ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಪಾಡ್ದನಗಳ ಪೂರ್ಣಪಾಠ ದಾಖಲೀಕರಣ ಅನಿವಾರ್ಯ
Team Udayavani, Dec 1, 2024, 10:05 AM IST
ಶಿರ್ವ: ತೆಂಬರೆ ನಾದದ ಪಾಡ್ದನಗಳಿಂದಲೇ ನೇಮ ಸಂಪನ್ನಗೊಳ್ಳುತ್ತಿದ್ದ ಹಾಗೂ ನಂಬಿದವರಿಗೆ ಇಂಬು ನೀಡುತ್ತಿದ್ದ ಸತ್ಯದ ಆರಾಧನೆಯಲ್ಲಿ ಪಾಡ್ದನಗಳಿಗೆ ಕಡಿವಾಣ ಹಾಕುತ್ತಿರುವುದು, ನೆಲಮೂಲ ಪರಂಪರೆಯ ಅಗಾಧ ಹಾಗೂ ಅಮೂಲ್ಯ ಮೌಖಿಕ ಸಾರ ಸಂಗ್ರಹವನ್ನು ಅಳವಿನಂಚಿಗೆ ತಂದೊಡ್ಡಿದೆ ಎಂಬುದು ಹಿರಿಯ ಪಾಡ್ದನಗಾರ್ತಿ, ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯ ಮಟ್ಟದ ಗೌರವ ಪ್ರಶಸ್ತಿ ಪುರಸ್ಕೃತ ಮೂಡುಬೆಳ್ಳೆ ಕಾಡಬೆಟ್ಟುವಿನ ಹಿರಿಯ ಜೀವ ಅಪ್ಪಿ ಪಾಣಾರ ಅವರ ಕಳವಳ.
ಅವರಿಗೆ ನ. 4ರಂದು ಜಾನಪದ ಅಕಾಡೆಮಿ ಪುರಸ್ಕಾರ ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ‘ಉದಯವಾಣಿ’ ಸಂದರ್ಶಿಸಿದಾಗ ಅವರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದು ಹೀಗೆ;
ಪ್ರಶ್ನೆ 1: ಪಾಡ್ದನ ಪ್ರಪಂಚವನ್ನು ಪ್ರವೇಶಿಸಿದ ಬಗೆ ಹೇಳಿ .?
ನಾನು ದೈವಾರಾಧನಾ ಕೈಂಕರ್ಯವನ್ನೇ ಮಾಡುತ್ತಿದ್ದ ಕುಟುಂಬದಲ್ಲಿ ಜನಿಸಿದವಳು. ಶಿರ್ವಕೋಡು ಪಂಜಿಮಾರು ನನ್ನ ಹುಟ್ಟೂರು. ಅಜ್ಜ ಕೂಕ್ರು ಪಾಣಾರ ದೈವಾರಾಧನ ಕ್ಷೇತ್ರದ ದಂತಕಥೆ. ತಂದೆ ಚಂದು. ತಾಯಿ ಬಿಬ್ಬಿರಿ ನಾನು ಹಸುಗೂಸಿರುವಾಗಲೇ ಅಗಲಿದ್ದರು. ಅಜ್ಜಿ ಗುರ್ಬಿ, ಮಾವ ಜಗ್ಗು ಅವರ ಆಸರೆಯಲ್ಲಿ ಅಜ್ಜನ ಸ್ಪೂರ್ತಿಯೊಂದಿಗೆ ನಾನು ಬೆಳೆದೆ. 8ನೇ ವಯಸ್ಸಿನಲ್ಲಿಯೇ ಮಾದಿರ ಕುಣಿತಕ್ಕೆ ಅಜ್ಜಿಯೊಂದಿಗೆ ಊರಿನ ನಡುವೆ ಹೋಗುತ್ತಿದ್ದುದು ಇನ್ನೂ ಹಸಿರಾಗಿರುವ ನೆನಪು. ಮಾವ ಜಗ್ಗು ನಲಿಕೆ ಅವರಿಂದ ಕಲಿತ ಪಾಡ್ದನಗಳನ್ನು ಸುಮಾರು 25ರ ವಯಸ್ಸಿನಲ್ಲಿಯೇ ದೈವದ ಕಲದಲ್ಲಿ ಹಾಡಲು ಆರಂಭಿಸಿದ್ದು, ಇಲ್ಲಿಯ ವರೆಗೆ ಮುಂದುವರಿದಿದೆ. ಉಡುಪಿ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಜಯಪುರ, ಬಾಳಕಾನ, ಸೀಗೋಡು ಇಲ್ಲಿನ ದೈವಕಲಗಳಲ್ಲಿ ಪಾರ್ದನಗಳನ್ನು ಹಾಡಿದ್ದೇನೆ.
