ಗ್ರಾಹಕರ ಮನ ಗೆದ್ದ ರವಿ
Team Udayavani, Apr 3, 2022, 2:13 PM IST
ಮುಂಬಯಿಯ ಬೃಹತ್ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದವನು ರವಿ. ಅವನ ಕೈ ರುಚಿಗೆ ಎಲ್ಲರೂ ಮಾರುಹೋಗಿದ್ದರು. ಒಂದು ದಿನ ಸಂಜೆ ಹೊಟೇಲ್‌ನಲ್ಲಿ ರವಿ ಪಾವ್‌ಬಾಜಿ ಮಾಡುತ್ತಿದ್ದಾಗ ಬಳಿ ಬಂದ ಸಹೋದ್ಯೋಗಿ ಗೆಳೆಯರಾದ ನವೀನ್ ಮತ್ತು ಚಿರು ಬಹಳ ದಿನಗಳಾಯ್ತು. ನೀನು ಮಾಡುವ ಪಾವ್‌ಬಾಜಿ ತಿನ್ನದೆ. ಇವತ್ತು ಸಂಜೆ ಡ್ನೂಟಿ ಮುಗಿದ ಮೇಲೆ ನಮಗೆ ನಿನ್ನ ಕೈರುಚಿ ಉಣಿಸುವೆಯಾ ಎಂದರು.
ಆಗ ರವಿ, ಸರಿ ಆದ್ರೆ ಇವತ್ತು ಸ್ವಲ್ಪ ಬೇಗ ಮನೆಗೆ ಹೋಗಬೇಕು. ಮಕ್ಕಳಿಗೆ ಸ್ಕೂಲ್‌ಗೆ ರಜೆ. ಸಂಜೆ ಅವರಿಗೂ ಪಾವ್‌ಬಾಜಿ ಕೊಂಡೊಯ್ಯುತ್ತೇನೆ ಎನ್ನುತ್ತಾನೆ. ಸಂಜೆ ತನ್ನ ಪಾಳಿಯ ಕೆಲಸ ಮುಗಿದ ಮೇಲೆ ರವಿ ಪಾವ್‌ಬಾಜಿ ಮಾಡ ತೊಡಗುತ್ತಾನೆ. ನವೀನ್ ಮತ್ತು ಚಿರು ಅವನಿಗೆ ಸಾಥ್ ನೀಡಿದ್ದರಿಂದ ಬಹಳ ಬೇಗನೆ ಪಾವ್‌ಬಾಜಿ ರೆಡಿಯಾಗುತ್ತದೆ. ರವಿ ತನ್ನ ಮನೆಗೆ ಎರಡು ಪಾರ್ಸಲ್ ಪಾವ್‌ಬಾಜಿಯನ್ನು ಬಾಕ್ಸ್‌ನಲ್ಲಿ ತುಂಬಿಸಿ, ಉಳಿದಿದ್ದ ನಾಲ್ಕು ಪಾವ್‌ಬಾಜಿಯನ್ನು ನವೀನ್ ಮತ್ತು ಚಿರುವಿಗೆ ಕೊಟ್ಟು ಅವರಿಗೆ ವಿದಾಯ ಹೇಳಿ ಮನೆಯತ್ತ ಹೊರಡುತ್ತಾನೆ.
