವಿ, ಇಬ್ಬರು ವೈಯಕ್ತಿಕ ಅಡುಗೆ ಸಿಬಂದಿ, ದೀರ್ಘಾವಧಿವರೆಗೆ ಹೊರಗಿನವರ ಭೇಟಿಗೆ ಅವಕಾಶ ನೀಡಲಾಗಿತ್ತು. ಇವರು ತಮಗೆ ಬೇಕೆಂದ ಅಡುಗೆ ಮಾಡಿಸಿಕೊಳ್ಳಲು ಅವಕಾಶವಿತ್ತು. ಅಂದರೆ ಸಸ್ಯಾಹಾರ ಅಥವಾ ಮಾಂಸಾಹಾರ ಅಡುಗೆಗೂ ಒಪ್ಪಿಗೆ ನೀಡಲಾಗಿತ್ತು.
ಇವಷ್ಟೆ ಅಲ್ಲ…
ವಿವಿಧ ಪ್ರಕರಣಗಳಲ್ಲಿ ಆರೋಪಿಗಳು ಅಥವಾ ಅಪರಾಧಿಗಳಾಗಿರುವ ಹೈಪ್ರೊಫೈಲ್ ಮಂದಿಗಳಾದ ಅಸಾರಾಮ್ ಬಾಪು, ಸಂಜೀವ್ ನಂದಾ, ವಿಕಾಸ್ ಮತ್ತು ವಿಶಾಲ್ ಯಾದವ್, ಅಂಕಾ ವರ್ಮಾ, ಮನು ಶರ್ಮ, ಸುರೇಶ್ ಕಲ್ಮಾಡಿ, ಎ.ರಾಜಾ, ಕನ್ನಿಮೋಳಿ, ಸಂಜಯ್ ಮತ್ತು ಅಜಯ್ ಚಂದ್ರಾಗೂ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗುತ್ತಿತ್ತು ಎಂದು ವರದಿಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.