ಪ್ರಶ್ನೆ 2: ಯಾವೆಲ್ಲ ಪಾಡ್ದನಗಳು ಕಂಠಸ್ಥವಾಗಿವೆ?
ಮೂರು ಸ್ವರ ಧಾಟಿಯಲ್ಲಿ ಮೈಸಂದಾಯ ಪಾಡ್ದನ, 5 ದಾಟಿಯ (ಬಣ್ಣ ಹಚ್ಚುವ ಸಮಯ, ಸಿರಿ ಕಟ್ಟಿದ ಬಳಿಕ-ಪುಟ್ಟು ಬಳಕೆ, ಅಣಿಯೇರಿದ ಬಳಿಕ, ಬೈಲಸೂಡವ, ಕನ್ನಡರಸು ಮತ್ತು ಕುಬೆಕೋಟಿ ಬೈದ್ಯರ ಮತ್ಸ್ಯ ಬೇಟೆ) ಪಂಜುರ್ಲಿ ಪಾರ್ದನ, ಗಿಡಿರಾವುತ ಪಂಜುರ್ಲಿ, ಜೂಮೂರು ಜುಮಾದಿ, ಕೋಡ್ದಬ್ಬು ಜುಮಾದಿ, ಕಲ್ಲುರ್ಟಿ ಕಲ್ಕುಡ, ವರ್ತೆ ಪಂಜುರ್ಲಿ, ತೂಕತ್ತೆರಿ, ಬೊಬ್ಬರ್ಯ, ಕಲ್ಯಾಲು ಪಂಜುರ್ಲಿ, ಬಗ್ಗು ಪಂಜುರ್ಲಿ, ಅಲೆವೂರ ಪಂಜುರ್ಲಿ, ದೆಂದೂರ ಪಂಜುರ್ಲಿ, ಕಲ್ಲುಗುಡ್ಡೆ ದಾಸಪ್ಪ ಪಂಜುರ್ಲಿ, ಜುಮಾದಿ, ಮರ್ಲು ಜುಮಾದಿ, ಬೋವೆ ದೈವ ಹೀಗೆ ಬೇರೆ ಬೇರೆ ದೈವಗಳ, ವಿಶಿಷ್ಟ ದಾಟಿಯ ನೂರಾರು ಪಾರ್ದನಗಳು ಕಂಠಸ್ಥವಾಗಿವೆ.
ಪ್ರಶ್ನೆ 3: ಈವರೆಗಿನ ದಾಖಲೀಕರಣ ?
ಮಂಗಳೂರು ಬಾನುಲಿಯಲ್ಲಿ ನಾನು ಹಾಡಿದ ಗಿಡಿರಾವುತ ಪಂಜುರ್ಲಿ, ವರ್ತೆ ಪಂಜುರ್ಲಿ ಮತ್ತು ಜುಮಾದಿ ಪಾಡ್ದನಗಳು ದಾಖಲೀಕರಣ ಆಗಿವೆ. ಸಾಹಿತಿ ಅಮೃತ ಸೋಮೇಶ್ವರರು ನಾನು ಪಾರ್ದನ ಹಾಡುವುದನ್ನು ಕೇಳಿ ಅಭಿನಂದಿಸಿದ್ದು ನನಗೆ ಅತ್ಯಂತ ದೊಡ್ಡ ಗೌರವ ಎಂದು ಭಾವಿಸಿದ್ದೇನೆ. ಅವರು, ಬಿ.ಎ. ವಿವೇಕ ರೈಗಳು ಹಾಗೂ ಇತರರು ಪಾರ್ದನಗಳ ದಾಖಲೀಕರಣದಲ್ಲಿ ಬಹಳ ಕ್ಷೇತ್ರಕಾರ್ಯ ಮಾಡಿದ್ದಾರೆ.
ಪ್ರಶ್ನೆ 4: ನಿಮ್ಮ ಕುಟುಂಬ ಜೀವನ ?
ನಾನು ವಿವಾಹವಾಗಿದ್ದು ಮೂಡುಬೆಳ್ಳೆ ಕಾಡಬೆಟ್ಟುವಿನ ದೈವಾರಾಧನೆ ಮಾಡುವ ಕುಟುಂಬದ ಕೊರಗ ಪಾಣಾರ ಅವರ ಮಗ ಕೃಷ್ಣ ಪಾಣಾರ ಅವರನ್ನು. ಅವರೂ ದೈವಾರಾಧನೆ ಕ್ಷೇತ್ರದಲ್ಲಿ ಸೇವೆ ಮಾಡಿದವರು. ನಮಗೆ ಮೂವರು ಮಕ್ಕಳು, ಪುತ್ರ ಸುಧಾಕರ ಪಾಣಾರ ದೈವಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು. ಮೊಮ್ಮಕ್ಕಳೂ ದೈವನರ್ತನ ಸೇವೆಯನ್ನು ಆರಂಭಿಸಿದ್ದಾರೆ. ಇವೆಲ್ಲವನ್ನೂ ಕಣ್ತುಂಬಿಕೊಂಡು, ದೈವ ಕಲದಲ್ಲಿ ದೈವಗಳ ಹಿರಿಮೆಯನ್ನು ಪಾರ್ದನಗಳಿಂದ ಕೊಂಡಾಡುತ್ತಾ ಕಾಲ ಕಳೆಯುತ್ತಿದ್ದೇನೆ.