ರವಿಯ ಬೈಕ್ ಸದ್ದು ಕೇಳಿದ ಮಕ್ಕಳಾದ ಗೀತಾ ಮತ್ತು ನೀತಾ ಬಾಗಿಲ ಬಳಿ ಬಂದು ಅಪ್ಪ, ಇವತ್ತು ಏನ್ ತಂದೆ ಎನ್ನುತ್ತಾರೆ. ಆಗ ಅಲ್ಲಿಗೆ ಬಂದ ರವಿಯ ಪತ್ನಿ ಸುಧಾ, ನಿಮ್ಮದೊಂದೇ ಗೋಳು. ಅಪ್ಪ ಸ್ವಂತ ಹೊಟೇಲು ಇಟ್ಟುಕೊಂಡಿಲ್ಲ. ನಿಮಗಾಗಿ ನಿತ್ಯವೂ ತಿಂಡಿ ತರಲು. ಬರುವ ತಿಂಗಳ ಆದಾಯ ಮನೆ ಖರ್ಚು, ನಿಮ್ಮ ಸ್ಕೂಲ್ ಖರ್ಚಿಗೆ ಸರಿಯಾಗುತ್ತದೆ. ಇನ್ನು ಇಲ್ಲಸಲ್ಲದ್ದು ಕೇಳಿ ಮತ್ತೆ ಸಮಸ್ಯೆ ಹೆಚ್ಚಿಸಬೇಡಿ ಎನ್ನುತ್ತಿದ್ದಾಗ, ರವಿಯು ಸುಧಾ ಯಾಕೆ ಮಕ್ಕಳಿಗೆ ಬಯ್ಯುತ್ತೀಯಾ. ಅವರೇನೂ ಬೇಡವಾದದ್ದು ಕೇಳಲಿಲ್ಲ ತಾನೆ. ಏನೋ ದೊಡ್ಡ ರೆಸ್ಟೋರೆಂಟ್‌ನಲ್ಲಿ ನಾನು ಕೆಲಸ ಮಾಡುತ್ತಿರುವುದರಿಂದ ಅಪ್ಪ ಏನಾದ್ರೂ ತರಬಹುದೇ ಎನ್ನುವ ಆಸೆ ಅವರಿಗೆ. ಅದಕ್ಕಾಗಿ ಹಾಗೆ ಕೇಳುತ್ತಾರೆ. ಮಕ್ಕಳೇ ಇವತ್ತು ನಾನು ನಿಮಗಾಗಿ ದೊಡ್ಡ ರೆಸ್ಟೋರೆಂಟ್‌ನಿಂದ ಪಾವ್‌ಬಾಜಿ ತಂದಿದ್ದೇನೆ. ರುಚಿ ನೋಡಿ ಹೇಗಿದೆ ಹೇಳಿ ಎಂದಾಗ ಸುಧಾಳಿಗೂ ಆಶ್ಚರ್ಯ. ಇಷ್ಟು ದಿನ ತಾರದವರು ಇವತ್ತೇನು ತಂದಿದ್ದಾರೆ ಎಂದು.
ಎಲ್ಲರಿಗೂ ಪಾವ್‌ಬಾಜಿ ಹಂಚಿದ ಸುಧಾ ತಾನೂ ಒಂದೆರಡು ತುಂಡು ಪಾವ್‌ಬಾಜಿಯನ್ನು ಬಾಯಿಗೆ ಹಾಕಿಕೊಳ್ಳುತ್ತಾಳೆ. ಅದರ ರುಚಿ ಆಕೆಗೆ ಅದ್ಭುತವಾಗಿ ಕಂಡಿತು. ರವಿ, ನೀವು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೀರಿ ಎಂದು ಕೇಳಿದ್ದೆ. ಆದರೆ ಇವತ್ತು ಸವಿಯುವ ಅವಕಾಶ ಸಿಕ್ಕಿತು. ನಿಜವಾಗ್ಲೂ ತುಂಬಾ ಚೆನ್ನಾಗಿದೆ. ನೀವೇ ಒಂದು ರೆಸ್ಟೋರೆಂಟ್ ತೆರೆಯಬಹುದು ಎನ್ನುತ್ತಾಳೆ. ಆಗ ರವಿ, ಏನ್ ತಮಾಷೆ ಮಾಡ್ತಿಯಾ. ರೆಸ್ಟೋರೆಂಟ್ ತೆರೆಯಬೇಕು ಎನ್ನುವ ಆಸೆ ನನಗೂ ಇದೆ. ಆದರೆ ಅಷ್ಟೊಂದು ಬಂಡವಾಳ ನಮಗೆ ಎಲ್ಲಿಂದ ಬರಬೇಕು ಎನ್ನುತ್ತಾನೆ. ಆಗ ಸುಧಾ ಮನಸ್ಸು ಮಾಡಿದರೆ ಖಂಡಿತಾ ಸಾಧ್ಯವಿದೆ ಎನ್ನುತ್ತಾಳೆ.
ಸುಧಾಳ ಮಾತಿನ ಬಗ್ಗೆ ಅಷ್ಟಾಗಿ ಯೋಚಿಸದ ರವಿ ಮರುದಿನ ಹೊಟೇಲ್‌ಗೆ ಹೋಗುತ್ತಾನೆ. ಸಂಜೆಯಾಗುತ್ತಲೇ ಹೊಟೇಲ್‌ನ ಮಾಲಕರು ರವಿಯನ್ನು ಕರೆದು, ರವಿ ನೀನು ಚೆನ್ನಾಗಿ ಕೆಲಸ ಮಾಡುತ್ತಿ. ಆದರೆ ಕಳೆದ ಕೆಲವು ತಿಂಗಳುಗಳಿಂದ ಹೊಟೇಲ್ ಕೊಂಚ ನಷ್ಟದಲ್ಲಿದೆ. ಹೀಗಾಗಿ ನಮ್ಮಲ್ಲಿ ಹೆಚ್ಚುವರಿ ಸಿಬಂದಿಯನ್ನು ಕಡಿತಗೊಳಿಸುವ ಯೋಚನೆ ಮಾಡಿದ್ದೇವೆ. ಅದ್ದರಿಂದ ನಿನ್ನನ್ನೂ ಕೆಲಸದಿಂದ ತೆಗೆಯುತ್ತಿದ್ದೇವೆ ಎನ್ನುತ್ತಾರೆ. ರವಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗುತ್ತದೆ. ಆಗ ರವಿ ಹೀಗೆ ಏಕಾಏಕಿ ನೀವು ನನ್ನ ಕೆಲಸದಿಂದ ತೆಗೆದರೆ ನಾನು ಎಲ್ಲಿ ಹೋಗುವುದು, ಏನು ಮಾಡುವುದು ಎನ್ನುತ್ತಾನೆ. ಆಗ ಹೊಟೇಲ್ ಮಾಲಕರು, ರವಿ ನಿನಗೆ ಅನುಭವವಿದೆ. ಅಲ್ಲದೇ ನಿನ್ನ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯ ಎಲ್ಲರಿಗೂ ಇದೆ. ಹೀಗಾಗಿ ನಿನಗೆ ಖಂಡಿತಾ ಎಲ್ಲದ್ರೂ ಒಂದು ಕಡೆ ಕೆಲಸ ಸಿಗುತ್ತದೆ ಎಂದು ಹೇಳಿ, ಅವನ ಸಂಬಳ ಕೊಟ್ಟು ಕಳುಹಿಸುತ್ತಾರೆ.
ಮನೆಗೆ ಬಂದವನೇ ರವಿ ದುಃಖೀಸಲು ಪ್ರಾರಂಭಿಸುತ್ತಾನೆ. ಸುಧಾ ಅವನಿಗೆ ಸಮಾಧಾನ ಮಾಡಲೆತ್ನಿಸುತ್ತಾಳೆ. ಮರುದಿನದಿಂದಲೇ ರವಿ ಸಾಕಷ್ಟು ಹೊಟೇಲ್‌ಗಳಿಗೆ ಕೆಲಸಕ್ಕಾಗಿ ಅಲೆದಾಡುತ್ತಾನೆ. ವಾರ ಕಳೆದರೂ ಎಲ್ಲಿಯೂ ಅವನಿಗೆ ಕೆಲಸ ಸಿಗುವುದಿಲ್ಲ. ಇದರಿಂದ ತುಂಬಾ ನೊಂದುಕೊಂಡಿದ್ದ ರವಿಯನ್ನು ನೋಡಿದ ಸುಧಾಳಿಗೆ ಒಂದು ಐಡಿಯಾ ಹೊಳೆಯುತ್ತದೆ. ಅವಳು ರವಿ ಬಳಿ ಬಂದು, ನೀವು ಅತ್ಯುತ್ತಮ ಅಡುಗೆ ಮಾಡುವವರು ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ನೀವೇ ಯಾಕೆ ಒಂದು ರೆಸ್ಟೋರೆಂಟ್ ತೆರೆಯಬಾರದು ಎನ್ನುತ್ತಾಳೆ. ಆಗ ರವಿ ಅಷ್ಟೊಂದು ಬಂಡವಾಳಕ್ಕೆ ಏನು ಮಾಡುವುದು ಎನ್ನುತ್ತಾನೆ. ಆಗ ಸುಧಾ, ನನ್ನ ಒಡವೆಗಳಿವೆ. ಅದನ್ನು ಬ್ಯಾಂಕ್‌ನಲ್ಲಿ ಇಟ್ಟರೆ ಕನಿಷ್ಠ 4- 5 ಲಕ್ಷ ಸಾಲ ದೊರೆಯುತ್ತದೆ. ಅದರಿಂದ ನಾವು ಸಣ್ಣ ಒಂದು ಉದ್ಯಮ ಪ್ರಾರಂಭಿಸಬಹುದು ಎನ್ನುತ್ತಾಳೆ. ಆಗ ರವಿ ಒಂದು ವೇಳೆ ನಷ್ಟವಾಗಿ ಸಾಲ ಕಟ್ಟಲಾಗದಿದ್ದರೆ ಎಂದಾಗ ಅವನನ್ನು ತಡೆದ ಸುಧಾ, ಯಾಕೆ ಅಪಶಕುನ ಮಾತನಾಡುತ್ತೀರಿ. ಒಳ್ಳೆಯದೇ ಆಗುತ್ತದೆ. ಹೋದ್ರೆ ಚಿನ್ನ ತಾನೆ. ಅದನ್ನು ಮುಂದೆ ಯಾವತ್ತಾದ್ರೂ ಮಾಡಿಸಬಹುದು ಎಂದಾಗ ರವಿಗೆ ಕೊಂಚ ಧೈರ್ಯ ಬರುತ್ತದೆ.