ಪ್ರಶ್ನೆ 5: ದೈವರಾಧನಾ ಕ್ಷೇತ್ರ ಪ್ರವೇಶಿಸುವ ಕಿರಿಯರಿಗೆ ನಿಮ್ಮ ಸಲಹೆ ?
ತುಳುನಾಡ ನೆಲದಲ್ಲಿ ದೈವಾರಾಧನೆ ಅನಾದಿಕಾಲದ ಕಟ್ಟು. ಇದರ ಸಾರ ಸಂಗ್ರಹ ಇರುವುದು ಪಾಡ್ದನಗಳಲ್ಲಿ. ಅವುಗಳನ್ನು ಸಂಪೂರ್ಣ ಕರಗತ ಮಾಡಿಕೊಂಡಾಗ ಮಾತ್ರ ದೈವನರ್ತನ ಸೇವೆ ಫಲಪ್ರದ. ಆಗ ಮಾತ್ರ ನೇಮ ಕಟ್ಟಿದವನಿಗೂ, ಮಾಡಿಸುವವರಿಗೂ ಸುಭಿಕ್ಷವಾಗುತ್ತದೆ. ಪಾಡ್ದನಗಳಿಗೆ ಅವಕಾಶ ನೀಡದೆ ಮೊಟಕುಗೊಳಿಸುವ ಪರಿಪಾಠದಿಂದ ತಲೆಮಾರುಗಳಿಂದ ಮೌಖಿಕವಾಗಿ ಬಂದ ಪಾಡ್ದನ ಸಾಹಿತ್ಯ ಕಣ್ಮರೆಯಾಗುವ ಅಪಾಯವನ್ನು ತಪ್ಪಿಸುವ ಹೊಣೆ ನಿಮ್ಮದು.
ವಿಸ್ಮೃತಿಗೂ ಮುನ್ನ
ನಾನೀಗ 70ರ ವಯಸ್ಸಿನ ಆಸುಪಾಸಿನಲ್ಲಿದ್ದೇನೆ. ಕಾಪು, ಉಡುಪಿ ಗ್ರಾಮೀಣ ಪ್ರದೇಶದ ಹಲವು ವಿಶೇಷ ಹಾಗೂ ಅಪರೂಪದ ಪಾರ್ದನಗಳು ಇಂದಿನ ಯುವ ತಲೆಮಾರಿನವರಿಗೆ ತಿಳಿದಿಲ್ಲ. ಕೆಲವರನ್ನು ಹೊರತು ಪಡಿಸಿ ಕಲಿಯುವ ಆಸಕ್ತಿ ತೋರುವವರೂ ಇಲ್ಲ. ಈ ಅಮೂಲ್ಯ ಸಂಗ್ರಹದ ಕೆಲವೊಂದು ಅಪರೂಪದ ಮಾಹಿತಿಗಳು ನನಗೆ ವಯೋಸಹಜ ಕಾರಣದಿಂದ ನೆನಪಿನ ಪುಟಗಳಿಂದ ಮಾಸುತ್ತಿವೆ. ಇವುಗಳು ವಿಸ್ಮೃತಿಯಾಗುವ ಮುನ್ನ ಇವುಗಳನ್ನು ದಾಖಲಿಸಿ ಮುಂದಿನ ತಲೆಮಾರಿಗಾಗಿ ಮೌಖಿಕದಿಂದ ಗ್ರಾಂಥಿಕ ರೂಪದಲ್ಲಿ ಉಳಿಸಿಕೊಳ್ಳಬೇಕಾದ ಅಗತ್ಯತೆ,ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸರಕಾರ, ಅಕಾಡೆಮಿಗಳು ಕಾರ್ಯ ಪ್ರವೃತ್ತವಾಗಬೇಕು.
ನೆಲಮೂಲ ಕುಲಕಸುಬಿಗೆ ದಾಖಲೆ ಕೇಳುತ್ತಾರೆ !