ಮರುದಿನವೇ ಅವನು ತನ್ನ ಹೊಸ ರೆಸ್ಟೋರೆಂಟ್‌ನ ಕೆಲಸ ಪ್ರಾರಂಭಿಸುತ್ತಾನೆ. ವಾರದೊಳಗೆ ಮಾರುಕಟ್ಟೆಯ ಮಧ್ಯಭಾಗದಲ್ಲಿ ರವಿಯ ರೆಸ್ಟೋರೆಂಟ್ ಪ್ರಾರಂಭವಾಗುತ್ತದೆ. ರವಿ ಮಾಡುವ ಅಡುಗೆಯ ಕೈ ರುಚಿಗೆ ಮನಸೋತ ಹೆಚ್ಚಿನ ಗ್ರಾಹಕರು ನಿತ್ಯವೂ ಅವನ ರೆಸ್ಟೋರೆಂಟ್ ಗೆ ಬರಲು ಪ್ರಾರಂಭಿಸುತ್ತಾರೆ. ಇದರಿಂದ ಬಹುಬೇಗನೆ ರವಿಯ ಮನೆಯ ಆರ್ಥಿಕ ಸ್ಥಿತಿಗತಿ ಸುಧಾರಿಸುತ್ತದೆ. ಸುಧಾಳ ಚಿನ್ನವನ್ನು ಬಿಡಿಸಿ ರವಿ ಆಕೆಗೆ ತಂದೊಪ್ಪಿಸುತ್ತಾನೆ.
ಎಲ್ಲವೂ ಚೆನ್ನಾಗಿದೆ ಎಂದುಕೊಂಡಾಗಲೇ ರವಿಯ ರೆಸ್ಟೋರೆಂಟ್ ಮುಂದೆ ಒಂದು ಸಣ್ಣ ಫಾಸ್ಟ್‌ಫುಡ್ ಸ್ಟಾಲ್ ತೆರೆಯಲಾಗುತ್ತದೆ. ಅಲ್ಲದೇ ಅಲ್ಲಿ ರವಿಯ ರೆಸ್ಟೋರೆಂಟ್‌ನಲ್ಲಿ ಸಿಗುವ ಅದರಲ್ಲೂ ವಿಶೇಷವಾಗಿ ಪಾವ್‌ಬಾಜಿ ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗುತ್ತದೆ. ಹೀಗಾಗಿ ನಿಧಾನವಾಗಿ ರವಿಯ ರೆಸ್ಟೋರೆಂಟ್‌ಗೆ ಬರುವ ಗ್ರಾಹಕರು ಕಡಿಮೆಯಾಗುತ್ತಾರೆ. ಇದರಿಂದ ಚಿಂತಿತನಾದ ರವಿ ಮನೆಗೆ ಬಂದು ಸುಧಾಳಿಗೆ ವಿಷಯ ಹೇಳುತ್ತಾನೆ. ಆಗ ಸುಧಾ, ನಿಮಗೆ ಸಾಕಷ್ಟು ಅನುಭವವಿದೆ. ರೆಸ್ಟೋರೆಂಟ್‌ನಲ್ಲಿ ಸಾಕಷ್ಟು ಹೊಸಹೊಸ ಪ್ರಯೋಗಗಳನ್ನು ಮಾಡಿದ್ದೀರಿ. ಈಗ ನಿಮ್ಮ ಸ್ವಂತ ರೆಸ್ಟೋರೆಂಟ್‌ನಲ್ಲೂ ಹೊಸಹೊಸ ಪ್ರಯೋಗ ಮಾಡಲು ಪ್ರಯತ್ನಿಸಿ. ಯಶಸ್ಸು ಖಂಡಿತಾ ದೊರೆಯುತ್ತದೆ ಎನ್ನುತ್ತಾಳೆ.
ಮರುದಿನವೇ ರೆಸ್ಟೋರೆಂಟ್‌ಗೆ ಬಂದ ರವಿ ಅಡುಗೆ ಮನೆಗೆ ಹೋಗುತ್ತಾನೆ. ಅಲ್ಲಿ ಬಗೆಬಗೆಯ ಮಸಾಲೆಗಳು ಜೋಡಿಸಿರುವುದು ನೋಡುತ್ತಾನೆ. ತಾನು ಅಜ್ಜಿಯಿಂದ ಕಲಿತಿದ್ದ ಮಸಾಲೆಯನ್ನು ಸಿದ್ಧಪಡಿಸಿಕೊಂಡು ಅದರಿಂದ ಪಾವ್‌ಬಾಜಿ ಮಾಡುತ್ತಾನೆ. ಅದು ಸ್ವಲ್ಪ ಕಪ್ಪುಮಿಶ್ರಿತ ಬಣ್ಣ ಹೊಂದಿದ್ದರಿಂದ ಅದಕ್ಕೆ ಖಾಲಿ ಪಾವ್‌ಬಾಜಿ ಎಂದು ಹೆಸರಿಡುತ್ತಾನೆ. ರೆಸ್ಟೋರೆಂಟ್ ಎದುರಿನ ಬೋರ್ಡ್ ನಲ್ಲಿ ಖಾಲಿ ಪಾವ್‌ಬಾಜಿ ಇವತ್ತಿನ ಸ್ಪೆಷಲ್ ಎಂದು ಬರೆಯುತ್ತಾನೆ. ಪಕ್ಕದ ಫಾಸ್ಟ್‌ಫುಡ್ ಸ್ಟಾಲ್‌ಗೆ ಪಾವ್‌ಬಾಜಿ ತಿನ್ನಲು ಬಂದ ಕೆಲವರು ರವಿಯ ರೆಸ್ಟೋರೆಂಟ್‌ಗೆ ಬಂದು ಖಾಲಿ ಪಾವ್‌ಬಾಜಿಯ ರುಚಿ ನೋಡುತ್ತಾರೆ. ಅವರಿಗದು ಇಷ್ಟವಾಗುತ್ತದೆ. ಇದರಿಂದ ಮತ್ತೆ ರವಿಯ ರೆಸ್ಟೋರೆಂಟ್‌ನ ಹೆಸರು ಖ್ಯಾತಿಯಾಗುತ್ತದೆ. ದೂರದ ಊರುಗಳಿಂದ ಇವನ ರೆಸ್ಟೋರೆಂಟ್‌ಗೆ ಖಾಲಿ ಪಾವ್‌ಬಾಜಿ ತಿನ್ನಲು ಸಾಕಷ್ಟು ಮಂದಿ ಬರುತ್ತಾರೆ. ಅವನ ರೆಸ್ಟೋರೆಂಟ್‌ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕೆಲವರು ಬರೆದುದರಿಂದ ದೇಶ, ವಿದೇಶಗಳಿಂದರೂ ಸಾಕಷ್ಟು ಮಂದಿ ಬರತೊಡಗುತ್ತಾರೆ.
ಕೆಲವೇ ದಿನಗಳಲ್ಲಿ ರವಿಯ ಮನದಲ್ಲಿದ್ದ ಆತಂಕ ದೂರವಾಗುತ್ತದೆ. ಅವನ ರೆಸ್ಟೋರೆಂಟ್ ಹೆಚ್ಚು ಖ್ಯಾತಿ ಪಡೆಯುತ್ತದೆ. ಈಗ ಅವನು ಮೊದಲು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ನಷ್ಟದಿಂದಾಗಿ ಮುಚ್ಚುವ ಸ್ಥಿತಿಗೆ ಬಂದಿರುತ್ತದೆ. ರವಿ ಅದನ್ನು ಖರೀದಿಸುತ್ತಾನೆ. ತನ್ನ ಗೆಳೆಯರ ಜತೆ ಸೇರಿ ಅಲ್ಲಿಯೂ ವಿಶೇಷ ಖಾದ್ಯಗಳನ್ನು ಪರಿಚಯಿಸಿ ಗ್ರಾಹಕರ ಮನ ಗೆಲ್ಲುತ್ತಾನೆ. ಮುಂದೆ ಅವನು ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬನಾಗುತ್ತಾನೆ. ಸಂದೇಶ- ಜೀವನದಲ್ಲಿ ಕಷ್ಟಗಳು ಎದುರಾಗಬಹುದು. ಆದರೆ ಎಲ್ಲಿಯೂ ನಿಲ್ಲದೆ, ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮುಂದೆ ಹೆಜ್ಜೆ ಇಡುತ್ತ ಸಾಗಿದರೆ ಜಯ ನಮ್ಮದಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.