ನಮ್ಮ ಪಾಣಾರ ಯಾನೆ ನಲಿಕೆ ಸಮುದಾಯ ತಲೆತಲಾಂತರದಿಂದ ನೇಮ ಕಟ್ಟುವ ಸತ್ಯಾರಾಧನೆಯಲ್ಲಿ ತೊಡಗುತ್ತಾ ಬಂದವರು. ಬಡತನದಲ್ಲೇ ಬದುಕು ಸಾಗಿಸಿದ ನಮಗೆ ಸಣ್ಣ ಮನೆಯನ್ನು ನಿರ್ಮಿಸುವುದು ಕೇವಲ ಸರಕಾರ ನೀಡುವ ಸಹಾಯಧನದಿಂದ ಮಾತ್ರ ಸಾಧ್ಯವಿಲ್ಲ. ಸಾಲಕ್ಕಾಗಿ ಬ್ಯಾಂಕಿನ ಮೊರೆ ಹೋದರೆ ”ನಿಮ್ಮ ಉದ್ಯೋಗದ ದಾಖಲೆ ಕೊಡಿ” ಎನ್ನುತ್ತಾರೆ. ನೆಲಮೂಲ ಕುಲಕಸುಬಿಗೆ ನಾವು ದಾಖಲೆ ಎಲ್ಲಿಂದ ಕೊಡಬೇಕು ? ಕೊಡುವವರಾದರೂ ಯಾರು? ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಆದೇಶವನ್ನು ಮಾಡಬೇಕು. ದೈವಾರಾಧನಾ ಕಾಯಕದಲ್ಲಿ ಇಡೀ ಜೀವನವನ್ನು ಸವೆಸಿದವರಿಗೆ ಅನಾರೋಗ್ಯದಲ್ಲಿ/ ಜೀವನದ ಸಂಧ್ಯಾಕಾಲದಲ್ಲಿ ವಿಶೇಷ ಪಿಂಚಣಿ ನೀಡುವ ಯೋಜನೆ ದೈವಾರಾಧಕರ ಪಾಲಿಗೆ ಇನ್ನೂ ಭರವಸೆಯಾಗಿಯೇ ಉಳಿದಿದೆ.
ಮೂಲ ಪಣ್ಣಗ ಉಂಡುಯೇ… ನಾಡ ತುಂಬೆಡ, ಜಾಲ ಬರ್ಕೆಡ್, ಕಲ್ವೆ ಕಾಕೆರೆ ಕಾಟೊಡು…
ಜೂಮೂರು ಜುಮಾದಿ ಪಾರ್ದನ ಬಲು ವಿಶೇಷ ಹಾಗೂ ಅಪರೂಪದ್ದು, ನಾಡ ತುಂಬೆಡ್, ಜಾಲ ಬರ್ಕೆಡ್ ಎಂದು ಆರಂಭವಾಗುವ ಪಾರ್ದನ, ಬಿರ್ಮಣ ಬೈದ್ಯನು ಊರಿನಲ್ಲಿ ಕಳ್ಳಕಾಕರ ಉಪಟಳ ಶಮನಕ್ಕಾಗಿ ಅಣ್ಣು ನೆಕ್ಕರೆಯವರಲ್ಲಿ ಪೂಪೂಜನೆಯ ದೈವವನ್ನು ಕೇಳಿದಾಗ ಅವನಿಗೆ ಜೂಮೂರು ಜುಮಾದಿ ಒಲಿದು ಬಂದದ್ದು, ಆತ ಹಿಂದಿರುಗಿ ಬರುವಾಗ ಕುಂಬಳೆಯ ಅರಸು ಕೌಸಿಂಗ ರಾಯನು ಕುತಂತ್ರದಿಂದ ಬಿರ್ಮಣನ ಅಂಗಾಗ ತುಂಡರಿಸಿ ಹತ್ಯೆ ಮಾಡುತ್ತಾನೆ. ಜೂಮೂರು ಮತ್ತು ಜುಮಾದಿ ದೈವಗಳು ಅಂಗಾಗಿ ಜೋಡಿಸಿ ಬಿರ್ಮಣನಿಗೆ ಜೀವಕಳೆ ತುಂಬುತ್ತಾರೆ. ಈ ಪಾರ್ದನದಲ್ಲಿ ಅರಸನಿಗೂ ಬಿರ್ಮಣನಿಗೂ ಆಗುವ ಸಂಘರ್ಷಗಳ ಅಪರೂಪದ ವರ್ಣನೆ ಇದೆ. ಶೋಷಣೆಯ ವಿರುದ್ಧ ಸೆಟೆದು ನಿಲ್ಲುವ ಕೆಚ್ಚೆದೆ ಇದೆ. ಇದೆಲ್ಲವೂ ಇರುವ ಅಮೂಲ್ಯ ನಿಧಿ ಪಾರ್ದನಗಳನ್ನು ಕಾಪಿಟ್ಟುಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸ್ಥಳ ಪುರಾಣಗಳ ವ್ಯಾಪಕ ಅಧ್ಯಯನವೂ ಆಗಬೇಕಿದೆ.
-ಸತೀಶ್ಚಂದ್ರ ಶೆಟ್ಟಿ, ಶಿರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.